“ಓ ಮಹಿಳೆಯೇ, ನಿನ್ನ ಮೀನಿನ ಬೆಲೆ ಎಷ್ಟು?” – ಇದು ಕಚ್ನ ರಣ್ ಪ್ರದೇಶದ ಜಾನಪದ ಹಾಡೊಂದರ ಪಲ್ಲವಿ. ಈ ಹಾಡನ್ನು ಸಾಂಪ್ರದಾಯಿಕವಾಗಿ ಮದುವೆಗಳಂತಹ ಸಂತಸದ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಈ ಹಾಡನ್ನು ಈ ಪ್ರದೇಶದ ಜುಮಾ ವಾಘೇರ್ ಎಂಬ ಮೀನುಗಾರರು ಹಾಡಿದ್ದಾರೆ. ಇದು ಈ ಜಾನಪದ ಪ್ರಕಾರದ ನಿರಂತರ ಪ್ರಸ್ತುತತೆ ಮತ್ತು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಯಾಗಿದೆ. ಪ್ರಸ್ತುತ, ಸಮುದಾಯವು ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ ಈ ಹಾಡು ಅನೇಕ ಹೊಸ ಸಾಮಾಜಿಕ ಮತ್ತು ರಾಜಕೀಯ ಅರ್ಥಗಳನ್ನು ಪಡೆದುಕೊಂಡಿದೆ.
ವಾಘೇರ್ ಕಛ್ನ ಕೊಲ್ಲಿ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಇವರು ಶತಮಾನಗಳಿಂದಲೂ ಕಛ್ ಕೊಲ್ಲಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಈ ಸಮುದಾಯದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಜೀವನೋಪಾಯಕ್ಕಾಗಿ ತಮ್ಮ ಒಳನಾಡಿನ ಹಳ್ಳಿಗಳಿಂದ ಮುಂದ್ರಾ ಪಟ್ಟಣದ ಸಮೀಪದ ಮೀನುಗಾರಿಕೆ ಪ್ರದೇಶಗಳಿಗೆ ಸ್ಥಳಾಂತರಗೊಂಡು, ಸುಮಾರು 8ರಿಂದ 9 ತಿಂಗಳುಗಳ ಕಾಲ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಇಲ್ಲಿ, ಪುರುಷರು ಮೀನುಗಳನ್ನು ಹಿಡಿದು ತರುತ್ತಾರೆ, ಮತ್ತು ಮಹಿಳೆಯರು ಅವುಗಳನ್ನು ವಿಂಗಡಿಸಿ, ಒಣಗಿಸಿ ಮಾರಾಟ ಮಾಡುತ್ತಾರೆ.
2000 ಇಸವಿಯಿಂದ ಪರಿಸ್ಥಿತಿ ಬದಲಾಗತೊಡಗಿತು. ರಾಜ್ಯ ಸರ್ಕಾರ ಕರಾವಳಿ ತೀರದಲ್ಲಿ ಕೈಗಾರೀಕರಣ ಮತ್ತು ಖಾಸಗೀಕರಣವನ್ನು ಉತ್ತೇಜಿಸಿತು. ತೈಲ ಶುದ್ಧೀಕರಣ ಘಟಕಗಳು, ಸಿಮೆಂಟ್ ಮತ್ತು ರಸಗೊಬ್ಬರ ಘಟಕಗಳು, ಉಪ್ಪಿನ ಗದ್ದೆಗಳು, ಬಾಕ್ಸೈಟ್ ಮತ್ತು ಸುಣ್ಣದ ಕಲ್ಲು ಗಣಿಗಾರಿಕೆ, ಹಾಗೂ ಹಡಗು ಸಂಬಂಧಿತ ಚಟುವಟಿಕೆಗಳು - ಇಂತಹ ಹಲವು ಯೋಜನೆಗಳು ಸಮುದಾಯದ ಜೀವನ ಪರಿಸರವನ್ನು ತೀವ್ರವಾಗಿ ಬಾಧಿಸಿದವು.
ಈ ಜನರು ಕೈಗಾರಿಕಾ ನಿರ್ಮಾಣ ಮತ್ತು ಮಾಲಿನ್ಯದಿಂದಾಗಿ ತಮ್ಮ ಮೀನುಗಾರಿಕೆ ಪ್ರದೇಶಗಳನ್ನು ಕಳೆದುಕೊಳ್ಳುತ್ತಿದ್ದರು; ಇದರಿಂದ ಕರಾವಳಿ ಪರಿಸರ ವ್ಯವಸ್ಥೆ ಮತ್ತು ನೈಸರ್ಗಿಕ ಉಬ್ಬರ-ಇಳಿತದ ಹರಿವುಗಳಲ್ಲಿ ವ್ಯತ್ಯಾಸ ಉಂಟಾಯಿತು. ಹಿಡಿಯುವ ಮೀನುಗಳ ಪ್ರಮಾಣ ಮತ್ತು ವೈವಿಧ್ಯತೆ ಕಡಿಮೆಯಾದ ಕಾರಣ ವಾಘೇರ್ ಜನರ ಆದಾಯದಲ್ಲಿ ಗಣನೀಯ ಕುಸಿತ ಕಂಡುಬಂದಿತು. ಇದರಿಂದಾಗಿ ಅವರು ಮೀನುಗಾರಿಕೆಗಾಗಿ ಸಮುದ್ರದಲ್ಲಿ ಮತ್ತಷ್ಟು ದೂರ ಹೋಗಬೇಕಾಯಿತು. ಪರಿಣಾಮವಾಗಿ, 'ಪಗಾಡಿಯಾ' ಮೀನುಗಾರಿಕೆಯಂತಹ ಅವರ ಸಾಂಪ್ರದಾಯಿಕ ಜ್ಞಾನ ಮತ್ತು ಪದ್ಧತಿಗಳೂ ಕಣ್ಮರೆಯಾದವು.
ಒಂದು ದಶಕದ ಹಿಂದೆ, ಈ ಪ್ರದೇಶದ ಮೀನುಗಾರರು ತಮ್ಮ ಜೀವನೋಪಾಯಕ್ಕೆ ಹಾನಿ ಮಾಡಿದ ಬೃಹತ್ ಕಲ್ಲಿದ್ದಲು ಸ್ಥಾವರಕ್ಕೆ ಧನಸಹಾಯ ನೀಡಿದ್ದ ವಿಶ್ವ ಬ್ಯಾಂಕ್ನ ಖಾಸಗಿ ಹೂಡಿಕೆ ಸಂಸ್ಥೆಯಾದ ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ (ಐಎಫ್ಸಿ) ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಈ ಪ್ರದೇಶದಲ್ಲಿನ 'ಅಭಿವೃದ್ಧಿ'ಯಡಿ ಈಗಾಗಲೇ ಕಛ್ ಪ್ರಾಂತ್ಯದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (ಎಸ್ಇಬಿಸಿ) ಅಡಿಯಲ್ಲಿ ಬರುವ ಈ ಸಮುದಾಯ ಮತ್ತಷ್ಟು ದುರ್ಬಲವಾಗಿದೆ.



