ಅದು ಬೆಳಗಿನ ಜಾವದ ಮೂರು ಗಂಟೆಯ ಸಮಯ. ನಂದಿನಿ ಕಿತ್ತಳೆ ಬಣ್ಣದ ಟೆಂಟಿನ ಹೊರಗೆ ಕುಳಿತು ತನ್ನ ಗೆಳತಿ ಹಿಡಿದಿದ್ದ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮುಖಕ್ಕೆ ಮೇಕಪ್ ಹಚ್ಚಿಕೊಳ್ಳುತ್ತಿದ್ದರು.
ಸರಳವಾದ ಕಾಟನ್ ಸೀರೆ ಉಟ್ಟಿದ್ದ ಈ 18 ವರ್ಷದ ಯುವತಿ ಇನ್ನು ಕೆಲವೇ ಗಂಟೆಗಳಲ್ಲಿ ನಡೆಯಲಿರುವ ತನ್ನ ಮದುವೆಗೆ ಸಿದ್ಧವಾಗುತ್ತಿದ್ದರು.
ಅದರ ಹಿಂದಿನ ದಿನ ಆಕೆ ಮತ್ತು ಆಕೆಯ ಭಾವಿ ಪತಿ ಜಯರಾಮ್ (21) ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಂಗಲಮೇಡು (ಅಧಿಕೃತವಾಗಿ ಚೆರುಕ್ಕನೂರ್ ಇರುಳರ್ ಕಾಲೋನಿ ಎಂದು ಕರೆಯಲಾಗುತ್ತದೆ) ವಿನಿಂದ ಮಾಮಲ್ಲಪುರಕ್ಕೆ ಬಂದಿದ್ದರು. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಈ ಗುಂಪು, ಚೆನ್ನೈನ ದಕ್ಷಿಣದ ಕಡಲತೀರದಲ್ಲಿ ಸಣ್ಣ ಡೇರೆಗಳನ್ನು ಹಾಕಿ ತಂಗಿರುವ ನೂರಾರು ಇರುಳ ಕುಟುಂಬಗಳಲ್ಲಿ ಒಂದು.
ಪ್ರತಿ ವರ್ಷದ ಮಾರ್ಚ್ ತಿಂಗಳಿನಲ್ಲಿ ಕರಾವಳಿ ತಮಿಳುನಾಡಿನ ಸಂಕ್ಷಿಪ್ತ ಚಳಿಗಾಲವು ಬೇಸಿಗೆಗೆ ದಾರಿ ಮಾಡಿಕೊಡುತ್ತಿದ್ದಂತೆ, ಮಾಮಲ್ಲಪುರಂನ (ಹಿಂದೆ ಮಹಾಬಲಿಪುರಂ ಎಂದು ಕರೆಯಲಾಗುತ್ತಿತ್ತು) ಕಡಲ ತೀರದ ಚಿನ್ನದ ಬಣ್ಣದ ಮರಳು ಹಲವು ಬಣ್ಣಗಳೊಂದಿಗೆ ಕಂಗೊಳಿಸತೊಡಗುತ್ತದೆ. ಇಡೀ ಕಡಲತೀರ ತೆಳುವಾದ ಸೀರೆಗಳು ಮತ್ತು ಟಾರ್ಪಾಲಿನ್ ಬಳಸಿ ಮಾಡಿದ ಆವರಣಗಳು ಮತ್ತು ಡೇರೆಗಳ ದೊಡ್ಡ ಜಾಲವಾಗಿ ರೂಪಾಂತರಗೊಳ್ಳುತ್ತದೆ. ಇದಕ್ಕೆ ಹತ್ತಿರದಲ್ಲೇ ಲಭ್ಯವಿರುವ ಮರದ ಕೊಂಬೆಗಳನ್ನು ಕಡಿದು ಬಳಸಿಕೊಳ್ಳಲಾಗುತ್ತದೆ.
ಈ ಪ್ರದೇಶದ ಜನಪ್ರಿಯ ಕಡಲತೀರವಾದ ಇಲ್ಲಿ ವರ್ಷವಿಡೀ ಪ್ರವಾಸಿಗರ ಕಲವರವ ಕೇಳುತ್ತಿರುತ್ತದೆ. ಆದರೆ ಈ ಸಮಯದಲ್ಲಿ ಮಾಸಿ ಮಗಂ ಆಚರಿಸಲು ಬರುವ ಇರುಳಿಗರು ಇಲ್ಲಿನ ಗದ್ದಲಕ್ಕೆ ಬೇರೆಯದೇ ರೂಪವನ್ನು ನೀಡುತ್ತಾರೆ. ಇರುಳರನ್ನು ವಿಶೇಷ ದುರ್ಬಲ ಬುಡಕಟ್ಟು ಗುಂಪು ಎಂದು ಗುರುತಿಸಲಾಗಿದೆ (ಪಿವಿಟಿಜಿ) - ಅಂದಾಜು ಜನಸಂಖ್ಯೆ ಸುಮಾರು 2 ಲಕ್ಷ (ಭಾರತದ ಪರಿಶಿಷ್ಟ ಪಂಗಡಗಳ ಸಂಖ್ಯಾಶಾಸ್ತ್ರೀಯ ವಿವರ, 2013). ಅವರು ತಮಿಳುನಾಡಿನಾದ್ಯಂತ ಚದುರಿದಂತೆ ಸಣ್ಣ ಗುಂಪುಗಳಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.


























