ಸಾತ್ಜಲಿಯಾದಲ್ಲಿರುವ ಈ ಏಕೈಕ ಅಂಚೆ ಕಛೇರಿ ನಿಮ್ಮ ಕಣ್ಣಿಗೆ ಬೀಳದೆ ಇರಬಹುದು. ಆದರೆ ಈ ಮಣ್ಣಿನ ಗುಡಿಸಲಿನ ಹೊರಗೆ ನೇತಾಡುತ್ತಿರುವ ಕೆಂಪು ಬಣ್ಣ ಬಳಿದಿರುವ ಲೋಹದ ಟಪಾಲು ಪೆಟ್ಟಿಗೆ ಮಾತ್ರ ನಿಮ್ಮ ಗಮನವನ್ನು ಸೆಳೆಯುತ್ತದೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ಈ 80 ವರ್ಷ ಹಳೆಯ ಉಪ ಅಂಚೆ ಕಚೇರಿಯು ಏಳು ಗ್ರಾಮ ಪಂಚಾಯತ್‌ಗಳಿಗೆ ಕೆಲಸ ಮಾಡುತ್ತದೆ. ಈ ಮಣ್ಣಿನ ಗುಡಿಸಲು ಸುಂದರ್‌ಬನ್ಸ್‌ನಲ್ಲಿ ವಿನಾಶವನ್ನೇ ಸೃಷ್ಟಿಸಿದ ಐಲಾ ಮತ್ತು ಅಂಫಾನ್‌ನಂತಹ ಸೂಪರ್ ಸೈಕ್ಲೋನ್‌ಗಳನ್ನೂ ತಡೆದುಕೊಂಡಿದೆ. ಈ ಅಂಚೆ ಕಛೇರಿಯು ಇಲ್ಲಿ ಉಳಿತಾಯ ಖಾತೆಗಳನ್ನುಇಟ್ಟುಕೊಂಡಿರುವ ಊರಿನ ಅನೇಕರ ಜೀವನಾಡಿ. ಗುರುತಿನ ಚೀಟಿಗಳಂತಹ ಅವರ ಬೇರೆ ಬೇರೆ ಸರ್ಕಾರಿ ದಾಖಲೆಗಳು ಅಂಚೆಯ ಮೂಲಕ ಇಲ್ಲಿಗೆ ಬರುತ್ತವೆ.
ಗೋಸಬಾ ಬ್ಲಾಕ್ ಮೂರು ನದಿಗಳಿಂದ ಆವೃತವಾಗಿದೆ. ವಾಯುವ್ಯದಲ್ಲಿ ಗೋಮತಿ, ದಕ್ಷಿಣದಲ್ಲಿ ದತ್ತ ಮತ್ತು ಪೂರ್ವದಲ್ಲಿ ಗಂದಾಲ್ ನದಿಗಳು ಹರಿಯುತ್ತವೆ. ಲಕ್ಸ್ಬಗಾನ್ ಗ್ರಾಮದ ನಿವಾಸಿ ಜಯಂತ್ ಮಂಡಲ್, "ಈ ಪೋಸ್ಟ್ ಆಫೀಸ್ ಈ ದ್ವೀಪ ಪ್ರದೇಶದಲ್ಲಿರುವ ನಮ್ಮಂತವರ ಏಕೈಕ ಭರವಸೆ [ಸರ್ಕಾರಿ ದಾಖಲೆಗಳನ್ನು ಪಡೆಯಲು]," ಎಂದು ಹೇಳುತ್ತಾರೆ.
ಸದ್ಯ ಪೋಸ್ಟ್‌ಮಾಸ್ಟರ್ ಆಗಿರುವ ನಿರಂಜನ ಮಂಡಲ್ 40 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗಿಂತ ಮೊದಲು ಅವರ ತಂದೆ ಪೋಸ್ಟ್‌ಮಾಸ್ಟರ್ ಆಗಿದ್ದರು. ಪ್ರತಿದಿನ ಬೆಳಿಗ್ಗೆ ಅವರು ತನ್ನ ಮನೆಯಿಂದ ಕೆಲ ನಿಮಿಷಗಳ ಕಾಲ ನಡೆದು ತಾವು ಕೆಲಸ ಮಾಡುವ ಈ ಅಂಚೆ ಕಛೇರಿಗೆ ಬರುತ್ತಾರೆ. ಅಂಚೆ ಕಚೇರಿಯ ಸಮೀಪವೇ ಇರುವ ಚಹಾದ ಅಂಗಡಿಗೆ ದಿನವಿಡೀ ಜನರು ಬಂದು ಹೋಗುತ್ತಿರುತ್ತಾರೆ, ಹಾಗಾಗಿ ಅಂಚೆ ಕಚೇರಿಗೆ ಯಾರಾದರೊಬ್ಬರು ಬಂದೇ ಬರುತ್ತಾರೆ.
59 ವರ್ಷ ವಯಸ್ಸಿನ ಪೋಸ್ಟ್‌ಮಾಸ್ಟರ್‌ನ ಕೆಲಸವು ಬೆಳಗ್ಗೆ ಸುಮಾರು 10 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಗೆ ಮುಗಿಯುತ್ತದೆ. ಅಂಚೆ ಕಛೇರಿಗೆ ಸೋಲಾರ್ ದೀಪದ ಬೆಳಕಿದ್ದು, ಮಳೆಗಾಲದಲ್ಲಿ ಅದು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಸೌರ ವಿದ್ಯುತ್ ಫಲಕಗಳನ್ನು ಚಾರ್ಜ್ ಮಾಡದಿದ್ದಾಗ, ಇವರು ಸೀಮೆಎಣ್ಣೆ ದೀಪವನ್ನು ಬಳಸುತ್ತಾರೆ. ಕಛೇರಿ ನಿರ್ವಹಣೆಯ ಖರ್ಚಿಗೆ ತಿಂಗಳಿಗೆ ಅವರಿಗೆ ನೂರು ರುಪಾಯಿ ಸಿಗುತ್ತದೆ. ಅದರಲ್ಲಿ 50 ರುಪಾಯಿ ಬಾಡಿಗೆಗೆ, ಉಳಿದ 50 ರುಪಾಯಿ ಉಳಿದ ಅವಶ್ಯಕತೆಗಳಿಗೆ ಖರ್ಚಾಗುತ್ತದೆ ಎಂದು ನಿರಂಜನ್ ಅವರು ಹೇಳುತ್ತಾರೆ.
ನಿರಂಜನ್ ಅವರೊಂದಿಗೆ ಕೆಲಸ ಮಾಡುವ ಪೋಸ್ಟ್‌ಮ್ಯಾನ್ ಬಾಬು ಅವರು ತಮ್ಮ ಸೈಕಲ್ ಬಳಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಬಂದಿರುವ ಪತ್ರಗಳನ್ನು ಹಂಚುತ್ತಾರೆ.
ಸುಮಾರು ಅರ್ಧ ಶತಮಾನದ ಕಾಲ ಅಂಚೆ ಕಚೇರಿಯಲ್ಲಿಯ ಕೆಲಸದಲ್ಲೇ ಕಳೆದಿರುವ ನಿರಂಜನ್ ಅವರು ಕೆಲವೇ ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಅದಕ್ಕೂ ಮೊದಲು, “ನಂಗೆ ಇರುವ ಏಕೈಕ ಕನಸು ಎಂದರೆ ಒಂದು ಒಳ್ಳೆಯ ಕಟ್ಟಡದ ನಿರ್ಮಾಣವನ್ನು ಆರಂಭಿಸುವುದು,” ಎಂದು ಅವರು ಹೇಳುತ್ತಾರೆ.
ವರದಿಗಾರರು ಈ ಕಥೆಯನ್ನು ಬರೆಯಲು ನೆರವಾದ ವರದಿಗಾರರಾದ ಊರ್ನಾ ರಾವುತ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಕನ್ನಡ ಅನುವಾದ: ಚರಣ್ ಐವರ್ನಾಡು