“ನಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಆನಂದಿಸುವುದನ್ನು ನಮಗೆ ಸಾಧ್ಯವಾಗಿಸುವುದು ಯಾವುದೆಂದು ನಿಮಗೆ ತಿಳಿದಿದೆಯೇ? ಅದು, ಭಾರತದ ಸಂವಿಧಾನ.” ತಮ್ಮ ಸಂಚಾರಿ ಪುಸ್ತಕದಂಗಡಿಯಲ್ಲಿ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದ ಗ್ರಾಹಕರೊಬ್ಬರಿಗೆ ರಾಮ್‌ಪ್ಯಾರಿ ಕವಚಿ, ಆ ಗ್ರಂಥವವನ್ನು ಹಿಡಿದು ತೋರಿಸಿದರು. ಛತ್ತಿಸ್‌ಗಡದ ಧಮ್ತರಿ ಜಿಲ್ಲೆಯ ಘೊಟ್‌ಗಾಂವ್‌ ಹಳ್ಳಿಯ ಸಂತೆಯಲ್ಲಿನ ಅವರ ಅಂಗಡಿಯಲ್ಲಿ ಪ್ರದರ್ಶಿಸಿದ ಪುಸ್ತಕಗಳಲ್ಲಿ ಸಂವಿಧಾನವು ಅತ್ಯಂತ ದಪ್ಪನೆಯ ಪುಸ್ತಕ. ಧಮ್ತರಿಯ ನಗ್ರಿ ವಲಯದ ತಮ್ಮ ಹಳ್ಳಿಯಾದ ಜೊರದಬ್ರಿ Rytಯಿಂದ 13 ಕಿ.ಮೀ. ದೂರದಲ್ಲಿ ವಾರದ ಸಂತೆಯು ನಡೆಯುತ್ತದೆ.

ಓದಲು ಅಥವಾ ಬರೆಯಲು ಬಾರದ ರಾಮ್‌ಪ್ಯಾರಿ, ಅಂದು ತಮ್ಮ ಸರಕುಗಳನ್ನು ನೋಡಲು ಬಂದ ಎಲ್ಲರಿಗೂ ಸಂವಿಧಾನದ ಪ್ರಾಮುಖ್ಯತೆಯನ್ನು ವಿವರಿಸುತ್ತಿದ್ದರು. ಇವರ ಸಂಭಾವ್ಯ ಗ್ರಾಹಕರೂ ಸಹ ಇವರಂತೆಯೇ ಆ ಪ್ರದೇಶದ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಭಾರತದ ಸಂವಿಧಾನವನ್ನು ಅವರಿಗೆ ಪರಿಚಯಿಸಲು ರಾಮ್‌ಪ್ಯಾರಿ ಬಹಳ ಉತ್ಸುಕರಾಗಿದ್ದರು.

ಇದು, ಎಲ್ಲರೂ ತಮ್ಮ ಮನೆಯಲ್ಲಿಟ್ಟುಕೊಳ್ಳಬೇಕಾದಂತಹ “ಪವಿತ್ರ ಪುಸ್ತಕ”ವಾಗಿದ್ದು, ಇದರಿಂದ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅವರು ತಿಳಿದುಕೊಳ್ಳಬೇಕು ಎಂದರು ರಾಮ್‌ಪ್ಯಾರಿ. ಮುಖ್ಯವಾಗಿ, ದಿನಸಿ, ತರಕಾರಿಗಳು ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಖರೀದಿಸಲು ಘೊಟ್‌ಗಾಂವ್‌ನ ಸಂತೆಯಲ್ಲಿದ್ದ ಜನರನ್ನು ಉದ್ದೇಶಿಸಿ ಅವರು ಹೀಗೆಂದರು: “ಭಾರತದ ಸಂವಿಧಾನ, ಅದರ ಒದಗಣೆಗಳು (provisions) ಮತ್ತು ಐದು ಹಾಗೂ ಆರನೆಯ ಅನುಸೂಚಿಯ (ಆದಿವಾಸಿ ಸಮುದಾಯಗಳನ್ನು ರಕ್ಷಿಸುವ) ಕಾರಣದಿಂದಾಗಿ ಆದಿವಾಸಿ ಮತ್ತು ದಲಿತರಿಗೆ ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯು ದೊರೆಯುತ್ತಿದೆ ಎಂಬುದು ನಿಮಗೆ ಗೊತ್ತೇ?”

