ಮನೆ ತನಕ ಬಿಡುವುದಾಗಿ ನಂಬಿಸಿ ಕಾರು ಹತ್ತಿಸಿಕೊಂಡ ಡ್ರೈವರ್‌, ಕಾರನ್ನು ವಿರುದ್ಧ ದಿಕ್ಕಿಗೆ ಓಡಿಸಿ ಹೆದ್ದಾರಿಯಲ್ಲಿ ಯೂ-ಟರ್ನ್‌ ತೆಗೆದುಕೊಂಡ. ಡ್ರೈವರ್‌ ತಿಳಿಯದೆ ದಾರಿತಪ್ಪಿದ್ದಾನೆ ಎಂದು ಭಾವಿಸಿಕೊಂಡ ನೇಹಾಳಿಗೆ, ಎರಡನೇ ಬಾರಿ ಯೂ-ಟರ್ನ್‌ ತೆಗೆದುಕೊಂಡಾಗ ಅನುಮಾನ ಶುರುವಾಯ್ತು. ಮೂರನೇ ಬಾರಿಗೆ ಯೂ-ಟರ್ನ್‌ ತೆಗೆದುಕೊಂಡಾಗ 15 ವರ್ಷ ಪ್ರಾಯದ ಈ ಬಾಲಕಿ ಗಾಬರಿಗೊಂಡು ಅಳುವುದಕ್ಕೆಆರಂಭಿಸಿದಳು, ಕಂಗೆಟ್ಟುಹೋದಳು.

ಏನಾಗುತ್ತಿದೆ ಎಂಬ ಅರಿವಿಲ್ಲದ ನೇಹಾ ಗಾಬರಿಯಿಂದಲೇ ತನ್ನ ಹೆತ್ತವರನ್ನು ನೋಡಬೇಕು ಎಂದು ಕೂಗತೊಡಗಿದಳು. ಕಾರಿನ ಚಾಲಕ ಮತ್ತು ಪಕ್ಕವೇ ಕುಳಿತಿದ್ದ ಮಹಿಳೆ ಅವಳನ್ನು ಚಿಂತೆ ಮಾಡದಂತೆ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು.

ಆದರೆ ಮನಸ್ಸಿನ ಆಳದಲ್ಲಿ, ನೇಹಾಳಿಗೆ ತಾನು ದೊಡ್ಡ ತೊಂದರೆಯಲ್ಲಿ ಸಿಲುಕಿರುವುದು ತಿಳಿದಿತ್ತು. ಮನೆಬಿಟ್ಟು ಹೋಗುವುದು ಅವಳು ವಿವೇಚನೆ ಮಾಡದೆ ತೆಗೆದುಕೊಂಡ ನಿರ್ಧಾರವಾಗಿತ್ತು. ಅದಕ್ಕಾಗಿ ಅವಳು ಪಶ್ಚಾತ್ತಾಪ ಪಡತೊಡಗಿದ್ದಳು.

ವರ್ಷದ ಆರಂಭದಲ್ಲಿ, ಅಂದರೆ ಮೇ 2023ರಲ್ಲಿ, ಹದಿಹರೆಯದ ಈ ಹುಡುಗಿ ತನ್ನ ಹೆಚ್ಚು ಸಮಯವನ್ನು ಫೋನ್‌ನಲ್ಲಿ ಕಳೆಯುತ್ತಿದ್ದಳು. ಪುಸ್ತಕಗಳನ್ನು ಮುಟ್ಟಿಯೇ ನೋಡುತ್ತಿಲ್ಲ ಎಂದು ಬೈಯುತ್ತಿದ್ದ ತನ್ನ ಹೆತ್ತವರೊಂದಿಗೆ ಜಗಳಕ್ಕೆ ಇಳಿಯುತ್ತಿದ್ದಳು. ಒಂದು ದಿನ ಅವರು ನೇಹಾಳ ಫೋನನ್ನು ಕಸಿದುಕೊಂಡ ನಂತರ ಜಗಳ ನಿಂತುಹೋಯ್ತು.

"ನನ್ನ ಅಪ್ಪ - ಅಮ್ಮ ನನ್ನ ಮೊಬೈಲ್ ಫೋನ್ ಕಸಿದುಕೊಂಡಿದ್ದರಿಂದ ತುಂಬಾ ಕೋಪಗೊಂಡಿದ್ದೆ," ಎಂದು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಾಗದೆ ಮೆಲುದನಿಯಲ್ಲಿ ಹೇಳುತ್ತಾಳೆ. "ಹಾಗಾಗಿ, ನಾನು ಅವರನ್ನು ಬಿಟ್ಟುಹೋಗಬೇಕೆಂದು ನಿರ್ಧರಿಸಿದೆ.”

ಒಂದು ದಿನ ಬೆಳಿಗ್ಗೆ 6 ಗಂಟೆಗೆ ಮನೆಯನ್ನು ಬಿಟ್ಟ ನೇಹಾ, ತನ್ನ ನೆರೆಹೊರೆಯ ಕಿರಿದಾದ ಬೀದಿಗಳಲ್ಲಿ ನಡೆದು ಕೊನೆಗೆ ಹೆದ್ದಾರಿಯನ್ನು ತಲುಪಿದಳು. ತನ್ನ ಹೆತ್ತವರ ಮೇಲೆ ಇನ್ನೂ ಕೋಪದಲ್ಲಿದ್ದ ಆಕೆ ತಾನು ತುಂಬಾ ದೂರ ಸಾಗಿ ಬಂದಿದ್ದೇನೆ ಎಂಬ ಅರಿವಾಗುವ ಮೊದಲೇ ಹೆದ್ದಾರಿಯಲ್ಲಿ ಸುಮಾರು 7-8 ಕಿಲೋಮೀಟರ್ ನಡೆದಿದ್ದಳು. ಅಷ್ಟೊತ್ತಿಗಾಗಲೇ ಸೂರ್ಯ ಮೂಡಣದಲ್ಲಿ ಉದಯಿಸಿ ಸಂಚಾರಕ್ಕೆ ಹೊರಟಿದ್ದ. ನೇಹಾಳಿಗೆ ಬಾಯಾರಿಕೆಯಾಗಿತ್ತು, ಆದರೆ ನೀರಿನ ಬಾಟಲಿಯನ್ನು ಖರೀದಿಸಲೂ ಅವಳ ಬಳಿ ಹಣವಿರಲಿಲ್ಲ.

ಅಷ್ಟು ಹೊತ್ತಿಗೆ ಕಪ್ಪು ಸೆಡಾನ್ ಒಂದು ಅವಳ ಮುಂದೆ ಬಂದು ನಿಂತಿತು. "ಒಬ್ಬ ಗಂಡಸು ಕಾರನ್ನು ಓಡಿಸುತ್ತಿದ್ದ, ಹಿಂದೆ ಒಬ್ಬಳು ಮಹಿಳೆ ಕುಳಿತಿದ್ದಳು" ಎಂದು ನೇಹಾ ನೆನಪಿಸಿಕೊಳ್ಳುತ್ತಾಳೆ. ಮಹಿಳೆ ವಿಂಡೋ ಕೆಳಗಿಳಿಸಿ ನೇಹಾಳ ಬಳಿ ಮನೆ ತನಕ ಲಿಫ್ಟ್ ಬೇಕಾ ಎಂದು ಕೇಳಿದಳು. “ಅವರು ಒಳ್ಳೆಯವರಂತೆ ಕಾಣುತ್ತಿದ್ದರು. ನಾನು ಮತ್ತೆ ಹಿಂತಿರುಗಿ ನಡೆಯಲು ತುಂಬಾ ಸುಸ್ತಾಗಿದ್ದೆ ಮತ್ತು ಬಸ್ ಟಿಕೆಟ್‌ಗೆ ನನ್ನ ಬಳಿ ಹಣವೂ ಇರಲಿಲ್ಲ.”

ಇದಕ್ಕೆ ಒಪ್ಪಿಕೊಂಡ ನೇಹಾ ಕಾರು ಹತ್ತಿದಳು. ಕಾರಿನಲ್ಲಿದ್ದ ಏರ್ ಕಂಡಿಷನರ್ ಅವಳಿಗೆ ಆರಾಮ ನೀಡಿತು. ಕರವಸ್ತ್ರದಿಂದ ಅವಳ ಹಣೆಯ ಮೇಲಿದ್ದ ಬೆವರನ್ನು ಒರೆಸಿಕೊಂಡಳು. ಪಕ್ಕದಲ್ಲಿ ಕುಳಿತಿದ್ದ ಮಹಿಳೆ ನೀರಿನ ಬಾಟಲಿಯನ್ನು ಕೊಟ್ಟಳು.

ಆರಾಮವಾಗಿ ಕಾರಿನಲ್ಲಿ ಕುಳಿತಿದ್ದ ನೇಹಾಳಿಗೆ ಆ ಡ್ರೈವರ್‌ ಅವಳ ಮನೆಯಿಂದ ದೂರ ದೂರ ಕಾರನ್ನು ಓಡಿಸುತ್ತಿರುವುದನ್ನು ನೋಡಿದಾಗ ಭಯ ಕಾಡಲು ಶುರುವಾಯ್ತು. ಅವಳು ಕೂಗಾಡಿದಳು, ಪ್ರತಿಭಟಿಸಲು ಪ್ರಯತ್ನಿಸಿದಳು.  ಸುಮಾರು ಒಂದು ಗಂಟೆಯ ನಂತರ ಕಾರು ನಿಂತಿತು. ಅಷ್ಟೊತ್ತಿಗಾಗಲೇ ಅವರು ಭೋಪಾಲ್ ತಲುಪಿದ್ದರು. ನೇಹಾ ಕಿಡ್ನಾಪ್ ಆಗಿದ್ದಳು.

ಕಾಣೆಯಾದ ಮಕ್ಕಳ ಪಟ್ಟಿಯಲ್ಲಿ ಮಧ್ಯಪ್ರದೇಶವು ಸತತ ಅಗ್ರಸ್ಥಾನದಲ್ಲಿದೆ. 2016 ಮತ್ತು 2021ರ ನಡುವೆ, ರಾಜ್ಯದಲ್ಲಿ ಅಧಿಕೃತವಾಗಿ 60,031 ಪ್ರಕರಣಗಳು ದಾಖಲಾಗಿವೆ (ನ್ಯಾಷನಲ್ ಕ್ರೈಮ್ ರಿಪೋರ್ಟ್ಸ್ ಬ್ಯೂರೋ). ಚೈಲ್ಡ್‌ ರೈಟ್ಸ್‌ ಆಂಡ್ ಯು (ಸಿಆರ್‌ವೈ) ಹಾಕಿದ ಆರ್‌ಟಿಐಗೆ ಬಂದ ಉತ್ತರದಲ್ಲಿ 2022ರಲ್ಲಿ 11,717 ಮಕ್ಕಳು ಕಾಣೆಯಾಗಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ. ಅಂದರೆ ಒಂದು ವರ್ಷದಲ್ಲಿ ಸರಾಸರಿ 10,250 ಮಕ್ಕಳು ಕಾಣೆಯಾಗಿದ್ದಾರೆ, ದಿನಕ್ಕೆ 28 ಮಕ್ಕಳು - ಭಾರತದ ಬೇರೆ ರಾಜ್ಯಗಳಿಗಿಂತ ಇದು ಅಧಿಕ.

Madhya Pradesh consistently has the highest numbers of children that go missing in India

ಮಧ್ಯಪ್ರದೇಶ ಇಡೀ ಭಾರತದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಕಾಣೆಯಾಗುತ್ತಿರುವ ರಾಜ್ಯ

ಕಾಣೆಯಾದ ಮಕ್ಕಳಲ್ಲಿ ಶೇಕಡಾ 77 ಮಕ್ಕಳು - 55,073 - ನೇಹಾಳಂತ  ಹುಡುಗಿಯರು. "ಆದರೆ ಕಾಣೆಯಾದ ಮಕ್ಕಳ ಈ ಸಂಖ್ಯೆ ಸಾಂಪ್ರದಾಯಿಕ ಅಂದಾಜಾಗಿದ್ದು, ರಿಮೋಟ್‌ ಪ್ರದೇಶಗಳಲ್ಲಿ ಹಲವಾರು ಪ್ರಕರಣಗಳು ವರದಿಯಾಗುವುದಿಲ್ಲ," ಎಂದು ವಿಕಾಸ್ ಸಂವಾದ್ ಸಮಿತಿ ಎಂಬ ಎನ್‌ಜಿಒನಲ್ಲಿ ಕೆಲಸ ಮಾಡುತ್ತಿರುವ ಭೋಪಾಲ್ ಮೂಲದ ಸಾಮಾಜಿಕ ಕಾರ್ಯಕರ್ತ ಸಚಿನ್ ಜೈನ್ ಹೇಳುತ್ತಾರೆ. ಈ ಸಂಸ್ಥೆ ಮಧ್ಯಪ್ರದೇಶದಲ್ಲಿ ಕಾಣೆಯಾದ ಮಕ್ಕಳ ಡೇಟಾವನ್ನು ಸಂಗ್ರಹಿಸಿ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತದೆ.

ಈ ಮಧ್ಯೆ, ನಗರದ ಹೊರವಲಯದಲ್ಲಿರುವ ಒಂದು ಕೋಣೆಯ ತಮ್ಮ ಗುಡಿಸಲಿನಲ್ಲಿ ನೇಹಾಳ ಹೆತ್ತವರಾದ ಪ್ರೀತಿ ಮತ್ತು ರಮಣ್ ನೆರೆಹೊರೆಯವರ ಮನೆಗಳ ಬಾಗಿಲು ಬಡಿಯುತ್ತಾ, ಸಂಬಂಧಿಕರನ್ನು ಕರೆದುಕೊಂಡು ಮಗಳನ್ನು ಹುಡುಕಲು ಆರಂಭಿಸಿದರು. "ನನಗೆ ತಪ್ಪಿತಸ್ಥ ಭಾವ ಕಾಡಿತು, ನನ್ನನ್ನೇ ನಾನೇ ದೂಷಿಸಿಕೊಂಡೆ," ಎಂದು ಪ್ರೀತಿ ಹೇಳುತ್ತಾರೆ. "ನಾವು ನೆರೆಹೊರೆಯೆಲ್ಲಾ ಓಡಾಡಿದೆವು, ಆದರೆ ಅವಳ ಸುಳಿವೇ ಸಿಗಲಿಲ್ಲ. ಅವಳು ಮಧ್ಯಾಹ್ನದ ಹೊತ್ತಿಗೆ ಮನೆಗೆ ಬರಬಹುದು ಅಂದುಕೊಂಡಿದ್ದೆವು,” ಎಂದು ಅವರು ಹೇಳುತ್ತಾರೆ. ಮರುದಿನವೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು.

ಈ ದಂಪತಿ ಭೋಪಾಲ್ ಸುತ್ತಮುತ್ತ ಇರುವ ಬೇರೆಬೇರೆ ಕಾರ್ಖಾನೆಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿದು, ತಿಂಗಳಿಗೆ 8,000-10,000 ರುಪಾಯಿ ಸಂಪಾದಿಸುತ್ತಾರೆ. "ಎಷ್ಟೇ ಖರ್ಚಾದರೂ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಬಯಸಿದ್ದೇವೆ. ಇದರಿಂದ ಅವರಿಗೆ ಒಳ್ಳೆಯ ಜಾಬ್‌ ಸಿಗಬಹುದು,” ಎಂದು ಪ್ರೀತಿ ಹೇಳುತ್ತಾರೆ.

ಇವರು ತಮ್ಮ ಗಂಡನ ಜೊತೆಗೆ 20 ವರ್ಷಗಳ ಹಿಂದೆ ಉತ್ತರ ಪ್ರದೇಶದಿಂದ ಬಂದ ಭೂರಹಿತ ವಲಸಿಗರು; ಇತರೆ ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದವರು. "ಕಾರ್ಮಿಕರೆಂಬ ಕಾರಣಕ್ಕೆ ನಿಮ್ಮ ಮಕ್ಕಳು ಅವಮಾನ ಮತ್ತು ಶೋಷಣೆ ಅನುಭವಿಸುವುದನ್ನು ನೋಡಲು ನಿಮಗೆ ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಅವಳು ತುಂಬಾ ಓದಲಿ ಎಂದು ಸ್ವಲ್ಪ ಕಟ್ಟುನಿಟ್ಟಾಗಿ ಬೆಳೆಸಿದ್ದೆವು,” ಎನ್ನುತ್ತಾರೆ ಪ್ರೀತಿ.

ನೇಹಾಳಂತೆ ತಮ್ಮ ಹೆತ್ತವರೊಂದಿಗೆ ಜಗಳವಾಡಿ ಮನೆ ಬಿಟ್ಟುಹೋಗುವ, ಪ್ರೀತಿಯಲ್ಲಿ ಬಿದ್ದು ಪಲಾಯನ ಮಾಡುವ ಹದಿಹರೆಯದವರದ್ದು ಕಾಣೆಯಾದ ಮಕ್ಕಳಲ್ಲಿ ಒಂದು ವರ್ಗ. ವೇಶ್ಯಾವಾಟಿಕೆಗೆ ಅಥವಾ ಕಾರ್ಮಿಕರಾಗಿ ಬಳಸಲು ಮಾಡುವ ಈ ಮಾನವ ಕಳ್ಳಸಾಗಣೆ ಅತ್ಯಂತ ಕರಾಳ. “ಗುತ್ತಿಗೆದಾರರು ಮಕ್ಕಳನ್ನು ಕೆಲಸಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುತ್ತಾರೆ. ಇದರ ಹಿಂದೆ ಬಾಲಕಾರ್ಮಿಕರಾಗಿ ಬಳಸಲು ಮಕ್ಕಳ ಕಳ್ಳಸಾಗಾಟ ಮಾಡುವ ಒಂದು ದೊಡ್ಡ ಜಾಲವಿದೆ,” ಎಂದು ಜೈನ್ ಹೇಳುತ್ತಾರೆ.

*****

ನೇಹಾಳನ್ನು ಭೋಪಾಲ್‌ನ ಫ್ಲ್ಯಾಟೊಂದಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತು ಯಾರನ್ನಾದರು ಸಂಪರ್ಕಿಸಲೂ ಬಿಡಲಿಲ್ಲ. ಆ ಜೋಡಿ ತಮ್ಮ ನೆರೆಹೊರೆಯವರಿಗೆ ನೇಹಾಳನ್ನು ತಮ್ಮ ಸೋದರ ಸಂಬಂಧಿಯ ಮಗಳು ಎಂದು ಪರಿಚಯಿಸಿದ್ದರು. ಮತ್ತು ಅವಳನ್ನು ಸನಾ ಎಂದು ಕರೆಯಲು ಪ್ರಾರಂಭಿಸಿದರು; ಈ ಹೊಸ ಹೆಸರಿನಿಂದ ಕರೆದಾಗ ಪ್ರತಿಕ್ರಿಯೆ ನೀಡದಿದ್ದಾಗ ಅವಳಿಗೆ ಹೊಡೆಯುತ್ತಿದ್ದರು.

ಮನೆ ಬಿಟ್ಟು ಓಡಿಹೋದ ಈ ಬಾಲಕಿಯನ್ನು ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಿಂಸಿಸಿದರು. ದಂಪತಿಗಳು ಅವಳಿಗೆ ಎಂದೂ ಮುಗಿಯದ ಮನೆಕೆಲಸಗಳನ್ನು ಮಾಡಲು, ಕೊಠಡಿಗಳನ್ನು ಸ್ವಚ್ಛಗೊಳಿಸಲು ಮತ್ತು ಪಾತ್ರೆಗಳನ್ನು ತೊಳೆಯಲು ಹಚ್ಚುತ್ತಿದ್ದರು. ಕೊನೆಗೊಮ್ಮೆ ತಪ್ಪಿಸಿಕೊಳ್ಳುವ ಧೈರ್ಯ ಮಾಡಿದಾಗ, ಅವಳನ್ನು ಹಿಡಿದು ಚಿತ್ರಹಿಂಸೆ ನೀಡಿದರು. "ನಾನು ಮನೆಗೆ ಮರಳುವ ಭರವಸೆಯನ್ನು ಬಿಟ್ಟೇ ಬಿಟ್ಟಿದ್ದೆ," ಎಂದು ಅವಳು ನೆನಪಿಸಿಕೊಳ್ಳುತ್ತಾಳೆ. "ಪೊಲೀಸರು ನನ್ನನ್ನು ರಕ್ಷಿಸಿದಾಗ ನನಗೆ ನಂಬುವುದಕ್ಕೇ ಸಾಧ್ಯವಿರಲಿಲ್ಲ," ಎನ್ನುತ್ತಾಳೆ ನೇಹಾ.

ನೇಹಾ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ಆಕೆಯನ್ನು ಪತ್ತೆಹಚ್ಚಿದರು. ಆದರೆ ಭೋಪಾಲ್‌ನಲ್ಲಿ ಆಕೆಯನ್ನು ಹುಡುಕಲು ಅವರಿಗೆ ಕೆಲವು ದಿನಗಳು ಬೇಕಾದವು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಸ್ಕೋ) ಕಾಯಿದೆ, 2012 ಮತ್ತು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ರ ಅಡಿಯಲ್ಲಿ ಆ ಜೋಡಿಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಂಧಿಸಲಾಯಿತು.

ಅವಳು ಮರಳಿ ಮನೆಗೆ ಬಂದಾಗ ಪೋಷಕರು ಸಮಾಧಾನದ ನಿಟ್ಟುಸಿರೆಳೆದರು. "ನಾವು ಪೊಲೀಸರಿಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇವೆ," ಎಂದು ಪ್ರೀತಿ ಹೇಳುತ್ತಾರೆ.

PHOTO • Priyanka Borar

ನೇಹಾಳಂತೆ ತಮ್ಮ ಹೆತ್ತವರೊಂದಿಗೆ ಜಗಳವಾಡಿ ಮನೆ ಬಿಟ್ಟುಹೋಗುವ, ಪ್ರೀತಿಯಲ್ಲಿ ಬಿದ್ದು ಪಲಾಯನ ಮಾಡುವ ಹದಿಹರೆಯದವರದ್ದು ಕಾಣೆಯಾದ ಮಕ್ಕಳಲ್ಲಿ ಒಂದು ವರ್ಗ. ವೇಶ್ಯಾವಾಟಿಕೆಗೆ ಅಥವಾ ಕಾರ್ಮಿಕರಾಗಿ ಬಳಸಲು ಮಾಡುವ ಈ ಮಾನವ ಕಳ್ಳಸಾಗಣೆ ಅತ್ಯಂತ ಕರಾಳ

ನೇಹಾಳ ಕಿಡ್ನ್ಯಾಪ್‌ ಆದಾಗ ಅದರ ಬೆನ್ನುಹತ್ತಿದ ಪೋಲೀಸರಿಂದ ರಕ್ಷಿಸಲ್ಪಟ್ಟಿದ್ದು ಆಕೆಯ ಅದೃಷ್ವವೇ ಸರಿ, ಆದರೆ ಇಂತಹ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಎಂದು ಜೈನ್ ಹೇಳುತ್ತಾರೆ. "ಇದು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಮಾತ್ರ ಅಲ್ಲ. ಇದೊಂದು ಸಾಮಾಜಿಕ ಪಿಡುಗು. ಇಂದಿನ ಕಾಲದ ಮಕ್ಕಳ ಮತ್ತು ಹದಿಹರೆಯದವರ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಸವಾಲುಗಳನ್ನು ನಿರ್ವಹಿಸಲು ಸಮಾಜ ಸೋತಿದೆ,” ಎಂದು ಅವರು ಹೇಳುತ್ತಾರೆ.

ಕಳೆದ ಏಳು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ 70,000ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ. ರಾಜ್ಯದ ಪೊಲೀಸ್‌ ಇಲಾಖೆ ಪ್ರತಿ ವರ್ಷ ಶೇಕಡಾ 60-65ರಷ್ಟು ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಒಂದು ಮಗು ಕಾಣೆಯಾದರೂ, ಅದೇ ತುಂಬಾ ದೊಡ್ಡದು. ಪ್ರಸ್ತುತ 11,000ಕ್ಕೂ ಹೆಚ್ಚು ಮಕ್ಕಳು ಅವರು ಬಯಸಿದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಪೋಷಕರು ಮತ್ತು ಅವರ ಕುಟುಂಬದವರು ತಮ್ಮ ಮಗು ಯಾವುದಾದರೊಂದು ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗಬಹುದು ಎಂಬ ಭಯ ಮತ್ತು ಆತಂಕದಿಂದಲೇ ಬದುಕುತ್ತಿದ್ದಾರೆ.

ಲಕ್ಷ್ಮಿ ಮತ್ತು ನಿತೀಶ್ ತಮ್ಮ 14 ವರ್ಷದ ಮಗಳು ಪೂಜಾ ಆಗಸ್ಟ್ ತಿಂಗಳ ಮಧ್ಯದಲ್ಲಿ ನಾಪತ್ತೆಯಾದಾಗಿನಿಂದ ತಮ್ಮ ತಲೆ ತುಂಬಾ ಬೇರೆ ಬೇರೆ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸರಿಗೆ ಬಾಲಕಿಯನ್ನು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ ಮತ್ತು ಈ ಕೇಸ್‌ ಇನ್ನೂ ಓಪನ್‌ ಆಗಿಯೇ ಇದೆ.

"ದಿಮಾಗ್ ಖರಾಬ್ ಹೋ ಗಯಾ [ತಲೆ ಹಾಳಾಗಿ ಹೋಗಿದೆ]," ಎಂದು ನಿತೀಶ್ ಹೇಳುತ್ತಾರೆ. "ನಾವು ಸಾಧ್ಯವಾದಷ್ಟು ಪಾಸಿಟಿವ್ ಆಲೋಚನೆಗಳನ್ನು ಮಾಡಲು ಪ್ರಯತ್ನಿಸುತ್ತೇವೆ. ಆದರೆ ನಮ್ಮ ಮಗಳು ಏನು ಮಾಡುತ್ತಿದ್ದಾಳೋ ಎಂದು ಚಿಂತಿಸದಿರಲು ಸಾಧ್ಯವೇ ಇಲ್ಲ,” ಎನ್ನುತ್ತಾರೆ ಅವರು.‌

ಒಂದು ದಿನ ಬೆಳಿಗ್ಗೆ ಶಾಲೆಗೆ ಹೋದ ಪೂಜಾ ಮರಳಿ ಮನೆಗೆ ಹಿಂತಿರುಗಲೇ ಇಲ್ಲ. ಸಿಸಿಟಿವಿ ಫೂಟೇಜ್ ಶಾಲೆಗೆ ಹೋಗುತ್ತಿರುವ ಪೂಜಾ ಅರ್ಧ ದಾರಿಯವರೆಗೆ ನಡೆದಿರುವುದನ್ನು ತೋರಿಸುತ್ತಿತ್ತು. ಆದರೆ ನಂತರ ಇದ್ದಕ್ಕಿದ್ದಂತೆ ಅವಳು ಕಣ್ಮರೆಯಾದಳು. ಯಾವತ್ತೂ ಫೋನನ್ನು ತೆಗೆದುಕೊಂಡು ಹೋಗಲು ಮರೆಯದ ಅವಳು ಆ ದಿನ ಮನೆಯಲ್ಲಿಯೇ ಬಿಟ್ಟು ಹೋಗಿರುವುದು ತಂದೆ ತಾಯಿಗೆ ಅನುಮಾನ ಬರುವಂತೆ ಮಾಡಿತ್ತು. "ಪೊಲೀಸರು ಅವಳ ಕಾಲ್ ರೆಕಾರ್ಡ್‌ಗಳನ್ನು ನೋಡಿದ ಮೇಲೆ ನಿರಂತರವಾಗಿ ಹುಡುಗನೊಬ್ಬನೊಂದಿಗೆ ಅವಳು ಮಾತನಾಡುತ್ತಿದ್ದದ್ದು ತಿಳಿಯಿತು," ಎಂದು ನಿತೀಶ್ ಹೇಳುತ್ತಾರೆ. “ಅವಳು ಫೋನ್‌ನಲ್ಲಿಯೇ ಮುಳುಗಿರುತ್ತಿದ್ದಳು, ಆದರೆ ನಾವು ಅವಳ ಪ್ರೈವೆಸಿಯನ್ನು ಗೌರವಿಸುತ್ತೇವೆ. ಅವಳದ್ದು ಸ್ನೇಹಿತರೊಂದಿಗೆ ಚಾಟ್ ಮಾಡುವ ವಯಸ್ಸು ಎಂದೇ ನಾವು ಭಾವಿಸಿದ್ದೆವು,” ಎಂದು 49 ವರ್ಷದ ಆ ತಂದೆ ಹೇಳುತ್ತಾರೆ.

ಪೂಜಾ ಫೋನಿನಲ್ಲಿ ಮಾತನಾಡುತ್ತಿದ್ದ ಆ ಹುಡುಗ ಅವಳದೇ ವಯಸ್ಸಿನವನು ಮತ್ತು ಉತ್ತರ ಪ್ರದೇಶದ ಹಳ್ಳಿಯೊಂದರ ತಿಳಿದ ವ್ಯಕ್ತಿಯೇ ಆಗಿದ್ದ. ಪೊಲೀಸರು ಈ ಹುಡುಗ ಮತ್ತು ಪೂಜಾಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ, ಆದರೆ ಇಬ್ಬರೂ ಪತ್ತೆಯಾಗಿಲ್ಲ.

ನಿತೀಶ್ ಮತ್ತು ಲಕ್ಷ್ಮಿ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಈಗ ನಲವತ್ತರ ಹರೆಯದಲ್ಲಿರುವ ಈ ಇಬ್ಬರೂ, ಉದ್ಯೋಗಕ್ಕಾಗಿ ಸುಮಾರು 30 ವರ್ಷಗಳ ಹಿಂದೆ ಪಶ್ಚಿಮ ಬಿಹಾರದ ಹಳ್ಳಿಯೊಂದರಿಂದ ವಲಸೆ ಬಂದವರು. "ಇಲ್ಲಿಗೆ ಹಿಂದೆ ವಲಸೆ ಬಂದ ಯಾರೋ ಒಬ್ಬರು ನಮಗೆ ಗೊತ್ತಿದ್ದರು. ಅವರು ಕೆಲಸ ಹುಡುಕಲು ನಮಗೆ ಸಲಹೆ ನೀಡಿದರು," ಎಂದು ನಿತೀಶ್ ಹೇಳುತ್ತಾರೆ.

ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಈ ದಂಪತಿಗಳು ಗುಡಿಸಲಿನಿಂದ ಕಾಂಕ್ರೀಟ್ ಮನೆಯಲ್ಲಿ ಬದುಕು ಕಟ್ಟಿಕೊಳ್ಳಲು ಮತ್ತು ತಮ್ಮ ಮಕ್ಕಳ ಶಿಕ್ಷಣ ಹಾಗೂ ಅವರ ಮದುವೆಯ ಖರ್ಚಿಗೆ ದುಡಿದದ್ದನ್ನು ಉಳಿತಾಯ ಮಾಡುತ್ತಿದ್ದಾರೆ. ದಿನದಲ್ಲಿ 12-14 ಗಂಟೆ ದುಡಿಯುವ ಇವರು ತಿಂಗಳಿಗೆ 9,000 ರೂ ಸಂಪಾದಿಸುತ್ತಿದ್ದಾರೆ. ಈ ಕೆಲಸದ ಒತ್ತಡ ತಮ್ಮ ಮಗಳ ಮೇಲೆ ನಿಗಾ ಇಡದಂತೆ ಮಾಡಿತು ಎಂದು ನಿತೀಶ್ ಹೇಳುತ್ತಾರೆ. "ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕೊಡಲು ಸಿಕ್ಕಸಿಕ್ಕ ಕೆಲಸವನ್ನೆಲ್ಲಾ ಮಾಡುತ್ತಿದ್ದೇವೆ. ಅವಳಿಗೆ ನಮ್ಮೊಂದಿಗೆ ಈ ಬಗ್ಗೆ ಮಾತನಾಡಲು ಸಾಧ್ಯವಿಲ್ಲದಂತಾಗಿ ಹೆತ್ತವರಾಗಿ ನಾವು ವಿಫಲರಾಗಿದ್ದೇವೆಯೇ?” ಎಂದು ಪ್ರಶ್ನಿಸಿಕೊಳ್ಳುತ್ತಾರೆ.

ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಪೂಜಾ ಉನ್ನತ ಶಿಕ್ಷಣ ಪಡೆಯುವ ಕನಸನ್ನು ಹೊಂದಿದ್ದಳು. ಅವಳ ದೊಡ್ಡಕ್ಕ ತಮ್ಮ 20 ಮತ್ತು 22 ನೇ ವಯಸ್ಸಿನಲ್ಲಿಯೇ ಮದುವೆಯಾದರು. ಆದರೆ ಅವರಿಗೆ ಪೊಲೀಸ್ ಅಧಿಕಾರಿಯಾಗುವ ಕನಸಿತ್ತು. ಇವಳು ತನ್ನ ಕನಸುಗಳಿಗೆ ಎಳ್ಳು ನೀರು ಬಿಟ್ಟಿದ್ದಾಳೋ, ಆ ಅವಕಾಶ ಕಳೆದುಕೊಳ್ಳುತ್ತಾಳೋ ಏನೋ ಎಂದು ಹೆತ್ತವರು ಆತಂಕ ಪಡುತ್ತಿದ್ದಾರೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ನಾವು ನಡೆದುಕೊಂಡಿದ್ದೇವೆಯೇ ಮತ್ತು ಮತ್ತೆ ಅವಳನ್ನು ನೋಡುತ್ತೇವೋ ಇಲ್ಲವೋ ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ.

PHOTO • Priyanka Borar

ಇನ್ನು ಮುಂದೆ ಮಗಳನ್ನು ನೋಡುತ್ತೇವೋ ಇಲ್ಲವೋ ಎಂದು ಪೂಜಾಳ ಹೆತ್ತವರು ಅನುಮಾನ ಪಡುತ್ತಿದ್ದಾರೆ

"ಹೆಣ್ಣುಮಕ್ಕಳು ಕಾಣೆಯಾದಾಗ ಏನಾಗುತ್ತದೆ ಎಂಬ ಬಗ್ಗೆ ಇರುವ ಭಯಾನಕ ಕಥೆಗಳು ಹಲವಾರು ಸುದ್ದಿ ಲೇಖನಗಳಲ್ಲಿ ಬಂದಿವೆ," ಎನ್ನುವ ಲಕ್ಷ್ಮಿ ತಮ್ಮ ಮಗಳು ನಾಪತ್ತೆಯಾದಾಗಿನಿಂದ ಸರಿಯಾಗಿ ನಿದ್ದೆ ಮಾಡಿಲ್ಲ. "ನನಗೆ ಈ ರೀತಿಯ ಭಯಾನಕ ಆಲೋಚನೆಗಳು ಬರುತ್ತಿವೆ, ಅವನ್ನು ನಿಲ್ಲಿಸಲು ಸಾಧ್ಯವಿಲ್ಲ. ಇಡೀ ಮನೆಯಲ್ಲಿ ಸೂತಕದ ವಾತಾವರಣವಿದೆ,” ಎಂದು ಅವರು ಹೇಳುತ್ತಾರೆ.

ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೋಜರ್‌ನ ಪ್ರಕಾರ, ಕಾಣೆಯಾದ ಅಪ್ರಾಪ್ತ ವಯಸ್ಕರನ್ನು ನಾಲ್ಕು ತಿಂಗಳಲ್ಲಿ ಪತ್ತೆಹಚ್ಚಲಾಗದಿದ್ದರೆ, ಪ್ರಕರಣವನ್ನು ಜಿಲ್ಲೆಯ ಮಾನವ ಕಳ್ಳಸಾಗಣೆ ವಿರೋಧಿ ಘಟಕಕ್ಕೆ (ಎಎಚ್‌ಟಿಯು) ವರ್ಗಾಯಿಸಬೇಕಾಗುತ್ತದೆ.

ಈ ಘಟಕಕ್ಕೆ ವರ್ಗಾಯಿಸಿದ ನಂತರ, ಹೆಚ್ಚು ತೀವ್ರವಾಗಿ, ಗಂಭೀರವಾಗಿ ಮತ್ತು ಸಂಪೂರ್ಣ ಗಮನವಿಟ್ಟು ತನಿಖೆ ಮಾಡಲಾಗುತ್ತದೆ ಎಂದು ಜೈನ್ ಹೇಳುತ್ತಾರೆ. "ಆದರೆ ರಾಜ್ಯ ಯಾವಾಗಲೂ ಇದರಿಂದ ಅಡಗಿಕೊಳ್ಳುತ್ತದೆ, ಏಕೆಂದರೆ ಕಳ್ಳಸಾಗಣೆಯ ಸಂಖ್ಯೆ ಹೆಚ್ಚುತ್ತಿರುವುದು ಕೆಟ್ಟ ಪಿಆರ್ ಎಂದು ಅದು ನಂಬಿದೆ," ಎನ್ನುತ್ತಾರೆ ಅವರು. ಈ ರೀತಿಯ ಕರಾಳ ಪ್ರಕರಣಗಳನ್ನು ಸ್ಥಳೀಯ ಪೋಲೀಸ್‌ರೇ ಸಮಾಧಿ ಮಾಡುತ್ತಾರೆ ಮತ್ತು ಕಾಣೆಯಾದ ಮಗುವನ್ನು ಕಂಡುಹಿಡಿಯುವಲ್ಲಿ ತಡವಾಗುತ್ತವೆ.

*****

ಕಾಣೆಯಾದ ಮಕ್ಕಳು ಪತ್ತೆಯಾದ ನಂತರ ಆ ಆಘಾತಕಾರಿ ಅನುಭವದಿಂದ ಹೊರಬರಲು ಅವರಿಗೆ ಆಪ್ತಸಮಾಲೋಚನೆ ವ್ಯವಸ್ಥೆ ಕಲ್ಪಿಸುವುದು ಬಹಳ ಮುಖ್ಯ. ಅವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ.

ಭೋಪಾಲ್ ಮೂಲದ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ರೇಖಾ ಶ್ರೀಧರ್ ಅವರು ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೃತ್ತಿಪರ ಮನಶ್ಶಾಸ್ತ್ರಜ್ಞರೇ ಇಲ್ಲ, ಹೆಚ್ಚಿನವರು ನಗರ ಪ್ರದೇಶಗಳಲ್ಲಿದ್ದಾರೆ ಎಂದು ಹೇಳುತ್ತಾರೆ. "ಅಂದರೆ ಆಘಾತಕ್ಕೊಳಗಾದ ರಿಮೋಟ್‌ ಏರಿಯಾಗಳ ಮಕ್ಕಳಿಗೆ ತೀರಾ ಅಗತ್ಯವಾಗಿ ಬೇಕಾದ ಕೌನ್ಸೆಲಿಂಗ್ ಸೆಷನ್‌ಗಳೇ ಸಿಗುತ್ತಿಲ್ಲ,” ಎಂದು ಅವರು ಹೇಳುತ್ತಾರೆ. "ಪೋಷಕರು ತಮ್ಮ ಮನೆಯಲ್ಲಿಯೇ ಇದನ್ನು ನಿಭಾಯಿಸಲು ಸಿದ್ಧರಾಗಿಲ್ಲ, ಏಕೆಂದರೆ ಅವರು ತಮ್ಮದೇ ಆರ್ಥಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ಸಾಮಾನ್ಯ ಅರಿವೂ ಅವರಲ್ಲಿಲ್ಲ,” ಎನ್ನುತ್ತಾರೆ ರೇಖಾ ಶ್ರೀಧರ್.

ಆಪ್ತ ಸಮಾಲೋಚನೆಯ ಮಹತ್ವವನ್ನು ಒತ್ತಿ ಹೇಳುವ ಶ್ರೀಧರ್, "ಮಕ್ಕಳು ಖಿನ್ನತೆಗೆ ಒಳಗಾಗಬಹುದು ಮತ್ತು ಆತ್ಮಹತ್ಯೆಯ ಪ್ರವೃತ್ತಿಯನ್ನೂ ಬೆಳೆಸಿಕೊಳ್ಳಬಹುದು. ಇದು ಅವರ ಮನಸ್ಸಿನ ಮೇಲೆ ದೀರ್ಘಾವಧಿಯ ಪ್ರಭಾವವನ್ನು ಬೀರಬಹುದು ಮತ್ತು ಭವಿಷ್ಯದಲ್ಲಿ ಅವರು ಕಟ್ಟಿಕೊಳ್ಳುವ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು," ಎನ್ನುತ್ತಾರೆ.

ನೇಹಾ ಮನೆಗೆ ಬಂದು ಈಗ ಸುಮಾರು ಐದು ತಿಂಗಳಾಗಿದೆ. ಅಂದಿನಿಂದ ಅವಳು ನಾಲ್ಕರಿಂದ ಐದು ಕೌನ್ಸೆಲಿಂಗ್ ಸೆಷನ್‌ಗಳನ್ನು ಪಡೆದಿದ್ದಾಳೆ, ಆದರೆ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈಗ ತಾನು ಮನೆಯಲ್ಲಿ ಸುರಕ್ಷಿತವಾಗಿದ್ದೇನೆ ಎಂಬುದನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಳು. “ಆ 17 ದಿನಗಳು ಎಂದೆಂದಿಗೂ ಹಾಗೆಯೇ ಇರುತ್ತದೆಯೋ ಎಂಬಂತೆ ಭಾಸವಾಗುತ್ತಿದ್ದು,” ಎನ್ನುತ್ತಾಳೆ ನೇಹಾ.

ಅವಳು ಮತ್ತೆ ಶಾಲೆಗೆ ಹೋಗಲು ಆರಂಭಿಸಿದ್ದಾಳೆ, ಆದರೆ ಒಬ್ಬಳೇ ಹೋಗಲು ಅವಳಲ್ಲಿ ಆತ್ಮವಿಶ್ವಾಸವಿಲ್ಲ. ಅವಳ ಸಹೋದರ ಪ್ರತಿದಿನ ಕರೆದುಕೊಂಡು ಹೋಗಿ ಬಿಟ್ಟುಬರುತ್ತಾನೆ. ಸದಾ ಎಲ್ಲರೊಂದಿಗೆ ಮಾತನಾಡುತ್ತಾ ಲವಲವಿಕೆಯಿಂದ ಇದ್ದ ನೇಹಾ ಈಗ ಹೊಸಬರನ್ನು ಭೇಟಿಯಾಗಲು, ಕಣ್ಣಲ್ಲಿ ಕಣ್ಣಿಟ್ಟು ನೋಡಲು ಭಯಪಡುತ್ತಿದ್ದಾಳೆ.

ಈ ಕುಟುಂಬ ಅಡುಗೆಮನೆ ಸಹಿತ ಒಂದು ಕೋಣೆಯ, ಟಿನ್‌ ಮುಚ್ಚಿದ ಇಟ್ಟಿಗೆಯ ಮನೆಯಲ್ಲಿ ವಾಸಿಸುತ್ತಿದೆ. ಅಲ್ಲಿ ಅವರೆಲ್ಲರೂ ನೆಲದ ಮೇಲೆ ಜೊತೆಯಾಗಿ ಮಲಗುತ್ತಾರೆ. ಅವರಿಗೆ ಆ ಅತಂಕದ ನೆನಪುಗಳು ಮತ್ತೆ ಮತ್ತೆ ಕಾಡುತ್ತಿವೆ. "ಅವಳು ಮನೆಗೆ  ಹಿಂದಿರುಗಿದ ಮೇಲೂ ನೆಮ್ಮದಿಯಾಗಿ ಎಂದಿಗೂ ಮಲಗಿಲ್ಲ," ಎಂದು ಪ್ರೀತಿ ಹೇಳುತ್ತಾರೆ. “ಅವಳ ಪಕ್ಕದಲ್ಲಿ ಯಾರಾದರೂ ನಿದ್ರೆಗೆ ಜಾರಿದರೆ, ಮಧ್ಯರಾತ್ರಿಯಲ್ಲಿ ಎದ್ದು ಸಹಾಯಕ್ಕಾಗಿ ಅಳುತ್ತಾಳೆ. ಅವಳನ್ನು ಸಮಧಾನ ಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗುತ್ತದೆ,” ಎನ್ನುತ್ತಾರೆ ಅವರು.

ಕಥೆಯಲ್ಲಿ ಉಲ್ಲೇಖಿಸಲಾದ ಅಪ್ರಾಪ್ತರ ಗುರುತನ್ನು ಕಾಪಾಡಲು ಎಲ್ಲರ ಹೆಸರುಗಳನ್ನು ಬದಲಾಯಿಸಲಾಗಿದೆ.

ಅನುವಾದ: ಚರಣ್‌ ಐವರ್ನಾಡು

Parth M.N.

پارتھ ایم این ۲۰۱۷ کے پاری فیلو اور ایک آزاد صحافی ہیں جو مختلف نیوز ویب سائٹس کے لیے رپورٹنگ کرتے ہیں۔ انہیں کرکٹ اور سفر کرنا پسند ہے۔

کے ذریعہ دیگر اسٹوریز Parth M.N.
Illustration : Priyanka Borar

پرینکا بورار نئے میڈیا کی ایک آرٹسٹ ہیں جو معنی اور اظہار کی نئی شکلوں کو تلاش کرنے کے لیے تکنیک کا تجربہ کر رہی ہیں۔ وہ سیکھنے اور کھیلنے کے لیے تجربات کو ڈیزائن کرتی ہیں، باہم مربوط میڈیا کے ساتھ ہاتھ آزماتی ہیں، اور روایتی قلم اور کاغذ کے ساتھ بھی آسانی محسوس کرتی ہیں۔

کے ذریعہ دیگر اسٹوریز Priyanka Borar
Editor : PARI Desk

پاری ڈیسک ہمارے ادارتی کام کا بنیادی مرکز ہے۔ یہ ٹیم پورے ملک میں پھیلے نامہ نگاروں، محققین، فوٹوگرافرز، فلم سازوں اور ترجمہ نگاروں کے ساتھ مل کر کام کرتی ہے۔ ڈیسک پر موجود ہماری یہ ٹیم پاری کے ذریعہ شائع کردہ متن، ویڈیو، آڈیو اور تحقیقی رپورٹوں کی اشاعت میں مدد کرتی ہے اور ان کا بندوبست کرتی ہے۔

کے ذریعہ دیگر اسٹوریز PARI Desk
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad