ಮೇದಾಪುರದಲ್ಲಿ ಆಚರಿಸುವ ಹಾಗೆ ಯುಗಾದಿಯನ್ನು ಬೇರೆ ಯಾವ ಕಡೆಯೂ ಮಾಡುವುದಿಲ್ಲ ಎನ್ನುತ್ತಾರೆ ಪಸಲ ಕೊಂಡಣ್ಣ. ಆಂಧ್ರಪ್ರದೇಶದ ತಮ್ಮ ಹಳ್ಳಿಯಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳುಗಳಲ್ಲಿ ಆಚರಿಸುವ ತೆಲುಗಿನ ಹೊಸ ವರ್ಷ ಯುಗಾದಿ ಹಬ್ಬದ ಬಗ್ಗೆ 82 ವರ್ಷದ ಈ ರೈತ ಹೆಮ್ಮೆಯಿಂದ ಮಾತನಾಡುತ್ತಾರೆ.
ಶ್ರೀ ಸತ್ಯಸಾಯಿ ಜಿಲ್ಲೆಯ ಮೇದಪುರಂ ಎಂಬ ಹಳ್ಳಿಯಲ್ಲಿ ಇದನ್ನು ಆಚರಿಸುವ ಇವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು.
ಯುಗಾದಿಯ ಹಿಂದಿನ ರಾತ್ರಿ ದೇವರ ವಿಗ್ರಹವನ್ನು ಮೆರವಣಿಗೆಯಲ್ಲಿ ಹೊತ್ತುಕೊಂಡು ಹೋಗುವುದರೊಂದಿಗೆ ಈ ಹಬ್ಬವು ಆರಂಭವಾಗುತ್ತದೆ. ಗುಹೆಯಿಂದ ದೇವಸ್ಥಾನದವರೆಗೆ ನಡೆಯುವ ವಿಗ್ರಹದ ಮೆರವಣಿಗೆಯನ್ನು ಭಕ್ತರು ಬಹಳ ಕುತೂಹಲದಿಂದ ಮತ್ತು ಉತ್ಸಾಹದಿಂದ ಕಣ್ತುಂಬಿಕೊಳ್ಳುತ್ತಾರೆ. 6,641 (ಜನಗಣತಿ 2011) ಜನಸಂಖ್ಯೆಯನ್ನು ಹೊಂದಿರುವ ಮೇದಪುರಂನಲ್ಲಿ ಅವರು ಅಲ್ಪಸಂಖ್ಯಾತರಾಗಿದ್ದರೂ, ದೇವಾಲಯದ ಎಂಟು ಉಸ್ತುವಾರಿ ಕುಟುಂಬಗಳಿಂದ ಪ್ರತಿನಿಧಿಸುವ ಈ ಸಣ್ಣ ಎಸ್.ಸಿ ಸಮುದಾಯವು ಆಚರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಯುಗಾದಿಯಂದು ಇಡೀ ಗ್ರಾಮ ವರ್ಣರಂಜಿತ ಅಲಂಕಾರಗಳೊಂದಿಗೆ, ದೇವಾಲಯದ ಸುತ್ತಲೂ ಮೆರವಣಿಗೆ ಮಾಡುವ ಉತ್ಸವ ರಥಗಳೊಂದಿಗೆ ಕಳೆಗಟ್ಟುತ್ತದೆ. ಭಕ್ತರು ಪ್ರಸಾದವನ್ನು ವಿತರಿಸುತ್ತಾರೆ, ಇದು ಎಲ್ಲಾ ಸಮುದಾಯಗಳೂ ಒಟ್ಟಾಗಿ, ಕಾಲಾನುಕಾಲದ ವರೆಗೆ ದೇವರ ಆಶೀರ್ವಾದ ಪಡೆಯುವ ಸಂಕೇತವಾಗಿದೆ. ರಥಯಾತ್ರೆ ಮುಗಿಯುತ್ತಿದ್ದಂತೆ, ಮಧ್ಯಾಹ್ನ ಪಂಜು ಸೇವೆಯ ಧಾರ್ಮಿಕ ವಿಧಿ ನಡೆಯುತ್ತದೆ. ಹಿಂದಿನ ರಾತ್ರಿ ಮೆರವಣಿಗೆಯಲ್ಲಿ ನಡೆದ ದಾರಿಯನ್ನೇ ಈ ಆಚರಣೆಯಲ್ಲಿ ಭಾಗವಹಿಸುವವರು ಅನುಸರಿಸುತ್ತಾರೆ.
ಈ ಹಬ್ಬವು ಮಾದಿಗ ಸಮುದಾಯದ ಹೋರಾಟವನ್ನು ಪ್ರತಿಯೊಬ್ಬರಿಗೂ ಮತ್ತೆ ನೆನಪಿಸುತ್ತದೆ. ಮೂರ್ತಿಯನ್ನು ತಮ್ಮ ಗ್ರಾಮಕ್ಕೆ ತರುವುದರ ಹಿಂದಿರುವ ಸಂಪೂರ್ಣ ಕಥೆಯನ್ನು ಮರುನಿರೂಪಿಸುತ್ತದೆ.
ಅನುವಾದ: ಚರಣ್ ಐವರ್ನಾಡು