ವಿಂಧ್ಯಾ ಪರ್ವತಗಳ ನಡುವೆ ಸೂರ್ಯನು ಕಣ್ಮರೆಯಾಗುತ್ತಿದ್ದಂತೆ ಸಂಚಾರ ಮುಗಿಸಿದ ಹಕ್ಕಿಗಳು ಕಾಡಿಗೆ ಮರಳುತ್ತಿದ್ದವು. ಓಡಾಟ ಆರಂಭಿಸಲು ಇದು ಸರಿಯಾದ ಹೊತ್ತು ಎಂದು ದಮಾ ಸಸ್ತಿಯಾ ತೀರ್ಮಾನಿಸಿದರು. ಕಲ್ಲು-ಮುಳ್ಳುಗಳ ಹಾದಿಯಲ್ಲಿ ನಡೆಯುತ್ತಾ ಸುಗತ್ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ನೀರಿನ ಒರತೆಯ ಕಡೆಗೆ ಸಾಗಿದರು. ರಾತ್ರಿಯಿಡೀ ಈ ಚಿಲುಮೆಯಿಂದ ನೀರನ್ನು ಮೊಗೆದು ತಮ್ಮ ಮಡಕೆಗಳಿಗೆ ತುಂಬುತ್ತಾರೆ. ಬೆಳಗಾದಂತೆ ಮಡಕೆಗಳನ್ನು ಹೊತ್ತುಕೊಂಡು ಮನೆಗೆ ಹಿಂತಿರುಗುತ್ತಾರೆ. “ಈ ಒರತೆಯಲ್ಲಿ ರಾತ್ರಿ ಹೊತ್ತು ಹೆಚ್ಚು ನೀರು ಬರುತ್ತದೆ” ಎಂದು 50 ವರ್ಷ ಪ್ರಾಯದ ರೈತ ದಮಾ ವಿವರಿಸುತ್ತಾರೆ.
ಈ ಗ್ರಾಮದಲ್ಲಿ 534 ಜನರು ವಾಸಿಸುತ್ತಿದ್ದಾರೆ (2011ರ ಜನಗಣತಿ). ಇಲ್ಲಿರುವ ಒಂದೆರಡು ಒರತೆಗಳಿಂದ ಬರುವ ನೀರು ಇಷ್ಟು ಜನರಿಗೆ ಸಾಕಾಗುವುದಿಲ್ಲ. ಸುಗತ್ ಗ್ರಾಮದ ಜನರು ಸ್ನಾನ ಮಾಡಲು ಮತ್ತು ಮನೆಗೆ ನೀರು ತರಲು ಬೆಳ್ಳಂಬೆಳಗ್ಗೆ ಎದ್ದು ನೀರಿನ ಡಬ್ಬಿಗಳನ್ನು ಹೊತ್ತುಕೊಂಡು ತಮ್ಮ ಕತ್ತೆಗಳೊಂದಿಗೆ ಬೆಟ್ಟದಿಂದ ಇಳಿದು ನರ್ಮದಾ ನದಿಗೆ ಬರುತ್ತಾರೆ. ಮತ್ತೆ ಸಂಜೆಯೂ ಇದನ್ನೇ ಮಾಡುತ್ತಾರೆ. ದಿನದ ಸರಾಸರಿ ಮೂರು ಗಂಟೆಗಳನ್ನು ಇವರು ಸ್ನಾನ ಮಾಡುವುದು, ಪಾತ್ರೆ ತೊಳೆಯುವುದು ಮತ್ತು ನೀರು ಸಂಗ್ರಹಿಸುವಂತಹ ನೀರಿಗೆ ಸಂಬಂಧಿಸಿದ ಕೆಲಸ ಮಾಡುವುದರಲ್ಲಿ ಕಳೆಯುತ್ತಾರೆ. ಭಾರತದ ಸಂವಿಧಾನದಲ್ಲಿ ನೀರಿನ ಹಕ್ಕನ್ನು ಬದುಕುವ ಹಕ್ಕಿನ ಒಂದು ಭಾಗವಾಗಿ ಪರಿಗಣಿಸಲಾಗಿದೆ, ಆದರೆ ಇಲ್ಲಿ ಮಾತ್ರ ಮಾನವ ಹಕ್ಕುಗಳೇ ಇಲ್ಲದೆ ಜನ ಬದುಕುತ್ತಿದ್ದಾರೆ.
ನದಿಯಿಂದ ತುಂಬಾ ದೂರದಲ್ಲಿರುವ ಮನೆಯೆಂದರೆ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಮನೆ. ಬೆಟ್ವದಿಂದ ಇಳಿದು, ನೀರನ್ನು ಸಂಗ್ರಹಿಸಿ ಮತ್ತೆ ಬೆಟ್ಟ ಹತ್ತುವುದಕ್ಕೆ ಸುಮಾರು ಒಂದು ಗಂಟೆಗಿಂತ ಹೆಚ್ಚು ಸಮಯ ಬೇಕು. ಒಂದು ವಾರದಲ್ಲಿ ಸುಮಾರು 15 ಗಂಟೆಗಳ ಕಾಲ ಜನರು ನೀರಿಗಾಗಿ ಓಡಾಡುತ್ತಿರುತ್ತಾರೆ, ಏಕೆಂದರೆ ನೀರನ್ನು ಹೊತ್ತುಕೊಂಡು ಬೆಟ್ಟವನ್ನು ಹತ್ತಲು ಇಳಿಯುವಾಗ ತೆಗೆದುಕೊಂಡ ಸಮಯಕ್ಕಿಂತ ಎರಡು ಪಟ್ಟು ಹೆಚ್ಚು ಸಮಯ ಬೇಕು.
ಮುಂಜಾನೆ ನೀರು ತರುವ ಕೆಲಸ ದಮಾ ಅವರ ಮಗನದ್ದು. ಎಂಟು ಜನರು ಇರುವ ಮನೆಯಲ್ಲಿ ಕಿರಿಯ ಸದಸ್ಯರಾಗಿರುವ ಇವರು ಮನೆಗೆ ಬೇಕಾದ ನೀರನ್ನು ತರಲು ಕ್ಯಾನ್ಗಳನ್ನು ತೆಗೆದುಕೊಂಡು ತಮ್ಮ ಎರಡು ಕತ್ತೆಗಳೊಂದಿಗೆ ಹೋಗುತ್ತಾರೆ. ಈ ಕತ್ತೆಗಳು ನೀರು ತರುವ ಕೆಲಸಕ್ಕೆ ಎಷ್ಟು ಚೆನ್ನಾಗಿ ಒಗ್ಗಕೊಂಡಿವೆಯೆಂದರೆ, ನೀರನ್ನು ಹೊತ್ತುಕೊಂಡು ತಾವಾಗಿಯೇ ಮನೆಯ ಕಡೆಗೆ ಹೆಜ್ಜೆಹಾಕುತ್ತವೆ.
ಹದಿನೈದು ವರ್ಷಗಳ ಹಿಂದೆ ಸುಗತ್ ಮತ್ತು ಸಮೀಪದ ಝಂಡಾನಾ ಗ್ರಾಮದ ಭಿಲಾಲಾ ಬುಡಕಟ್ಟಿನ ಜನರು ನರ್ಮದಾ ಮತ್ತು ಅದರ ಉಪನದಿಯಾದ ಹತ್ನಿಯ ತೀರದಲ್ಲಿ ವಾಸಿಸುತ್ತಿದ್ದರು. ಆಗ ಅವರಿಗೆ ನೀರಿನ ಸಮಸ್ಯೆ ಇರಲಿಲ್ಲ. ಬೇಕಾದಾಗ ಬೇಕಾದಷ್ಟು ನೀರು ಸಿಗುತ್ತಿತ್ತು.
ಯಾವಾಗ ನರ್ಮದಾ ನದಿಗೆ ಅಡ್ಡಲಾಗಿ ಸರ್ದಾರ್ ಸರೋವರ್ ಅಣೆಕಟ್ಟು ಕಟ್ಟಲಾಯಿತೋ, ಆಗ ಹಳ್ಳಿಗಳು ನೀರಿನಲ್ಲಿ ಮುಳುಗಿ ಬದುಕಿನ ಚಿತ್ರಣವೇ ಬದಲಾಯಿತು. 2014ರ ಸುಮಾರಿಗೆ ಗೇಟ್ಗಳನ್ನು ಮುಚ್ಚಿದಾಗ, ಸುಗತ್ ಮತ್ತು ಝಂಡಾನಾ ಸೇರಿದಂತೆ ಮಧ್ಯಪ್ರದೇಶದ ಸುಮಾರು 200 ಹಳ್ಳಿಗಳು ಮುಳುಗಡೆಯಾದವು. ನದಿಯ ನೀರು ಕೃಷಿ ಭೂಮಿಯನ್ನು ನುಂಗಿಹಾಕಿತು. ದಮಾ ಅವರ ಕುಟುಂಬದಂತೆ ಅನೇಕ ಕುಟುಂಬಗಳು ತಮ್ಮ ಊರನ್ನು ಬಿಟ್ಟು ಗುಳೆಹೋದವು, ಇಲ್ಲವೇ ನೀರು, ವಿದ್ಯುತ್, ಸರಿಯಾದ ರಸ್ತೆಗಳಲ್ಲಿ ಇಲ್ಲದ ವಿಂಧ್ಯಾ ಬೆಟ್ಟಗಳಿಗೆ ಹೋದವು.




























