“ನೀವು ಘುಂಘು (ಗೊರಬು) ಹಾಕಿಕೊಂಡು ಕಾಡಿಗೆ ಹೋದರೆ ಸಿಡಿಲು ಬಡಿಯುವುದಿಲ್ಲ” ಎನ್ನುತ್ತಾರೆ ಶುಖಾನಿ ಅಸುರ್. ಇವರು ಜಾರ್ಖಂಡ್ ರಾಜ್ಯದ ಗುಮ್ಲಾ ಜಿಲ್ಲೆಯ ಕುಜಾಮ್ ಎನ್ನುವ ಊರಿನವರು. ಘುಂಘು ಎನ್ನುವುದು ಮಲೆನಾಡು ಮತ್ತು ಕರಾವಳಿ ಪ್ರದೇಶದ ಹಳ್ಳಿಗಳಲ್ಲಿ ಹಿಂದೆ ಬಳಸುತ್ತಿದ್ದ ಗೊರಬಿನ ರೀತಿಯದ್ದು. ಇದನ್ನು ಮಾಲೂ (ಆನೆ ಪಾದದ ಬಳ್ಳಿ/ಫನೇರಾ ವಹ್ಲೀ) ಬಳ್ಳಿ ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ.
ಘುಂಘುವನ್ನು ವರ್ಷವಿಡೀ ಬಳಸಲಾಗುತ್ತದೆ. ಬೇಸಗೆಯಲ್ಲಿ ಇದು ಬಿಸಿ ಗಾಳಿಯಿಂದ ರಕ್ಷಣೆ ನೀಡುತ್ತದೆ. ಚಳಿಗಾದಲ್ಲಿ ಶೀತ ಗಾಳಿಯಿಂದ ರಕ್ಷಣೆ ಕೊಟ್ಟರೆ, ಮಳೆಗಾಲದಲ್ಲಿ ಮಳೆಯಿಂದ ಕಾಪಾಡುತ್ತದೆ. ಮುಖ್ಯವಾಗಿ ಗೋಪುರ ಆಕಾರದ ಇದು ತಲೆಯ ಮೇಲೆ ಇರಿಸಿಕೊಳ್ಳಲು ಅನುವು ಮಾಡಿಕೊಡುವುದರಿಂದ ಕೆಲಸದ ಸಮಯದಲ್ಲಿ ಎರಡೂ ಕೈಗಳನ್ನು ಬಳಸಲು ಸಾಧ್ಯವಾಗುತ್ತದೆ.
ಶುಖಾನಿ ಚಿಕ್ಕವರಿದ್ದಾಗಲೇ ತಮ್ಮ ತಾಯಿಯಿಂದ ಇದನ್ನು ತಯಾರಿಸುವುದನ್ನು ಕಲಿತಿದ್ದರು. “ಹಿಂದೆ ಎಲ್ಲರೂ ಕಾಡಿನಿಂದ ಮಾಲೂ ಎಲೆ ಕೊಯ್ದು ತಂದು ಘುಂಘು ತಯಾರಿಸುತ್ತಿದ್ದರು. ಆದರೆ ಈಗ ಎಲ್ಲೋ ಕೆಲವರಷ್ಟೇ ಬಳಸುತ್ತಾರೆ. ಇನ್ನು ಇದನ್ನು ತಯಾರಿಸಲು ಬಲ್ಲವರ ಸಂಖ್ಯೆ ಇನ್ನೂ ಕಡಿಮೆಯಿದೆ” 56 ವರ್ಷದ ಈ ಮಹಿಳೆ.
ಶುಖಾನಿ ಅಸುರ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ರಾಜ್ಯದಲ್ಲಿ ವಿಶೇಷ ದುರ್ಬಲ ಬುಡಕಟ್ಟು (ಪಿವಿಟಿಜಿಎಸ್) ಎಂದು ಗುರುತಿಸಲಾಗಿದೆ. ಕುಟುಂಬವು ಸ್ವಂತದ 10 ಜಮೀನಿನಲ್ಲಿ ಸಾಗುವಳಿ ಮಾಡುತ್ತದೆ. ಈ ಭೂಮಿಯಲ್ಲಿ ಹೆಚ್ಚಾಗಿ ಅವರು ಭತ್ತ, ಜೋಳ ಮತ್ತು ಗುಂಡ್ಲಿ (ಸಾಮೆ) ಯನ್ನು ಬೆಳೆಯುತ್ತಾರೆ.
ಬಿಶುನ್ಪುರ್ ಅರಣ್ಯ ಶ್ರೇಣಿ ಆರಂಭವಾಗುವುದು ಶುಖಾನಿಯವರ ಮೂರು ಕೋಣೆಗಳ ಮಣ್ಣಿನ ಮನೆಯಿಂದ ಕೇವಲ 500 ಮೀಟರ್ ದೂರದಿಂದ. ಈ ಮನೆಯಲ್ಲಿ ಅವರ ಕುಟುಂಬದ 12 ಸದಸ್ಯರು ವಾಸವಿದ್ದಾರೆ. ಕುಜಮ್ ಗ್ರಾಮದ ಜನರು ಈ ಕಾಡನ್ನು ಸೌದೆ, ಹಣ್ಣು ಮತ್ತು ಜಾನುವಾರುಗಳ ಹುಲ್ಲು ಸೇರಿದಂತೆ ಹಲವು ವಿಷಯಗಳಿಗಾಗಿ ಅವಲಂಬಿಸಿದ್ದಾರೆ. “ಹಮ್ರಾ ರೋಜಿ ರೋಟಿ ಸಬ್ ಯಹಿ ಹೈ [ನಮ್ಮ ಹೊಟ್ಟೆಪಾಡು, ಆಹಾರ ಎಲ್ಲವೂ ಇದೇ ಕಾಡಿನಲ್ಲಿದೆʼ ಎನ್ನುತ್ತಾರೆ ಶುಖಾನಿ.
























