ಈ ದಂಪತಿಯ ಮೂರನೇ ಮಗ ರಾಜ್ಕುಮಾರ್ ಐದು ಆಡುಗಳನ್ನು ಮೇಯಿಸಲು ಕರೆದುಕೊಂಡು ಹೋಗಿದ್ದ. ಆಗಾಗ ಈ ಆಡುಗಳನ್ನು ನೋಡಿಕೊಳ್ಳುತ್ತಿದ್ದ ಈ 13 ವರ್ಷ ಪ್ರಾಯದ ಬಾಲಕ ಅಂದು ಅವುಗಳನ್ನು ಮೇಯಿಸಲು ಮನೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ವಾಲ್ಮಿಕಿ ಹುಲಿ ಸಂರಕ್ಷಿತ ಅಭಯಾರಣ್ಯಕ್ಕೆ ಕರೆದುಕೊಂಡು ಹೋಗಿದ್ದ.
ಆದರೆ ಮೇ 14, 2022 ರ ಆ ದಿನ, ಆಡುಗಳನ್ನು ಮೇಯಿಸುತ್ತಿದ್ದ ಈ ಹುಡುಗನ ಮೇಲೆ ಹುಲಿಯೊಂದು (ಪಂಥೇರಾ ಟೈಗ್ರಿಸ್) ದಾಳಿ ಮಾಡಿತು. ಇದನ್ನು ನೋಡಿದ ಯಾರೋ ಒಬ್ಬರು ಓಡಿ ಹೋಗಿ ಊರಿನಲ್ಲಿ ವಿಷಯ ತಿಳಿಸಿದರು. ಪ್ರಜ್ಞೆ ಕಳೆದುಕೊಂಡಿದ್ದ ರಾಜ್ಕುಮಾರ್ನ ದೇಹವನ್ನು ಊರಿನಿಂದ 25 ಕಿಲೋಮೀಟರ್ ದೂರದಲ್ಲಿರುವ ಬಗಹಾದ ಉಪ-ವಿಭಾಗೀಯ ಆಸ್ಪತ್ರೆಗೆ ತೆಗೆದುಕೊಂಡು ಹೋದರು, ಆದರೆ ಅಲ್ಲಿಗೆ ತಲುಪುವಾಗ ಅವನ ಜೀವ ಹೋಗಿತ್ತು.
“ಹುಲಿ ಅವನ ಬಲಗೈಯನ್ನೂ, ಬೆನ್ನು ಮತ್ತು ಹೊಟ್ಟೆಯನ್ನು ತಿಂದು ಹಾಕಿತ್ತು” ಎಂದು ಚಂದಾವತಿ ನೆನಪಿಸಿಕೊಂಡರು.
ವಣ್ಯಜೀವಿಗಳಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 10 ಲಕ್ಷ ರುಪಾಯಿಗಳ ಪರಿಹಾರಧನವನ್ನು ನೀಡುತ್ತದೆ. ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಕುಟುಂಬಗಳಲ್ಲಿ ಯಾರದಾದರೂ ಸಾವು ಅಥವಾ ಹಾನಿ ಸಂಭವಿಸಿದರೆ ಮಾತ್ರ ಈ ಪರಿಹಾರಧನ ಸಿಗುತ್ತದೆ. ಮಾನವ ಚಟುವಟಿಕೆಗಳನ್ನು ನೀಷೇಧಿಸಲಾಗಿರುವ ಹುಲಿ ಮತ್ತು ಇತರ ವಣ್ಯಜೀವಿಗಳು ವಾಸಿಸುವ ಮುಖ್ಯ ಅರಣ್ಯ ವಲಯದೊಳಗೆ ಯಾರಾದರೂ ಸಾವನ್ನಪ್ಪಿದರೆ, ಅವರ ಕುಟುಂಬಗಳಿಗೆ ಇದು ಸಿಗುವುದಿಲ್ಲ. ವಾಲ್ಮಿಕಿ ಹುಲಿ ಸಂರಕ್ಷಿತ ಅಭಯಾರಣ್ಯದ (ವಿಟಿಆರ್) ಮುಖ್ಯ ಅರಣ್ಯ ವಲಯ 598.45 ಚದರ ಕಿಲೋಮೀಟರ್ಗಳ ವರೆಗೆ ಹರಡಿಕೊಂಡಿದೆ; 300.93 ಚದರ ಕಿಲೋಮೀಟರ್ ಬಫರ್ ಪ್ರದೇಶವಾಗಿದೆ.
ಈ ಮುಖ್ಯ ಅರಣ್ಯ ವಲಯವನ್ನು ಯಾವುದೇ ಗಡಿರೇಖೆಗಳನ್ನು ಹಾಕಿ ಗುರುತಿಸಲಾಗಿಲ್ಲ. ಹಾಗಾಗಿ, ಈ ವಲಯ ಎಲ್ಲಿಂದ ಆರಂಭವಾಗುತ್ತದೆ ಎಂಬುದೇ ಊರಿನವರಿಗೆ ಗೊತ್ತಿಲ್ಲ. ಅವರು ಇದು ಗೊತ್ತಾಗದೆ ಆ ವಲಯದ ಒಳಗೆ ಹೋಗುತ್ತಾರೆ” ಎಂದು ಮೂವತ್ತು ವರ್ಷಗಳಿಂದ ವಿಟಿಆರ್ನಲ್ಲಿ ಹುಲಿಗಳ ಟ್ರಾಕರ್ ಆಗಿ ಕೆಲಸ ಮಾಡುತ್ತಿರುವ ಜುನೈದ್ ಹೇಳುತ್ತಾರೆ.
ಹದಿಮೂರು ವರ್ಷ ಪ್ರಾಯದ ಆ ಬಾಲಕನ ದೇಹವನ್ನು ಹುಲಿ ಮುಖ್ಯ ಅರಣ್ಯ ವಲಯದ ಒಳಗೆ ಎಳೆದುಕೊಂಡು ಹೋಗಿತ್ತು ಎಂದು ಮನೆಯವರು ಹೇಳುತ್ತಾರೆ. ಹಾಗಾಗಿ, ಇಡೀ ಪ್ರಕರಣವೇ ಬದಲಾಯಿತು. “ಅರಣ್ಯ ಇಲಾಖೆಯವರು ದೇಹವನ್ನು ಮುಖ್ಯ ವಲಯದಿಂದ ತರಲಾಯಿತು ಎಂದು ನಂಗೆ ಹೇಳಿದರು. [ಮುಖ್ಯ ವಲಯದಲ್ಲಿ ಬಿದ್ದಿದ್ದ] ನನ್ನ ಮಗನ ಫೋಟೋ ಮತ್ತು ವಿಡೀಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಪೋಸ್ಟ್ ಮಾಡಿದ್ದರು. ಹಾಗಾಗಿ ನಮಗೆ ಯಾವುದೇ ಪರಿಹಾರ ಸಿಗಲಿಲ್ಲ” ಎಂದು ಲಕ್ಷ್ಮಣ್ ಅವರು ಪರಿಯ ಈ ವರದಿಗಾರರಿಗೆ ಹೇಳಿದರು.