2023 ನಮ್ಮ ಪಾಲಿಗೆ ಬಿಡುವಿಲ್ಲದ ವರ್ಷವಾಗಿತ್ತು.
ಜನವರಿ ಮತ್ತು ಸೆಪ್ಟೆಂಬರ್ ನಡುವೆ ಭಾರತವು ಪ್ರತಿದಿನ ತೀವ್ರ ಹವಾಮಾನ ವೈಪರೀತ್ಯದ ಘಟನೆಗಳಿಗೆ ಸಾಕ್ಷಿಯಾಯಿತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲೆಂದು ಸೆಪ್ಟೆಂಬರ್ ತಿಂಗಳಿನಲ್ಲಿ ಲೋಕಸಭೆಯು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತು, ಆದರೆ, ಇದು 2029ರ ನಂತರವೇ ಜಾರಿಗೆ ಬರಲಿದೆ. ಏತನ್ಮಧ್ಯೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಅಂಕಿಅಂಶಗಳು 2022ರಲ್ಲಿ ದೇಶದಲ್ಲಿ ಮಹಿಳೆಯರ ವಿರುದ್ಧ 445,256 ಅಪರಾಧ ಪ್ರಕರಣಗಳು ಎಸಗಲಾಗಿರುವುದನ್ನು ತೋರಿಸಿವೆ. ಆಗಸ್ಟ್ ತಿಂಗಳಿನಲ್ಲಿ, ಸುಪ್ರೀಂ ಕೋರ್ಟ್ ಲಿಂಗ ಸ್ಟೀರಿಯೊಟೈಪ್ ಮಾದರಿಗಳನ್ನು ಎದುರಿಸುವ ಕೈಪಿಡಿಯನ್ನು ಬಿಡುಗಡೆ ಮಾಡಿತು, ಇದು ಕೆಲವು 'ಸ್ಟೀರಿಯೊಟೈಪ್ ಉತ್ತೇಜಿಸುವ' ಪದಗಳಿಗೆ ಪರ್ಯಾಯಗಳನ್ನು ಸೂಚಿಸಿತು, ಆದರೆ ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರ ಪೀಠವು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆಯ ವಿರುದ್ಧ ತೀರ್ಪು ನೀಡಿತು. ಒಂಬತ್ತು ರಾಜ್ಯಗಳು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದವು ಮತ್ತು ಕೋಮು ಮತ್ತು ಜಾತಿ ಆಧಾರದ ಮೇಲೆ ಭುಗಿಲೆದ್ದ ಜ್ವಾಲೆಗಳು ಸುದ್ದಿ ಚಕ್ರದಲ್ಲಿ ಪ್ರಾಬಲ್ಯ ಸಾಧಿಸಿದವು. ಮಾರ್ಚ್ 2022 ಮತ್ತು ಜುಲೈ 2023ರ ನಡುವೆ, ಭಾರತದಲ್ಲಿ ಒಟ್ಟು ಶತಕೋಟ್ಯಧಿಪತಿಗಳ ಸಂಖ್ಯೆ 166ರಿಂದ 174 ಕ್ಕೆ ಏರಿದೆ. 15-29 ವರ್ಷ ವಯಸ್ಸಿನ ಯುವಜನರ ಸರಾಸರಿ ನಿರುದ್ಯೋಗ ದರವು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಶೇಕಡಾ 17.3 ರಷ್ಟಿದೆ.
*****
ವರ್ಷವಿಡೀ ಇಷ್ಟೆಲ್ಲ ಘಟನೆಗಳು ನಡೆಯುತ್ತಿವೆಯೆಂದ ಮೇಲೆ ಲೈಬ್ರರಿ ತಂಡ ಸಹಜವಾಗಿಯೇ ಅವುಗಳನ್ನೆಲ್ಲ ಒಟ್ಟುಗೂಡಿಸಿ ಸಂಗ್ರಹಿಸಿಡುವ ಕೆಲಸದಲ್ಲಿ ತೊಡಗಿಕೊಂಡಿತ್ತು.
ನಮ್ಮ ಸಂಗ್ರಹವು ಕಾಯ್ದೆಗಳು ಮತ್ತು ಕಾನೂನುಗಳು, ಪುಸ್ತಕಗಳು, ಸಂಪ್ರದಾಯಗಳು ಮತ್ತು ಚಾರ್ಟರ್ ಗಳು, ಪ್ರಬಂಧಗಳು ಮತ್ತು ಸಂಕಲನಗಳಿಂದ ಹಿಡಿದು ಶಬ್ದಕೋಶಗಳು, ಸರ್ಕಾರಿ ವರದಿಗಳು, ಕರಪತ್ರಗಳು, ಸಮೀಕ್ಷೆಗಳು, ಲೇಖನಗಳ ಜೊತೆಗೆ ನಮ್ಮ ಕತೆಗಳಿಂದ ತಯಾರಿಸಿದ ಕಾಮಿಕ್ ಪುಸ್ತಕವನ್ನು ಸಹ ಹೊಂದಿತ್ತು.
ಲೈಬ್ರರಿ ಬುಲೆಟಿನ್ ನಮ್ಮ ಈ ವರ್ಷದ ಹೊಸ ಯೋಜನೆಗಳಲ್ಲಿ ಒಂದು - ನಿರ್ದಿಷ್ಟ ಕಾಳಜಿಗಳ ಬಗ್ಗೆ ಪರಿ ಕಥೆಗಳು ಮತ್ತು ಸಂಪನ್ಮೂಲಗಳ ಸಾಂದರ್ಭಿಕ ರೌಂಡ್-ಅಪ್. ಮಹಿಳೆಯರ ಆರೋಗ್ಯ , ಸಾಂಕ್ರಾಮಿಕ ಪೀಡಿತ ಕಾರ್ಮಿಕರು , ದೇಶದಲ್ಲಿನ ಕ್ವೀರ್ ಜನರು ಎದುರಿಸುತ್ತಿರುವ ಪರಿಸ್ಥಿತಿಗಳು ಮತ್ತು ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಸ್ಥಿತಿಯ ಬಗ್ಗೆ ನಾವು ಈ ವರ್ಷ ಅಂತಹ ನಾಲ್ಕು ಬುಲೆಟಿನ್ ಪ್ರಕಟಿಸಿದ್ದೇವೆ.
ನಾವು ಪ್ರಕಟಿಸಿದ ವರದಿಗಳಲ್ಲಿ ಹವಾಮಾನ ಜವಾಬ್ದಾರಿಗಳಲ್ಲಿನ ಅಸಮಾನತೆಯ ಕುರಿತಾದ ವರದಿಯು ವಿಶ್ವದ ಜನಸಂಖ್ಯೆಯ ಶೇಕಡಾ 10ರಷ್ಟು ಶ್ರೀಮಂತರು ಒಟ್ಟು ಇಂಗಾಲದ ಹೊರಸೂಸುವಿಕೆಗೆ ಅದರ ಅರ್ಧದಷ್ಟು ಕೊಡುಗೆ ನೀಡುತ್ತಾರೆನ್ನುವುದನ್ನು ತೋರಿಸಿದೆ. ಅವರು ಈ ನಿಟ್ಟಿನಲ್ಲಿ ತಾಪಮಾನ ನಿಯಂತ್ರಣ ಏರಿಕೆ ತಡೆಯಲು ಅಗತ್ಯವಿರುವ ಮಿತಿಗಳನ್ನು ಮೀರುತ್ತಿದ್ದಾರೆ. ವಿನಾಶಕಾರಿ ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಸರಾಸರಿ ಜಾಗತಿಕ ತಾಪಮಾನವನ್ನು 1.5° ಒಳಗೆ ಮಿತಿಗೊಳಿಸುವ ಅಗತ್ಯದ ಬಗ್ಗೆ 2015ರ ಪ್ಯಾರಿಸ್ ಒಪ್ಪಂದದ ಹೊರತಾಗಿಯೂ ಇದು ಸಂಭವಿಸಿದೆ. ಸ್ಪಷ್ಟವಾಗಿ, ನಾವು ಸಾಗಬೇಕಿರುವ ದಾರಿಯಿಂದ ಬಹಳ ದೂರವಿದ್ದೇವೆ.
ಹಸಿರುಮನೆ ಅನಿಲ ಹೊರಸೂಸುವಿಕೆಯು 2000ದಿಂದ ಶೇಕಡಾ 40ರಷ್ಟು ಹೆಚ್ಚಾಗಿದೆ . ದೇಶದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟು ಜನರಿಗೆ ನೆಲೆಯಾಗಿರುವ ಇಂಡೋ-ಗಂಗಾ ಬಯಲು ಪ್ರದೇಶವು ಈಗ ಭಾರತದ ಅತ್ಯಂತ ಕಲುಷಿತ ಪ್ರದೇಶವಾಗಿ ಮಾರ್ಪಟ್ಟಿದೆ ಮತ್ತು ದೆಹಲಿ ಜಗತ್ತಿನ ಎಲ್ಲಾ ಮಹಾನಗರಗಳಿಗಿಂತಲೂ ಅತ್ಯಂತ ಹೆಚ್ಚು ಮಟ್ಟದ ಕಲುಷಿತ ಗಾಳಿಯನ್ನು ದಾಖಲಿಸಿದೆ. ಇಡೀ ಭಾರತವು ಹವಾಮಾನ ಸಂಬಂಧಿ ಅಪಾಯಗಳನ್ನು ಎದುರಿಸುತ್ತಿದ್ದರೂ, ಜಾರ್ಖಂಡ್ ಮತ್ತು ಒಡಿಶಾದಂತಹ ಕೆಲವು ರಾಜ್ಯಗಳು ಈ ವಿಷಯದಲ್ಲಿ ವಿಶೇಷವಾಗಿ ದುರ್ಬಲವಾಗಿವೆ ಎಂದು ನಮ್ಮ ಮೇಜನ್ನು ದಾಟಿ ಹೋದ ಹಲವಾರು ವರದಿಗಳು ಹೇಳಿವೆ.
2020ರಲ್ಲಿ ಹವಾಮಾನ ಸಂಬಂಧಿ ಅಪಾಯಗಳಿಂದಾಗಿ ದೇಶದ ಸುಮಾರು 20 ಮಿಲಿಯನ್ ಜನರು ವಲಸೆಯ ಮೊರೆ ಹೋಗಬೇಕಾಯಿತು. ದೇಶದ ಕಾರ್ಮಿಕ ಶಕ್ತಿಯ ಸುಮಾರು 90 ಪ್ರತಿಶತದಷ್ಟು ಅನೌಪಚಾರಿಕ ಸ್ವರೂಪವನ್ನು ಪರಿಗಣಿಸಿ, ಪರಿಣಾಮಕಾರಿ ಸಾಮಾಜಿಕ ರಕ್ಷಣೆಯು ಜರೂರಾಗಿ ನಡೆಯಬೇಕಿದೆ ಎಂದು ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟ್ ಅಂಡ್ ಡೆವಲಪ್ಮೆಂಟ್ ಸಂಸ್ಥೆಯ ಈ ವರದಿ ತಿಳಿಸಿದೆ.
ಅನೌಪಚಾರಿಕ ಉದ್ಯೋಗ ಮತ್ತು ವಲಸೆಯ ಪ್ರಶ್ನೆಗಳು ತಮ್ಮ ಕುಟುಂಬಗಳೊಂದಿಗೆ ವಲಸೆ ಹೋಗುವ ಮಕ್ಕಳ ಶಿಕ್ಷಣದೊಂದಿಗೂ ಬಿಡಿಸಲಾಗದ ಸಂಬಂಧವನ್ನು ಹೊಂದಿವೆ. ದೆಹಲಿ ಎನ್‌ಸಿಆರ್ ಮತ್ತು ಭೋಪಾಲಿನಲ್ಲಿನ ವಲಸೆ ಕುಟುಂಬಗಳ ನಡುವೆ ನಡೆಸಲಾದ ಸಮೀಕ್ಷೆಯಲ್ಲಿ ವಲಸೆ ಕುಟುಂಬಗಳಿಗೆ ಸೇರಿದ ಸುಮಾರು 40 ಪ್ರತಿಶತದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ.
ಹಂಗಾಮಿ ಕಾರ್ಮಿಕ ಶಕ್ತಿ ಸಮೀಕ್ಷೆಯ ತ್ರೈಮಾಸಿಕ ಬುಲೆಟಿನ್ನುಗಳು ಕಾರ್ಮಿಕರ ಭಾಗವಹಿಸುವಿಕೆ ಮತ್ತು ನಿರುದ್ಯೋಗ ದರಗಳು ಮತ್ತು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಕ್ಷೇತ್ರಗಳಲ್ಲಿ ಕಾರ್ಮಿಕ ವಿತರಣಾ ಅನುಪಾತಗಳನ್ನು ಪತ್ತೆಹಚ್ಚಲು ಉಪಯುಕ್ತವಾಗಿವೆ.
ಬದಲಾಗುತ್ತಿರುವ ಮಾಧ್ಯಮ ರೂಪವು ಈ ವರ್ಷದ ಜನಪ್ರಿಯ ಕಾಳಜಿಯಾಗಿದೆ. ಸೀಮಿತ ಸಮೀಕ್ಷೆಯ ಪ್ರಕಾರ , ಒಟ್ಟು ಭಾರತೀಯರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಪ್ರತಿದಿನ ಟಿವಿ ನೋಡುತ್ತಾರೆ, ಆದರೆ ಕೇವಲ 14 ಪ್ರತಿಶತದಷ್ಟು ಜನರು ಮಾತ್ರ ಪ್ರತಿದಿನ ಪತ್ರಿಕೆಗಳನ್ನು ಓದುತ್ತಾರೆ. ಮತ್ತೊಂದು ವರದಿಯ ಪ್ರಕಾರ 729 ಮಿಲಿಯನ್ ಭಾರತೀಯರು ಸಕ್ರಿಯ ಇಂಟರ್ನೆಟ್ ಬಳಕೆದಾರರಾಗಿದ್ದಾರೆ. ಆನ್ ಲೈನ್ ಸುದ್ದಿ ಓದುಗರಲ್ಲಿ 70 ಪ್ರತಿಶತದಷ್ಟು ಜನರು ಭಾರತೀಯ ಭಾಷೆಗಳಲ್ಲಿಯೇ ಸುದ್ದಿಗಳನ್ನು ಓದುತ್ತಿದ್ದಾರೆ.
ಎ ಕ್ವೀರ್ ಪರ್ಸನ್ಸ್ ಗೈಡ್ ಟು ಅಕ್ಸೆಸಿಂಗ್ ರೈಟ್ಸ್ ರೀತಿಯ ದಾಖಲೆಗಳು ನ್ಯಾಯಯುತ ಕಾನೂನು ವ್ಯವಸ್ಥೆಯನ್ನು ಬೆಂಬಲಿಸುವ ಚರ್ಚೆಗಳನ್ನು ಉತ್ತೇಜಿಸಿದವು. ಈ ವರ್ಷ ವರ್ಷದಲ್ಲಿ ಪ್ರಕಟವಾದ ಪದಕೋಶಗಳು ಮತ್ತು ಕೈಪಿಡಿಗಳು ಲಿಂಗ ಸಂಬಂಧಿ ಒಳಗೊಳ್ಳುವಿಕೆಯನ್ನು ಒಳಗೊಂಡ ಶಬ್ದಕೋಶದ ಬಳಕೆಯನ್ನು ಉತ್ತೇಜಿಸುವ ಸೂಕ್ತ ಮಾರ್ಗದರ್ಶಿಗಳಾಗಿವೆ.
ಸಂಕೀರ್ಣ ವೈಜ್ಞಾನಿಕ ಪರಿಭಾಷೆ ಮತ್ತು ಸಾಮಾನ್ಯ ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು, ಹವಾಮಾನ ನಿಘಂಟು ಹವಾಮಾನ ವೈಪರೀತ್ಯದ ಕುರಿತು ಸ್ವಲ್ಪ ಹೆಚ್ಚು ನಿರರ್ಗಳವಾಗಿ ಮಾತನಾಡಲು ನಮಗೆ ಸಹಾಯ ಮಾಡಿತು. ನಾವು ರಚಿಸಿದ ಈ ಅಟ್ಲಾಸ್ , ವಿಶ್ವದ ಕುಗ್ಗುತ್ತಿರುವ ಭಾಷಾ ವೈವಿಧ್ಯತೆಯನ್ನು ಎತ್ತಿ ತೋರಿಸಿತು, ಭಾರತದಲ್ಲಿ ಸುಮಾರು 300 ಭಾಷೆಗಳು ಅಪಾಯದಲ್ಲಿದೆ ಎಂದು ದಾಖಲಿಸಿದೆ.
ಮತ್ತು ಈ ಬಾರಿ ʼಭಾಷೆʼ ಲೈಬ್ರರಿಯಲ್ಲಿ ತನ್ನದೇ ಆದ ಕೋಣೆಯೊಂದನ್ನು ಪಡೆಯಿತು! ಈ ಕೋಣೆಯಲ್ಲಿರುವ ಹಲವು ವರದಿಗಳಲ್ಲಿ ಮೊದಲ ಇತಿಹಾಸದ ಪಾಠಗಳನ್ನು ಹೊಂದಿದೆ, ಇದು ಬಾಂಗ್ಲಾ, ಅದರ ಉಪಭಾಷೆಗಳು ಮತ್ತು ಅವುಗಳ ಇತಿಹಾಸದಲ್ಲಿನ ಬದಲಾವಣೆಗಳನ್ನು ಅನುಸರಿಸುವ ಮೂಲಕ ಭಾಷೆ ಮತ್ತು ಅಧಿಕಾರದ ನಡುವಿನ ಸಂಪರ್ಕಗಳನ್ನು ಬಹಿರಂಗಪಡಿಸುತ್ತದೆ. ಲೈಬ್ರರಿಯು ಈ ಬಾರಿ ಭಾರತೀಯ ಭಾಷಾ ಸಮೀಕ್ಷೆಯ ವರದಿಗಳನ್ನು ಸಹ ಸಂಯೋಜಿಸಲು ಪ್ರಾರಂಭಿಸಿತು, ಒಂದನ್ನು ಈಗಾಗಲೇ ಪ್ರಕಟಿಸಲಾಗಿದೆ ಮತ್ತು ಮುಂದಿನ ವರ್ಷ ಇನ್ನೂ ಅನೇಕ ಇಂತಹ ವರದಿಗಳು ಬರಲಿವೆ.
2023 ಬಿಡುವಿಲ್ಲದ ವರ್ಷವಾಗಿತ್ತು. 2024 ಅತ್ಯಂತ ಬಿಡುವಿಲ್ಲದ ವರ್ಷವಾಗಲಿದೆ. ಲೈಬ್ರರಿಗೆ ಹೊಸದೇನು ಬಂದಿದೆಯೆನ್ನುವುದನ್ನು ತಿಳಿಯಲು ಆಗಾಗ ಲೈಬ್ರರಿಯತ್ತ ಹೆಜ್ಜೆ ಬೆಳೆಸುತ್ತಿರಿ!
ಪರಿ ಲೈಬ್ರರಿಯೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡಲು, contact@ruralindiaonline.org ವಿಳಾಸಕ್ಕೆ ಬರೆಯಿರಿ
ನಾವು ಮಾಡುತ್ತಿರುವ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವೂ ಪರಿಯೊಡನೆ ಕೈ ಜೋಡಿಸಲು ಬಯಸಿದಲ್ಲಿ, ದಯವಿಟ್ಟು mailto:contact@ruralindiaonline.org ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್ ಮತ್ತು ಸ್ವತಂತ್ರ ಬರಹಗಾರರು, ವರದಿಗಾರರು, ಛಾಯಾಗ್ರಾಹಕರು, ಚಲನಚಿತ್ರ ತಯಾರಕರು, ಅನುವಾದಕರು, ಸಂಪಾದಕರು, ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಸ್ವಾಗತಿಸುತ್ತೇವೆ.
ಪರಿ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು, ಇದು ನಮ್ಮ ಬಹುಭಾಷಾ ಆನ್ಲೈನ್ ಜರ್ನಲ್ ಮತ್ತು ಆರ್ಕೈವ್ ಕೆಲಸಗಳನ್ನು ಮೆಚ್ಚುವ ಜನರ ದೇಣಿಗೆಗಳನ್ನು ಅವಲಂಬಿಸಿ ಮುಂದುವರೆಯುತ್ತಿದೆ. ನೀವು ಪರಿಗೆ ಕೊಡುಗೆ ನೀಡಲು ಬಯಸಿದರೆ ದಯವಿಟ್ಟು DONATE ಬಟನ್ ಕ್ಲಿಕ್ ಮಾಡಿ.
ಅನುವಾದ: ಶಂಕರ. ಎನ್. ಕೆಂಚನೂರು