"ರೈಲು ಕೇವಲ ಐದು ನಿಮಿಷಗಳ ಕಾಲ ನಿಲ್ಲುತ್ತದೆ, ಅಷ್ಟರೊಳಗೆ ನಾವು ಜನಸಂದಣಿಯ ನಡುವೆ ನುಸುಳಿ ಬೇಗ ಬೇಗ ಹತ್ತಬೇಕಾಗುತ್ತದೆ. "ಕೆಲವೊಮ್ಮೆ ರೈಲು ಮುಂದೆ ಚಲಿಸಲು ಪ್ರಾರಂಭಿಸುತ್ತದೆ, ಅಂತಹ ಸಂದರ್ಭಗಳಲ್ಲಿ ನಾವು ಕೆಲವು ಕಟ್ಟುಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿಯೇ ಬಿಡಬೇಕಾಗುತ್ತದೆ." ಸಾರಂಗ ರಾಜಭೋಯಿ ಓರ್ವ ಹಗ್ಗ ತಯಾರಕಿ, ಮತ್ತು ಅವರು ಅನಿವಾರ್ಯವಾಗಿ ಬಿಟ್ಟುಹೋಗುವ ಕಟ್ಟುಗಳೆಂದರೆ ಜವಳಿ ಕಾರ್ಖಾನೆಗಳ ವ್ಯರ್ಥ ನಾರು, ಅವರಂತಹ ಮಹಿಳೆಯರು ಈ ನಾರಿನಿಂದ ಹಗ್ಗಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಈ ಹಗ್ಗಗಳನ್ನು ಹಸುಗಳು ಮತ್ತು ಎಮ್ಮೆಗಳನ್ನು ಕಟ್ಟಲು, ಟ್ರಕ್‌ಗಳು ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಸರಕುಗಳನ್ನು ಸಾಗಿಸಲು ಮತ್ತು ಬಟ್ಟೆ ಒಣಗಿಸಲು ಬಳಸಲಾಗುತ್ತದೆ.
“ಹಮಾರಿ ಖಾನ್ದಾನಿ ಹೈ [ನಮ್ಮದು ಪಾರಂಪರಿಕ ಉದ್ಯೋಗ]” ಎನ್ನುತ್ತಾರೆ ಸಂತ್ರಾ ರಾಜಭೋಯಿ. ಅವರು ಅಹಮದಾಬಾದ್‌ನ ವತ್ವಾದಲ್ಲಿನ ಪುರಸಭೆಯ ವಸತಿ ಬ್ಲಾಕ್‌ನಲ್ಲಿರುವ ತನ್ನ ಮನೆಯ ಸಮೀಪವಿರುವ ತೆರೆದ ಜಾಗದಲ್ಲಿ ಅವರು ಕುಳಿತು ಸಿಂಥೆಟಿಕ್ ದಾರದ ರಾಶಿಯಿಂದ ಗಂಟುಗಳನ್ನು ಬಿಡಿಸುವಲ್ಲಿ ನಿರತರಾಗಿದ್ದರು.
ಸಾರಂಗ ಮತ್ತು ಸಂತ್ರಾ ಗುಜರಾತಿನ ರಾಜಭೋಯಿ ಅಲೆಮಾರಿ ಸಮುದಾಯಕ್ಕೆ ಸೇರಿದವರು. ಅವರು ಈ ವ್ಯರ್ಥ ನಾರನ್ನು ತರಲು ಅಹಮದಾಬಾದ್ ನಗರದಿಂದ ಸೂರತ್ ತನಕ ರೈಲಿನಲ್ಲಿ ಪ್ರಯಾಣಿಸುತ್ತಾರೆ. ನಂತರ ಅದೇ ನಾರಿನಿಂದ ಹಗ್ಗವನ್ನು ತಯಾರಿಸುತ್ತಾರೆ. ಈ ನಾರಿನ ಖರೀದಿಗಾಗಿ ಅವರು ರೈಲು ಪ್ರಯಾಣವನ್ನು ಅವಲಂಬಿಸಿದ್ದಾರೆ. ಇದಕ್ಕಾಗಿ ಅವರು ಇಂದಿನ ರಾತ್ರಿ ಮನೆ ಬಿಟ್ಟರೆ ಮರಳುವಾಗ ಮರುದಿನ ಸಂಜೆ ಏಳು ಗಂಟೆಯಾಗಿರುತ್ತದೆ. ಈ ಸಮಯದಲ್ಲಿ ಅವರು ಮನೆಯಲ್ಲಿನ ಚಿಕ್ಕ ಮಕ್ಕಳನ್ನು ಸಂಬಂಧಿಕರ ಬಳಿ ಬಿಟ್ಟು ಹೋಗುತ್ತಾರೆ.
ಕೆಲವೊಮ್ಮೆ ಅವರು ಹತ್ತುವ ರೈಲು ಅವರು ಹೋಗಬೇಕಾದ ಜಾಗವನ್ನು ತಲುಪಿಸುವ ಹೊತ್ತಿಗೆ ಬೆಳಗಿನ ಒಂದು ಅಥವಾ ಎರಡು ಗಂಟೆಯಾಗಿರುತ್ತದೆ. ಹೀಗಾಗಿ ರೈಲು ಇಳಿದ ಮಹಿಳೆಯರು ಅಲ್ಲೇ ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಮಲಗುತ್ತಾರೆ ಮತ್ತು ಇದೇ ಕಾರಣದಿಂದಾಗಿ ಅವರು ಕಿರುಕುಳಕ್ಕೂ ಒಳಗಾಗುತ್ತಾರೆ. “ನಮ್ಮನ್ನು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಮೂರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಗುತ್ತದೆ. ಪೊಲೀಸರು ಬಡವರನ್ನು ಬೇಗ ಹಿಡಿಯುತ್ತಾರೆ. ಮನಸ್ಸು ಬಂದರೆ ವಶಕ್ಕೂ ಪಡೆಯುತ್ತಾರೆ “ ಎನ್ನುತ್ತಾರೆ ಕರುಣಾ.
ಕರುಣಾ, ಸಂತ್ರಾ ಮತ್ತು ಸಾರಂಗ ವತ್ವ ಪಟ್ಟಣದ ಚಾರ್ ಮಲಿಯಾ ಮುನ್ಸಿಪಲ್ ಹೌಸಿಂಗ್ ಕಾಲನಿಯಲ್ಲಿ ನೆರೆಹೊರೆಯ ನಿವಾಸಿಗಳು. ತಾವಿರುವ ಮನೆಗಳಲ್ಲಿ ಮೂಲಭೂತ ಸೌಕರ್ಯಗಳಾದ ನಿಯಮಿತ ನೀರು ಮತ್ತು ಚರಂಡಿ ವ್ಯವಸ್ಥೆ ಇಲ್ಲ ಎನ್ನುತ್ತಾರೆ. ಬಹಳಷ್ಟು ಹೋರಾಡಿದ ನಂತರ ವಿದ್ಯುತ್ ಸಂಪರ್ಕವೊಂದು ದೊರೆತಿದೆ.
ಈ ಮಹಿಳೆಯರು ರಾಜಭೋಯಿ ಸಮುದಾಯಕ್ಕೆ ಸೇರಿದವರು. ಈ ಸಮುದಾಯದ ಮಹಿಳೆಯರು ಸಾಂಪ್ರದಾಯಿಕವಾಗಿ ಹಗ್ಗೆ ನೇಯ್ದರೆ ಗಂಡಸರು ಕಿವಿ ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಾರೆ. ಅವರ ಸಮುದಾಯವು ಹಲವು ವರ್ಷಗಳ ಕಾಲದಿಂದ ಸರ್ಕಾರದ ದೃಷ್ಟಿ ತಮ್ಮ ಮೇಲೆ ಬೀಳುವಂತೆ ಮಾಡಲು ಮತ್ತು ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಲು ಹೋರಾಡುತ್ತಿದ್ದಾರೆ. ರಾಜಭೋಯಿ ಒಂದು ಅಲೆಮಾರಿ ಸಮುದಾಯ, “ಆದರೆ ನಮ್ಮ ಜಾತಿಯನ್ನು ನಿಗಮ್ [ಗುಜರಾತ್ ಅಲೆಮಾರಿ ಮತ್ತು ಡಿನೋಟಿಫೈಡ್ ಬುಡಕಟ್ಟು ಅಭಿವೃದ್ಧಿ ನಿಗಮ] ಅಡಿಯಲ್ಲಿ ಪಟ್ಟಿ ಮಾಡಲಾಗಿಲ್ಲ” ಎನ್ನುತ್ತಾರೆ ಈ ಸಮುದಾಯದ ಮುಖಿಯಾ ಅಥವಾ ಮುಖಂಡ ಆಗಿರುವ ರಾಜೇಶ್ ರಾಜಭೋಯಿ.
ಅಲೆಮಾರಿ ಸಮುದಾಯಗಳಿಗೆ ಲಭ್ಯವಿರುವ ಕೆಲಸದ ಅವಕಾಶಗಳು ಮತ್ತು ಇತರ ಯೋಜನೆಗಳನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸರಳವಾದ ಪ್ರಕ್ರಿಯೆಯಲ್ಲ, ಏಕೆಂದರೆ "ನಮ್ಮ ಸಮುದಾಯವನ್ನು ಅಲ್ಲಿ 'ರಾಜಭೋಯ್' ಬದಲಿಗೆ 'ಭೋಯಿರಾಜ್' ಎಂದು ಪಟ್ಟಿ ಮಾಡಲಾಗಿದೆ. ಇದರಿಂದಾಗಿ ಸರ್ಕಾರಿ ಕೆಲಸದ ವಿಷಯದಲ್ಲಿ ನಮಗೆ ಸಮಸ್ಯೆಯಾಗುತ್ತದೆ."
ಗುಜರಾತ್ ಸರ್ಕಾರದ ವೆಬ್‌ಸೈಟ್‌ನಲ್ಲಿ ಕಂಡುಬರುವ 28 ಅಲೆಮಾರಿ ಬುಡಕಟ್ಟುಗಳು ಮತ್ತು 12 ಡಿನೋಟಿಫೈಡ್ ಬುಡಕಟ್ಟುಗಳ ಪಟ್ಟಿಯಲ್ಲಿಯೂ ರಾಜ್‌ಭೋಯಿ ಅಥವಾ ಭೋಯಿರಾಜ್ ಸಮುದಾಯದ ಹೆಸರು ಇಲ್ಲ. ಗುಜರಾತಿನ 'ಭೋಯಿ' ಸಮುದಾಯವನ್ನು ಮಾತ್ರ ಭಾರತದ ಡಿನೋಟಿಫೈಡ್ ಬುಡಕಟ್ಟುಗಳು, ಅಲೆಮಾರಿ ಬುಡಕಟ್ಟುಗಳು ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ಕರಡು ಪಟ್ಟಿಯಲ್ಲಿ (ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ) ಪಟ್ಟಿಮಾಡಲಾಗಿದೆ. ಗುಜರಾತ್ ರಾಜ್ಯದಲ್ಲಿ ಭೋಯಿರಾಜ್ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. "ನಮ್ಮ ಸಮುದಾಯದ ಜನರನ್ನು ಗುಜರಾತ್‌ನ ಹೊರಗೆ ಸಲಾತ್-ಘೇರಾ ಎಂದೂ ಕರೆಯುತ್ತಾರೆ. ಅಲ್ಲಿ ಅವರು ಬೀಸುಕಲ್ಲು ಮತ್ತು ರುಬ್ಬುವ ಕಲ್ಲುಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ರಾಜೇಶ್ ಹೇಳುತ್ತಾರೆ. ಸಲಾತ್-ಘೇರಾ ಸಹ ಅಲೆಮಾರಿ ಬುಡಕಟ್ಟಾಗಿದ್ದು ಅದರ ಹೆಸರನ್ನು ವೆಬ್‌ಸೈಟಿನಲ್ಲಿ ಪಟ್ಟಿಮಾಡಲಾಗಿದೆ.
*****
ಹಗ್ಗ ತಯಾರಿಸಲು ಬೇಕಾಗುವ ಮೂಲ ವಸ್ತುವಾದ ನಾರನ್ನು ತರುವ ಸಲುವಾಗಿ ಈ ಮಹಿಳೆಯರು ಸೂರತ್ ನಗರದಲ್ಲಿನ ಜವಳಿ ಕಾರ್ಖಾನೆಗಳಿಗೆ ಓಡಾಡಬೇಕಾಗುತ್ತದೆ. “ಯತ್ವದಿಂದ ಮಣಿನಗರಕ್ಕೆ ಮತ್ರು ಮಣಿನಗರದಿಂದ ಕಿಮ್ ಎನ್ನುವಲ್ಲಿಗೆ ಹೋಗಬೇಕು. ಕೇಜಿಗೆ ಇಪ್ಪತೈದು ರೂಪಾಯಿಗಳಂತೆ ನಾವು ನಾರನ್ನು ಖರೀದಿಸುತ್ತೇವೆ” ಎಂದು ಸಾರಂಗ ಹೇಳಿದರು. ಅವರು ನಮ್ಮೊಂದಿಗೆ ಮಾತನಾಡುತ್ತಲೇ ಬಾಯಿಯಲ್ಲಿ ಎಲೆಯಡಿಕೆ ತುಂಬಿಕೊಂಡು ಕೆಲಸ ಮಾಡುತ್ತಿದ್ದರು.
ಅಹಮದಾಬಾದ್‌ನ ಮಣಿನಗರದಿಂದ ಸೂರತ್‌ನ ಕಿಮ್‌ಗೆ ಸುಮಾರು 230 ಕಿಲೋಮೀಟರ್ ದೂರವಿದೆ. ಈ ದೂರವನ್ನು ಕ್ರಮಿಸಲ ಅವರಿಗೆ ರೈಲಿನಲ್ಲಿ ಪ್ರಯಾಣ ಮಾಡದೆ ಬೇರೆ ದಾರಿಯಿಲ್ಲ; ಆದರೆ ಟಿಕೆಟ್ ದರ ವಿಪರೀತವಿದೆ. “ಹಾಗೆಂದು ನಾವು ಟಿಕೆಟ್ ಖರೀದಿಸುವುದಿಲ್ಲ” ಎಂದು ತಮ್ಮ ಬಾಯಿಯಿಂದ ಸೋರುತ್ತಿದ್ದ ವೀಳ್ಯದೆಲೆ ರಸವನ್ನು ಒರೆಸುತ್ತಾ ನಗುತ್ತಾರೆ ಸಾರಂಗ. ಕಿಮ್ ರೈಲ್ವೆ ನಿಲ್ದಾಣದಲ್ಲಿ ಇಳಿದ ನಂತರ ಈ ಮಹಿಳೆಯರು ಅಲ್ಲಿಂದ ರಿಕ್ಷಾದಲ್ಲಿ ಜವಳಿ ಕಾರ್ಖಾನೆಗಳ ಕಡೆಗೆ ಪ್ರಯಾಣಿಸುತ್ತಾರೆ.
“ಯಾವುದೇ ರೀತಿಯ ಡ್ಯಾಮೇಜ್ ಆಗಿರುವ ವಸ್ತುಗಳನ್ನು ಬದಿಗಿಡಲಾಗುತ್ತದೆ. ಕೆಲಸಗಾರರು ಅದನ್ನು ನಮಗೆ ಅಥವಾ ಚಿಂದಿ ವ್ಯಾಪಾರಸ್ಥರಿಗೆ ಮಾರುತ್ತಾರೆ” ಎನ್ನುತ್ತಾರೆ 47 ವರ್ಷದ ಗೀತಾ ರಾಜಭೋಯಿ. ಆದರೆ ಎಲ್ಲ ನಾರುಗಳೂ ಕೆಲಸಕ್ಕೆ ಬರುವುದಿಲ್ಲ ಎಂದು ವಿವರಿಸುತ್ತಾರೆ ಕರುಣಾ; “ನಮಗೆ ಕಾಟನ್ ನಾರು ಕೆಲಸಕ್ಕೆ ಬರುವುದಿಲ್ಲ. ನಾವು ರೇಸಮ್ [ಸಿಂಥೆಟಿಕ್ ಸಿಲ್ಕ್] ಮಾತ್ರ ಬಳಸುತ್ತೇವೆ. ಈ ವಸ್ತುಗಳನ್ನು ಬಳಸಿ ಬಟ್ಟೆ ತಯಾರಿಸುವ ಕಾರ್ಖಾನೆಗಳು ಕಿಮ್ ನಗರದಲ್ಲಿ ಮಾತ್ರವೇ ಇರುವುದು.”
ಕೆಲವೊಮ್ಮೆ ಕಚ್ಛಾ ವಸ್ತು (ನಾರು) ಗಂಟಾಗಿರುತ್ತವೆ. ಇಂತಹ ನಾರಿಗೆ ಬೆಲೆ ಕಡಿಮೆ ಎನ್ನುತ್ತಾರೆ ಗೀತಾ. ಇದರ ಬೆಲೆ ,ಕೇಜಿಗೆ 15 ರೂಪಾಯಿಗಳಿಂದ 27 ರೂಪಾಯಿಯ ತನಕ ಇರುತ್ತದೆ. ಸೋಫಾ, ಬೆಡ್ಡಿಂಗ್ ಮತ್ತು ತಲೆದಿಂಬು ತಯಾರಿಕೆಯಲ್ಲಿ ಬಳಸಲಾಗುವ ಬಿಳಿ ನಾರು ದುಬಾರಿ - ಕೇಜಿಗೆ 40 ರೂಪಾಯಿ.
“ಒಬ್ಬ ಮಹಿಳೆ 100 ಕೇಜಿಯಷ್ಟು ನಾರು ತರಬಲ್ಲರು. ಅವರಿಗೆ 25 ಕಿಲೋ ಕೂಡಾ ದೊರಕಬಹುದು. ಕೆಲವೊಮ್ಮೆ ಕೇವಲ 10 ಕೇಜಿ ಸಿಗುವುದೂ ಇದೆ” ಎನ್ನುತ್ತಾರೆ ಸಂತ್ರಾ. ಅಷ್ಟು ಕೂಡಾ ಸಿಗುತ್ತದೆ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ. ನಾರು ಹುಡುಕಿಕೊಂಡು ಬಹಳಷ್ಟು ಜನರು ಬರುತ್ತಾರೆ. ಆದರೆ ಎಲ್ಲರಿಗೂ ಸಾಲುವಷ್ಟು ನಾರು ಲಭ್ಯವಿರುವುದಿಲ್ಲ.
ಕಿಮ್‌ನಿಂದ ಅಹಮದಾಬಾದ್‌ಗೆ ವಸ್ತುಗಳನ್ನು ಸಾಗಿಸಲು ಅವರು "ಕಿಮ್ ನಗರದಲ್ಲಿ ಹಲವು ಕಾರ್ಖಾನೆಗಳಿಗೆ ಸುತ್ತಾಡಿ ಮೂಲ ವಸ್ತುಗಳನ್ನು ಖರೀದಿಸಬೇಕು. ನಂತರ ಅದನ್ನು ನಿಲ್ದಾಣಕ್ಕೆ ಸಾಗಿಸಬೇಕು" ಎಂದು ಸಾರಂಗ ವಿವರಿಸುತ್ತಾರೆ.
ನಿಲ್ದಾಣದಲ್ಲಿ ಅವರ ದೊಡ್ಡ ದಾರದ (ನಾರು) ಕಟ್ಟುಗಳು ರೈಲ್ವೆ ಅಧಿಕಾರಿಗಳ ಗಮನಸೆಳೆಯುತ್ತದೆ. “ಅವರು ನಮ್ಮನ್ನು ಹಿಡಿದಾಗ ಕೆಲವು ಅಧಿಕಾರಿಗಳು ನಾವು ಬಡವರು ಎಂದು ಕೇಳಿಕೊಂಡಾಗ ಬಿಟ್ಟು ಬಿಡುತ್ತಾರೆ. ಆದರೆ ಕೆಲವು ಪ್ರತಿಷ್ಟೆ ತೋರಿಸುವವರಿಗೆ 100, 200 ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಪ್ರತಿ ಸಲ ನಾವು ಸಾವಿರ ರೂಪಾಯಿ ಬೆಲೆಯ ಕಚ್ಚಾವಸ್ತು ಖರೀದಿಸಿದರೆ ಮುನ್ನೂರು ರೂಪಾಯಿ [ತಿರುಗಾಟಕ್ಕೆ] ಖರ್ಚಾಗುತ್ತದೆ “ ಎನ್ನುತ್ತಾರೆ ಕರುಣಾ. ಕಚ್ಚಾವಸ್ತು ಸಿಗಲಿ ಅಥವಾ ಸಿಗದಿರಲಿ 300 ರೂಪಾಯಿ ಖರ್ಚು ಇದ್ದೇ ಇರುತ್ತದೆ.
30 ಮೊಳದ ಹಗ್ಗವನ್ನು 80 ರೂಪಾಯಿ ಬೆಲೆಗೆ ಮಾರಿದರೆ 50 ಮೊಳ ಹಗ್ಗವನ್ನು 100ಕ್ಕೆ ಮಾರಲಾಗುತ್ತದೆ.
ಮಹಿಳೆಯರು ತಮ್ಮೊಂದಿಗೆ 40-50 ಹಗ್ಗಗಳನ್ನು ಒಯ್ಯುತ್ತಾರೆ. ಮಹಮದಾಬಾದ್, ಆನಂದ್, ಲಿಂಬಾಚಿ, ತಾರಾಪುರ, ಕತ್ಲಾಲ್, ಖೇಡಾ, ಗೋವಿಂದಪುರ, ಮಾತರ್, ಚಾಂಗಾ, ಪಲ್ಲಾ, ಗೋಮತಿಪುರ ಮತ್ತು ಇತರ ಅನೇಕ ಸ್ಥಳಗಳಲ್ಲಿ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಕೆಲವೊಮ್ಮೆ ಎಲ್ಲವನ್ನೂ ಮತ್ತು ಕೆಲವೊಮ್ಮೆ ಸುಮಾರು 20 ಹಗ್ಗಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.
“ನಾವು ಬಹಳ ಕಷ್ಟಪಟ್ಟು ಹಗ್ಗ ತಯಾರಿಸಿ ಮತ್ತೆ ಅದನ್ನು ಸಾಗಿಸಲು ಹಣ ಖರ್ಚು ಮಾಡಿಕೊಂಡು ನಾಡಿಯಾಡ್ ಮತ್ತು ಖೇಡಾದಂತಹ ಊರುಗಳಿಗೆ ಹೋಗುತ್ತೇವೆ. ಅಲ್ಲಿ ಜನರು 100 ರೂಪಾಯಿ ಬದಲು 50-60 ರೂಪಾಯಿಗಳಿಗೆ ಕೇಳುತ್ತಾರೆ” ಎನ್ನುತ್ತಾರೆ ಸಾರಂಗ. ಇದರ ಜೊತೆಗೆ ಓಡಾಟದ ಖರ್ಚು ಮತ್ತು ದಂಡವೂ ಅವರ ಸಂಪಾದನೆಯನ್ನು ತಿನ್ನುತ್ತವೆ.
ಹಗ್ಗ ತಯಾರಿಕೆ ಬಹಳ ಕಷ್ಟದ ಮತ್ತು ದಣಿವಿನ ಕೆಲಸ. ಅವರು ಈ ಕೆಲಸವನ್ನು ಬಿಡುವಿನ ಸಮಯದಲ್ಲಿ ಮಾಡುತ್ತಾರೆ. “ಜಬ್ ನಲ್ ಆತಾ ಹೈ ತಬ್ ಉಟ್ ಜಾತೇ ಹೈ [ನಳ್ಳಿಯಲ್ಲಿ ನೀರು ಬಂದ ತಕ್ಷಣ ಎದ್ದು ಓಡುತ್ತೇವೆ] ಎನ್ನುತ್ತಾರೆ ಅರುಣಾ ರಾಜಭೋಯಿ.
ಮನೆ ಚಿಕ್ಕದಾಗಿರುವ ಕಾರಣ ಮಹಿಳೆಯರು ಮನೆಯ ಹೊರಗೆ ಬಿಸಿಲಿನಲ್ಲೇ ಕೆಲಸ ಮಾಡುತ್ತಾರೆ. “ನಾವು ಬೆಳಗ್ಗೆ ಏಳರಿಂದ ಮಧ್ಯಾಹ್ನದ ತನಕ ಕೆಲಸ ಮಾಡುತ್ತೇವೆ. ನಂತರ ಮಧ್ಯಾಹ್ನ ಎರಡೂವರೆಯಿಂದ ಐದೂವರೆ ತನಕ ಮಾಡುತ್ತೇವೆ” ಎಂದು ಅವರು ಹೇಳುತ್ತಾರೆ. ಬೇಸಗೆಯಲ್ಲಿ ಹಗಲು ದೀರ್ಘವಾಗಿರುತ್ತದೆಯಾದ್ದರಿಂದ ಹೆಚ್ಚು ಕೆಲಸ ಮಾಡುತ್ತೇವೆ. ಆಗ ದಿನಕ್ಕೆ 20-25 ಹಗ್ಗಗಳನ್ನು ತಯಾರಿಸಿದರೆ ಚಳಿಯ ದಿನಗಳಲ್ಲಿ ಸುಮಾರು 10-15 ತಯಾರಿಸುತ್ತೇವೆ.”
ಒಂದು ಸಣ್ಣ ಕೈ ಚಕ್ರ ಮತ್ತು ದೊಡ್ಡ ಸ್ಪಿನ್ನಿಂಗ್ ಚಕ್ರ ಅವರ ಕೆಲಸಕ್ಕೆ ಬೇಕಾದ ಮುಖ್ಯ ಉಪಕರಣಗಳು.
ಒಬ್ಬ ಮಹಿಳೆ ಚಕ್ರವನ್ನು ತಿರುಗಿಸಿದರೆ ಇನ್ನೊಬ್ಬರು ದಾರದ ಎಳೆ ಗಂಟಾಗದಂತೆ ಹಿಡಿದುಕೊಳ್ಳುತ್ತಾರೆ. ಇನ್ನೊಬ್ಬ ಮಹಿಳೆ ಹಗ್ಗದ ತುದಿಯಲ್ಲಿದ್ದು ಅದನ್ನು ನೋಡಿಕೊಳ್ಳುತ್ತಾರೆ. ಈ ಕೆಲಸಕ್ಕೆ ಒಟ್ಟಿಗೇ ಮೂರು ಅಥವಾ ನಾಲ್ಕು ಜನರು ಬೇಕಾಗುತ್ತಾರೆಯಾದ್ದರಿಂದ ಮನೆಯವರೆಲ್ಲ ಸೇರಿ ಈ ಕೆಲಸವನ್ನು ಮಾಡುತ್ತಾರೆ. “ನಾವು ಚಕ್ರವನ್ನು ತಿರುಗಿಸಿದಂತೆ ನಾರು ದಾರವಾಗಿ ರೂಪುಗೊಳ್ಳುತ್ತದೆ. ಒಟ್ಟು ಮೂರು ಪ್ರತ್ಯೇಕ ಎಳೆಗಳು ತಯಾರಾಗುತ್ತವೆ. ನಂತರ ಮೂರೂ ಎಳೆಗಳನ್ನು ಒಟ್ಟುಗೂಡಿಸಿ ಹಗ್ಗವನ್ನು ನೇಯಲಾಗುತ್ತದೆ” ಎಂದು ಸರ್ವಿಲಾ ರಾಜಭೋಯಿ ಹೇಳುತ್ತಾರೆ. 15-20 ಅಡಿ ಉದ್ದದ ಹಗ್ಗ ತಯಾರಿಸಲು 30-45 ನಿಮಿಷ ಬೇಕಾಗುತ್ತದೆ. ದಿನವೊಂದಕ್ಕೆ ಒಂದು ಗುಂಪು 8-10 ಹಗ್ಗಗಳನ್ನು ತಯಾರಿಸುತ್ತಾರೆ. ಕೆಲವೊಮ್ಮೆ ಇಪ್ಪತ್ತು ಹಗ್ಗಗಳನ್ನು ಸಹ ತಯಾರಿಸುತ್ತಾರೆ. ಬೇಡಿಕೆ ಬಂದಾಗ 50 – 100 ಅಡಿ ಉದ್ದ ಹಗ್ಗವನ್ನೂ ತಯಾರಿಸಿ ಕೊಡುತ್ತಾರೆ.
ಭೋಯಿ ಸಮುದಾಯವು ಗುಜರಾತ್ ರಾಜ್ಯದಲ್ಲಿ ಹೆಚ್ಚಾಗಿ ಸೌರಾಷ್ಟ್ರ ಪ್ರದೇಶದಲ್ಲಿ ನೆಲೆಗೊಂಡಿದೆ. 1940ರ ದಶಕದಲ್ಲಿ ಪ್ರಕಟವಾದ ಎನ್ಸೈಕ್ಲೋಪೀಡಿಕ್ ಗುಜರಾತಿ ನಿಘಂಟು ಭಗವದ್ಗೋಮಂಡಲ್ ಹೇಳುವಂತೆ, ಭೋಯಿ ಜನರು ಒಂದು ಕಾಲದಲ್ಲಿ ಚರ್ಮದ ಟ್ಯಾನಿಂಗ್ ಕೆಲಸವನ್ನು ಮಾಡುತ್ತಿದ್ದ “ಹಿಂದುಳಿದ ಶೂದ್ರ ಸಮುದಾಯ”ವಾಗಿತ್ತು. ಆದರೆ ಪ್ರಬಲ ಜೈನ್ ಸಮುದಾಯವು ಪ್ರಾಣಿ ಹತ್ಯೆಗೆ ವಿರೋಧವನ್ನು ಒಡ್ಡಿದ್ದರಿಂದಾಗಿ ಅವರಲ್ಲಿ ಅನೇಕರು ಅನಿವಾರ್ಯವಾಗಿ ಕೃಷಿ ಮತ್ತು ಇತರೇ ಕೂಲಿ ಕೆಲಸಗಳತ್ತ ಹೋಗಬೇಕಾಯಿತು. ಹೀಗೆ ವಿವಿಧ ವೃತ್ತಿಗಳತ್ತ ಹೋದ ಭೋಯಿ ಜನರು ವಿವಿಧ ಹೆಸರುಗಳಿಂದ ಗುರುತಿಸಲ್ಪಟ್ಟರು. ರಾಜಭೋಯಿ ಸಮುದಾಯ ಬಹುಶಃ ಪಲ್ಲಕ್ಕಿ ಹೊರುವ ಕೆಲಸ ಮಾಡುತ್ತಿದ್ದರಬಹುದು ಎನ್ನಲಾಗುತ್ತದೆ.
