“ಇದೇ ಜಾಗದಲ್ಲಿ ನಾನು ಬಹುತೇಕ ಹಿಮದಡಿ ಹೂತು ಹೋಗಿದ್ದು. ಎಲ್ಲರೂ ನಾನು ಸತ್ತೇ ಹೋದೆ ಎಂದು ಭಾವಿಸಿದ್ದರು.”
ಶರಪ್ ಟಂಗ್ಲಾಂಗ್ ಲಾ ಈಪರ್ವತದ ದಾರಿಯಲ್ಲಿ 17,480 ಅಡಿಎತ್ತರದಲ್ಲಿ ಸುರಿಯುತ್ತಿದ್ದ ಭಾರೀ ಹಿಮಪಾತದ ಕುರಿತು ಮಾತನಾಡುತ್ತಿದ್ದರು. "ಉಳಿದಕೆಲಸಗಾರರು ನನ್ನನ್ನು ಕಾಪಾಡಲು ಬಂದರು" ಎಂದು ಅವರು ಆ ದಿನದ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಹೇಳಿದರು. ಸೈನ್ಯದ ಆಸ್ಪತ್ರೆ ಹತ್ತಿರದಲ್ಲಿದ್ದು ಕೂಡಲೇ ಚಿಕಿತ್ಸೆ ಸಿಕ್ಕಿದ ಕಾರಣ ಬದುಕುಳಿಯುವ ಅದೃಷ್ಟ ಅವರ ಪಾಲಿಗೆ ಒಲಿದಿತ್ತು.
ಲಡಾಖ್ ಪ್ರಾಂತ್ಯದ ಅತಿ ಎತ್ತರದಪ್ರದೇಶಗಳಲ್ಲಿ ಕೆಲಸ ಮಾಡುವ ಶರಪ್ ಅವರಂತಹ ರಸ್ತೆ ನಿರ್ಮಾಣ ಕಾರ್ಮಿಕರು ನಿರಂತರವಾಗಿ ಅನಿಶ್ಚಿತ ಹವಾಮಾನ ಮತ್ತು ಅದರ ಅಪಾಯಗಳನ್ನು ಎದುರಿಸುತ್ತಾರೆ. ಇಲ್ಲಿ ತಾಪಮಾನ ಪದೇ ಪದೇ ಶೂನ್ಯ ಡಿಗ್ರಿಗಿಂತಲೂ ಕೆಳಕ್ಕೆ ಇಳಿಯುತ್ತದೆ, ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಅಪಾಯ ಇನ್ನಷ್ಟು ಹೆಚ್ಚಿದೆ. "ಹವಾಮಾನವೈಪರೀತ್ಯದಿಂದಾಗಿ ತಡವಾಗಿ ಆಗುವ ಹಿಮಪಾತವು ಭಾರೀ ಪ್ರಮಾಣದ ಹಿಮವನ್ನು ತರುವುದರಿಂದ, ನಾವೀಗ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಿದ್ದೇವೆ" ಎಂದು ಲೇಹ್ ಜಿಲ್ಲೆಯ ಗ್ಯಾ ಗ್ರಾಮದ ನಿವಾಸಿಯಾದ ಶರಪ್ ಹೇಳುತ್ತಾರೆ.
ಟಂಗ್ಲಾಂಗ್ ಲಾ – ಪ್ರದೇಶದ ಎರಡನೇ ಅತಿ ಎತ್ತರದಮಾರ್ಗವನ್ನು – ಮತ್ತೆ ಪ್ರಾರಂಭಿಸುವ ಜವಾಬ್ದಾರಿ ಶರಪ್ ಮತ್ತು ಅವರಂತಹ ಕಾರ್ಮಿಕರತಂಡದ ಮೇಲಿದೆ. ಅತಿಯಾದ ಚಳಿ ಮತ್ತು ವಿಪರೀತ ಹವಾಮಾನದಿಂದಾಗಿ ಈ ಮಾರ್ಗವು ಪ್ರತಿ ವರ್ಷ ಅಕ್ಟೋಬರ್ನಿಂದ ಮೇ ತಿಂಗಳವರೆಗೆ ಮುಚ್ಚಿರುತ್ತದೆ. ಈ ಮಾರ್ಗವನ್ನು ತೆರೆಯುವುದರಿಂದ ಲೇಹ್ ಪ್ರದೇಶದಿಂದ ಮನಾಲಿಯವರೆಗಿನಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಈ 428 ಕಿಲೋಮೀಟರ್ ದೂರದ ಪ್ರಯಾಣವು ನಾಲ್ಕು ಘಾಟಿ ಮಾರ್ಗಗಳಮೂಲಕ ಹಾದುಹೋಗುತ್ತದೆ ಮತ್ತು ಟಂಗ್ಲಾಂಗ್ ಲಾ ಇಲ್ಲಿನ ಅತಿ ಎತ್ತರದ ಸ್ಥಳ. ಇಲ್ಲಿಂದ ಕಾಣುವ ದೃಶ್ಯಾವಳಿಗಳು ಬೆರಗುಗೊಳಿಸುವಂತಿದ್ದರೂ, ಬೀಸುವ ಗಾಳಿ ಮತ್ತು ಅತಿಯಾದ ಚಳಿಯಿಂದಾಗಿ ಯಾರೊಬ್ಬರೂ ಸಹ 10ರಿಂದ 15 ನಿಮಿಷಗಳಿಗಿಂತ ಹೆಚ್ಚು ಕಾಲ ಇಲ್ಲಿ ನಿಂತು ಸುತ್ತಲೂ ನೋಡಲು ಸಾಧ್ಯವಾಗುವುದಿಲ್ಲ.


















