ಪ್ರತಿದಿನ ಬೆಳಗ್ಗೆ ಹೀರಾಲಾಲ್ ರಾಸ್ಪಾ ಲಿಂಡೂರಿನಲ್ಲಿರುವ ತನ್ನ ಹೊಲದತ್ತ ಹೋಗುತ್ತಾರೆ. “ಪ್ರತಿ ದಿನ ಹೊರಡುವಾಗಲೂ ನನ್ನೊಳಗೊಂದು ಆತಂಕ ಮನೆ ಮಾಡಿರುತ್ತದೆ. ಇವತ್ತು ಎಷ್ಟು ಭೂಮಿ ಕುಸಿದಿರಬಹುದು? ನಾಳೆ ಏನು ಉಳಿದಿರಬಹುದು ಎನ್ನುವುದು” ಎಂದು ಅವರು ಹೇಳುತ್ತಾರೆ.
ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಪ್ರದೇಶದ ಲಿಂಡೂರ್ ಗ್ರಾಮದ ರಾಸ್ಪಾ ಹೆಸರಿನ 55 ಈ ವರ್ಷದ ಬುಡಕಟ್ಟು ರೈತ ಏಪ್ರಿಲ್ 2025 ರಲ್ಲಿ ತನ್ನ 2.5 ಬಿಘಾ [ಸುಮಾರು 0.2 ಎಕರೆ] ಭೂಮಿಯಲ್ಲಿ ಆಲೂಗಡ್ಡೆ ಬೆಳೆಯನ್ನು ಬೆಳೆದಿದ್ದರು. ಮೇ 2025ರ ಮಧ್ಯಭಾಗದ ವೇಳೆಗೆ, ಅವರ ಕೃಷಿ ಭೂಮಿಯ ಅರ್ಧದಷ್ಟು ಭಾಗ ವಿಸ್ತಾರಗೊಳ್ಳುತ್ತಿದ್ದ ಕಂದಕದೊಳಗೆ ಕುಸಿದು ಬಿದ್ದಿತ್ತು.
ಇನ್ನರ್ಧ ಬೆಳೆ ಆರೋಗ್ಯಕರ ರೀತಿಯಲ್ಲಿದೆಯಾದರೂ, ಆ ಕುರಿತು ರಾಸ್ಪಾ ಯಾವುದೇ ಆಸೆಯನ್ನು ಇಟ್ಟುಕೊಂಡಿಲ್ಲ.
ಲಾಹೌಲ್ ಮತ್ತು ಸ್ಪಿತಿ ಕಣಿವೆಯ ನಿವಾಸಿಗಳಿಗೆ ಏಪ್ರಿಲ್ ಕೊನೆಯಿಂದ ಅಕ್ಟೋಬರ್ ವರೆಗಿನ ಸಂಕ್ಷಿಪ್ತ ಬೇಸಿಗೆ ಅವಧಿ ಅತ್ಯಂತ ನಿರ್ಣಾಯಕ. ಪ್ರತಿ ವರ್ಷ, ಆರು ತಿಂಗಳ ಕಾಲ ಹಿಮದಿಂದಾಗಿ ಇಲ್ಲಿ ಜೀವನ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಈ ಅವಧಿಯು ನಿವಾಸಿಗಳಿಗೆ ಆಹಾರ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಿಗುವ ಏಕೈಕ ಸಮಯವಾಗಿದೆ. ಈ ಕಿರು ಬೇಸಿಗೆಯಲ್ಲಿ ಕೃಷಿ ಮಾಡಿದರಷ್ಟೇ ವರ್ಷದ ಉಳಿದ ಅವಧಿಗೆ ಬೇಕಾಗುವ ಆಹಾರ ಸಂಗ್ರಹ ಹಾಗೂ ಆರ್ಥಿಕ ಆದಾಯವನ್ನು ಗಳಿಸಲು ಸಾಧ್ಯ.
ಇಲ್ಲಿನ ಜನರ ಪಾಲಿಗೆ ಜೂನ್ ಸಾಮಾನ್ಯವಾಗಿ ಕಠಿಣ ಪರಿಶ್ರಮ ಮತ್ತು ಭರವಸೆಯ ತಿಂಗಳು, ಈ ವರ್ಷ ಇಲ್ಲಿ ಭಯದ ಮೋಡ ಕವಿದಿತ್ತು. ಜನರು ಇನ್ನೂ ಹೊಲಗಳಲ್ಲಿ ದುಡಿಯುತ್ತಿದ್ದರು, ಆದರೆ ಅವರ ಹೃದಯದಲ್ಲಿಆತಂಕ ಮನೆಮಾಡಿತ್ತು.
“ಪ್ರತಿ ದಿನ, ಪ್ರತಿ ವಾರ, ನನ್ನ ಜಮೀನಿನ ಸ್ವಲ್ಪ ಭಾಗ ಕಣ್ಮರೆಯಾಗುತ್ತಿದೆ” ಎನ್ನುತ್ತಾರೆ ರಾಸ್ಪಾ. “ಆಲೂಗಡ್ಡೆ ಕೊಯ್ಲಿಗೆ ಸಿದ್ಧವಾಗುವ ವೇಳೆಗೆ, ಇಡೀ ಜಮೀನು ಇಲ್ಲವಾಗಬಹುದು.”
ಒಂದು ರೀತಿಯ ದಣಿದ ನಂಬಿಕೆಯಿಲ್ಲದ ಸ್ಥಿತಿಯಲ್ಲಿರುವ ಅವರು ಹೀಗೆ ಹೇಳುತ್ತಾರೆ: “ನಮ್ಮ ಮನೆ, ನಮ್ಮ ಜಮೀನು, ಹೊಲ – ಎಲ್ಲವೂ ಜಾರಿ ಹೋಗುತ್ತಿವೆ. ದೇವರು ನಮಗೆ ಯಾಕೆ ಈ ಶಿಕ್ಷೆ ಕೊಡುತ್ತಿದ್ದಾನೆ ಎಂದು ನಮಗೆ ಅರ್ಥವಾಗುತ್ತಿಲ್ಲ. ನಾವು, ಲಿಂಡೂರ್ ಗ್ರಾಮದ ಜನರು, ಒಂದು ರೀತಿಯ ನರಕದಲ್ಲಿ ಬದುಕುತ್ತಿದ್ದೇವೆ.”
ಆ ನರಕವೇ ಭೂಕುಸಿತ. ಇದು ಭೂಮಿಯ ಕೆಳಗಿನ ಮಣ್ಣಿನ ರಚನೆಗಳಲ್ಲಿ ಆಗುವ ಮರುಹೊಂದಾಣಿಕೆಗಳು ಅಥವಾ ಕುಸಿತಗಳಿಂದ ಉಂಟಾಗುವ ಭೂಮಿಯ ಇಳಿಜಾರು ಅಥವಾ ಕುಸಿಯುವಿಕೆ.














