ತೂಫಾನಿಯವರು ತಮ್ಮ ನೇಕಾರರ ತಂಡದ ಜೊತೆಗೆ ಬೆಳಗ್ಗೆ ಆರೂವರೆಯಿಂದ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 12 ಇಂಚುಗಳಷ್ಟು ಹೆಣೆಯುವ ಈ ನಾಲ್ವರು, ತಾವು ಕೆಲಸ ಮಾಡುತ್ತಿರುವ 23x6 ಅಡಿಯ ಗಲಿಚಾ (ಕಾರ್ಪೆಟ್) ಮುಗಿಸಲು 40 ದಿನಗಳನ್ನು ತೆಗೆದುಕೊಳ್ಳುತ್ತಾರೆ.
ಮಧ್ಯಾಹ್ನ ಒಂದೂವರೆಯ ಹೊತ್ತಿಗೆ, ತೂಫಾನಿ ಬಿಂದ್ರವರು ಉತ್ತರ ಪ್ರದೇಶದ ಪುರ್ಜಗೀರ್ ಮುಜೆಹರಾ ಗ್ರಾಮದಲ್ಲಿರುವ ತಗಡಿನಿಂದ ಮಾಡಲಾಗಿರುವ ತಮ್ಮ ವರ್ಕ್ಶಾಪ್ನಲ್ಲಿರುವ ಮರದ ಬೆಂಚಿನ ಮೇಲೆ ವಿಶ್ರಾಂತಿ ಪಡೆಯುತ್ತಾರೆ. ಅವರ ಹಿಂದೆ ಮರದ ಚೌಕಟ್ಟಿನಿಂದ ಬಿಳಿ ಹತ್ತಿಯ ಎಳೆಗಳು ನೇತಾಡುತ್ತಿವೆ. ಈ ಪ್ರದೇಶ ರಾಜ್ಯದ ಕಾರ್ಪೆಟ್ ನೇಯ್ಗೆ ಉದ್ಯಮದ ಹೃದಯಭಾಗ. ಈ ಕಲೆಯನ್ನು ಮೊಘಲರು ಮಿರ್ಜಾಪುರಕ್ಕೆ ಪರಿಚಯಿಸಿದರು ಮತ್ತು ಬ್ರಿಟೀಷರು ಇದರ ಕೈಗಾರಿಕೆಯನ್ನು ಆರಂಭಿಸಿದರು. ಹೊದಿಕೆಗಳು, ಮ್ಯಾಟ್ಗಳು ಮತ್ತು ಕಾರ್ಪೆಟ್ಗಳ ಉತ್ಪಾದನೆಯಲ್ಲಿ ಯುಪಿ ಪ್ರಾಬಲ್ಯವನ್ನು ಪಡೆದಿದೆ. ರಾಷ್ಟ್ರೀಯ ಉತ್ಪಾದನೆಯ ಅರ್ಧದಷ್ಟನ್ನು (ಶೇ. 47) ಯುಪಿ ಉತ್ಪಾದಿಸುತ್ತದೆ ಎಂದು 2020 ರ ಅಖಿಲ ಭಾರತ ಕೈಮಗ್ಗ ಜನಗಣತಿ ಹೇಳುತ್ತದೆ.
ಮಿರ್ಜಾಪುರ ನಗರದ ಹೆದ್ದಾರಿಯಿಂದ ಇಳಿಯುತ್ತಿದ್ದಂತೆ ಪುರ್ಜಗೀರ್ ಮುಜೆಹರಾ ಗ್ರಾಮಕ್ಕೆ ಹೋಗುವ ರಸ್ತೆ ಕಿರಿದಾಗುತ್ತಾ ಹೋಗುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ಹೆಚ್ಚಾಗಿ ಒಂದು ಅಂತಸ್ತಿನ ಪಕ್ಕಾ ಮನೆಗಳಿವೆ, ಹಾಗೆಯೇ ಹುಲ್ಲು ಹಾಸಿದ ಛಾವಣಿಯ ಕಚ್ಚಾ ಮನೆಗಳಿವೆ. ಬೆರಣಿ ಸುಟ್ಟ ಹೊಗೆ ಗಾಳಿಯಲ್ಲಿ ಮೇಲೇರುತ್ತಿದೆ. ಹಗಲಿನಲ್ಲಿ ಪುರುಷರು ಹೊರಗಡೆ ಅಷ್ಟೇನೂ ಕಾಣಿಸಿಕೊಳ್ಳುವುದಿಲ್ಲ, ಆದರೆ ಮಹಿಳೆಯರು ಕೈ ಪಂಪ್ ಬಳಿ ಬಟ್ಟೆ ಒಗೆಯುವುದು, ತರಕಾರಿ ಅಥವಾ ಫ್ಯಾಷನ್ ವಸ್ತುಗಳನ್ನು ಮಾರುವ ಸ್ಥಳೀಯ ಮಾರಾಟಗಾರರೊಂದಿಗೆ ಮಾತನಾಡುವುದು ಮುಂತಾದ ಮನೆಗೆಲಸಗಳನ್ನು ಮಾಡುವುದನ್ನು ನೋಡಬಹುದು.
ಈ ಪ್ರದೇಶದಲ್ಲಿ ನೇಕಾರರು ವಾಸಿಸುವ ಯಾವುದೇ ಲಕ್ಷಣಗಳಿಲ್ಲ. ಸ್ಥಳೀಯರು ಗಲಿಚಾ ಎಂದು ಕರೆಯುವ ಕಾರ್ಪೆಟ್ಗಳನ್ನು ತೂಗು ಹಾಕುವುದನ್ನು ಅಥವಾ ಹೊರಗೆ ಜೋಡಿಸಿರುವುದನ್ನು ನೋಡಲು ಸಾಧ್ಯವಿಲ್ಲ. ಮನೆಗಳು ಕಾರ್ಪೆಟ್ ನೇಯ್ಗೆಯ ಕೆಲಸಕ್ಕಾಗಿ ಪ್ರತ್ಯೇಕ ಸ್ಥಳ ಅಥವಾ ಕೊಠಡಿಯನ್ನು ಹೊಂದಿದ್ದರೂ, ಅವು ಒಮ್ಮೆ ಸಿದ್ಧವಾದ ಮೇಲೆ ಮಧ್ಯವರ್ತಿಗಳು ಅವನ್ನು ತೊಳೆಯಲು ಮತ್ತು ಸ್ವಚ್ಛ ಮಾಡಲು ತೆಗೆದುಕೊಂಡು ಹೋಗುತ್ತಾರೆ.
ವಿರಾಮದ ಸಮಯದಲ್ಲಿ ಪರಿಯೊಂದಿಗೆ ಮಾತನಾಡುತ್ತಾ, ತೂಫಾನಿಯವರು, "ನಾನು ಇದನ್ನು [ಹೆಣೆಯುವ ಕೆಲಸ] ನನ್ನ ತಂದೆಯಿಂದ ಕಲಿತೆ. ನನ್ನ 12-13 ವರ್ಷ ವಯಸ್ಸಿನಿಂದಲೂ ಇದನ್ನು ಮಾಡುತ್ತಿದ್ದೇನೆ," ಎಂದು ಹೇಳುತ್ತಾರೆ. ಅವರ ಕುಟುಂಬವು ಬಿಂದ್ ಸಮುದಾಯಕ್ಕೆ ಸೇರಿದೆ (ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ). ಯುಪಿಯ ಹೆಚ್ಚಿನ ನೇಕಾರರು ಒಬಿಸಿ ಅಡಿಯಲ್ಲಿ ಬರುತ್ತಾರೆ ಎಂದು ಜನಗಣತಿ ಹೇಳುತ್ತದೆ.























