ತನ್ನ ಮೊಬೈಲ್ ರಿಂಗಣಿಸುತ್ತಿದ್ದ ಹಾಗೆ 20 ವರ್ಷ ಕಿರೀಟ್ ಚುರುಕಾಗಿ ಡೈರಿ ತೆರೆದು, ಪೆನ್ ಹಿಡಿದು, ಹೆಡ್ಫೋನ್ ಧರಿಸಿ ಡೆಸ್ಕ್ಟಾಪ್ ಮುಂದೆ ಕುಳಿತರು.
ಕರೆ ಸ್ವೀಕರಿಸಿದ ಅವರು “ನಮಸ್ಕಾರ, ಶಿವಾರ್ ಹೆಲ್ಪ್ಲೈನ್” ಶಾಂತ ಮತ್ತು ದೃಢ ದನಿಯಲ್ಲಿ ಹೇಳಿದರು.
ಫೋನಿನ ಇನ್ನೊಂದು ಬದಿಯಲ್ಲಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹಳ್ಳಿಯೊಂದರ, ಮಧ್ಯ ವಯಸ್ಕ ರೈತ ಮಹಿಳೆ ಪಾರ್ವತಿ ಮಾತನಾಡುತ್ತಿದ್ದರು.
ಕಿರೀಟ್ ಮರಾಠಿಯಲ್ಲಿ “ನಿಮಗೆ ನಾನು ಹೇಗೆ ಸಹಾಯ ಮಾಡಲಿ?” ಎಂದು ಕೇಳಿದರು. ಪುಣೆಯಲ್ಲಿ ಮೂರನೇ ವರ್ಷದ ಬಿಎ ಮನಃಶಾಸ್ತ್ರದ ವಿದ್ಯಾರ್ಥಿಯಾಗಿರುವ ಅವರು, ಮೂಲತಃ ಪರ್ಭಾನಿ ಬಳಿಯ ಹಳ್ಳಿಯವರು.
ಪಾರ್ವತಿ ಮಾತನಾಡಲು ಹಿಂಜರಿಯುತ್ತಿದ್ದರು, ಅವರ ದನಿ ನಡುಗುತ್ತಿತ್ತು.
ಕೊನೆಗೆ ಹೇಗೋ ಸುಧಾರಿಸಿಕೊಂಡು, “ಮಳೆ ನಮ್ಮ ಬೆಳೆಯನ್ನು ಪೂರ್ತಿಯಾಗಿ ನಾಶ ಮಾಡಿತು” ಎಂದರು.
“ಸೋಯಾಬೀನ್, ತೊಗರಿ… ಮೇಕೆಗಳೂ ಸತ್ತವು. ಸಾಲ ಹಾಗೆ ಉಳಿದಿದೆ. ಕುಟುಂಬದ ನಿರಂತರ ಶ್ರಮ – ಕೃಷಿ, ಜಾನುವಾರು, ಹಂಗಾಮಿ ದುಡಿಮೆ – ಪೂರ್ತಿಯಾಗಿ ನೀರು ಪಾಲಾಗಿದೆ. ಸಾಲ ಬೆಟ್ಟದಂತೆ ಉಳಿದಿದೆ, ಭರವಸೆ ಪೂರ್ತಿಯಾಗಿ ಮುಳುಗಿ ಹೋಗಿದೆ. ಪಾರ್ವತಿ ಕಿರೀಟ್ ಬಳಿ ಮುಂದಿನ ರಬಿ ಹಂಗಾಮಿಗೆ ಬಿತ್ತನೆ ಮಾಡಲು ಕಡಲೆ ಬೀಜ ಸಿಗಬಹುದೇ ಎಂದು ಕೇಳುತ್ತಿದ್ದರು.
“ಬೀಜ ಸಿಕ್ಕರೆ, ಕನಿಷ್ಠ ಈ ಬೇಸಗೆಯಲ್ಲಿಯಾದರೂ ಒಂದಷ್ಟು ಕಾಳು ನೋಡಬಹುದು“ ಎನ್ನುತ್ತಾ ಅವರು ನಿಟ್ಟುಸಿರು ಬಿಟ್ಟರು.

