ರಾಮ್‌ಪ್ಯಾರಿ ಕವಚಿ, 50ರ ವಯೋಮಾನದವರಂತೆ ಕಾಣುತ್ತಾರೆ. ಇವರು ಛತ್ತಿಸ್‌ಗಡದ ಬಹು ದೊಡ್ಡ ಆದಿವಾಸಿ ಪಂಗಡವೆನಿಸಿದ ಗೊಂಡ್‌ ಸಮುದಾಯಕ್ಕೆ ಸೇರಿದವರು. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದವರ ಪ್ರಮಾಣವು ಮೂರನೇ ಒಂದರಷ್ಟಿದೆ. ತೀಸ್ರಿ ಆಜಾದಿ ಕಿ ಸಿಂಹಗರ್ಜನ; ಬಿರ್ಸಾ ಮುಂಡ: ಸಚಿತ್ರ ಜೀವನಿ; ಭ್ರಷ್ಟಾಚಾರ್‌; ಹಿಂದೂ ಆದಿವಾಸಿ ನಹಿ ಹೈ… ಮುಂತಾದ ಶೀರ್ಷಿಕೆಗಳ ಪುಸ್ತಕಗಳನ್ನೊಳಗೊಂಡಂತೆ, ಅವರು ಮಾರಾಟಮಾಡುವ ಬಹುತೇಕ ಪುಸ್ತಕಗಳು ಹಿಂದಿಯಲ್ಲಿವೆಯಾದರೂ, ಗೊಂಡಿ ಮತ್ತು ಆಂಗ್ಲ ಭಾಷೆಯ ಕೆಲವು ಪುಸ್ತಕಗಳನ್ನೂ ಅವರು ಸಂಗ್ರಹಿಸಿದ್ದಾರೆ. ಯಾರಾದರೂ ಪುಸ್ತಕವೊಂದನ್ನು ಕೈಗಿತ್ತಿಕೊಂಡಾಗ, ಅದು ಒಳಗೊಂಡಿರುವ ವಿಷಯವನ್ನು ರಾಮ್‌ಪ್ಯಾರಿ ವಿವರಿಸುತ್ತಾರೆ. ಈ ವಿವರಣೆಯು ಅರ್ಥಾತ್‌, ಪುಸ್ತಕದ ಸಣ್ಣ ಮುನ್ನೋಟದಂತಿರುತ್ತದೆ.

Rampyari Kawachi (right) selling books and other materials during World Tribal Day celebrations in Dhamtari, Chhattisgarh, in 2019.
PHOTO • Purusottam Thakur
Rampyari loves wearing a red turban when he goes to haats, melas and madais
PHOTO • Purusottam Thakur

ಎಡಕ್ಕೆ: ರಾಮ್‌ಪ್ಯಾರಿ ಕವಚಿ (ಬಲಕ್ಕೆ) 2019ರಲ್ಲಿ ಛತ್ತಿಸ್‌ಗಡದ ಧಮ್ತರಿಯ ವಿಶ್ವ ಆದಿವಾಸಿ ದಿನದ ಆಚರಣೆಯಲ್ಲಿ ಪುಸ್ತಕ ಮತ್ತು ಇತರೆ ಸಾಮಗ್ರಿಗಳನ್ನು ಮಾರುತ್ತಿದ್ದಾರೆ. ಬಲಕ್ಕೆ: ರಾಮ್‌ಪ್ಯಾರಿಯವರಿಗೆ ಕೆಂಪು ಪಗಡಿಯನ್ನು ಧರಿಸಿ ಸಂತೆಗಳು, ಮೇಳ ಮತ್ತು ಸುಗ್ಗಿಯ ಹಬ್ಬಗಳಿಗೆ ಹೋಗುವುದೆಂದರೆ ಬಹಳ ಇಷ್ಟ

“ನಾನೆಂದಿಗೂ ಶಾಲೆಗೆ ಹೋದವನಲ್ಲ. ನನಗೆ ಓದು ಬರಹ ತಿಳಿಯದು” ಎಂಬುದಾಗಿ ರಾಮ್‌ಪ್ಯಾರಿ ನನಗೆ ತಿಳಿಸಿದರು. ಇವರು ಹಳ್ಳಿಯಲ್ಲಿರುವ 60ರ ವಯೋಮಾನದ ಸೊಬ್‌ಸಿಂಗ್‌ ಮಾಂಡವಿ ಎಂಬ ನಿವೃತ್ತ ಸರಪಂಚ್‌ರವರ ನೆರವನ್ನು ಪಡೆಯುತ್ತಾರೆ. “ಪುಸ್ತಕಗಳನ್ನು ಓದುವಂತೆ ನಾನು ಅವರನ್ನು ವಿನಂತಿಸುತ್ತೇನೆ. ಅವು ಒಳಗೊಂಡಿರುವ ವಿಷಯಗಳನ್ನು ಅವರು ನನಗೆ ತಿಳಿಸುತ್ತಾರೆ. ನಂತರದಲ್ಲಿ ನಾನು ಅದನ್ನು ಗ್ರಾಹಕರಿಗೆ ವಿವರಿಸುತ್ತೇನೆ. ಪುಸ್ತಕದ ಮೇಲೆ ಅಚ್ಚಾಗಿರುವ ಬೆಲೆಯನ್ನು ಸಹ ನನಗೆ ಓದಲು ಬಾರದು. ಆದರೆ ಒಮ್ಮೆ ನನಗೆ ಆ ಪುಸ್ತಕದ ವಿಷಯವನ್ನು ತಿಳಿಸಿದಲ್ಲಿ, ನಾನು ಅದನ್ನೆಂದಿಗೂ ಮರೆಯುವುದಿಲ್ಲ” ಎನ್ನುತ್ತಾರವರು.

ಹದಿನೈದು ವರ್ಷಗಳ ಹಿಂದೆ ಪುಸ್ತಕಗಳ ಮಾರಾಟವನ್ನು ಪ್ರಾರಂಭಿಸುವ ಮೊದಲು ರಾಮ್‌ಪ್ಯಾರಿ, ಇತರರ ಜಮೀನುಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ನಂತರ ಸಂತೆಗಳಲ್ಲಿ ಬೀಜಗಳು ಹಾಗೂ ಕ್ರಿಮಿನಾಶಕಗಳನ್ನು ಮಾರಲಾರಂಭಿಸಿದರು. ಜೊರದಬ್ರಿ Rytಯಿಂದ 10-15 ಕಿ.ಮೀ. ದೂರದ ವ್ಯಾಪ್ತಿಯಲ್ಲಿನ ಛತ್ತಿಸ್‌ಗಡದ ಮಧ್ಯಭಾಗದ ವಾರದ ಸಂತೆಗಳಲ್ಲಿ ಅವರು ಈಗಲೂ ಬೀಜಗಳನ್ನು ಮಾರುತ್ತಾರೆ.

ಮೊದಲ ನೋಟಕ್ಕೆ, ರಾಮ್‌ಪ್ಯಾರಿಯವರನ್ನು ಜನರು ಕೇವಲ ಪುಸ್ತಕಗಳು ಮತ್ತು ಬೀಜಗಳ ಮಾರಾಟಗಾರರೆಂದು ತಪ್ಪಾಗಿ ಭಾವಿಸಬಹುದಾದರೂ ಅವರು ಇದಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾನೊಬ್ಬ ಕಾರ್ಯಕರ್ತನೆಂಬುದಾಗಿ (activist) ಅವರು ತಿಳಿಸುತ್ತಾರೆ. ಆದಿವಾಸಿ ಜನರು ಬುಡಕಟ್ಟಿನ ಸಮಸ್ಯೆಗಳು ಮತ್ತು ಅವರ ಹಕ್ಕುಗಳ ಬಗ್ಗೆ ಅರಿವನ್ನು ಪಡೆಯುವ ನಿಟ್ಟಿನಲ್ಲಿ ಅವರಿಗೆ ನೆರವಾಗಲು ರಾಮ್‌ಪ್ಯಾರಿ, ಪುಸ್ತಕಗಳ ಮಾರಾಟವನ್ನು ಆರಂಭಿಸಿದರು. ತಾವು ಬೀಜಗಳನ್ನು ಮಾರಲು ತೆರಳುವ ಸುಗ್ಗಿಯ ಹಬ್ಬ ಮತ್ತು ಮೇಳಗಳಲ್ಲಿ ಆದಿವಾಸಿಗಳ ವ್ಯಾಕುಲಗಳನ್ನು ಕುರಿತ ವಾದವಿವಾದ ಮತ್ತು ಚರ್ಚೆಗಳು ಅವುಗಳ ಬಗ್ಗೆ ಇವರು ಆಳವಾಗಿ ಆಲೋಚಿಸುವಂತೆ ಮಾಡಿತು. ಅವರು ಹೆಚ್ಚಿನದೇನನ್ನಾದರೂ ಮಾಡಲು ಬಯಸಿದರು.

“ಸಹ ಆದಿವಾದಿವಾಸಿಗಳಲ್ಲಿ ಅರಿವನ್ನು ಮೂಡಿಸುತ್ತಿದ್ದೇನೆ” ಎನ್ನುತ್ತಾರೆ ರಾಮ್‌ಪ್ಯಾರಿ. ಇವರು ಆಸಕ್ತಿಕರ ಮತ್ತು ಪ್ರೇರಣಾದಾಯಕ ಭಿತ್ತಿಪತ್ರಗಳನ್ನು ಸಹ ಮಾರುತ್ತಾರೆ. ಒಂದು ಪೋಸ್ಟರಿನಲ್ಲಿ ರಾವಣನ ಚಿತ್ರವಿತ್ತು. ಗೊಂಡ್‌ ಆದಿವಾಸಿಗಳು ಆತನನ್ನು ಪೂರ್ವಿಕನೆಂದು ಪರಿಗಣಿಸುತ್ತಾರೆ. “ನಮ್ಮ ಜನರು ಶಿಕ್ಷಣ ಮತ್ತು ಹಕ್ಕುಗಳಿಂದ ವಂಚಿತರಾಗಿದ್ದಾರೆ. ಏಕೆಂದರೆ ಅವರಿಗೆ ಅದರ ಬಗ್ಗೆ ಅರಿವಿಲ್ಲ. ಸಂವಿಧಾನವು ನಮಗೆ ಪ್ರಾಬಲ್ಯವನ್ನು ನೀಡಿದೆಯಾದರೂ, ನಮ್ಮ ಹಕ್ಕುಗಳನ್ನು ನಾವು ಬಳಸಲಾರೆವು. ನಮ್ಮ ಜನರ ಮುಗ್ಥತೆಯಿಂದಾಗಿ ಅವರನ್ನು ಶೋಷಿಸಲಾಗುತ್ತಿದೆ” ಎಂದು ಅವರು ವಿವರಿಸುತ್ತಾರೆ. ಪುಸ್ತಕಗಳು ಮತ್ತು ಭಿತ್ತಿಪತ್ರಗಳ ಜೊತೆಗೆ ಸುಗ್ಗಿಯ ಹಬ್ಬ ಮತ್ತು ಮೇಳಗಳಲ್ಲಿನ ಅವರ ಅಂಗಡಿಯಲ್ಲಿ ಆದಿವಾಸಿಗಳ ಕಾರ್ಯಕ್ರಮಗಳು ಮತ್ತು ಹಬ್ಬಗಳನ್ನು ಸೂಚಿಸುವ ಕ್ಯಾಲೆಂಡರುಗಳು; ಅಪ್ರದಕ್ಷಿಣವಾಗಿ ಚಲಿಸುವ ಆದಿವಾಸಿ ಗಡಿಯಾರ ; ಮತ್ತು ಆದಿವಾಸಿ ಸಂಕೇತಗಳನ್ನು ಹೊಂದಿರುವ ಕಡಗ ಮತ್ತು ಕಂಠಹಾರಗಳಂತಹ ಇತರೆ ವಸ್ತುಗಳನ್ನು ಸಹ ಇವರು ಮಾರುತ್ತಾರೆ.

A floral procession for guardian deities at a madai (harvest festival) in Dhamtari.
PHOTO • Purusottam Thakur
Dhol performers at a mela (right) in Chhattisgarh's Sukma district. Rampyari had set up his stall on both occasions
PHOTO • Purusottam Thakur

ಧಮ್ತರಿಯಲ್ಲಿನ ಸುಗ್ಗಿಯ ಹಬ್ಬದಲ್ಲಿ ರಕ್ಷಕ ದೇವರುಗಳಿಗಾಗಿ ಹೂವಿನ ಮೆರವಣಿಗೆ (ಎಡಕ್ಕೆ). ಬಲಕ್ಕೆ: ಛತ್ತಿಸ್‌ಗಡದ ಸುಕ್ಮ ಜಿಲ್ಲೆಯ ಮೇಳವೊಂದರಲ್ಲಿ (ಬಲಕ್ಕೆ) ಧೋಲ್‌ ಕಲಾಕಾರರು. ಈ ಎರಡೂ ಸಂದರ್ಭಗಳಲ್ಲಿ ರಾಮ್‌ಪ್ಯಾರಿಯವರು ಪುಸ್ತಕಗಳ ತಮ್ಮ ಅಂಗಡಿಯನ್ನು ವ್ಯವಸ್ಥೆಗೊಳಿಸಿದ್ದರು

ರಾಮ್‌ಪ್ಯಾರಿಯವರು ದಕ್ಷಿಣ ಛತ್ತಿಸ್‌ಗಡದ ಬಸ್ತರ್‌ ಮತ್ತು ಇತರೆ ಭಾಗಗಳನ್ನು ಒಳಗೊಂಡಂತೆ ಛತ್ತಿಸ್‌ಗಡದ ಆದಿವಾಸಿ ವಲಯದ ಉದ್ದಗಲಕ್ಕೂ ಪ್ರಯಾಣಿಸುತ್ತಾರೆ. ತಮ್ಮೊಂದಿಗೆ 400-500 ಪುಸ್ತಕಗಳನ್ನು ಮತ್ತು ಇತರೆ ಸಾಮಗ್ರಿಗಳನ್ನು ಕೊಂಡೊಯ್ಯುವ ಇವರು, ನೆರೆಯ ರಾಜ್ಯಗಳಾದ ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣಗಳಲ್ಲಿನ ಜಾತ್ರೆಗಳು ಮತ್ತು ಗೋಷ್ಠಿಗಳಲ್ಲಿ ಸಹ ಉಪಸ್ಥಿತರಿರುತ್ತಾರೆ. ಕಳೆದ ದಶಕದಲ್ಲಿ ಈ ವರದಿಗಾರರು ಛತ್ತಿಸ್‌ಗಡ ಮತ್ತು ಒಡಿಶಾದಲ್ಲಿನ ಹಲವಾರು ಸಂದರ್ಭಗಳಲ್ಲಿ ಇವರನ್ನು ಭೇಟಿಯಾಗಿದ್ದರು.

ತಮ್ಮ ಮೋಟಾರ್‌ಬೈಕಿನಲ್ಲಿ ಬಹುಕಾಲದವರೆಗೆ ಪುಸ್ತಕಗಳ ಕಟ್ಟುಗಳನ್ನು ಸಾಗಿಸುತ್ತಿದ್ದ ಈ ಪುಸ್ತಕಗಳ ಸರಬರಾಜುದಾರರು ಹೀಗೆಂದರು: “ಈ ಹಿಂದೆ, ನಾನು ಪುಸ್ತಕಗಳನ್ನು ಕೊಂಡು ಮಾರುತ್ತಿದ್ದೆ. ಸುಮಾರು 10,000-12,000 ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದೇನೆ.” ಇವರು ಮಹಾರಾಷ್ಟ್ರದ ನಾಗ್ಪುರ್‌, ಮಧ್ಯ ಪ್ರದೇಶದ ಜಬಲ್ಪುರ್‌ ಮತ್ತು ಛತ್ತಿಸ್‌ಗಡದ ರಾಯ್‌ಪುರ್‌ನಿಂದ ಪುಸ್ತಕಗಳನ್ನು ಸಂಗ್ರಹಿಸುತ್ತಾರೆ. ತಮಗೆ ನಿಗದಿತ ಆದಾಯವಿಲ್ಲವೆನ್ನುವ ಇವರು, ಯಾವುದೇ ದಾಖಲಾತಿಯನ್ನಿಡುವುದಿಲ್ಲ.

ಪುಸ್ತಕಗಳ ಬೆಲೆ ರೂ.10ರಿಂದ 30 ರೂ.ಗಳವರೆಗಿದೆ. “ಈ ಪುಸ್ತಕಗಳು ನಮ್ಮ ಸಮಾಜವನ್ನು ಕುರಿತದ್ದಾಗಿದ್ದು, ಜನರಲ್ಲಿ ಅವನ್ನು ಹರಡುವ ಅವಶ್ಯಕತೆಯಿದೆ. ಅವರು ಅವುಗಳನ್ನು ಓದಬೇಕು. ನಿಮ್ಮಂತಹ ಯಾರಾದರೂ (ವರದಿಗಾರ) ನಮಗೆ ಪ್ರಶ್ನೆಗಳನ್ನು ಕೇಳಿದಾಗ, ಸಂಕೋಚದಿಂದಾಗಿ ನಮಗೆ ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ನಮ್ಮ ಪೂರ್ವಿಕರಿಗೆ ಅವಕಾಶಗಳನ್ನು ನಿರಾಕರಿಸಿದ್ದ ಕಾರಣ ನಮಗೆ ಮಾತನಾಡಲು ಅಥವಾ ಧ್ವನಿಯೆತ್ತಲು ಸಾಧ್ಯವಾಗುವುದಿಲ್ಲವೆಂಬುದನ್ನು ನಾನು ಮನಗಂಡಿದ್ದೇನೆ” ಎನ್ನುತ್ತಾರವರು.

ತಮ್ಮ ಪ್ರಯಾಣವು ಸುಲಭವಾಗುವಂತೆ, ರಾಮ್‌ಪ್ಯಾರಿ, ಕೆಲವು ವರ್ಷಗಳ ಹಿಂದೆ, ಬಹೋಪಯೋಗಿ ಸೆಕೆಂಡ್‌ ಹ್ಯಾಂಡ್‌ ವಾಹನವೊಂದನ್ನು ಕೊಂಡರು. ತಮ್ಮ ಪರಿಚಿತರಿಂದ ಹಣವನ್ನು ಸಾಲವಾಗಿ ಪಡೆದರು. ಆದರೆ ಮಾರ್ಚ್‌ 2020ರಿಂದ ಕೋವಿಡ್‌-19 ಲಾಕ್‌ಡೌನ್‌ಗಳಿಂದಾಗಿ ಸಾಲದ ಕಂತನ್ನು ಪಾವತಿಸಲು ಇವರಿಗೆ ಕಷ್ಟವಾಯಿತು. ಈಗಲೂ ಅದು ಕಷ್ಟವೇ ಸರಿ ಎಂದರವರು.

Rampyari Kawachi (attired in yellow) and his helpers selling books on a hot summer afternoon at an Adivasi mela in Sukma district
PHOTO • Purusottam Thakur

ಸುಕ್ಮ ಜಿಲ್ಲೆಯ ಸುಡು ಬೇಸಿಗೆಯ ಮಧ್ಯಾಹ್ನವೊಂದರಲ್ಲಿ, ಆದಿವಾಸಿ ಮೇಳದಲ್ಲಿ ಪುಸ್ತಕಗಳನ್ನು ಮಾರುತ್ತಿರುವ ರಾಮ್‌ಪ್ಯಾರಿ ಕವಚಿ (ಹಳದಿ ಉಡುಪು ಧರಿಸಿರುವವರು) ಮತ್ತು ಅವರ ಸಹಾಯಕರು

ಇವರ ಸರಕುಗಳನ್ನಿಡಲು ಯಾವುದೇ ಉಗ್ರಾಣವಿಲ್ಲ. ರಾಮ್‌ಪ್ಯಾರಿ, ಜೊರದಬ್ರೆ Rytಯಲ್ಲಿ, ತಮ್ಮ ಪತ್ನಿ ಪ್ರೇಮಬಾಯಿಯವರೊಂದಿಗೆ ವಾಸಿಸುತ್ತಿರುವ ಹೆಂಚಿನ ಚಾವಣಿಯ ಮೂರು ಕೋಣೆಗಳ ಮನೆಯಲ್ಲಿ ಸರಕುಗಳೆಲ್ಲವನ್ನೂ ಇರಿಸುತ್ತಾರೆ. ಈಕೆಗಾಗಲಿ ರಾಮ್‌ಪ್ಯಾರಿಯವರಿಗಾಗಲಿ ತಮ್ಮ ವಯಸ್ಸಿನ ಬಗ್ಗೆ ತಿಳಿದಿಲ್ಲ. ಇವರ ಬಳಿ ಯಾವುದೇ ದಾಖಲೆಗಳು ಅಥವಾ ಜನನ ಪ್ರಮಾಣಪತ್ರವಿಲ್ಲ. ಮನೆಗೆಲಸ ಮತ್ತು ಹಿತ್ತಿಲಿನ ಚಿಕ್ಕ ಭೂಭಾಗದಲ್ಲಿನ ಕೃಷಿಯಲ್ಲಿ ಮಗ್ನರಾಗಿರುವ ಇವರ ಪತ್ನಿಯು ಸಾಧ್ಯವಾದಾಗಲೆಲ್ಲಾ, ಅಂಗಡಿಯಲ್ಲಿ ಸಹಾಯಮಾಡುವ ಸಲುವಾಗಿ ರಾಮ್‌ಪ್ಯಾರಿಯೊಂದಿಗೆ ತೆರಳುತ್ತಾರೆ.

“ನಾನಗೆ ಅಪಾರ ತೃಪ್ತಿಯು ದೊರೆಯುವ ಕಾರಣ ನಾನು ಈ ಕೆಲಸವನ್ನು ಮಾಡುತ್ತೇನೆ. ನಾವು ಆದಿವಾಸಿಗಳೆಲ್ಲರೂ ಸುಗ್ಗಿಯ ಹಬ್ಬ ಮತ್ತು ಮೇಳಗಳಲ್ಲಿ ಜೊತೆಗೂಡಿ ಅವನ್ನು ಆಚರಿಸುತ್ತೇವೆ. ನಾನು ಎಲ್ಲಿಯಾದರೂ ಸಂಪಾದಿಸಬಹುದು. ಆದರೆ ಅಂತಹ ಸ್ಥಳಗಳಲ್ಲಿ ಸ್ವಲ್ಪ ಹಣವನ್ನು ಸಂಪಾದಿಸುವುದರೊಂದಿಗೆ, ನನ್ನ ಬದುಕಿನ ಧ್ಯೇಯದಲ್ಲಿ ತೊಡಗಿರುತ್ತೇನೆ” ಎಂದರು ರಾಮ್‌ಪ್ಯಾರಿ.

ಈ ಹಿಂದೆ ಜನರಿಗೆ ರಾಮ್‌ಪ್ಯಾರಿಯವರು ಮಾರಾಟಗಾರರಾಗಿ ಪರಿಚಿತರಾಗಿದ್ದರು. “ಆಗ ನನ್ನನ್ನು ಸೇಠ್‌ (ವ್ಯಾಪಾರಿ) ಎಂದು ಕರೆಯುತ್ತಿದ್ದರು. ಆದರೀಗ ಇವರು ನನ್ನನ್ನು ʼಸಾಹಿತ್ಯಕಾರʼನಂತೆ ಕಾಣುತ್ತಾರೆ. ನನಗದು ಇಷ್ಟ!”

ಈ ಕಥಾನಕವು, ಬಿಸ್‌ನೆಸ್‌ ಅಂಡ್‌ ಕಮ್ಯುನಿಟಿ ಫೌಂಡೇಷನ್‌ ಬೆಂಬಲದಿಂದ ಲಾಕ್‌ಡೌನ್‌ ಸಮಯದಲ್ಲಿನ ಜೀವನೋಪಾಯಗಳ ಬಗ್ಗೆ ಬರೆದ 25 ಲೇಖನಗಳ ಸರಣಿಯ ಒಂದು ಭಾಗವಾಗಿದೆ.

ಅನುವಾದ: ಶೈಲಜಾ ಜಿ.ಪಿ

Purusottam Thakur

پرشوتم ٹھاکر ۲۰۱۵ کے پاری فیلو ہیں۔ وہ ایک صحافی اور دستاویزی فلم ساز ہیں۔ فی الحال، وہ عظیم پریم جی فاؤنڈیشن کے ساتھ کام کر رہے ہیں اور سماجی تبدیلی پر اسٹوری لکھتے ہیں۔

کے ذریعہ دیگر اسٹوریز پرشوتم ٹھاکر
Editor : Vinutha Mallya

ونوتا مالیہ، پیپلز آرکائیو آف رورل انڈیا کے لیے بطور کنسلٹنگ ایڈیٹر کام کرتی ہیں۔ وہ جنوری سے دسمبر ۲۰۲۲ تک پاری کی ایڈیٹوریل چیف رہ چکی ہیں۔

کے ذریعہ دیگر اسٹوریز Vinutha Mallya
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

کے ذریعہ دیگر اسٹوریز Shailaja G. P.