ಬಗ್ದುವಾರ್ ಪ್ರಾಥಮಿಕ ಶಾಲೆಯ ಮುಂದೆ ನಿಂತಿದ್ದ ಅವರಿಗೆ ತಮ್ಮ ವಿದ್ಯಾರ್ಥಿ ಜೀವನದ ನೆನಪು ಮರುಕಳಿಸಿತು. ಚಿಕ್ಕ ಹುಡುಗನಾಗಿದ್ದ ಅವರಿಗೆ ಆಗ ಓದುವುದೆಂದರೆ ಅಷ್ಟಕ್ಕಷ್ಟೇ. ಊರಿನ ಇತರ ಮಕ್ಕಳಂತೆ ಅವರಿಗೂ ಶಾಲೆಯ ಪಾಠಕ್ಕಿಂತಲೂ ಮಧ್ಯಾಹ್ನ ಅಲ್ಲಿ ಕೊಡುವ ಊಟವೇ ಪ್ರಿಯವಾಗಿತ್ತು. ಅದೊಂದು ಊಟದ ಸಲುವಾಗಿಯೇ ಅವರು ಬಾಪ್ತೇಲ್ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಈ ಶಾಲೆಗೆ ಕಠಿಣ ದಾರಿಯಲ್ಲಿ 1.5 ಕಿಲೋಮೀಟರ್ ನಡೆದು ಬರುತ್ತಿದ್ದರು.
"ಶಾಲೆಯಲ್ಲಿದ್ದಾಗ ಪ್ರತಿ ಮಕ್ಕಳೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದೆ. ಪಾಠ ಕಲಿಯುತ್ತಲೇ ಇರಲಿಲ್ಲ. ಶಾಲೆಯ ಶಿಕ್ಷಕರುಗಳಿಂದ ಪೆಟ್ಟು ಬೀಳದ ದಿನವೇ ಇದ್ದಿರಲಿಲ್ಲ. ಕೊನೆಗೆ ಐದನೇ ತರಗತಿಯಲ್ಲಿರುವಾಗ ಶಾಲೆ ಬಿಟ್ಟೆ. ಆ ಸಮಯದಲ್ಲಿ ನನ್ನ ಮೈಮನಸ್ಸಿನ ತುಂಬಾ ಬಾಂಬೆ (ಮುಂಬಯಿ) ತುಂಬಿಕೊಂಡಿತ್ತು" ಎನ್ನುತ್ತಾರೆ 24 ವರ್ಷದ ನವೀನ್ ಠಾಕೂರ್. ಪ್ರಸ್ತುತ (ಆಗಸ್ಟ್, 2024), ಅವರು ಕುಟುಂಬದ ಮದುವೆಯಲ್ಲಿ ಪಾಲ್ಗೊಳ್ಳಲು ತಮ್ಮ ಕನಸಿನ ನಗರದಿಂದ (ಮುಂಬೈ) ತಪನ್ ಬ್ಲಾಕ್ನಲ್ಲಿರುವ ತಮ್ಮ ಊರಿಗೆ ಬಂದಿದ್ದಾರೆ. ಕಳೆದ 11 ವರ್ಷಗಳಿಗೂ ಹೆಚ್ಚು ಸಮಯದಿಂದ ಅವರು ಮುಂಬಯಿ ನಗರದ ನಿರ್ಮಾಣ ಸ್ಥಳಗಳಲ್ಲಿ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ.
"ಆಗಿನ ದಿನಗಳಲ್ಲಿ ಖಾರಿಪಾಡಾ ಪ್ರದೇಶದ ಬಹುತೇಕ ಮಕ್ಕಳು - ಬಹುತೇಕರು ಕೃಷಿ ಕಾರ್ಮಿಕರು ಮತ್ತು ದಿನಗೂಲಿ ಮಾಡುವವರ ಮಕ್ಕಳು - ಪ್ರಾಥಮಿಕ ಹಂತದಲ್ಲೇ ಶಾಲೆಯನ್ನು ತೊರೆದು ಕೆಲಸ ಹುಡುಕುತ್ತಿದ್ದರು" ಎಂದು ಅವರು ಹೇಳುತ್ತಾರೆ. ಆದರೆ ಏಕೆ ವಲಸೆ ಹೋಗಿದ್ದು ನೀವು ಎಂದು ಕೇಳಿದಾಗ ಅವರು, "ಆದರೆ ಊರಿನಲ್ಲಿ ಕೆಲಸವೇ ಸಿಗುತ್ತಿರಲಿಲ್ಲ. ದೊಡ್ಡವರು ಸಣ್ಣವರು ಎನ್ನದೆ ಎಲ್ಲರೂ ಕೆಲಸ ಹುಡುಕಿಕೊಂಡು ದೂರದ ಊರುಗಳಿಗೆ ಹೋಗಬೇಕಿತ್ತು. ಇದು ಐವತ್ತು ವರ್ಷದ ಹಿರಿಯರಿಗೂ ತಪ್ಪಿದ್ದಲ್ಲ. ಹೀಗಿರುವಾಗ ನಮಗೆ ಆಯ್ಕೆಯಾದರೂ ಎಲ್ಲಿತ್ತು?" ಎಂದು ಉತ್ತರಿಸಿದರು.
























