ನಾಗರಹಾವೊಂದು ಸಾಗುವಾನಿ (ತೇಗ) ಮರದ ಕೊಂಬೆಗೆ ಗಟ್ಟಿಯಾಗಿ ಸುತ್ತಿಕೊಂಡಿತ್ತು. ರಟ್ಟಿ ತೋಲಾ ಗ್ರಾಮದ ಜನರ ಹಲವು ಪ್ರಯತ್ನಗಳ ನಂತರ ಅದು ಅಲ್ಲಿ ಅಲುಗಾಡಲಿಲ್ಲ.

ಐದು ಗಂಟೆಗಳ ವ್ಯರ್ಥ ಪ್ರಯತ್ನದ ನಂತರ ಅಸಹಾಯಕರಾದ ಗ್ರಾಮಸ್ಥರು ಹತ್ತಿರದ ವಾಲ್ಮೀಕಿ ಹುಲಿ ಮೀಸಲು ಪ್ರದೇಶದಲ್ಲಿ ಕಾವಲುಗಾರರಾಗಿದ್ದ ಮುಂದ್ರಿಕಾ ಯಾದವ್‌ ಅವರ ಮೊರೆಹೋದರು. ಅವರು ಇದುವರೆಗೆ ಹುಲಿಗಳು, ಚಿರತೆಗಳು, ಖಡ್ಗಮೃಗಗಳು ಮತ್ತು ಹಾವುಗಳು ಸೇರಿದಂತೆ 200ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿದ್ದಾರೆ.

ಮುಂದ್ರಿಕಾ ಬಂದವರೇ ಹಾವನ್ನು ಕೆಳಗೆ ಇಳಿಸಲು ಪ್ರಯತ್ನಿಸಿದರು, ಮತ್ತು ಅವರು ಅದರಲ್ಲಿ ಯಶಸ್ವಿಯೂ ಆದರು. “ನಾನು ಅದರ ಬಾಯಿಗೆ ಬಿದಿರಿನ ಕಡ್ಡಿಯನ್ನಿಟ್ಟೆ ನಂತರ ಹಗ್ಗವನ್ನು ಬಿಗಿಯಾಗಿಸಿದೆ. ನಂತರ ಅದನ್ನು ಚೀಲದಲ್ಲಿ ಬಂಧಿಸಿ ಕಾಡಿನಲ್ಲಿ ಬಿಟ್ಟೆ” ಎನ್ನುತ್ತಾರೆ ಈ 42 ವರ್ಷದ ವನ್ಯಜೀವಿ ರಕ್ಷಕ. “ಇದಕ್ಕೆ ನನಗೆ ಹಿಡಿದಿದ್ದು ಕೇವಲ 20 – 25 ನಿಮಿಷ.”

PHOTO • Umesh Kumar Ray
PHOTO • Umesh Kumar Ray

ಎಡ: ಮುಂದ್ರಿಕಾ ಯಾದವ್ ವಾಲ್ಮೀಕಿ ಹುಲಿ ಮೀಸಲು ಪ್ರದೇಶದಲ್ಲಿ ಎಂಟು ವರ್ಷಗಳ ಕಾಲ ಅರಣ್ಯ ರಕ್ಷಕರಾಗಿ ಕೆಲಸ ಮಾಡಿದರು. ಬಲ: ಅವರು ತಾನು ರಕ್ಷಿಸಿದ ನಾಗರಹಾವಿನ ವೀಡಿಯೊವನ್ನು ತೋರಿಸುತ್ತಿದ್ದಾರೆ

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಹುಲಿ ಮೀಸಲು ಪ್ರದೇಶವು ಸುಮಾರು 900 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು 54 ಹುಲಿಗಳು ಮತ್ತು ಇತರ ವನ್ಯಜೀವಿಗಳಿಗೆ ನೆಲೆಯಾಗಿದೆ. "ಹಮ್ ಸ್ಪಾಟ್ ಪರ್ ಹೀ ತುರಂತ್ ಜುಗಾಡ್ ಬನಾ ಲೇತೇ ಹೈ [ನಾನು ಸ್ಥಳದಲ್ಲೇ ಏನಾದರೂ ಪರಿಹಾರವನ್ನು ಹುಡುಕಿಕೊಳ್ಳಬಲ್ಲೆ]" ಎಂದು ಮುಂದ್ರಿಕಾ ತನ್ನ ರಕ್ಷಣಾ ತಂತ್ರಗಳ ಬಗ್ಗೆ ಹೇಳುತ್ತಾರೆ.

ಯಾದವ ಸಮುದಾಯಕ್ಕೆ (ರಾಜ್ಯದಲ್ಲಿ ಹಿಂದುಳಿದ ವರ್ಗಗಳಡಿ ಪಟ್ಟಿ ಮಾಡಲಾಗಿದೆ) ಸೇರಿದವರಾದ ಮುಂದ್ರಿಕಾ ಕಾಡು ಮತ್ತು ಅಲ್ಲಿನ ಪ್ರಾಣಿಗಳ ನಿಕಟ ಸಂಪರ್ಕದಲ್ಲೇ ಬೆಳೆದವರು. “ಎಮ್ಮೆ ಮೇಯಿಸಲು ಕಾಡಿಗೆ ಹೋದ ಸಂದರ್ಭಗಳಲ್ಲಿ ಕೆಲವೊಮ್ಮೆ ಹಾವುಗಳನ್ನು ಹಿಡಿಯುತ್ತಿದ್ದೆ. ಆಗಿನಿಂದಲೇ ನಾನು ಕಾಡುಪ್ರಾಣಿಗಳ ಕುರಿತು ಪ್ರೀತಿ ಬೆಳೆಸಿಕೊಂಡಿದ್ದೆ. ಹೀಗೆ 20212ರಲ್ಲಿ ಅರಣ್ಯ ರಕ್ಷಕರ ನೇಮಕಾತಿಗೆಂದು ದೈಹಿಕ ಪರೀಕ್ಷೆ ನಡೆದಿತ್ತು. ಆ ಸಂದರ್ಭದಲ್ಲಿ ನಾನೂ ಅರ್ಜಿ ಸಲ್ಲಿಸಿ ಕೆಲಸಕ್ಕೆ ಸೇರಿದೆ” ಎಂದು ವಿಜಯಪುರ ಗ್ರಾಮದ ನಿವಾಸಿ ಹೇಳುತ್ತಾರೆ. ಅವರು ಇಲ್ಲಿ ತಮ್ಮ ಪತ್ನಿ ಮತ್ತು ಮಗಳೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.

“ಇಡೀ ರಕ್ಷಿತಾರಣ್ಯದ ನಕ್ಷೆ ನಮ್ಮ ಕಣ್ಣಿನಲ್ಲಿ ಅಚ್ಚಾಗಿದೆ. ನೀವು ನಮ್ಮನ್ನು ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟು ಕಾರಿನಲ್ಲಿ ಹೊರಟರೂ, ನಾವು ನಿಮಗಿಂತ ಮೊದಲು ಕಾಡಿನಿಂದಾಚೆ ಬರಬಲ್ಲೆವು” ಎನ್ನುತ್ತಾರೆ ಈ ವನರಕ್ಷಿ (ಫಾರೆಸ್ಟ್‌ ಗಾರ್ಡ್).‌

ಮುಂದಿನ ಎಂಟು ವರ್ಷಗಳ ಕಾಲ ಮುಂದ್ರಿಕಾ ಅರಣ್ಯ ರಕ್ಷಕರಾಗಿ ಕೆಲಸ ಮಾಡಿದರು. ತಿಂಗಳ ಸಂಬಳ ಬರುವುದು ವಾಡಿಕೆಯಂತೆ ಒಂದು ವರ್ಷಗಳ ತನಕವೂ ಹಿಡಿಯುತ್ತಿತ್ತಾದರೂ ಅವರು ಕೆಲಸ ಬಿಟ್ಟಿರಲಿಲ್ಲ. “ಕಾಡು ಮತ್ತು ಕಾಡುಪ್ರಾಣಿಗಳ ರಕ್ಷಣೆಯ ಕೆಲಸ ನನಗೆ ಬಹಳ ಇಷ್ಟದ ಕೆಲಸವಾಗಿತ್ತು” ಎಂದು ಅವರು ಪರಿಗೆ ತಿಳಿಸಿದರು.

PHOTO • Umesh Kumar Ray
PHOTO • Umesh Kumar Ray

ಎಡ: 2020ರಲ್ಲಿ, ಆಡಳಿತವು ಲಿಖಿತ ಪರೀಕ್ಷೆಗಳ ಮೂಲಕ ಅರಣ್ಯ ರಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿತು ಮತ್ತು ಹಿಂದಿನ ಕಾವಲುಗಾರರಿಗೆ ಇತರ ಉದ್ಯೋಗಗಳನ್ನು ನೀಡಲಾಯಿತು. ಮುಂದ್ರಿಕಾ ಈಗ ವಾಲ್ಮಿಕಿ ಹುಲಿ ಮೀಸಲು ಪ್ರದೇಶದ ವಾಹನಗಳನ್ನು ಓಡಿಸುತ್ತಾರೆ. ಬಲ: ಕಾಡಿನ ಆಸುಪಾಸಿನಲ್ಲೇ ಬೆಳೆದ ಮುಂದ್ರಿಕಾ ಅವರಿಗೆ ಕಾಡುಪ್ರಾಣಿಗಳ ಕುರಿತು ವಿಶೇಷ ಪ್ರೀತಿಯಿತ್ತು

ಬಿಹಾರ ಸರ್ಕಾರವು 2020ರಲ್ಲಿ ಮುಕ್ತ ನೇಮಕಾತಿಯ ಮೂಲಕ ಹೊಸ ಅರಣ್ಯ ರಕ್ಷಕರನ್ನು ನೇಮಿಸಿಕೊಂಡಿತು. ಯಾದವ್‌ ಅವರಂತಹ ಹಿಂದೆ ನೇಮಕಗೊಂಡಿದ್ದ ಗಾರ್ಡುಗಳಿಗೆ ಇತರ ಕೆಲಸಗಳನ್ನು ನೀಡಲಾಯಿತು. ಪ್ರಸ್ತುತ ಮುಂದ್ರಿಕಾ ವಿಟಿಆರ್‌ ಅರಣ್ಯದಲ್ಲಿ ವಾಹನ ಓಡಿಸುವ ಕೆಲಸ ಮಾಡುತ್ತಿದ್ದಾರೆ. “ನಮ್ಮನ್ನು ಕಡೆಗಣಿಸಲಾಗಿದೆ” ಎಂದು ಅವರು ತಮ್ಮ ಹೊಸ ಹುದ್ದೆಯ ಕುರಿತು ಅಸಮಾಧಾನದಿಂದ ಹೇಳುತ್ತಾರೆ. ವಯಸ್ಸಿನ ಕಾರಣದಿಂದಾಗಿ ಮುಂದ್ರಿಕಾ ಪರೀಕ್ಷೆಗೆ ಅನರ್ಹರಾಗಿದ್ದರು. ಜೊತೆಗೆ ಅವರು ಮೆಟ್ರಿಕ್ಯುಲೇಷನ್‌ ತನಕವಷ್ಟೇ ಓದಿದ್ದಾರೆ. ಈ ಓದು ಗಾರ್ಡ್‌ ಹುದ್ದೆಗೆ ಸಾಲುವುದಿಲ್ಲ.

ಅಪಾಯಕಾರಿ ಮತ್ತು ಗಂಭೀರ ಪರಿಸ್ಥಿತಿಗಳಲ್ಲಿ ಹೊಸ ಗಾರ್ಡುಗಳು ಮುಂದ್ರಿಕಾ ಅವರ ಬಳಿಗೇ ಬರುತ್ತಾರೆ. "ಪರೀಕ್ಷೆ ಬರೆದು ನೇಮಕಗೊಂಡ ಅರಣ್ಯ ರಕ್ಷಕರು ಪದವಿಯನ್ನು ಹೊಂದಿರಬಹುದು, ಆದರೆ ಅವರಿಗೆ ಪ್ರಾಯೋಗಿಕ ಜ್ಞಾನವಿಲ್ಲ" ಎಂದು ಅವರು ಹೇಳುತ್ತಾರೆ. “ನಾವು ಕಾಡಿನಲ್ಲಿ ಜನಿಸಿದವರು ಮತ್ತು ಕಾಡುಪ್ರಾಣಿಗಳೊಡನೆ ಬದುಕಿರುವ ಕಾರಣ ನಮಗೆ ಅವುಗಳ ರಕ್ಷಣೆಯೂ ಗೊತ್ತು.”

ಅನುವಾದ: ಶಂಕರ. ಎನ್. ಕೆಂಚನೂರು

Umesh Kumar Ray

اُمیش کمار رائے سال ۲۰۲۲ کے پاری فیلو ہیں۔ وہ بہار میں مقیم ایک آزاد صحافی ہیں اور حاشیہ کی برادریوں سے جڑے مسائل پر لکھتے ہیں۔

کے ذریعہ دیگر اسٹوریز Umesh Kumar Ray
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru