ಮದುವೆಯಾದ ನಂತರ ʼರೀನಾ ಪರ್ತೇತಿʼಯವರು ಲೋನಾದೇಯಿ ಗ್ರಾಮದಲ್ಲಿರುವ ತಮ್ಮ ಅತ್ತೆ-ಮಾವನ ಮನೆಗೆ ಮೊದಲ ಬಾರಿಗೆ ಕಾಲಿಟ್ಟಾಗ ಅವರಿಗೆ ಆಶ್ಚರ್ಯವಾಗಿತ್ತು.
"ಅಲ್ಲಿನ ಕುಟುಂಬದ ಚಿಕ್ಕ ಮಕ್ಕಳು ಕೂಡ ನನ್ನ ಮಾತೃಭಾಷೆಯಲ್ಲಿ [ಗೊಂಡಿ] ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ ರೀನಾ. ಆದರೆ "ನನ್ನ ಗ್ರಾಮ[ಮೋಯಾ] ದಲ್ಲಿ ಯಾರೂ ಗೊಂಡಿ ಭಾಷೆಯನ್ನು ಮಾತನಾಡುತ್ತಿರಲಿಲ್ಲ” ಆದ್ದರಿಂದ ಇಲ್ಲಿ ತನ್ನದೇ ಗೊಂಡ ಸಮುದಾಯದ ಭಾಷೆಯನ್ನು ಅರ್ಥಮಾಡಿಕೊಳ್ಳಲು 34 ವರ್ಷದ ಆದಿವಾಸಿ ರೈತ ಮಹಿಳೆಯಾದ ರೀನಾ ಕಷ್ಟಪಡುತ್ತಿದ್ದರು.
ಲೋನಾದೇಯಿ ಗ್ರಾಮದ ಶೇಕಡಾ 80ಷ್ಟು ಜನರು ಗೊಂಡ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. 'ಗೊಂಡ ಸಮುದಾಯಕ್ಕೆ ಸೇರದ ಜನರು ಕೂಡ ಈ ಭಾಷೆಯನ್ನು ಮಾತನಾಡಬಲ್ಲಷ್ಟು ಪರಿಣಿತರಾಗಿರುತ್ತಾರೆ' ಎಂಬುದನ್ನು ಆಕೆ ಒತ್ತಿ ಹೇಳುತ್ತಾರೆ.
ರೀನಾರ ಪತಿಯ ಸೋದರ ಸಂಬಂಧಿ ಮಕ್ಕಳು ಅವರನ್ನು ತಮಾಷೆ ಮಾಡುತ್ತಾ, “ಮಾಮಿಕೋ ಗೊಂಡಿ ಬೋಲ್ತೇ ನಹೀ ಆತೀ, ಚಾಚಿಕೋ ಗೊಂಡಿ ಬೋಲ್ತೇ ನಹೀ ಆತೀ” [ನಮ್ಮ ಅತ್ತೆಗೆ ಗೊಂಡಿ ಮಾತನಾಡಲು ಬರುವುದಿಲ್ಲ]! ಎಂದು ರೇಗಿಸುತ್ತಿದ್ದರು. ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾ ನಗುವ ರೀನಾ, “ಆರಂಭದಲ್ಲಿ ನಾನು ತುಂಬಾ ತಡವರಿಸುತ್ತಿದ್ದರೂ, ಕೊನೆಗೆ ಅವರೊಂದಿಗೆ ನನ್ನ ಮಾತೃಭಾಷೆಯಲ್ಲೇ ಮಾತನಾಡಲು ಪ್ರಾರಂಭಿಸಿದೆ” ಎನ್ನುತ್ತಾರೆ
ಗೊಂಡಿ ಒಂದು ದ್ರಾವಿಡ ಭಾಷೆಯಾಗಿದ್ದು. ಒಂದು ಕಾಲದಲ್ಲಿ ಇದು ಕೇವಲ ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ ಮಧ್ಯ ಭಾರತದ ಇತರ ಭಾಗಗಳಲ್ಲೂ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿತ್ತು. ಇಂದು, ಯುನೆಸ್ಕೋ (UNESCO) ಇದನ್ನು ಅಳಿವಿನ ಅಂಚಿಗೆ ಸರಿಯಬಹುದಾದ ಭಾಷೆಗಳ ಪಟ್ಟಿಗೆ ಸೇರಿಸಿದೆ. ಗೊಂಡ ಸಮುದಾಯವು ರಾಜ್ಯದ ಅತಿದೊಡ್ಡಆದಿವಾಸಿ ಸಮುದಾಯಗಳಲ್ಲಿ ಒಂದಾಗಿದ್ದರೂ, ಅವರ ಭಾಷೆಯು ಇಂದು ಅಳಿವಿನ ಭೀತಿಯನ್ನು ಎದುರಿಸುತ್ತಿದೆ.
















