ತೇಜಲಿಬಾಯಿ ದೇಡಿಯಾ ನಿಧಾನವಾಗಿ ಸ್ಥಳೀಯ ಬೀಜಗಳನ್ನು ಮತ್ತೆ ಗಳಿಸುತ್ತಿದ್ದಾರೆ.

ಸರಿಸುಮಾರು 15 ವರ್ಷಗಳ ಹಿಂದೆ, ಮಧ್ಯಪ್ರದೇಶದ ಅಲಿರಾಜಪುರ ಮತ್ತು ದೇವಾಸ್ ಜಿಲ್ಲೆಗಳಲ್ಲಿ ಕೃಷಿಯಲ್ಲಿ ತೊಡಗಿದ್ದ ತೇಜಲಿಬಾಯಿ ಸೇರಿದಂತೆ ಭಿಲ್ ಆದಿವಾಸಿಗಳು ಸಾವಯವ ಕೃಷಿ ಪದ್ಧತಿಗಳ ಮೂಲಕ ಬೆಳೆದ ಸ್ಥಳೀಯ ಬೀಜಗಳ ಬದಲಿಗೆ ರಾಸಾಯನಿಕ ಒಳಸುರಿಯನ್ನು ಅವಲಂಬಿಸಿರುವ ಹೈಬ್ರಿಡ್ ಬೀಜಗಳನ್ನು ಬಳಸತೊಡಗಿದರು. ಈ ಬದಲಾವಣೆಯು ಪಾರಂಪರಿಕ ಬೀಜಗಳ ಕಣ್ಮರೆಗೆ ಕಾರಣವಾಯಿತು. ತೇಜಲಿಬಾಯಿ ಈ ಪರಿವರ್ತನೆಯ ಬಗ್ಗೆ ಹೀಗೆ ವಿವರಿಸುತ್ತಾರೆ: "ಸಾಂಪ್ರದಾಯಿಕ ಕೃಷಿಗೆ ಗಮನಾರ್ಹ ಶ್ರಮದ ಅಗತ್ಯವಿತ್ತು, ಜೊತೆಗೆ ಸರಿಯಾದ ಮಾರುಕಟ್ಟೆ ಬೆಲೆಯೂ ಸಿಗುತ್ತಿರಲಿಲ್ಲ. ದುಡಿಮೆಯಲ್ಲಿ ಉಳಿಸಿದ ಸಮಯವನ್ನು ನಾವು ಗುಜರಾತ್‌ ರಾಜ್ಯಕ್ಕೆ ವಲಸೆ ಹೋಗಿ ಹೆಚ್ಚಿನ ಮೊತ್ತದ ಕೂಲಿ ಕೆಲಸಕ್ಕೆ ಬಳಸುತ್ತಿದ್ದೆವು" ಎಂದು 71 ವರ್ಷದ ಅವರು ಹೇಳುತ್ತಾರೆ.

ಆದರೆ ಈಗ, ಈ ಜಿಲ್ಲೆಗಳ 20 ಹಳ್ಳಿಗಳಲ್ಲಿ, ಸುಮಾರು 500 ಮಹಿಳೆಯರು ತಮ್ಮ ಊರಿನ ಪಾರಂಪರಿಕ ಬೀಜಗಳನ್ನು ಸಂರಕ್ಷಿಸುತ್ತಿದ್ದಾರೆ ಮತ್ತು ಕನ್ಸರಿ ನು ಬಡಾವ್ನೂ (ಕೆಎನ್‌ವಿ) ಮಾರ್ಗದರ್ಶನದಲ್ಲಿ ಸಾವಯವ ಕೃಷಿಯತ್ತ ಮರಳುತ್ತಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಮತ್ತು ಅವರ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಭಿಲ್ ಆದಿವಾಸಿ ಮಹಿಳೆಯರು ಕಟ್ಟಿಕೊಂಡ ಸಾಮೂಹಿಕ ಸಂಘಟನೆಯಾದ ಕೆಎನ್‌ವಿ ಸಂಘಟನೆಯನ್ನು 1997ರಲ್ಲಿ ಸ್ಥಾಪಿಸಲಾಯಿತು. ಆರೋಗ್ಯ ಸಮಸ್ಯೆಗಳ ಕ್ಷೇತ್ರದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ನಂತರ, ಕೆಎನ್‌ವಿ ರಚನೆಯ ಭಾಗವಾಗಿದ್ದ ಆದಿವಾಸಿ ಮಹಿಳೆಯರು ಸಾಂಪ್ರದಾಯಿಕ ಬೆಳೆಗಳಿಗೆ ಮರಳುವ ಮೂಲಕ ತಮ್ಮ ಆಹಾರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ಅರಿತುಕೊಂಡರು.

ಕೆಎನ್‌ವಿಯಲ್ಲಿ ಜೈವಿಕ ವೈವಿಧ್ಯಮಯ ಸಾವಯವ ಕೃಷಿಯನ್ನು ದೇಶದ ಉದ್ದಗಲಕ್ಕೂ ಹರಡುವ ನಿಟ್ಟಿನಲ್ಲಿ ಆಯ್ದ ಬೀಜಗಳನ್ನು ಇತರ ರೈತರಿಗೆ ಮಾರಾಟ ಮಾಡಲು ಮತ್ತು ವಿತರಿಸಲು ಪ್ರತ್ಯೇಕವಾಗಿ ಸಂಗ್ರಹಿಸಿ, ಉಳಿದ ಬೆಳೆಯನ್ನು ಬಳಕೆಗಾಗಿ ಇಟ್ಟುಕೊಳ್ಳಲಾಗುತ್ತದೆ ಎಂದು ಕವಾಡಾ ಗ್ರಾಮದ ನಿವಾಸಿ ರಿಂಕು ಅಲವಾ ಹೇಳುತ್ತಾರೆ. “ಕೊಯ್ಲು ಮುಗಿದ ನಂತರ ನಾವು ಒಳ್ಳೆಯ ಬೀಜವನ್ನು ಆಯ್ಕೆ ಮಾಡಬೇಕು” ಎಂದು 39 ವರ್ಷದ ರಿಂಕು ಹೇಳುತ್ತಾರೆ.

ಕಕ್ರಾನಾ ಗ್ರಾಮದ ರೈತ ಮಹಿಳೆ ಮತ್ತು ಕೆಎನ್‌ವಿ ಸದಸ್ಯೆ ರಾಯ್ತಿಬಾಯಿ ಸೋಲಂಕಿ ಈ ಮಾಗತುಗಳನ್ನು ಒಪ್ಪುತ್ತಾರೆ: "ಬೀಜಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಅವುಗಳ ಉತ್ಪಾದಕತೆಯನ್ನು ಹೆಚ್ಚಿಸಲು ಬೀಜದ ಆಯ್ಕೆಯು ಉತ್ತಮ ಮಾರ್ಗವಾಗಿದೆ.

40 ವರ್ಷದ ರಾಯ್ತಿಬಾಯಿ ಹೇಳುತ್ತಾರೆ, "ಸಿರಿಧಾನ್ಯಗಳು ಮತ್ತು ಜೋಳದಂತಹ ಏಕದಳ ಧಾನ್ಯಗಳು ನಮ್ಮ ಭಿಲ್ ಬುಡಕಟ್ಟು ಜನಾಂಗದ ಮುಖ್ಯ ಆಹಾರವಾಗಿತ್ತು. ಸಿರಿಧಾನ್ಯಗಳು ಎಲ್ಲಾ ಧಾನ್ಯಗಳಿಗಿಂತ ಹೆಚ್ಚು ನೀರಿನ ದಕ್ಷತೆ ಮತ್ತು ಪೌಷ್ಟಿಕತೆಯನ್ನು ಹೊಂದಿವೆ. ಭತ್ತ ಮತ್ತು ಗೋಧಿಯಂತಹ ಇತರ ಏಕದಳ ಧಾನ್ಯಗಳಿಗಿಂತ ಅವುಗಳ ಬೇಸಾಯ ಸುಲಭ." ಅವರು ಸಿರಿಧಾನ್ಯಗಳ ಪ್ರಭೇದಗಳ ಹೆಸರುಗಳನ್ನು ಪಟ್ಟಿ ಮಾಡಲು ಪ್ರಾರಂಭಿಸುತ್ತಾರೆ - ಬಟ್ಟಿ (ಊದಲು ಅಕ್ಕಿ), ಭಾಡಿ, ರಾಲಾ (ನವಣೆ), ರಾಗಿ (ರಾಗಿ), ಬಾಜ್ರಾ (ಸಜ್ಜೆ), ಕೊಡೊ, ಕುಟ್ಕಿ, ಸಾಂಗ್ರಿ (ಸಣ್ಣ ಕಿರುಧಾನ್ಯಗಳು). "ಮಣ್ಣಿನ ಫಲವತ್ತತೆಯನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಇವುಗಳನ್ನು ಬೀನ್ಸ್, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳಂತಹ ದ್ವಿದಳ ಧಾನ್ಯಗಳೊಂದಿಗೆ ಮಿಶ್ರಬೆಳೆಯಾಗಿ ಬೆಳೆಯಲಾಗುತ್ತದೆ" ಎಂದು ಅವರು ಹೇಳುತ್ತಾರೆ.

PHOTO • Rohit J.
PHOTO • Rohit J.

ಎಡಕ್ಕೆ: ತೇಜಲಿಬಾಯಿ ತನ್ನ ಭತ್ತದ ಗದ್ದೆಯಲ್ಲಿ. ಬಲ: ರಾಯ್ತಿಬಾಯಿ ತನ್ನ ಊದಲು ಅಕ್ಕಿ ಹೊಲದಲ್ಲಿ

PHOTO • Rohit J.
PHOTO • Rohit J.

ಎಡಕ್ಕೆ: ಜೋಳ. ಬಲ: ಸ್ಥಳೀಯವಾಗಿ ಬಟ್ಟಿ ಎಂದು ಕರೆಯಲ್ಪಡುವ ಊದಲು

ಕೆಎನ್‌ವಿ ಎನ್ನುವ ಬುಡಕಟ್ಟು ಮಹಿಳಾ ಸಹಕಾರಿ ಸಂಘಟನೆಯು ಸ್ಥಳೀಯ ಬೀಜಗಳ ಸಂಗ್ರಹದ ಕೆಲಸವನ್ನಷ್ಟೇ ಮಾಡದೆ ಸಾವಯವ ಕೃಷಿ ಪದ್ಧತಿಯನ್ನು ಮರಳಿ ತರುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದೆ.

ಗೊಬ್ಬರ ಮತ್ತು ರಸಗೊಬ್ಬರವನ್ನು ತಯಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಇದು ನಿಧಾನವಾಗಿ ನಡೆಯುತ್ತಿದೆ ಎಂದು ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯ ಖೋಡ್ ಅಂಬಾ ಗ್ರಾಮದಲ್ಲಿ ವಾಸಿಸುವ ತೇಜಲಿಬಾಯಿ ಹೇಳುತ್ತಾರೆ. “ಪ್ರಸ್ತುತ ನಾನು ನನ್ನ ಬಳಕೆಗಾಗಿ ನಮ್ಮ ಭೂಮಿಯ ಸಣ್ಣ ಭಾಗದಲ್ಲಿ ಒಂದಷ್ಟು ಸ್ಥಳೀಯ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದೇನೆ. ಪೂರ್ತಿಯಾಗಿ ಸಾವಯವ ಕೃಷಿ ಪದ್ಧತಿಗೆ ಹೊರಳಿಕೊಳ್ಳಲು ನನಗೆ ಸದ್ಯಕ್ಕೆ ಸಾಧ್ಯವಿಲ್ಲ.“ ಅವರು ತಮ್ಮ ಕುಟುಂಬದ ಮೂರು ಎಕರೆ ಕೃಷಿ ಭೂಮಿಯಲ್ಲಿ ಜೋಳ, ಮಕ್ಕಾ [ಮೆಕ್ಕೆಜೋಳ], ಭತ್ತ, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳ ಮಳೆಯಾಧಾರಿತ ಕೃಷಿಯನ್ನು ಅಭ್ಯಾಸ ಮಾಡುತ್ತಾರೆ.

ಸಾವಯವ ಕೃಷಿಯಲ್ಲಿ ಬಳಸುವ ಮಿಶ್ರಗೊಬ್ಬರ ಮತ್ತು ಬಯೋ ಕಲ್ಚರ್ ಸಹ ಪುನರಾಗಮನ ಮಾಡುತ್ತಿವೆ ಎಂದು ದೇವಾಸ್ ಜಿಲ್ಲೆಯ ಜಮಾಸಿಂಧ್ ನಿವಾಸಿ ವಿಕ್ರಮ್ ಭಾರ್ಗವ ವಿವರಿಸುತ್ತಾರೆ. ಬೆಲ್ಲ, ಕಡಲೆ ಪುಡಿ, ಸಗಣಿ ಮತ್ತು ದನದ ಮೂತ್ರವನ್ನು ಬೆರೆಸಿ ಕೊಳೆಯಿಸುವ ಮೂಲಕ ಬಯೋ ಕಲ್ಚರ್ ತಯಾರಿಸಲಾಗುತ್ತದೆ.

25 ವರ್ಷದ ಬರೇಲಾ ಆದಿವಾಸಿ ಹೇಳುತ್ತಾರೆ, "ಜಮೀನಿನಿಂದ ತಂದ ಹುಲ್ಲು ಇತ್ಯಾದಿ ಬೇಸಾಯದ ವ್ಯರ್ಥ ಪದಾರ್ಥಗಳನ್ನು ದನದ ಸಗಣಿಯೊಂದಿಗೆ ಬೆರೆಸಿ ಗುಂಡಿಯಲ್ಲಿ ಪದರಗಳಲ್ಲಿ ಇರಿಸಬೇಕು, ಅದನ್ನು ಗೊಬ್ಬರವಾಗಿ ತಯಾರಿಸಲು ನಿರಂತರವಾಗಿ ನೀರು ಹಾಕಬೇಕಾಗುತ್ತದೆ. ನಂತರ, ಅದನ್ನು ಹರಡಬೇಕು ಮತ್ತು ಮಣ್ಣಿನೊಂದಿಗೆ ಬೆರೆಸಬೇಕು. ಇದರಿಂದ ಬೆಳೆಗಳಿಗೆ ಪ್ರಯೋಜನ ದೊರೆಯುತ್ತದೆ.

PHOTO • Rohit J.
PHOTO • Rohit J.

ಎಡಕ್ಕೆ: ಕೃಷಿ ತ್ಯಾಜ್ಯಕ್ಕೆ ಸಗಣಿ ಬೆರೆಸುತ್ತಿರುವುದು. ಬಲ: ಬಯೋಕಲ್ಚರ್‌ ತಯಾರಿಕೆ

PHOTO • Rohit J.
PHOTO • Rohit J.

ಎಡಕ್ಕೆ:  ಇದರ ತಯಾರಿಕೆಯ ಹಂತದಲ್ಲಿ ನಿರಂತರವಾಗಿ ನೀರು ಬೆರೆಸುತ್ತಿರಬೇಕು  ಬಲ:  ಒಮ್ಮೆ ತಯಾರಾದ ನಂತರ ಅದನ್ನು ಮಣ್ಣಿನೊಂದಿಗೆ ಬೆರೆಸಲಾಗುತ್ತದೆ

*****

ಮಾರುಕಟ್ಟೆ ಬೆಳೆಗಳ ಒತ್ತಡದಿಂದ ಬೀಜಗಳ ಕಣ್ಮರೆಯೊಂದಿಗೆ ಸಾಂಪ್ರದಾಯಿಕ ತಿನಿಸುಗಳು ಸಹ ಮಾಯವಾದವು ಎಂದು ವೇಸ್ತಿ ಪಡಿಯಾರ್ ಹೇಳುತ್ತಾರೆ, ಹಾಗೆಯೇ ಸಿರಿಧಾನ್ಯಗಳನ್ನು ಕೈಯಿಂದ ಬಡಿದು ಬಿಡಿಸುವ ಪದ್ಧತಿಯೂ ಕಣ್ಮರೆಯಾಯಿತು. ಸಂಸ್ಕರಿಸಿದ ಸಿರಿಧಾನ್ಯಗಳನ್ನು ಹೆಚ್ಚು ಕಾಲ ಶೇಖರಿಸಿ ಇಡಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯರು ಅಡುಗೆಗೆ ಬೇಕಿರುವಾಗ ಮಾತ್ರವೇ ಅವುಗಳನ್ನು ಕುಟ್ಟಿ ಪುಡಿ ಮಾಡುತ್ತಾರೆ.

“ನಾವು ಸಣ್ಣವರಿದ್ದ ಕಾಲದಲ್ಲಿ ರಾಲಾ, ಭಾಡಿ ಮತ್ತು ಬಟ್ಟಿಯಂತಹ ಸಿರಿಧಾನ್ಯಗಳನ್ನು ಬಳಸಿ ರುಚಿಕರವಾದ ತಿಂಡಿಗಳನ್ನು ತಯಾರಿಸಲಾಗುತ್ತಿತ್ತು. ದೇವರು ಮನುಷ್ಯರನ್ನು ಸೃಷ್ಟಿಸಿದ ನಂತರ ಅವನು ಕನ್ಸಾರಿ ದೇವಿಯ ಎದೆ ಹಾಲು ಕುಡಿಯುವಂತೆ ತಿಳಿಸಿದ. ಜೋಳವನ್ನು [ಕನ್ಸಾರಿ ದೇವತೆಯ ಸಂಕೇತ] ಭಿಲ್‌ ಜನಾಂಗವು ಜೀವದಾಯಿ ಆಹಾರವೆಂದು ಪರಿಗಣಿಸುತ್ತದೆ]” ಎಂದು ವೇಸ್ತಿ ದೇವಿ ಹೇಳುತ್ತಾರೆ. ಭಿಲಾಲಾ ಸಮುದಾಯದ (ರಾಜ್ಯದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ) 62 ವರ್ಷದ ರೈತ ಮಹಿಳೆ ನಾಲ್ಕು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾರೆ, ಅದರಲ್ಲಿ ಅರ್ಧ ಎಕರೆಯಲ್ಲಿ ತಮ್ಮ ಮನೆ ಬಳಕೆಗಾಗಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಾರೆ.

ಬಿಚ್ಚಿಬಾಯಿ ಕೂಡಾ ಕೆಲವು ಸಿರಿಧಾನ್ಯ ಬಳಸಿ ತಯಾರಿಸಲಾಗುವ ಬೇಯಿಸಿದ ತಿಂಡಿಗಳನ್ನು ನೆನಪಿಸಿಕೊಂಡರು. ದೇವಾಸ್ ಜಿಲ್ಲೆಯ ಪಾಂಡುತಲಾಬ್ ಗ್ರಾಮದ ನಿವಾಸಿಯಾದ ಅವರು, ರಾಗಿ ಅನ್ನದೊಂದಿಗೆ ಬೆರೆಸಿದ ಮಹ್ ಕುದ್ರಿ - ಚಿಕನ್ ಕರಿ ತನಗೆ ಅಚ್ಚುಮೆಚ್ಚು ಎನ್ನುತ್ತಾರೆ. ಅರವತ್ತರ ಪ್ರಾಯದ ಅವರು ಹಾಲು ಮತ್ತು ಬೆಲ್ಲ ಬೆರೆಸಿ ಮಾಡುತ್ತಿದ್ದ ಜೋಳದ ಪಾಯಸವನ್ನೂ ನೆನಪಿಸಿಕೊಂಡರು.

ಒರಳಿನಲ್ಲಿ ಧಾನ್ಯವನ್ನು ಕುಟ್ಟಿ ಪುಡಿ ಮಾಡುವ ವಿಧಾನವು ಮಹಿಳೆಯರನ್ನು ಒಂದೆಡೆ ಸೇರಿಸುವ ಸಮುದಾಯದ ವ್ಯವಹಾರವಾಗಿತ್ತು. “ನಾವು ಆ ಸಂದರ್ಭದಲ್ಲಿ ಜಾನಪದ ಗೀತೆಗಳನ್ನು ಹಾಡುತ್ತಿದ್ದೆವು. ಅದು ನಮ್ಮ ದಣಿವನ್ನು ಮರೆಸುತ್ತಿತ್ತು. ಆದರೆ ಈಗ ವಲಸೆ ಮತ್ತು ಸಣ್ಣ ಕುಟುಂಬಗಳ ಕಾರಣದಿಂದಾಗಿ ಮಹಿಳೆಯರಿಗೆ ಕೆಲಸವನ್ನು ಹಂಚಿಕೊಂಡು ಮಾಡುವ ಅವಕಾಶ ಸಿಗುವುದಿಲ್ಲ” ಎಂದು 63 ವರ್ಷದ ಅವರು ಹೇಳುತ್ತಾರೆ.

PHOTO • Rohit J.
PHOTO • Rohit J.

ಎಡಕ್ಕೆ: ಕನ್ಸಾರಿ ನು ಬಡಾವ್ನೋ ಸಂಘಟನೆಯ ಸದಸ್ಯರು ಪಾಂಡುತಲಾಬ್ ಗ್ರಾಮದಲ್ಲಿ ಪಾರಂಪರಿಕ ಬೀಜಗಳ ಸಂರಕ್ಷಣೆಯ ಕುರಿತು ಚರ್ಚಿಸುತ್ತಿರುವುದು ಬಲ: ಈ ಬೆಳೆಗಳೆಂದರೆ ಹಕ್ಕಿಗಳಿಗೂ ಅಚ್ಚುಮೆಚ್ಚು. ಹೀಗಾಗಿ ಬಿಚ್ಚಿ ಬಾಯಿ ಪಟೇಲ್‌ ಅವರಂತಹ ರೈತರು ಹಕ್ಕಿಗಳನ್ನು ಓಡಿಸುವ ಕೆಲಸ ಮಾಡಬೇಕಾಗುತ್ತದೆ

ಕಾರ್ಲಿಬಾಯಿ ಮತ್ತು ಬಿಚ್ಚಿಬಾಯಿ ಸಿರಿಧಾನ್ಯಗಳನ್ನು ಒರಳಿಗೆ ಹಾಕಿ ಕುಟ್ಟುತ್ತಾ ಹಾಡುತ್ತಿದ್ದಾರೆ; ಈ ಸಂಪ್ರದಾಯ ಬಹುಮಟ್ಟಿಗೆ ಈಗ ಇಲ್ಲವಾಗಿದೆ ಎಂದು ಅವರು ಹೇಳುತ್ತಾರೆ

ಕಾರ್ಲಿಬಾಯಿ ಭಾವಸಿಂಗ್‌ ತಾನು ಯುವತಿಯಿದ್ದ ಕಾಲದಲ್ಲಿ ಸಿರಿಧಾನ್ಯಗಳನ್ನು ಕೈಯಿಂದ ಕುಟ್ಟಿ ಪುಡಿ ಮಾಡುತ್ತಿದ್ದೆ ಎನ್ನುತ್ತಾರೆ. ಆದರೆ ಇದು ಬಹಳ ದು ಶ್ರಮದಾಯಕ ಪ್ರಕ್ರಿಯೆ ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಈ ದಿನಗಳಲ್ಲಿ ಯುವತಿಯರು ಜೋಳ, ಮೆಕ್ಕೆಜೋಳ ಮತ್ತು ಗೋಧಿಯನ್ನು ಗಿರಣಿಗೆ ಕೊಂಡು ಹೋಗಿ ಹಿಟ್ಟು ಮಾಡಿಸಿಕೊಂಡು ಬರುತ್ತಾರೆ. ಹೀಗಾಗಿಯೇ ಸಿರಿಧಾನ್ಯಗಳ ಬಳಕೆ ಕಡಿಮೆಯಾಗಿದೆ" ಎಂದು ಕಟ್ಕುಟ್ ಗ್ರಾಮದ ಈ 60 ವರ್ಷದ ಬರೇಲಾ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆ ಹೇಳುತ್ತಾರೆ.

ಬೀಜಗಳನ್ನು ಸಂಗ್ರಹಿಸಿಡುವುದು ಸಹ ಒಂದು ಸವಾಲು. "ಒಣಗಿದ ಬೆಳೆಗಳನ್ನು ಮುಹ್ತಿಗಳಲ್ಲಿ (ಬಿದಿರಿನ ಬುಟ್ಟಿಗಳಲ್ಲಿ) ಸಂಗ್ರಹಿಸುವ ಮೊದಲು ಅವುಗಳನ್ನು ಒಂದು ವಾರ ಬಿಸಿಲಿನಲ್ಲಿ ಒಣಗಿಸಬೇಕಾಗುತ್ತದೆ, ಮಣ್ಣು ಮತ್ತು ಜಾನುವಾರುಗಳ ಸಗಣಿ ಮಿಶ್ರಣ ಬಳಸಿ ಬೀಜಕ್ಕೆ ಗಾಳಿ ಸೋಕದಂತೆ ಮಾಡಲಾಗುತ್ತದೆ. ಆದರೂ, ಸುಮಾರು ನಾಲ್ಕು ತಿಂಗಳ ನಂತರ ಸಂಗ್ರಹಿಸಿದ ಬೆಳೆ ಕೀಟಗಳಿಂದ ದಾಳಿಗೊಳಗಾಗುತ್ತದೆ. ಹೀಗಾಗಿ ಆಗ ಅದನ್ನು ಮತ್ತೊಮ್ಮೆ ಬಿಸಿಲಿನಲ್ಲಿ ಒಣಗಿಸಬೇಕಾಗುತ್ತದೆ" ಎಂದು ರಾಯ್ತಿಬಾಯಿ ವಿವರಿಸುತ್ತಾರೆ.

ಇದೆಲ್ಲದರ ಜೊತೆಗೆ ಹಕ್ಕಿಗಳಿಗೂ ಈ ಏಕದಳ ಧಾನ್ಯಗಳೆಂದರೆ ಅಚ್ಚುಮೆಚ್ಚು. ಬಿತ್ತನೆಯ ನಂತರ ವಿವಿಧ ಕಿರುಧಾನ್ಯಗಳು ಬೇರೆ ಬೇರೆ ಸಮಯದಲ್ಲಿ ಮಾಗುತ್ತವೆ. ಈ ಸಮಯದಲ್ಲಿ ಮಹಿಳೆಯರು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಬಿಚ್ಚಿಬಾಯಿ ಹೇಳುವಂತೆ: “ಹಕ್ಕಿಗಳು ಪೂರ್ತಿ ಬೆಳೆಯನ್ನು ತಿನ್ನದಂತೆ, ನಮಗೂ ಸ್ವಲ್ಪ ಉಳಿಸುವಂತೆ ನಾವು ನೋಡಿಕೊಳ್ಳಬೇಕಾಗುತ್ತದೆ!”

PHOTO • Rohit J.

ಭಿಲ್ ಆದಿವಾಸಿ ರೈತರು ( ಎಡದಿಂದ ಬಲಕ್ಕೆ : ಗಿಲ್ಡೇರಿಯಾ ಸೋಲಂಕಿ , ರೈತಿಬಾಯಿ , ರಾಮ ಶಾಸ್ತ್ರಿಯಾ , ಮತ್ತು ರಿಂಕಿ ಅಲವಾ ) ಕಕ್ರಾನಾ ಗ್ರಾಮದಲ್ಲಿ ಜೋಳ ಮತ್ತು ಮುತ್ತು ಸಜ್ಜೆ ಯನ್ನು ಬಿತ್ತನೆ ಮಾಡುತ್ತಾರೆ

PHOTO • Rohit J.
PHOTO • Rohit J.

ಎಡಕ್ಕೆ: ಹೊಸದಾಗಿ ಕೊಯ್ಲು ಮಾಡಿದ ಗೊಂಗುರಾ - ತರಕಾರಿ , ಹೂವು ಮತ್ತು ಎಣ್ಣೆ ಮಾಡಿಸ ಲು ಬಳಸಬಹುದಾದ ಬಹುಮು ಖಿ ನಾರಿನ ಬೆಳೆ ಬಲ: ಕೊಯ್ಲು ಮಾಡುವ ಮೊದಲು ಒಂದು ವಿಧದ ಗೊಂಗುರಾ ಮತ್ತು ಅದರ ಬೀಜಗಳು

PHOTO • Rohit J.

ಬಾಜ್ರಾ ( ಸಜ್ಜೆ ) ಬೆಳೆಯನ್ನು ಜೋಳ , ರಾಲಾ ( ನವಣೆ ) ಮತ್ತು ಇತರ ರೀತಿಯ ಬೀನ್ಸ್ ಮತ್ತು ದ್ವಿದಳ ಧಾನ್ಯಗಳೊಂದಿಗೆ ಬೆಳೆಯಲಾಗುತ್ತದೆ

PHOTO • Rohit J.
PHOTO • Rohit J.

ಎಡಕ್ಕೆ: ಕಕ್ರಾನಾ ಗ್ರಾಮದ ಜಮೀನಿನಲ್ಲಿ ಸ್ಥಳೀಯ ತಳಿಯ ಜೋಳ ಬಲ: ನವಣೆ

PHOTO • Rohit J.

ರೈತ ಮಹಿಳೆ ಮತ್ತು ಕೆಎನ್‌ವಿ ಸಂಘಟನೆಯ ಹಿರಿಯ ಸದಸ್ಯೆ ವೇಸ್ತಿಬಾಯಿ ಪಡಿಯಾರ್‌ ಅವರು ತಾನು ಒಂದು ದಶಕದ ನಂತರ ಬೆಳೆದ ನವಣೆ ಬೆಳೆಯನ್ನು ತೋರಿಸುತ್ತಿದ್ದಾರೆ

PHOTO • Rohit J.
PHOTO • Rohit J.

ಎಡಕ್ಕೆ: ಒಂದು ಬಗೆಯ ಬೆಂಡೆ ಬಲ: ಸಾಸಿವೆ

PHOTO • Rohit J.

ರಾಯ್ತಿಬಾಯಿ (ಕ್ಯಾಮೆರಾಗೆ ಬೆನ್ನು ಹಾಕಿರುವವರು), ರಿಂಕು (ಮಧ್ಯ), ಮತ್ತು ಉಮಾ ಸೋಲಂಕಿ ಅವರು ಚಳಿಗಾಲದ ಬೆಳೆಗಳನ್ನು ಬಿತ್ತನೆ ಮಾಡುವ ಮೊದಲು ಜೋಳವನ್ನು ಕೊಯ್ಲು ಮಾಡುತ್ತಿದ್ದಾರೆ

PHOTO • Rohit J.
PHOTO • Rohit J.

ಎಡಕ್ಕೆ: ಕೊಯ್ಲಿನ ನಂತರ ಸಂಗ್ರಹಿಸಿಡಲಾದ ಚಪ್ಪರದ ಅವರೆ (ಇಂಡಿಯನ್ ಫ್ಲಾಟ್ ಬೀನ್ಸ್) ಬೀಜಗಳು  ಬಲ:  ಪಾಂಡುತಲಾಬ್ ಗ್ರಾಮದ ಹೊಲದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಪದಾರ್ಥಗಳನ್ನು ಬಳಸಿ ಈ ತಿನಿಸುಗಳನ್ನು ತಯಾರಿಸಲಾಗಿದೆ

PHOTO • Rohit J.
PHOTO • Rohit J.

ಎಡಕ್ಕೆ: ಅರಾಂಡಿ ( ಹರಳು) ಬಲ: ಒಣಗಿದ ಮಹುವಾ ( ಮಧುಕಾ ಇಂಡಿಕಾ ) ಹೂವು

PHOTO • Rohit J.
PHOTO • Rohit J.

ಎಡಕ್ಕೆ: ಬರೇಲಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಹೀರಾಬಾಯಿ ಭಾರ್ಗವ ಅವರು ಮುಂದಿನ ಋತುವಿಗಾಗಿ ತಾವೇ ಆರಿಸಿದ ಮೆಕ್ಕೆಜೋಳದ ಬೀಜಗಳನ್ನು ಸಂಗ್ರಹಿಸುತ್ತಿದ್ದಾರೆ ಬಲ: ಧಾನ್ಯಗಳನ್ನು ಸಂಸ್ಕರಿಸಲು ಬಳಸಲಾಗುತ್ತಿದ್ದ ಬೀಸುಕಲ್ಲು,ಜರಡಿ ಮತ್ತು ಮೊರ

PHOTO • Rohit J.
PHOTO • Rohit J.

ಎಡಕ್ಕೆ: ಪ್ರಸ್ತುತ ಕೊಯ್ಲಿನ ಬೀಜಗಳನ್ನು ಮರಗಳಿಗೆ ನೇತುಹಾಕಿದ ಚೀಲಗಳಲ್ಲಿ ಇಡ ಲಾಗುತ್ತದೆ , ಮುಂದಿನ ವರ್ಷ ಮತ್ತೆ ಬಳಸಲಾಗುತ್ತದೆ. ಬಲ: ಆರ್ಗ್ಯಾನಿಕ್ ಫಾರ್ಮಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಮಧ್ಯಪ್ರದೇಶ ವಿಭಾಗದ ಉಪಾಧ್ಯಕ್ಷರಾದ ಸುಭದ್ರಾ ಖಪರ್ಡೆ ಅವರು ಬಿಚ್ಚಿಬಾಯಿಯೊಂದಿಗೆ ಸೇರಿ ದೇಶದ ವಿವಿಧೆಡೆಗೆ ಕಳುಹಿಸಲಾಗುವ ಸಂರಕ್ಷಿಸಿ ಬೀಜಗಳನ್ನು ಆಯ್ಕೆ ಮಾಡುತ್ತಿದ್ದಾರೆ

PHOTO • Rohit J.
PHOTO • Rohit J.

ಎಡಕ್ಕೆ: ವೇಸ್ತಿ ಬಾಯಿ ಮತ್ತು ಅವರ ಸೊಸೆ ಜಾಸಿ ತಮ್ಮ ಮೆಕ್ಕೆಜೋಳದ ಹೊಲ ಕ್ಕೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ . ಸಾವಯವ ಕೃಷಿಯು ಸಮಯ ಮತ್ತು ಶ್ರಮವನ್ನು ಬೇಡು ತ್ತದೆ , ಹೀಗಾಗಿ ರೈತರು ಸಂಪೂರ್ಣವಾಗಿ ಕೃಷಿ ವಿಧಾನಕ್ಕೆ ಹೊರಳಲು ಸಾಧ್ಯವಾಗುತ್ತಿಲ್ಲ ಬಲ: ಅಲಿರಾಜ್ಪುರ ಜಿಲ್ಲೆಯ ಖೋಡಂಬಾ ಗ್ರಾಮ


ಅನುವಾದ: ಶಂಕರ. ಎನ್. ಕೆಂಚನೂರು

Rohit J.

روہت جے آزاد فوٹوگرافر ہیں اور ہندوستان کے الگ الگ علاقوں میں کام کرتے ہیں۔ وہ سال ۲۰۱۲ سے ۲۰۱۵ تک ایک قومی اخبار کے ساتھ بطور فوٹو سب ایڈیٹر کام کر چکے ہیں۔

کے ذریعہ دیگر اسٹوریز Rohit J.
Editor : Sarbajaya Bhattacharya

سربجیہ بھٹاچاریہ، پاری کی سینئر اسسٹنٹ ایڈیٹر ہیں۔ وہ ایک تجربہ کار بنگالی مترجم ہیں۔ وہ کولکاتا میں رہتی ہیں اور شہر کی تاریخ اور سیاحتی ادب میں دلچسپی رکھتی ہیں۔

کے ذریعہ دیگر اسٹوریز Sarbajaya Bhattacharya
Photo Editor : Binaifer Bharucha

بنائیفر بھروچا، ممبئی کی ایک فری لانس فوٹوگرافر ہیں، اور پیپلز آرکائیو آف رورل انڈیا میں بطور فوٹو ایڈیٹر کام کرتی ہیں۔

کے ذریعہ دیگر اسٹوریز بنیفر بھروچا
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru