“ಅಪ್ಪ ಓದಿಸಿದ್ದರೆ ನಾನು ಪೊಲೀಸ್ ಅಧಿಕಾರಿಯಾಗಿರುತ್ತಿದ್ದೆ” ಎಂದು ಅವರು ನೋವಿನಿಂದ ಹೇಳಿದರು. ಅತ್ತ ಜಿಡ್ಡು ಹಿಡಿದ ಪಾತ್ರೆಗಳು ಮತ್ತು ಸೋಪಿನ ನೊರೆ ಅವರಿಗಾಗಿ ಸಿಂಕಿನಲ್ಲಿ ಕಾಯುತ್ತಿದ್ದವು. ಅದು ಬೆಳಗಿನ 9 ಗಂಟೆಯ ಹೊತ್ತು. ಅವರು ಆ ಗೇಟೆಡ್ ಕಮ್ಯುನಿಟಿಯಲ್ಲಿರುವ ಇತರ ಅಪಾರ್ಟ್ಮೆಂಟ್ಗಳಿಗೂ ಕೆಲಸಕ್ಕೆ ಓಡಬೇಕಿದೆ. ಅನಿತಾ ದೀದಿ ಎಂದು ಈ ಕಾಲೋನಿಯಲ್ಲಿ ಕರೆಯಿಸಿಕೊಳ್ಳುವ ಅವರು ಮನೆಗೆ ಹೋಗುವ ಮೊದಲು ಇನ್ನೂ ಐದು ಮನೆಗಳ ಕೆಲಸವನ್ನು ಮುಗಿಸಬೇಕಿದೆ. ಅನಿತಾ ಕೆಲಸ ಮಾಡುವುದು ವಾಯುವ್ಯ ಹೈದರಾಬಾದ್ ನಗರದ ಬಳಿಯಿರುವ ನಲ್ಲಗಂಡ್ಲ ಎನ್ನುವಲ್ಲಿ. ಅವರ ಮನೆಯಿರುವುದು ಇಲ್ಲಿಂದ 10 ಕಿಲೋಮೀಟರ್ ದೂರದಲ್ಲಿರುವ ಸಂಗಾರೆಡ್ಡಿ ಜಿಲ್ಲೆಯ ಪಟಾನ್ ಚೇರು ಎನ್ನುವ ಊರಿನಲ್ಲಿ.
25 ವರ್ಷದ ಅನಿತಾ ರಾಠೋಡ್ ಈಗಲೇ ನಾಲ್ಕು ಮಕ್ಕಳ ತಾಯಿ. ಇವರು ತೆಲಂಗಾಣದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿರುವ ಲಂಬಾಡಿ ಸಮುದಾಯಕ್ಕೆ ಸೇರಿದವರು. ವಲಸೆ ಕಾರ್ಮಿಕರನ್ನು ಆಕರ್ಷಿಸುವುದರಲ್ಲಿ ದೇಶದ ಅಗ್ರ ಐದು ನಗರಗಳಲ್ಲಿ ಸ್ಥಾನ ಪಡೆದಿರುವ ಹೈದರಾಬಾದಿನ ಗೇಟೆಡ್ ಕಮ್ಯುನಿಟಿಗಳಲ್ಲಿ ಕೆಲಸಕ್ಕಿರುವ ವಲಸೆ ಕಾರ್ಮಿಕರಲ್ಲಿ ಇವರೂ ಒಬ್ಬರು. ಅನಿತಾರ ಕೆಲಸದ ಅವಧಿ ದೀರ್ಘವಾಗಿರುತ್ತದೆಯಾದ ಕಾರಣ ಅವರು ಚಳ್ಳಗಿಡ್ಡ ತಾಂಡಾದಲ್ಲಿರುವ ತನ್ನ ಮನೆಯನ್ನು ಬಿಟ್ಟು, ತಮ್ಮ ಮಕ್ಕಳನ್ನು ಮೈನೇಲಿಯಲ್ಲಿನ ತವರು ಮನೆಯಲ್ಲಿ ಬಿಡುತ್ತಾರೆ. ಇದರ ಜೊತೆಗೆ ತನ್ನ ಕನಸುಗಳನ್ನು ಸಹ ಅವರು ಬಹಳ ಹಿಂದೆಯೇ ಕೈಚೆಲ್ಲಿದ್ದಾರೆ.
ಪ್ರತಿ ನಾಲ್ಕು ಗಂಟೆ ಏಳುವ ಅವರು ಅಡುಗೆ, ಮನೆ ಸ್ವಚ್ಛಗೊಳಿಸುವುದು ಮತ್ತು ಬಟ್ಟೆ ಒಗೆಯುವದರೊಂದಿಗೆ ಆರಂಭವಾಗುತ್ತದೆ. 5:30ಕ್ಕೆ ಅವರು ಅವರು ರಂಗಾ ರೆಡ್ಡಿ ಜಿಲ್ಲೆಯ ಹತ್ತಿರದ ಲಿಂಗಂಪಲ್ಲಿಗೆ ಹೋಗುವ ಬಸ್ ಏರುತ್ತಾರೆ. ಅಲ್ಲಿಂದ ರಿಕ್ಷಾದವನಿಗೆ 20 ರೂಪಾಯಿ ಕೊಟ್ಟು ನಲ್ಲಗಂಡ್ಲಾದಲ್ಲಿರುವ ಗೇಟೆಡ್ ಕಮ್ಯುನಿಟಿಯನ್ನು ತಲುಪಿಕೊಳ್ಳುತ್ತಾರೆ. 2023ರಲ್ಲಿ ಪರಿಚಯಿಸಲಾದ ತೆಲಂಗಾಣ ಸರ್ಕಾರದ ಮಹಾ ಲಕ್ಷ್ಮಿ ಯೋಜನೆ, ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ನೀಡುತ್ತದೆ. ಇದು ಅನಿತಾರಿಗೆ ತಮ್ಮ ಕೆಲಸದ ದಾರಿಯ ಪ್ರಯಾಣದ ಖರ್ಚಿನಲ್ಲಿ ಒಂದಷ್ಟನ್ನು ಉಳಿಸಲು ಸಹಾಯ ಮಾಡಿದೆ.