ಸಮುದಾಯದ ಗಂಡಸರು ಹೆಂಗಸರ ಕಠಿಣ ಪರಿಶ್ರಮ ಮತ್ತು ಸಂಪಾದನೆಯನ್ನು ಕಡೆಗಣಿಸುತ್ತಾರೆ. ಕಿವಿ ಸ್ವಚ್ಛಗೊಳಿಸುವ ಕೆಲಸ ಮಾಡುವ ಭಾನು ರಾಜಭೋಯಿ ಹೆಂಗಸರ ಕೆಲಸ ಮನೆ ಖರ್ಚಿಗಷ್ಟೇ ಎನ್ನುತ್ತಾರೆ. ಅವರು ಹೇಳುವಂತೆ, “ಅದರಿಂದ ಅಂತಹದ್ದೇನೂ ಪ್ರಯೋಜನವಿಲ್ಲ. ಮನೆ ಖರ್ಚಿಗಾಗುತ್ತದೆ ಅಷ್ಟೇ.” ಅಷ್ಟಕ್ಕೂ ಜಾತಿ ಆಧಾರಿತ ಕೆಲಸಗಳಲ್ಲಿನ ಸಂಪಾನೆಗಳ ಕಥೆಯೇ ಅಷ್ಟು. ಅದರಿಂದ ಬರುವ ಸಂಪಾದನೆಯೇನಿದ್ದರೂ “ಥೋಡಾ ಬಹುತ್ ಘರ್ ಕಾ ಖರ್ಚ್” ನಿಭಾಯಿಸಲು ಸಾಕಾಗುತ್ತವೆ.
ಆದರೆ ಗೀತಾಬಾಯಿವರ ಪ್ರಕಾರ ಸಂಬಳದ ಕೆಲಸ ಹುಡುಕುವುದಕ್ಕಿಂತ ಈ ಕೆಲಸವೇ ಉತ್ತಮ. ಅದಕ್ಕೆ ಅವರದೇ ಆದ ಸಮರ್ಥನೆಯೂ ಇದೆ, “ದಸ್ವೀ ಕೇ ಬಾದ್ ಬಾರವೀ, ಉಸ್ಕೇ ಬಾದ್ ಕಾಲೇಜ್, ತಬ್ ಜಾಕೇ ನೌಕರಿ ಮಿಲ್ತೇ ಹೈ. ಇಸ್ ಸೇ ಅಚ್ಚಾ ಅಪ್ನಾ ದಂಧಾ ಸಂಭಾಲೋ! [10ನೇ ತರಗತಿ ಮುಗಿಸಿದ ನಂತರ 12ನೇ ತರಗತಿಗೆ ಹೋಗಬೇಕು ಅದರ ನಂತರ ಕಾಲೇಜು ಪಾಸು ಮಾಡಬೇಕು. ಇಷ್ಟು ಮಾಡಿದರಷ್ಟೇ ಕೆಲಸ ಸಿಗುವುದು. ಇದಕ್ಕಿಂತಲೂ ಸ್ವಂತ ಉದ್ಯೋಗ ಮಾಡುವುದು ಉತ್ತಮ!].”
ಈ ವರದಿಗಾರ ಆತಿಶ್ ಇಂದ್ರೇಕರ್ ಚಾರಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು