“ನಾವು ಎಲ್ಲಿಗೆ ಹೋಗುವುದಿದ್ದರೂ ಒಟ್ಟಿಗೆ ಹೋಗುತ್ತೇವೆ” ಎನ್ನುತ್ತಾರೆ ಗೀತಾ ದೇವಿ. ಹಾಗೆ ಹೇಳುವಾಗ ಅವರು ತನ್ನ ಪಕ್ಕದಲ್ಲಿ ನಿಂತಿದ್ದ ಗೆಳತಿ ಸಕುನಿಯ ಕಡೆಗೆ ಪ್ರೀತಿಯಿಂದ ನೋಡುತ್ತಿದ್ದರು.
ಈ ಇಬ್ಬರು ಗೆಳತಿಯರು ಹತ್ತಿರದ ಕಾಡಿನಿಂದ ಸಾಲ್ (ಶೋರಿಯಾ ರೊಬಸ್ಟಾ) ಎಲೆಗಳನ್ನು ಸಂಗ್ರಹಿಸುತ್ತಾರೆ. ಈ ಎಲೆಗಳಿಂದ ಅವರು ದೋನಾ (ತಟ್ಟೆ) ಮತ್ತು ಪತ್ತಲ್ (ಬಟ್ಟಲು) ತಯಾರಿಸಿ ಅದನ್ನು ಹತ್ತಿರದ ಡಾಲ್ಟನ್ ಗಂಜ್ ಎನ್ನುವ ಪಟ್ಟಣದಲ್ಲಿ ಮಾರಾಟ ಮಾಡುತ್ತಾರೆ. ಈ ಪಟ್ಟಣ ಪಲಾಮು ಜಿಲ್ಲಾ ಕೇಂದ್ರವೂ ಹೌದು.
ಗೀತಾ ಮತ್ತು ಸಕುನಿ ಇಬ್ಬರೂ ಕೊಪ್ಪೆ ಗ್ರಾಮದ ನಾಡಿತೋಲಾ ಎನ್ನುವ ಸಣ್ಣ ಊರಿನವರು. ಇವರಿಬ್ಬರು ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಾರೆ. ಜಾರ್ಖಂಡ್ ರಾಜ್ಯದ ಇತರ ಪ್ರಜೆಗಳಂತೆ ಗೀತಾ ಮತ್ತು ಸಕುನಿ ಕೂಡಾ ಜೀವನೋಪಾಯಕ್ಕಾಗಿ ಅರಣ್ಯವನ್ನೇ ಅವಲಂಬಿಸಿದ್ದಾರೆ.
ಕಾಡಿನಲ್ಲಿ ದಿನಕ್ಕೆ ಸುಮಾರು ಏಳರಿಂದ ಎಂಟು ಗಂಟೆಗಳಷ್ಟು ಸಮಯವನ್ನು ಕಳೆಯುವ ಅವರು ದನಗಳು ಮನೆಗೆ ಮರಳುವುದನ್ನು ಕಂಡು ಅವುಗಳೊಂದಿಗೆ ಮನೆಗೆ ಮರಳುತ್ತಾರೆ. ಅವರಿಗೆ ಸಾಕಷ್ಟು ಎಲೆಗಳನ್ನು ಸಂಗ್ರಹಿಸಲು ಎರಡು ದಿನ ಬೇಕಾಗುತ್ತದೆ. ದಿನ ಬೇಗನೆ ಕಳೆದುಹೋಗುತ್ತದೆ. ಅವರು ಕೆಲಸದ ನಡುವೆ ಸಣ್ಣ ವಿರಾಮ ಪಡೆದು ತಮ್ಮ ಕುಟುಂಬ ಮತ್ತು ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡುತ್ತಾರೆ.
ಪ್ರತಿದಿನ ಬೆಳಗ್ಗೆ ಗೀತಾ ಸಕುನಿಯವರ “ನಿಕಾಲಿಹೇ” ಎನ್ನು ದನಿ ಕೇಳುವುದನ್ನೇ ಕಾಯುತ್ತಿರುತ್ತಾರೆ. ನಂತರ ಅವರಿಬ್ಬರೂ ಕಾಡಿಗೆ ಹೊರಡುತ್ತಾರೆ. ಇಬ್ಬರೂ ಸಿಮೆಂಟ್ ಚೀಲವನ್ನು ಕತ್ತರಿಸಿ ತಯಾರಿಸಿದ ಚೀಲದಲ್ಲಿ ಪ್ಲಾಸ್ಟಿಕ್ಕಿನ ನೀರಿನ ಬಾಟಲಿ, ಸಣ್ಣ ಕೊಡಲಿ ಮತ್ತು ಹಳೆಯ ತುಂಡು ಬಟ್ಟೆ ತುಂಬಿಕೊಂಡು ಹೊರಡುತ್ತಾರೆ. ಅವರು ಜಾರ್ಖಂಡ್ ರಾಜ್ಯದ ಪಲಾಮು ಹುಲಿ ಮೀಸಲು ಅರಣ್ಯ ಪ್ರದೇಶದ ಬಫರ್ ವಲಯದಲ್ಲಿರುವ ಹೆಹೆಗಢ ಎನ್ನುವ ಕಾಡಿನತ್ತ ಹೊರಡುತ್ತಾರೆ.
ಇವರಿಬ್ಬರು ಗೆಳತಿಯರು ಬೇರೆ ಬೇರೆ ಸಮುದಾಯಗಳಿಗೆ ಸೇರಿದವರು. ಗೀತಾ ಭುಯಿಯಾ ದಲಿತ ಸಮುದಾಯಕ್ಕೆ ಸೇರಿದವರಾದರೆ ಸಕುನಿ ಒರಾಣ್ ಆದಿವಾಸಿ ಸಮುದಾಯಕ್ಕೆ ಸೇರಿದವರು. ನಾವು ಕಾಡಿನತ್ತ ನಡೆಯುತ್ತಿದ್ದರೆ ಗೀತಾ ಎಚ್ಚರಿಕೆಯೊಂದನ್ನು ನೀಡಿದರು: “ಇಲ್ಲಿಗೆ ಒಬ್ಬರೇ ಬರಬೇಡಿ. ಕೆಲವೊಮ್ಮೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ನಾವು ಇಲ್ಲಿ ತೆಂಡುವಾಗಳನ್ನು [ಚಿರತೆ] ನೋಡಿದ್ದೇವೆ!” ಇದರ ಜೊತೆಗೆ ಇಲ್ಲಿ ಹಾವು ಮತ್ತು ಚೇಳಿನ ಭಯವೂ ಹೆಚ್ಚು ಎನ್ನುತ್ತಾರೆ ಸಕುನಿ. ಪಲಾಮು ಹುಲಿ ಮೀಸಲು ಪ್ರದೇಶದಲ್ಲಿ 73 ಚಿರತೆಗಳು ಮತ್ತು ಸುಮಾರು 267 ಆನೆಗಳಿವೆ (2021ರ ವನ್ಯಜೀವಿ ಗಣತಿ).
ಈ ಚಳಿಗಾಲದ ಬೆಳಿಗ್ಗೆ ಮಂಜಿನ ಹೊದಿಕೆಯಿಂದ ಆವರಿಸಲ್ಪಟ್ಟಿತ್ತು ಮತ್ತು ಗೀತಾ ಮತ್ತು ಸಕುನಿ ತೆಳುವಾದ ಶಾಲು ಮಾತ್ರ ಧರಿಸಿದ್ದರು. ಇಬ್ಬರೂ 50 ವರ್ಷಕ್ಕಿಂತ ಮೇಲ್ಪಟ್ಟವರು. ಅವರು ಮೊದಲು ಲಾತೇಹಾರ್ ಜಿಲ್ಲೆಯ ಮಣಿಕಾ ಬ್ಲಾಕಿನಲ್ಲಿರುವ ತಮ್ಮ ಮನೆಯ ಬಳಿ ಹರಿಯುವ ಔರಂಗಾ ನದಿಯನ್ನು ದಾಟುತ್ತಾರೆ. ಚಳಿಗಾಲದಲ್ಲಿ, ನದಿಯನ್ನು ಕಾಲ್ನಡಿಗೆಯಲ್ಲಿ ದಾಟಬಹುದು, ಈ ಸಮಯದಲ್ಲಿ ನದಿಯಲ್ಲಿ ಬಹಳ ಕಡಿಮೆ ನೀರು ಇರುತ್ತದೆ. ಆದರೆ ಮಳೆಗಾಲದಲ್ಲಿ, ಈ ಮಹಿಳೆಯರು ನದಿಯನ್ನು ದಾಟಲು ಕುತ್ತಿಗೆಯ ಆಳದ ನೀರಿನಲ್ಲಿ ಮುಳುಗಬೇಕಾಗುತ್ತದೆ.
ಒಮ್ಮೆ ದಡವನ್ನು ತಲುಪಿದ ನಂತರ, ಸುಮಾರು 40 ನಿಮಿಷಗಳ ಕಾಲ ನಡೆಯಬೇಕು. ನಿರ್ಜನ ಕಾಡಿನಲ್ಲಿ, ಅವರ ಚಪ್ಪಲಿಗಳಿಂದ ಬರುವ ಟಕ್-ಟಕ್-ಟಕ್ ಶಬ್ದ ಮಾತ್ರ ಕೇಳುತ್ತದೆ. ಅವರು ದೊಡ್ಡ ಮಹುವಾ ಮರದ ಕಡೆಗೆ ಹೋಗುತ್ತಿದ್ದಾರೆ, ಇದು ಸಾಲ್ ಮರಗಳಿಂದ ತುಂಬಿರುವ ಈ ಪ್ರದೇಶದ ಹೆಗ್ಗುರುತಿನಂತಿದೆ.
"ಕಾಡು ಮೊದಲಿನಂತಿಲ್ಲ. ಮೊದಲು ಹೆಚ್ಚು ದಟ್ಟವಾಗಿತ್ತು ... ಆಗೆಲ್ಲ ನಾವು ಇಷ್ಟು ದೂರ ಬರಬೇಕಾಗಿರಲಿಲ್ಲ" ಎಂದು ಸಕುನಿ ಹೇಳುತ್ತಾರೆ. ಗ್ಲೋಬಲ್ ಫಾರೆಸ್ಟ್ ವಾಚ್ ಅಂಕಿಅಂಶಗಳ ಪ್ರಕಾರ , ಜಾರ್ಖಂಡ್ 2001 ಮತ್ತು 2022ರ ನಡುವೆ 5.62 ಕಿಲೋ ಹೆಕ್ಟೇರ್ ವ್ಯಾಪ್ತಿಯಷ್ಟು ಮರಗಳನ್ನು ಕಳೆದುಕೊಂಡಿದೆ
ತಾನು ಹಿಂದೆ ಕಾಡಿಗೆ ಬರುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಸಕುನಿ, “ಆಗೆಲ್ಲ ಕಾಡಿನಲ್ಲಿ ಕನಿಷ್ಟ 30-40 ಜನ ಯಾವಾಗಲೂ ಕಾಣಿಸುತ್ತಿದ್ದರು. ಈಗೇನಿದ್ದರೂ ದನ, ಆಡು ಮೇಯಿಸುವವರು ಮತ್ತು ಸೌದೆಗಾಗಿ ಬರುವ ಕೆಲವೇ ಕೆಲವು ಜನರಷ್ಟೇ ಕಾಣಿಸುತ್ತಾರೆ” ಎನ್ನುತ್ತಾರೆ.
