ಮಾಲೋಜಿ ಚವಾಣ್ ಒಮ್ಮೆ ತನ್ನ ದ್ರಾಕ್ಷಿ ತೋಟ ತಲುಪಿದರೆಂದರೆ ಮತ್ತೆ ಅದರೊಳಗೆ ಸುತ್ತಾಡುವುದಕ್ಕೆ ಅವರಿಗೆ ಯಾರ ಸಹಾಯವೂ ಬೇಕಿಲ್ಲ. ಅಲ್ಲಿಗೆ ತಲುಪಿದ ತಕ್ಷಣ ಅವರು ತನ್ನ ಸ್ನೇಹಿತ ಸಂತೋಷ್ ಹಿಂಗ್ಮೆರೆ ಅವರಿಂದ ದೂರ ಸರಿಯುತ್ತಾರೆ. ಅಲ್ಲಿಂದ ಅವರ ಚಲನವಲಗಳನ್ನು ಅವರ ದೃಷ್ಟಿಯ ಬದಲು ಅವರ ಪ್ರವೃತ್ತಿ ನಿರ್ದೇಶಿಸುತ್ತದೆ. 31 ವರ್ಷದ ಈ ಅಂಧ ರೈತನಿಗೆ ತನ್ನ ಭೂಮಿಯ ಇಂಚಿಂಚೂ ಪರಿಚಿತ.
“ನಿಮಗೆ ಈ ಕೊಂಬೆ ಕಾಣಿಸ್ತಿದೆಯಲ್ವ?” ಎಂದು ಅವರು ಕಬ್ಬಿಣದ ಕಂಬದ ಮೇಲೆ ಹೋಗಿದ್ದ ದ್ರಾಕ್ಷಿ ಬಳ್ಳಿಯನ್ನು ತೋರಿಸುತ್ತಾ ಕೇಳಿದರು.
ನಮಗೆ ಸರಿಯಾಗಿ ಗೊತ್ತಾಗದ ಕಾರಣ “ಯಾವುದು?” ಎಂದು ಕೇಳಿದೆವು.
ಈ ವ್ಯಂಗ್ಯವನ್ನು ಕಂಡು ಮುಗುಳ್ನಕ್ಕ ಮಾಲೋಜಿ ಮುಂದಕ್ಕೆ ಬಾಗಿ ಒಂದು ಚಿಗುರು ಬಳ್ಳಿಯನ್ನು ಕೈಗೆತ್ತಿಕೊಂಡರು. ಅದರ ಐದು ಹಸಿರು ಎಲೆಗಳು ಸುರುಳಿಯಾಗಿದ್ದವು. ಅದರ ಮೇಲೆ ಮೃದುವಾಗಿ ಬೆರಳಾಡಿಸುತ್ತಾ, “ಇದು ಸರಿಯಾಗಿ ಬೆಳೆದಿಲ್ಲ, ಇದರಲ್ಲಿ ಮೊಗ್ಗು ಮೂಡುವುದಿಲ್ಲ. ಬೇರುಗಳಿಗೆ ಏಟು ಬಿದ್ದಿದೆ. ಅವಕ್ಕೆ ತಿಂಗಳುಗಟ್ಟಲೆ ಬಿಸಿಲು ಬಿದ್ದಿಲ್ಲ” ಎಂದು ಹೇಳಿದರು.
ಅದೊಂದು ಬಳ್ಳಿ ಅವರ ಪೋಷಕರಾದ ಧನಾಜಿ ಮತ್ತು ಪುಷ್ಪಾಬಾಯಿ ಅವರಿಗೆ ಸೇರಿದ ಐದು ಎಕರೆ ನೀರಾವರಿ ಜಮೀನಿನ ಭಾಗವಾದ, ಒಂದು ಎಕರೆಯ ದ್ರಾಕ್ಷಿ ತೋಟದ ದೊಡ್ಡ ದುರಂತದ ಕಥೆಯನ್ನು ಹೇಳುತ್ತಿದೆ. ಈ ವರ್ಷ ಅವರಿಗೆ ದ್ರಾಕ್ಷಿ ಇಳುವರಿ ಸಿಗುವುದಿಲ್ಲ. ತೋಟದಲ್ಲಿರುವ ಕಬ್ಬಿನ ಮೊಳಕೆಗಳು ಮತ್ತು ಇತರ ಹಣ್ಣಿನ ಮರಗಳು ಕೂಡ ಒಣಗಿ ನಶಿಸುತ್ತಿವೆ. ಈ ಕುಟುಂಬವು ಅಂದಾಜು ಒಟ್ಟು 10 ಲಕ್ಷ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ. ಈ ಆರ್ಥಿಕ ಹೊಡೆತವು ಅವರನ್ನು ಕನಿಷ್ಠ ಒಂದು ದಶಕದಷ್ಟು ಹಿಂದಕ್ಕೆ ತಳ್ಳಲಿದೆ.
ಈ ಹಾನಿಗೆ ಕಾರಣ 2025ರ ಮುಂಗಾರು ಹಂಗಾಮಿನಲ್ಲಿ ಸುರಿದ ವಿಪರೀತ ಮಳೆ. ಅಂದು ಮಳೆ ಎಡೆಬಿಡದೆ ಸುರಿಯುತ್ತಿತ್ತು. ಜಮ್ಗಾಂವ್ ಮಾತ್ರವಲ್ಲದೆ, ಇಡೀ ಸೋಲಾಪುರ ಜಿಲ್ಲೆ ಹಾಗೂ ಮರಾಠವಾಡದ ನೆರೆಯ ಬೀಡ್ ಮತ್ತು ಧಾರಾಶಿವ್ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿಯಿತ್ತು. 2025ರ ನವೆಂಬರ್ ಆರಂಭದ ವೇಳೆಗೆ, ಸೋಯಾಬೀನ್ ಹೊಲಗಳು ಮತ್ತು ದ್ರಾಕ್ಷಿ ತೋಟಗಳು ಸಂಪೂರ್ಣವಾಗಿ ನಾಶವಾಗಿದ್ದವು. ಸಾಮಾನ್ಯವಾಗಿ ವರ್ಷದ ಬಹುಪಾಲು ಸಮಯ ಒಣಗಿರುವ ಈ ಬರಪೀಡಿತ ಪ್ರದೇಶದ ಹಳ್ಳ-ಕೊಳ್ಳಗಳು ಅಂದು ಉಕ್ಕಿ ಹರಿಯುತ್ತಿದ್ದವು.
2025ರ ಮೇ ಮಧ್ಯಭಾಗದಿಂದ ಅಕ್ಟೋಬರ್ ಅಂತ್ಯದವರೆಗೆ, ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠವಾಡ ಭಾಗಗಳು ಸುದೀರ್ಘವಾದ ಮತ್ತು ಎಡೆಬಿಡದ ಮಳೆಯನ್ನು ಕಂಡವು. ಸೆಪ್ಟೆಂಬರ್ 19 ಮತ್ತು 25ರ ನಡುವೆ ಪರಿಸ್ಥಿತಿ ನಾಟಕೀಯವಾಗಿ ಹದಗೆಟ್ಟಿತು; ಸರಣಿ ಮೇಘಸ್ಫೋಟಗಳು ಮತ್ತು ಆಕಸ್ಮಿಕ ಪ್ರವಾಹಗಳು ಕೈಗೆ ಬಂದಿದ್ದ ಬೆಳೆ, ಹಣ್ಣಿನ ತೋಟಗಳು, ಮಣ್ಣಿನ ಫಲವತ್ತತೆ, ಜಾನುವಾರುಗಳು ಮತ್ತು ಕೆಲವು ಸಂದರ್ಭಗಳಲ್ಲಿ ಮನುಷ್ಯರ ಜೀವವನ್ನೇ ಬಲಿಪಡೆದವು. ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ, ಇಡೀ ಸೋಲಾಪುರ ಜಿಲ್ಲೆಯಾದ್ಯಂತ 47,000 ಹೆಕ್ಟೇರ್ ಅಳತೆಗೂ ಅಧಿಕ ಪ್ರದೇಶದಲ್ಲಿನ ಬೆಳೆಗಳು ಸರಿಪಡಿಸಲಾಗದಷ್ಟು ನಾಶವಾಗಿವೆ.













