ನಾನು ತಾಡ್ಪಾ ನುಡಿಸುವಾಗ ನಮ್ಮ ವಾರ್ಲಿ ಜನರೊಳಗೆ ಗಾಳಿ ಹೊಕ್ಕುತ್ತದೆ. ನಂತರದ ಒಂದು ಗಂಟೆಯ ಕಾಲ ಅವರು ಗಾಳಿಗೆ ಮರವೊಂದು ಅತ್ತಿಂದಿತ್ತ ವಾಲುವಂತೆ ವಾಲತೊಡಗುತ್ತಾರೆ.
ನಾನು ತಾಡ್ಪಾ ನುಡಿಸುವ ಮೂಲಕ ಸಾವರಿ ದೇವಿ ಮತ್ತು ಅವಳ ಜೊತೆಗಾರರನ್ನು ಆಹ್ವಾನಿಸುತ್ತೇನೆ. ಆಗ ನನ್ನ ಜನರ ಮೇಲೆ ಆ ದೇವರುಗಳು ಆವಾಹನೆಯಾಗುತ್ತಾರೆ.
ಇದೆಲ್ಲವೂ ನಂಬಿಕೆಗೆ ಸಂಬಂಧಿಸಿದ ವಿಷಯ. ʼಮಾನಾಲ್ ತ್ಯಾಚಾ ದೇವ್, ನಾಹಿ ತ್ಯಾಚಾ ನಾಹಿʼ [ನಂಬುವವನಿಗೆ ದೇವರಿದ್ದಾನೆ, ನಂಬದವರಿಗೆ ದೇವರಿಲ್ಲ.] ನನ್ನ ಪಾಲಿಗೆ ನನ್ನ ತಾಡ್ಪಾ ನನ್ನ ದೇವರು. ನಾನು ಅದಕ್ಕೆ ಕೈ ಜೋಡಿಸಿ ಮುಗಿಯುತ್ತೇನೆ.
ನನ್ನ ತಾತ, ನವಶ್ಯಾ ತಾಡ್ಪಾ ನುಡಿಸುತ್ತಿದ್ದರು.
ಅವರ ಮಗ ಡಾಕ್ಳ್ಯಾ. ಅವರೂ ನುಡಿಸುತ್ತಿದ್ದರು.
ಲಾಡ್ಕ್ಯಾ ನನ್ನ ತಂದೆ.
ಅದು ಬ್ರಿಟಿಷರ ಕಾಲವಾಗಿತ್ತು. ಆಗ ನಮಗಿನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ. ನಮ್ಮ ಊರಾದ ವಾಲ್ವಾಂಡೆಯಲ್ಲಿ ದೊಡ್ಡ ಮನುಷ್ಯರ (ಮೇಲ್ಜಾತಿಯ) ಜಾತಿಯ ಮಕ್ಕಳಿಗಾಗಿ ಒಂದೇ ಒಂದು ಶಾಲೆಯಿತ್ತು. ಬಡವರಿಗಾಗಿ ಶಾಲೆಯಿರಲಿಲ್ಲ. ಆಗ ನನಗೆ 10-12 ವರ್ಷ. ನಾನು ದನ ಮೇಯಿಸುತ್ತಿದ್ದೆ. ʼಗಾಯಿಮಾಗೆ ಗೆಲಾ ರೋಟಿ ಮಿಲಾಲ್. ಸಾಲೆತ್ ಗೆಲಾ ತಾರ್ ಉಪಾಶಿ ರಹಾಲ್ [ದನ ಮೇಯಿಸಲು ಹೋದರೆ ನನಗೆ ಊಟವಾದರೂ ಸಿಗುತ್ತದೆ. ಶಾಲೆಗೆ ಹೋದರೆ ಉಪವಾಸ ಬೀಳಬೇಕು] ಎನ್ನುವುದು ನನ್ನ ಪೋಷಕರ ಯೋಚನೆಯಾಗಿತ್ತುʼ ನನ್ನಮ್ಮ ಏಳು ಮಕ್ಕಳನ್ನು ನೋಡಿಕೊಳ್ಳಬೇಕಿತ್ತು.
ಅಪ್ಪ ಹೇಳುತ್ತಿದ್ದರು ʼದನ ಕಾಯುವಾಗ ನಿನಗೆ ಏನೂ ಕೆಲಸವಿರುವುದಿಲ್ಲ. ನೀನ್ಯಾಕೆ ತಾಡ್ಪಾ ನುಡಿಸಬಾರದು? ಇದು ನಿನ್ನ ದೇಹಕ್ಕೆ ಒಳ್ಳೆಯದು [ಮತ್ತೆ ಆರೋಗ್ಯಕ್ಕೂ] ಜೊತೆಗೆ ನಿನಗೆ ಮನರಂಜನೆಯೂ ಸಿಗುತ್ತದೆ.ʼ ಸದ್ದಿನಿಂದಾಗಿ ದನಗಳ ಹತ್ತಿರ ಕೀಟಗಳೂ ಸಹ ಬರುವುದಿಲ್ಲ.
ನಾನು ಕಾಡಿಗೆ ಮತ್ತು ಮೇವು ಮಾಳಕ್ಕೆ ದನವನ್ನು ಹೊಡೆದುಕೊಂಡು ಹೋದ ಸಂದರ್ಭಗಳಲ್ಲಿ ಅದನ್ನು ನುಡಿಸುತ್ತಿದ್ದೆ. ಆದರೆ ಜನ ದಿಂಢ್ಯಾನ ಮಗ ಸದಾ ಕ್ಯಾಂವ್ ಕ್ಯಾಂವ್ ಎಂದು ಸದ್ದು ಮಾಡುತ್ತಿರುತ್ತಾನೆ ಎಂದು ದೂರುತ್ತಿದ್ದರು. ಒಂದು ದಿನ ಅಪ್ಪ ಕೇಳಿದರು, ʼನಾನು ಬದುಕಿರುವ ತನಕ ನಿನಗೆ ನಾನೇ ತಾಡ್ಪಾ ಮಾಡಿಕೊಡುತ್ತೇನೆ. ನಾನು ಸತ್ತ ಮೇಲೆ ನಿನಗೆ ಯಾರು ತಯಾರಿಸಿ ಕೊಡುತ್ತಾರೆ?ʼ ಕಡೆಗೆ ನಾನೇ ಅದನ್ನು ತಯಾರಿಸಲು ಕಲಿತೆ.
ತಾಡ್ಪಾ ತಯಾರಿಸಲು ಮೂರು ವಸ್ತುಗಳು ಬೇಕಾಗುತ್ತವೆ. ಸದ್ದು ಹೊರಡಿಸಲು [ಪೀಪಿ] ಮಾಡ್ ಎಲೆ [ತಾಳೆ ಎಲೆ]. ಎರಡು ತುಂಡು ಬಿದಿರು , ಒಂದು ಹೆಣ್ಣು, ಒಂದು ಗಂಡು. ಲಯವನ್ನು ತಾಳಿಕೊಂಡು ಉಳಿಸಿಕೊಳ್ಳಲು ಗಂಡು ಬಿದಿರಿಗೆ ಇನ್ನೊಂದು ಸಣ್ಣ ತುಂಡು ಇರುತ್ತದೆ. ಇನ್ನೊಂದು ವಸ್ತುವೆಂದರೆ ದುಧಿ [ಸೋರೆಕಾಯಿ] ಇದು ಗಾಳಿ ತುಂಬಿಕೊಳ್ಳುತ್ತದೆ. ನಾನು ಪೀಪಿಯನ್ನು ಊದಿದಾಗ ಗಂಡು ಹೆಣ್ಣು ಸೇರಿ ಇಂಪಾದ ಸದ್ದನ್ನು ಹೊರಡಿಸುತ್ತವೆ.
ತಾಡ್ಪಾ ಎನ್ನುವುದು ಕುಟುಂಬವಿದ್ದಂತೆಯೇ. ಇದರಲ್ಲಿ ಒಂದು ಹೆಣ್ಣು ಮತ್ತು ಒಂದು ಗಂಡಿರುತ್ತದೆ. ನಾನು ಅದರೊಳಗೆ ಗಾಳಿ ಊದಿದಾಗ ಅವೆರಡೂ ಒಂದಾಗಿ ಮಾಂತ್ರಿಕವಾದ ಸದ್ದನ್ನು ಹೊರಡಿಸುತ್ತವೆ. ಉಪಕರಣ ಕಲ್ಲಿನಂತೆ ನಿರ್ಜೀವ ನನ್ನ ಉಸಿರಿನ ಗಾಳಿ ಅದಕ್ಕೆ ಜೀವ ತುಂಬುತ್ತದೆ. ಆ ಉಸಿರು ಸಂಗೀತವಾಗಿ ಹೊರಹೊಮ್ಮುತ್ತದೆ. ಇದಕ್ಕೆ ಎದೆಯ ತುಂಬಾ ಗಾಳಿಯಿರಬೇಕು. ವಾದ್ಯವನ್ನು ಊದುತ್ತಲೇ ನಿಮ್ಮ ಎದೆಯೊಳಗೂ ಉಸಿರಾಡಲು ಸಾಕಾಗುವಷ್ಟು ಗಾಳಿಯಿರುವುದನ್ನು ಖಚಿಪಡಿಸಿಕೊಳ್ಳಬೇಕು.
ದೇವರು ನೀಡಿದ ಜ್ಞಾನದಿಂದಷ್ಟೇ ನಾವು ಇದನ್ನು ತಯಾರಿಸಲು ಸಾಧ್ಯ. ಇದೆಲ್ಲವೂ ದೇವರಿಗೆ ಸೇರಿದ್ದು.
ʼದನ ಕಾಯುವಾಗ ನಿನಗೆ ಏನೂ ಕೆಲಸವಿರುವುದಿಲ್ಲ. ನೀನ್ಯಾಕೆ ತಾಡ್ಪಾ ನುಡಿಸಬಾರದು? ಇದು ನಿನ್ನ ದೇಹಕ್ಕೆ ಒಳ್ಳೆಯದು [ಮತ್ತೆ ಆರೋಗ್ಯಕ್ಕೂ] ಜೊತೆಗೆ ನಿನಗೆ ಮನರಂಜನೆಯೂ ಸಿಗುತ್ತದೆ.ʼ ಎಂದು ನನ್ನಪ್ಪ ಹೇಳುತ್ತಿದ್ದರು
*****
ನನ್ನ ಅಪ್ಪ ಅಮ್ಮ ಮತ್ತು ಹಿರಿಯರು ನಮಗೆ ಸಾಕಷ್ಟು ಕತೆಗಳನ್ನು ಹೇಳಿದ್ದಾರೆ. ಇವತ್ತು ಜನರೆದುರು ಆ ಕತೆಗಳನ್ನು ಹೇಳಿದರೆ ಜನರು ನಗಬಹುದು. ಆದರೆ ಅವೆಲ್ಲವೂ ನಮ್ಮ ಪೂರ್ವಜರಿಂದ ಬಂದ ಕತೆಗಳು.
ಬ್ರಹ್ಮನ ಸೃಷ್ಟಿಯ ನಂತರ ದೇವತೆಗಳು ಹೊರಟುಹೋದರು. ಹಾಗಿದ್ದರೆ ವಾರ್ಲಿಗಳು ಎಲ್ಲಿಂದ ಬಂದರು?
ಕಂದ್ರಾಮ್ ದೆಹ್ಳ್ಯಾದಿಂದ ಬಂದರು.
ದೇವರುಗಳು ಕಂದ್ರಾಮ್ ದೆಹ್ಳ್ಯಾನಿಗಾಗಿ ಅವನ ತಾಯಿಯ ಬಳಿ ಒಂದಷ್ಟು ಮೊಸರು ಇಟ್ಟು ಹೋಗಿದ್ದರು. ಅವನು ಮೊಸರು ತಿಂದ ಆದರೆ ನಂತರ ಎಮ್ಮೆಯನ್ನು ಸಹ ತಿಂದ. ಇದರಿಂದ ಕೋಪಗೊಂಡ ಅವನ ತಾಯಿ ಅವನನ್ನು ಮನೆಯಿಂದ ಎತ್ತಿ ಹೊರಗೆ ಎಸೆದಳು.
ವಾರ್ಲಿ ಮೂಲ ಪುರುಷ ಕಂದ್ರಾಮ್ ದೆಹ್ಳ್ಯಾ ಹೇಗೆ ಇಲ್ಲಿಗೆ ಬಂದ ಎನ್ನುವುದನ್ನು ನಮ್ಮ ಹಿರಿಯರು ಈ ರೀತಿಯಲ್ಲಿ ವಿವರಿಸುತ್ತಾರೆ.
ಕಂದ್ರಾಮ್ ದೆಹ್ಳ್ಯಾಲಾಹುನ್
ಪಲ್ಸೊಂಡ್ಯಾಲ ಪರಸಂಗ್ ಝಾಲಾ
ನಟವಚೋಡೀಲಾ ನಟಲಾ
ಖಾರಾವಂಡ್ಯಾಲಾ ಖಾರಾ ಝಾಲಾ
ಶಿಂಗಾರಪಡ್ಯಾಲ ಶಿಂಗಾರಾಲಾ
ಆಡಖಡಕಲಾ ಆಡ್ ಝಾಲಾ
ಕಾಟಾ ಕೊಚಾಯ್ ಕಸಟವಾಡಿ ಝಾಲಾ
ಕಸೆಲಿನಾ ಯೆವುನ್ ಹಸಲಾ
ಆನ್ ವಳ್ವಾಂಡ್ಯಾಲಾ ಯೆವುಣ್ ಬಸಾಲಾ
ಗೋರ್ಯಾಲ ಜಾನ್ ಖರಾ ಝಾಲಾ
ಗೋರ್ಯಾಲಾ ರಹಲಾ ಗೊಂದ್ಯಾ
ಚಾಂಧ್ಯ ಅಲಾ ಗಂಭೀರಗಡಾ ಆಲಾ
Kandram Dehlyalahun
Palsondyala parsang jhala
Natavchondila Natala
Kharvandyala khara jhala
Shingarpadyala shingarala
Aadkhadakala aad jhala
Kata khochay Kasatwadi jhala
Kaselila yeun hasala
Aan Walwandyala yeun basala.
Goryala jaan khara jaala
Goryala rahala Gondya
Chandya aala, Gambhirgada aala
*ಈ ಪದ್ಯವು ಪಾಲ್ಘರ್ ಜಿಲ್ಲೆಯ ಜವಾಹರ್ ಬ್ಲಾಕಿನ ಹಳ್ಳಿ ಮತ್ತು ಕುಗ್ರಾಮಗಳ ಹೆಸರನ್ನು ಬಳಸಿಕೊಂಡು ಪದಗಳಾಟವಾಡಿದೆ
ವಾರ್ಲಿಗಳಂತೆ ಇನ್ನೂ ಕೆಲವು ಸಮುದಾಯಗಳೂ ಇಲ್ಲಿ ವಾಸಿಸುತ್ತಿವೆ. ರಾಜ್ಕೋಲಿ, ಕೊಕ್ನಾ, ಕಟ್ಕರಿ, ಠಾಕೂರ್, ಮಹರ್, ಚಂಬಾರ್... ಅವುಗಳಲ್ಲಿ ಕೆಲವು. ನಾನು ಮಹಾರಾಜರ [ಜವಹರನ ರಾಜನ] ದರ್ಬಾರ್ ನಲ್ಲಿ [ಆಸ್ಥಾನದಲ್ಲಿ] ಕೆಲಸ ಮಾಡುತ್ತಿದ್ದೆ ಎಂದು ನನಗೆ ನೆನಪಿದೆ. ಅವರು ದರ್ಬಾರಿನಲ್ಲಿ ಸಮಾಜದ ಜನರೊಂದಿಗೆ ಕಾರವಾಲ್ ಎಲೆಯಲ್ಲಿ ಊಟ ಮಾಡುತ್ತಿದ್ದರು. ನಾನು ಅವರು ಉಂಡ ಎಲೆಗಳನ್ನು ಎಸೆದು ಬರುತ್ತಿದ್ದೆ. ಅಲ್ಲಿ ಎಲ್ಲ ಸಮುದಾಯದ ಜನರೂ ಉಣ್ಣುತ್ತಿದ್ದರು. ಯಾವುದೇ ಭೇದ ಭಾವ ಇದ್ದಿರಲಿಲ್ಲ. ನಾನು ಸಹ ಈ ಸಮಾನತೆಯನ್ನು ಅಲ್ಲಿಯೇ ಕಲಿತೆ. ಆಗಿನಿಂದ ಕತ್ಕರಿ ಮುಸ್ಲಿಂ ಕೈಯಿಂದ ನೀರು ಕುಡಿಯಲು ಆರಂಭಿಸಿದೆ. ವಾರ್ಲಿಗಳು ಮಟ್ಟಿದ ನೀರನ್ನು ರಾಜಕೋಲಿಗಳು ಕುಡಿಯುವುದಿಲ್ಲ. ನಮ್ಮ ಜನರು ಕತ್ಕರಿ, ಚಂಬಾರ್, ಅಥವಾ ಧೋರ್ ಕೋಲಿ ಜನರು ಮುಟ್ಟಿದ ನೀರನ್ನು ಕುಡಿಯುವುದಿಲ್ಲ. ಆದರೆ ಇಂತಹ ತಾರತಮ್ಯವನ್ನು ನಾನೂ ಎಂದೂ ನಂಬುವುದಿಲ್ಲ.
ಹಿರ್ವ ದೇವ್ ಮತ್ತು ತಾಡ್ಪಾವನ್ನು ಪೂಜಿವವರೆಲ್ಲರೂ ವಾರ್ಲಿಗಳೇ.
ನಾವು ಹಬ್ಬಗಳನ್ನು ಜೊತೆಯಾಗಿ ಆಚರಿಸುತ್ತೇವೆ. ಹೊಸ ಭತ್ತದ ಕೊಯ್ಲು ಮಾಡಿದ ನಂತರ ಅದನ್ನು ಕುಟುಂಬ ಮತ್ತು ಅಕ್ಕಪಕ್ಕದವರೊಡನೆ ಹಂಚಿಕೊಳ್ಳುತ್ತೇವೆ ಅದಕ್ಕೂ ಮೊದಲು ಅದನ್ನು ನಮ್ಮ ಗ್ರಾಮ ದೇವತೆಯಾದ ಗಾಂವ್ ದೇವಿಗೆ ಅರ್ಪಿಸುತ್ತೇವೆ. ಅವಳಿಗೆ ಮೊದಲ ತುತ್ತನ್ನು ಅರ್ಪಿಸಿದ ನಂತರವೇ ನಾವು ಅದನ್ನು ತಿನ್ನುತ್ತೇವೆ. ನೀವು ಇದನ್ನು ಅಂಧ-ಶ್ರದ್ಧಾ (ಕುರುಡು ನಂಬಿಕೆ) ಎಂದು ಭಾವಿಸಬಹುದು. ಆದರೆ ಅದು ಹಾಗಲ್ಲ. ಅದು ನಮ್ಮ ಶ್ರದ್ಧಾ, ನಮ್ಮ ನಂಬಿಕೆ.
ಹೊಸದಾಗಿ ಕೊಯ್ಲು ಮಾಡಿದ ಬೆಳೆಯೊಂದಿಗೆ ನಾವು ನಮ್ಮ ಸ್ಥಳೀಯ ದೇವತೆಯಾದ ಗಾಂವ್ ದೇವತೆ ಆಲಯಕ್ಕೆ ಭೇಟಿ ನೀಡುತ್ತೇವೆ. ಹಾಗಿದ್ದರೆ ನಾವು ಅವಳನ್ನು ಇಲ್ಲಿಗೆ ಏಕೆ ಕರೆ ತಂದೆವು? ಅವಳಿಗಾಗಿ ಗುಡಿಯನ್ನು ಏಕೆ ಕಟ್ಟಿದೆವು? ʼಅವಳು ನಮ್ಮ ಹೊಲ-ಗದ್ದೆಗಳು, ಹಣ್ಣಿನ ತೋಟಗಳು ಅಭಿವೃದ್ಧಿ ಹೊಂದುವಂತೆ ಆಶೀರ್ವದಿಸಲು, ಉದ್ಯೋಗದಲ್ಲಿ ಯಶಸ್ಸು ನೀಡಲು. ನಮ್ಮ ಕುಟುಂಬಗಳು ಮತ್ತು ನಮ್ಮ ಬದುಕು ಒಳ್ಳೆಯ ದಿನಗಳನ್ನು ಕಾಣಲಿ ಎನ್ನುವ ಕಾರಣಕ್ಕಾಗಿ.ʼ ನಾವು ಆದಿವಾಸಿಗಳು ಅವಳ ಗುಡಿಗೆ ಹೋಗಿ ಕೈಮುಗಿಯುತ್ತೇವೆ. ಅವಳ ಹೆಸರು ಕರೆದು ಅವಳಲ್ಲಿ ನಮ್ಮ ಬೇಡಿಕೆಗಳನ್ನು ತಿಳಿಸುತ್ತೇವೆ.
ತಾಡ್ಪಾ ನಮ್ಮ ಬದುಕಿನಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ವಾಘಬರಸ್ ದಿನದಂದು ನಾವು ಸವರಿ ದೇವಿಯ ಹಬ್ಬವನ್ನು ಆಚರಿಸುತ್ತೇವೆ. ನೀವು ಅವಳನ್ನು ಶಬರಿ ಎಂದು ಕರೆಯುತ್ತೀರಿ. ಅವಳು ಭಗವಾನ್ ರಾಮನಿಗೆ ತಾನು ಕಚ್ಚಿದ ಹಣ್ಣನ್ನು ನೀಡಿದವಳು. ಅವಳು ತನ್ನ ಇಡೀ ಬದುಕನ್ನು ರಾಮನಿಗಾಗಿ ಕಾಯುತ್ತಾ ಕಳೆದಿದ್ದಳು. ಅವಳು ಅವನನ್ನು ನೋಡಿದ ನಂತರ ತನಗೆ ಇನ್ನು ಬದುಕುವುದಕ್ಕಿಲ್ಲ ಎಂದು ಜೀವ್ದವನ್ನು [ಹೃದಯ] ಹೊರ ತೆಗೆದು ಅವನ ಕೈಯಲ್ಲಿಟ್ಟು ಅಲ್ಲಿಂದ ತೆರಳಿದಳು. ಮತ್ತೆ ಅವಳು ಮರಳಲೇ ಇಲ್ಲ.
ಅವಳ ಪ್ರೀತಿ ಮತ್ತು ಸಮರ್ಪಣಾ ಭಾವವನ್ನು ಆಚರಿಸುವ ಸಲುವಾಗಿ ನಾವು ತಾಡ್ಪಾವನ್ನು ಕಾಡು ಮತ್ತು ಬೆಟ್ಟಗಳಿಗೆ ಒಯ್ಯುತ್ತೇವೆ. ಅಲ್ಲಿ, ಕಾಡಿನಲ್ಲಿ ಹಲವು ದೇವರುಗಳಿವೆ. ತಂಗ್ಡಾ ಸವರಿ, ಗೊಹ್ರಾ ಸವರಿ, ತುಂಬಾ ಸವರಿ, ಮತ್ತು ಘುಂಗಾ ಸವರಿ. ಮತ್ತು ಈಗಲೂ ಅವರೆಲ್ಲ ಅಲ್ಲಿದ್ದಾರೆ. ನಾವು ಅವರನ್ನು ಪೂಜಿಸಲು ಆರಂಭಿಸಿದೆವು. ನಾನು ತಾಡ್ಪಾ ಬಾರಿಸುವ ಮೂಲಕ ಅವರನ್ನು ಹಬ್ಬದಲ್ಲಿ ಪಾಲ್ಗೊಳ್ಳಲು ಆಹ್ವಾನಿಸುತ್ತೇನೆ. ನಾವು ಒಬ್ಬೊಬ್ಬರನ್ನು ಒಂದೊಂದು ಹೆಸರಿನಿಂದ ಕರೆಯುವಂತೆ ಒಬ್ಬೊಬ್ಬ ಸವರಿಯರನ್ನು ನಾನು ಒಂದೊಂದು ಸ್ವರ ನುಡಿಸಿ ಕರೆಯುತ್ತೇನೆ.
*****
ಅದು 2022 ನಂದೂರಬಾರ್, ಧುಲೆ, ಬರೋಡಾ ಸೇರಿದಂತೆ ಎಲ್ಲೆಡೆಯಿಂದ ಬಂದಿದ್ದ ಆದಿವಾಸಿಗಳೊಂದಿಗೆ ಕುಳಿತಿದ್ದೆ. ಮುಂದೆ ಕುಳಿತಿದ್ದ ಜನರು ನಾನು ಆದಿವಾಸಿಯೆನ್ನುವುದನ್ನು ಸಾಬೀತುಪಡಿಸುವಂತೆ ಹೇಳಿದರು.
ಈ ಭೂಮಿಯ ಮೇಲೆ ಇಳಿದು ಅದರ ಮಣ್ಣನ್ನು ಪರೀಕ್ಷಿಸಿದ ಮೊದಲ ವ್ಯಕ್ತಿ ಆದಿವಾಸಿ ಮತ್ತು ಆ ಮನುಷ್ಯ ನನ್ನ ಪೂರ್ವಜ ಎಂದು ನಾನು ಅವರಿಗೆ ಹೇಳಿದೆ. ನಾವು ನಮ್ಮ ಉಸಿರಿನಿಂದ ಸೃಷ್ಟಿಸುವ ಶಬ್ಧವೇ ನಮ್ಮ ಸಂಸ್ಕೃತಿ. ನಾವು ಏನನ್ನು ನಮ್ಮ ಕೈಯಿಂದ ನುಡಿಸುತ್ತೇವೋ ಅದೇ ಚಿತ್ರಕಲೆ. ಚಿತ್ರಕಲೆ ನಂತರ ಬಂದಿದ್ದು. ಉಸಿರು ಮತ್ತು ಸಂಗೀತವೆನ್ನುವುದು ಅನಂತ. ಶಬ್ಧವೆನ್ನುವುದು ಜಗತ್ತು ಸೃಷ್ಟಿಯಾದಂದಿನಿಂದಲೂ ಇದೆ.
ಈ ತಾಡ್ಪಾ ಗಂಡ ಹೆಂಡತಿಯನ್ನು ಪ್ರತಿನಿಧಿಸುತ್ತದೆ. ಹೆಣ್ಣು ಗಂಡಿಗೆ ಸಹಾಯ ಮಾಡಿದರೆ, ಗಂಡು ಹೆಣ್ಣಿಗೆ ಸಹಾಯ ಮಾಡುತ್ತದೆ. ಎಂದು ಹೇಳಿ ನನ್ನ ಮಾತುಗಳನ್ನು ಮುಗಿಸಿದೆ. ತಾಡ್ಪಾ ಕೆಲಸ ಮಾಡುವುದೇ ಹಾಗೆ. ಉಸಿರು ಅವರಿಬ್ಬರನ್ನೂ ಒಂದುಗೂಡಿಸುವ ಮೂಲಕ ಅತ್ಯಂತ ಮಾಂತ್ರಿಕ ಸದ್ದನ್ನು ಹೊರಡಿಸುತ್ತದೆ.
ನನ್ನ ಉತ್ತರದಿಂದಾಗ ನನಗೆ ಮೊದಲನೇ ಸ್ಥಾನ ದೊರಕಿತು. ನನಗೆ ರಾಜ್ಯದಲ್ಲೇ ಮೊದಲನೇ ಸ್ಥಾನ ದೊರಕಿತು.
ನಾನು ಕೈಮುಗಿದು ನನ್ನ ತಾಡ್ಪಕ್ಕೆ ಹೇಳುತ್ತಿದ್ದೆ, 'ಪ್ರಿಯ ದೇವರೇ, ನಾನು ನಿನ್ನ ಸೇವೆ ಮಾಡುತ್ತೇನೆ, ನಾನು ನಿನ್ನನ್ನು ಆರಾಧಿಸುತ್ತೇನೆ. ಈಗ ಪ್ರತಿಯಾಗಿ ನೀನು ನನ್ನನ್ನು ನೋಡಿಕೊಳ್ಳಬೇಕು. ನಾನು ಹಾರಲು ಬಯಸುತ್ತೇನೆ. ನನ್ನನ್ನು ವಿಮಾನದಲ್ಲಿ ಕೂರಿಸು' ಎಂದು ಬೇಡಿಕೊಂಡೆ. ನಂಬುತ್ತೀರೋ ಇಲ್ಲವೋ, ನನ್ನ ತಾಡ್ಪಾ ನನ್ನನ್ನು ವಿಮಾನದಲ್ಲಿ ಕರೆದೊಯ್ದಿತು. ಭಿಕ್ಳ್ಯಾ ಲಾಡ್ಕ್ಯಾ ಧಿಂಡಾ ವಿಮಾನದಲ್ಲಿ ಪ್ರಯಾಣಿಸಿದ. ನಾನು ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ನಾನು ಆಳಂಡಿ, ಜೆಜುರಿ, ಬಾರಾಮತಿ, ಸನ್ಯಾ (ಶನಿ) ಶಿಂಗನಾಪುರಕ್ಕೆ ಹೋಗಿದ್ದೆ... ಬಹಳ ದೂರ ಪ್ರಯಾಣಿಸಿದೆ. ಇಲ್ಲಿಂದ ಯಾರೂ 'ಗೋಮಾ' (ಗೋವಾ) ರಾಜಧಾನಿಯಾದ ಪಂಜಿಮ್ ಗೆ ಹೋಗಿಲ್ಲ. ಆದರೆ ನಾನು ಅಲ್ಲಿಗೆ ಹೋದೆ. ನಾನು ಅಲ್ಲಿಂದ ಒಂದು ಪ್ರಮಾಣಪತ್ರವನ್ನು ಪಡೆದಿದ್ದೇನೆ.
ಹಂಚಿಕೊಳ್ಳಲು ಅನೇಕ ವಿಷಯಗಳಿವೆ ಆದರೆ ನಾನು ಹಂಚಿಕೊಳ್ಳುವುದಿಲ್ಲ. ನನಗೀಗ 89 ವರ್ಷ. ನನ್ನೊಳಗೆ ಅನೇಕ ಕಥೆಗಳಿವೆ. ಆದರೆ ನಾನು ಅವುಗಳನ್ನು ಯಾರಿಗೂ ಹೇಳುವುದಿಲ್ಲ. ಅವುಗಳನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಅನೇಕ ವರದಿಗಾರರು ಮತ್ತು ಪತ್ರಕರ್ತರು ಬಂದು ನನ್ನ ಕಥೆಯನ್ನು ಬರೆಯುತ್ತಾರೆ. ಅವರು ಪುಸ್ತಕಗಳನ್ನು ಪ್ರಕಟಿಸುತ್ತಾರೆ ಮತ್ತು ಅವರು ನನ್ನನ್ನು ಪ್ರಸಿದ್ಧಗೊಳಿಸಿರುವುದಾಗಿ ಜಗತ್ತಿಗೆ ಹೇಳುತ್ತಾರೆ. ಅನೇಕ ಸಂಗೀತಗಾರರು ಬಂದು ನನ್ನ ಸಂಗೀತವನ್ನು ಕದಿಯಲು ಪ್ರಯತ್ನಿಸುತ್ತಾರೆ. ಆದ್ದರಿಂದ, ನಾನು ಎಲ್ಲರನ್ನೂ ಭೇಟಿಯಾಗುವುದಿಲ್ಲ. ನನ್ನನ್ನು ಭೇಟಿಯಾದ ನೀವು ಅದೃಷ್ಟವಂತರು.
ನನಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಿಕ್ಕಿತು. ಸಮಾರಂಭ ದೆಹಲಿಯಲ್ಲಿ ನಡೆಯಿತು. ಪ್ರಶಸ್ತಿಯನ್ನು ಸ್ವೀಕರಿಸಿದಾಗ, ನನ್ನ ಕಣ್ಣುಗಳು ತುಂಬಿದವು. ನನ್ನ ತಂದೆ ನನ್ನನ್ನು ಶಾಲೆಗೆ ಕಳುಹಿಸಿರಲಿಲ್ಲ. ಆ ಶಿಕ್ಷಣದಿಂದ ನನಗೆ ಕೆಲಸ ಸಿಗಬಹುದು ಅಥವಾ ಸಿಗದಿರಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ಆದರೆ ಅವರು 'ಈ ವಾದ್ಯವು ನಮ್ಮ ದೇವತೆ' ಎಂದು ಹೇಳಿದರು. ಇದು ನಿಜವಾಗಿಯೂ ಒಂದು ದೇವತೆ. ಅದು ನನಗೆ ಎಲ್ಲವನ್ನೂ ನೀಡಿತು. ಇದು ನನಗೆ ಮಾನವೀಯತೆಯನ್ನು ಕಲಿಸಿತು. ಪ್ರಪಂಚದಾದ್ಯಂತ ಜನರಿಗೆ ನನ್ನ ಹೆಸರು ತಿಳಿದಿದೆ. ನನ್ನ ತಾಡ್ಪಾವನ್ನು ಅಂಚೆ ಲಕೋಟೆಯ ಮೇಲೆ [ಅಂಚೆ ಚೀಟಿ] ಮುದ್ರಿಸಲಾಗಿದೆ. ನಿಮ್ಮ ಫೋನಿನಲ್ಲಿ ನನ್ನ ಹೆಸರಿನಲ್ಲಿ ಬಟನ್ ಒತ್ತಿದರೆ, ನೀವು ನನ್ನ ವೀಡಿಯೊವನ್ನು ನೋಡುತ್ತೀರಿ... ಇನ್ನೇನು ಬೇಕು? ಬಾವಿಯಲ್ಲಿರುವ ಕಪ್ಪೆಗೆ ಅದರ ಹೊರಗೆ ಏನಿದೆ ಎಂದು ತಿಳಿದಿರುವುದಿಲ್ಲ. ಆದರೆ ನಾನು ಆ ಬಾವಿಯಿಂದ ಹೊರಬಂದೆ... ಜಗತ್ತನ್ನು ನೋಡಿದೆ.
ಇಂದಿನ ಯುವಜನರು ತಾಡ್ಪಾ ರಾಗಕ್ಕೆ ಕುಣಿಯುವುದಿಲ್ಲ. ಅವರಿಗೆ ಡಿಜೆ ಬೇಕು. ಅದನ್ನು ಅವರು ಮಾಡಲಿ. ಆದರೆ ಒಂದು ವಿಷಯ ತಿಳಿಸಿ ನನಗೆ. ನಾವು ಬೆಳೆಯನ್ನು ಹೊಲದಿಂದ ತರುವಾಗ, ಗಾಂವ್ ದೇವಿಗೆ ನೈವೇದ್ಯ ಕೊಡಲು ಹೋಗುವಾಗ, ಅವಳ ಹೆಸರು ಕೂಗಿ ಪ್ರಾರ್ಥಿಸುವಾಗ ಡಿಜೆ ನುಡಿಸಲು ಸಾಧ್ಯವೆ? ಆ ಕ್ಷಣಗಳಲ್ಲಿ ತಾಡ್ಪಾ ಮಾತ್ರವೇ ಬೇಕಾಗುವುದು. ಬೇರೆ ಯಾವುದಕ್ಕೂ ಅಲ್ಲಿ ಬೆಲೆಯಿಲ್ಲ.
ಈ ದಾಖಲೀಕರಣದಲ್ಲಿ ಸಹಾಯ ಮಾಡಿದ್ದಕ್ಕಾಗಿ ಅರೋಹಣ್ ಸಂಸ್ಥೆಯ ಮಾಧುರಿ ಮುಕಾನೆ ಅವರಿಗೆ ಪರಿ ಧನ್ಯವಾದಗಳನ್ನು ಅರ್ಪಿಸುತ್ತದೆ.
ಸಂದರ್ಶನ, ಪ್ರತಿಲೇಖನ ಮತ್ತು ಇಂಗ್ಲಿಷ್ ಅನುವಾದ: ಮೇಧಾ ಕಾಳೆ
ಛಾಯಾಚಿತ್ರಗಳು ಮತ್ತು ವೀಡಿಯೊ: ಸಿದ್ಧಿತಾ ಸೋನಾವನೆ
ಈ ಲೇಖನವು ಪರಿಯ ಅಳಿವಿನಂಚಿನಲ್ಲಿರುವ ಭಾಷೆಗಳ ದಾಖಲಾತಿ ಯೋಜನೆಯ ಭಾಗವಾಗಿದೆ, ಇದು ದೇಶದ ದುರ್ಬಲ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ದಾಖಲಿಸುವ ಗುರಿಯನ್ನು ಹೊಂದಿದೆ.
ವಾರ್ಲಿ ಭಾರತದ ಗುಜರಾತ್, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಲ್ಲಿ ವಾಸಿಸುವ ಭಾರತದ ವಾರ್ಲಿ ಅಥವಾ ವರ್ಲಿ ಆದಿವಾಸಿಗಳು ಮಾತನಾಡುವ ಇಂಡೋ-ಆರ್ಯನ್ ಭಾಷೆಯಾಗಿದೆ. ಯುನೆಸ್ಕೋದ ಅಟ್ಲಾಸ್ ಆಫ್ ಲ್ಯಾಂಗ್ವೇಜಸ್ ವರ್ಲಿಯನ್ನು ಭಾರತದ ದುರ್ಬಲ ಭಾಷೆಗಳಲ್ಲಿ ಒಂದಾಗಿದೆ ಎಂದು ಪಟ್ಟಿ ಮಾಡಿದೆ.
ನಾವು ವರ್ಲಿ ಭಾಷೆಯನ್ನು ಮಹಾರಾಷ್ಟ್ರದಲ್ಲಿ ಮಾತನಾಡುವ ಭಾಷೆಯನ್ನಾಗಿ ದಾಖಲಿಸುವ ಗುರಿಯನ್ನು ಹೊಂದಿದ್ದೇವೆ.
ಅನುವಾದ: ಶಂಕರ. ಎನ್. ಕೆಂಚನೂರು