ಚಿತ್ರಗುಪ್ತ ವಿವಿಧ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮೃತ ಶಿಕ್ಷಕರು ಹಾಗೂ ಪೂರಕ ಸಿಬ್ಬಂದಿಗಳ ಹೆಸರನ್ನು ಜಿಲ್ಲಾವಾರು ಪಟ್ಟಿ ಮಾಡುತ್ತಿದ್ದ. ಕೆಲವು ವಾರಗಳ ಹಿಂದೆ ಮತಗಳನ್ನು ಎಣಿಸಿದಂತೆ, ಈಗ ಈ ಸಾವಿನ ಪಟ್ಟಿಯನ್ನು ಆತ 50ನೇ ಬಾರಿಗೆ ತಾಳೆ ನೋಡುತ್ತಿದ್ದ. ಈ ಕೆಲಸವನ್ನು ಸರಿಯಾಗಿ ಮಾಡಬೇಕಿತ್ತು ಮತ್ತು ಆತನಿಗೆ ಯಂತ್ರಗಳ ಮೇಲೆ ನಂಬಿಕೆಯಿರಲಿಲ್ಲ. ಈ ದಾಖಲೆಗಳನ್ನು ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಮತ್ತು ಅದಕ್ಕಿಂತ ಮೇಲಿನ ಮಟ್ಟಕ್ಕೆ ಕಳುಹಿಸುವ ಮೊದಲು ಅವು ಸರಿಯಾಗಿವೆಯೇ ಎಂದು ಅವನು ಖಚಿತಪಡಿಸಿಕೊಳ್ಳಬೇಕಿತ್ತು.
ಸತ್ತವರು ತಮ್ಮ ಪುಣ್ಯಫಲದ ನಿರೀಕ್ಷೆಯಲ್ಲಿದ್ದರು, ಆದರೆ ಚಿತ್ರಗುಪ್ತ ಎಣಿಕೆಯಲ್ಲಿ ತಪ್ಪು ಮಾಡುವ ಸಾಹಸಕ್ಕೆ ಕೈಹಾಕುವಂತಿರಲಿಲ್ಲ. ಅವರಿಗೆ ಒಂದೇ ಒಂದು ಸ್ಥಾನವನ್ನು ನೀಡುವ ಮೊದಲು, ಭೂಮಿಯ ಮೇಲಿನ ಅವರ ಹಿಂದಿನ ಕರ್ಮಗಳ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವುದು ಅವನ ಪಾಲಿಗೆ ಅನಿವಾರ್ಯವಾಗಿತ್ತು. ಪ್ರತಿಯೊಂದು ತಪ್ಪಿಗೂ ತೆರಬೇಕಾದ ಬೆಲೆ ತುಂಬಾ ಹೆಚ್ಚಿರಲಿತ್ತು, ಹೀಗಾಗಿ ಅವನು ಮತ್ತೆ ಮತ್ತೆ ಎಣಿಸುತ್ತಿದ್ದನು. ಪ್ರತಿ ಬಾರಿ ಅವನು ಎಣಿಕೆಯಲ್ಲಿ ತೊಡಗಿದಾಗಲೂ, ಇನ್ನಿಲ್ಲವಾದ ಆತ್ಮಗಳ ಈ ಅಂತ್ಯವಿಲ್ಲದ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರ್ಪಡೆಯಾಗಿರುತ್ತಿದ್ದವು. ಈ ಅಲೆದಾಡುತ್ತಿರುವ ಆತ್ಮಗಳನ್ನು ನರಕಲೋಕದ ತನ್ನ ಕಚೇರಿಯ ಹೊರಗೆ ಸಾಲಾಗಿ ನಿಲ್ಲಿಸಿದರೆ, ಆ ಸಾಲು ನೇರವಾಗಿ ಪ್ರಯಾಗ್ರಾಜ್ ತನಕವೂ ತಲುಪಬಹುದು ಎಂದು ಅವನಿಗೆ ಎನ್ನಿಸಿತು.



