“ನೀವೇ ನೋಡಬಹುದು, ನಾವೇನು ಸಿರಿವಂತರಲ್ಲ, ಆದ್ರೆ ಮನೆಗೆ ಬಂದ ಅತಿಥಿಯನ್ನು [ಮೆಹಮಾನ್]ಹೇಗೆ ನೋಡಿಕೊಳ್ಳಬೇಕು ಎಂಬುದು ಗೊತ್ತಿದೆ. ಹಾಗಾಗಿ, ನೀವು ದಯವಿಟ್ಟು ಬನ್ನಿ” ಎಂದು ಲಖ್ಪತ್ ತಾಲೂಕಿನ ಮೋರಿ ಗ್ರಾಮದ ಕರೀಮ್ ಜಾಟ್ ಹೇಳಿದ್ದರು. ನಲವತ್ತರ ಹರೆಯದ ಮಧ್ಯದಲ್ಲಿರುವ ಇವರು, ನಾನು ಕಳೆದ ಕೆಲವು ವರ್ಷಗಳಿಂದ ಪರಿಯಲ್ಲಿ ದಾಖಲೀಕರಣ ಮಾಡುತ್ತಾ ಬಂದಿರುವ ಅನೇಕ ಫಕಿರಾನಿ ಜಾಟ್ಗಳಲ್ಲಿ ಒಬ್ಬರು. ಸಾವ್ಲಾ ಪೀರ್ ಹಬ್ಬವನ್ನು ಮುಗಿಸಿ ಲಖ್ಪತ್ನಿಂದ ಹಿಂತಿರುಗುವಾಗ ನನ್ನನ್ನು ಬೀಳ್ಕೊಡುತ್ತಾ ಅವರು ಈದ್ ಹಬ್ಬಕ್ಕೆ ಮತ್ತೆ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಅದು 2024 ರ ಮಾರ್ಚ್, ಈಗ 2025 ರ ಮಾರ್ಚ್ ಬಂದಿದೆ. ನಾನೀಗ ಮತ್ತೆ ಗುಜರಾತ್ನ ಕಛ್ನಲ್ಲಿರುವ ಮೋರಿ ಗ್ರಾಮಕ್ಕೆ ಹೊರಟಿದ್ದೇನೆ. ಕರೀಮ್ ಭಾಯ್ ಆಹ್ವಾನಿಸಿರುವಾಗ ಹೋಗದಿರಲು ಸಾಧ್ಯವಿಲ್ಲ.
ಕರೀಮ್ ಭಾಯ್ ನನ್ನನ್ನು ಬಿಗಿದಪ್ಪಿ ಸ್ವಾಗತಿಸಿದರು. “ನೀವು ಬಂದಿದ್ದು ತುಂಬಾ ಖುಷಿಯಾಯ್ತು” ಎಂದು ಹೇಳುವಾಗ ಅವರ ದನಿಯಲ್ಲಿ ತುಂಬಿದ್ದ ಉತ್ಸಾಹ ಮತ್ತು ಪ್ರೀತಿ ನನ್ನ ಎದೆಯನ್ನು ನಾಟಿತು. “ಇವತ್ತು ರಂಜಾನ್ನ ಕೊನೆಯ ನಮಾಜ್, ಅದಕ್ಕೆ ಇನ್ನೂ ಸಮಯವಿದೆ. ಹಾಗಾಗಿ, ಇಲ್ಲೇ ಸ್ವಲ್ಪ ಹೊತ್ತು ಅಡ್ಡಾಡಿಕೊಂಡು ಬರುವ” ಎಂದು ಅವರು ಹೇಳಿದರು. ಈ ಊರು ಮೋರಿಗೆ ಅದರದೇ ಆದ ಒಂದು ಸೌಂದರ್ಯವಿದೆ. ದಿಗಂತದ ವರೆಗೆ ವ್ಯಾಪಿಸಿರುವ ಬಂಜರು ಭೂಮಿ, ಅಲ್ಲಲ್ಲಿ ಪಾಪಾಸುಕಳ್ಳಿಗಳು. ಸಂಜೆಯಾದರೂ ಸೂರ್ಯ ಇನ್ನೂ ಬಾನಿನಲ್ಲೇ ಇದ್ದಾನೆ. ಕಛ್ ಕೊಲ್ಲಿಯಿಂದ ಬೀಸುತ್ತಿದ್ದ ತಂಗಾಳಿಗೆ ಇಡೀ ಮೈ ಚಳಿಯಿಂದ ನಡುಗುತ್ತಿತ್ತು.
ಸಣ್ಣ ಕೆರೆಯ ಬಳಿ ಬಂದು ಆಗಸದಲ್ಲಿ ರಂಗೇರಿಸಿದ್ದ ಸೂರ್ಯನನ್ನು ನೋಡುತ್ತಾ ನಿಂತಿದ್ದೆವು. “ನಾನು ನನ್ನ ಗಾಡಿಗಳನ್ನೆಲ್ಲಾ ಮಾರಿದೆ” ಎಂದು ಕರೀಮ್ ಭಾಯ್ ಮೆದುವಾದ ದನಿಯಲ್ಲಿ ಹೇಳಿದರು. “ನನ್ನ ಸಣ್ಣ ಮಗ ಮೇಯಿಸುತ್ತಿದ್ದ 200 ಒಂಟೆಗಳು ಇನ್ನೂ ನನ್ನ ಬಳಿ ಇವೆ. ಇವುಗಳಿಂದ ಆದಾಯ ಕಮ್ಮಿ, ಮೇಯಿಸಲು ಜಾಗವೂ ಇಲ್ಲದಾಗುತ್ತಿದೆ” ಎಂದು ಹೇಳಿ ಸ್ಪಲ್ಪ ಹೊತ್ತು ಮಾತು ನಿಲ್ಲಿಸಿದರು. ಆಮೇಲೆ ದನಿಯನ್ನು ಸರಿಪಡಿಸಿಕೊಂಡು, “ಸಂಜೆಯ ಸಮಾಜ್ಗೆ ಸಮಯ ಆಯ್ತು. ನಾಳೆ ಈದ್ ಇದೆ. ಸುಮ್ಮನೆ ದೂರಿ ಪ್ರಯೋಜನವಿಲ್ಲ. ಬನ್ನಿ, ಎಲ್ಲರೂ ಒಟ್ಟಾಗಿ ಹಬ್ಬದ ಗಮ್ಮತ್ ಮಾಡೋಣ” ಎಂದು ಹೇಳಿದರು.