ನಾಲ್ಕು ವರ್ಷಗಳ ಹಿಂದೆ, ಅನೇಕ ಮಹಿಳೆಯರು ಈ ಕೆಲಸದಲ್ಲಿ ತೊಡಗಿದ್ದರು, ಆದರೆ ಅದರಿಂದ ಬರುವ ಆದಾಯವು ತುಂಬಾ ಕಡಿಮೆಯಿರುವುದರಿಂದ ಅವರು ಈ ಕೆಲಸವನ್ನು ತೊರೆದರು ಎಂದು ಗೀತಾ ಹೇಳುತ್ತಾರೆ. ಅವರ ಹಳ್ಳಿಯಲ್ಲಿ ಇನ್ನೂ ಈ ಕೆಲಸವನ್ನು ಮಾಡುತ್ತಿರುವ ಕೆಲವೇ ಮಹಿಳೆಯರಲ್ಲಿ ಅವರೂ ಒಬ್ಬರು.
ಸೌದೆ ಮಾರಾಟವನ್ನು ಸರ್ಕಾರ ನಿಷೇಧಿಸಿರುವುದರಿಂದಾಗಿ ಸೌದೆಗಾಗಿ ಕಾಡಿಗೆ ಹೋಗುತ್ತಿದ್ದ ಮಹಿಳೆಯರ ಸಂಖ್ಯೆಯೂ ಕಡಿಮೆಯಾಗಿದೆ. "2020 ರಲ್ಲಿ ಲಾಕ್ಡೌನ್ ಸಮಯದಲ್ಲಿ ನಿಷೇಧವನ್ನು ವಿಧಿಸಲಾಯಿತು" ಎಂದು ಸಕುನಿ ಹೇಳುತ್ತಾರೆ, ಜಾರ್ಖಂಡ್ ಸರ್ಕಾರವು ಆರಂಭದಲ್ಲಿ ಉರುವಲು ಸಂಗ್ರಹಿಸಲು ಶುಲ್ಕವನ್ನು ವಿಧಿಸಲು ಪ್ರಾರಂಭಿಸಿತು. ನಂತರ ಈ ನಿರ್ಧಾರವನ್ನು ಹಿಂತೆಗೆದುಕೊಂಡಿತಾದರೂ, ಒಣ ಉರುವಲು ಮಾರಾಟ ಮಾಡಲು ಶುಲ್ಕವನ್ನು ಪಾವತಿಸಬೇಕಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಇಬ್ಬರೂ ಸ್ನೇಹಿತರು ತಮ್ಮ ಮತ್ತು ಅವರ ಕುಟುಂಬದ ಸಹಾಯಕ್ಕಾಗಿ ಕಾಡಿಗೆ ಹೋಗುತ್ತಾರೆ. ಸಕುನಿ ತನ್ನ 20ನೇ ವಯಸ್ಸಿನಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. "ನನಗೆ ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಯಿತು" ಎಂದು ಅವರು ಹೇಳುತ್ತಾರೆ, ನಂತರ ಕುಡುಕ ಪತಿ ತೊರೆದು ಹೋದ ಕಾರಣ ಅವರು ತನ್ನ ಮತ್ತು ಮೂವರು ಗಂಡು ಮಕ್ಕಳ ಬದುಕು ನಡೆಸಲು ಹಣವನ್ನು ಸಂಪಾದಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಯಿತು. "ಆ ಸಮಯದಲ್ಲಿ ಕೆಲಸ ಹುಡುಕುವುದು ತುಂಬಾ ಕಷ್ಟವಿತ್ತು. ನಾನು ಹೇಗೋ ಎಲೆಗಳು ಮತ್ತು ದಾತ್ವನ್ ಮಾರಾಟ ಮಾಡುವ ಮೂಲಕ ನನ್ನ ಮಕ್ಕಳನ್ನು ಸಾಕಿದೆ."
ಸಕುನಿ ಪ್ರಸ್ತುತ ತನ್ನ ಕಿರಿಯ ಮಗ 17 ವರ್ಷದ ಅಕೇಂದರ್ ಒರಾಣ್ ಜೊತೆ ಎರಡು ಕೋಣೆಗಳ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಇಬ್ಬರು ಹಿರಿಯ ಗಂಡು ಮಕ್ಕಳು ಮದುವೆಯಾಗಿ ಒಂದೇ ಗ್ರಾಮದಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಅವರ ಮನೆಯಿಂದ ಸ್ವಲ್ಪ ದೂರದಲ್ಲಿ, ಗೀತಾ ತನ್ನ ಕುಟುಂಬದೊಂದಿಗೆ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಗೀತಾರ ಕುಟುಂಬವು ಇತರ ಏಳು ಸದಸ್ಯರನ್ನು ಹೊಂದಿದೆ: ಒಬ್ಬ ಮಗಳು, ಮೂವರು ಗಂಡು ಮಕ್ಕಳು, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು. ಆಕೆಯ ಪತಿ ಐದು ವರ್ಷಗಳ ಹಿಂದೆ ನಿಧನರಾದರು. ಗೀತಾ ಅವರ ಕಿರಿಯ ಮಗಳು ಊರ್ಮಿಳಾ ದೇವಿಗೆ 28 ವರ್ಷ ಮತ್ತು ಅವರು ತಮ್ಮ ತಾಯಿಯಂತೆ ದೋನಾ ಮಾರಾಟ ಮಾಡುತ್ತಾರೆ, ಆದರೆ ಗೀತಾ ದೇವಿ ತಮ್ಮ ಮಗಳ ಉತ್ತಮ ಭವಿಷ್ಯದ ಕನಸು ಕಾಣುತ್ತಿದ್ದಾರೆ. "ನಾನು ನನ್ನ ಹಿರಿಯ ಮಗಳನ್ನು ಬಡ ಕುಟುಂಬಕ್ಕೆ ಮದುವೆ ಮಾಡಿಸಿದೆ. ನನ್ನ ಕಿರಿಯ ಮಗಳಿಗೆ ವರದಕ್ಷಿಣೆ ಕೊಟ್ಟಾದರೂ ಸರಿ ಒಳ್ಳೆಯ ಮನೆಗೆ ಕೊಡುತ್ತೇನೆ."
ಏಳು ಜನ ಒಡಹುಟ್ಟಿದವರಲ್ಲಿ ಕಿರಿಯವರಾದ ಗೀತಾ ಎಂದೂ ಶಾಲೆಯ ಮೆಟ್ಟಿಲನ್ನು ಹತ್ತಿದವರಲ್ಲ. "ನಾನು ಶಾಲೆಗೆ ಹೋದರೆ, ಮನೆಕೆಲಸವನ್ನು ಯಾರು ಮಾಡುತ್ತಾರೆ?" ಎಂದು ಅವರು ಕೇಳುತ್ತಾರೆ. ಮುಂಜಾನೆ 4 ಗಂಟೆ ಸುಮಾರಿಗೆ, ಅಡುಗೆ, ಶುಚಿಗೊಳಿಸುವಿಕೆಯಂತಹ ಅನೇಕ ಮನೆಕೆಲಸಗಳನ್ನು ತ್ವರಿತವಾಗಿ ಮಾಡಲು ಪ್ರಾರಂಭಿಸುತ್ತಾರೆ. ಮತ್ತು ಕಾಡಿಗೆ ಹೋಗುವ ಮೊದಲು, ಜಾನುವಾರುಗಳನ್ನು (ಒಂದು ಹಸು ಮತ್ತು ಎರಡು ಎತ್ತುಗಳು) ಮೇಯಲು ಬಿಡುತ್ತಾರೆ. ಅವರ ಸ್ನೇಹಿತೆಯ ದಿನಚರಿ ಬಹುತೇಕ ಹೀಗೆ ಇರುತ್ತದೆ, ಆದರೆ ಗೀತಾರ ಕೆಲಸದಲ್ಲಿ ಅವರ ಸೊಸೆ ಅವಳಿಗೆ ಸಹಾಯ ಮಾಡುತ್ತಾರೆ, ಸಕುನಿ ಎಲ್ಲಾ ಕೆಲಸಗಳನ್ನು ಒಬ್ಬರೇ ಮಾಡಬೇಕು.
*****
ಕಾಡಿನ ಕೇಂದ್ರ ಪ್ರದೇಶವನ್ನು ತಲುಪಿದ ನಂತರ, ಇಬ್ಬರೂ ಮಹಿಳೆಯರು ತಮ್ಮ ಚೀಲಗಳನ್ನು ತೆಗೆದು ಕೆಳಗೆ ಹಾಕಿದರು. ಅಂತಹ ತಂಪಾದ ಬೆಳಿಗ್ಗೆಯೂ, ಹಲವಾರು ಕಿಲೋಮೀಟರುಗಳಷ್ಟು ನಡೆದ ಸ್ನೇಹಿತೆಯರು ಬೆವರಿನಲ್ಲಿ ತೋಯ್ದು ಹೋಗಿದ್ದರು. ಸ್ಥಳ ತಲುಪಿದ ನಂತರ ಇಬ್ಬರೂ ತಮ್ಮ ಸೆರಗನ್ನು ಬಳಸಿ ಮುಖ ಮತ್ತು ಕುತ್ತಿಗೆಯ ಸುತ್ತಲಿದ್ದ ಬೆವರನ್ನು ಒರೆಸಿಕೊಂಡರು.
ಕೆಲಸ ಆರಂಭಿಸುವ ಮೊದಲು ಅವರು ತಾವು ತಂದಿದ್ದ ಹಳೆಯ ಬಟ್ಟೆಯನ್ನು ಬಗಲಿಗೆ ಕಟ್ಟಿಕೊಳ್ಳುತ್ತಾರೆ. ತಾವು ಕಿತ್ತ ಎಲೆಗಳನ್ನು ಅವರು ಅದರಲ್ಲೇ ಸಂಗ್ರಹಿಸುತ್ತಾರೆ. ಇದರೊಂದಿಗೆ ಅವರ ಕಾಡಿನ ಕೆಲಸ ಆರಂಭಗೊಳ್ಳುತ್ತದೆ.
ಅವರು ಎಡಗೈಯಲ್ಲಿ ಕೊಂಬೆಯನ್ನು ಹಿಡಿದು ಬಲಗೈಯಲ್ಲಿ ಮರದ ಅಗಲವಾದ ಎಲೆಯನ್ನು ಕೀಳುತ್ತಾರೆ. “ಈ ಮರದಲ್ಲಿ ಮಟ್ಟಾ [ಕೆಂಪಿರುವೆ] ಇವೆ, ಹುಷಾರು” ಎಂದು ಸಕುನಿ ತನ್ನ ಜೊತೆಗಾತಿಯನ್ನು ಎಚ್ಚರಿಸುತ್ತಾರೆ.
“ಹೆಚ್ಚು ತೂತುಗಳಿಲ್ಲ ಒಳ್ಳೆಯ ಎಲೆಗಳನ್ನು ಹುಡುಕಿ ಕೀಳುತ್ತೇವೆ” ಎನ್ನುತ್ತಾ ಗೀತಾ ತಮ್ಮ ಚೀಲದೊಳಕ್ಕೆ ಕೆಲವು ಎಲೆಗಳನ್ನು ತುಂಬಿಸಿಕೊಂಡರು. ಕೆಲವೊಮ್ಮೆ ಎಲೆ ಮರದ ಮೇಲ್ಭಾಗದಲ್ಲಿದ್ದಾಗ ಅವರು ಮರವನ್ನು ಹತ್ತಿ ಕೊಂಬೆಯನ್ನು ಕೊಡಲಿ ಬಳಸಿ ಕಡಿಯಬೇಕಾಗುತ್ತದೆ.
ಸಾಮಾನ್ಯವಾಗಿ ನಿಧಾನವಾಗಿ ಬೆಳೆಯುವ ಸಾಲ್ ಮರಗಳು, 164 ಅಡಿಗಳವರೆಗೆ ತಲುಪುತ್ತವೆ. ಆದರೆ, ಈ ಕಾಡಿನಲ್ಲಿನ ಸಾಲ್ ಮರಗಳು ಚಿಕ್ಕವು, ಸುಮಾರು 30-40 ಅಡಿ ಎತ್ತರವಿರುತ್ತವೆ.
ಮರವನ್ನು ಹತ್ತಲು ಸಿದ್ಧರಾದ ಸಕುನಿ ತನ್ನ ಸೀರೆಯನ್ನು ಕಚ್ಚೆಯಂತೆ ಕಟ್ಟಿಕೊಂಡು 15 ಅಡಿ ಎತ್ತರದ ಮರವನ್ನು ಹತ್ತಲು ಸಿದ್ಧರಾದರು. ಗೀತಾ ಅವರಿಗೆ ಕೊಡಲಿಯನ್ನು ಕೊಟ್ಟರು. ಕೊಂಬೆಯೊಂದನ್ನು ತೋರಿಸಿ “ಅದನ್ನು ಕತ್ತರಿಸು” ಎಂದು ಹೇಳಿದರು. ಕತ್ತರಿಸಿದ ಕೊಂಬೆಗಳನ್ನು ಒಂದೇ ಅಳತೆಯಲ್ಲಿ ಕತ್ತರಿಸಿ ಅದನ್ನು ದಾತ್ವಾನ್ ಆಗಿ ಬಳಸಲಾಗುತ್ತದೆ. ಈ ಕಡ್ಡಿಗಳನ್ನು ಸಂತೆಯಲ್ಲಿ ಮಾರಲಾಗುತ್ತದೆ.
“ಎಲ್ಲವೂ ಒಂದೇ ಅಳತೆಯಲ್ಲಿ ದಪ್ಪವಾಗಿರಬೇಕು” ಎನ್ನುತ್ತಾ ಗೀತಾ ತಮ್ಮ ಕೊಡಲಿಯಿಂದ ಪೊದೆಗಳನ್ನು ಸರಿಸುತ್ತಾ ಮುಂದಕ್ಕೆ ಸಾಗುತ್ತಿದ್ದರು. “ಸಾಲ್ ಮರದ ರೆಂಬೆ ಬಹಳ ಒಳ್ಳೆಯದು. ಅದು ಬೇಗನೆ ಒಣಗುವುದಿಲ್ಲ. ಅದನ್ನು 15 ದಿನಗಳ ತನಕ ಇಡಬಹುದು” ಎಂದು ಅವರು ಹೇಳುತ್ತಾರೆ.
ಎಲೆಗಳು ಮತ್ತು ಕೊಂಬೆಗಳನ್ನು ಸಂಗ್ರಹಿಸುವುದು ಸುಲಭವಲ್ಲ. "ಚಳಿಗಾಲವು ಅತ್ಯಂತ ಕಠಿಣವಾದ ತಿಂಗಳು; ನಮ್ಮ ಕೈಗಳು ಮರಗಟ್ಟುತ್ತವೆ. ಕೊಡಲಿಯನ್ನು ಬಿಗಿಯಾಗಿ ಹಿಡಿದ ದಿನಗಳಲ್ಲಿ ಕೈಗಳು ನೋಯಲು ಪ್ರಾರಂಭಿಸುತ್ತವೆ." ಎನ್ನುತ್ತಾರೆ ಗೀತಾ
ಪ್ರತಿ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸಾಲ್ ಮರದ ಎಲೆ ಉದುರಲಾರಂಭಿಸುತ್ತದೆ. ಅಲ್ಲಿಂದ ಏಪ್ರಿಲ್-ಮೇ ತಿಂಗಳಲ್ಲಿ ಹೊಸ ಎಲೆಗಳು ಚಿಗುರುವ ತನಕ ಅವರ ಕೆಲಸಕ್ಕೆ ವಿರಾಮ ದೊರೆಯುತ್ತದೆ. ಈ ಸಮಯದಲ್ಲಿ, ಸಕುನಿ ಮಹುವಾ ಹೂವುಗಳನ್ನು ಆರಿಸುವ ಕೆಲಸ ಮಾಡುತ್ತಾರೆ. ಈ ವರ್ಷದ ಆರಂಭದಲ್ಲಿ (2023) ಅವರು ಕಾಡಿನಿಂದ 100 ಕಿಲೋ ಮಹುವಾ ಹೂವುಗಳನ್ನು ಸಂಗ್ರಹಿಸಿ ಒಣಗಿಸಿ ಸ್ಥಳೀಯ ವ್ಯಾಪಾರಿಗೆ ಪ್ರತಿ ಕೆ.ಜಿ.ಗೆ 30 ರೂಪಾಯಿಯಂತೆ ಮಾರಾಟ ಮಾಡಿದ್ದರು. ಈ ಮರದ ಹಸಿರು ಹೂವಿನ ಹಣ್ಣಿನ್ನು ಮದ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ ಮತ್ತು ಇದರ ಬೀಜದಿಂದ ಅಡುಗೆ ಎಣ್ಣೆಯನ್ನು ತಯಾರಿಸಲಾಗುತ್ತದೆ.
ಈ ಸಮಯದಲ್ಲಿ ಗೀತಾರಿಗೆ ಯಾವುದೇ ಸಂಪಾದನೆಯಿರುವುದಿಲ್ಲ. ಅವರ ಮೂವರು ದಿನಗೂಲಿ ಕೆಲಸಕ್ಕಾಗಿ ವಲಸೆ ಹೋಗಿರುವ ಮಕ್ಕಳ ಸಂಪಾದನೆಯಿಂದ ಮನೆ ನಡೆಯುತ್ತದೆ. ಮನೆಯಲ್ಲಿನ ಮಹುವಾ ಮರ ಮನೆಯ ದೈನಂದಿನ ಅಗತ್ಯಗಳನ್ನು ಪೂರೈಸುತ್ತದೆ.
*****
ಮೂರು ದಿನಗಳ ಕಾಲ ಕಾಡಿನಲ್ಲಿ ಶ್ರಮಿಸಿದ ನಂತರ, ಗೀತಾ ಮತ್ತು ಸಕುನಿ ಸಾಕಷ್ಟು ಎಲೆಗಳನ್ನು ಸಂಗ್ರಹಿಸಿ ತಮ್ಮ ಚೀಲಗಳಲ್ಲಿ ದಾಲ್ಟನ್ ಗಂಜ್‌ಗೆ ತೆಗೆದುಕೊಂಡು ಹೋಗುತ್ತಾರೆ. ಈ ಚೀಲಗಳ ತೂಕ ಸುಮಾರು 30 ಕೆ.ಜಿ ಆಗಿದ್ದು, ಹೆಹೆಗಢ ನಿಲ್ದಾಣಕ್ಕೆ ಬರಲು 30 ನಿಮಿಷ ನಡೆಯಬೇಕು. ಗೀತಾ ನಗುತ್ತಾ ಹೇಳುತ್ತಾರೆ, “ಈ ಸಲ ನಾನು ಹೆಚ್ಚು ದಾತ್ವಾನ್ ತೆಗೆದುಕೊಂಡಿದ್ದೇನೆ.” ಅವರ ಬೆನ್ನಿನ ಮೇಲೆ ಬ್ಯಾಗುಗಳ ಜೊತೆಗೆ ಬೆಚ್ಚಗಿರಲೆಂದು ಹೊದ್ದುಕೊಂಡಿದ್ದ ಹೊದಿಕೆ ಕೂಡಾ ಇತ್ತು.
ಹೆಹೆಗಡಾ ನಿಲ್ದಾಣದಲ್ಲಿ ಮರದ ಕೆಳಗೆ ಸ್ಥಳವನ್ನು ಹುಡುಕುತ್ತಾ, ಇಬ್ಬರೂ ಕುಳಿತು ಮಧ್ಯಾಹ್ನ 12 ರ ರೈಲಿಗಾಗಿ ಕಾಯುತ್ತಾರೆ, ಅದು ಅವರನ್ನು ಡಾಲ್ಟನ್ ಗಂಜ್‌ಗೆ ಕರೆದೊಯ್ಯುತ್ತದೆ.
ಸಕುನಿ ತನ್ನ ಸಾಮಾನುಗಳನ್ನು ರೈಲಿನ ಬಾಗಿಲಿನ ಪಕ್ಕದ ಸೀಟಿನ ಬಳಿ ಇಟ್ಟುಕೊಂಡು ಈ ವರದಿಗಾರನಿಗೆ ಒಂದು ಪ್ರಮುಖ ವಿಷಯವನ್ನು ಹೇಳಿದರು, “ಎಲೆ ಮತ್ತು ದಾತ್ವಾನ್ ಮಾರುವವರು ಟಿಕೆಟ್ ಖರೀದಿಸಬೇಕಾಗಿಲ್ಲ.” ಈ ನಿಧಾನಗತಿಯ ಪ್ರಯಾಣಿಕ ರೈಲು 44 ಕಿ.ಮೀ ದೂರವನ್ನು ಕ್ರಮಿಸಲು ಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸಕುನಿ ನಿಟ್ಟುಸಿರು ಬಿಡುತ್ತಾ, "ಈ ಪ್ರಯಾಣದಲ್ಲಿ ಇಡೀ ದಿನ ವ್ಯರ್ಥವಾಗುತ್ತದೆ."
ರೈಲು ಚಲಿಸಲು ಪ್ರಾರಂಭಿಸಿತು. ಗೀತಾ ತನ್ನ 2.5 ಎಕರೆ ಜಮೀನಿನ ಬಗ್ಗೆ ಹೇಳತೊಡಗಿದರು, ಅದರಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಮತ್ತು ಜೋಳವನ್ನು ಮತ್ತು ಚಳಿಗಾಲದಲ್ಲಿ ಗೋಧಿ, ಬಾರ್ಲಿ ಮತ್ತು ಕಾಳುಗಳನ್ನು ಬೆಳೆಯುತ್ತಾರೆ. "ಈ ವರ್ಷ ಭತ್ತದ ಬೆಳೆ ಚೆನ್ನಾಗಿಲ್ಲ, ಆದರೆ ನಾವು 250 ಕೆಜಿ ಜೋಳವನ್ನು 5,000 ರೂ.ಗೆ ಮಾರಾಟ ಮಾಡಿದೆವು" ಎಂದು ಅವರು ಹೇಳುತ್ತಾರೆ.
ಸಕುನಿ ದೇವಿ ಸುಮಾರು ಒಂದು ಎಕರೆ ಭೂಮಿಯನ್ನು ಹೊಂದಿದ್ದು, ಖಾರಿಫ್ ಮತ್ತು ರಬಿ ಋತುಗಳಲ್ಲಿ ಅವರು ಕೃಷಿ ಮಾಡುತ್ತಾರೆ. “ಈ ಬಾರಿ ನಾನು ಕೃಷಿ ಮಾಡಲಿಲ್ಲ. "ಭತ್ತದ ಬೆಳೆಯನ್ನು ಬಿತ್ತಿದ್ದೆ, ಆದರೆ ಅದು ಇಳುವರಿ ನೀಡಲಿಲ್ಲ" ಎಂದು ಅವರು ಹೇಳಿದರು.
ಅವರು ಮಾತನಾಡುತ್ತಲೇ ದೋನಾ ತಯಾರಿಕೆಯಲ್ಲಿ ತೊಡಗಿಕೊಂಡರು. ಇದನ್ನು ತಯಾರಿಸಲು ನಾಲ್ಕರಿಂದ ಆರು ಎಲೆಗಳನ್ನು ಪರಸ್ಪರ ಜೋಡಿಸಿ ಬಿದಿರಿನ ನಾರಿನಿಂದ ಹೊಲಿಯುತ್ತಾರೆ. ಈ ಎಲೆಗಳು ಹಲವಾರು ಬಾರಿ ಮಡಚಿದ ನಂತರವೂ ಒಡೆಯುವುದಿಲ್ಲ, ಹೀಗಾಗಿ ಅವುಗಳಿಂದ ಎಲೆಗಳನ್ನು ತಯಾರಿಸುವುದು ತುಂಬಾ ಸುಲಭವಾಗುತ್ತದೆ. ಸಕುನಿ ವಿವರಿಸುತ್ತಾರೆ, "ಎಲೆಗಳು ದೊಡ್ಡದಾಗಿದ್ದರೆ, ಎರಡು ಎಲೆಗಳಿಂದ ಒಂದು ದೋನಾ ತಯಾರಿಸಬಹುದು. ಇಲ್ಲದಿದ್ದರೆ, ಡೋನಾ ತಯಾರಿಸಲು ನಾಲ್ಕರಿಂದ ಆರು ಎಲೆಗಳನ್ನು ಬಳಸಬೇಕಾಗುತ್ತದೆ.
ಈ ತಟ್ಟೆಯಲ್ಲಿ ಆಹಾರವನ್ನು ಬಡಿಸಿದಾಗ ಅದು ಬೀಳದಂತೆ ತಡೆಯುವ ಸಲುವಾಗಿ ಅವರು ಅದರ ಅಂಚನ್ನು ವೃತ್ತಾಕಾರದಲ್ಲಿ ಮಡಚುತ್ತಾರೆ. “ಇದರಲ್ಲಿ ಸಾರು ಹಾಕಿದರೂ ಚೆಲ್ಲುವುದಿಲ್ಲ” ಎನ್ನುತ್ತಾರೆ ಗೀತಾ ದೇವಿ.
12 ದೋನಾಗಳ ಒಂದು ಕಟ್ಟು ನಾಲ್ಕು ರೂಪಾಯಿಗಳಿಗೆ ಮಾರಾಟವಾಗುತ್ತದೆ ಮತ್ತು ಪ್ರತಿ ಕಟ್ಟು ಸುಮಾರು 60 ಎಲೆಗಳನ್ನು ಹೊಂದಿರುತ್ತದೆ. ಸುಮಾರು 1500 ಎಲೆಗಳನ್ನು ಕೀಳುವುದು, ಅವುಗಳನ್ನು ವಸ್ತುಗಳನ್ನಾಗಿ ತಯಾರಿಸುವುದು, ಸಾಗಿಸುವುದು ಇವೆಲ್ಲವನ್ನೂ ಮಾಡಿದ ನಂತರ ಅವರ ಗಳಿಕೆ 100 ರೂಪಾಯಿ.
ಮಹಿಳೆಯರು ದಾತ್ವಾನ್ ಮತ್ತು ಪೋಲಾ (ಸಾಲ್ ಎಲೆ) ಯನ್ನು 10 ರ ಕಟ್ಟುಗಳಲ್ಲಿ ಮಾರಾಟ ಮಾಡುತ್ತಾರೆ, ಅವುಗಳ ಬೆಲೆ ಕ್ರಮವಾಗಿ ಐದು ಮತ್ತು 10 ರೂಪಾಯಿಗಳು. "ಜನರು ದಾತ್ವಾನ್ ಗೆ ಐದು ರೂಪಾಯಿಗಳನ್ನು ಸಹ ಪಾವತಿಸಲು ತಯಾರಿರುವುದಿಲ್ಲ. ಚೌಕಾಸಿ ಮಾಡುತ್ತಾರೆ" ಎಂದು ಸಕುನಿ ಹೇಳುತ್ತಾರೆ.
ರೈಲು ಸಂಜೆ ಐದು ಗಂಟೆಗೆ ಡಾಲ್ಟನ್ ಗಂಜ್ ತಲುಪುತ್ತದೆ. ನಿಲ್ದಾಣದ ಹೊರಗೆ, ರಸ್ತೆಬದಿಯಲ್ಲಿ, ಗೀತಾ ನೆಲದ ಮೇಲೆ ನೀಲಿ ಪಾಲಿಥಿನ್ ಹಾಳೆಯನ್ನು ಹಾಸಿ ಇಬ್ಬರೂ ದೋನಾ ಮಾಡುವ ಕೆಲಸವನ್ನು ಪುನರಾರಂಭಿಸುತ್ತಾರೆ. ಎಲೆಗಳನ್ನು ತಯಾರಿಸಲು ಅವರು ಆರ್ಡರ್ ತೆಗೆದುಕೊಳ್ಳುತ್ತಾರೆ. ಒಂದು ಎಲೆ ಮಾಡಲು 12-14 ಎಲೆಗಳು ಬೇಕಾಗುತ್ತವೆ ಮತ್ತು ಅವರು ಅದನ್ನು 1.5 ರೂ.ಗೆ ಮಾರಾಟ ಮಾಡುತ್ತಾರೆ. ಮನೆಯೂಟ ಅಥವಾ ನವರಾತ್ರಿ ಅಥವಾ ದೇವಸ್ಥಾನಗಳಲ್ಲಿ ಆಹಾರವನ್ನು ವಿತರಿಸುವಂತಹ ವಿಶೇಷ ಸಂದರ್ಭಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ನೂರು ಅಥವಾ ಹೆಚ್ಚಿನ ಎಲೆಗಳ ಬೇಡಿಕೆಗಳನ್ನು ಪೂರೈಸಲು ಅನೇಕ ಜನರು ಒಟ್ಟಾಗಿ ಕೆಲಸ ಮಾಡುತ್ತಾರೆ.
ಗೀತಾ ಮತ್ತು ಸಕುನಿ ದೇವಿ ತಮ್ಮ ಎಲ್ಲಾ ವಸ್ತುಗಳು ಮಾರಾಟವಾಗುವವರೆಗೂ ಇಲ್ಲಿಯೇ ಇರುತ್ತಾರೆ. ಕೆಲವೊಮ್ಮೆ ಎರಡನ್ನೂ ಮಾರಾಟ ಮಾಡಲು ಹೆಚ್ಚಿನ ಜನರು ಬಂದರೆ ಅದು ಒಂದು ದಿನಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇನ್ನೂ ಕೆಲವೊಮ್ಮೆ ಎಂಟು ದಿನಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ಸಕುನಿ ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ, ನೀಲಿ ಪ್ಲಾಸ್ಟಿಕ್ ಹಾಳೆ ರಾತ್ರಿಯಲ್ಲಿ ಅವರ ಹಾಸಿಗೆಯಾಗುತ್ತದೆ, ಮತ್ತು ಅವರು ತಮ್ಮೊಂದಿಗೆ ಕೊಂಡೊಯ್ಯುವ ಕಂಬಳಿಗಳು ಉಪಯೋಗಕ್ಕೆ ಬರುತ್ತವೆ. ಅವರು ಕೆಲವು ದಿನಗಳವರೆಗೆ ಇಲ್ಲಿಯೇ ಇರಬೇಕಾದರೆ, ಅವರು ದಿನಕ್ಕೆ ಎರಡು ಬಾರಿ ಸತ್ತು (ಕಡಲೆ ಗಂಜಿ) ತಿನ್ನುತ್ತಾರೆ, ಇದಕ್ಕೆ ದಿನಕ್ಕೆ 50 ರೂ. ಬೇಕಾಗುತ್ತದೆ.
ಅವರ 'ಅಂಗಡಿ' ದಿನದ 24 ಗಂಟೆಯೂ ತೆರೆದಿರುತ್ತದೆ ಮತ್ತು ರಾತ್ರಿ ರೈಲು ಹಿಡಿಯಲು ಬರುವ ಪ್ರಯಾಣಿಕರು ಅವರಿಂದ ದಾತ್ವಾನ್ ಖರೀದಿಸುತ್ತಾರೆ. ಸಂಜೆ, ಗೀತಾ ಮತ್ತು ಸಕುನಿ ನಿಲ್ದಾಣದ ಒಳಗೆ ಹೋಗುತ್ತಾರೆ. ಡಾಲ್ಟನ್ ಗಂಜ್ ಒಂದು ಸಣ್ಣ ಪಟ್ಟಣವಾಗಿದ್ದು, ಈ ನಿಲ್ದಾಣವು ಅವರಿಗೆ ಸುರಕ್ಷಿತ ತಾಣವಾಗಿದೆ.
*****
ಮೂರು ದಿನಗಳ ನಂತರ ಗೀತಾ 30 ಕಟ್ಟು ದೋನಾ, 80 ಕಟ್ಟು ದಾತ್ವಾನ್ ಮಾರಾಟ ಮಾಡಿ 420 ರೂ. ಸಂಪಾದಿಸಿದರೆ ಸಕುನಿ 25 ಕಟ್ಟು ದೋನಾ, 50 ಕಟ್ಟು ದಾತ್ವಾನ್ ಮಾರಾಟ ಮಾಡಿ 300 ರೂ. ಗಳಿಸಿದರು. ಇದೇ ಹಣದೊಂದಿಗೆ ಇಬ್ಬರೂ ಪಲಾಮು ಎಕ್ಸ್‌ಪ್ರೆಸ್ ಹತ್ತುತ್ತಾರೆ, ಅದು ತಡರಾತ್ರಿ ಹೊರಡುತ್ತದೆ ಮತ್ತು ಮರುದಿನ ಬೆಳಿಗ್ಗೆ ಅವರನ್ನು ಬರ್ವಾಡಿಹ್ ಎನ್ನುವಲ್ಲಿ ಇಳಿಸುತ್ತದೆ. ಅಲ್ಲಿಂದ ಹೆಹೆಗಢಕ್ಕೆ ಹೋಗಲು ಲೋಕಲ್ ಟ್ರೈನ್ ಹಿಡಿಯಬೇಕು.
ಸಕುನಿ ತಮಗೆ ಸಿಕ್ಕ ಆದಾಯದಿಂದ ಅಸಂತೃಷ್ಟರಾಗಿದ್ದರು, “ಇದು ಬಹಳ ಶ್ರಮದ ಕೆಲಸ ಆದರೆ ಸಂಪಾದನೆ ತೀರಾ ಕಡಿಮೆ” ಎಂದು ತನ್ನ ಸಾಮಾಗ್ರಿಗಳನ್ನು ಕಟ್ಟುತ್ತಾ ಹೇಳಿದರು.
ಆದರೆ ಅವರು ಮತ್ತೆ ಇಲ್ಲಿಗೆ ಬರಲೇ ಬೇಕಾಗುತ್ತದೆ. “ಇದು ನಮ್ಮ ಜೀವನೋಪಾಯ” ಎನ್ನುತ್ತಾರೆ ಗೀತಾ. “ನನ್ನ ಕೈಕಾಲುಗಳು ಸರಿಯಿರುವ ತನಕ ಇದನ್ನು ಮಾಡುತ್ತೇನೆ.”
ಈ ಕಥಾನಕಕ್ಕೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ದೊರೆತಿರುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು