“ಅಮ್ಮಾ, ನಿನ್ನಿಂದ
ನಾನು ಈ ಬದುಕು ಪಡೆದೆ.
ನಾನು ತೊದಲಿದ ಮೊದಲ ನುಡಿ
ನಿನ್ನ ಭಾಷೆ.
ನಿನ್ನ ಪ್ರೇಮದ ಆಸರೆಯಲ್ಲಿ ಮೊದಲ ಹೆಜ್ಜೆಯಿರಿಸಿದೆ.
ನಿನ್ನ ಬೆರಳ ತುದಿ
ನನಗೆ ನಡಿಗೆ ಕಲಿಸಿತು.
ನಿನ್ನ ಕೈ ಹಿಡಿದು
ಅಕ್ಷರ ಕಲಿತೆ.”

ಇದು ಕೋಲ್ಕತಾದ ಗೊಡಿಯಾಹಾಟ್ ಮಾರುಕಟ್ಟೆಯಲ್ಲಿರುವ ಮೋಹನ್‌ ದಾಸ್‌ ಅವರು ನಡೆಸುತ್ತಿರುವ ಪುಸ್ತಕದಂಗಡಿಯೆದುರು ಇರಿಸಲಾಗಿರುವ ಫಲಕದಲ್ಲಿ ಬರೆಯಲಾಗಿರುವ ಕವಿತೆ. ವಿಶೇಷವೆಂದರೆ ಈ ಕವಿತೆಯನ್ನು ಬರೆದ ಕವಿ ಕೂಡಾ ಮೋಹನ್‌ ದಾಸ್‌ ಅವರೇ.

"ನಿಜೇರ್ ಕಾಜ್ಕೆ ಭಾಲೋಬಾಶಾ ಖೂಬಿ ಜೋರೂರಿ ಅರ್ ಅಮರ್ ಜೊನ್ನೆ ಅಮರ್ ಪ್ರೋಥೋಮ್ ಭಾಲೋಬಾಶಾ ಹೊಚ್ಚೆ ಅಮರ್ ಬೋಯಿ" [ನಿಮ್ಮ ಕೆಲಸವನ್ನು ಪ್ರೀತಿಸುವುದು ಬಹಳ ಮುಖ್ಯ, ಮತ್ತು ನನ್ನ ಪಾಲಿಗೆ ನನ್ನ ಪುಸ್ತಕಗಳೇ ಮೊದಲ ಪ್ರೀತಿ]" ಎಂದು 52 ವರ್ಷದ ಮಣಿ ಮೋಹನ್ ದಾಸ್ ಹೇಳುತ್ತಾರೆ.

ಹೇರಂಬಾ ಚಂದ್ರ ಕಾಲೇಜಿನ ಮೂಲಕ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದರೂ ಮೋಹನ್‌ ಅವರಿಗೆ ಔಪಚಾರಿಕ ಕೆಲಸ ಹುಡುಕುವುದು ಕಷ್ಟವಾಯಿತು. ಇದು ಅವರನ್ನು ಸುಮಾರು ಮೂರು ದಶಕಗಳ ಹಿಂದೆ ಗೊಡಿಯಾಹಾಟ್ ಬೀದಿಗಳಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ವ್ಯಾಪಾರಕ್ಕೆ ಪ್ರೇರೇಪಿಸಿತು.

ಈ ವೃತ್ತಿಗೆ ಅವರ ಪ್ರವೇಶ ಅನಿರೀಕ್ಷಿತವಾದರೂ ನಂತರದ ದಿನಗಳಲ್ಲಿ ಅವರು ಇದನ್ನು ಬದಲಿಸುವ ಕುರಿತು ಯೋಚಿಸಲಿಲ್ಲ, "ಇದು [ಪುಸ್ತಕ ಮಾರಾಟ] ಕೇವಲ ಹಣವನ್ನು ಗಳಿಸುವ ಮಾರ್ಗವಲ್ಲ. ಇದು ಅದಕ್ಕೂ ಹೆಚ್ಚಿನದು" ಎಂದು ಅವರು ಹೇಳುತ್ತಾರೆ. "ನನ್ನ ಪಾಲಿಗೆ ಪುಸ್ತಕಗಳು ಚೈತನ್ಯ ಹುಟ್ಟಿಸುವ ಸಂಗತಿಗಳು."

Left: Mohan Das sitting in front of his book stall in Kolkata's Gariahat market.
PHOTO • Diya Majumdar
Right: A poem by Mohan Das holds a place of pride at his stall
PHOTO • Diya Majumdar

ಎಡ: ಕೋಲ್ಕತಾದ ಗೊಡಿಯಾಹಾಟ್ ಮಾರುಕಟ್ಟೆಯಲ್ಲಿರುವ ತನ್ನ ಪುಸ್ತಕ ಮಳಿಗೆಯ ಮುಂದೆ ಕುಳಿತಿರುವ ಮೋಹನ್ ದಾಸ್. ಬಲ: ಮೋಹನ್ ದಾಸ್ ಅವರ ಕವಿತೆ ಅವರ ಅಂಗಡಿಯಲ್ಲಿ ಗರಿಮೆಯ ಸ್ಥಾನವನ್ನು ಹೊಂದಿದೆ

ದಕ್ಷಿಣ ಕೋಲ್ಕತಾದ ಗೋಲ್ಪಾರ್ಕ್ ಪ್ರದೇಶದ ಬಳಿಯ ಜನನಿಬಿಡ ಜಂಕ್ಷನ್ನಿನಲ್ಲಿರುವ ಮೋಹನ್ ಅವರ ಪುಸ್ತಕ ಮಳಿಗೆ ಗೊಡಿಯಾಹಾಟ್ ಮಾರುಕಟ್ಟೆಯಲ್ಲಿರುವ ಸರಿಸುಮಾರು 300 ಅಂಗಡಿಗಳಲ್ಲಿ ಒಂದಾಗಿದೆ. ತಿಂಡಿಗಳು, ಹಣ್ಣುಗಳು ಮತ್ತು ತರಕಾರಿಗಳು, ಮೀನು, ಬಟ್ಟೆಗಳು, ಪುಸ್ತಕಗಳು ಮತ್ತು ಆಟಿಕೆಗಳು ಈ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅನೇಕ ವಸ್ತುಗಳಲ್ಲಿ ಕೆಲವು, ಈ ಮಾರುಕಟ್ಟೆ ಶಾಶ್ವತ ಅಂಗಡಿಗಳು ಮತ್ತು ತಾತ್ಕಾಲಿಕ ಮಳಿಗೆಗಳ ಸಂಗ್ರಹವಾಗಿದೆ.

ನನ್ನಂತಹ ಬೀದಿ ವ್ಯಾಪಾರಿಗಳು ಮತ್ತು ಈ ಬೀದಿಯಲ್ಲಿನ ಅಂಗಡಿ ಮಾಲಿಕರು ಕುಟುಂಬದಂತೆ ಬಾಳುತ್ತಿದ್ದೇವೆ ಎನ್ನುತ್ತಾರೆ ಮೋಹನ್.‌ “ಅಂಗಡಿ ಮಾಲಿಕರು ನಾವು [ಬೀದಿ ವ್ಯಾಪಾರಿಗಳು] ಇಲ್ಲಿರುವುದನ್ನು ಇಷ್ಟಪಡುವುದಿಲ್ಲವೆನ್ನುವುದು ಜನಾಭಿಪ್ರಾಯ, ಆದರೆ ಅದು ಎಲ್ಲೆಡೆಯೂ ನಿಜವಲ್ಲ” ಎಂದು ಅವರು ಹೇಳುತ್ತಾರೆ. ಅವರು ಪರಸ್ಪರ ಊಟ ಹಂಚಿಕೊಳ್ಳುತ್ತಾರೆ ಮತ್ತು ಅವರ ನಡುವೆ ಗೆಳೆತನವಿದೆ.

ಮೋಹನ್‌ ಅವರ ಪಾಲಿನ ದಿನಗಳು ದೀರ್ಘವಾಗಿರುತ್ತವೆ. ಅವರು ಬೆಳಗ್ಗೆ 10 ಗಂಟೆ ಅಂಗಡಿ ತೆರೆದರೆ ಮತ್ತೆ ಮುಚ್ಚುವುದು ರಾತ್ರಿ 9 ಗಂಟೆಗೆ. ಎಂದರೆ ವಾರದ ಪ್ರತಿ ದಿನ 11 ಗಂಟೆಗಳ ಕಾಲ ಕೆಲಸ. ಅವರಿಗೆ ತಮ್ಮ ಕೆಲಸದ ಅವಧಿಯ ಕುರಿತು ತಕರಾರು ಇಲ್ಲವಾದರೂ ಅದರಿಂದ ಹುಟ್ಟುವ ಸಂಪಾದನೆಯ ಕುರಿತು ಅವರಿಗೆ ಅಸಮಧಾನವಿದೆ. ಅಲ್ಲಿ ಹುಟ್ಟುವ ಸಂಪಾದನೆಯು ಅವರ ಮತ್ತು ಅವರ ಕುಟುಂಬದ ಪೋಷಣೆಗೆ ಸಾಲುವುದಿಲ್ಲ. “ಕೆಲವೊಮ್ಮೆ ಸಂಪಾದನೆ ಚೆನ್ನಾಗಿರುತ್ತದೆ. ಉಳಿದಂತೆ ಕೆಲವು ದಿನ ಊಟದ ಖರ್ಚೂ ಹುಟ್ಟುವುದಿಲ್ಲ” ಎಂದು ಐದು ಜನರ ಕುಟುಂಬವನ್ನು ಹೊಂದಿರುವ ಮೋಹನ್‌ ಹೇಳುತ್ತಾರೆ.

ಈ ಪುಸ್ತಕ ಮಾರಾಟಗಾರ ಮತ್ತು ಕವಿ ಪ್ರಸ್ತುತ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆಯುತ್ತಿರುವ ತನ್ನ ಮಗಳು ಪೌಲೋಮಿಯ ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದಾರೆ. ಇದಲ್ಲದೆ ತನ್ನ ತಂಗಿಯರಾದ, ಪ್ರೊತಿಮಾ ಮತ್ತು ಪುಷ್ಪಾ ಅವರ ಮದುವೆಗಳಿಗೆ ಹಣಕಾಸು ಮತ್ತು ಇತರ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳುತ್ತಾರೆ.

Left: Mohan Das showing us his poem titled ‘Ma amar Ma.’
PHOTO • Diya Majumdar
Right: Towards the end of 2022, street vendors were ordered to remove plastic sheets covering their stalls
PHOTO • Diya Majumdar

ಎಡಕ್ಕೆ: ಮೋಹನ್ ದಾಸ್ ಅವರು 'ಮಾ ಅಮರ್ ಮಾ' ಎಂಬ ಶೀರ್ಷಿಕೆಯ ಕವಿತೆಯನ್ನು ನಮಗೆ ತೋರಿಸುತ್ತಿದ್ದಾರೆ. ಬಲ: 2022ರ ಅಂತ್ಯದ ವೇಳೆಗೆ, ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಅಂಗಡಿಗಳನ್ನು ಮುಚ್ಚಿದ ಪ್ಲಾಸ್ಟಿಕ್ ಶೀಟುಗಳನ್ನು ತೆಗೆದುಹಾಕಲು ಆದೇಶಿಸಲಾಯಿತು

ತನ್ನ ವೃತ್ತಿ ಜೀವನದ ಅನಿಶ್ಚಿತತೆಯ ನಡುವೆಯೂ ಅವರು ಧೈರ್ಯ ಕಳೆದುಕೊಳ್ಳದೆ ದೃಢವಾಗಿ ನಿಲ್ಲುವ ಪ್ರಯತ್ನದಲ್ಲಿದ್ದಾರೆ. “ನನಗೆ ನಮ್ಮನ್ನು [ಬೀದಿ ವ್ಯಾಪಾರಿಗಳನ್ನು] ಇಲ್ಲಿಂದ ಓಡಿಸಬಹುದೆನ್ನುವ ಹೆದರಿಕೆಯಿಲ್ಲ. ನಾವು ದೊಡ್ಡಸಂಖ್ಯೆಯಲ್ಲಿದ್ದೇವೆ ಮತ್ತು ನಮ್ಮ ಜೀವನ ಈ ವ್ಯಾಪಾರವನ್ನು ಅವಲಂಬಿಸಿದೆ. ಹೀಗಿರುವಾಗ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವುದು ಅಷ್ಟು ಸುಲಭದ ಮಾತಲ್ಲ.” ಆದರೆ ಅಂತಹ ಪ್ರಯತ್ನಗಳು ನಡೆದಿವೆ.

1996ರಲ್ಲಿ ರಾಜ್ಯ ಸರ್ಕಾರ ಮತ್ತು ಪುರಸಭೆ ಸೇರಿ ʼಆಪರೇಷನ್‌ ಸನ್‌ ಶೈನ್‌ʼ ಹೆಸರಿನ ಕಾಲುಹಾದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವ ಯೋಜನೆಯೊಂದನ್ನು ನಿರೂಪಿಸಿತ್ತು. ಅದು ಜಾರಿಗೆ ಬಂದ ದಿನ “ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಗಿದ್ದೆ” ಎಂದು ಮೋಹನ್‌ ಆ ದಿನವನ್ನು ನೆನಪ್ಸಿಕೊಳ್ಳುತ್ತಾರೆ.

ಈ ಸಮಯದಲ್ಲಿ ಮೋಹನ್ ಪಶ್ಚಿಮ ಬಂಗಾಳದಲ್ಲಿ ಆಗ ಅಧಿಕಾರದಲ್ಲಿದ್ದ ಎಡರಂಗ ಮೈತ್ರಿಕೂಟದ ಸದಸ್ಯ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸದಸ್ಯರಾಗಿದ್ದರು. ಅವರು ಪಕ್ಷದ ಕಚೇರಿಗೆ ಹೋಗಿ ತಮ್ಮ ಯೋಜನೆಗಳನ್ನು ಮುಂದುವರಿಸದಂತೆ ಅಧಿಕಾರಿಗಳನ್ನು ಒತ್ತಾಯಿಸಿದರು, ಆದರೆ ಅಧಿಕಾರಿಗಳು ಮಾತುಕತೆ ನಡೆಸಲು ಸಿದ್ಧರಿರಲಿಲ್ಲ ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅಂದು ಆ ಏರಿಯಾದಲ್ಲಿ ಅಧಿಕಾರಿಗಳು ಬೀದಿ ಅಂಡಿಗಳನ್ನು ನೆಲಸಮಗೊಳಿಸುವ ಮೊದಲೇ ತಮ್ಮ ಸಾಮಾಗ್ರಿಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಕೆಲವೇ ಅದೃಷ್ಟಶಾಲಿಗಳಲ್ಲಿ ಮೋಹನ್‌ ಕೂಡಾ ಒಬ್ಬರಾಗಿದ್ದರು.

"ಇದು ಸರ್ಕಾರದ ಹಠಾತ್ ನಿರ್ಧಾರವಾಗಿತ್ತು" ಎಂದು ಅವರು ಹೇಳುತ್ತಾರೆ, "ಆ ಒಂದು ರಾತ್ರಿಯಲ್ಲಿ ಅನೇಕ ಜನರು ತಮ್ಮದೆಲ್ಲವನ್ನೂ ಕಳೆದುಕೊಂಡಿದ್ದರೆನ್ನುವುದು ಅದಕ್ಕೆ ಅರ್ಥವಾಗಲೇ ಇಲ್ಲ." ತಿಂಗಳುಗಳ ಪ್ರತಿಭಟನೆ ಮತ್ತು ಕೋಲ್ಕತ್ತಾ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ನಂತರವೇ ಮೋಹನ್ ತನ್ನ ಅಂಗಡಿಯನ್ನು ಮತ್ತೆ ತೆರೆಯಲು ಸಾಧ್ಯವಾಯಿತು. ಮೋಹನ್ ಸದಸ್ಯರಾಗಿರುವ ಹಾಕರ್ ಸಂಗ್ರಾಮ್ ಸಮಿತಿಯ ಭಾಗವಾಗಿರುವ ದಕ್ಷಿಣ ಕಲ್ಕತ್ತಾ ಹಾಕರ್ಸ್ ಯೂನಿಯನ್ ಅದನ್ನು ಡಿಸೆಂಬರ್ 3, 1996ರಂದು ಮಾಡಿತು. ಆ ಘಟನೆಯ ನಂತರ ಅವರು ಪಕ್ಷವನ್ನು ತೊರೆದರು ಮತ್ತು ಅಂದಿನಿಂದ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಅವರು ಹೇಳುತ್ತಾರೆ.

Left: The lane outside Mohan’s stall. The Gariahat market is a collection of both permanent shops and makeshift stalls.
PHOTO • Diya Majumdar
Right: Plastic sheeting protects hundreds of books at the stall from damage during the rains
PHOTO • Diya Majumdar

ಎಡ: ಮೋಹನ್‌ ಅವರ ಅಂಗಡಿಯ ಹೊರಗಿನ ಬೀದಿ. ಗೊಡಿಯಾಹಾಟ್ ಮಾರುಕಟ್ಟೆಯೆನ್ನುವುದು ಮಾರುಕಟ್ಟೆ ಶಾಶ್ವತ ಅಂಗಡಿಗಳು ಮತ್ತು ತಾತ್ಕಾಲಿಕ ಮಳಿಗೆಗಳ ಸಂಗ್ರಹ. ಬಲ: ಪ್ಲಾಸ್ಟಿಕ್ ಶೀಟ್ ಅಂಗಡಿಯಲ್ಲಿರುವ ನೂರಾರು ಪುಸ್ತಕಗಳನ್ನು ಮಳೆಗಾಲದಲ್ಲಿ ಹಾನಿಯಾಗದಂತೆ ರಕ್ಷಿಸುತ್ತದೆ

*****

“ಆಜ್‌ ಕಲ್‌ ಕೇವು ಬೋಯಿ ಪೊರೇನಾ, [ಈಗೀಗ ಯಾರೂ ಪುಸ್ತಕ ಓದುವುದಿಲ್ಲ]” ಎಂದು ಗೂಗಲ್‌ ಎನ್ನುವ ತಂತ್ರಜ್ಞಾನಕ್ಕೆ ಹಲವು ಗಿರಾಕಿಗಳನ್ನು ಬಲಿಕೊಟ್ಟಿರುವ ಮೋಹನ್‌ ಹೇಳುತ್ತಾರೆ. “ಈಗ ಗೂಗಲ್‌ ಇರುವುದರಿಂದ ಜನರು ತಮಗೆ ಬೇಕಿರುವ ಮಾಹಿತಿಯನ್ನು ನಿಖರವಾಗಿ ಹುಡುಕಿ ತೆಗೆಯುತ್ತಾರೆ” ಕೋವಿಡ್‌ - 19 ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ.

“ಈ ಹಿಂದೆ ನಾನು ಸ್ವಂತ ಇಚ್ಛೆಯಿಂದ ಅಂಗಡಿಯನ್ನು ಮುಚ್ಚಿದ್ದೇ ಇಲ್ಲ. ಆದರೆ ಕೋವಿಡ್‌ ಸಮಯದಲ್ಲಿ ಸುಮ್ಮನೆ ಕೂರುವುದರ ಹೊರತು ಇನ್ನೊಂದು ಆಯ್ಕೆಯೇ ಇದ್ದಿರಲಿಲ್ಲ” ಎನ್ನುವ ಮೋಹನ್‌ ತನ್ನಲ್ಲಿದ್ದ ಉಳಿತಾಯದ ಹಣವನ್ನೆಲ್ಲ ಈ ಸಮಯದಲ್ಲಿ ಖರ್ಚು ಮಾಡಿದ್ದರು. ಜನವರಿ 2023ರಲ್ಲಿ ಪರಿಯೊಂದಿಗೆ ಮಾತನಾಡಿದ ಅವರು, "ವ್ಯವಹಾರವು ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ" ಎಂದು ಹೇಳಿದರು.

ಸರ್ಕಾರ ನೀಡುವ ಮಾರಾಟ ಪರವಾನಗಿ ತನ್ನ ವ್ಯವಹಾರದ ಅನಿಶ್ಚಿತತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯೆನ್ನುವುದು ಮೋಹನ್‌ ಅವರ ನಂಬಿಕೆ. ಅವರು ಐದು ವರ್ಷಗಳ ಹಿಂದೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದು ಇದುವರೆಗೂ ಅದು ದೊರೆತಿಲ್ಲ. ಪ್ರಸ್ತುತ ಪರವಾನಗಿ ಇಲ್ಲದೆ ವ್ಯಾಪಾರ ಮಾಡುತ್ತಿರುವ ತನಗೆ ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯನಾಗಿರುವುದೇ ಧೈರ್ಯ ನೀಡುವ ಸಂಗತಿಯೆನ್ನುವುದು ಅವರ ಭರವಸೆ. ಇದಕ್ಕಾಗಿ ಅವರು ವಾರಕ್ಕೆ 50 ರೂಪಾಯಿಗಳನ್ನು ಪಾವತಿಸುತ್ತಿದ್ದು ಅದು ಇವರಿಗೆ ಮಾರುಕಟ್ಟೆಯಲ್ಲಿ ಒಂದು ನಿಶ್ಚಿತ ವ್ಯಾಪಾರದ ಸ್ಥಳದ ಭರವಸೆ ನೀಡುತ್ತದೆ.

2022ರ ಕೊನೆಯಲ್ಲಿ, ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ ಪಶ್ಚಿಮ ಬಂಗಾಳ ನಗರ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ) ನಿಯಮಗಳು, 2018 ಕಾಯಿದೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಮೋಹನ್ ಹೇಳಿದರು. ಇದರಡಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚುವ ಯಾವುದೇ ರೀತಿಯ ಪ್ಲಾಸ್ಟಿಕ್ ಹಾಳೆಗಳನ್ನು ತೆಗೆದುಹಾಕಬೇಕೆಂದು ಆದೇಶಿಸಲಾಯಿತು. "ಈಗ [ಚಳಿಗಾಲದಲ್ಲಿ] ಎಲ್ಲವೂ ಸರಿಯಾಗಿದೆ" ಎಂದು ಮೋಹನ್ ಹೇಳುತ್ತಾರೆ. "ಆದರೆ ಮಳೆ ಬಂದಾಗ ಏನು ಮಾಡಬೇಕು?"

ಜೋಶುವಾ ಬೋಧಿನೇತ್ರ ಅವರ ದನಿಯಲ್ಲಿ ಪದ್ಯವನ್ನುಆಲಿಸಿ

মা আমার মা

সবচে কাছের তুমিই মাগো
আমার যে আপন
তোমার তরেই পেয়েছি মা
আমার এ জীবন
প্রথম কথা বলি যখন
তোমার বোলেই বলি
তোমার স্নেহের হাত ধরে মা
প্রথম আমি চলি
হাতটি তোমার ধরেই মাগো
চলতে আমার শেখা
হাতটি তোমার ধরেই আমার
লিখতে শেখা লেখা
করতে মানুষ রাত জেগেছ
স্তন করেছ দান
ঘুম পাড়াতে গেয়েছে মা
ঘুম পাড়ানি গান
রাত জেগেছ কত শত
চুম দিয়েছ তত
করবে আমায় মানুষ, তোমার
এই ছিল যে ব্রত
তুমি যে মা সেই ব্রততী
যার ধৈয্য অসীম বল
সত্যি করে বলো না মা কী
হল তার ফল
আমার ব্রতের ফসল যেরে
সোনার খুকু তুই
তুই যে আমার চোখের মনি
সদ্য ফোটা জুঁই ।

ಅಮ್ಮಾ, ನನ್ನಮ್ಮಾ

ಅಮ್ಮಾ, ನಿನಗಿಂತಲೂ
ಆತ್ಮಬಂಧುವಿಲ್ಲ ನನಗೆ
ನೀನು ನನ್ನವಳು.
ಅಮ್ಮಾ, ನಿನ್ನಿಂದ
ನಾನು ಈ ಬದುಕು ಪಡೆದೆ.
ನಾನು ತೊದಲಿದ ಮೊದಲ ನುಡಿ
ನಿನ್ನ ಭಾಷೆ.
ನಿನ್ನ ಪ್ರೇಮದ ಆಸರೆಯಲ್ಲಿ ಮೊದಲ ಹೆಜ್ಜೆಯಿರಿಸಿದೆ.
ನಿನ್ನ ಬೆರಳ ತುದಿ
ನನಗೆ ನಡಿಗೆ ಕಲಿಸಿತು.
ನಿನ್ನ ಕೈ ಹಿಡಿದು
ಅಕ್ಷರ ಕಲಿತೆ.
ನಿದ್ರೆಯಿಲ್ಲದ ರಾತ್ರಿಗಳ
ಕಳೆದಿರುವೆ ನನ್ನ ಸಲುವಾಗಿ
ಎದೆ ಹಾಲು ಉಡುಗೊರೆಯಾಗಿ ಕೊಟ್ಟಿರುವೆ ನೀನು
ನನಗೆ ಲಾಲಿ ಹಾಡುತ್ತಾ
ನಿದ್ರೆಯಿಲ್ಲದ ರಾತ್ರಿಗಳ ಲೆಕ್ಕವಿಲ್ಲದಷ್ಟು ಕಳೆದಿರುವೆ ನೀನು.
ಅನಂತವಾಗಿ ಚುಂಬಿಸಿರುವೆ ನೀನು
ನನ್ನ ಮನುಷ್ಯನನ್ನಾಗಿಸಲೆಂದು ಪ್ರತಿಜ್ಞೆ ಹೂಡಿ.
ನಿನ್ನ ತಾಳ್ಮೆಯೆನ್ನುವುದು ಅನಂತ
ಓ ತಾಯಿ ನನಗೆ ನಿಜ ಹೇಳು ನೀನು
ಅದರಿಂದ ದೊರಕಿದ್ದಾದರೂ ಏನು?
ನನ್ನ ನುಡಿಗಳ ಸುಗ್ಗಿ ನೀನು
ನನ್ನ ಬಂಗಾರಿ ನೀನು
ನನ್ನ ಬಂಗಾರದ ಮಗಳು ನೀನು
ಈಗಷ್ಟೇ ಅರಳಿದ ಮಲ್ಲಿಗೆಯಂತವಳೇ
ನನ್ನ ಕಣ್ಣ ಬೆಳಕು ನೀನು.


ಅನುವಾದ: ಶಂಕರ. ಎನ್. ಕೆಂಚನೂರು

Student Reporter : Diya Majumdar

دیا مجومدار نے حال ہی میں بنگلورو کی عظیم پریم جی یونیورسٹی سے ڈیولپمنٹ میں ماسٹرز کی ڈگری حاصل کی ہے۔

کے ذریعہ دیگر اسٹوریز Diya Majumdar
Editor : Swadesha Sharma

سودیشا شرما، پیپلز آرکائیو آف رورل انڈیا (پاری) میں ریسرچر اور کانٹینٹ ایڈیٹر ہیں۔ وہ رضاکاروں کے ساتھ مل کر پاری کی لائبریری کے لیے بھی کام کرتی ہیں۔

کے ذریعہ دیگر اسٹوریز Swadesha Sharma
Editor : Riya Behl

ریا بہل ملٹی میڈیا جرنلسٹ ہیں اور صنف اور تعلیم سے متعلق امور پر لکھتی ہیں۔ وہ پیپلز آرکائیو آف رورل انڈیا (پاری) کے لیے بطور سینئر اسسٹنٹ ایڈیٹر کام کر چکی ہیں اور پاری کی اسٹوریز کو اسکولی نصاب کا حصہ بنانے کے لیے طلباء اور اساتذہ کے ساتھ کام کرتی ہیں۔

کے ذریعہ دیگر اسٹوریز Riya Behl
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru