“ನಾನಿಲ್ಲಿ ಏನು ಮಾಡ್ತಿದ್ದೀನಿ ಅಂತ ಕೇಳಿದ್ರ? ಇಲ್ಲೇ ಹತ್ತಿರದಲ್ಲೇ ಇರೋದು ನಮ್ಮ ಮನೆ” ಎನ್ನುತ್ತಾ ಸುಖರಾಮ್ ಕುಮೇಟಿ, ಸುಮಾರು 200 ಮೀಟರ್ ದೂರದಲ್ಲಿದ್ದ ತಮ್ಮ ಮನೆಯತ್ತ ಕೈ ತೋರಿಸಿದರು. ತನಗೀಗ 60 ವರ್ಷದ ಆಸುಪಾಸು ಎನ್ನುವ ಮುತ್ತಜ್ಜ ಸುಖರಾಮ್, ರಸ್ತೆಯ ಅಂಚಿನಲ್ಲಿದ್ದ ಕಲ್ಲಿನ ಮೇಲೆ ಕುಳಿತಿದ್ದರು. ಅಲ್ಲೇ ಇದ್ದ ಮರ ಅವರಿಗೆ ಅರೆಬರೆ ನೆರಳನ್ನು ನೀಡುತ್ತಿತ್ತು. ಸುಖರಾಮ್ ತನ್ನ ಬಳಿ ಇರಿಸಿಕೊಂಡಿದ್ದ ವಸ್ತುವೊಂದು ನಾವು ಅವರನ್ನು ಮಾತನಾಡಿಸುವಂತೆ ಮಾಡಿತ್ತು.
ಅವರ ಹತ್ತಿರ ಬಿಳಿ ದ್ರವ ತುಂಬಿರುವ 20 ಲೀಟರ್ ಗಾತ್ರದ ಕ್ಯಾನ್ ಇತ್ತು. ಅದರ ಪಕ್ಕದಲ್ಲಿ ಬಹುತೇಕ ಒಡೆದಿರುವ ಒಂದು ಹಳೆಯ ಪೇಂಟ್ ಬಕೆಟ್ ಇತ್ತು. ಅದರಲ್ಲಿ ನೀರು ತುಂಬಿತ್ತು. ಆ ನೀರಿನಲ್ಲಿ ಹಲವು ಬಣ್ಣಗಳ ಸಣ್ಣ ಪಾತ್ರೆಗಳು ತೇಲುತ್ತಿದ್ದವು. ಇವುಗಳ ಹೊರತಾಗಿ ಅಲ್ಲೊಂದು ಕೆಂಪು ಪ್ಲಾಸ್ಟಿಕ್ ಗ್ಲಾಸ್ ಬಿದ್ದಿತ್ತು. ಸುಖರಾಮ್ ಹಳದಿಗಟ್ಟಿರುವ ಕ್ಯಾನ್ ಮೇಲೆ ಮಸುಕು ಹಿಡಿದಿರುವ ಗುಲಾಬಿ ಬಣ್ಣದ ಮಗ್ ಒಂದನ್ನು ಇರಿಸಿದ್ದರೆ, ಆಲಿವ್ ಹಸಿರು ಬಣ್ಣದ ಬಕೆಟ್ ಮೇಲೆ ನೀಲಿ ಬಣ್ಣದ ಮಗ್ ಇರಿಸಿದ್ದರು. ಈ ಮಗ್ಗಳ ಬಣ್ಣದಿಂದಲೇ ಅವರಲ್ಲಿಗೆ ಬರುವ ಗ್ರಾಹಕರಿಗೆ ಯಾವುದರಲ್ಲಿ ಏನಿದೆ ಎನ್ನುವುದು ಅರ್ಥವಾಗುತ್ತದೆ.
ಇದು ಕೊಡೋಲಿ ಗ್ರಾಮ. ನಾರಾಯಣಪುರ ಜಿಲ್ಲಾ ಕೇಂದ್ರದಿಂದ ಛತ್ತೀಸಗಢದ ಬಸ್ತರ್ ಪ್ರಾಂತ್ಯದ ಅಭುಜಮಾಡ್ (ಅಭುಜಮಾರ್ ಎಂದೂ ಬರೆಯಲಾಗುತ್ತದೆ) ಪ್ರದೇಶದಲ್ಲಿ ಸಿಗುವ ಎರಡನೇ ಗ್ರಾಮವಿದು.
ಸುಖರಾಮ್ ಒಂದಷ್ಟು ಅಸಹನೆಯಿಂದಲೇ ತಾನು ಇಲ್ಲಿ ಏನು ಮಾಡುತ್ತಿದ್ದೇನೆ ಎನ್ನುವುದನ್ನು ವಿವರಿಸುತ್ತಿದ್ದರು. ಆದರೆ ನಮ್ಮ ಗುಂಪಿನಲ್ಲಿ ಅವರು ವಿವರಿಸಿದ ವಿಚಾರ ಅರ್ಥವಾಗದವನೆಂದರೆ ನಾನೊಬ್ಬನೇ ಆಗಿದ್ದೆ.
“ಸಲ್ಫಿ, ಸಲ್ಫಿ…” ಎಂದು ಹೇಳಿದ ಅವರ ನೋಟದಲ್ಲಿ ಈಗಲಾದರೂ ಅರ್ಥವಾಯಿತೇ ಎನ್ನುವ ನಿರ್ಲಕ್ಷ್ಯದ ಭಾವವಿತ್ತು. ಆಗ ನಾನು ನಮ್ಮಿಬ್ಬರ ಬಳಿಯಿದ್ದ ಕೆಮೆರಾ ಕಡೆ ನೋಡತೊಡಗಿದೆ. ಆದರೆ ಅವರು ನಮ್ಮನ್ನು ಸೆಲ್ಫಿ ತೆಗೆದುಕೊಳ್ಳಲು ಆಹ್ವಾನಿಸುತ್ತಿರಲಿಲ್ಲ.





