" ಏಯ್ ಗಚ್, ಏಯ್ ಘೊ ರ್, ಈ ಮಾತೀರ್ ಜೆ ಮಾಯಾ, ಸೀ ಮಾಯಾ ಲಿಯೇ ಅಮ್ರಾ ಕು ಥಾಯ್ ಜಾ ಬೋ? [ಈ ಮರ... ಈ ಮನೆ... ಈ ಮಣ್ಣಿನ ಕೋಮಲತೆ... ಈ ಪ್ರೀತಿಯನ್ನು ನಾವು ನಮ್ಮೊಂದಿಗೆ ಎಲ್ಲಿಗೆ ಕೊಂಡೊಯ್ಯಬೇಕು?]"
ಅಪಂಕುರಿ ಹೆಂಬ್ರಮ್ ಆಕ್ರೋಶ ಮತ್ತು ನೋವಿನಲ್ಲಿದ್ದಾರೆ. "ಇದೆಲ್ಲವೂ ನನ್ನದು" ಎಂದು ಈ ಸಂತಾಲ್ ಆದಿವಾಸಿ ಹೇಳುತ್ತಾರೆ, ಹಾಗೆ ಹೇಳುವಾಗ ಅವರ ಕಣ್ಣು ಸುತ್ತಲಿನ ಪರಿಸರವನ್ನು ತೋರಿಸುತ್ತಿತ್ತು. "ನನಗೆ ನನ್ನದೇ ಆದ ಭೂಮಿಯಿದೆ" ಎಂದು 40 ವರ್ಷದ ಅವರು ಭೂಮಿಯ ಕಡೆ ತೋರಿಸುತ್ತಾ ಹೇಳಿದರು. ಅವರ 5-6 ಬಿಘಾ (ಸರಿಸುಮಾರು ಒಂದೂವರೆ ಎಕರೆ) ಭೂಮಿಯನ್ನು ಭತ್ತವನ್ನು ಬೆಳೆಯಲು ಬಳಸಲಾಗುತ್ತದೆ.
“ಇಷ್ಟು ವರ್ಷಗಳಲ್ಲಿ ನಾನಿಲ್ಲಿ ನಿರ್ಮಿಸಿದ ಎಲ್ಲವನ್ನೂ ನೀಡುವುದು ಸರ್ಕಾರಕ್ಕೆ ಸರ್ಕಾರಕ್ಕೆ ಸಾಧ್ಯವೇ” ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ದಿಯೋಚಾ ಪಾಚಮಿ (ದಿಯೂಚಾ ಪಾಚ್ಮಿ ಎಂದೂ ಕರೆಯಲಾಗುತ್ತದೆ) ರಾಜ್ಯ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯು ಅಪಂಕುರಿಯವರ ಊರಾದ ಹರಿನ್ಸಿಂಗಾ ಸೇರಿದಂತೆ 10 ಗ್ರಾಮಗಳನ್ನು ಅಳಿಸಿಹಾಕಲು ಯೋಜಿಸಿದೆ.
“ಇದೆಲ್ಲವನ್ನೂ ಬಿಟ್ಟು ನಾವೆಲ್ಲಿಗೆ ಹೋಗಬೇಕು? ನಾವು ಎಲ್ಲಿಗೂ ಹೋಗುವುದಿಲ್ಲ” ಎಂದು ಅಪಂಕುರಿ ದೃಢವಾಗಿ ಹೇಳುತ್ತಾರೆ. ಅವರು ಮತ್ತು ಅವರಂತಹ ಸಾಮಾನ್ಯ ಮಹಿಳೆಯರು ಪೊಲೀಸ್ ಮತ್ತು ರಾಜ್ಯ ಸರ್ಕಾರದಂತಹ ಬಲಾಢ್ಯರ ವಿರುದ್ಧ ಸಂಘಟಿತ ಶಕ್ತಿಯನ್ನು ಬಳಸಿಕೊಂಡು ಪ್ರತಿಭಟನಾ ಮೆರವಣಿಗೆಗಳು ಮತ್ತು ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಅವರು ತಮ್ಮ ಹೋರಾಟದಲ್ಲಿ ಕೋಲು, ಪೊರಕೆ, ಅಡುಗೆ ಮನೆ ಬಳಕೆ ಕತ್ತಿ, ಕೃಷಿ ಉಪಕರಣಗಳು (ಮಚ್ಚಿನಂತಹವು) ಇವುಗಳನ್ನು ರಕ್ಷಣಾತ್ಮಕವಾಗಿ ಹೋರಾಟದಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಅಂದು ಚಳಿಯ ಮಧ್ಯಾಹ್ನ ಹರಿನ್ಸಿಂಗ ಗ್ರಾಮದಲ್ಲಿ ಮಧ್ಯಾಹ್ನದ ಸೂರ್ಯ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ. ಅಪಂಕುರಿ ತಮ್ಮ ಪಕ್ಕದ ಮನೆಯ ಅಂಗಳದಲ್ಲಿ ನಿಂತು ನಮ್ಮೊಡನೆ ಮಾತನಾಡುತ್ತಿದ್ದರು. ಇಟ್ಟಿಗೆ ಗೋಡೆ ಮತ್ತು ಹೆಂಚಿನ ಛಾವಣಿ ಹೊಂದಿದ್ದ ಮನೆ ಊರಿನ ಬಾಗಿಲಿನಲ್ಲೇ ಇತ್ತು.
“ಅವರು ನಮ್ಮ ನೆಲ ತೆಗೆದುಕೊಳ್ಳಬೇಕೆಂದರೆ ಮೊದಲು ನಮ್ಮ ಜೀವವನ್ನು ತೆಗೆಯಬೇಕು” ಎಂದು ಲಬ್ಸಾ ಹೆಂಬ್ರಮ್ ಹೇಳುತ್ತಾರೆ. ಅವರು ಅನ್ನದ ಗಂಜಿ ಮತ್ತು ರಾತ್ರಿ ಉಳಿದ ತರಕಾರಿ ಪಲ್ಯ ಊಟ ಮಾಡುತ್ತಿದ್ದರು. 40 ವರ್ಷದ ಲಬ್ಸಾ ಕ್ರಷರ್ ಕ್ವಾರಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ದಿನವೊಂದಕ್ಕೆ 200ರಿಂದ 500 ರೂಪಾಯಿಗಳ ತನಕ ಸಂಬಳವಿದೆ.
ಹರಿನ್ಸಿಂಗಾದ ಜನಸಂಖ್ಯೆಯ ಬಹುಪಾಲು ಜನರು ಆದಿವಾಸಿಗಳು. ಅನೇಕ ವರ್ಷಗಳ ಹಿಂದೆ ಒಡಿಶಾದಿಂದ ಬಂದ ದಲಿತ ಹಿಂದೂಗಳು ಮತ್ತು ಮೇಲ್ಜಾತಿಯ ವಲಸೆ ಕಾರ್ಮಿಕರೂ ಇದ್ದಾರೆ.
ಅಪಂಕುರಿ, ಲಬ್ಸಾ ಮತ್ತು ಇತರರಿಗೆ ಸೇರಿದ ಭೂಮಿಯು ಬೃಹತ್ ದಿಯೋಚಾ-ಪಾಚಮಿ-ದಿವಾನ್ಗಂಜ್-ಹರಿನ್‌ಸಿಂಘ ಕಲ್ಲಿದ್ದಲು ಬ್ಲಾಕ್ ಪ್ರದೇಶದ ಮೇಲಿದೆ. ಪಶ್ಚಿಮ ಬಂಗಾಳ ಪವರ್ ಡೆವಲಪ್ಮೆಂಟ್ ಕಾರ್ಪೊರೇಷನ್ ಅಡಿಯಲ್ಲಿ, ಓಪನ್-ಕ್ಯಾಸ್ಟ್ ಕಲ್ಲಿದ್ದಲು ಗಣಿಯು ಶೀಘ್ರದಲ್ಲೇ ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಕಲ್ಲಿದ್ದಲು ಗಣಿಯಾಗಿ ಕೆಲಸ ಆರಂಭಿಸಲಿದೆ. ಈ ಗಣಿ ಪ್ರದೇಶವು 12.31 ಚದರ ಕಿಲೋಮೀಟರ್ ಅಥವಾ 3,400 ಎಕರೆ ಭೂಮಿಯನ್ನು ಒಳಗೊಂಡಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಗಣಿಗಾರಿಕೆ ಯೋಜನೆಯು ಬಿರ್ಭೂಮ್ ಜಿಲ್ಲೆಯ ಮೊಹಮ್ಮದ್ ಬಜಾರ್ ಬ್ಲಾಕ್‌ನ ಹಟ್‌ಗಚಾ, ಮಕ್ದುಮ್‌ನಗರ, ಬಹದ್ದೂರ್‌ಗಂಜಾ, ಹರಿನ್ಸಿಂಗ, ಚಂದಾ, ಸಾಲುಕಾ, ದೇವಾಂಗಂಜ್, ಅಲಿನಗರ, ಕಬಿಲ್‌ನಗರ ಮತ್ತು ನಿಶ್ಚಿಂತಪುರ ಮೌಜಾ ಪ್ರದೇಶಗಳಲ್ಲಿನ ಭೂಮಿಯನ್ನು ನುಂಗಿ ಹಾಕಲಿದೆ.
ಈ ಮಹಿಳೆಯರು ದಿಯೋಚಾ ಪಚಾಮಿಯ ಗಣಿಗಾರಿಕೆ ವಿರೋಧಿ ಜನಾಂದೋಲನದ ಭಾಗವಾಗಿದ್ದಾರೆ. "ನಾವು [ಗ್ರಾಮ] ಈ ಬಾರಿ ಒಗ್ಗಟ್ಟಾಗಿದ್ದೇವೆ" ಎಂದು ಲಬ್ಸಾ ಹೇಳುತ್ತಾರೆ. ನಾವು ನಮ್ಮ ನೆಲದ ತುಂಡನ್ನು ಹೊರಗಿನವರಿಗೆ ನೀಡುವುದಿಲ್ಲ. ನಮ್ಮ ಹೃದಯದಿಂದ ಹೋರಾಟ ಮಾಡುತ್ತಿದ್ದೇವೆ.”
ಈ ಯೋಜನೆಯು “ಪಶ್ಚಿಮ ಬಂಗಾಳವನ್ನು ಮುಂದಿನ ನೂರು ವರ್ಷಗಳ ಕಾಲ ಅಭಿವೃದ್ಧಿಯ ಬೆಳಕಿನಲ್ಲಿ ತೋಯಿಸಲಿದೆ” ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಮಹಿಳೆಯರಂತಹ ಸಾವಿರಾರು ನಿವಾಸಿಗಳನ್ನು ಇದೇ ಯೋಜನೆ ನಿರಾಶ್ರಿತರು ಮತ್ತು ಭೂರಹಿತರನ್ನಾಗಿ ಮಾಡುತ್ತದೆ.
ಈ ದೀಪದ ಕೆಳಗೆ ಕಲ್ಲಿದ್ದಲಿನಷ್ಟೇ ಕಪ್ಪಾದ ಕತ್ತಲೆಯಿದೆ. ಈ ಯೋಜನೆ ಪರಿಸರದ ಮೇಲೂ ವಿನಾಶಕಾರಿ ಪರಿಣಾಮ ಬೀರಲಿದೆ.
2021ರ ಡಿಸೆಂಬರ್ ತಿಂಗಳಿನಲ್ಲಿ ಪ್ರಕಟವಾದ ಗಣಿ ತಿಭಟನೆಯ ಹೇಳಿಕೆಯಲ್ಲಿ, ಪರಿಸರವಾದಿಗಳು ಮತ್ತು ಪರಿಸರ ಕಾರ್ಯಕರ್ತರು ಸೇರಿದಂತೆ ಪಶ್ಚಿಮ ಬಂಗಾಳದ ಗಣ್ಯ ವ್ಯಕ್ತಿಗಳು ಈ ಕಳವಳವನ್ನು ವ್ಯಕ್ತಪಡಿಸಿದ್ದರು. "ತೆರೆದ ಕಲ್ಲಿದ್ದಲು ಗಣಿಗಾರಿಕೆಯಿಂದಾಗಿ ಲಕ್ಷಾಂತರ ವರ್ಷಗಳಿಂದ ರಚನೆಗೊಂಡ ಮೇಲ್ಮಣ್ಣು ಶಾಶ್ವತವಾಗಿ ಇಲ್ಲವಾಗುತ್ತದೆ. ಬದಲಿಗೆ ಅವು ತ್ಯಾಜ್ಯದ ದಿಬ್ಬಗಳಾಗಿ ಬದಲಾಗಲಿವೆ. ಇದರಿಂದಾಗಿ ಭೂ ಕುಸಿತವಲ್ಲದೆ ಭೂಮಿಯ ಮತ್ತು ಜಲಚರ ಪರಿಸರ ವ್ಯವಸ್ಥೆಗಳು ಭಾರಿ ಹಾನಿಯನ್ನು ಅನುಭವಿಸುತ್ತವೆ. ಮಳೆಗಾಲದಲ್ಲಿ ತ್ಯಾಜ್ಯದ ರಾಶಿಗಳು ಕೊಚ್ಚಿಹೋಗಿ ನದಿಗಳ ಕೆಳಭಾಗದಲ್ಲಿ ಸಂಗ್ರಹವಾಗುವುದರಿಂದ ಅನಿರೀಕ್ಷಿತ ಪ್ರವಾಹ ಉಂಟಾಗುತ್ತದೆ. […] ಪ್ರದೇಶದಲ್ಲಿ ಅಂತರ್ಜಲದ ಹರಿವನ್ನು ಅಡ್ಡಿಪಡಿಸುತ್ತದೆ, ಆದರೆ ಇದು ಕೃಷಿ-ಅರಣ್ಯ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಇಡೀ ಪ್ರದೇಶದ ಪರಿಸರ ಸಮತೋಲನವನ್ನು ಹಾನಿಗೊಳಿಸುತ್ತದೆ.
ಪ್ರತಿಭಟನಾ ನಿರತ ಮಹಿಳೆಯರು ಧಮ್ಸಾ ಮತ್ತು ಮದಲ್ ಎನ್ನುವ ಸಂಗೀತ ಉಪಕರಣಗಳನ್ನು ಸಹ ಅವಲಂಬಿಸಿದ್ದಾರೆ. ಇವು ಕೇವಲ ಸಂಗೀತ ವಾದ್ಯಗಳು ಮಾತ್ರವಲ್ಲ, ಧಮ್ಸಾ ಮತ್ತು ಮದಲ್ ಆದಿವಾಸಿ ಸಮುದಾಯದ ಹೋರಾಟಗಳೊಂದಿಗೆ ಅಂತರ್ಗತ ಸಂಬಂಧವನ್ನು ಹೊಂದಿವೆ. ಅವರ ಬದುಕು ಮತ್ತು ಪ್ರತಿರೋಧದ ಸಂಕೇತವಾಗಿರುವ ಈ ವಾದ್ಯಗಳ ಬಡಿತಕ್ಕೆ ಘೋಷಣೆಗಳ ರಾಗವನ್ನು ಹೊಂದಿಸಲಾಗಿದೆ - " ಅಬುಯಾ ದಿಸಾಮ್, ಅಬುಯಾ ರಾಜ್ [ನಮ್ಮ ಭೂಮಿ, ನಮ್ಮ ಆಡಳಿತ]".
ಹೋರಾಡುತ್ತಿರುವ ಮಹಿಳೆಯರು ಮತ್ತು ಇತರರಿಗೆ ಬೆಂಬಲ ಸೂಚಿಸಿ ನಾನು ದಿಯೋಚಾ ಪಚಾಮಿಗೆ ಭೇಟಿ ನೀಡಿ ಈ ಚಿತ್ರಗಳನ್ನು ರಚಿಸಿದೆ. ಎಲ್ಲರಿಗೂ ವಸತಿ, ಪುನರ್ವಸತಿ ಕಾಲೋನಿಯಲ್ಲಿ ಮೆಟಲ್ ರಸ್ತೆಗಳು, ಕುಡಿಯುವ ನೀರು, ವಿದ್ಯುತ್, ಆರೋಗ್ಯ ಕೇಂದ್ರ, ಶಾಲೆ, ಸಾರಿಗೆ ಮತ್ತು ಇನ್ನಷ್ಟು ಸೌಲಭ್ಯಗಳನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆಯೆಂದು ಇಲ್ಲಿನ ಜನರು ಹೇಳುವುದನ್ನು ಕೇಳಿದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ಮೂಲಭೂತ ಹಕ್ಕುಗಳನ್ನು ಈಗ ಚೌಕಾಸಿ ಸಾಧನವಾಗಿ ಬಳಸುತ್ತಿರುವುದು ವಿಪರ್ಯಾಸ.
ತಮ್ಮ ಭೂಮಿಯನ್ನು ಬಿಟ್ಟುಕೊಡದಿರಲು ನಿರ್ಧರಿಸಿದ ಜನರು ಬಿರ್ಭೂಮ್ ಜಾಮಿ-ಜಿಬಾನ್-ಜಿಬಿಕಾ-ಪ್ರಕೃತಿ ಬಚಾವೊ (ಭೂಮಿ, ಜೀವನ, ಜೀವನೋಪಾಯ ಮತ್ತು ಪ್ರಕೃತಿಯನ್ನು ಉಳಿಸಿ) ಮಹಾಸಭಾ ಸಂಘಟನೆಯಡಿ ಸಂಘಟಿತರಾಗಿದ್ದಾರೆ. ಸಿಪಿಐಎಂ (ಎಲ್) ಮತ್ತು ಜೈ ಕಿಸಾನ್ ಆಂದೋಲನ್ ಮತ್ತು ಮಾನವ ಹಕ್ಕುಗಳ ಸಂಘಟನೆ ಏಕುಶೇರ್ ಡಾಕ್ ನಂತಹ ಭೂ ಸ್ವಾಧೀನದ ವಿರುದ್ಧ ಹೋರಾಡುತ್ತಿರುವ ಜನರೊಂದಿಗೆ ನಿಲ್ಲಲು ನಗರ ಪ್ರದೇಶಗಳ ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ದಿಯೋಚಾಕ್ಕೆ ಭೇಟಿ ನೀಡುತ್ತಿವೆ.
ಹರಿನ್ಸಿಂಗಾ ನಿವಾಸಿ ಸುಶೀಲಾ ರೌತ್ ಹರಿದ ಟಾರ್ಪಾಲಿನ್ ಶೀಟುಗಳಿಂದ ತಯಾರಿಸಿದ ತಾತ್ಕಾಲಿಕ ಶೌಚಾಲಯದತ್ತ ಬೆರಳು ತೋರಿಸುತ್ತಾ "ಹೋಗಿ ಈ ಚಿತ್ರವನ್ನು ನಿಮ್ಮ ಸರ್ಕಾರಕ್ಕೆ ತೋರಿಸಿ" ಎಂದು ಹೇಳಿದರು.
ಇಲ್ಲಿಂದ ಸುಮಾರು ಒಂದು ಗಂಟೆಯಷ್ಟು ನಡಿಗೆಯ ದೂರದಲ್ಲಿ ದೇವಾಂಗಂಜ್ ಗ್ರಾಮವಿದೆ, ಅಲ್ಲಿ ನಾವು 8ನೇ ತರಗತಿಯ ವಿದ್ಯಾರ್ಥಿ ಹುಸ್ನಹರಾಳನ್ನು ಭೇಟಿಯಾದೆವು. “ಇಷ್ಟು ದಿನ ಸರ್ಕಾರವು ನಮ್ಮ ಬಗ್ಗೆ ಯೋಚಿಸಲಿಲ್ಲ. ಈಗ ಅವರು ಹೇಳುತ್ತಾರೆ, ನಮ್ಮ ಮನೆಗಳ ಕೆಳಗೆ ಸಾಕಷ್ಟು ಕಲ್ಲಿದ್ದಲು ಇದೆ. ಇದನ್ನೆಲ್ಲ ಬಿಟ್ಟು ನಾವು ಎಲ್ಲಿಗೆ ಹೋಗೋಣ?” ಎಂದು ಈ ದೇವ್ಚಾ ಗೌರಂಗಿನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೇಳುತ್ತಾಳೆ.
ಅವಳು ಶಾಲೆಗೆ ಹೋಗಿ ಹಿಂತಿರುಗಲು ಒಟ್ಟು ಮೂರು ಗಂಟೆ ಹಿಡಿಯುತ್ತದೆ. ತನ್ನ ಗ್ರಾಮದಲ್ಲಿ ಪ್ರೌಢಶಾಲೆಯಿರಲಿ, ಒಂದೇ ಒಂದು ಪ್ರಾಥಮಿಕ ಶಾಲೆಯನ್ನು ನಿರ್ಮಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಆಕೆ ದೂರುತ್ತಾಳೆ. "ಶಾಲೆಗೆ ಹೋಗುವಾಗ ನಾನು ಒಂಟಿತನ ಕಾಡುತ್ತದೆ, ಆದರೆ ನಾನು ಓದನ್ನು ಬಿಟ್ಟಿಲ್ಲ" ಎಂದು ಅವಳು ಹೇಳುತ್ತಾಳೆ. ಲಾಕ್‌ಡೌನ್ ಸಮಯದಲ್ಲಿ ಅವಳ ಅನೇಕ ಸ್ನೇಹಿತರು ಶಾಲೆಯನ್ನು ತೊರೆದರು. "ಈಗ ಬೀದಿಗಳಲ್ಲಿ ಹೊರಗಿನವರು ಮತ್ತು ಪೊಲೀಸರು ಇರುತ್ತಾರೆ ಇದರಿಂದ ನನ್ನ ಕುಟುಂಬ ಸದಸ್ಯರು ಭಯಭೀತರಾಗಿದ್ದಾರೆ ಮತ್ತು ನನಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ."
ಹುಸ್ನಹರಾಳ ಅಜ್ಜಿ, ಲಾಲಬಾನು ಬೀಬಿ ಮತ್ತು ತಾಯಿ, ಮಿನಾ ಬೀಬಿ ಅಂತುಮಾ ಬೀಬಿ ಮತ್ತು ನೆರೆಹೊರೆಯ ಇತರ ಮಹಿಳೆಯರೊಂದಿಗೆ ತಮ್ಮ ಅಂಗಳದಲ್ಲಿ ಭತ್ತದ ಒಕ್ಕಣೆ ಮಾಡುತ್ತಿದ್ದರು. ಚಳಿಗಾಲದಲ್ಲಿ ಗ್ರಾಮದ ಮಹಿಳೆಯರು ಈ ಅಕ್ಕಿಯಿಂದ ಹಿಟ್ಟು ತಯಾರಿಸಿ ಮಾರಾಟ ಮಾಡುತ್ತಾರೆ. ಅಂತುಮಾ ಬೀಬಿ ಹೇಳುತ್ತಾರೆ, “ನಮ್ಮ ದೇವಾಂಗಂಜ್‌ನಲ್ಲಿ ಉತ್ತಮ ರಸ್ತೆಗಳಿಲ್ಲ, ಶಾಲೆಯೂ ಇಲ್ಲ, ಆಸ್ಪತ್ರೆಯೂ ಇಲ್ಲ. ಇಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ನಾವು ದಿಯೋಚಾಕ್ಕೆ ಧಾವಿಸಬೇಕು. ಗರ್ಭಿಣಿ ಹೆಣ್ಣುಮಕ್ಕಳಿಗೆ ಇಲ್ಲಿ ಎಷ್ಟು ಕಷ್ಟವಿದೆ ಎಂದು ತಿಳಿಯಲು ನೀವು ಎಂದಾದರೂ ಬಂದಿದ್ದೀರಾ? ಈಗ ಸರ್ಕಾರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ. ಯಾವ ಅಭಿವೃದ್ಧಿ?"
ದೇವಾಂಗಂಜ್‌ನಿಂದ ದಿಯೋಚಾ ಆಸ್ಪತ್ರೆಗೆ ಹೋಗಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ ಎಂದು ಅಂತುಮಾ ಬೀಬಿ ನಮಗೆ ತಿಳಿಸಿದರು. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವು ಪಚಾಮಿಯಲ್ಲಿದೆ. ಅಥವಾ ಮೊಹಮ್ಮದ್ ಬಜಾರ್ ನ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಆ ಆಸ್ಪತ್ರೆಗೂ ತಲುಪಲು ಒಂದು ಗಂಟೆ ಬೇಕು. ಸಮಸ್ಯೆ ಗಂಭೀರವಾಗಿದ್ದರೆ ಸಿಊರಿಯಲ್ಲಿರುವ ಆಸ್ಪತ್ರೆಗೆ ಹೋಗಬೇಕು.
ಅವರ ಗಂಡಂದಿರೆಲ್ಲರೂ ಕಲ್ಲಿನ ಕ್ವಾರಿಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ದೈನಂದಿನ ಕೂಲಿಯಾಗಿ ಸುಮಾರು 500ರಿಂದ 600 ರೂ.ಗಳನ್ನು ಗಳಿಸುತ್ತಾರೆ. ಈ ಆದಾಯದಿಂದ ಕುಟುಂಬವು ಜೀವನ ಸಾಗಿಸುತ್ತದೆ. ಸರ್ಕಾರಿ ಮೂಲಗಳ ಪ್ರಕಾರ, ಗಣಿಗಾರಿಕೆ ಪ್ರದೇಶದಲ್ಲಿ ಸುಮಾರು 3,000 ಕ್ವಾರಿ ಮತ್ತು ಕ್ರಷರ್ ಕಾರ್ಮಿಕರಿದ್ದು, ಅವರಿಗೆ ಭೂಮಿಯ ನಷ್ಟಕ್ಕೆ ಪರಿಹಾರ ನೀಡಬೇಕಾಗಿದೆ.
ಗ್ರಾಮದಿಂದ ಸ್ಥಳಾಂತರಗೊಂಡರೆ ಕಲ್ಲು ಪುಡಿ ಮಾಡಿ ಸಂಪಾದಿಸುತ್ತಿರುವ ಆದಾಯವೂ ನಿಂತು ಹೋಗುತ್ತದೆ ಎಂಬ ಆತಂಕ ಗ್ರಾಮದ ಮಹಿಳೆಯರದ್ದು. ಸರ್ಕಾರದ ಉದ್ಯೋಗ ಭರವಸೆಯ ಬಗ್ಗೆ ಅವರಿಗೆ ಅನುಮಾನವಿದೆ. ಈ ಗ್ರಾಮದಲ್ಲಿ ಸಾಕಷ್ಟು ವಿದ್ಯಾವಂತ ಹುಡುಗ-ಹುಡುಗಿಯರಿದ್ದಾರೆ, ಅವರಿಗೆ ಉದ್ಯೋಗವಿಲ್ಲ.
ತಂಜಿಲಾ ಬೀಬಿ ಭತ್ತವನ್ನು ಒಣಗಿಸುತ್ತಿದ್ದರು. ಅವರ ಕೈಯಲ್ಲಿ ಭತ್ತವನ್ನು ಮೂಸುತ್ತಾ ಬರುವ ಆಡುಗಳನ್ನು ಓಡಿಸಲು ಕೈಯಲ್ಲಿ ಕೋಲು ಇತ್ತು. ನಮ್ಮನ್ನು ಕಂಡವರೇ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ನಮ್ಮೆಡೆಗೆ ಓಡಿ ಬಂದರು. “ನೀವು ಒಂದು ವಿಷಯವನ್ನು ಕೇಳುತ್ತೀರಿ ಮತ್ತು ಇನ್ನೊಂದನ್ನು ಬರೆಯುತ್ತೀರಿ. ನೀವು ನಮ್ಮೊಂದಿಗೆ ಇಂತಹ ಆಟಗಳನ್ನು ಏಕೆ ಆಡಲು ಬರುತ್ತೀರಿ? ನಿಮಗೆ ಹೇಳುತ್ತಿದ್ದೇನೆ, ನಾನು ನನ್ನ ಮನೆಯನ್ನು ಬಿಡುವುದಿಲ್ಲ. ಅದೇ ನಮ್ಮ ಅಂತಿಮ ನಿರ್ಧಾರ. ನಮ್ಮ ಬದುಕನ್ನು ನರಕ ಮಾಡಲು ಪೊಲೀಸರನ್ನು ಕಳುಹಿಸುತ್ತಿದ್ದಾರೆ. ಈಗ ದಿನವೂ ಪತ್ರಕರ್ತರನ್ನು ಕಳುಹಿಸುತ್ತಿದ್ದಾರೆ. ಧ್ವನಿ ಎತ್ತರಿಸುತ್ತಾ, "ನಮಗೆ ಹೇಳಲು ಇರುವುದು ಒಂಧೇ ವಿಷಯ, ಅದು ನಾವು ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ."
2021ರಿಂದ 2022ರವರೆಗಿನ ನನ್ನ ಭೇಟಿಯಲ್ಲಿ ನಾನು ಭೇಟಿಯಾದ ಅನೇಕ ಮಹಿಳೆಯರು ಭೂ ಹಕ್ಕುಗಳ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಅಂದಿನಿಂದ, ಚಳುವಳಿಯು ತನ್ನ ಹೆಚ್ಚಿನ ಆವೇಗವನ್ನು ಕಳೆದುಕೊಂಡಿದೆ, ಆದರೆ ಈ ಪ್ರತಿರೋಧದ ಧ್ವನಿಗಳು ಬಲವಾಗಿ ಉಳಿದಿವೆ. ಈ ಮಹಿಳೆಯರು ಮತ್ತು ಹುಡುಗಿಯರು ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ಮಾತನಾಡುವುದನ್ನು ಮುಂದುವರಿಸಿದ್ದಾರೆ. ನ್ಯಾಯಕ್ಕಾಗಿ ಅವರ ಗರ್ಜನೆಯು ಜಲ ಜಂಗಲ್ ಜಮೀನ್ (ನೀರು, ಅರಣ್ಯ ಮತ್ತು ಭೂಮಿ) ಘೋಷಣೆಯಲ್ಲಿ ಎಂದೆಂದಿಗೂ ಪ್ರತಿಧ್ವನಿಸುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು