ಅಬ್ದುಲ್ ಕುಮಾರ್ ಮಾಗ್ರೆ ಕೊನೆಯ ಬಾರಿಗೆ ಪಟ್ಟು ನೇಯ್ಗೆ ಮಾಡಿ 30 ವರ್ಷಗಳಾಗಿವೆ. ಚಳಿಗಾಲದಲ್ಲಿ ಕಾಶ್ಮೀರದ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ ಅದನ್ನು ತಡೆದುಕೊಳ್ಳಲು ಬೇಕಾದ ಈ ಉಣ್ಣೆಯ ಬಟ್ಟೆಯನ್ನು ನೇಯುವ ಕೊನೆಯ ನೇಕಾರರಲ್ಲಿ ಇವರೂ ಒಬ್ಬರು.

"ನಾನು ಒಂದೇ ದಿನದಲ್ಲಿ 11 ಮೀಟರ್ ನೇಯ್ಗೆ ಮಾಡುತ್ತಿದ್ದೆ" ಎಂದು ತನ್ನ ದೃಷ್ಟಿಯನ್ನು ಕಳೆದುಕೊಂಡಿರುವ 82 ವರ್ಷ ವಯಸ್ಸಿನ ಅಬ್ದುಲ್‌ ಕುಮಾರ್‌ ನೆನಪಿಸಿಕೊಳ್ಳುತ್ತಾರೆ. ಗೋಡೆಗೆ ಕೈ ಕೊಟ್ಟು ಕೋಣೆಯ ಉದ್ದಕ್ಕೂ ಜಾಗೃತೆಯಿಂದ ದಾರಿ ಮಾಡಿಕೊಂಡು ನಡೆಯುತ್ತಾ "ನಾನು ಸುಮಾರು 50 ವರ್ಷದವನಿದ್ದಾಗ ಹೆಚ್ಚು ನೇಯ್ಗೆ ಮಾಡಿದ ಕಾರಣ ನನ್ನ ದೃಷ್ಟಿ ದುರ್ಬಲವಾಯ್ತು," ಎಂದು ಹೇಳಿದರು.

2011 ರ ಜನಗಣತಿಯ ಪ್ರಕಾರ 4,253 ಜನಸಂಖ್ಯೆಯನ್ನು ಹೊಂದಿರುವ  ಬಂದಿಪೋರ್ ಜಿಲ್ಲೆಯ ಹಳ್ಳಿಯಾದ ದಾವರ್‌ನಲ್ಲಿರುವ ಹಬ್ಬಾ ಖಾತೂನ್ ಶಿಖರ ಕಾಣುವಲ್ಲಿ ಅಬ್ದುಲ್ ವಾಸಿಸುತ್ತಾರೆ. ಈಗ ಕ್ರಿಯಾಶೀಲನಾದ ಒಬ್ಬನೇ ಒಬ್ಬ ಪಟ್ಟು ಕುಶಲಕರ್ಮಿ ಇಲ್ಲ ಎಂದು ಅವರು ನಮಗೆ ಹೇಳುತ್ತಾರೆ. ಆದರೆ, "ಸುಮಾರು ಒಂದು ದಶಕದ ಹಿಂದೆ, ಚಳಿಗಾಲದ ಸಮಯದಲ್ಲಿ, ಹಳ್ಳಿಯ ಪ್ರತಿ ಮನೆಯವರು ವಸಂತಕಾಲದಲ್ಲಿ ಮತ್ತು ಬೇಸಿಗೆಯಲ್ಲಿ ಮಾರಾಟ ಮಾರಲು ಉಡುಪುಗಳನ್ನು ನೇಯ್ಗೆ ಮಾಡುತ್ತಿದ್ದರು," ಎಂದು ನೆನಪಿಸಿಕೊಂಡರು.

ಅಬ್ದುಲ್ ಮತ್ತು ಅವರ ಕುಟುಂಬವು ಶ್ರೀನಗರ ಮತ್ತು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಲು ಫೆರಾನ್ (ಸಾಂಪ್ರದಾಯಿಕ ಗೌನ್ ಮಾದರಿಯ ಮೇಲುಡುಪು), ದುಪತಿ (ಕಂಬಳಿ), ಸಾಕ್ಸ್ ಮತ್ತು ಕೈಗವಸುಗಳು ಸೇರಿಂದಂತೆ ಕೆಲವು ಉಡುಪುಗಳನ್ನು ತಯಾರು ಮಾಡುತ್ತಾರೆ.

ಆದರೆ ಅಬ್ದುಲ್‌ ಅವರಿಗೆ ತನ್ನ ಕೌಶಲ್ಯದ ಮೇಲೆ ಎಷ್ಟೇ ಪ್ರೀತಿ ಇದ್ದರೂ ಕಚ್ಚಾ ವಸ್ತು - ಉಣ್ಣೆ ಸುಲಭವಾಗಿ ಸಿಗದ ಕಾರಣ ತನ್ನ ಕರಕುಶಲತೆಯನ್ನು ಉಳಿಸಿಕೊಳ್ಳುವುದು ಅವರಿಗೆ ಅಷ್ಟು ಸುಲಭವಲ್ಲ. ಹಿಂದೆ ಅಬ್ದುಲ್ ರಂತಹ ನೇಕಾರರು ಕುರಿಗಳನ್ನು ಸಾಕಿ ಅವುಗಳಿಂದ ಪಟ್ಟು ನೇಯಲು ಬೇಕಾದ ಉಣ್ಣೆಯನ್ನು ಸಂಗ್ರಹಿಸುತ್ತಿದ್ದರು. ಸುಮಾರು 20 ವರ್ಷಗಳ ಹಿಂದೆ ಅವರ ಕುಟುಂಬ ಸುಮಾರು 40 - 45 ಕುರಿಗಳನ್ನು ಹೊಂದಿತ್ತು. ಆಗ ಉಣ್ಣೆ ಸುಲಭವಾಗಿ ಸಿಗುತ್ತಿತ್ತು ಮತ್ತು ಅಗ್ಗವಾಗಿತ್ತು ಎಂದು ಅವರು ಹೇಳುತ್ತಾರೆ. "ನಾವು ಒಳ್ಳೆಯ ಲಾಭವನ್ನು ಪಡೆಯುತ್ತಿದ್ದೆವು," ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಈಗ ಈ ಕುಟುಂಬವು ಕೇವಲ ಆರು ಕುರಿಗಳನ್ನು ಸಾಕುತ್ತಿದೆ.

Left: Abdul Kumar Magray at his home in Dawar
PHOTO • Ufaq Fatima
Right: Dawar village is situated within view of the Habba Khatoon peak in the Gurez valley
PHOTO • Ufaq Fatima

ಎಡ: ಅಬ್ದುಲ್ ಕುಮಾರ್ ಮಗ್ರೆ ದಾವರ್‌ನಲ್ಲಿನ ತಮ್ಮ ಮನೆಯಲ್ಲಿ ಬಲ: ದಾವರ್ ಗ್ರಾಮವು ಗುರೆಜ್ ಕಣಿವೆಯಲ್ಲಿರುವ ಹಬ್ಬಾ ಖಾತೂನ್ ಶಿಖರದ ನೋಟ ಕಾಣುವ ಹಾಗೆ ನೆಲೆಗೊಂಡಿದೆ

Left: Sibling duo Ghulam and Abdul Qadir Lone are among the very few active weavers in Achura Chowrwan village.
PHOTO • Ufaq Fatima
Right: Habibullah Sheikh, pattu artisan from Dangi Thal, at home with his grandsons
PHOTO • Ufaq Fatima

ಎಡ: ಅಚುರಾ ಚೌರ್ವಾನ್ ಗ್ರಾಮದ ಕೆಲವೇ ಕೆಲವು ಕ್ರಿಯಾಶೀಲ ನೇಕಾರರಲ್ಲಿ ಗುಲಾಮ್ ಮತ್ತು ಅಬ್ದುಲ್ ಖಾದಿರ್ ಲೋನ್ ಸಹೋದರರೂ ಇಬ್ಬರು. ಬಲ: ಮೊಮ್ಮಕ್ಕಳೊಂದಿಗೆ ಮನೆಯಲ್ಲಿರುವ ಡಾಂಗಿ ಥಾಲ್‌ನ ಪಟ್ಟು ಕುಶಲಕರ್ಮಿ ಹಬೀಬುಲ್ಲಾ ಶೇಖ್

ಬಂದಿಪೋರ್ ಜಿಲ್ಲೆಯ ತುಲೈಲ್ ಕಣಿವೆಯ ಡಾಂಗಿ ಥಾಲ್ ಗ್ರಾಮದ ಹಬೀಬುಲ್ಲಾ ಶೇಖ್ ಮತ್ತು ಅವರ ಕುಟುಂಬ ಸುಮಾರು ಒಂದು ದಶಕದ ಹಿಂದೆ ಪಟ್ಟು ವ್ಯಾಪಾರವನ್ನು ನಿಲ್ಲಿಸಿದರು. ಅವರು ಹೇಳುವಂತೆ, “ಮೊದಲು ಕುರಿಗಳನ್ನು ಸಾಕುವ ಸಂಸ್ಕೃತಿ ನಮ್ಮಲ್ಲಿತ್ತು. ಪ್ರತಿ ಮನೆಯಲ್ಲೂ ಕನಿಷ್ಠ 15-20 ಕುರಿಗಳು ಇರುತ್ತಿದ್ದವು, ಅವು ಕುಟುಂಬದೊಂದಿಗೆ ನೆಲ ಮಹಡಿಯಲ್ಲಿಯೇ ವಾಸಿಸುತ್ತಿದ್ದವು.”

ಆದರೆ ಈಗ ಎಲ್ಲವೂ ಬದಲಾಗಿದೆ. ಬಂದಿಪೋರ್ ಜಿಲ್ಲೆಯ ಅಚುರಾ ಚೌರ್ವಾನ್ (ಶಾಹ್ ಪೋರಾ ಎಂದೂ ಕರೆಯುತ್ತಾರೆ) ಗ್ರಾಮದ ಕೆಲವೇ ಕೆಲವು ಕ್ರಿಯಾಶೀಲ ನೇಕಾರರಲ್ಲಿ ಒಬ್ಬರಾದ 70 ವರ್ಷದ ಗುಲಾಮ್ ಖಾದಿರ್ ಲೋನ್ "ಕಳೆದ ಒಂದು ದಶಕದಿಂದ ಗುರೆಜ್‌ನ ಹವಾಮಾನವು ಬದಲಾಗಿದೆ. ಚಳಿಗಾಲ ತುಂಬಾ ಕಷ್ಟಕರವಾಗಿದೆ. ಇದು ಕುರಿಗಳ ಮೇವಾದ ಹುಲ್ಲು ಬೆಳೆಯುವುದರ ಮೇಲೆ ಪರಿಣಾಮ ಬೀರಿದೆ. ಜನರು ದೊಡ್ಡ ಕುರಿಗಳ ಹಿಂಡುಗಳನ್ನು ಸಾಕುವುದನ್ನು ನಿಲ್ಲಿಸಿದ್ದಾರೆ,” ಎಂದು ಸಮಸ್ಯೆಯ ಕಡೆಗೆ ಗಮನಸೆಳೆಯುತ್ತಾರೆ.

*****

ಅಬ್ದುಲ್ ಕುಮಾರ್ ಅವರು ಮೊದಲ ಬಾರಿಗೆ ಪಟ್ಟು ನೇಯಲು ಆರಂಭಿಸಿದಾಗ ಅವರಿಗೆ ಸುಮಾರು 25 ವರ್ಷ. "ನಾನು ನನ್ನ ತಂದೆಗೆ ಸಹಾಯ ಮಾಡುತ್ತಿದ್ದೆ ಮತ್ತು ಮುಂದೆ ಆ ಕೌಶಲ್ಯವನ್ನು ನಾನೇ ಕಲಿತುಕೊಂಡೆ" ಎಂದು ಅವರು ಹೇಳುತ್ತಾರೆ. ಈ ಕಲೆಯನ್ನು ಅವರ ಕುಟುಂಬದಲ್ಲಿ ಅನೇಕ ತಲೆಮಾರುಗಳಿಂದ ಮಾಡುತ್ತಾ ಬಂದಿದೆ. ಆದರೆ ಅಬ್ದುಲ್‌ ಕುಮಾರ್‌ ಅವರ ಮೂವರು ಗಂಡು ಮಕ್ಕಳಲ್ಲಿ ಯಾರೂ ಈ ವೃತ್ತಿಯನ್ನು ಕೈಗೆತ್ತಿಕೊಂಡಿಲ್ಲ. "ಪಟ್ಟು ಮೇ ಆಜ್ ಭಿ ಉತ್ನಿ ಹೀ ಮೆಹನತ್ ಹೈ ಜಿತ್ನಿ ಪೆಹ್ಲೆ ಥೀ, ಮಗರ್ ಅಬ್ ಮುನಾಫ ನ ಹೋನೆ ಕೆ ಬರಾಬರ್ ಹೈ [ಪಟ್ಟು ನೆಯ್ಯಲು ಮೊದಲಿನಷ್ಟೇ ಶ್ರಮ ಪಡಬೇಕು, ಆದರೆ ಏನೂ ಲಾಭ ಇಲ್ಲ]" ಎಂದು ಅವರು ವಿವರಿಸುತ್ತಾರೆ.

ಅಬ್ದುಲ್ ಮೊದಮೊದಲು ನೇಯ್ಗೆ ಆರಂಭಿಸುವಾಗ ಒಂದು ಮೀಟರ್ ಪಟ್ಟು ಬಟ್ಟೆಗೆ 100 ರುಪಾಯಿ ಇತ್ತು. ಕಾಲಕಳೆದಂತೆ ದರವೂ ಹೆಚ್ಚಾಗಿದೆ. ಈಗ ಒಂದು ಮೀಟರ್ ಗೆ ಸುಮಾರು 7,000 ರುಪಾಯಿ ಇದೆ. ಆದರೆ ಸಿದ್ಧಪಡಿಸಿದ ಉತ್ಪನ್ನದ ಬೆಲೆ ಹೆಚ್ಚಿದ್ದರೂ ನೇಕಾರರಿಗೆ ಸಿಗುವ ಲಾಭವು ಗುಲಗಂಜಿಯಷ್ಟು. ಏಕೆಂದರೆ ಕುರಿ ಸಾಕಣೆಯ ವರ್ಷದ ವೆಚ್ಚ ವಾರ್ಷಿಕ ಪಟ್ಟು ಮಾರಾಟಕ್ಕಿಂತ ಸತತವಾಗಿ ಹೆಚ್ಚುತ್ತಲೇ ಇದೆ.

“ಪಟ್ಟು ನೇಯ್ಗೆ ಮಾಡುವುದು ಒಂದು ಕಲೆ. ಒಂದೇ ಒಂದು ದಾರ ತಪ್ಪಾಗಿ ನೇಯ್ಗೆಯಾದರೆ ಇಡೀ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ.  ಮತ್ತೆ ಹೊಸದಾಗಿಯೇ ಶುರು ಮಾಡಬೇಕು,” ಎಂದು ಅಬ್ದುಲ್ ಹೇಳುತ್ತಾರೆ. "ಆದರೆ ಕಠಿಣ ಪರಿಶ್ರಮ ಪಡುವುದು ತುಂಬಾ ಅಗತ್ಯ, ಏಕೆಂದರೆ ಗುರೆಜ್‌ನಂತಹ ಶೀತ ಪ್ರದೇಶದಲ್ಲಿ ಈ ಬಟ್ಟೆ ಕೊಡುವ ಬೆಚ್ಚಗಿನ ಅನುಭವಕ್ಕೆ ಹೋಲಿಕೆಗಳೇ ಇಲ್ಲ,” ಎನ್ನುತ್ತಾರೆ.

A wooden spindle (chakku) and a hand-operated loom (waan) are two essential instruments for pattu artisans
PHOTO • Ufaq Fatima
A wooden spindle (chakku) and a hand-operated loom (waan) are two essential instruments for pattu artisans
PHOTO • Courtesy: Ufaq Fatima

ಮರದ ಸ್ಪಿಂಡಲ್ (ಚಕ್ಕು) ಮತ್ತು ಕೈಯಿಂದ ನಡೆಸುವ ಮಗ್ಗ (ವಾನ್) ಪಟ್ಟು ಕುಶಲಕರ್ಮಿಗಳಿಗೆ ಬೇಕಾದ ಎರಡು ಅಗತ್ಯ ಸಾಧನಗಳು

The villages of Achura Chowrwan (left) and Baduab (right) in Kashmir’s Gurez valley. Clothes made from the woolen pattu fabric are known to stand the harsh winters experienced here
PHOTO • Ufaq Fatima
The villages of Achura Chowrwan (left) and Baduab (right) in Kashmir’s Gurez valley. Clothes made from the woolen pattu fabric are known to stand the harsh winters experienced here
PHOTO • Ufaq Fatima

ಕಾಶ್ಮೀರದ ಗುರೆಜ್ ಕಣಿವೆಯಲ್ಲಿರುವ ಅಚುರಾ ಚೌರ್ವಾನ್ (ಎಡ) ಮತ್ತು ಬದುವಾಬ್ (ಬಲ) ಗ್ರಾಮಗಳು. ಇಲ್ಲಿನ ಕಠಿಣವಾದ ಚಳಿಯನ್ನು ತಡೆದುಕೊಳ್ಳಲು ಉಣ್ಣೆಯ ಪಟ್ಟು ಬಟ್ಟೆಯಿಂದ ತಯಾರಿಸಿದ ಬಟ್ಟೆಗಳು ಬೇಕೇ ಬೇಕು

ಕುಶಲಕರ್ಮಿಗಳು ಉಣ್ಣೆಯನ್ನು ನೂಲಾಗಿ ಪರಿವರ್ತಿಸಲು ಚಕ್ಕು ಎಂಬ ಮನುಷ್ಯನ ಕೈಯಷ್ಟಿರುವ ಮರದ ಸ್ಪಿಂಡಲನ್ನು  ಬಳಸುತ್ತಾರೆ. ಚಕ್ಕು ಡೋವೆಲ್ ಆಕಾರದಲ್ಲಿದ್ದು, ಅದರ  ಎರಡೂ ತುದಿಗಳು ಚೂಪಾಗಿವೆ. ಹೀಗೆ ಸುತ್ತಿದ ನೂಲನ್ನು ಸ್ಥಳೀಯರು ವಾನ್‌ ಎಂದು ಕರೆಯುವ ಮಗ್ಗದ ಮೇಲೆ ಬಟ್ಟೆಯಲ್ಲಿ ನೇಯಲಾಗುತ್ತದೆ.

ಪಟ್ಟು ಬಟ್ಟೆಯನ್ನು ತಯಾರಿಸುವುದು ಒಬ್ಬನದೇ ಕೆಲಸವಲ್ಲ. ಇಡೀ ಕುಟುಂಬವೇ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಪುರುಷರು ಕುರಿಗಳಿಂದ ಉಣ್ಣೆಯನ್ನು ತೆಗೆಯುವ ಕೆಲಸ ಮಾಡುತ್ತಾರೆ.  ಮಹಿಳೆಯರು ಉಣ್ಣೆಯನ್ನು ನೂಲಿನ್ನಾಗಿ ಮಾಡುತ್ತಾರೆ. "ಮನೆಕೆಲಸಗಳನ್ನು ನಿರ್ವಹಿಸುವುದರ ಜೊತೆಜೊತೆಗೆ ಅವರು ಕಠಿಣವಾದ ಈ ಕೆಲಸವನ್ನೂ ಮಾಡುತ್ತಾರೆ" ಎಂದು ಅನ್ವರ್ ಲೋನ್ ಹೇಳುತ್ತಾರೆ. ಮಗ್ಗ ಅಥವಾ ವಾನ್ ಚಲಾಯಿಸುವುದು ಸಾಮಾನ್ಯವಾಗಿ ಕುಟುಂಬದ ಪುರುಷರು ಮಾಡುವ ಕೆಲಸವಾಗಿತ್ತು.

85 ವರ್ಷದ ಝೂನಿ ಬೇಗಂ ದರ್ದ್-ಶಿನ್ ಸಮುದಾಯಕ್ಕೆ ಸೇರಿದವರು. ಈ ಕಣಿವೆಯಲ್ಲಿ ಪಟ್ಟು ನೇಯ್ಗೆ ಮಾಡುವ ಕೆಲವೇ ಕೆಲವು ಮಹಿಳೆಯರಲ್ಲಿ ಇವರೂ ಒಬ್ಬರು. "ನನಗೆ ತಿಳಿದಿರುವ ಏಕೈಕ ಕೌಶಲ್ಯ  ಎಂದರೆ ಇದು ಮಾತ್ರ," ಎಂದು ಅವರು ಸ್ಥಳೀಯ ಶಿನಾ ಭಾಷೆಯಲ್ಲಿ ಹೇಳಿದರು. ಅವರ ಮಗ 36 ವರ್ಷದ ರೈತ ಇಸ್ತಿಯಾಕ್ ಲೋನ್ ನಮಗೆ ಅವರ ತಾಯಿಯ ಮಾತುಗಳನ್ನು ಅನುವಾದಿಸಿದರು.

"ಪಟ್ಟು ವ್ಯಾಪಾರವು ಈಗ ನಿಂತುಹೋಗಿದೆ ಆದರೆ ನಾನು ಇನ್ನೂ ತಿಂಗಳಿಗೊಮ್ಮೆ ಖೋಯೀಹ್ [ತಲೆಗೆ ತೊಡುವ ಮಹಿಳೆಯರ ಟೊಪ್ಪಿ] ನಂತಹ ಕೆಲವು ವಸ್ತುಗಳನ್ನು ತಯಾರಿಸುತ್ತೇನೆ," ಎನ್ನುತ್ತಾರೆ ಝೂನಿ.  ತನ್ನ ಮೊಮ್ಮಗನನ್ನು ತನ್ನ ಮಡಿಲಲ್ಲಿಟ್ಟುಕೊಂಡು ಇವರು ಶಿನಾ ಭಾಷೆಯಲ್ಲಿ ಪಾಶ್ ಎಂದು ಕರೆಯುವ ಕುರಿ ಉಣ್ಣೆಯನ್ನು ಚಕ್ಕು ಬಳಸಿ ನೂಲು ಮಾಡುವುದು ಹೇಗೆ ಎಂದು ತೋರಿಸಿದರು. “ನಾನು ಈ ಕಲೆಯನ್ನು ನನ್ನ ತಾಯಿಯಿಂದ ಕಲಿತಿದ್ದೇನೆ. ಇದನ್ನು ಮಾಡುವುದು ನನಗೆ ತುಂಬಾ ಇಷ್ಟ. ನನ್ನ ಕೈಗಳಲ್ಲಿ ಸಾಧ್ಯವಾಗುವವರೆಗೆ ನಾನು ಅದನ್ನು ಮುಂದುವರಿಸುತ್ತೇನೆ, ”ಎಂದು ಅವರು ಹೇಳುತ್ತಾರೆ.

ಗುರೆಜ್ ಕಣಿವೆಯಲ್ಲಿನ ಪಟ್ಟು ನೇಕಾರರು ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಶಿಷ್ಟ ಪಂಗಡ ಎಂದು ಪರಿಗಣಿಸಲಾಗಿರುವ ದರ್ದ್-ಶಿನ್ (ದರ್ದ್ ಎಂದೂ ಕರೆಯುತ್ತಾರೆ) ಸಮುದಾಯಕ್ಕೆ ಸೇರಿದವರು. ಕಣಿವೆಗೆ ಬಹುತೇಕ ಸಮಾನಾಂತರವಾಗಿ ಸಾಗುವ ನಿಯಂತ್ರಣ ರೇಖೆಯ ಉದ್ದಕ್ಕೂ ವಿಭಜಿಸಲ್ಪಟ್ಟಿರುವ ಈ ಸಮುದಾಯ ಸಂಪ್ರದಾಯಿಕ ಪಟ್ಟು ತಯಾರಿಕೆಯನ್ನು ಮಾಡುತ್ತವೆ.  ರಾಜ್ಯ ಸರ್ಕಾರದ ಬೆಂಬಲ ಇಲ್ಲದೆ ಮತ್ತು ವಲಸೆಯ ಕಡಿಮೆಯಾಗಿರುವುದರಿಂದ ಇದರ ಬೇಡಿಕೆ ಕುಸಿದು ಅವನತಿಯತ್ತ ಸಾಗುತ್ತಿದೆ.

Left: Zooni Begum with her grandson at her home in Baduab.
PHOTO • Ufaq Fatima
Right. She shows us a khoyeeh, a traditional headgear for women, made by her
PHOTO • Ufaq Fatima

ಎಡ: ಝೂನಿ ಬೇಗಂ ತನ್ನ ಮೊಮ್ಮಗನೊಂದಿಗೆ ಬದುವಾಬ್‌ನಲ್ಲಿರುವ ತನ್ನ ಮನೆಯಲ್ಲಿ. ಬಲ: ಖೋಯೀಹ್, ಮಹಿಳೆಯರು ತಲೆಗೆ ಧರಿಸುವ ಸಾಂಪ್ರದಾಯಿಕ ಟೊಪ್ಪಿಯನ್ನು ತೋರಿಸುತ್ತಿರುವುದು

Zooni Begum demonstrates how a chakku is used to spin loose wool into thread
PHOTO • Ufaq Fatima
Zooni Begum demonstrates how a chakku is used to spin loose wool into thread
PHOTO • Ufaq Fatima

ಝೂನಿ ಬೇಗಂ ಅವರು ಸಡಿಲವಾದ ಉಣ್ಣೆಯನ್ನು ದಾರವಾಗಿ ತಿರುಗಿಸಲು ಚಕ್ಕುವನ್ನು ಹೇಗೆ ಬಳಸುವುದು ಎಂದು ತೋರಿಸುತ್ತಿರುವುದು

*****

ದಾವರ್‌ನ ಪೂರ್ವದ 40 ಕಿಲೋಮೀಟರ್ ದೂರದಲ್ಲಿರುವ ಬದುವಾಬ್ ಗ್ರಾಮದಲ್ಲಿ ಈಗ ತೊಂಬತ್ತರ ಹರೆಯದ ನೇಕಾರ ಅನ್ವರ್ ಲೋನ್ ವಾಸಿಸುತ್ತಿದ್ದಾರೆ. 15 ವರ್ಷಗಳ ಹಿಂದೆ ಅವರು ತಯಾರಿಸಿದ ಪಟ್ಟು ಹೊದಿಕೆಯನ್ನು ಹಾಸಿ “ನಾನು ನನ್ನ ಕೆಲಸವನ್ನು ಎಂಟು ಗಂಟೆಗೆ ಪ್ರಾರಂಭಿಸಿ ಸಂಜೆ ನಾಲ್ಕು ಗಂಟೆಗೆ ಮುಗಿಸುತ್ತಿದ್ದೆ. ವಯಸ್ಸಾದಂತೆ ನಾನು ಕೇವಲ ಮೂರರಿಂದ ನಾಲ್ಕು ಗಂಟೆಗಳ ಕಾಲ ನೇಯ್ಗೆ ಮಾಡುವಂತೆ ಆಯ್ತು,” ಅವರು ಹೇಳುತ್ತಾರೆ.  ಒಂದು ಮೀಟರ್ ಬಟ್ಟೆಯನ್ನು ನೇಯಲು ಅನ್ವರ್‌ ಅವರಿಗೆ ಸರಿಸುಮಾರು ಇಡೀ ದಿನದ ಕೆಲಸ ಮಾಡಬೇಕಾಗುತ್ತದೆ.

ಸುಮಾರು ನಾಲ್ಕು ದಶಕಗಳ ಹಿಂದೆ ಅನ್ವರ್ ಪಟ್ಟು ಮಾರಾಟ ಆರಂಭಿಸಿದ್ದರು. "ಸ್ಥಳೀಯ ಮಟ್ಟದಲ್ಲಿ ಮತ್ತು ಗುರೆಜ್‌ನ ಹೊರಗೆ ಇದ್ದ ಬೇಡಿಕೆಯಿಂದಾಗಿ ನನ್ನ ವ್ಯಾಪಾರ ಬೆಳೆಯುತ್ತಾ ಹೋಯಿತು. ಗುರೇಜ್‌ಗೆ ಭೇಟಿ ನೀಡುವ ಅನೇಕ ವಿದೇಶಿಯರಿಗೆ ನಾನು ಪಟ್ಟು ಮಾರಿದ್ದೇನೆ,” ಎಂದು ಅನ್ವರ್‌ ಹೇಳುತ್ತಾರೆ.

ಅಚುರಾ ಚೌರ್ವಾನ್ (ಅಥವಾ ಶಾ ಪೊರ್) ಗ್ರಾಮದಲ್ಲಿ ಅನೇಕರು ಪಟ್ಟು ವ್ಯವಹಾರವನ್ನು ಬಿಟ್ಟುಬಿಟ್ಟಿದ್ದಾರೆ. ಆದರೆ ಸಹೋದರರಾದ 70 ವರ್ಷದ ಗುಲಾಮ್ ಖಾದಿರ್ ಲೋನ್ ಮತ್ತು 71 ವರ್ಷದ ಅಬ್ದುಲ್ ಖಾದಿರ್ ಲೋನ್ ಇನ್ನೂ ಅದೇ ಉತ್ಸಾಹದಿಂದ ಕೆಲಸವನ್ನು  ಮುಂದುವರೆಸುತ್ತಿದ್ದಾರೆ. ಚಳಿಗಾಲ ತೀವ್ರವಾಗಿ ಕಾಶ್ಮೀರದ ಉಳಿದ ಭಾಗಗಳಿಂದ ಈ ಕಣಿವೆ ಸಂಪರ್ಕ ಕಡಿದುಕೊಂಡಾಗ ಹೆಚ್ಚಿನ ಕುಟುಂಬಗಳು ಕಣಿವೆಯ ಕೆಳಪ್ರದೇಶಗಳಿಗೆ ವಲಸೆ ಹೋಗುತ್ತವೆ. ಆದರೆ ಈ ಸಹೋದರರು ಮಾತ್ರ ಅಲ್ಲೇ ಉಳಿದುಕೊಂಡು ನೇಯ್ಗೆಯ ಕೆಲಸ ಮಾಡುತ್ತಾರೆ.

"ನಾನು ಯಾವ ಪ್ರಾಯದಲ್ಲಿ ನೇಯ್ಗೆ ಕೆಲಸ ಪ್ರಾರಂಭಿಸಿದೆ ಎಂಬುದು ನನಗೆ ಸರಿಯಾಗಿ ನೆನಪಿಲ್ಲ. ಆದರೆ ಆಗ ನಾನು ತುಂಬಾ ಸಣ್ಣ ಬಾಲಕನಾಗಿದ್ದೆ. ನಾವು ಚರ್ಖಾನಾ ಮತ್ತು ಚಶ್ಮ್-ಇ-ಬುಲ್ ಬುಲ್ ನಂತಹ ನೇಯ್ಗೆಯಲ್ಲಿ ಅನೇಕ ವಸ್ತುಗಳನ್ನು ತಯಾರಿಸುತ್ತಿದ್ದೆವು ," ಎಂದು ಗುಲಾಮ್ ಹೇಳುತ್ತಾರೆ.

ಚರ್ಖಾನಾವು ಚೆಕ್ಕರ್ ಮಾದರಿಯಾದರೆ, ಚಶ್ಮ್-ಇ-ಬುಲ್‌ ಬುಲ್ ಒಂದು ಸಂಕೀರ್ಣವಾದ ನೇಯ್ಗೆಯಾಗಿದೆ. ಬುಲ್ಬುಲ್ ಪಕ್ಷಿಯ ಕಣ್ಣನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಎಚ್ಚರಿಕೆಯಿಂದ ರಚಿಸಲಾದ ಈ ಪಟ್ಟು ನೇಯ್ಗೆಗಳು ಯಂತ್ರ ಬಳಸಿ ತಯಾರಿಸಿದ ಬಟ್ಟೆಗಳಿಗಿಂತ ಒರಟಾಗಿರುತ್ತವೆ.

Left: Anwar Lone showing the woven blanket he made 15 years ago.
PHOTO • Ufaq Fatima
Right: Abdul Qadir with a charkhana patterned fabric
PHOTO • Ufaq Fatima

ಎಡ: ಅನ್ವರ್ ಲೋನ್ 15 ವರ್ಷಗಳ ಹಿಂದೆ ತಾವು ನೇಯ್ದ ಹೊದಿಕೆಯನ್ನು ತೋರಿಸುತ್ತಿರುವುದು. ಬಲ: ಚರ್ಖಾನಾ ಮಾದರಿಯ ಬಟ್ಟೆಯೊಂದಿಗೆ ಅಬ್ದುಲ್ ಖಾದಿರ್

Left: Ghulam Qadir wears a charkhana patterned pheran, a gown-like upper garment.
PHOTO • Ufaq Fatima
Right: The intricate chashm-e-bulbul weave is said to resemble the eye of a bulbul bird. It is usually used to make blankets
PHOTO • Ufaq Fatima

ಎಡ: ಗುಲಾಮ್ ಖಾದಿರ್ ಅವರು ಚರ್ಖಾನಾ ಮಾದರಿಯ ಗೌನ್ ತರಹದ ಮೇಲುಡುಪು ಫೆರಾನನ್ನು ಧರಿಸುತ್ತಾರೆ. ಬಲ: ಸಂಕೀರ್ಣವಾದ ಚಶ್ಮ್-ಇ-ಬುಲ್ ಬುಲ್ ನೇಯ್ಗೆ ಬುಲ್ಬುಲ್ ಪಕ್ಷಿಯ ಕಣ್ಣನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಕಂಬಳಿಗಳನ್ನು ತಯಾರಿಸಲು ಬಳಸಲಾಗುತ್ತದೆ‌

"ವಕ್ತ್ ಕೆ ಸಾಥ್ ಪಹ್ನಾವೆ ಕಾ ಹಿಸಾಬ್ ಭೀ ಬದಲ್ ಗಯಾ [ಕಾಲದ ಜೊತೆಗೆ ಉಡುಪುಗಳ ಫ್ಯಾಷನ್ ಕೂಡ ಬದಲಾಗಿದೆ]," ಎಂದು ಗುಲಾಮ್ ಹೇಳುತ್ತಾರೆ. "ಆದರೆ ಪಟ್ಟು ಮಾತ್ರ 30 ವರ್ಷಗಳ ಹಿಂದೆ ಇದ್ದಂತೆಯೇ ಇದೆ," ಎಂದು ನೆನಪಿಸಿಕೊಳ್ಳುತ್ತಾರೆ. ಈ ದಿನಗಳಲ್ಲಿ ಏನೇನೂ ಲಾಭವನ್ನು ಸಿಗುತ್ತಿಲ್ಲ ಎಂದು ಸಹೋದರರು ಹೇಳುತ್ತಾರೆ. ವರ್ಷಕ್ಕೊಮ್ಮೆ ಶಾಪಿಂಗ್ ಮಾಡುವ ಸ್ಥಳೀಯರಿಗೆ ಇವರು ಮಾರಾಟ ಮಾಡುತ್ತಾರೆ.

ಯುವಕರಲ್ಲಿ ಕಸುಬು ಕಲಿಯಲು ಬೇಕಾದ ಚೈತನ್ಯ ಮತ್ತು ತಾಳ್ಮೆ ಇಲ್ಲ ಎನ್ನುತ್ತಾರೆ ಅಬ್ದುಲ್ ಖಾದರ್. "ಮುಂದಿನ 10 ವರ್ಷಗಳಲ್ಲಿ ಪಟ್ಟುವಿನ ಅಸ್ತಿತ್ವವೇ ಇರುವುದಿಲ್ಲ" ಎಂದು ಅಬ್ದುಲ್ ಹೇಳಿದರು. "ಇದಕ್ಕೆ ಹೊಸ ಭರವಸೆ ತುಂಬಲು ಹೊಸತನದ ಅಗತ್ಯವಿದೆ. ಸರ್ಕಾರ ಇದರಲ್ಲಿ ಕೈಜೋಡಿಸಿದರೆ ಮಾತ್ರ ಇದು ಸಾಧ್ಯ," ಎಂದು ಅವರು ಹೇಳುತ್ತಾರೆ.

ದಾವರ್ ಮಾರುಕಟ್ಟೆಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿರುವ ಅಬ್ದುಲ್ ಕುಮಾರ್ ಅವರ ಮಗ ರೆಹಮಾನ್ ನೇಯ್ಗೆ ಇನ್ನು ಮುಂದೆ ಜೀವನೋಪಾಯದ ಆಯ್ಕೆಯಲ್ಲ ಎಂದು ಹೇಳುತ್ತಾರೆ. "ಪ್ರಯತ್ನವೇ ಲಾಭಕ್ಕಿಂತ ಹೆಚ್ಚು ಹಾಕಬೇಕಿದೆ," ಎಂದು ಅವರು ಹೇಳುತ್ತಾರೆ. "ಜನರು ಈಗ ಹಣ ಗಳಿಸಲು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಪೆಹ್ಲೆ ಯಾ ತೋ ಪಟ್ಟು ಥಾ ಯಾ ಜಮೀನ್ದಾರಿ [ಮೊದಲು ಒಂದೋ ಪಟ್ಟು ಇತ್ತು, ಇಲ್ಲಾ ಜಮೀನುದಾರರು],” ಎನ್ನುತ್ತಾರೆ ರೆಹಮಾನ್.

ಗುರೆಜ್ ದೂರದ ಒಂದು ಗಡಿ ಪ್ರದೇಶ. ಯಾವ ಅಧಿಕಾರಿಯೂ ಈ ಕಡೆ ಗಮನ ಕೊಡುವುದಿಲ್ಲ. ಆದರೆ ನೇಕಾರರ ಹೊಸ ಹೊಸ ಆಲೋಚನೆಗಳು ಈ ಅಳಿಯುತ್ತಿರುವ ಕಲೆಗೆ ಹೊಸ ಜೀವವನ್ನು ತುಂಬಬಹುದು. ಈ ಪ್ರದೇಶದ ಜನರಿಗೆ ಮತ್ತೊಮ್ಮೆ ಸ್ಥಿರ ಆದಾಯದ ಮೂಲವಾಗಿ ಬರಬಹುದು ಎಂದು ಹೇಳುತ್ತಾರೆ.

ಅನುವಾದ: ಚರಣ್‌ ಐವರ್ನಾಡು

Ufaq Fatima

کشمیر کی رہنے والی افق فاطمہ ڈاکیومینٹری فوٹوگرافر اور قلم کار ہیں۔

کے ذریعہ دیگر اسٹوریز Ufaq Fatima
Editor : Swadesha Sharma

سودیشا شرما، پیپلز آرکائیو آف رورل انڈیا (پاری) میں ریسرچر اور کانٹینٹ ایڈیٹر ہیں۔ وہ رضاکاروں کے ساتھ مل کر پاری کی لائبریری کے لیے بھی کام کرتی ہیں۔

کے ذریعہ دیگر اسٹوریز Swadesha Sharma
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad