ಕೆಲವು ಹೆಂಗಸರು ಬುಟ್ಟಿಗಳನ್ನು ಹಿಡಿದುಕೊಂಡು, ಗಂಡಸರು ಕೊಡಲಿ ಹಿಡಿದುಕೊಂಡು ನಡೆದು ಬರುತ್ತಿದ್ದರು. ರೈತರು ಎತ್ತಿನಗಾಡಿಯಲ್ಲಿ ಸಾಗುತ್ತಿದ್ದರು. ಯುವಕ – ಯುವತಿಯರು ಗೋರ್ ಮಾರಿಯಾ ಸಮುದಾಯದ ವಾದ್ಯಗಳ ಲಯಕ್ಕೆ ಕುಣಿಯುತ್ತಿದ್ದರು. ಬಿದಿರಿನ ಬೇಲಿಯಿಂದ ಸುತ್ತುವರಿದಿರುವ ಘರ್ಬಂಗಾಳದಲ್ಲಿರುವ ಆ ಹಳೆಯ ಮಣ್ಣಿನ ಮನೆಯ ಅಂಗಳದಲ್ಲಿ ಗೊಂಡ ಆದಿವಾಸಿ ಸಮುದಾಯದ ಜಗತ್ತು ಸೃಷ್ಟಿಯಾಗಿತ್ತು. ಘರ್ಬಂಗಾಳವು ನಾರಾಯಣಪುರದ ಕಾಡಿನೊಳಗಿರುವ ಒಂದು ಹಳ್ಳಿ. ಹಳ್ಳಿಯೊಳಗೆ ಹೊಕ್ಕಂತೆ ಸುತ್ತಲೂ ಹರಡಿಕೊಂಡು ಬಿದ್ದಿರುವ ಇತ್ತೀಚಿಗಷ್ಟೇ ಕತ್ತರಿಸಿದ ಮರದ ಬೊಡ್ಡೆಗಳು, ಹಲಗೆಗಳು, ಅರ್ಧ ಕೆತ್ತಿದ ಮರದ ತುಂಡುಗಳ ಬೆಚ್ಚಗಿನ ಪರಿಮಳ ಮೂಗಿಗೆ ಬಡಿಯುತ್ತದೆ. ಎಲ್ಲವೂ ತಮ್ಮೊಳಗೆ ಇಟ್ಟುಕೊಂಡಿರುವ ಕಥೆಗಳನ್ನು ಹೇಳಲು ಕಾಯುತ್ತಿದ್ದವು. ವೃದ್ಧ ಪಂಡಿ ರಾಮ್ ಅವರು ತಮ್ಮ ಶಿಷ್ಯರೊಂದಿಗೆ ಸಲಕರಣೆಗಳನ್ನು ಹಿಡಿದುಕೊಂಡು ಮರದ ಸುತ್ತ ಕುಳಿತಿದ್ದರು.
ಕುಕ್ಕುರುಗಾಲಿನಲ್ಲಿ ಕುಳಿತುಕೊಂಡು, ತಲೆಯನ್ನು ಬಾಗಿಸಿ, ಪೊರೆ ಹಿಡಿದ ತಮ್ಮ ಮುಸುಕಾದ ಕಣ್ಣುಗಳ ಮೇಲಿರುವ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ 70 ವರ್ಷ ಪ್ರಾಯದ ಪಂಡಿ ರಾಮ್ ತಾವು ಮರದ ಸಣ್ಣ ತುಂಡಿನ ಮೇಲೆ ಕೆತ್ತಿದ ಕಲಾಕೃತಿಗೆ ಅಂತಿಮ ಸ್ಪರ್ಶವನ್ನು ನೀಡುತ್ತಿದ್ದರು. ಮಧ್ಯೆ ಮಧ್ಯೆ ತಮಗೆ ಬೇಕಾದಾಗ ಸಲಕರಣೆಗಳನ್ನು ಕೊಡುವಂತೆ ಶಿಷ್ಯರನ್ನು ಕೇಳುತ್ತಿದ್ದರು. ಇವರು ಈ ಸಲಕರಣೆಗಳನ್ನು ಛೇನಿ, ತ್ರಿಕೋನ್, ರೇಗಿ, ಪಟಾಸಿ ಮತ್ತು ಹಥೋಡಿ ಎಂದು ಸ್ಥಳೀಯ ಹೆಸರುಗಳಿಂದ ಕರೆಯುತ್ತಾರೆ. ಕೈಗಳಿಂದ ನಿರಂತರವಾಗಿ ಕೆಲಸ ಮಾಡುತ್ತಲೇ, ತಮ್ಮ ಮಾತೃಭಾಷೆ ಗೊಂಡಿಯಲ್ಲಿ ತಮ್ಮ ಶಿಷ್ಯಂದಿರಿಗೆ ಸಲಹೆ ಮತ್ತು ಎಚ್ಚರಿಕೆಯ ಮಾತುಗಳಿಂದ ಮಾರ್ಗದರ್ಶನವನ್ನು ನೀಡುತ್ತಿದ್ದರು. ಪಂಡಿ ರಾಮ್ ಅವರು ಮರದ ಮೇಲೆ ಕೆತ್ತುವ ಪ್ರತೀ ಕೆತ್ತನೆಯಲ್ಲೂ ಕಾಡಿನ ಉಸಿರಿದೆ, ಒಂದು ಪೀಳಿಗೆ ನೆನಪಿಸಿಕೊಳ್ಳಬೇಕಾದ ಸಾಮರಸ್ಯದಿಂದ ಕಟ್ಟಿದ ಗೊಂಡ ಸಮುದಾಯದ ಬದುಕು ಇದೆ.
ಈಗೀಗ ಇವರಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ, ಆದರೂ ಕೆಲಸ ಮಾಡದೇ ಇರಲು ಇವರ ಕೈಯಲ್ಲಿ ಸಾಧ್ಯವಿಲ್ಲ. “ಅವರು ಕೇವಲ ಮರವನ್ನು ಮುಟ್ಟಿಯೇ ಯಾವುದು ಸರಿಯಿದೆ, ಯಾವುದರ ಮೇಲೆ ಕೆಲಸ ಮಾಡಬೇಕು ಎಂಬುದನ್ನು ತಿಳಿಯುತ್ತಾರೆ,” ಎಂದು ಅವರ ಮಗ ಬಲದೇವ್ ಹೇಳುತ್ತಾರೆ. “ಈ ಕಲೆ ನನ್ನ ಉಸಿರು. ಇದನ್ನು ಬಿಟ್ಟರೆ ನನಗೆ ಬೇರೆ ಬದುಕಿಲ್ಲ,” ಎಂದು ಪಂಡಿ ರಾಮ್ ಹೇಳುತ್ತಾರೆ. ಇವರು ಮರವನ್ನು ಉಜ್ಜುವ, ಪ್ರತಿಮೆಯನ್ನು ಕೆತ್ತುವ ಅಥವಾ ಮರದ ತುಂಡನ್ನು ಅತ್ತಿತ್ತ ಎಳೆಯುತ್ತಾ ಕೆಲಸ ಮಾಡುತ್ತಿದ್ದ ತಮ್ಮ ನಾಲ್ಕೈದು ಮಂದಿ ಸಹಚರರೊಂದಿಗೆ ಮುಖಮಂಟಪದಲ್ಲಿ ಕುಳಿತಿದ್ದರು.
“ನಾನು ಇದನ್ನು ಹಳ್ಳಿಗೆ ಮಾತ್ರ ಸೀಮಿತವಾದ ಕಲೆ ಎಂದು ಭಾವಿಸಿದ್ದೆ. ಆದರೆ, ನಗರದ ಜನರು ಇದನ್ನು ಇಷ್ಟಪಡಲು ಆರಂಭಿಸಿದರು. ಆಗ ನಾನು ಇದು ನನ್ನ ಜೀವನೋಪಾಯಕ್ಕೆ ದಾರಿಯಾಗಬಹುದು ಎಂದು ನಂಬಿದೆ, ನನ್ನ ತಂದೆಯಿಂದ ಪಡೆದ ಈ ಕೌಶಲ್ಯವನ್ನು ನಾನು ಗೌರವಿಸುತ್ತಾ, ಇದರ ಮೂಲಕವೇ ಜೀವನವನ್ನು ಕಟ್ಟಲು ನಿರ್ಧರಿಸಿದೆ,” ಎಂದು ಪಂಡಿ ರಾಮ್ ಹೇಳುತ್ತಾರೆ. ಇವರು ತಮ್ಮ 35 ವರ್ಷಗಳ ಅನುಭವವನ್ನು ಸಮುದಾಯದ ಶ್ರೀಮಂತ ಪರಂಪರೆ ಮತ್ತು ಕಾಷ್ಠ ಶಿಲ್ಪಕಲೆಯನ್ನು ಜೀವಂತವಾಗಿಡಲು ಧಾರೆಯೆರೆಯುತ್ತಿದ್ದಾರೆ. ಆದರೆ, ಮರದಿಂದ ನಿರ್ಮಿಸಿದ ಮನೆ ಬಳಕೆಯ ಮತ್ತು ಆಲಂಕಾರಿಕ ವಸ್ತುಗಳು ಈ ಸಮುದಾಯದ ಮನೆಗಳು, ಆಚರಣೆಗಳು, ಹಬ್ಬಗಳು ಮತ್ತು ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿವೆಯೇ ಹೊರತು ಜೀವನೋಪಾಯದ ದಾರಿಯಾಗಿಲ್ಲ.


























