ಆಕೆ ತನ್ನ ಕೊಠಡಿಯ ಕಿಟಕಿಯಿಂದ ನೋಡುತ್ತಿದ್ದರು. ಕಣ್ಣು ಹಾಯಿಸಿದಲ್ಲೆಲ್ಲ ನೀರೇ ನೀರು. ಪ್ರವಾಹದ ನೀರು ಇಳಿದೇ ಇಲ್ಲ. ರೂಪಾಲಿ ಬಾಗು ಅವರ ಮನೆ ಸುಬನ್‌ಶ್ರೀ ನದಿಗೆ ಒಂದು ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಈ ನದಿ ಬ್ರಹ್ಮಪುತ್ರ ನದಿಯ ಮುಖ್ಯ ಉಪನದಿಗಳಲ್ಲಿ ಒಂದು. ಈ ನದಿ ಪಾತ್ರದಲ್ಲೂ ವಾರ್ಷಿಕ ಪ್ರವಾಹದ ಪರಿಣಾಮಗಳು ಇರುತ್ತವೆ.
ಎಲ್ಲಿ ನೋಡಿದರೂ ನೀರೇ ಕಾಣುತ್ತದೆ, ವಿಪರ್ಯಾಸವೆಂದರೆ ಕುಡಿಯಲು ಬೇಕೆಂದರೆ ಒಳ್ಳೆಯ ನೀರು ಒಂದು ಹನಿ ಕೂಡಾ ಸಿಗುವುದಿಲ್ಲ. ಅವರ ಮನೆಯಿರುವುದು ಅಸ್ಸಾಮ್ ರಾಜ್ಯದ ಲಕೀಂಪುರ ಜಿಲ್ಲೆಯ ಬೋರ್ದುಬಿ ಮಲುವಾಲ್ ಗ್ರಾಮದಲ್ಲಿ. ಇಲ್ಲಿ ಕುಡಿಯುವ ನೀರು ಪೂರ್ತಿಯಾಗಿ ಕಲುಷಿತಗೊಂಡಿದೆ. “ನಮ್ಮ ಊರಿನ ಮತ್ತು ಹತ್ತಿರದ ಊರುಗಳ ಹ್ಯಾಂಡ್ ಪಂಪುಗಳೆಲ್ಲವೂ ನೀರಿನಲ್ಲಿ ಮುಳುಗಿ ಹೋಗಿವೆ” ಎಂದು ರೂಪಾಲಿ ವಿವರಿಸುತ್ತಾರೆ.
ರಸ್ತೆಯ ಬಳಿಯಿರುವ ಹ್ಯಾಂಡ್ ಪಂಪಿನಿಂದ ನೀರನ್ನು ತರಲು ಅವರು ಸಣ್ಣ ದೋಣಿಯೊಂದನ್ನು ಆಶ್ರಯಿಸುತ್ತಾರೆ. ಇದರಲ್ಲಿ ಅವರು ಮೂರು ನೀರಿನ ಪಾತ್ರೆಯನ್ನು ಜೋಡಿಸಿಕೊಂಡು ರಸ್ತೆಯ ಮೇಲೆ ಹುಟ್ಟು ಹಾಕುತ್ತಾರೆ. ಆದರೆ ಅದು ಕೂಡಾ ಅರ್ಧ ಭಾಗ ನೀರಿನಲ್ಲಿ ಮುಳುಗಿತ್ತು. ದೋಣಿ ನಡೆಸಲು ಅವರು ಉದ್ದದ ಬಿದಿರಿನ ಕೋಲೊಂದನ್ನು ಬಳಸುತ್ತಾರೆ. “ಮೋನಿ, ನನ್ನ ಜೊತೆ ಬಾ!” ಎಂದು ಅವರು ತನ್ನ ನೆರೆ ಮನೆಯವರನ್ನು ಕರೆದರು. ಸಾಮಾನ್ಯವಾಗಿ ಇವರಿಬ್ಬರೂ ಜೊತೆಯಲ್ಲೇ ನೀರಿಗೆ ಹೋಗಿ ನೀರಿನ ಪಾತ್ರೆಗಳನ್ನು ತುಂಬಲು ಪರಸ್ಪರ ಸಹಾಯ ಮಾಡುತ್ತಾರೆ.
ಹ್ಯಾಂಡ್ ಪಂಪನ್ನು ಸ್ವಲ್ಪ ಹೊತ್ತು ಒತ್ತಿದ ನಂತರ, ಕಡೆಗೆ ಶುದ್ಧ ನೀರು ಬರತೊಡಗುತ್ತದೆ. “ಮೂರು ದಿನಗಳಿಂದ ಮಳೆ ಬಂದಿಲ್ಲ, ಹೀಗಾಗಿ ನಮಗೆ ನೀರು ತರಲು ಸಾಧ್ಯವಾಯಿತು” ಎಂದು ಅವರು ನಗು ಬೆರೆತ ನಿರಾಳ ದನಿಯಲ್ಲಿ ಹೇಳಿದರು. ನೀರು ತರುವುದನ್ನು ಮಹಿಳೆಯರ ಕೆಲಸವೆಂದು ಪರಿಗಣಿಸಲಾಗುತ್ತದೆಯಾದ ಕಾರಣ ನೀರಿನ ತೊಂದರೆಯನ್ನೂ ಹೆಂಗಸರೇ ಭರಿಸಬೇಕಾಗುತ್ತದೆ.
ತಮ್ಮ ಮನೆಯ ಸುತ್ತ ನಿಂತಿದ್ದ ಕೆನ್ನೀರಿನತ್ತ ಕೈ ತೋರಿಸುತ್ತಾ “ಹ್ಯಾಂಡ್ ಪಂಪುಗಳು ಕೈಕೊಟ್ಟಾಗ ನಾವು ಇದನ್ನೇ ಕಾಯಿಸಿಕೊಂಡು ಕುಡಿಯುತ್ತೇವೆ” 36 ವರ್ಷದ ರೂಪಾಲಿ ಹೇಳಿದರು.
ಇಲ್ಲಿನ ಇತರ ಅನೇಕ ಮನೆಗಳಂತೆ, ರೂಪಾಲಿಯವರ ಮನೆಯನ್ನೂ ಪ್ರವಾಹವನ್ನು ತಡೆದುಕೊಳ್ಳುವಂತೆ ವಿಶೇಷವಾಗಿ ರೂಪಿಸಲಾಗಿದೆ. ಸ್ಥಳೀಯವಾಗಿ ಇಂತಹ ಮನೆಗಳನ್ನು ಸಾಂಗ್ ಘರ್ ಎಂದು ಕರೆಯಲಾಗುತ್ತದೆ. ಈ ಮನೆಗಳನ್ನು ಪ್ರವಾಹದ ನೀರು ಒಳ ನುಗ್ಗದಂತೆ ಎತ್ತರ ಬಿದಿರಿನ ವೇದಿಕೆ ನಿರ್ಮಿಸಿ ಅದರ ಮೇಲೆ ಕಟ್ಟಲಾಗಿರುತ್ತದೆ. ಅವರ ಮನೆಯೆದುರಿನ ವರಾಂಡವನ್ನು ಬಾತುಕೋಳಿಗಳು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದವು. ಅವುಗಳ ಕೂಗಿನ ಸದ್ದು ಅಲ್ಲಿನ ಮೌನವನ್ನು ಕಲಕುತ್ತಿತ್ತು.
ರೂಪಾಲಿಯವರ ಸಣ್ಣ ದೋಣಿ ಅವರಿಗೆ ಶೌಚ ಸಂಬಂಧಿ ಬಳಕೆಗಳಿಗೂ ಒದಗುತ್ತದೆ. ಅವರ ಮನೆಯಲ್ಲಿ ಹಿಂದೆ ಬಾತ್‌ರೂಮ್ ಇತ್ತು, ಆದರೆ ಈಗ ಅದೂ ಮುಳುಗಡೆಯಾಗಿದೆ. “ನಾವು ಬಹಳ ದೂರ ಹೋಗಬೇಕಾಗುತ್ತದೆ ನದಿಯ ಕಡೆಗೆ” ಎನ್ನುತ್ತಾರೆ ರೂಪಾಲಿ. ಅವರು ಈ ಪ್ರಯಾಣವನ್ನು ಸಾಮಾನ್ಯವಾಗಿ ಕತ್ತಲಾದ ನಂತರ ಕೈಗೊಳ್ಳುತ್ತಾರೆ.
ಪ್ರವಾಹದ ಸಮಸ್ಯೆ ಇಲ್ಲಿನ ಜನರ (ಬಹುತೇಕ ಮಿಸಿಂಗ್ ಸಮುದಾಯಕ್ಕೆ ಸೇರಿದವರು) ಬದುಕನ್ನಷ್ಟೇ ಅಲ್ಲ, ಅವರ ಬದುಕಿನ ದಾರಿಯನ್ನು ಸಹ ಸಂಕಷ್ಟಕ್ಕೆ ಸಿಲುಕಿಸಿದೆ. “ನಮ್ಮದು ಭತ್ತ ಬೆಳೆಯುವ 12 ಬಿಘಾ ಅಳತೆಯ ಗದ್ದೆಯಿತ್ತು. ಆದರೆ ಈ ವರ್ಷ ನಾವು ಬೆಳೆದಿದ್ದೆಲ್ಲವೂ ನೀರು ಪಾಲಾಗಿದೆ. ನಾವು ಎಲ್ಲವನ್ನೂ ಕಳೆದುಕೊಂಡು ಕುಳಿತಿದ್ದೇವೆ” ಎನ್ನುತ್ತಾರೆ ರೂಪಾಲಿ. ಅವರ ಪಾಲಿನ ಭೂಮಿಯ ಒಂದು ಭಾಗವನ್ನು ಈಗಾಗಲೇ ನದಿ ನುಂಗಿಬಿಟ್ಟಿದೆ. “ಈ ವರ್ಷದ ಪ್ರವಾಹ ಅದೆಷ್ಟು ಭೂಮಿಯನ್ನು ನುಂಗಿದೆ ಎನ್ನುವುದು ಈ ನೆರೆ ಇಳಿದ ನಂತರವಷ್ಟೇ ತಿಳಿಯುತ್ತದೆ” ಎಂದು ಅವರು ಹೇಳುತ್ತಾರೆ.
ಬೇಸಾಯ ಎನ್ನುವುದು ಮಿಸಿಂಗ್ ಸಮುದಾಯದ (ಈ ರಾಜ್ಯದಲ್ಲಿ ಅವರನ್ನು ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ) ಸಾಂಪ್ರದಾಯಿಕ ಉದ್ಯೋಗ. ಬೇಸಾಯ ಮಾಡಲು ಸಾಧ್ಯವಿಲ್ಲದ ಕಾರಣ ಹಲವರು ಈಗಾಗಲೇ ಹೊಟ್ಟೆಪಾಡಿಗಾಗಿ ವಲಸೆ ಹೋಗತೊಡಗಿದ್ದಾರೆ. 2020ರ ಈ ಅಧ್ಯಯನದ ಪ್ರಕಾರ ಲಖೀಂಪುರದಿಂದ ಹೊರಗೆ ವಲಸೆ ಹೋಗುವವರ ಸಂಖ್ಯೆ ಜಿಲ್ಲೆಯ ಜನಸಂಖ್ಯೆಯ ಶೇಕಡಾ 29ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಯ ಮೂರು ಪಟ್ಟು. ರೂಪಾಲಿಯವರ ಪತಿ ಮಾನುಸ್ ಇದೀಗ ಹೈದರಾಬಾದ್ ನಗರದಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದಾರೆ. ಮನೆ ಮತ್ತು ಮಕ್ಕಳ ಜವಾಬ್ದಾರಿ ಇದೀಗ ರೂಪಾಲಿಯವರದು – ಒಬ್ಬ ಮಗ, ಒಬ್ಬಳು ಮಗಳು. ತಿಂಗಳಿಗೆ 15,000 ಗಳಿಸುವ ಮಾನುಸ್ ಅದರಲ್ಲಿ 8,000-10,000 ರೂಪಾಯಿಗಳನ್ನು ಮನೆಗೆ ಕಳುಹಿಸುತ್ತಾರೆ.
ರೂಪಾಲಿಯವರು ಹೇಳುವಂತೆ ವರ್ಷದ ಆರು ತಿಂಗಳು ಅವರ ಮನೆಗಳು ನೀರಿನಲ್ಲಿ ಮುಳುಗಿರುತ್ತವೆ. ಹೀಗಾಗಿ ಇಲ್ಲಿ ಕೆಲಸ ಹುಡುಕುವುದು ಕಷ್ಟ. ಕಳೆದ ವರ್ಷ ಸರ್ಕಾರದಿಂದ ಒಂದಷ್ಟು ಸಹಾಯ ದೊರಕಿತ್ತು – ಪಾಲಿಥೀನ್ ಶೀಟ್ಸ್, ದಿನಸಿ. ಆದರೆ ಈ ವರ್ಷ ಏನನ್ನೂ ಕೊಟ್ಟಿಲ್ಲ. “ನಮ್ಮ ಬಳಿ ಹಣ ಇದ್ದಿದ್ದರೆ ನಾವೂ ಇಲ್ಲಿಂದ ಹೊರಗೆ ಹೋಗುತ್ತಿದ್ದೆವು” ಎಂದು ಅವರು ಬೇಸರದ ದನಿಯಲ್ಲಿ ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು