ಗೊಂಡಿ ಭಾಷೆಗೆ ಒಂದು ಸುವರ್ಣ ಕಾಲವಿತ್ತು.
“ಗೊಂಡಿ ಗೊಂಡ್ವಾನ ಎಂಬ ಪುರಾತನ ಸಾಮ್ರಾಜ್ಯದ ರಾಜಭಾಷೆಯಾಗಿತ್ತು. ಇದಕ್ಕೆ ಸ್ವಂತ ಲಿಪಿ, ವ್ಯಾಕರಣ, ಭಾಷಾಲಂಕಾರ, ವ್ಯುತ್ಪತ್ತಿ ಮತ್ತು ಸಾಹಿತ್ಯ ಇತ್ತು, ಈಗಲೂ ಇದೆ” ಎಂಬ ಗೊಂಡಿ ಸಾಹಿತ್ಯದ ವಿದ್ವಾಂಸರಾದ ಮೋತಿಲಾಲ್ ಕಂಗಾಲಿಯವರ ಅಭಿಪ್ರಾಯವನ್ನು ಭಾಷಾ ರಿಸರ್ಚ್ ಆಂಡ್ ಪಬ್ಲಿಕೇಷನ್ ಸೆಂಟರ್ನ ವೆಬ್ಸೈಟ್ನಲ್ಲಿ ದಾಖಲಿಸಲಾಗಿದೆ.
ಒಂದು ಕಾಲದಲ್ಲಿ ಗೊಂಡರು ಇಂದಿನ ಮಧ್ಯಪ್ರದೇಶದ ಬಹುತೇಕ ಪ್ರದೇಶಗಳನ್ನು ಆಳುತ್ತಿದ್ದರು. “ನಾವು ಗೌರ ದೇವಿಯ [ಹಿಂದೂ ಪುರಾಣಗಳ ಪ್ರಕಾರ ಇವಳು ಪಾರ್ವತಿ ಮತ್ತು ದುರ್ಗೆ] ಮಕ್ಕಳು. ಹಾಗಾಗಿ ನಮ್ಮನ್ನು ಗೊಂಡರು ಎಂದು ಕರೆಯುತ್ತಾರೆ” ಎಂದು ಛಿಂದ್ವಾರದ ಗೊಂಡ ಸಾಮಾಜಿಕ ಕಾರ್ಯಕರ್ತ ರಾಮನಾಥ್ ಪಾರ್ಟೆತಿ ಹೇಳುತ್ತಾರೆ. ಆದರೆ ಪ್ರಸ್ತುತ ಕಾಲದಲ್ಲಿ ಈ ಸಿರಿವಂತ ಪರಂಪರೆಗೆ ಮತ್ತು ಸಮುದಾಯದ ಇತಿಹಾಸಕ್ಕೆ ರೈಲ್ವೇ ಸ್ಟೇಷನ್ಗೆ ಗೊಂಡರ ರಾಣಿ ಕಮ್ಲಾಪತಿಯ ಹೆಸರನ್ನು ಇಡುವಂತಹ ಸಾಂಕೇತಿಕ ಗೌರವವನ್ನು ಮಾತ್ರ ಕೊಡಲಾಗುತ್ತಿದೆ ಎಂದು ಅವರು ಹೇಳುತ್ತಾರೆ.
ಅವರ ಭಾಷೆ ಕೊನೆಯುಸಿರು ಎಳೆಯುತ್ತಿದೆ, ಮನೆಗಳಲ್ಲಿ ಮಾತನಾಡಲು ಮಾತ್ರ ಸೀಮಿತವಾಗಿದೆ. ಹೊರಗೆ, ಸಾರ್ವಜನಿಕ ಸ್ಥಳಗಳಲ್ಲಿ ಈ ಸಮುದಾಯದ ಜನರು ಹಿಂದಿಯಲ್ಲಿ ಮಾತನಾಡಲು ಬಯಸುತ್ತಿದ್ದಾರೆ. ಹಿರಿಯ ತಲೆಮಾರಿನವರು ಇಂದಿಗೂ ಗೊಂಡಿ ಮಾತನಾಡುತ್ತಿದ್ದರೆ, ಹೊಸ ಪೀಳಿಗೆಯವರು ಮಾತ್ರ ಈ ಭಾಷೆಯನ್ನು ಕಲಿಯಲು ಅಥವಾ ಮಾತನಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಮಾತನಾಡುವಾಗ ಯಾರಾದರೂ ತಪ್ಪಾಗಿ ಅರ್ಥ ಮಾಡಿಕೊಂಡರೆ, ಇತರ ಭಾಷೆ ಮಾತನಾಡುವವರು ತಮಾಷೆ ಮಾಡಿದರೆ ಎಂಬ ಭಯದಿಂದಾಗಿ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ಮುಂದೆ ಬರುತ್ತಿಲ್ಲ.
ಪ್ರಾರ್ಥನಾಳ ತಂದೆ ಮಂತ್ರಮ್ ಪಾರ್ಟೆತಿಯವರು ಲೋನಡೆಯ ಓರ್ವ ರೈತ. ಇವರು ತಮ್ಮ ಮಕ್ಕಳೊಂದಿಗೆ ಮನೆಯಲ್ಲಿ ಮಾತ್ರ ಗೊಂಡಿಯಲ್ಲಿ ಮಾತನಾಡುತ್ತಾರೆ; ಮನೆಯಿಂದ ಹೊರಗೆ ಇವರ ಕುಟುಂಬ ಪರಸ್ಪರ ಮಾತನಾಡುವಾಗಲೂ ಹಿಂದಿಯಲ್ಲಿಯೇ ಮಾತನಾಡುತ್ತಾರೆ. “ಅವರು [ಅನ್ಯ ಭಾಷಿಕರು] ನಮ್ಮನ್ನು ತಮಾಷೆ ಮಾಡುತ್ತಾರೆ, ನಮ್ಮ ಮಾತುಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಈಗಲೂ [ನಾವು ಗೊಂಡಿಯಲ್ಲಿ ಮಾತನಾಡುವಾಗ] ಜನ ನಮ್ಮನ್ನು ಆಡಿಕೊಂಡು ನಗುತ್ತಾರೆ” ಎಂದು ಅವರು ಹೇಳುತ್ತಾರೆ.
ಮಂತ್ರಮ್ ಅವರು ವಸತಿ ಶಾಲೆಯಲ್ಲಿರುವ ತಮ್ಮ ಮಗ ಪೃಥ್ವಿರಾಜ್ನನ್ನು ಬೇಟಿ ಮಾಡಲು ಹೋದಾಗ ನಡೆದ ಸಂಭವವನ್ನು ವಿವರಿಸಿದರು. “ನಾನು ಅವನೊಂದಿಗೆ ಗೊಂಡಿಯಲ್ಲಿ ಮಾತನಾಡಲು ಶುರುಮಾಡಿದೆ. ಆಗ ನಮ್ಮ ಭಾಷೆ ತಿಳಿಯದ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ನಗಲಾರಂಭಿಸಿದರು. ನಂಗೆ ನಾಚಿಕೆಯಾಯ್ತು” ಎಂದು ಅವರು ಹೇಳಿದರು. ಈ ಘಟನೆಯಾದ ನಂತರ ಶಾಲೆಗೆ ಬೇಟಿ ಕೊಡುವಾಗೆಲ್ಲಾ ಗೊಂಡಿಯಲ್ಲಿ ಮಾತನಾಡದಂತೆ ಪೃಥ್ವಿರಾಜ್ ತನ್ನ ತಂದೆಗೆ ಹೇಳಿದ. “ನಾನು ಮನೆಯಲ್ಲಿ ಇದ್ದಾಗ ಎಷ್ಟು ಬೇಕಾದರೂ ಗೊಂಡಿಯಲ್ಲಿ ಮಾತಾಡು ಎಂದು ಅವನು ನಂಗೆ ಹೇಳಿದ” ಎಂದು ಮಂತ್ರಮ್ ಹೇಳುತ್ತಾರೆ.
ಲೋನಡೆ ಗೊಂಡಿ ಸಮುದಾಯದವರೇ ಹೆಚ್ಚಿಗೆ ಇರುವ ಗ್ರಾಮವಾದರೂ, ಇಲ್ಲಿನ ಯುವ ಪೀಳಿಗೆ ತಾಯ್ನುಡಿಯನ್ನು ಮಾತನಾಡಲು ಮತ್ತು ಅದರ ಬಗ್ಗೆ ಹೆಮ್ಮೆ ಪಡಲು ಹಿಂಜರಿಯುತ್ತಿದೆ. ಲೋನಡೆಯಲ್ಲಿ ಏನಾಗುತ್ತಿದೆಯೋ, ಅದೇ ಪರಿಸ್ಥಿತಿ ಇಡೀ ಜಿಲ್ಲೆಯಲ್ಲಿದೆ ಎಂದು ರಾಮನಾಥ್ ಅವರು ಹೇಳುತ್ತಾರೆ. “ಇಲ್ಲಿ, ಈ ಛಿಂದ್ವಾರದಲ್ಲಿ, ಗೊಂಡರನ್ನು ಕೆಳಜಾತಿಗಳೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ತಮ್ಮ ಭಾಷೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡಿದರೆ ಜನರು ತಮ್ಮನ್ನು ಕೀಳಾಗಿ ನೋಡಬಹುದು ಎಂಬ ಭಯ ಅವರಲ್ಲಿದೆ. ಹಾಗಾಗಿ ಅವರು ತಮ್ಮ ತಮ್ಮಲ್ಲಿ ಮಾತನಾಡುವಾಗ ಮಾತ್ರ ಗೊಂಡಿಯನ್ನು ಬಳಸುತ್ತಾರೆ” ಎಂದು ಅವರು ಹೇಳುತ್ತಾರೆ.
ಶಾಲೆಗಳಲ್ಲೂ ಗೊಂಡಿ ಭಾಷೆಯಿಂದ ಅದರ ಭಾಷಿಕರನ್ನು ದೂರ ಮಾಡುವ ಮೂಲಕ ಗೊಂಡರ ಮೇಲೆ ತಾರತಮ್ಯ ಎಸಗಲಾಗುತ್ತಿದೆ ಎಂದು ರಾಮನಾಥ್ ನಂಬಿದ್ದಾರೆ. ಅಟರ್ವಡ ಬ್ಲಾಕ್ನಲ್ಲಿ ಇರುವ ಸರ್ಕಾರಿ ಶಾಲೆಗೆ ತಾವು ಹೋಗುತ್ತಿದ್ದಾಗ ಅಲ್ಲಿ ತಮ್ಮ ಸಮುದಾಯದ ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಇವರು ಈಗಲೂ ನೆನಪಿಸಿಕೊಳ್ಳುತ್ತಾರೆ.
ಅಲ್ಲಿನ ಮೇಲ್ಜಾತಿಯ ಶಿಕ್ಷಕನೊಬ್ಬ ಗೊಂಡರ ಮಕ್ಕಳನ್ನು ಇತರ ಜಾತಿಗಳ ಮತ್ತು ಆದಿವಾಸಿ ಮಕ್ಕಳಿಂದ ಪ್ರತ್ಯೇಕವಾಗಿ ಕೂರಿಸುತ್ತಿದ್ದನು. ಆತ ಅಲ್ಲಿಗೇ ನಿಲ್ಲಿಸುತ್ತಿರಲಿಲ್ಲ. “ನಾನಾಗ ಹತ್ತನೇ ತರಗತಿ ಇರಬೇಕು, ಶರ್ಮಾ ಮೇಷ್ಟ್ರು ನನ್ನ ಊರಿನ ಇಬ್ಬರು ಗೊಂಡರ ಹುಡುಗರನ್ನು ಬಡಿಯುತ್ತಾ ಶಾಪ ಹಾಕುತ್ತಿದ್ದರು. ‘ಗೊಂಡರಿಗೆ ಹುಟ್ಟಿದವರು ನೀವು. ನಿಮ್ಮ ತಲೆ ಒಳಗೆ ಏನೂ ಹೋಗೊಲ್ಲ; ಆದರೂ ಕಷ್ಟಪಟ್ಟು ನಿಮಗೆ ಕಲಿಸುತ್ತಿದ್ದೇನೆ,ʼ ಎಂದು ಬೈಯುತ್ತಾ ಬಾರಿಸುತ್ತಿದ್ದರು. ಮಾರನೇ ದಿನದಿಂದ ಆ ಹುಡುಗರು ಶಾಲೆಗೇ ಬರಲಿಲ್ಲ” ಎಂದು ತಮ್ಮ ಬಾಲ್ಯದ ಘಟನೆಯನ್ನು ರಾಮನಾಥ್ ನೆನಪಿಸಿಕೊಳ್ಳುತ್ತಾರೆ.