"ಅಬ್ರಿ ಜೋ ಆಯೇಗಾ ನಾ ವೋಟ್ ಲೇನೆ, ತಾ ಕಹೆಂಗೆ ಕಿ ಪಹಲೆ ಪೆನ್ಷನ್ ದೋ [ವೋಟು ಕೇಳಲಿ ಅವರು ಈ ಸಲ, ಮೊದಲು ಪೆನ್ಷನ್ ಕೊಡಿ] ' ಎನ್ನುತ್ತೇವೆ " ಎಂದು ಲಿಟಾಟಿ ಮುರ್ಮು ಹೇಳುತ್ತಾರೆ.
ಜಾರ್ಖಂಡ್ ರಾಜ್ಯದ ದುಮ್ಕಾ ಜಿಲ್ಲೆಯ ಕುಸುಮ್ ದಿಹ್ ಗ್ರಾಮದ ಬುರುಟೋಲಾ ಎಂಬ ಕುಗ್ರಾಮದಲ್ಲಿ ತನ್ನ ಮಣ್ಣಿನ ಮನೆಯ ಹೊರಗಿನ ದತ್ತಿ (ಜಗಲಿ) ಮೇಲೆ ಕುಳಿತು ಅವರು ಪರಿಯೊಂದಿಗೆ ಮಾತನಾಡುತ್ತಿದ್ದರು.
“ಈ ಬಾರಿ ಮನೆ ಮತ್ತು ಪಿಂಚಣಿ ಕೊಡುವಂತೆ ಕೇಳುತ್ತೇವೆ” ಎಂದು ಅವರೊಂದಿಗಿದ್ದ ಅವರ ಪಕ್ಕದ ಮನೆಯ ಸ್ನೇಹಿತೆ ಶರ್ಮಿಳಾ ಹೆಂಬ್ರಮ್ ಹೇಳಿದರು.
“ಅವರು ಬರುವುದು ಈ ಸಮಯದಲ್ಲಿ ಮಾತ್ರ” ಎಂದು ರಾಜಕೀಯ ನಾಯಕರನ್ನು ಉಲ್ಲೇಖಿಸಿ ತಮಾಷೆಯಾಗಿ ಹೇಳುತ್ತಾರೆ. ಚುನಾವಣೆಗೆ ಮೊದಲು ಕಾಣಿಸಿಕೊಳ್ಳುವ ಅವರು ಹಳ್ಳಿಯ ಜನರಿಗೆ ಹಣ ಕೊಡುತ್ತಾರೆ. “ಅವರು [ರಾಜಕೀಯ ಪಕ್ಷಗಳು] 1,000 ರೂಪಾಯಿಗಳನ್ನು, 500 ರೂಪಾಯಿಗಳನ್ನು ಗಂಡಸರಿಗೆ ಮತ್ತು 500 ರೂಪಾಯಿಗಳನ್ನು ನಮಗೆ ನೀಡುತ್ತಾರೆ" ಎಂದು ಶರ್ಮಿಳಾ ಹೇಳುತ್ತಾರೆ.
ಇಬ್ಬರೂ ಮಹಿಳೆಯರೂ ಸರಕಾರಿ ಯೋಜನೆಗಳಿಂದ ವಂಚಿತರಾಗಿರುವುದರಿಂದಾಗಿ ಹಣವೆನ್ನುವುದು ಇಬ್ಬರೂ ಮಹಿಳೆಯರಿಗೆ ಬಹಳ ಮುಖ್ಯ. ಲಿಟಾಟಿ ಅವರ ಪತಿ 2022 ರಲ್ಲಿ ಇದ್ದಕ್ಕಿದ್ದಂತೆ ನಿಧನರಾದರು ಮತ್ತು ಶರ್ಮಿಳಾ ಅವರ ಪತಿ ಒಂದು ತಿಂಗಳ ಅನಾರೋಗ್ಯದ ನಂತರ 2023ರಲ್ಲಿ ನಿಧನರಾದರು. ಸಮಾನ ದುಃಖಿಗಳಾದ ಈ ಮಹಿಳೆಯರು ಕೆಲಸಕ್ಕೆ ಹೋಗುವಾಗ ಜೊತೆಯಾಗಿ ಹೋಗುತ್ತಾರೆ. ಅದೊಂದು ಬಾಂಧವ್ಯ ಅವರಲ್ಲಿ ಮೂಡಿದೆ.
ಗಂಡನನ್ನು ಕಳೆದುಕೊಂಡ ಲಿಟಾಟಿ ಮತ್ತು ಶರ್ಮಿಳಾ ಇಬ್ಬರೂ ವಿಧವಾ ಪಿಂಚಣಿ ಪಡೆಯಲು ಪ್ರಯತ್ನಿಸಿದರು. ಸರ್ವಜನ್ ಪಿಂಚಣಿ ಯೋಜನೆ ಅಡಿಯಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಗೆ ಮಾಸಿಕ 1,000 ರೂ. ದೊರೆಯುತ್ತದೆ. ಪ್ರಯತ್ನಗಳಿಂದ ನಿರಾಶರಾದ ಲಿಟಾಟಿ ಹೇಳುತ್ತಾರೆ, “ನಾವು ಅರ್ಜಿಗಳನ್ನು ತುಂಬಿಸಿ ಮುಖಿಯಾ [ಗ್ರಾಮದ ಮುಖ್ಯಸ್ಥರ] ಬಳಿಗೆ ಹೋದೆವು, ಆದರೆ ಏನೂ ಸಿಗಲಿಲ್ಲ."
ಪಿಂಚಣಿ ಮಾತ್ರವಲ್ಲ, ಪಿಎಂಎವೈ (ಪ್ರಧಾನ ಮಂತ್ರಿ ಆವಾಸ್ ಯೋಜನೆ) ಅಡಿಯಲ್ಲಿ ಸಿಗುವ ಮನೆಗಳು ಸಹ ಇಲ್ಲಿನ ದೊಡ್ಡ ಜನಸಂಖ್ಯೆಯಾದ (43 ಪ್ರತಿಶತ) ಸಂತಾಲ್, ಪಹಾಡಿಯಾ ಮತ್ತು ಮಹ್ಲಿ (ಜನಗಣತಿ 2011) ಬುಡಕಟ್ಟು ವಂಚಿತವಾಗಿವೆ. “ಸರ್ ನೀವು ಇಡೀ ಹಳ್ಳಿಯನ್ನು ಸುತ್ತಿ ನೋಡಿ. ಒಂದೇ ಒಂದು ಕಾಲೋನಿ [ ಪಿಎಂಎವೈ ಮನೆ] ಸಿಗುವುದಿಲ್ಲ” ಎಂದು ಶರ್ಮಿಳಾ ತಮ್ಮ ವಾದವನ್ನು ಸಮರ್ಥಿಸುತ್ತಾರೆ.
ಕುಸುಮ್ ದಿಹ್ ಗ್ರಾಮದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಹಿಜ್ಲಾ ಗ್ರಾಮದ ನಿರುನಿ ಮರಾಂಡಿ ಮತ್ತು ಅವರ ಪತಿ ರುಬಿಲಾ ಹನ್ಸದಾ ಅವರು ಕೋವಿಡ್ -19 ಲಾಕ್ಡೌನ್‌ಗೂ ಮೊದಲು ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆದರು, ಆದರೆ "ಆಗ 400 ರೂಪಾಯಿದ್ದ ಗ್ಯಾಸ್ ಸಿಲಿಂಡರ್ ಈಗ 1,200 ರೂ. ತಲುಪಿದೆ. ನಾವು ಹೇಗೆ ಖರೀದಿಸುವುದು?" ಎಂದು ನಿರುಣಿ ಮರಾಂಡಿ ಕೇಳುತ್ತಾರೆ.
ಇತರ ಸರ್ಕಾರಿ ಯೋಜನೆಗಳಾದ ನಲ್ ಜಲ್ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಯೋಜನೆ ಮತ್ತು ಮನರೇಗಾ ಮೂಲಕ ಸಿಗುವ ಖಚಿತ ಆದಾಯದ ಕೆಲಸ ಜಿಲ್ಲಾ ಕೇಂದ್ರವಾದ ದುಮ್ಕಾ ನಗರದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಅವರ ಗ್ರಾಮಕ್ಕೆ ತಲುಪಿಲ್ಲ. ಹಳ್ಳಿಯ ಅನೇಕ ಹ್ಯಾಂಡ್ ಪಂಪ್ ಗಳು ಒಣಗಿಹೋಗಿವೆ. ಹಿಜ್ಲಾದ ನಿವಾಸಿಯೊಬ್ಬರು ಈ ವರದಿಗಾರರಿಗೆ ತಮ್ಮ ಕುಟುಂಬವು ನೀರು ತರಲು ಒಂದು ಕಿಲೋಮೀಟರ್ ದೂರದಲ್ಲಿರುವ ನದಿಗೆ ನಡೆದುಕೊಂಡು ಹೋಗುತ್ತದೆ ಎಂದು ಹೇಳಿದರು.
ಉದ್ಯೋಗ ಮಾರುಕಟ್ಟೆಯಲ್ಲೂ ಬರದ ಛಾಯೆಯಿದೆ. “[ನರೇಂದ್ರ] ಮೋದಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಅವರು [ಪ್ರಧಾನ ಮಂತ್ರಿ] ಎಷ್ಟು ಜನ ಯುವಕರಿಗೆ ಕೆಲಸ ಕೊಟ್ಟಿದ್ದಾರೆ? ಬಹಳಷ್ಟು ಸರ್ಕಾರಿ ನೌಕರಿಗಳು ಖಾಲಿ ಉಳಿದಿವೆ” ಎನ್ನುತ್ತಾರೆ ರುಬಿಲಾ. ಇವರು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಾರೆ. ತೀವ್ರ ಬರದ ಕಾರಣದಿಂದಾಗಿ ಅವರ ಎರಡು ಎಕರೆ ಜಮೀನು ಮೂರು ವರ್ಷಗಳಿಂದ ಬಂಜರು ಬಿದ್ದಿದೆ. ಇದರಲ್ಲಿ ಅವರು ಈ ಹಿಂದೆ ಭತ್ತ, ಗೋಧಿ ಮತ್ತು ಜೋಳ ಬೆಳೆಯುತ್ತಿದ್ದರು. “ಮೊದಲು 15-20 ರೂಪಾಯಿಗೆ ಅಕ್ಕಿ ಸಿಗುತ್ತಿತ್ತು. ಈಗ 40 ರೂಪಾಯಿ ಕೊಟ್ಟು ಖರೀದಿಸುತ್ತಿದ್ದೇವೆ” ಎನ್ನುತ್ತಾರೆ ರುಬಿಯಾ.
ರುಬಿಲಾ ಹಲವು ವರ್ಷಗಳಿಂದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನ ಮತಗಟ್ಟೆ ಏಜೆಂಟ್ ಆಗಿದ್ದರು. ವಿದ್ಯುನ್ಮಾನ ಮತದಾನ ಯಂತ್ರಗಳು (ಇವಿಎಂ) ವಿಫಲವಾಗುವುದನ್ನು ಅವರು ಅನೇಕ ಬಾರಿ ನೋಡಿದ್ದಾರೆ. “ಕೆಲವೊಮ್ಮೆ ಮತ ಯಂತ್ರ ಕೆಟ್ಟು ಹೋಗುತ್ತದೆ. 10-11 ವೋಟುಗಳನ್ನು ಹಾಕುವ ತನಕ ಅದು ಸರಿಯಿರುತ್ತದೆ. ಆದರೆ 12ನೇ ವೋಟಿಗೆ ಅದು ಒಮ್ಮೊಮ್ಮೆ ತಪ್ಪು ಚಿಹ್ನೆಯನ್ನು ಮುದ್ರಿಸುತ್ತದೆ” ಎನ್ನುತ್ತಾರೆ ರುಬಿಲಾ. ಅವರು “ಹಿಂದಿನಂತೆಯೇ ಗುಂಡಿಯನ್ನು ಒತ್ತಿ ಕಾಗದ ಪಡೆದು, ದೃಢೀಕರಿಸಿ ಪೆಟ್ಟಿಗೆಯಲ್ಲಿ ಹಾಕುವ ಕ್ರಮವನ್ನು ಮತ್ತೆ ತರಬೇಕು” ಎನ್ನುತ್ತಾರೆ.
ಜಾಂರ್ಖಡ್ ರಾಜ್ಯದ ದುಮ್ಕಾ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಲೋಕಸಭಾ ಕ್ಷೇತ್ರ. ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ ಎಂಟು ಅವಧಿಗೆ ಇಲ್ಲಿಂದ ಆಯ್ಕೆಯಾಗಿದ್ದರು. ಅವರು 2019 ರಲ್ಲಿ ಬಿಜೆಪಿಯ (ಭಾರತೀಯ ಜನತಾ ಪಕ್ಷ) ಸುನಿಲ್ ಸೊರೆನ್ ವಿರುದ್ಧ ಸೋತರು. ಎರಡು ತಿಂಗಳ ಹಿಂದೆ ಜೆಎಂಎಂನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಶಿಬು ಸೊರೆನ್ ಅವರ ಹಿರಿಯ ಸೊಸೆ ಬಿಜೆಪಿಯ ಸೀತಾ ಸೊರೆನ್ ಅವರು ಜೆಎಂಎಂನ ನಳಿನ್ ಸೊರೆನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಜೆಎಂಎಂ ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ.
ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೆನ್ ಅವರನ್ನು ಬಂಧಿಸಿದ ನಂತರ ಈ ಪ್ರದೇಶದಲ್ಲಿ ಅಸಮಾಧಾನವೂ ಹೆಚ್ಚುತ್ತಿದೆ. ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿದೆ. ನಂತರ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
“ಈ ಬಾರಿ ನಮ್ಮ ಊರಿನಿಂದ ಒಂದೇ ಒಂದು ಮತವೂ ಬಿಜೆಪಿಗೆ ಹೋಗುವುದಿಲ್ಲ” ಎಂದು ರುಬಿಲಾ ಹೇಳುತ್ತಾರೆ. "ಆಜ್ ಅಪ್ಕಾ ಸರ್ಕಾರ್ ಹೈ ತೋ ಆಪ್ನೆ ಗಿರಾಫ್ತರ್ ಕರ್ ಲಿಯಾ. ಯೇ ಪಾಲಿಟಿಕ್ಸ್ ಹೈ ಔರ್ ಆದಿವಾಸಿ ಅಚ್ಚಾ ಸೆ ಸಮಾಜ್ತಾ ಹೈ [ನಿಮ್ಮ ಸರ್ಕಾರವಿದೆಯೆನ್ನುವ ಕಾರಣಕ್ಕೆ ಅವರನ್ನು ಬಂಧಿಸಿದ್ದೀರಿ. ಇದು ರಾಜಕೀಯವೆನ್ನುವುದನ್ನು ಆದಿವಾಸಿ ಸಮುದಾಯ ಅರ್ಥ ಮಾಡಿಕೊಂಡಿದೆ].”
*****
ಸುಮಾರು 30ರ ವರ್ಷಗಳ ಆಸುಪಾಸಿನಲ್ಲಿರುವ ಲಿಟಾಟಿ ಮತ್ತು ಶರ್ಮಿಳಾ ಬಳಿ ಯಾವುದೇ ಭೂಮಿಯಿಲ್ಲ. ಅವರು ಕೃಷಿ ಹಂಗಾಮಿನಲ್ಲಿ ಅಧಿಯಾ (ಗೇಣಿದಾರ ರೈತರು) ವಿಧಾನದಲ್ಲಿ ಕೃಷಿ ಮಾಡಿ, ಶೇಕಡಾ 50 ರಷ್ಟು ಉತ್ಪನ್ನವನ್ನು ಪಡೆಯುತ್ತಾರೆ. “ಏಕೊ ದಾನಾ ಖೇತಿ ನಹೀ ಹುವಾ ಹೈ [ಒಂದೇ ಒಂದು ಕಾಳು ಬೆಳೆದಿಲ್ಲ]” ಎಂದು ಶರ್ಮಿಳಾ ಹೇಳುತ್ತಾರೆ. ಅವರ ಬಳಿ ಐದು ಬಾತುಕೋಳಿಗಳಿದ್ದು ಅವುಗಳ ಮೊಟ್ಟೆಗಳನ್ನು ಮಾರುವ ಮೂಲಕ ಜೀವನ ನಿರ್ವಹಿಸುತ್ತಾರೆ. ಮೊಟ್ಟೆಗಳನ್ನು ಮಾರಲು ಊರಿನಿಂದ ಐದು ಕಿಲೋಮೀಟರ್ ದೂರದಲ್ಲಿರುವ ದಾಸೋರ್ ದಿಹ್ ಎನ್ನುವಲ್ಲಿನ ಹಾಟ್ [ವಾರದ ಸಂತೆ] ಗೆ ಹೋಗುತ್ತಾರೆ.
ವರ್ಷದ ಉಳಿದ ದಿನಗಳಲ್ಲಿ ಅವರು ಹೆಚ್ಚಾಗಿ ತಮ್ಮ ಹಳ್ಳಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ದುಮ್ಕಾ ಪಟ್ಟಣದ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿಗೆ ಹೋಗಿ ಬರಲು ಟೋಟೋ (ಎಲೆಕ್ಟ್ರಿಕ್ ರಿಕ್ಷಾ) ಪ್ರಯಾಣಕ್ಕೆ 20 ರೂಪಾಯಿ ಖರ್ಚಾಗುತ್ತದೆ. "ನಾವು ದಿನಕ್ಕೆ 350 ರೂಪಾಯಿಗಳನ್ನು ಸಂಪಾದಿಸುತ್ತೇವೆ" ಎಂದು ಶರ್ಮಿಳಾ ಈ ವರದಿಗಾರರಿಗೆ ತಿಳಿಸಿದರು. “ಈಗೀಗ ಎಲ್ಲವೂ ದುಬಾರಿಯಾಗಿದೆ. ಹೇಗೋ ಬದುಕು ನಡೆಸಬೇಕಿದೆ.”
ಲಿಟಾಟಿ ಕೂಡಾ ಈ ಮಾತನ್ನು ಒಪ್ಪುತ್ತಾರೆ, “ಕಡಿಮೆ ಸಂಪಾದಿಸುವ ನಾವು ತಿನ್ನುವುದೂ ಕಡಿಮೆ” ಎನ್ನುವ ಅವರು, “ಕೆಲಸವಿಲ್ಲದ ಸಮಯದಲ್ಲಿ ನಾವು ಮಾಧ್-ಭಾತ್ [ಅಕ್ಕಿಗಂಜಿ] ತಿನ್ನುತ್ತೇವೆ.” ಎಂದು ಹೇಳುತ್ತಾರೆ. ಯಾವುದೇ ಸಂದರ್ಭದಲ್ಲೂ ತಮ್ಮ ಟೋಲಾದಲ್ಲಿ ಕೆಲಸ ಸಿಗುವುದಿಲ್ಲ ಎಂದು ಈ ಮಹಿಳೆಯರು ಹೇಳುತ್ತಾರೆ.
ದುಮ್ಕಾ ಜಿಲ್ಲೆಯಲ್ಲಿ, ಹೆಚ್ಚಿನ ಬುಡಕಟ್ಟು ಜನಾಂಗದವರ ಜೀವನೋಪಾಯವು ಕೃಷಿ ಅಥವಾ ಸಂಬಂಧಿತ ಕೆಲಸ ಅಥವಾ ಸರ್ಕಾರಿ ಯೋಜನೆಗಳ ಮೇಲೆ ಅವಲಂಬಿತವಾಗಿದೆ. ಇಲ್ಲಿನ ಜನರಿಗೆ ಲಭ್ಯವಿರುವ ಏಕೈಕ ಸರ್ಕಾರಿ ಯೋಜನೆಯೆಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಿಗುವ ಐದು ಕಿಲೋ ಪಡಿತರ ಮಾತ್ರ.
ಇಲ್ಲಿನ ಮಹಿಳೆಯರ ಹೆಸರಿನಲ್ಲಿ ಲೇಬರ್ ಕಾರ್ಡ್ ಇಲ್ಲ. "ಕಳೆದ ವರ್ಷ, ಜನರು ಕಾರ್ಡ್ [ಲೇಬರ್ ಕಾರ್ಡ್] ತಯಾರಿಸಲು ಬಂದರು, ಆದರೆ ನಾವು ಮನೆಯಲ್ಲಿರಲಿಲ್ಲ; ಕೆಲಸಕ್ಕೆ ಹೋಗಿದ್ದೆವು. ಅದರ ನಂತರ ಮತ್ತೆ ಯಾರೂ ಬರಲಿಲ್ಲ" ಎಂದು ಶರ್ಮಿಳಾ ಹೇಳುತ್ತಾರೆ. ಕಾರ್ಡ್ ಇಲ್ಲದೆ, ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಕೆಲಸದ ಸ್ಥಳಗಳಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.
“ಸಿಕ್ಕ ಕೆಲಸವನ್ನು ಮಾಡುತ್ತೇವೆ. ಜ್ಯಾದಾ ಧೋನೆ ಕಾ ಕಾಮ್ ಮಿಲ್ತಾ ಹೈ, ಕಹಿ ಘರ್ ಬನ್ ರಹಾ ಹೈ, ತೋ ಈಟಾ ಧೋ ದಿಯೆ, ಬಾಲು ಧೋ ದಿಯೆ [ಹೆಚ್ಚಾಗಿ ವಸ್ತುಗಳನ್ನು ಸಾಗಿಸುವ ಕೆಲಸ ಸಿಗುತ್ತದೆ. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ನಾವು ಇಟ್ಟಿಗೆ ಮತ್ತು ಮರಳು ಹೊರುವ ಕೆಲಸ ಮಾಡುತ್ತೇವೆ].”
ಆದರೆ ಕೆಲಸ ಸಿಗುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ ಎನ್ನುತ್ತಾರೆ ಶರ್ಮಿಳಾ. “ಕೆಲವು ದಿನ ಕೆಲಸ ಸಿಗುತ್ತದೆ. ಕೆಲವು ದಿನ ಸಿಗುವುದಿಲ್ಲ. ಕೆಲವೊಮ್ಮೆ ವಾರದಲ್ಲಿ ಎರಡು ಮೂರು ದಿನ ಕೆಲಸ ಸಿಗುವುದಿಲ್ಲ.” ಅವರಿಗೆ ಕೊನೆಯದಾಗಿ ನಾಲ್ಕು ದಿನಗಳ ಹಿಂದೆ ಕೆಲಸ ದೊರಕಿತ್ತು. ಲಿಟಾಟಿಯವರಂತೆಯೇ ಶರ್ಮಿಳಾ ಕೂಡಾ ಮನೆಯ ಏಕೈಕ ದುಡಿಯುವ ಸದಸ್ಯರಾಗಿದ್ದು ತಮ್ಮ ಸಂಪಾದನೆಯಿಂದ ಅತ್ತೆ ಮಾವ ಮತ್ತು ಮೂವರು ಮಕ್ಕಳನ್ನು ನೋಡಿಕೊಳ್ಳಬೇಕಿದೆ.
50ಕ್ಕೂ ಹೆಚ್ಚು ಮನೆಗಳಿರುವ ಈ ಟೋಲಾದಲ್ಲಿ ಒಂದೇ ಒಂದು ಹ್ಯಾಂಡ್ ಪಂಪಿನಲ್ಲಿ ನೀರು ಬರುತ್ತದೆ. ಬೆಳಗ್ಗೆ ಬೇಗನೆ ಏಳುವ ಈ ಮಹಿಳೆಯರ ಕೆಲಸವು ನೀರು ತರುವುದರೊಂದಿಗೆ ಆರಂಭಗೊಳ್ಳುತ್ತದೆ. ನಂತರ ಅಡುಗೆ ಇತ್ಯಾದಿ ಮನೆಕೆಲಸಗಳನ್ನು ಮುಗಿಸುವ ಅವರು ತಮ್ಮ ಬುಟ್ಟಿ ಹಾಗೂ ಇತರ ಸಾಮಾಗ್ರಿಯೊಂದಿಗೆ ಕೆಲಸಕ್ಕೆ ಹೊರಡುತ್ತಾರೆ. ಜೊತೆಗೆ ಅವರು ನೆತ್ತೋ ಎಂದು ಕರೆಯುವ ಸಿಮೆಂಟ್ ಚೀಲದಿಂದ ತಯಾರಿಸಿದ ಮೆತ್ತನೆಯ ವಸ್ತುವನ್ನು ಸಹ ತೆಗೆದುಕೊಳ್ಳುತ್ತಾರೆ. ಇದನ್ನು ಅವರು ಭಾರ ಹೊರುವಾಗ ತಲೆಯ ಅಡಿಗೆ ಇಟ್ಟುಕೊಳ್ಳುತ್ತಾರೆ.
ಈ ಮಹಿಳೆಯರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರ ಮಕ್ಕಳನ್ನು ಮಕ್ಕಳ ಅಜ್ಜ, ಅಜ್ಜಿ ನೋಡಿಕೊಳ್ಳುತ್ತಾರೆ.
“ಕೆಲಸ ಸಿಕ್ಕಿಲ್ಲವೆಂದರೆ ಮನೆಯಲ್ಲಿ ತಿನ್ನಲು ಏನೂ ಇರುವುದಿಲ್ಲ. ಕೆಲಸ ಸಿಕ್ಕ ದಿನ ಒಂದಷ್ಟು ತರಕಾರಿ ಖರೀದಿಸಿ ತರುತ್ತೇವೆ. ಮೇ ತಿಂಗಳ ಮೊದಲ ವಾರದಲ್ಲಿ ಅವರು ತರಕಾರಿ ತರಲೆಂದು ಮಾರುಕಟ್ಟೆಗೆ ಹೋದಾಗ ಆಲೂಗಡ್ಡೆಯ ಬೆಲೆ 30 ರೂಪಾಯಿ ಇತ್ತು. “ಧಾಮ್ ದೇಖ್ ಕರ್ ಮಾಥಾ ಖರಾಬ್ ಹೋ ಗಯಾ [ಬೆಲೆ ನೋಡಿ ತಲೆ ಕೆಟ್ಟು ಹೋಯಿತು” ಎಂದು ಶರ್ಮಿಳಾರತ್ತ ನೋಡುತ್ತಾ ಹೇಳುತ್ತಾರೆ.
“ಝಾಡು-ಪೌಚಾ [ಕಸ ಗುಡಿಸುವುದು ಮತ್ತು ನೆಲ ಒರೆಸುವುದು] ರೀತಿಯ ಕೆಲಸವನ್ನಾದರೂ ಕೊಡಿ” ಎಂದು ಲಿಟಾಟಿ ಈ ವರದಿಗಾರನ ಬಳಿ ಕೇಳಿದರು. “ಅದೊಂದು ಸಿಕ್ಕರೆ ನಾವು ದಿನಾಲೂ ಕೆಲಸ ಹುಡುಕಿಕೊಂಡು ಅಲೆಯಬೇಕಿಲ್ಲ. ಒಂದೇ ಸ್ಥಳದಲ್ಲಿ ಕೆಲಸ ಸಿಕ್ಕಂತಾಗುತ್ತದೆ.” ಹಳ್ಳಿಯ ಹೆಚ್ಚಿನ ಜನರು ಇದೇ ಪರಿಸ್ಥಿತಿಯಲ್ಲಿದ್ದಾರೆ, ಕೆಲವೇ ಜನರಿಗೆ ಮಾತ್ರ ಸರ್ಕಾರಿ ಉದ್ಯೋಗಗಳಿವೆ ಎಂದು ಅವರು ಹೇಳುತ್ತಾರೆ.
ಈ ಮಾತನ್ನು ಒಪ್ಪಿಕೊಳ್ಳುವ ಶರ್ಮಿಳಾ “ನೇತಾ ಲೋಗ್ ವೋಟ್ ಕೆಲಿಯೇ ಆತಾ ಹೈ ಔರ್ ಚಲಾ ಜಾತಾ ಹೈ, ಹಮ್ ಲೋಗ್ ವೈಸೇಹೀ ಜಸ್ ಕಾ ತಾಸ್ [ವೋಟು ಕೇಳಿಕೊಂಡು ಬರುವ ರಾಜಕಾರಣಿಗಳು ಮತ್ತೆ ಇತ್ತ ತಲೆ ಹಾಕುವುದಿಲ್ಲ. ನಮ್ಮ ಪರಿಸ್ಥಿತಿ ಹೇಗಿತ್ತೋ ಹಾಗೇ ಇರುತ್ತದೆ}…” ಎನ್ನುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು