ನಾನು ನಾಲ್ಕನೇ ದಿನ ಅಲ್ಲಿಗೆ ತಲುಪಿದ್ದೆ; ಅಲ್ಲಿಗೆ ತಲುಪುವಾಗ ಮಧ್ಯಾಹ್ನವಾಗುವುದರಲ್ಲಿತ್ತು.

ಚೆನ್ನೈಯಿಂದ ವಯನಾಡಿಗೆ ಸ್ವಯಂಸೇವಕರ ತಂಡವೊಂದರ ಜೊತೆ ಹೊರಟಿದ್ದೆ. ಬಸ್ಸುಗಳಿರದ ಕಾರಣ ಅಪರಿಚಿರಿಂದ ಲಿಫ್ಟ್‌ ಪಡೆಯಬೇಕಾಯಿತು.

ದುರಂತ ನಡೆದ ಸ್ಥಳವು ಯುದ್ಧಭೂಮಿಯಂತಿತ್ತು. ಆಂಬುಲೆನ್ಸ್‌ಗಳು ಒಂದೇ ಸಮನೇ ಬಂದು ಹೋಗುತ್ತಿದ್ದವು. ಜನರು ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಹೆಣಗಳನ್ನು ಹುಡುಕುವುದರಲ್ಲಿ ನಿರತರಾಗಿದ್ದರು. ಚೂರಮಲಾ, ಅಟ್ಟಮಲಾ ಮತ್ತು ಮುಂಡಕ್ಕೈ ಪಟ್ಟಣಗಳು ಹೇಳ ಹೆಸರಿಲ್ಲದಂತಾಗಿದ್ದವು. ಅಲ್ಲಿ ಜನಜೀವನ ಇದ್ದ ಕುರುಹುಗಳೇ ಇರಲಿಲ್ಲ. ಅಲ್ಲಿನ ನಿವಾಸಿಗಳು ಯಾವ ಮಟ್ಟಕ್ಕೆ ಕುಸಿದು ಹೋಗಿದ್ದರೆಂದರೆ ಅವರಿಗೆ ತಮ್ಮ ಪೀತಿಪಾತ್ರರ ದೇಹವನ್ನು ಗುರುತಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.

ನದಿಯ ದಡದಲ್ಲಿ ಅವಶೇಷಗಳು ಮತ್ತು ಮೃತ ದೇಹಗಳು ಬಿದ್ದಿದ್ದವು. ಪರಿಹಾರ ಕಾರ್ಯಕರ್ತರು ಹಾಗೂ ಕುಟುಂಬಗಳು ಮಣ್ಣಿನಡಿ ಹೂತು ಹೋಗುವ ಭಯದಿಂದ ಕೋಲು ಹಿಡಿದುಕೊಂಡೇ ಹುಡುಕಾಟದಲ್ಲಿ ತೊಡಗಿದ್ದರು. ನನ್ನ ಕಾಲು ಮಣ್ಣಿನಲ್ಲಿ ಹೂತುಕೊಂಡಿತ್ತು. ದೇಹಗಳನ್ನು ಗುರುತು ಹಿಡಿಯುವುದು ಬಹಳ ಕಷ್ಟವಿತ್ತು. ದೇಹದ ಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪ್ರಕೃತಿಯೊಂದಿಗೆ ನನಗೆ ಬಹಳ ಆಪ್ತ ಸಂಬಂಧವಿದೆ. ಆದರೆ ಇಲ್ಲಿನ ದೃಶ್ಯಗಳು ನನ್ನನ್ನು ದಂಗಬಡಿಸಿದವು.

ಭಾಷೆಯ ಸಮಸ್ಯೆಯಿಂದಾಗಿ ನನಗೆ ಅಲ್ಲಿನ ಜನರ ಭಾವನೆಗಳಷ್ಟೇ ಅರ್ಥವಾಗುತ್ತಿದ್ದವು. ನಾನು ಅವರನ್ನು ಡಿಸ್ಟರ್ಬ್‌ ಮಾಡಲು ಹೋಗಲಿಲ್ಲ. ನಾನು ಇಲ್ಲಿಗೆ ಮೊದಲೇ ಬರುವವನಿದ್ದೆ, ಆದರೆ ಆರೋಗ್ಯ ಅದಕ್ಕೆ ಆಸ್ಪದ ನೀಡಿರಲಿಲ್ಲ.

ಹರಿಯುವ ನೀರನ್ನು ಅನುಸರಿಸಿ ಕೆಲವು ಕಿಲೋಮೀಟರ್‌ ದೂರವನ್ನು ನಡೆದೆ. ಮನೆಗಳು ಮಣ್ಣಿನಲ್ಲಿ ಹೂತು ಹೋಗಿದ್ದವು. ಇನ್ನೂ ಕೆಲವು ಪೂರ್ತಿಯಾಗಿ ಕಾಣೆಯಾಗಿದ್ದವು. ಎಲ್ಲೆಡೆಯೂ ಸ್ವಯಂಸೇವಕರು ಮೃತ ದೇಹಗಳಿಗಾಗಿ ಹುಡುಕುತ್ತಿರುವುದು ಕಾಣುತ್ತಿತ್ತು.  ಜೊತೆಗೆ ಸೈನ್ಯವೂ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ನಾನು ಅಲ್ಲಿ ಎರಡು ದಿನಗಳ ಕಾಲ ಉಳಿದಿದ್ದೆ ಆದರೆ ಯಾವುದೇ ಮೃತ ದೇಹ ಕಂಡುಬಂದಿರಲಿಲ್ಲ. ಆದರೆ ಹುಡುಕಾಟ ಮಾತ್ರ ಬಿಡುವಿಲ್ಲದೆ ಸಾಗಿತ್ತು. ಅವರು ಚಹಾ ಮತ್ತು ಊಟದ ಸಲುವಾಗಿಯಷ್ಟೇ ವಿರಮಿಸುತ್ತಿದ್ದರು. ಅಲ್ಲಿನ ಜನರ ಒಗ್ಗಟ್ಟು ನನ್ನನ್ನು ನಿಜಕ್ಕೂ ಅಚ್ಚರಿಯಲ್ಲಿ ದೂಡಿತು.

PHOTO • M. Palani Kumar

ಚೂರಮಲಾ ಮತ್ತು ಅಟ್ಟಮಲಾ ಗ್ರಾಮಗಳು ಪೂರ್ತಿಯಾಗಿ ತೊಳೆದುಹೋಗಿದೆ. ಪರಿಹಾರ ಕಾರ್ಯಕರ್ತರು ಬುಲ್ಡೋಜರ್‌ ಬಳಸಿದ, ಕೆಲವರು ತಮ್ಮದೇ ಸ್ವಂತ ಯಂತ್ರಗಳನ್ನು ತಂದಿದ್ದರು

ಸ್ಥಳೀಯರೊಂದಿಗೆ ಮಾತನಾಡಿದಾಗ, ಅವರು 2019ರ ಆಗಸ್ಟ್‌ 8ರಂದು ಪುದುಮಲಾ ಎನ್ನುವಲ್ಲಿ ಇಂತಹದ್ದೇ ಘಟನೆ ನಡೆದು 40 ಜನ ತೀರಿಕೊಂಡ ವಿಷಯವನ್ನು ತಿಳಿಸಿದರು. ಜೊತೆಗೆ 2021ರಲ್ಲಿ ಸುಮಾರು 17 ಜನ ಸತ್ತಿದ್ದರು. ಇದು ಮೂರನೇ ಸಲ. ಸುಮಾರು 430 ಜನರು ಪ್ರಾಣ ಕಳೆದುಕೊಂಡಿದ್ದು, 150 ಜನರೂ ಇನ್ನೂ ಪತ್ತೆಯಾಗಿಲ್ಲ.

ನಾನು ಕೊನೆಯ ದಿನ ಹೊರಡುವಾಗ ಪುದುಮಲಾ ಬಳಿ ಎಂಟು ಮೃತದೇಹಗಳನ್ನು ಮಣ್ಣು ಮಾಡಲಾಯಿತು ಎನ್ನುವ ಮಾಹಿತಿ ದೊರಕಿತು. ಮಣ್ಣು ಮಾಡುವ ಸಮಯದಲ್ಲಿ ಎಲ್ಲಾ ಧರ್ಮದ ಜನರು (ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಮತ್ತು ಇತರರು) ಸ್ಥಳದಲ್ಲಿದ್ದು ಎಲ್ಲಾ ಧಾರ್ಮಿಕ ಪ್ರಕ್ರಿಯೆಗಳನ್ನು ಪೂರೈಸಿದ್ದರು. ಆ ಮೃತದೇಹಗಳು ಯಾರದ್ದೆಂದು ಗುರುತು ಸಿಗದ ಕಾರಣ ಸಾಮೂಹಿಕವಾಗಿ ಪ್ರಾರ್ಥಿಸಿ ಮಣ್ಣು ಮಾಡಲಾಯಿತು.

ಅಲ್ಲಿ ಅಳುವ ಸದ್ದಿರಲಿಲ್ಲ. ಮಳೆ ಒಂದೇ ಸಮ ಸುರಿಯುತ್ತಿತ್ತು.

ಪದೇ ಪದೇ ಇಂತಹ ದುರಂತಗಳು ಇಲ್ಲಿಯೇ ಏಕೆ ಸಂಭವಿಸುತ್ತವೆ? ಇಲ್ಲಿನ ಇಡೀ ಪ್ರದೇಶ ಮಣ್ಣು ಮತ್ತು ಕಲ್ಲಿನ ಮಿಶ್ರಣ. ಬಹುಶಃ ಇಂತಹ ಗಟ್ಟಿಯಾದ ಮಣ್ಣು ಇರದಿರುವುದೇ ಈ ಘಟನೆಗೆ ಕಾರಣವಾಗಿರಬಹುದು. ಫೋಟೊಗಳನ್ನು ತೆಗೆಯುವಾಗ ನನಗೆ ಕಾಣಿಸಿದ್ದು ಬರೀ ಕಲ್ಲು ಮಣ್ಣಿನ ಮಿಶ್ರಣ. ಎಲ್ಲೂ ಬರೀ ಮಣ್ಣು ಅಥವಾ ಕಲ್ಲು ಕಾಣಿಸಿಲ್ಲ.

ನಿರಂತರ ಸುರಿದ ಮಳೆ ಈ ಪ್ರದೇಶದಲ್ಲಿ ಸಾಮಾನ್ಯವಲ್ಲ. ಜಾಳು ಮಣ್ಣಿನ ಈ ನೆಲದ ಮೇಲೆ ರಾತ್ರಿ ಒಂದರಿಂದ ಬೆಳಗಿನ ಜಾವ ಐದರ ತನಕ ಮಳೆ ಸುರಿದಿತ್ತು. ಅದರ ಬೆನ್ನಿಗೆ ರಾತ್ರಿ ಮೂರು ಭೂಕುಸಿತಗಳು ಉಂಟಾದವು. ನೋಡಿದ ಪ್ರತಿ ಕಟ್ಟಡ ಮತ್ತು ಮನೆಗಳು ನನಗೆ ಇದನ್ನು ನೆನಪಿಸಿದವು. ಅಲ್ಲಿದ್ದವರೊಂದಿಗೆ ಮಾತನಾಡಿದಾಗ ನನಗೆ ಅನ್ನಿಸಿದ್ದೆಂದರೆ ಅಲ್ಲಿ ಪರಿಹಾರ ಕಾರ್ಯಕ್ಕಾಗಿ ಬಂದಿದ್ದ ಕಾರ್ಯಕರ್ತರು ಸಹ ಕುಸಿದು ಹೋಗಿದ್ದಾರೆ. ಮತ್ತೆ ಅಲ್ಲಿ ಬದುಕು ನಡೆಸುತ್ತಿರುವವರು… ಎಂದಿಗೂ ಈ ದುರಂತದ ನೆನಪಿನಿಂದ ಹೊರಬರಲು ಸಾಧ್ಯವಿಲ್ಲ.

PHOTO • M. Palani Kumar

ಹಲವಾರು ಚಹಾ ಎಸ್ಟೇಟುಗಳಿರುವ ಪ್ರದೇಶದಲ್ಲಿ ವಯನಾಡ್‌ ದುರಂತ ಸಂಭವಿಸಿದೆ. ಇಲ್ಲಿ ಕಾಣುತ್ತಿರುವುದು ಟೀ ಎಸ್ಟೇಟ್‌ ಕಾರ್ಮಿಕರ ಮನೆಗಳು

PHOTO • M. Palani Kumar

ವೇಗವಾಗಿ ಹರಿಯುತ್ತಿರುವ ನೀರು ಮುಂಡಕ್ಕೈ ಹಾಗೂ ಚೂರಮಲಾ ಪ್ರದೇಶದ ಮಣ್ಣು ಬೆರೆತು ಕಂದು ಬಣ್ಣಕ್ಕೆ ತಿರುಗಿದೆ

PHOTO • M. Palani Kumar

ಇಲ್ಲಿನ ನೆಲ ಕಲ್ಲು ಮತ್ತು ಮಣ್ಣಿನ ಮಿಶ್ರಣವನ್ನು ಹೊಂದಿದೆ. ಇಂತಹ ಮಣ್ಣು ಮಳೆ ನೀರು ಬೆರೆತ ಕೂಡಲೇ ಸಡಿಲಗೊಂಡು ಅಸ್ಥಿರವಾಗಿ ಈ ದುರಂತಕ್ಕೆ ಕಾರಣವಾಗಿದೆ

PHOTO • M. Palani Kumar

ಅತಿಯಾದ ಮಳೆ ಮತ್ತು ನೀರಿನ ಹರಿಯುವಿಕೆ ಮಣ್ಣಿನ ಸವಕಳಿಗೆ ಕಾರಣವಾಗಿ ಇಡೀ ಟೀ ಎಸ್ಟೇಟನ್ನು ನಾಶಪಡಿಸಿದೆ; ಎಸ್ಟೇಟಿನ ಅವಶೇಷಗಳ ನಡುವೆ ಕಾರ್ಯಕರ್ತರು ಹೆಣಗಳಿಗಾಗಿ ಹುಡುಕುತ್ತಿದ್ದಾರೆ

PHOTO • M. Palani Kumar

ಈ ದುರಂತದಿಂದ ಪಾರಾದ ಮಕ್ಕಳು ಆಳವಾದ ಚಿಂತೆಯಲ್ಲಿ ಮುಳುಗಿದ್ದಾರೆ

PHOTO • M. Palani Kumar

ಕಲ್ಲು ಮತ್ತು ಮಣ್ಣಿನಡಿ ಹಲವು ಮನೆಗಳು ಹೂತು ಹೋಗಿವೆ

PHOTO • M. Palani Kumar

ವಯನಾಡಿನಲ್ಲಿನ ಟೀ ಎಸ್ಟೇಟ್‌ ಕೆಲಸಗಾರರ ಮನೆಗಳು ತೀವ್ರವಾಗಿ ಹಾನಿಗೀಡಾಗಿವೆ

PHOTO • M. Palani Kumar

ಈ ಎರಡು ಅಂತಸ್ತಿನ ಮನೆ ನೆರೆಯೊಡನೆ ಉರುಳಿ ಬಂದ ಕಲ್ಲಿನ ದಾಳಿಗೆ ನಾಶವಾಗಿದೆ

PHOTO • M. Palani Kumar

ಹಲವು ವಾಹನಗಳಿಗೂ ತೀವ್ರ ಹಾನಿಯಾಗಿದ್ದು ಅವು ಬಳಸುವ ಸ್ಥಿತಿಯಲ್ಲಿಲ್ಲ

PHOTO • M. Palani Kumar

ಸ್ವಯಂಸೇವಕರು ಸಣ್ಣ ವಿರಾಮದಲ್ಲಿ

PHOTO • M. Palani Kumar

ಮನೆ ಬೀಳುತ್ತಿದ್ದಂತೆ ಕುಟುಂಬಗಳು ಎಲ್ಲವನ್ನೂ ಕಳೆದುಕೊಂಡಿವೆ, ಅವರ ವಸ್ತುಗಳೆಲ್ಲ ಕೆಸರಿನಡಿ ಹೂತು ಹೋಗಿವೆ

PHOTO • M. Palani Kumar

ಸ್ವಯಂಸೇವಕರೊಡನೆ ಸೈನ್ಯ ಹುಡುಕಾಟ ಕಾರ್ಯಾಚರಣೆ ನಡೆಸುತ್ತಿರುವುದು

PHOTO • M. Palani Kumar

ಮಸೀದಿ ಬಳಿ ಹುಡುಕಾಟದ ಕಾರ್ಯಾಚರಣೆ

PHOTO • M. Palani Kumar
PHOTO • M. Palani Kumar

ಮಣ್ಣ್ನನು ಸರಿಸಿ ದೇಹಗಳನ್ನು ಹುಡುಕಲು ಯಂತ್ರಗಳು (ಎಡ) ಸಹಾಯ ಮಾಡುತ್ತಿವೆ. ನದಿಯ ಗುಂಟ ದೇಹಗಳನ್ನು ಹುಡುಕುತ್ತಿರುವ ಪರಿಹಾರ ಕಾರ್ಯಕರ್ತ

PHOTO • M. Palani Kumar

ಪರಿಹಾರ ಕಾರ್ಯಕರ್ತರು ಹುಡುಕಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು

PHOTO • M. Palani Kumar

ಈ ಶಾಲೆ ಪೂರ್ತಿಯಾಗಿ ಬಿದ್ದುಹೋಗಿದೆ

PHOTO • M. Palani Kumar

ಕಾರ್ಯಕರ್ತರು ಮಣ್ಣಿನಲ್ಲಿ ಕಾಲು ಹೂತು ಹೋಗದಂತೆ ನೋಡಿಕೊಳ್ಳಲು ಕೋಲುಗಳನ್ನು ಬಳಸುತ್ತಿರುವುದು

PHOTO • M. Palani Kumar

ಮಣ್ಣನ್ನು ಬಗೆದು ಪಕ್ಕಕ್ಕೆ ದೂಡಲು ಜೆಸಿಬಿ ಯಂತ್ರಗಳನ್ನು ಬಳಸುತ್ತಿರುವುದು

PHOTO • M. Palani Kumar

ಸ್ಥಳೀಯರು ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಬಂದ ಸ್ವಯಂಸೇವಕರು ಆಹಾರ ಸೇವಿಸಲು ವಿರಾಮ ಪಡೆಯುತ್ತಿದ್ದಾರೆ

PHOTO • M. Palani Kumar

ತೀವ್ರ ಹಾನಿಗೊಳಗಾಗಿರುವ ಊರುಗಳಲ್ಲಿ ಒಂದಾದ ಪುದುಮಲ 2019 ಮತ್ತು 2021ರಲ್ಲಿಯೂ ಇಂತಹ ದುರಂತಕ್ಕೆ ಸಾಕ್ಷಿಯಾಗಿತ್ತು

PHOTO • M. Palani Kumar

ರಾತ್ರಿಯಿಡೀ ಸಾಗುತ್ತಿರುವ ಕೆಲಸ, ಕಾರ್ಯಕರ್ತರು ದೇಹಗಳು ಬರುವುದನ್ನು ಕಾಯುತ್ತಿರುವುದು

PHOTO • M. Palani Kumar

ಆಂಬುಲೆನ್ಸ್‌ಗಳಲ್ಲಿ ಬರುವ ಮೃತದೇಹಗಳನ್ನು ಸ್ವೀಕರಿಸಲು ಕಾರ್ಯಕರ್ತರನ್ನು ತುರ್ತು ಪರಿಕರಗಳೊಂದಿಗೆ ಸಜ್ಜುಗೊಳಿಸಲಾಗಿದೆ

PHOTO • M. Palani Kumar

ದೇಹಗಳನ್ನು ಪ್ರಾರ್ಥನಾಲಯಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಎಲ್ಲಾ ಧರ್ಮಗಳಿಗೆ ಸೇರಿದ ಜನರು ಒಟ್ಟುಗೂಡಿ ಮೃತರ ಸದ್ಗತಿಗಾಗಿ ಪ್ರಾರ್ಥಿಸುತ್ತಾರೆ

PHOTO • M. Palani Kumar

ಮೃತದೇಹಗಳನ್ನು ಬಿಳಿ ವಸ್ತ್ರದಲ್ಲಿ ಸುತ್ತಿ ತೆಗೆದುಕೊಂಡು ಹೋಗಲಾಗುತ್ತದೆ

PHOTO • M. Palani Kumar

ಬಹಳಷ್ಟು ಮೃತದೇಹಗಳನ್ನು ಗುರುತಿಸಲಾಗಿಲ್ಲ

PHOTO • M. Palani Kumar

ಪ್ರಾರ್ಥನಾ ಸೇವೆಯ ನಂತರ ಅಂತ್ಯಕ್ರಿಯೆ ಕೈಗೊಳ್ಳಲಾಗುತ್ತದೆ

PHOTO • M. Palani Kumar

ತಡರಾತ್ರಿಯಾದರೂ ದುಡಿಯುತ್ತಿರುವ ಸ್ವಯಂಸೇವಕರು

ಅನುವಾದ: ಶಂಕರ. ಎನ್. ಕೆಂಚನೂರು

M. Palani Kumar

ایم پلنی کمار پیپلز آرکائیو آف رورل انڈیا کے اسٹاف فوٹوگرافر ہیں۔ وہ کام کرنے والی خواتین اور محروم طبقوں کی زندگیوں کو دستاویزی شکل دینے میں دلچسپی رکھتے ہیں۔ پلنی نے ۲۰۲۱ میں ’ایمپلیفائی گرانٹ‘ اور ۲۰۲۰ میں ’سمیُکت درشٹی اور فوٹو ساؤتھ ایشیا گرانٹ‘ حاصل کیا تھا۔ سال ۲۰۲۲ میں انہیں پہلے ’دیانیتا سنگھ-پاری ڈاکیومینٹری فوٹوگرافی ایوارڈ‘ سے نوازا گیا تھا۔ پلنی تمل زبان میں فلم ساز دویہ بھارتی کی ہدایت کاری میں، تمل ناڈو کے ہاتھ سے میلا ڈھونے والوں پر بنائی گئی دستاویزی فلم ’ککوس‘ (بیت الخلاء) کے سنیماٹوگرافر بھی تھے۔

کے ذریعہ دیگر اسٹوریز M. Palani Kumar
Editor : PARI Desk

پاری ڈیسک ہمارے ادارتی کام کا بنیادی مرکز ہے۔ یہ ٹیم پورے ملک میں پھیلے نامہ نگاروں، محققین، فوٹوگرافرز، فلم سازوں اور ترجمہ نگاروں کے ساتھ مل کر کام کرتی ہے۔ ڈیسک پر موجود ہماری یہ ٹیم پاری کے ذریعہ شائع کردہ متن، ویڈیو، آڈیو اور تحقیقی رپورٹوں کی اشاعت میں مدد کرتی ہے اور ان کا بندوبست کرتی ہے۔

کے ذریعہ دیگر اسٹوریز PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru