“ಹರ್ಯಾಣ, ಪಂಜಾಬ್ ಹೂಣ್ ಲೇಗೆ ಜೈಸಲ್ಮೇರ್ ತಕ್ ಸಾರೋ ದೇಶ್ ಮ್ಹಾರೋ ಪಗಾ ಹು ನಾಪೇಡೊ ಹೈಂ [ಹರ್ಯಾಣ ಮತ್ತು ಪಂಜಾಬಿನಿಂದ ಜೈಸಲ್ಮೇರ್ ತನಕ ನೀವು ನಮ್ಮ ಹೆಜ್ಜೆ ಗುರುತುಗಳನ್ನು ನೋಡಬಹುದು]” ಎಂದರು ಭಾದರ್ ಭೋಪಾ. 65 ವರ್ಷದ ಇವರು ಉತ್ತರ ರಾಜಸ್ಥಾನದಲ್ಲಿರುವ ತಮ್ಮ ಮನೆಯೆದುರಿನ ಮರದಡಿ ಕುಳಿತು ಮಾತನಾಡುತ್ತಿದ್ದರು. “ನಾವು ನೋಡ್ದೆ ಇರೋ ಜಾಗವೇ ಇಲ್ಲ” ಎಂದು ಅವರು ಮುಂದುವರೆದು ಹೇಳಿದರು.
ಭೋಪಾ ಸಮುದಾಯಕ್ಕೆ ಸೇರಿದವರಾದ ಭಾದರ್ ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ವಾಸವಿರುತ್ತಾರೆ. ಇವರು ತಮ್ಮ ಬದುಕಿನ ಬಹು ಭಾಗವನ್ನು ದೇಶ ಸುತ್ತುವುದರಲ್ಲೇ ಕಳೆದಿದ್ದಾರೆ. ರಾವಣ ಹತ್ತಾ -ಬಿದಿರು ಮತ್ತು ತೆಂಗಿನಚಿಪ್ಪನ್ನು ಬಳಸಿ ತಯಾರಿಸಿದ ವಾದ್ಯ – ನುಡಿಸುವುದು ಇವರ ವೃತ್ತಿ. “ನಾವು ವಾದ್ಯ ನುಡಿಸುತ್ತಾ ಊರಿಂದ ಊರಿಗೆ ಹೋಗುತ್ತಾ, ಅಲ್ಲಲ್ಲಿ ಉಳಿಯುತ್ತಾ ಕಾಲ ಕಳೆಯುತ್ತಿದ್ದೆವು” ಎಂದು ಅವರು ಪಾರಿಗೆ ತಿಳಿಸಿದರು.
ಕೊನೆಗೆ 11 ವರ್ಷಗಳ ಹಿಂದೆ ಭಾದರ್ ಮತ್ತು ಅವರ ಐದು ಗಂಡುಮಕ್ಕಳು ಚುರು ಜಿಲ್ಲೆಯಲ್ಲಿ ನೆಲೆ ನಿಂತರು. “ನಾನು ಅದರಿಂದ [ಅಲೆಮಾರಿ ಜೀವನದಿಂದ] ಬಸವಳಿದು ಹೋಗಿದ್ದೆ. ಹೀಗಾಗಿ ಒಂದೆಡೆ ನೆಲೆಯಾಗಲು ತೀರ್ಮಾನಿಸಿದೆ.” ಎಂದು ಪ್ರಸ್ತುತ ಧೀರ್ವಾಸ್ ಬಾರಾ ಎನ್ನುವ ಊರಿನ ವಾಸಿಯಾಗಿರುವ ಅವರು ಹೇಳಿದರು. ಈ ಊರಿಗೆ ಹಲವು ಸಲ ಬಂದಿರುವ ಮತ್ತು ಇಲ್ಲಿನ ಜನರು ಪರಿಚಿತರೆನ್ನುವ ಕಾರಣಕ್ಕೆ ಅವರು ಈ ಊರನ್ನು ಆಯ್ದುಕೊಂಡರು. ನನ್ನ ಅಜ್ಜ ಸಂಗೀತ ನುಡಿಸುತ್ತಾ ಭೋಪಾ ಜನರು ನಮ್ಮ ಊರನ್ನು ಹಾದುಹೋಗುತ್ತಿದ್ದ ದಿನಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.
ಕುಟುಂಬವು ತನ್ನನ್ನು ನಾಯಕ ಸಮುದಾಯದ ಜೊತೆ ಗುರುತಿಸಿಕೊಳ್ಳುತ್ತದೆ (ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ). ಆದರೆ ರಾಜಸ್ಥಾನದಲ್ಲಿ ಭೋಪಾ ಸಮುದಾಯವನ್ನು ಇತರ ಹಿಂದುಳಿದ ವರ್ಗಗಗಳಡಿ (ಒಬಿಸಿ) ಗುರುತಿಸಲಾಗಿದೆ. ನಾಯಕರು ಸಹ ಇವರನ್ನು ತಮ್ಮ ಸಮುದಾಯದ ಭಾಗವಾಗಿ ಸ್ವೀಕರಿಸಲು ಹಿಂಜರಿಯುತ್ತಾರೆ.
ಆರಂಭದಲ್ಲಿ ಧೀರ್ವಾಸ್ ಬಾರದಲ್ಲಿ ಜಮೀನು ಬಹಳ ದುಬಾರಿಯಿತ್ತು. ಹೀಗಾಗಿ ಈ ಕುಟುಂಬ ಮೊದಲ ಎರಡು ವರ್ಷ ಊರಿನಿಂದ ಸ್ವಲ್ಪ ಹೊರಗೆ ಮನೆ ಮಾಡಿತ್ತು. “ಮುಂದೆ ಊರಿನ ಸರಪಂಚರನ್ನು ಬೇಟಿಯಾದೆವು. ಅವರು ಈ ಜಾಗವನ್ನು ಕೊಟ್ಟರು. ಇದು ಒಟ್ಟು ಸುಮಾರು ಒಂದು ಬಿಘಾ ಮತ್ತು ಮೂರು ಬಿಸ್ವಾ [ಸುಮಾರು 0.75 ಎಕರೆ] ಇದೆ]” ಎಂದರು ಭಾದರ್ ಭೋಪಾ ಅವರ ಮಗ ಭಂವರ್ ಲಾಲ್.
ಧೀರ್ವಾಸ್ ಬಾರಾ ಗ್ರಾಮದ ಮುಖ್ಯ ಬಸ್ ನಿಲ್ದಾಣದಿಂದ ದಕ್ಷಿಣದ ಕಡೆಗೆ ಹೊಲಗಳತ್ತ ಸಾಗುವ ಕಚ್ಚಾ ರಸ್ತೆಯಲ್ಲಿ ಹೆಜ್ಜೆ ಹಾಕಿದರೆ, ನಿಮಗೆ ಎರಡು ಸ್ಮಶಾನ ಭೂಮಿಗಳು ಎದುರಾಗುತ್ತವೆ. ಮೊದಲನೆಯದನ್ನುಸ್ವಾಮಿ ಸಮುದಾಯದವರು (ಇತರ ಹಿಂದುಳಿದ ವರ್ಗ) ಬಳಸಿದರೆ, ಸ್ವಲ್ಪ ದೂರದಲ್ಲಿರುವ ಇನ್ನೊಂದು ಸ್ಮಶಾನವು ಪರಿಶಿಷ್ಟ ಜಾತಿಯ ಜನರಿಗೆ ಮೀಸಲು. ಈ ರಸ್ತೆಯು ಸ್ಮಶಾನಗಳನ್ನುಇನ್ನೊಂದು ಬದಿಯಲ್ಲಿರುವ ದಲಿತ ಮೊಹಲ್ಲಾದಿಂದ (ಬಡಾವಣೆ) ಪ್ರತ್ಯೇಕಿಸುತ್ತದೆ. ಮತ್ತು ಇದರ ಆಚೆಗೆ ಹಡ್ಡವಾರ್ ಇದೆ – ಸತ್ತ ಜಾನುವಾರುಗಳನ್ನುವಿಲೇವಾರಿ ಮಾಡುವ ಸ್ಥಳ.
ಈ ಹಡ್ಡವಾರ್ ಬಳಿಯಲ್ಲೇ ಭಾದರ್ ಭೋಪಾ ಅವರ ವಿಸ್ತೃತ ಕುಟುಂಬಕ್ಕೆ ಸೇರಿದ ಸುಮಾರು 50 ಜನರು ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಾರೆ. ಈಗ ಒಂದೆಡೆ ನೆಲೆಯಾಗಿರುವ ಅವರು ಈ ಹಿಂದೆ ಅಲೆಮಾರಿ ಜೀವನ ನಡೆಸುತ್ತಿದ್ದರು.










