ಸಂತೋಷಿ ಕೋರಿ ಮಾಲಿಕತ್ವದ ಹೊಸ ಅನುಭೂತಿಯನ್ನು ಸಂಭ್ರಮಿಸುತ್ತಿದ್ದಾರೆ. “ನಾವು ರೈತ ಮಹಿಳೆಯರೇ ಸೇರಿ ಈ ರೈತರ ಸಹಕಾರಿ ಸಂಘವನ್ನು ಆರಂಭಿಸಿದ್ದು. ಈಗ ಊರಿನ ಗಂಡಸರೂ ಇದೊಂದು ಒಳ್ಳೆಯ ಉಪಾಯ ಎಂದು ಒಪ್ಪಿಕೊಂಡಿದ್ದಾರೆ” ಎಂದು ಅವರು ನಗುತ್ತಾ ಹೇಳುತ್ತಾರೆ.

ಭೈರಹಾ ಪಂಚಾಯತ್ ವ್ಯಾಪ್ತಿಯ ಗುಚರಾ ಎನ್ನುವ ಕುಗ್ರಾಮದ ದಲಿತ ರೈತ ಮಹಿಳೆಯಾದ ಅವರು 2024ರ ಜನವರಿಯಲ್ಲಿ ಪನ್ನಾ ಜಿಲ್ಲೆಯ 300 ಆದಿವಾಸಿ, ದಲಿತ ಮತ್ತು ಒಬಿಸಿ (ಇತರ ಹಿಂದುಳಿದ ವರ್ಗ) ಮಹಿಳಾ ಸದಸ್ಯರನ್ನು ಹೊಂದಿರುವ ರೂಂಜ್‌ ಮಹಿಳಾ ರೈತ ಉತ್ಪಾದಕ ಸಹಕಾರಿ ನಿಯಮಿತಕ್ಕೆ (ಎಮ್‌ಎಫ್‌ಪಿಒ) ಸದಸ್ಯತ್ವ ಶುಲ್ಕವಾಗಿ 1,000 ರೂ.ಗಳನ್ನು ಪಾವತಿಸಿದರು. ರೂಂಜ್ ಸಂಸ್ತೆಯ ಐದು ಮಂದಿ ಮಂಡಳಿ ಸದಸ್ಯರಲ್ಲಿ ಸಂತೋಷಿ ಕೂಡಾ ಒಬ್ಬರು. ಅವರನ್ನು ಸಭೆಗಳಲ್ಲಿ ಸಂಸ್ಥೆಯ ಕೆಲಸಗಳ ಕುರಿತು ಪ್ರಚಾರ ಭಾಷಣ ಮಾಡುವುದಕ್ಕೂ ಆಹ್ವಾನಿಸಲಾಗುತ್ತದೆ.

“ಹಿಂದೆ ನಾವು ಅರ್ಹರ್‌ ದಾಲ್‌ ದಾಲ್ [ತೊಗರಿ ಬೇಳೆ] ಯನ್ನು ಮಿಲ್‌ ಮಾಡದೆ ಹಾಗೇ ಮಾರುತ್ತಿದ್ದೆವು. ಈ ಕಾರಣಕ್ಕಾಗಿ ಬಿಚೋಲಿಯಾ [ವ್ಯಾಪಾರಿ] ತೊಗರಿಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದ. ಅಲ್ಲದೆ ಅವನು ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲವಾದ ಕಾರಣ ನಮಗೆ ಸರಿಯಾದ ಸಮಯಕ್ಕೆ ಹಣವೂ ಸಿಗುತ್ತಿರಲಿಲ್ಲ” ಎಂದು ಅವರು ಪರಿಗೆ ತಿಳಿಸಿದರು. ಮೂರು ಮಕ್ಕಳ ತಾಯಿಯಾದ ಈ 45 ವರ್ಷದ ಮಹಿಳೆ ತನ್ನ ಕುಟುಂಬದ ಎರಡು ಎಕರೆ ಮಳೆಯಾಶ್ರಿತ ಭೂಮಿಯಲ್ಲಿ ತೊಗರಿ ಬೆಳೆಯನ್ನು ಬೆಳೆಯುತ್ತಾರೆ. ಇದರ ಜೊತೆಗೆ ಇನ್ನೊಂದು ಎಕರೆಯನ್ನು ಗೇಣಿಗೆ ಪಡೆದಿದ್ದಾರೆ. ದೇಶದಲ್ಲಿ ಕೇವಲ 11 ಪ್ರತಿಶತದಷ್ಟು ಮಹಿಳೆಯರು ಮಾತ್ರ ಭೂಮಿಯ ಮಾಲಿಕತ್ವವನ್ನು ಹೊಂದಿದ್ದಾರೆ. ಮಧ್ಯಪ್ರದೇಶದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಯಮುನಾ ನದಿಯನ್ನು ಸೇರುವ ಭಾಘೈನ್‌ ನದಿಯ ಉಪನದಿಯಾದ ರೂಂಜ್‌ ನದಿಯ ಹೆಸರನ್ನೇ ಈ ಎಮ್‌ಎಫ್‌ಪಿ ಸಂಸ್ಥೆಗೆ ಇರಿಸಲಾಗಿದೆ. ಇದು ಅಜಯಗಢ ಮತ್ತು ಪನ್ನಾ ಬ್ಲಾಕಿನ 28 ಹಳ್ಳಿಗಳ ರೈತ ಮಹಿಳೆಯರನ್ನು ಸದಸ್ಯರನ್ನಾಗಿ ಹೊಂದಿದೆ.  2024ರಲ್ಲಿ ಆರಂಭಗೊಂಡ ಈ ಸಂಸ್ಥೆಯು ಪ್ರಸ್ತುತ 40 ಲಕ್ಷ ರೂಪಾಯಿಗಳ ವಹಿವಾಟನ್ನು ಹೊಂದಿದ್ದು, ಮುಂದಿನ ವರ್ಷ ಇದನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

PHOTO • Priti David
PHOTO • Priti David

ಎಡ : ಪನ್ನಾ ಜಿಲ್ಲೆಯ ಭೈರಹಾ ಪಂಚಾಯತ್ ವ್ಯಾಪ್ತಿಯ ತನ್ನ ಹೊಲದಲ್ಲಿ ಸಂತೋಷಿ . ಬಲ : ರೂಂ ಜ್ ನದಿ ( ಸಹಕಾರಿ ಸಂಸ್ಥೆಗೆ ಇದರ ಹೆಸರ ನ್ನೇ ಇಡಲಾಗಿದೆ ) ದಡದಲ್ಲಿ ರೈತರು ತೊಗರಿ ಬೆಳೆ ಬೆಳೆಯುತ್ತಾರೆ

PHOTO • Priti David
PHOTO • Priti David

ಎಡ: ಪನ್ನಾ ಜಿಲ್ಲೆಯ ಅಜಯಗಢದ ಸಂಸ್ಥೆಯಲ್ಲಿರುವ ಬೇಳೆ ವಿಂಗಡಿಸುವ ಯಂತ್ರದೊಂದಿಗೆ ಕೆಲಸ ಮಾಡುತ್ತಿರುವ ಭೂಪೇನ್ ಕೌಂಡರ್ ( ಕೆಂಪು ಶರ್ಟ್ ) ಮತ್ತು ಕಲ್ಲು ಆದಿವಾಸಿ ( ನೀಲಿ ಶರ್ಟ್ ). ಬಲ : ಅಮರ್ ಶಂಕರ್ ಕೌಂಡರ್ ದ್ವಿದಳ ಧಾನ್ಯಗಳನ್ನು ಆರಿ ಸುತ್ತಿದ್ದಾರೆ

“ನಮ್ಮ ಊರಿನ ಹುತೇಕ ಎಲ್ಲಾ ಕುಟುಂಬಗಳು ಕನಿಷ್ಠ 2-4 ಎಕರೆ ಭೂಮಿಯನ್ನು ಹೊಂದಿವೆ. ನಾವೆಲ್ಲರೂ ಜೈವಿಕ್ [ಸಾವಯವ] ಬೆಳೆಗಳನ್ನು ಬೆಳೆಯಲು ನಿರ್ಧರಿಸಿದೆವು. ಇದೇ ಕಾರಣಕ್ಕಾಗಿ ನಾವು ತೊಗರಿ ಬೆಳೆಯನ್ನು ಆಯ್ದುಕೊಂಡೆವು. ನಂತರ ಬೆಳೆಯನ್ನು ಸಂಸ್ಕರಿಸುವ ಸಲುವಾಗಿ ಯಂತ್ರವನ್ನು ಕೊಳ್ಳುವ ಸಲುವಾಗಿ ಸಂಸ್ಥೆಯನ್ನು ಹುಟ್ಟುಹಾಕಿದೆವು” ಎಂದು ಸಂತೋಷಿ ತಾವು ಸಹಕಾರಿ ಸಂಘಟನೆಯನ್ನು ಹುಟ್ಟುಹಾಕಿದ್ದರ ಹಿಂದಿನ ಕಾರಣವನ್ನು ತಿಳಿಸಿದರು.

ಅಜಯಗಢ ಪ್ರದೇಶದ ತೊಗರಿಬೇಳೆ ದೊಡ್ಡ ಮಟ್ಟದ ಖ್ಯಾತಿಯನ್ನು ಗಳಿಸಿದೆ. “ರೂಂಜ್‌ ನದಿಯ ಗುಂಟ ಇರುವ ಧರಂಪುರ ಪ್ರದೇಶದಲ್ಲಿ ಬೆಳೆಯುವ ತೊಗರಿ ತನ್ನ ರುಚಿ ಮತ್ತು ಸುವಾಸನೆಯಿಂದಾಗಿ ಪ್ರಸಿದ್ಧಿಯನ್ನು ಗಳಿಸಿದೆ” ಎಂದು ಪ್ರಧಾನ್‌ ಸಂಸ್ಥೆಯ ಗರ್ಜನ್ ಸಿಂಗ್ ಹೇಳುತ್ತಾರೆ. ವಿಂಧ್ಯಾಚಲ ಬೆಟ್ಟಗಳಿಂದ ನದಿ ಹೊತ್ತು ತರುವ ಮಣ್ಣು ಕೃಷಿ ಭೂಮಿಯನ್ನು ಫಲವತ್ತಾಗಿಸಿದೆ ಎಂದು ಸ್ಥಳೀಯ ರೈತರು ಹೇಳುತ್ತಾರೆ. ಪ್ರಧಾನ್‌ ಇಲ್ಲಿನ ರೈತರೊಂದಿಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯಾಗಿದ್ದು, ಮಹಿಳಾ ರೈತರಿಗೆಂದೇ ವಿಶೇಷವಾಗಿ ಸ್ಥಾಪಿಸಲಾಗಿರುವ ಸಹಕಾರಿ ಸಂಘದ ಸ್ಥಾಪನೆಯಲ್ಲಿ ಅದು ಪ್ರಮುಖ ಪಾತ್ರವನ್ನು ವಹಿಸಿದೆ.

ಸಂತೋಷಿಯವರಂತಹ ರೈತ ಮಹಿಳೆಯರು ತಮ್ಮ ಬೆಳೆಗೆ ಸರಿಯಾದ ಬೆಲೆಯನ್ನು ಪಡೆಯುವ ದೃಢ ನಿರ್ಧಾರವನ್ನು ಮಾಡಿದರು. “ಈಗ ನಾವು ತೊಗರಿಯನ್ನು ಉತ್ಪಾದಕ ಸಂಸ್ಥೆಗೆ ಮಾರುವುದರ ಜೊತೆಗೆ ಸರಿಯಾದ ಸಮಯಕ್ಕೆ ಹಣವನ್ನೂ ಪಡೆಯಬಹುದು” ಎಂದು ಅವರು ಹೇಳುತ್ತಾರೆ. ಸಾಮಾನ್ಯವಾಗಿ ತೊಗರಿ ಕ್ವಿಂಟಾಲಿಗೆ 10,000 ರೂ.ಗೆ ಮಾರಾಟವಾಗುತ್ತದೆ, ಆದರೆ ಮೇ ತಿಂಗಳಿನಲ್ಲಿ ಇದರ ಬೆಲೆ ಬೆಲೆ 9,400 ರೂಪಾಯಿಗಳಿಗೆ ಇಳಿದಿತ್ತು. ಆದರೆ ತಮ್ಮ ಸಂಸ್ಥೆಯ ಮೂಲಕ ಹೊಲದಲ್ಲೇ ಮಾರಿದ್ದರಿಂದಾಗಿ ತಮಗೆ ಸಿಕ್ಕ ಬೆಲೆಯೇನೂ ಕಡಿಮೆಯೇನಲ್ಲ ಎನ್ನುವುದು ರೂಂಜ್‌ ಸಂಸ್ಥೆಯ ಸದಸ್ಯರ ಅಭಿಪ್ರಾಯ.

ರಾಕೇಶ್‌ ರಜಪೂತ್‌ ಅವರು ರೂಂಜ್‌ ಸಂಸ್ಥೆಯ ಸಿಇಓ (ಸಂಸ್ಥೆಯ ಏಕೈಕ ಕೆಲಸಗಾರ) ಆಗಿದ್ದು, ಅವರು ತಾನು ಪಾರಂಪರಿಕ ಬೀಜವನ್ನೇ ಬಳಸುವುದಾಗಿ ಹೇಳುತ್ತಾರೆ. ಹೈಬ್ರೀಡ್‌ ತಳಿಗಳು ಇಲ್ಲಿ ಕಾಣಸಿಗುವುದಿಲ್ಲ. ಪ್ರತಿ ಚೀಲದಲ್ಲಿನ ಬೇಳೆಯನ್ನು ಪರಿಶೀಲಿಸಲು ಪಾರ್ಖಿ, ತೂಕದ ಯಂತ್ರಗಳು ಮತ್ತು ಚೀಲಗಳನ್ನು ಹೊಂದಿರುವ ಒಟ್ಟು 12 ಕೇಂದ್ರಗಳ ಮೇಲುಸ್ತುವಾರಿಯನ್ನು ಅವರು ನೋಡಿಕೊಳ್ಳುತ್ತಾರೆ.

PHOTO • Priti David
PHOTO • Priti David

ಯಂತ್ರದಲ್ಲಿ ಬೇಳೆಯಾಗಿ ತಯಾರಾದ ತೊಗರಿ. ಬಲ: ಪ್ಯಾಕ್‌ ಮಾಡಿದ ಬೇಳೆಯನ್ನು ತೋರಿಸುತ್ತಿರುವ ಸಹಕಾರಿಸಂಸ್ಥೆಯ ಸಿಇಓ ರಾಕೇಶ್‌ ರಜಪೂತ್

PHOTO • Priti David
PHOTO • Priti David

ಎಡ : ಸಂತೋಷಿ ಕೋರಿ ಗುಚರಾದ ಲ್ಲಿನ ತನ್ನ ಮನೆಯಲ್ಲಿ . ಬಲ : ಅವರು ತನ್ನ ಹಿತ್ತಲಿನಲ್ಲಿ ಮನೆ ಬಳಕೆಗಾಗಿ ತರಕಾರಿಗಳನ್ನು ಸಹ ಬೆಳೆಯುತ್ತಾ ರೆ

ಮುಂಬರುವ ವರ್ಷದಲ್ಲಿ ಸದಸ್ಯತ್ವವನ್ನು ಐದು ಪಟ್ಟು ಹೆಚ್ಚಿಸುವ ಗುರಿಯನ್ನು ರೂಂಜ್ ಹೊಂದಿದೆ.‌ ಪ್ರಸ್ತುತ ಸಂಸ್ಥೆಯು ತೊಗರಿಯ ವ್ಯವಹಾರವನ್ನು ಮಾತ್ರವೇ ಮಾಡುತ್ತಿದ್ದು, ಮುಂದೆ  ಕಡಲೆ, ಜಾನುವಾರು ಮಾರುಕಟ್ಟೆ (ಬುಂದೇಲ್ಖಂಡಿ ತಳಿಯ ಆಡುಗಳು) ಮತ್ತು ಸಾವಯವ ಗೊಬ್ಬರಗಳು ಮತ್ತು ಬೀಜಗಳವರೆಗೆ ಉತ್ಪನ್ನಗಳ ಶ್ರೇಣಿಯನ್ನು ವೈವಿಧ್ಯಗೊಳಿಸಲು ಬಯಸಿದೆ ಎಂದು ಪ್ರಧಾನ್‌ ಸಂಘಟನೆಯೊಂದಿಗೆ ಕೆಲಸ ಮಾಡುವ ಸುಗಂಧಾ ಶರ್ಮಾ ಹೇಳುತ್ತಾರೆ. ನಾವು ನಮ್ಮ ರೈತರಿಗಾಗಿ ಮನೆ ಮನೆಗೆ ಸಂಪರ್ಕವನ್ನು ಕಲ್ಪಿಸುವುದು ನಮ್ಮ ಗುರಿ” ಎಂದು ಅವರು ಹೇಳುತ್ತಾರೆ.

ಸಂತೋಷಿ ತನ್ನ ಮನೆಯ ಹಿಂದಿನ ತುಂಡು ಭೂಮಿಯಲ್ಲಿ ಸೋರೆಕಾಯಿ ಮತ್ತು ಇತರ ತರಕಾರಿಗಳನ್ನು ಬೆಳೆಯುತ್ತಾರೆ, ಅದನ್ನು ಅವರು ನಮಗೆ ತೋರಿಸಿದರು; ಕುಟುಂಬಕ್ಕೆ ಸೇರಿದ ಎರಡು ಎಮ್ಮೆಗಳನ್ನುಅವರ ಪತಿ ಮೇಯಿಸಲು ಹೊಡೆದುಕೊಂಡು ಹೋಗಿದ್ದು, ಅವು ಇನ್ನೇನು ಮನೆಗೆ ಮರಳಲಿದ್ದವು.

“ನಾನು ಬೇರೆ ಯಾವುದೇ ಬೇಳೆ ತಿಂದವಳಲ್ಲ. ನಮ್ಮ ಹೊಲದ ಬೇಳೆ ಅನ್ನದಷ್ಟೇ ಬೇಗ ಬೇಯುತ್ತದೆ, ಜೊತೆಗೆ ಇದರ ರುಚಿಯೂ ಸಿಹಿಯಾಗಿರುತ್ತದೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Editor : Sarbajaya Bhattacharya

سربجیہ بھٹاچاریہ، پاری کی سینئر اسسٹنٹ ایڈیٹر ہیں۔ وہ ایک تجربہ کار بنگالی مترجم ہیں۔ وہ کولکاتا میں رہتی ہیں اور شہر کی تاریخ اور سیاحتی ادب میں دلچسپی رکھتی ہیں۔

کے ذریعہ دیگر اسٹوریز Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru