ಹಳದಿ ಬಣ್ಣದ ತಾಡಪತ್ರಿ ಹಾಳೆಯ ಮೇಲೆ ಈಗಷ್ಟೇ ಕೊಯ್ಲು ಮಾಡಿದ ಚೆರ್ರಿ ಹಣ್ಣುಗಳ ರಾಶಿಯಿದೆ. ಅದರ ಮೇಲೆ ಅರವತ್ತರ ಹರೆಯದ ಅಬ್ದುಲ್ ಸಲಾಮ್ ಖಾನ್ ಮತ್ತು ನಸ್ರುಲ್ಲಾ ಖಾನ್ ಹೆಸರಿನ ಇಬ್ಬರು ಸಹೋದರರು ಪದ್ಮಾಸನ ಹಾಕಿ ಕುಳಿತಿದ್ದಾರೆ. ಅವರು ತಮ್ಮ ಪಳಗಿದ ಕೈಗಳನ್ನು ಅತ್ಯಂತ ಎಚ್ಚರಿಕೆಯಿಂದ ಹಣ್ಣುಗಳನ್ನು ಆಯ್ದು ಅವುಗಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ವಿಂಗಡಿಸುತ್ತಿದ್ದಾರೆ. ಆ ಜಲನಿರೋಧಕ ಬಟ್ಟೆಯ ಮೇಲೆ ಬಿದ್ದ ಸೂರ್ಯನ ಬೆಳಕು ಪ್ರತಿಫಲಿಸಿ, ಅವರ ಸುಕ್ಕುಗಟ್ಟಿದ ಮುಖಗಳನ್ನು ಬೆಳಗುತ್ತಿದೆ. ಶ್ರಮದಾಯಕ ಹಂಗಾಮು ಮುಕ್ತಾಯದ ಹಂತಕ್ಕೆ ಬಂದಿರುವುದರಿಂದ ಅವರ ಮುಖದಲ್ಲಿ ದಣಿವು ಎದ್ದುಕಾಣುತ್ತಿದೆ.
ಮಧ್ಯ ಕಾಶ್ಮೀರದ ಗಾಂದರ್ಬಲ್ ಜಿಲ್ಲೆಯ ಸೋರಾಫ್ ರಾವ್ ಗ್ರಾಮದಲ್ಲಿರುವ ಅವರ ಈ ಹಣ್ಣಿನ ತೋಟ ತೀರಾ ಸಣ್ಣದು, ಎಷ್ಟೆಂದರೆ ಇದು ಕಾಲು ಎಕರೆಗಿಂತಲೂ ಕಡಿಮೆ ವಿಸ್ತೀರ್ಣವನ್ನು ಹೊಂದಿದೆ.
"ಇದು ಬಹಳ ಕಷ್ಟದ ವರ್ಷ. ಕಳೆದ 40 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ, ಆದರೆ ಇಂತಹ ಹಂಗಾಮನ್ನು ಎಂದೂ ಕಂಡಿರಲಿಲ್ಲ. ಹವಾಗುಣ ವೈಪರೀತ್ಯ ಮತ್ತು ಪ್ರವಾಸಿಗರ ಕೊರತೆ ಈ ಎರಡೂ ಸೇರಿ ನಮಗೆ ಭಾರಿ ಹೊಡೆತ ನೀಡಿವೆ" ಎಂದು 65 ವರ್ಷದ ಅಬ್ದುಲ್ ಸಲಾಮ್ ಬೇಸರದಿಂದ ನುಡಿದರು.
ಪಶ್ತೂನ್ ಸಮುದಾಯಕ್ಕೆ ಸೇರಿದ ಖಾನ್ ಸಹೋದರರು, ಈ ವರ್ಷದ ಆರಂಭದಲ್ಲಿ ಸೋರಾಫ್ ರಾವ್ ಗ್ರಾಮದ ವಿವಿಧೆಡೆ ಹರಡಿಕೊಂಡಿರುವ ಎರಡು ಎಕರೆ ಚೆರ್ರಿ ತೋಟಗಳನ್ನು ಗುತ್ತಿಗೆಗೆ ಪಡೆದಿದ್ದರು. ಈ ಊರು ಶ್ರೀನಗರದಿಂದ ಉತ್ತರಕ್ಕೆ 49 ಕಿಲೋಮೀಟರ್ ದೂರದಲ್ಲಿದೆ ಮತ್ತು ಗೋಟ್ಲಿ ಬಾಗ್ ಎನ್ನುವಲ್ಲಿರುವ ಅವರ ಮನೆಯಿಂದ 35 ಕಿಲೋಮೀಟರ್ ಪ್ರಯಾಣದ ಅಂತರದಲ್ಲಿದೆ.
ಈ ಬಾರಿಯ ಕೊಯ್ಲಿನ ಸಮಯದಲ್ಲಿ ಕುಟುಂಬ ಸದಸ್ಯರು ಮತ್ತು ಕೂಲಿ ಕಾರ್ಮಿಕರು ಒಟ್ಟಿಗೆ ಕೆಲಸ ಮಾಡಿದರು. ಈ ಆದರೆ ತಿಂಗಳುಗಟ್ಟಲೆ ಸಮಯದ ಶ್ರಮ ಫಲ ಕೊಡುವುದು ಅನುಮಾನ. ಏಕೆಂದರೆ ಈ ಬಾರಿ ಅವರನ್ನು ಖರೀದಿದಾರರ ಕೊರತೆ ಕಾಡುತ್ತಿದೆ.














