ಮಶ್ವಾಡ್ ನಾನು ಹುಟ್ಟಿ ಬೆಳೆದ ಊರು. ಸಣ್ಣಂದಿನಿಂದ ಇಲ್ಲಿ ದಿನವೂ ನೀರಿಗಾಗಿ ಜನರು ಪರದಾಡುವುದನ್ನು ನಾನು ನೋಡಿದ್ದೇನೆ.
ಈ ಮಣ್ ದೇಶ್ ಪ್ರದೇಶ ಕೇಂದ್ರ ಭಾಗದಲ್ಲಿದೆ. ಅಲೆಮಾರಿ ಸಮುದಾಯವಾದ ಧಂಗರ್ ಕುರಿಗಾಹೊ ಜನರು ಇಲ್ಲಿ ಶತಮಾನಗಳಿಂದ ವಾಸವಿದ್ದಾರೆ. ದಖ್ಖನ್ ಪ್ರಸ್ಥಭೂಮಿಯಲ್ಲಿನ ಈ ಜನರು ಇಲ್ಲಿ ಬದುಕುಳಿಯಲು ಕಾರಣ ಅವರ ನೀರಿನ ಮೂಲಗಳನ್ನು ಹುಡುಕುವ ಜ್ಞಾನ.
ವರ್ಷಗಳ ಕಾಲ ಮಹಿಳೆಯರು ನೀರಿಗಾಗಿ ಸಾಲುಗಟ್ಟಿ ನಿಂತಿರುವುದನ್ನು ನೋಡಿದ್ದೇನೆ. ರಾಜ್ಯ ಸರ್ಕಾರ 12 ದಿನಗಳಿಗೊಮ್ಮೆ ಒಂದು ಗಂಟೆಯ ಕಾಲ ನೀರು ಬಿಡುತ್ತದೆ. ವಾರದ ಸಂತೆಯಲ್ಲಿ ರೈತರು ತಮ್ಮ ಸಮಸ್ಯೆಗಳ ಕುರಿತು ಮಾತನಾಡಿದರು. ಈಗ ಎಷ್ಟು ಆಳದ ಬಾವಿ ಕೊರೆದರೂ ಅವರಿಗೆ ನೀರು ಸಿಗುತ್ತಿಲ್ಲ. ಸಿಕ್ಕ ನೀರೂ ಕಲುಷಿತವಾಗಿರುತ್ತದೆ, ಇದು ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಕಾರಣವಾಗುತ್ತದೆ,
ಇಂತಹ ಪರಿಸ್ಥಿಯಲ್ಲಿ ಇಲ್ಲಿ ಕೃಷಿಯೆನ್ನುವುದು ಕನಸಿನ ಮಾತು. ಇಲ್ಲಿನ ಯುವಕರು ಮುಂಬಯಿಯಂತಹ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಾರೆ.
ಕರ್ಖೇಲ್ ಎನ್ನುವ ಊರಿನ ಗಾಯಕವಾಡ್ ಅವರು ತಮ್ಮ ದನಗಳನ್ನು ಮಾರಿ ಮೇಕೆಗಳನ್ನು ಮಾತ್ರ ಇರಿಸಿಕೊಂಡಿದ್ದಾರೆ. ನೀರಿಲ್ಲದ ಕಾರಣ ಅವರ ಹೊಲ ಬಂಜರು ಬಿದ್ದಿದ್ದರೆ, ಅವರ ಮಕ್ಕಳು ಕೂಲಿ ಕೆಲಸ ಹುಡುಕಿಕೊಂಡು ಮುಂಬಯಿಗೆ ಪ್ರಯಾಣಿಸಿದ್ದಾರೆ. 60 ಪ್ರಾಯದ ಗಾಯಕವಾಡ್ ಪ್ರಸ್ತುತ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ತಾನು ಸಾಯುವುದರೊಳಗೆ ತನ್ನ ಊರಿಗೆ ನೀರು ಸಿಗಬಹುದೆನ್ನುವ ಭರವಸೆಯೊಂದಿಗೆ ಬದುಕುತ್ತಿದ್ದಾರೆ. ಇಡೀ ಕುಟುಂಬವು ಸ್ನಾನಕ್ಕೆ ಬಳಸಿದ ನೀರನ್ನು ಪಾತ್ರೆ ತೊಳೆಯಲು ಹಾಗೂ ಬಟ್ಟೆ ಒಗೆಯಲು ಬಳಸುತ್ತದೆ. ನಂತರ ಅದೇ ನೀರನ್ನು ಮನೆಯ ಎದುರಿನ ಮಾವಿನ ಮರಕ್ಕೆ ಹಾಕಲಾಗುತ್ತದೆ.
ದಿ ಸರ್ಚ್ ಆಫ್ ವಾಟರ್ ಚಿತ್ರವು ಸತಾರಾ ಜಿಲ್ಲೆಯ ಮಣ್ ಪ್ರದೇಶದ ಸುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಇಲ್ಲಿನ ನೀರಿನ ಬಿಕ್ಕಟ್ಟು ಮತ್ತು ಅವರಿಗೆ ನೀರು ಸರಬರಾಜು ಮಾಡುವ ಜನರ ಸಂಕಷ್ಟಗಳನ್ನು ದಾಖಲಿಸಿದೆ.
ಅನುವಾದ: ಶಂಕರ. ಎನ್. ಕೆಂಚನೂರು