ಆಗಸ್ಟ್ 19 ವಿಶ್ವ ಛಾಯಾಗ್ರಹಣ ದಿನ. ಅದೇ ದಿನ, ನಾವು ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕೆಲವು ಅದ್ಭುತ ಚಿತ್ರಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇದು ಇಲ್ಲಿನ ಅರಣ್ಯ ಮತ್ತು ವನ್ಯಜೀವಿಗಳ ನೋಟ, ಆದರೆ ಇದು ಪ್ರವಾಸಿಗರು ಅಥವಾ ಅನುಭವಿ ಛಾಯಾಗ್ರಾಹಕರ ದೃಷ್ಟಿಕೋನದ ಚಿತ್ರಣವಲ್ಲ, ಅಭಯಾರಣ್ಯದಅಂಚಿನಲ್ಲಿ ವಾಸಿಸುವ ಸ್ಥಳೀಯರಬದುಕಿನ ಅನುಭವದ ಮೂಸೆಯಿಂದ ಮೂಡಿದ ಚಿತ್ರಗಳು
ಈ ಫೋಟೋ-ಪ್ರಬಂಧದ ಮೂಲಕ, ಇತರರಿಗಿಂತಲೂ ಜನರು ತಮ್ಮ ಸ್ವಂತ ಕಥೆಗಳನ್ನು ಛಾಯಾಚಿತ್ರಗಳ ಮೂಲಕ ಹೇಗೆ ಹೇಳಬಲ್ಲರು ಎಂಬುದನ್ನು ನಾವು ಒತ್ತಿಹೇಳಲು ಬಯಸುತ್ತೇವೆ. ವಿವಿಧ ಮಾಧ್ಯಮಗಳಲ್ಲಿ ವನ್ಯಜೀವಿಗಳ ಅತ್ಯಂತ ಆಕರ್ಷಕ ಚಿತ್ರಗಳ ಸುರಿಮಳೆಯಾಗುತ್ತಿರುತ್ತದೆ, ಆದರೆ ಜಗತ್ತಿನ ಕೆಲವು ಅಪಾಯಕಾರಿ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳೊಂದಿಗೆ ತಮ್ಮ ಜೀವನವನ್ನು ಕಳೆಯುವ ಜನರ ಕಥೆಗಳು ಅದರಲ್ಲಿ ಇವೆಯೇ? ಜನರು ಮತ್ತು ಪ್ರಾಣಿಗಳು ಪರಸ್ಪರ ಕೊಲ್ಲುವ ಭಯದಲ್ಲಿ ಒಟ್ಟಿಗೆ ಜೀವನ ನಡೆಸುವುದು ನಿಜವಾಗಿ ಹೇಗಿರುತ್ತದೆ? ಈ ಕಥೆಗಳನ್ನು ಯಾರು ಹೇಳುತ್ತಾರೆ?
ಇದು ಬಂಡೀಪುರದ ಕತೆಗಳ ಸೃಷ್ಟಿಗೆ ಪ್ರೇರಣೆಯಾಯಿತು. 2015-2016ರ ಇಸವಿಗಳ ಆರು ತಿಂಗಳ ಕಾಲಾವಧಿಯಲ್ಲಿ, ಆರು ವ್ಯಕ್ತಿಗಳು – ರೈತರು, ಕಾರ್ಮಿಕರು, ವನ್ಯಜೀವಿ ತಜ್ಞರು, ಆದಿವಾಸಿಗಳು ಮತ್ತು ಇತರರು – ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿನ ತಮ್ಮ ದೈನಂದಿನ ಜೀವನ ಮತ್ತು ಅನುಭವಗಳನ್ನು ದಾಖಲಿಸಿದರು. ಇದು ಹುಲಿ, ಚಿರತೆ ಮತ್ತು ಆನೆಗಳು ಸೇರಿದಂತೆ ಇತರ ಗಮನಾರ್ಹ ವನ್ಯಜೀವಿಗಳಿಗೆ ಜಾಗತಿಕವಾಗಿ ಅತ್ಯಂತ ಮುಖ್ಯ ಆವಾಸ ಸ್ಥಾನಗಳಲ್ಲಿ ಒಂದಾಗಿದೆ.
ಈ ಚಿತ್ರ-ಪ್ರಬಂಧಗಳ ರಚನೆಯಲ್ಲಿ ಭಾಗವಹಿಸಿದ ಹಲವರು ಈ ಹಿಂದೆ ಎಂದೂ ಕೆಮೆರಾ ಬಳಸಿದವರಲ್ಲ. ಇವರೆಲ್ಲ ಒಂದೆಡೆ ಸೇರಿ ತಮ್ಮ ದೈನಂದಿನ ಬದುಕಿನಲ್ಲಿ ಈ ಪ್ರಾಣಿಗಳ ಪಾತ್ರದ ಕುರಿತು ಚರ್ಚಿಸಿದರು. ಕೆಲಸ, ಆಟ ಮತ್ತು ಅನಿರೀಕ್ಷಿತ ಮುಖಾಮುಖಿಯ ಕುರಿತಾಗಿ ಮಾತನಾಡಿದರು. ಅವರ ಪ್ರಬಂಧಗಳಲ್ಲಿ ದಾಖಲಾಗಿರುವಂತೆ ಬಂಡೀಪುರವು ಹಲವು ಸಾಮಾಜಿಕ ಪದರಗಳನ್ನು ಹೊಂದಿರುವ ಕಾಡು ಪ್ರದೇಶ. ಈ ಜಗತ್ತಿನ ಕುರಿತು ಹೊರಜಗತ್ತಿಗೆ ತಿಳಿಸುವುದು ಈ ಯೋಜನೆಯ ಪ್ರೇರಕ ಶಕ್ತಿ.
ಇಲ್ಲಿ ಕಾಣಿಸಿಕೊಂಡಿರುವ ಕೆಲವು ಛಾಯಾಗ್ರಾಹಕರ ಪ್ರಕಾರ ಬಂಡೀಪುರವೆನ್ನುವುದು ತಮ್ಮಸಮುದಾಯದ ಜನರಿಂದ ಕಾಡುಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ಸರ್ಕಾರ ಕಿತ್ತುಕೊಂಡ ಭೂಮಿಯ ಒಟ್ಟುಮೊತ್ತ. ಇನ್ನೂ ಕೆಲವರ ಪ್ರಕಾರ ಬಂಡೀಪುರದಂತಹ ಸಂರಕ್ಷಿತ ಪ್ರದೇಶಗಳಷ್ಟೇ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸಬಲ್ಲವು. ಇಲ್ಲಿರುವ ಈ ಜನರು ತೆಗೆದಿರುವ ಫೋಟೋಗಳು ವನ್ಯಜೀವಿ ಸಂರಕ್ಷಣೆಯ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಕುರಿತಾಗಿಯು ಚಿಂತಿಸುವಂತೆ ನಮ್ಮನ್ನು ಒತ್ತಾಯಿಸುತ್ತವೆ. ಇದಕ್ಕಿಂತ ಹೆಚ್ಚಾಗಿ, ವನ್ಯಜೀವಿ ಸಂರಕ್ಷಣೆ ಕುರಿತು ಯೋಚಿಸುವಾಗ 'ತಜ್ಞ'ರಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನೂ ಈ ಫೋಟೋಗಳು ನಮಗೆ ತಿಳಿಸುತ್ತವೆ.








