ಹೇಮಂತ್ ಕವಾಲೆ ತಮ್ಮ ಹೆಸರಿನ ಮುಂದೆ ಮತ್ತೊಂದು ವಿಶೇಷಣವನ್ನು ಸೇರಿಸಬೇಕೆಂದಿದ್ದಾರೆ.

"ನಾನೊಬ್ಬ ವಿದ್ಯಾವಂತ, ನಿರುದ್ಯೋಗಿ, ಮತ್ತು...ಅವಿವಾಹಿತ," ಎಂದು 30 ವರ್ಷ ವಯಸ್ಸಿನ ಈ ಯುವಕ ತಮ್ಮ ಹಾಗೂ ತಮ್ಮಂತ ಯುವ ರೈತರ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವಾಡುತ್ತಾರೆ.

“ಸು-ಶಿಕ್ಷಿತ್. ಬೇರೋಜ್ಗಾರ್. ಅವಿವಾಹಿತ್.” ಅವರು ಪ್ರತೀ ಪದವನ್ನು ಒತ್ತಿ ಒತ್ತಿಹೇಳುತ್ತಾರೆ. ಅವರ ಪಾನ್‌ ಗೂಡಂಗಡಿಯಲ್ಲಿ ಅವರ ಸುತ್ತ ಇರುವ 30 ರ ಹರೆಯದ ಸ್ನೇಹಿತರು ನಗುತ್ತಾ, ತಮ್ಮ ಬ್ಯಾಚುಲರ್‌ ಜೀವನದ ಬಗೆಗಿನ ಅಸಮಧಾನ ಹಾಗೂ ಮುಜುಗರವನ್ನು ಮರೆಮಾಚುತ್ತಾರೆ. ಅವರ ಮೇಲೂ ಜೋಕ್ ಇದೆಯಂತೆ.

"ಅದು ನಮ್ಮ ದೊಡ್ಡ ಸಮಸ್ಯೆ," ಎಂದು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿರುವ ಕವಾಲೆ ಹೇಳುತ್ತಾರೆ.

ನಾವು ಕೃಷಿಕರ ಆತ್ಮಹತ್ಯೆಯಿಂದ ಕಂಗಾಲಾಗಿರುವ ಪೂರ್ವ ಮಹಾರಾಷ್ಟ್ರದ ವಿದರ್ಭದ ಹತ್ತಿಗೆ ಹೆಸರುವಾಸಿಯಾಗಿರುವ ಯವತ್ಮಾಲ್-ದರ್ವಾ ರಸ್ತೆಯಲ್ಲಿರುವ ಸೆಲೋಡಿ ಎಂಬ ಹಳ್ಳಿಯಲ್ಲಿದ್ದೇವೆ. ಇದು ಕೃಷಿ ಬಿಕ್ಕಟ್ಟು ಮತ್ತು ವ್ಯಾಪಕ ವಲಸೆಯಿಂದ ತತ್ತರಿಸಿ ಹೋಗಿರುವ ಗ್ರಾಮ. ಈ ಗ್ರಾಮದ ಮುಖ್ಯ ಚೌಕದಲ್ಲಿರುವ ಕವಾಲೆಯವರ ಗೂಡಂಗಡಿಯ ನೆರಳಿನಲ್ಲಿ ಯುವಕರ ಗುಂಪು ಸಮಯ ಕಳೆಯುತ್ತಿದೆ. ಇವರೆಲ್ಲರೂ ಪದವೀಧರರು ಇಲ್ಲವೇ, ಸ್ನಾತಕೋತ್ತರ ಪದವೀಧರರು. ಇವರೆಲ್ಲರ ಹೆಸರಿನಲ್ಲಿಯೂ ಕೃಷಿ ಭೂಮಿ ಇದೆ. ಆದರೆ ಎಲ್ಲರೂ ನಿರುದ್ಯೋಗಿಗಳು, ಯಾರಿಗೂ ಮದುವೆಯಾಗಿಲ್ಲ.

ಇವರಲ್ಲಿ ಹೆಚ್ಚಿನವರು ಪುಣೆ, ಮುಂಬೈ, ನಾಗಪುರ ಅಥವಾ ಅಮರಾವತಿಯಂತಹ ದೂರದ ನಗರಗಳಲ್ಲಿ ತಮ್ಮ ಭವಿಷ್ಯವನ್ನು ನೋಡುತ್ತಿದ್ದಾರೆ. ಇಲ್ಲಿ ಕಡಿಮೆ ಸಂಬಳಕ್ಕೆ ಕೆಲಕಾಲ ದುಡಿದಿದ್ದಾರೆ. ಉದ್ಯೋಗಕ್ಕಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಾರ್ವಜನಿಕ ಸೇವಾ ಆಯೋಗ ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ವಿಫಲರಾಗಿದ್ದಾರೆ.

ಈ ಭಾಗದ, ಬಹುಶ ದೇಶದಾದ್ಯಂತ ಇರುವ ಅನೇಕ ಯುವಕರಂತೆ, ಕವಾಲೆಯವರೂ ಒಳ್ಳೆಯ ಉದ್ಯೋಗ ಸಿಗಲು ಉತ್ತಮ ಶಿಕ್ಷಣ ಬೇಕು ಎಂದು ಯೋಚಿಸಿದ್ದರು.

ಈಗ ಮದುವೆಯಾಗಲು ಹೆಣ್ಣು ಸಿಗಬೇಕಾದರೆ ಖಾಯಂ ಸರ್ಕಾರಿ ನೌಕರಿ ಬೇಕು ಎಂದು ನಂಬಿದ್ದಾರೆ.

ಆಗಾಗ ಬೇರೆ ಕೆಲಸಗಳನ್ನು ಮಾಡುತ್ತಾ, ಕವಾಲೆಯವರು ಹಳ್ಳಿಯಲ್ಲಿರುವ ತಮ್ಮ ಕುಟುಂಬಕ್ಕೆ ಸೇರಿದ ಜಮೀನಿನ ಹಿಂದೆ ಬಿದ್ದಿದ್ದಾರೆ, ವ್ಯಾಪಾರ ಮಾಡಲು ಗ್ರಾಮದಲ್ಲಿಯೇ ಒಂದು ಅಂಗಡಿಯನ್ನೂ ತೆರೆದಿದ್ದಾರೆ.

"ನಾನು ಪಾನ್ ಗೂಡಂಗಡಿಯೊಂದನ್ನು ತೆರೆಯಲು ನಿರ್ಧರಿಸಿದೆ, ರಸವಂತಿ [ಕಬ್ಬಿನ ಜ್ಯೂಸ್ ಮಾರುವ ಸ್ಟಾಲ್] ನಡೆಸಲು ಸ್ನೇಹಿತನನ್ನು ಕೇಳಿಕೊಂಡೆ ಮತ್ತು ನಂಗೆ ಸ್ವಲ್ಪ ವ್ಯಾಪಾರವಾಗಲಿ ಎಂದು ತಿಂಡಿಗಳನ್ನು ಮಾರುವ ಅಂಗಡಿಯನ್ನು ಹಾಕಲು ಇನ್ನೊಬ್ಬ ಸ್ನೇಹಿತನನ್ನು ಕೇಳಿದೆ," ಎಂದು ತೀಕ್ಷ್ಣ ಬುದ್ಧಿಯ ಕವಾಲೆಯವರು ಹೇಳುತ್ತಾರೆ. "ಪುಣೆಯಲ್ಲಿ ಇದ್ದು ಒಂದು ಪೂರ್ತಿ ಚಪಾತಿ ತಿನ್ನುವ ಬದಲು, ನನ್ನ ಹಳ್ಳಿಯಲ್ಲಿಯೇ ಇದ್ದು ಬೇಕಾದಾಗ ಅರ್ಧ ಚಪಾತಿ ತಿನ್ನುವುದೇ ಉತ್ತಮ," ಎಂದು ಅವರು ಹೇಳುತ್ತಾರೆ.

PHOTO • Jaideep Hardikar

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿದ ನಂತರ, ಪುಣೆ ಮತ್ತು ಇತರ ನಗರಗಳ ಕಾರ್ಖಾನೆಗಳಲ್ಲಿ ಕೆಲಸ ಮಾಡಿದ ಹೇಮಂತ್ ಕವಾಲೆಯವರು (ಬಲ) ಪಾನ್ ಗೂಡಂಗಡಿಯೊಂದನ್ನು ತೆರೆಯಲು ಯವತ್ಮಾಲ್‌ನ ದರ್ವಾ ತಹಸಿಲ್‌ನಲ್ಲಿರುವ ತಮ್ಮ ಗ್ರಾಮ ಸೆಲೋಡಿಗೆ ಮರಳಿ ಬಂದರು. ಅವರು ಮತ್ತು ಅವರ ಸ್ನೇಹಿತ ಅಂಕುಶ್ ಕಂಕಿರಾಡ್ (ಎಡ) ಇಬ್ಬರೂ ತಮ್ಮ ಬದುಕು ಕಟ್ಟಿಕೊಳ್ಳಲು ತಮ್ಮ ತಮ್ಮ ಹೊಲಗಳ ಕಡೆ ಒಲವನ್ನು ತೋರುತ್ತಾರೆ. ಹೇಮಂತ್ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ, ಅಂಕುಶ್ ದರ್ವಾದಲ್ಲಿ ಕೃಷಿ ಬಿಎಸ್ಸಿ ಮುಗಿಸಿದ್ದಾರೆ

ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟದ ಜೊತೆಗೆ, ಮಹಾರಾಷ್ಟ್ರದ ಗ್ರಾಮೀಣ ಭಾಗದ ಯುವಕರು ಇನ್ನೊಂದು ಹೊಸ ಸಾಮಾಜಿಕ ಸಮಸ್ಯೆಯ ಕೂಪಕ್ಕೆ ಬಿದ್ದಿದ್ದಾರೆ: ತಡವಾಗಿ ನಡೆಯುತ್ತಿರುವ ಮದುವೆಗಳು ಹಾಗೂ ಒಂಟಿಯಾಗಿಯೇ ಉಳಿಯಬೇಕಾದ ಅನಿವಾರ್ಯತೆ.

"ನನ್ನ ತಾಯಿಗೆ ಯಾವಾಗಲೂ ನನ್ನ ಮದುವೆಯದೇ ಚಿಂತೆ," ಎಂದು ಕವಾಲೆಯವರ ಆತ್ಮೀಯ ಸ್ನೇಹಿತ, 31 ವರ್ಷ ಪ್ರಾಯದ ಅಂಕುಶ್ ಕಂಕಿರಾಡ್ ಹೇಳುತ್ತಾರೆ. ಅವರ ಬಳಿ 2.5 ಎಕರೆ ಭೂಮಿಯಿದೆ ಮತ್ತು ಕೃಷಿಯಲ್ಲಿ ಬಿಎಸ್ಸಿ ಮಾಡಿದ್ದಾರೆ. "ನಂಗೆ ವಯಸ್ಸಾದಂತೆ ನಾನು ಒಬ್ಬಂಟಿಯಾಗಿ ಹೇಗೆ ಬದುಕುತ್ತೇನೋ ಎಂದು ಅವರು ಯೋಚಿಸುತ್ತಿದ್ದಾರೆ," ಎಂದು ಅಂಕುಶ್ ಹೇಳುತ್ತಾರೆ. ಮದುವೆಯಾಗುವ ಬಯಕೆಯಿದ್ದರೂ ಅವರಿಗೆ ಬರುವ ಅಲ್ಪ ಆದಾಯದಿಂದಾಗಿ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅವರು.

ಈ ಪ್ರದೇಶದಲ್ಲಿ ಮದುವೆ ಒಂದು ಪ್ರಮುಖ ಸಾಮಾಜಿಕ ಪದ್ಧತಿ ಎಂದು ಪ್ರತಿಯೊಬ್ಬರೂ ಪರಿಗೆ ಬೇರೆಬೇರೆ ರೀತಿಯಲ್ಲಿ ಹೇಳುತ್ತಾರೆ. ಈ ಆರ್ಥಿಕವಾಗಿ ಹಿಂದುಳಿದ, ಸಮೃದ್ಧ ಸಕ್ಕರೆಯನ್ನು ಉತ್ಪಾದಿಸುವ  ಪಶ್ಚಿಮ ಮಹಾರಾಷ್ಟ್ರದ ಗೊಂಡಿಯಾದ ಪೂರ್ವ ಭಾಗದಲ್ಲಿ, ಮದುವೆಯ ವಯಸ್ಸನ್ನು ಮೀರಿರುವ ಇಂತಹ ಯುವಕ - ಯುವತಿಯರನ್ನು ನೀವು ನೋಡಬಹುದು.

ಮೆಟ್ರೋಪಾಲಿಟನ್ ನಗರಗಳು ಅಥವಾ ಕೈಗಾರಿಕಾ ಪ್ರದೇಶಗಳಲ್ಲಿನ ಒಳ್ಳೆಯ ಶಿಕ್ಷಣವನ್ನು ಪಡೆದಿರುವ ಇತರರಿಗಿಂತ ಭಿನ್ನವಾಗಿ ಬದುಕುವ ಇವರಿಗೆ, ಸಾಮಾಜಿಕ ಮತ್ತು ಸಂವಹನ ಕೌಶಲ್ಯಗಳ ಕೊರತೆಯಿಂದಾಗಿ, ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಇವರಿಗೆ ಸಾಧ್ಯವಾಗುತ್ತಿಲ್ಲ.

2024 ರ ಏಪ್ರಿಲ್ ತಿಂಗಳ ಆರಂಭದಲ್ಲಿ, ಪರಿ ಮಹಾರಾಷ್ಟ್ರದಾದ್ಯಂತ ಇರುವ ಗ್ರಾಮೀಣ ಭಾಗದ ವಿದ್ಯಾವಂತ ಮತ್ತು ಮಹತ್ವಾಕಾಂಕ್ಷೆಯುಳ್ಳ ಯುವಕ-ಯುವತಿಯರನ್ನು ಭೇಟಿಯಾಗಿ ಸಂದರ್ಶನ ನಡೆಸಿತು.

ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್‌ಒ) ಮತ್ತು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಡೆವಲಪ್ಮೆಂಟ್ (ಐಎಚ್‌ಡಿ) ಜಂಟಿಯಾಗಿ ಪ್ರಕಟಿಸಿದ ಭಾರತ ಉದ್ಯೋಗ ವರದಿ 2024 ರ ಪ್ರಕಾರ ಭಾರತದಲ್ಲಿರುವ ಸುಮಾರು ಶೇಕಡಾ 83 ರಷ್ಟು ನಿರುದ್ಯೋಗಿಗಳು ವಿದ್ಯಾವಂತ ಯುವಜನತೆ. ಒಟ್ಟು ನಿರುದ್ಯೋಗಿ ಯುವಜನರಲ್ಲಿ ಕನಿಷ್ಠ ಮಾಧ್ಯಮಿಕ ಶಿಕ್ಷಣ ಪಡೆದಿರುವವರ ಪ್ರಮಾಣ 2000 ರಲ್ಲಿ ಶೇಕಡಾ 35.2 ಇತ್ತು, ಇದು 2022 ಕ್ಕೆ ಶೇಕಡಾ 65.7 ಕ್ಕೆ ಎರಡು ಪಟ್ಟು ಹೆಚ್ಚಾಗಿದೆ.

342 ಪುಟಗಳ ಈ ವರದಿಯು "ಕೃಷಿಯಿಂದ ದೂರ ಸರಿದು, ಕೃಷಿಯೇತರ ಕ್ಷೇತ್ರಗಳಿಗೆ ಪಲ್ಲಟಗೊಂಡ ಕಾರ್ಮಿಕರ ನಿಧಾನಗತಿಯ ಚಲನೆ 2019 ರ ನಂತರ (ಕೋವಿಡ್ -19) ಸಾಂಕ್ರಾಮಿಕ ರೋಗದಿಂದಾಗಿ ಹಿಮ್ಮುಖವಾಯಿತು, ಹೀಗಾಗಿ ಕೃಷಿವಲಯದಲ್ಲಿನ ಉದ್ಯೋಗದ ಪ್ರಮಾಣ ಹೆಚ್ಚಾಯಿತು. ಇದರಿಂದ ಕೃಷಿ ಕಾರ್ಮಿಕರ ಸಂಖ್ಯೆಯಲ್ಲಿ ಏರಿಕೆಯಾಯಿತು," ಎಂದು ಹೇಳುತ್ತದೆ.

ಭಾರತದಲ್ಲಿ ಉದ್ಯೋಗವೆಂದರೆ ಮುಖ್ಯವಾಗಿ ಸ್ವಯಂ ಉದ್ಯೋಗ ಮತ್ತು ಸಾಂದರ್ಭಿಕ ಉದ್ಯೋಗ ಎಂದು ಐಎಲ್‌ಒ ವರದಿ ಹೇಳುತ್ತದೆ. "ಸುಮಾರು ಶೇಕಡಾ 82 ರಷ್ಟು ಕಾರ್ಮಿಕರು ಅನೌಪಚಾರಿಕ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸುಮಾರು ಶೇಕಡಾ 90 ರಷ್ಟು ಜನರು ಅನೌಪಚಾರಿಕ ಉದ್ಯೋಗಿಗಳು," ಎಂದು ಅದು ಹೇಳುತ್ತದೆ. ಸೆಲೋಡಿಯ ಯುವಕರಂತೆ, ಅನೇಕರು ಪಾನ್ ಗೂಡಂಗಡಿ, ರಸವಂತಿ ಮತ್ತು ಟೀ-ತಿಂಡಿಗಳ ಸ್ಟಾಲ್‌ಗಳನ್ನು ನಡೆಸುತ್ತಿದ್ದಾರೆ.

"2019 ರಿಂದ ಔದ್ಯೋಗಿಕ ಬೆಳವಣಿಗೆಯ ಸ್ವರೂಪದಲ್ಲಿ ಆಗಿರುವ ಸ್ಥಿತ್ಯಂತರದಿಂದಾಗಿ, ಅನೌಪಚಾರಿಕ ವಲಯದಲ್ಲಿ ಮತ್ತು/ಅಥವಾ ಅನೌಪಚಾರಿಕ ಉದ್ಯೋಗದಲ್ಲಿರುವ ಒಟ್ಟು ಉದ್ಯೋಗಗಳ ಪಾಲು ಜಾಸ್ತಿಯಾಗಿದೆ." 2012-22ರ ಅವಧಿಯಲ್ಲಿ ಸಾಂದರ್ಭಿಕ ಕಾರ್ಮಿಕರ ವೇತನ ತನ್ನ ಸಾಧಾರಣ ಏರಿಕೆಯನ್ನು ಉಳಿಸಿಕೊಂಡಿದ್ದರೂ, ಸಾಮಾನ್ಯ ಕಾರ್ಮಿಕರ ನಿಜವಾದ ವೇತನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ ಅಥವಾ ಕುಸಿತ ಕಂಡಿತು. 2019 ರ ನಂತರ ಸ್ವ-ಉದ್ಯೋಗಿಗಳ ನಿಜವಾದ ಗಳಿಕೆಗಳೂ ಕುಸಿದವು. ಒಟ್ಟಾರೆಯಾಗಿ, ವೇತನಗಳು ಕಡಿಮೆಯಾದವು. 2022 ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಶೇಕಡಾ 62 ರಷ್ಟು ಕೌಶಲ್ಯರಹಿತ ಸಾಮಾನ್ಯ ಕೃಷಿ ಕಾರ್ಮಿಕರು ಮತ್ತು ಶೇಕಡಾ 70 ರಷ್ಟು ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ನಿಗದಿತ ದಿನದ ಕನಿಷ್ಠ ಸಂಬಳವನ್ನು ಪಡೆದಿಲ್ಲ.

PHOTO • Jaideep Hardikar
PHOTO • Jaideep Hardikar

ಎಡ: ರಾಮೇಶ್ವರ ಕಂಕಿರಾಡ್ ಅವರು ಹೆಚ್ಚಿನ ಸಂಪಾದನೆಗಾಗಿ ಪಾನ್ ಗೂಡಂಗಡಿ ಬಳಿಯೇ ರಸವಂತಿ (ಕಬ್ಬಿನ ಜ್ಯೂಸ್ ಸ್ಟಾಲ್) ತೆರೆದಿದ್ದಾರೆ. ಅವರು ತಮ್ಮ ಸ್ನೇಹಿತರ ಗುಂಪಿನಲ್ಲಿ ಸಣ್ಣವರು. ಕೃಷಿಯಿಂದ ಬರುವ ಅಲ್ಪಸ್ವಲ್ಪ ಆದಾಯದಲ್ಲಿ ಮದುವೆಯಾಗಿ ಕುಟುಂಬ ನಡೆಸಲು ಸಾಧ್ಯವಿಲ್ಲದ ಕಾರಣ ಮದುವೆಯಾಗದಿರಲು ನಿರ್ಧರಿಸಿದ್ದಾರೆ. ಬಲ: ಕಬ್ಬನ್ನು ಹಿಂಡುವ ಯಂತ್ರದೊಂದಿಗೆ ರಾಮೇಶ್ವರ. ಕವಾಲೆ (ಚೆಕ್ಸ್‌ ಇರುವ ಶರ್ಟ್) ಮತ್ತು ಅಂಕುಶ್ ಕಂಕಿರಾಡ್ (ಕಂದು ಬಣ್ಣದ ಟೀ ಶರ್ಟ್) ಅವರ ಹಿಂದೆ ನಿಂತಿದ್ದಾರೆ

*****

ನೆಲಮಟ್ಟದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ.

ಹೆಣ್ಣು ಹುಡುಕುವುದು ಒಂದು ಸವಾಲಾಗಿದ್ದರೆ, ಗ್ರಾಮೀಣ ಪ್ರದೇಶದ ಯುವ ವಿದ್ಯಾವಂತ ಮಹಿಳೆಯರಿಗೆ ಸ್ಥಿರವಾದ ಉದ್ಯೋಗ ಇರುವ ಸೂಕ್ತ ವರರನ್ನು ಹುಡುಕುವುದು ಅಷ್ಟೇ‌ ದೊಡ್ಡ ಸವಾಲಾಗಿದೆ.

ಬಿಎ ಪದವಿ ಮಾಡಿರುವ ಸೆಲೋಡಿಯ ಯುವತಿಯೊಬ್ಬರು (ಹೆಸರು ಹಂಚಿಕೊಳ್ಳಲು ಬಯಸದ ಇವರು, ತಾವು ಬಯಸುವ ವರನ ಬಗ್ಗೆ ವಿವರಿಸಲು ನಾಚಿಕೆಪಡುತ್ತಾರೆ) ಹೀಗೆ ಹೇಳುತ್ತಾರೆ: “ಕೃಷಿಗೆ ಅಂಟಿಕೊಂಡಿರುವುದಕ್ಕಿಂತ, ನಾನು ನಗರದಲ್ಲಿ ವಾಸಿಸುವ ಮತ್ತು ಸ್ಥಿರವಾದ ಉದ್ಯೋಗವನ್ನು ಹೊಂದಿರುವ ಗಂಡನ್ನು ಮದುವೆಯಾಗಬೇಕೆಂದಿದ್ದೇನೆ.”

ನಗರಗಳಲ್ಲಿ ವಾಸಿಸುವ ಸ್ಥಿರ ಸರ್ಕಾರಿ ಉದ್ಯೋಗಗಳನ್ನು ಹೊಂದಿರುವ ತಮ್ಮದೇ ಸಮುದಾಯದ ವರರನ್ನು ಹುಡುಕುವುದು ಸುಲಭವಲ್ಲ ಎಂದು ತನ್ನ ಮತ್ತು ಇತರ ಹಳ್ಳಿಯ ಹುಡುಗಿಯರ ಅನುಭವದಿಂದ ಅವರು ಹೇಳುತ್ತಾರೆ.

ಇದು ಎಲ್ಲಾ ಜಾತಿ ಮತ್ತು ವರ್ಗಗಳ ಸಮಸ್ಯೆ, ನಿರ್ದಿಷ್ಟವಾಗಿ ಹಿಂದುಳಿದ ಮೇಲ್ಜಾತಿಗಳ ಅಥವಾ ಆ ಪ್ರದೇಶಗಳಾದ್ಯಂತ ಇರುವ ಮರಾಠರಂತಹ ಪ್ರಬಲ ಸಮುದಾಯಗಳ ವಿಚಾರದಲ್ಲಿ ಇದು ನಿಜವೆಂದು ತೋರುತ್ತದೆ.

ನಿರುದ್ಯೋಗ ಮತ್ತು ಮದುವೆಯಾಗದಿರುವುದು ಹೊಸದಾದ ಸಮಸ್ಯೆಗಳೇನಲ್ಲ, ಆದರೆ ಇಂದು ಈ ಸಾಮಾಜಿಕ ಸಮಸ್ಯೆಯ ಪ್ರಮಾಣವು ಆತಂಕಕಾರಿಯಾಗಿ ಬೆಳೆದಿದೆ ಎಂದು ಹಿರಿಯ ರೈತರು ಹೇಳುತ್ತಾರೆ.

“ಹಿಂದೆ ಮದುವೆ ದಲ್ಲಾಳಿ ಕೆಲಸ ಮಾಡುತ್ತಿದ್ದವರು ಇಂದು ಈ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ,” ಎಂದು ಸೆಲೋಡಿಯ ಹಿರಿಯ ಕೃಷಿಕ ಭಗವಂತ ಕಂಕಿರಾಡ್ ಹೇಳುತ್ತಾರೆ. ಇವರ ಇಬ್ಬರು ಸೋದರಳಿಯಂದಿರು ಮತ್ತು ಸೋದರ ಸೊಸೆ ಇನ್ನೂ ಅವಿವಾಹಿತರಾಗಿ ಉಳಿದಿದ್ದಾರೆ, ಏಕೆಂದರೆ ಅವರಿಗೆ ಸೂಕ್ತವಾದ ಸಂಗಾತಿ ಸಿಗುತ್ತಿಲ್ಲ. ಅನೇಕ ವರ್ಷಗಳಿಂದ ಭಗವಂತ ಅವರು ತಮ್ಮ ಸಮುದಾಯದೊಳಗೆ ಮದುವೆ ದಲ್ಲಾಳಿಯ ಕೆಲಸ ಮಾಡುತ್ತಿದ್ದು, ಮದುವೆ ವಯಸ್ಸಿಗೆ ಬಂದಿರುವ ಯುವ ಪೀಳಿಗೆಗೆ ವಧು - ವರರನ್ನು ಹುಡುಕುತ್ತಿದ್ದುದಾಗಿ ಹೇಳುತ್ತಾರೆ. ಈಗೆಲ್ಲಾ ಅವರು ಗೊಂದಲಕ್ಕೀಡಾಗುತ್ತಾರೆ ಎಂದು ಹೇಳುತ್ತಾರೆ.

"ನಾನು ಕುಟುಂಬದವರ ಮದುವೆಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದೇನೆ," ಎಂದು 32 ವರ್ಷದ ಯೋಗೇಶ್ ರಾವುತ್ ಹೇಳುತ್ತಾರೆ. ಇವರಿಗೆ ಹತ್ತು ಎಕರೆ ನೀರಾವರಿ ಜಮೀನು ಇದೆ, ಮಾತ್ರವಲ್ಲ ಇವರು ಸ್ನಾತಕೋತ್ತರ ಪದವೀಧರರು ಕೂಡ. "ಏಕೆಂದರೆ ನಾನು ಪ್ರತಿ ಬಾರಿ ಹೋದಾಗ, ನನ್ನ ಮದುವೆ ಯಾವಾಗ ಎಂದು ಜನ ನನ್ನನ್ನು ಕೇಳುತ್ತಾರೆ. ಇದರಿಂದ ಮುಜುಗರ ಮತ್ತು ನಿರಾಶೆಯಾಗುತ್ತದೆ," ಎಂದು ಅವರು ಹೇಳುತ್ತಾರೆ.

ಮನೆಗೆ ಬಂದರೆ, ಹೆತ್ತವರು ಚಿಂತೆಯಲ್ಲಿರುತ್ತಾರೆ. ಆದರೆ, ತಮಗೆ ಹೆಣ್ಣು ಸಿಕ್ಕಿದರೂ ಮದುವೆಯಾಗುವುದಿಲ್ಲ, ಈ ಕಡಿಮೆ ಆದಾಯದಲ್ಲಿ ಕುಟುಂಬ ನಡೆಸುವುದು ಸಾಧ್ಯವಿಲ್ಲ ಎಂದು ರಾವುತ್ ಹೇಳುತ್ತಾರೆ.

"ಕೃಷಿ ಆದಾಯವನ್ನು ನಂಬಿ ಬದುಕಲು ಯಾವುದೇ ಮಾರ್ಗವಿಲ್ಲ," ಎಂದು ಅವರು ಹೇಳುತ್ತಾರೆ. ಆದ್ದರಿಂದಲೇ, ಈ ಗ್ರಾಮದ ಹೆಚ್ಚಿನ ಮನೆಗಳು ತಮ್ಮ ಹೆಣ್ಣುಮಕ್ಕಳನ್ನು ಕೇವಲ ಕೃಷಿ ಆದಾಯವನ್ನು ನಂಬಿ ಬದುಕುವ ಹಳ್ಳಿಯ ಗಂಡಸರಿಗೆ ಮದುವೆ ಮಾಡಿಕೊಡಲು ಹೋಗುತ್ತಿಲ್ಲ. ಸ್ಥಿರವಾದ ಸರ್ಕಾರಿ ಉದ್ಯೋಗಗಳು, ಅಥವಾ ಖಾಸಗಿ ಉದ್ಯೋಗ ಇಲ್ಲವೇ, ನಗರಗಳಲ್ಲಿ ಸ್ವಯಂ ಉದ್ಯೋಗ ಹೊಂದಿರುವ ಗಂಡುಗಳಿಗೆ ಮಾತ್ರ ಇಲ್ಲಿ ಆದ್ಯತೆ.

ಸಮಸ್ಯೆಯೆಂದರೆ, ಸ್ಥಿರವಾದ ಉದ್ಯೋಗಗಳು ಕಡಿಮೆ ಮತ್ತು ಇದ್ದರೂ, ಹುಡುಕುವುದು ನಿಜವಾಗಿಯೂ ಕಷ್ಟ.

PHOTO • Jaideep Hardikar
PHOTO • Jaideep Hardikar

ಎಡ: ‘ನಿಮಗೆ ಸ್ಥಿರ ಆದಾಯ ಬಾರದಿದ್ದರೆ ಕುಟುಂಬ ನಡೆಸಲು ಸಾಧ್ಯವಿಲ್ಲ,’ ಎಂದು ರೈತ ಯೋಗೇಶ್ ರಾವುತ್  ಹೇಳುತ್ತಾರೆ. ಜನರು ಇವರನ್ನು ಯಾವಾಗ ಮದುವೆಯಾಗುತ್ತೀಯಾ ಎಂದು ಕೇಳುವುದರಿಂದಾಗಿ ಕುಟುಂಬದ ಮದುವೆಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಬಲ: ತಮ್ಮ ಪಾನ್ ಗೂಡಂಗಡಿಯಲ್ಲಿರುವ ಹೇಮಂತ್ ಮತ್ತು ಅಂಕುಶ್

ಮರಾಠವಾಡ, ತುಂಬಾ ಕಾಲದಿಂದ ನೀರಿನ ಸಮಸ್ಯೆಯಿಂದ ಜರ್ಜರಿತವಾಗಿರುವ ಪ್ರದೇಶ. ನೀರಿನ ಕೊರತೆ ಇರುವ ಪ್ರದೇಶಗಳ ಹುಡುಗರು ಮದುವೆಯಾಗಲು ಯುವತಿಯರನ್ನು ಹುಡುಕುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಇಲ್ಲವೇ, ಮದುವೆಯಾಗಬೇಕು ಎಂಬ ಉದ್ದೇಶಕ್ಕೆ ಉದ್ಯೋಗ ಅಥವಾ ನೀರು, ಇಲ್ಲವೇ ಎರಡೂ ಇರುವ ನಗರಗಳಿಗೆ ಹೋಗುವುದು ಪರಿ ನಡೆಸಿದ ಅನೇಕ ಸಂದರ್ಶನಗಳಿಂದ ತಿಳಿದುಬಂದಿದೆ.

ಸ್ಥಿರವಾಗಿ ಆದಾಯವು ಬರವುದೂ ಕಷ್ಟ, ಮತ್ತು ಬೇಸಿಗೆಯಂತ ಕೃಷಿ ಕೆಲಸ ಇಲ್ಲದ ಸೀಸನ್‌ನಲ್ಲಿ ಬೇರೆ ಮಾರ್ಗದಿಂದ ಆದಾಯ ಗಳಿಸುವ ಯಾವುದೇ ಅವಕಾಶವಿಲ್ಲ.

"ಬೇಸಿಗೆಯಲ್ಲಿ ಯಾವುದೇ ಕೃಷಿ ಕೆಲಸ ಇರುವುದಿಲ್ಲ," ಎಂದು ಕವಾಲೆ ಹೇಳುತ್ತಾರೆ. ಅವರಿಗೆ ಹಳ್ಳಿಯಲ್ಲಿ ಹತ್ತು ಎಕರೆ ಮಳೆ-ಆಧಾರಿತ ತೋಟವಿದೆ. ಅವರ ಕೆಲವು ಸ್ನೇಹಿತರು ತಮ್ಮ ತೋಟಗಳಲ್ಲಿ ಬೆಂಡೆಕಾಯಿಯಂತಹ ಕಾಲೋಚಿತ ತರಕಾರಿಗಳನ್ನು ಬೆಳೆಯಲು ಬಾವಿ ಅಥವಾ ಬೋರ್‌ವೆಲ್‌ ನೀರನ್ನು ಬಳಸುತ್ತಾರೆ. ಆದರೆ ಇದರಿಂದ ಯಾವುದೇ ಲಾಭವಿಲ್ಲ.

“ನಾನು 2 ಗಂಟೆಗೆ ಎದ್ದಿದ್ದೇನೆ; ಮುಂಜಾನೆ ನನ್ನ ಹೊಲದಿಂದ 20 ಕೆಜಿ ಬೆಂಡೆಕಾಯಿಯ ಕಟ್ಟನ್ನು 150 ರೂಪಾಯಿಗೆ ಮಾರಾಟ ಮಾಡಲು ದರ್ವಾಗೆ ತೆಗೆದುಕೊಂಡು ಹೋಗಿದ್ದೆ,” ಎಂದು 8 ಎಕರೆ ಜಮೀನಿನ ಮಾಲೀಕ, ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ಅವಿವಾಹಿತ ಅಜಯ್ ಗಾವಂಡೆ ಹೇಳುತ್ತಾರೆ. "ಕೊಯ್ಲು ಮಾಡಲು 200 ರೂಪಾಯಿ ಖರ್ಚಾಗುತ್ತದೆ, ಆದ್ದರಿಂದ ನಾನು ಇವತ್ತು ಕೆಲಸಗಾರರ ಕೂಲಿಯ ಹಣವನ್ನೂ ವಸೂಲಿ ಮಾಡಿಕೊಂಡಿಲ್ಲ," ಎಂದು ಅವರು ಹೇಳುತ್ತಾರೆ.

ಈ ಸಮಸ್ಯೆಯ ಜೊತೆಗೆ  ಬೆಳೆಗಳ ಮೇಲೆ ಪ್ರಾಣಿಗಳ ದಾಳಿಯ ಸಮಸ್ಯೆಯೂ ಸೇರಿ ಸವಾಲು ಮತ್ತಷ್ಟೂ ಹೆಚ್ಚಾಗುತ್ತದೆ. ಸೆಲೋಡಿಯಲ್ಲಿ ಮಂಗಗಳ ಕಾಟ ಹೆಚ್ಚು, ಏಕೆಂದರೆ ಹೊಲಗಳು ಮತ್ತು ಪೊದೆತುಂಬಿದ ಕಾಡುಗಳ ನಡುವೆ ಅವುಗಳಿಗೆ ಯಾವುದೇ ಆಶ್ರಯವಿಲ್ಲ, ಇಲ್ಲಿ ಕಾಡು ಪ್ರಾಣಿಗಳಿಗೆ ನೀರಾಗಲಿ - ಆಹಾರವಾಗಲಿ ಇಲ್ಲ ಎಂದು ಗವಾಂಡೆ ಹೇಳುತ್ತಾರೆ. "ಅವು ಒಂದು ದಿನ ನನ್ನ ಹೊಲದ ಮೇಲೆ ದಾಳಿ ಮಾಡಿದರೆ, ಇನ್ನೊಂದು ದಿನ ಬೇರೆಯವರ ಹೊಲದ ಮೇಲೆ ದಾಳಿ ಮಾಡುತ್ತವೆ, ಏನು ಮಾಡಬೇಕು ಹೇಳಿ?" ಎಂದು ಅವರು ಹೇಳುತ್ತಾರೆ.

ಪ್ರಬಲ ತಿರಲೆ-ಕುಂಬಿ ಸಮುದಾಯಕ್ಕೆ (ಒಬಿಸಿ) ಸೇರಿರುವ ಕವಾಲೆಯವರು ದರ್ವಾದಲ್ಲಿನ ಒಂದು ಕಾಲೇಜಿನಲ್ಲಿ ಓದಿ, ಉದ್ಯೋಗ ಹುಡುಕಿಕೊಂಡು ಪುಣೆಗೆ ಹೋದರು. ತಿಂಗಳಿಗೆ 8,000 ರುಪಾಯಿ ಸಂಬಳಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಸಂಬಳ ಕಡಿಮೆಯಾದ್ದರಿಂದ ವಾಪಾಸ್ ಮನೆಗೆ ಬಂದರು. ನಂತರ ಇವರು ಪಶುವೈದ್ಯಕೀಯ ಸೇವೆಗಳಲ್ಲಿ ತರಬೇತಿ ಪ್ರಮಾಣಪತ್ರವನ್ನು ಪಡೆದರು. ಇದರಿಂದ ಅವರಿಗೆ ಯಾವುದೇ ಉಪಯೋಗವಾಗಲಿಲ್ಲ. ನಂತರ, ಅವರು ತಾಂತ್ರಿಕ ಕೌಶಲ್ಯಕ್ಕಾಗಿ ಫಿಟ್ಟರ್‌ನಲ್ಲಿ ಡಿಪ್ಲೊಮಾ ಮಾಡಿದರು. ಆದರೆ ಅದರಿಂದಲೂ ಯಾವುದೇ ಪ್ರಯೋಜನವಾಗಲಿಲ್ಲ.

ಈ ಮಧ್ಯೆ, ಇವರು ಬ್ಯಾಂಕ್ ಉದ್ಯೋಗಗಳು, ರೈಲ್ವೆ ಇಲಾಖೆಯ ಉದ್ಯೋಗಗಳು, ಪೊಲೀಸ್ ಉದ್ಯೋಗಗಳು, ಸರ್ಕಾರಿ ಕ್ಲರ್ಕ್ ಹುದ್ದೆಗಳಿಗೆ‌ ತಯಾರಿ ನಡೆಸಿ ಹಲವು ಪರೀಕ್ಷೆಗಳನ್ನು ಬರೆದಿದ್ದರು.

ಕೊನೆಯಲ್ಲಿ ಎಲ್ಲವನ್ನೂ ಕೈಬಿಟ್ಟರು. ಇವರ ಸ್ನೇಹಿತರೂ ಹೀಗೇ ಮಾಡಿದರು. ಅವರ ಕಥೆಯೂ ಕೂಡ ಇದೇ ಆಗಿದೆ.

PHOTO • Jaideep Hardikar
PHOTO • Jaideep Hardikar

ಎಡ: ಸೆಲೋಡಿ ಗ್ರಾಮದ ಮುಖ್ಯ ಚೌಕ. ಬಲ: ಯಾವತ್ಮಾಲ್‌ನ ತಿರ್ಜಾಡಾದಲ್ಲಿ ಗ್ರಾಮ ಸರಪಂಚರು ಸ್ಥಾಪಿಸಿರುವ ಅಧ್ಯಯನ ಕೇಂದ್ರದಲ್ಲಿ 30 ರ ಹರೆಯದ ಯುವಕರು ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಇವರೆಲ್ಲರೂ ಪದವೀಧರರು, ಇಲ್ಲವೇ ಸ್ನಾತಕೋತ್ತರ ಪದವೀಧರರು, ಅವರಿಗೆ ಸೂಕ್ತ ವಧುಗಳೇ ಸಿಗುತ್ತಿಲ್ಲ

ಅವರೆಲ್ಲರೂ ಈ ಬಾರಿ ಬದಲಾವಣೆಯನ್ನು ಬಯಸಿ ಮತದಾನ ಮಾಡುವುದಾಗಿ ಪಶ್ಚಿಮ ವಿದರ್ಭದ ಯವತ್ಮಾಲ್-ವಾಶಿಮ್ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೂರು ದಿನ ಮೊದಲು ದೃಢವಾಗಿ ಹೇಳುತ್ತಾರೆ. ಎರಡು ಬಣಗಳ ನಡುವೆ ಸ್ಪರ್ಧೆ ನಡೆಯಲಿದೆ. ಶಿವಸೇನಾ - ಸೇನಾ- ದ ಉದ್ಧವ್ ಠಾಕ್ರೆ ಬಣದ ಸಂಜಯ್ ದೇಶಮುಖ್ ವಿರುದ್ಧ ಏಕನಾಥ್ ಶಿಂಧೆಯವರ ಸೇನಾದ ರಾಜಶ್ರೀ ಪಾಟೀಲ್ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಸೇನಾ-ಯುಬಿಟಿ ಮೈತ್ರಿ ಮಾಡಿಕೊಂಡಿರುವುದರಿಂದ ಯುವಕರು ದೇಶಮುಖ್‌ರವರ ಜೊತೆಗೆ ನಿಂತಿದ್ದಾರೆ. ವಿದರ್ಭ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ.

"ಥೇ ನುಸ್ತಾಚ್ ಬಾತಾ ಮರ್ತೆ, ಕಾ ಕೆಲಾ ಜಿ ತ್ಯಾನೆ [ಇಷ್ಟೆಲ್ಲಾ ಮಾತನಾಡುವ ಇವರು, ಏನು ಮಾಡಿದ್ದಾರೆ]?" ಎಂದು ಕೇಳುವ ಕಂಕಿರಾಡ್‌ ರವರ ಸ್ವರ ಉದ್ರೇಕಗೊಂಡಿತ್ತು. ಇವರು ವಿಶಿಷ್ಟವಾದ ವರ್ಹಾದಿ ಉಪಭಾಷೆಯಲ್ಲಿ ಮಾತನಾಡುತ್ತಾರೆ. ಇದರಲ್ಲಿ ಈ ನೆಲದ ಗಾಢ ಹಾಸ್ಯವಿದೆ.

ಯಾರು? ಎಂದು ನಾವು ಕೇಳುತ್ತಿದ್ದೇವೆ. ಯಾರು ಹೆಚ್ಚು ಮಾತನಾಡುತ್ತಾರೆ ಮತ್ತು ಯಾರು ಕೆಲಸ ಮಾಡುವುದಿಲ್ಲ?

ಗಂಡಸರು ಮತ್ತೆ ನಗುತ್ತಾರೆ. "ನಿಮಗೆ ಗೊತ್ತಿದೆ," ಎಂದು ಹೇಳಿ ಕವಾಲೆಯವರು ಮೌನವಾಗುತ್ತಾರೆ.

ಅವರ ತೀಕ್ಷ್ಣ ಮಾತುಗಳು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿವೆ. ಮೋದಿಯವರು ತಮ್ಮ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ ಎಂದು ಕವಾಲೆಯವರು ಭಾವಿಸುತ್ತಾರೆ. 2014 ರ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೋದಿಯವರು ದರ್ವಾದ ಸಮೀಪದ ಹಳ್ಳಿಯೊಂದರಲ್ಲಿ ಚಾಯ್-ಪೆ-ಚರ್ಚಾ ನಡೆಸಿದ್ದರು. ಅಲ್ಲಿ ಅವರು ಅನೌಪಚಾರಿಕವಾಗಿ ರೈತರ ಸಾಲ ಮುಕ್ತ ಜೀವನ, ಹತ್ತಿ ಮತ್ತು ಸೋಯಾಬೀನ್‌ಗೆ ಹೆಚ್ಚಿನ ಬೆಲೆ ಹಾಗೂ ಆ ಪ್ರದೇಶದಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಭರವಸೆಗಳನ್ನು ನೀಡಿದ್ದರು.

2014 ಮತ್ತು 2019 ರಲ್ಲಿ, ಇವರೆಲ್ಲಾ ಬಿಜೆಪಿಗೆ ಮತ ಹಾಕಿದರು, ಮೋದಿಯವರು ತಮ್ಮ ಭರವಸೆಗಳನ್ನು ಈಡೇರಿಸುತ್ತಾರೆ ಎಂದು ನಂಬಿದ್ದರು. 2014ರಲ್ಲಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಬೇರು ಸಮೇತ ಕಿತ್ತೊಗೆದು ಬದಲಾವಣೆಯನ್ನು ತರಲು ಇವರೆಲ್ಲಾ ಮತ ಹಾಕಿದ್ದರು. ಆದರೆ ಈಗ, ಮೋದಿಯವರ ಭರವಸೆಗಳು ಗಾಳಿ ಇಲ್ಲದ ಬಲೂನಿನಂತಾಗಿದೆ ಎಂಬ ಅರಿವು ಅವರಿಗೆ ಆಗಿದೆ.

ಇವರಲ್ಲಿ ಹೆಚ್ಚಿನವರು ಆಗ ಮೊದಲ ಬಾರಿಗೆ ಮತದಾನ ಮಾಡಿದ್ದರು. ಇವರೆಲ್ಲಾ ಉದ್ಯೋಗ ಸಿಗುತ್ತದೆ, ಆರ್ಥಿಕತೆ ಸುಧಾರಿಸುತ್ತದೆ, ಕೃಷಿಯಲ್ಲಿ ಲಾಭ ಬರುತ್ತದೆ ಎಂಬ ಆಶಾವಾದವನ್ನು ಹೊಂದಿದ್ದರು. ಏಕೆಂದರೆ ಮೋದಿಯವರ ಮಾತುಗಳು ಅವರ ಮನವೊಲಿಸಿದ್ದವು. ಈ ಪ್ರದೇಶದಲ್ಲಿ ಬೀಸಿದ ಅಲೆಯ ಮೇಲೆ ರೈತರು ಸವಾರಿ ಮಾಡಿದ್ದರು. ಕೊನೆಯಲ್ಲಿ ಮೋದಿಯವರ ಪರವಾಗಿ ಮತ ಚಲಾಯಿಸಿದರು.

ಹತ್ತು ವರ್ಷ ಕಳೆದರೂ ಹತ್ತಿ, ಸೋಯಾಬೀನ್ ಬೆಲೆ ಹೆಚ್ಚಾಗದೆ ಕಡಿಮೆಯಾಗುತ್ತಲೇ ಇದೆ. ಉತ್ಪಾದನಾ ವೆಚ್ಚ ಎರಡು-ಮೂರು ಪಟ್ಟು ಹೆಚ್ಚಾಗಿದೆ. ಹಣದುಬ್ಬರ ದೇಶೀಯ ಬಜೆಟ್ಟನ್ನು ನಾಶಮಾಡುತ್ತಿದೆ. ಎಲ್ಲಿಯೂ ಉದ್ಯೋಗಗಳಿಲ್ಲ, ಯಾವುದೇ ಅವಕಾಶವಿಲ್ಲದೆ ಯುವಕರಲ್ಲಿ ತಲ್ಲಣ ಮತ್ತು ಆತಂಕವನ್ನು ಸೃಷ್ಟಿಯಾಗುತ್ತಿವೆ.

ಒಟ್ಟಾರೆಯಾಗಿ, ಈ ಎಲ್ಲಾ ಅಂಶಗಳು ಅವರನ್ನು ಇಷ್ಟವಿಲ್ಲದಿದ್ದರೂ ಮತ್ತೆ ಕೃಷಿಗೆ ತಳ್ಳುತ್ತಿವೆ. ತಮ್ಮ ಆತಂಕಗಳನ್ನು ತಮ್ಮ ತೀಕ್ಷ್ಣ ಹಾಸ್ಯದಿಂದ ಲೇವಡಿ ಮಾಡುವ ಸೆಲೋಡಿಯ ಮತ್ತು ಮಹಾರಾಷ್ಟ್ರದ ಗ್ರಾಮೀಣ ಭಾಗದ ಯುವಕರು ಹೊಸ ಕ್ಯಾಚ್‌ಲೈನೊಂದನ್ನು ನಮಗೆ ಹೇಳುತ್ತಾರೆ: “ನೌಕ್ರಿ ನಹೀ, ತಾರ್ ಚೋಕ್ರಿ ನಹೀ [ನೌಕರಿ ಇಲ್ಲದಿದ್ದರೆ ಹೆಣ್ಣೂ ಇಲ್ಲ!]

ಅನುವಾದ: ಚರಣ್ ಐವರ್ನಾಡು

Jaideep Hardikar

جے دیپ ہرڈیکر ناگپور میں مقیم صحافی اور قلم کار، اور پاری کے کور ٹیم ممبر ہیں۔

کے ذریعہ دیگر اسٹوریز جے دیپ ہرڈیکر
Editor : Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad