ಶ್ರೀನಾಥ್ ಸಿಂಗ್ ಖರ್ವಾರ್ ಅವರಿಗೆ ಅಧೌರದ ದಟ್ಟ ಕಾಡಿನ ಗಾಢ ಮೌನ ಇಂದಿಗೂ ನೆನಪಿನಲ್ಲಿದೆ. ಅವರು ತಮ್ಮ ಗೆಳೆಯರೊಂದಿಗೆ ತೆಂಡು ಎಲೆಗಳನ್ನು (ಡಿಯೋಸ್ಪಿರಸ್ ಮೆಲನೋಕ್ಸಿಲಾನ್) ಸಂಗ್ರಹಿಸಲು ಕಾಡಿನ ಒಳಗೆ ಹೋಗುತ್ತಿದ್ದರು. ಆ ಅರಣ್ಯ ಮೌನವನ್ನು ಬೇಧಿಸುತ್ತಾ ಅವರ ಜೊತೆಗಿರುವ ಆದಿವಾಸಿಗಳ ಮಾತುಗಳು, ಹಾಡುಗಳು ಕೇಳಿಬರುತ್ತಿದ್ದವು. “ನಾವು ಮನೆಯಿಂದಲೇ ಊಟ, ನೀರು ಎಲ್ಲಾ ತೆಗೆದುಕೊಂಡು ಹೋಗುತ್ತಿದ್ದೆವು. ಮಾತನಾಡುತ್ತಾ, ಹರಟೆ ಹೊಡೆಯುತ್ತಾ ಕೆಲಸ ಮಾಡುವಾಗ ಇಡೀ ಕಾಡಿಗೇ ಜೀವಕಳೆ ಬಂದಂತಾಗುತ್ತಿತ್ತು,” ಎಂದು ಆ ಹಬ್ಬದ ವಾತಾವರವನ್ನು ಶ್ರೀನಾಥ್ ನೆನಪಿಸಿಕೊಂಡರು.
47 ವರ್ಷದ ಶ್ರೀನಾಥ್ ಸುಮಾರು ಎರಡೂವರೆ ದಶಕಗಳ ಹಿಂದಿನ ನೆನಪುಗಳನ್ನು ಮತ್ತೆ ಮೆಲುಕು ಹಾಕುತ್ತಿದ್ದಾರೆ. ನಾವು ಅಧೌರ ಬೆಟ್ಟಗಳ ಕಡೆಗೆ ಸಾಗುತ್ತಿರುವ ಬಸ್ಸಿನಲ್ಲಿ ಅಕ್ಕಪಕ್ಕದಲ್ಲೇ ಕುಳಿತಿದ್ದೇವೆ. ಬಿಹಾರದ ದಕ್ಷಿಣ ಭಾಗದಲ್ಲಿರುವ ಕೈಮೂರ್ ಜಿಲ್ಲೆಯ ಭಭುವಾ ಪೇಟೆಯಿಂದ ಆ ಬಸ್ ಮುಂಜಾನೆ ಹೊರಟಿತ್ತು. ಬಸ್ಸಿನಲ್ಲಿ ನಮ್ಮ ಜೊತೆಗೆ ಇದ್ದವರಲ್ಲಿ ಹೆಚ್ಚಿನವರು ಕೆಲಸಕ್ಕಾಗಿ ವಲಸೆ ಹೋಗಿ ಈಗ ವಾಪಾಸ್ ಊರಿಗೆ ಮರಳುತ್ತಿರುವ ಆದಿವಾಸಿಗಳು.
ಶ್ರೀನಾಥ್ ತಮ್ಮ ಊರು ಚಂಪುರಾಕ್ಕೆ ಹೋಗುತಿದ್ದರು. ಈಗ ಬಿಹಾರದಿಂದ ವಿಭಜನೆಯಾಗಿ ಹೊಸ ರಾಜ್ಯವಾಗಿರುವ ನೆರೆಯ ಜಾರ್ಖಂಡ್ನ ಪತ್ರಾತುವಿನಲ್ಲಿರುವ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಅವರು ದೆಹಲಿ ಮತ್ತು ಮಹಾರಾಷ್ಟ್ರದಂತಹ ದೂರದೂರದ ರಾಜ್ಯಗಳಲ್ಲಿರುವ ಕಾರ್ಖಾನೆಗಳಲ್ಲಿಯೂ ಕೆಲಸ ಮಾಡಿದ್ದರು. ಆದರೆ ಈಗ ಕೆಲಸಕ್ಕಾಗಿ ಅಷ್ಟು ದೂರ ಹೋಗುವುದಿಲ್ಲ. “ದೆಹಲಿ ಅಥವಾ ಮಹಾರಾಷ್ಟ್ರಕ್ಕಿಂತ ಪತ್ರಾತು ಹತ್ತಿರ, ಮನೆಗೆ ಬೇಗ ಬರಬಹುದು,” ಎಂದು ಶ್ರೀನಾಥ್ ಹೇಳುತ್ತಾರೆ.
ಬಸ್ ತಿರುವು-ಮುರುವುಗಳಲ್ಲಿ ಸಂಚರಿಸುತ್ತಾ ಅಧೌರ ಬೆಟ್ಟಗಳ ಕಡೆಗೆ ನಿಧಾನವಾಗಿ ಸಾಗುತ್ತಿತ್ತು. ಸೂರ್ಯ ಆಗಾಗಲೇ ಉದಯಿಸಿದ್ದ. ಉಷ್ಣವಲಯದ ಒಣ ಮಿಶ್ರ ಪರ್ಣಪಾತಿ ಅರಣ್ಯಗಳು ಮತ್ತು ಸಾಲ್ ಕಾಡುಗಳಲ್ಲಿರುವ ದೊಡ್ಡ ದೊಡ್ಡ ಮರಗಳು ತಮ್ಮ ಹಳದಿಯಾದ ಎಲೆಗಳನ್ನು ಉದುರಿಸಿಕೊಂಡು ಅಸ್ಥಿಪಂಜರದಂತಾಗಿದ್ದವು. ಬೆಟ್ಟವನ್ನು ಏರಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಸಂಪರ್ಕ ಕಡಿದುಹೋಯಿತು. ಅಲ್ಲಿ ಭಾರತ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮಾತ್ರ ಕೆಲಸ ಮಾಡುತ್ತದೆ.


















