"ಶುರು ಶುರು ಮೇ ಏಕ್ ನಂಗ್ ಬನಾನೇ ಮೇ ಆಧಿ ಕಲಕ್ ಲಗತಿ ಥಿ ಮೇರಿ [ಮೊದಮೊದಲು ಒಂದು ಫಿಸ್ ತಯಾರಿಸಲು ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದೆ]." ಹಬ್ಬೆರಳಿನ ತುದಿಯಲ್ಲಿ ಇರುವ ಗಾಯವನ್ನು ಉಜ್ಜುತ್ತಾ ಜರಡಿ ತಯಾರಿಸುವ ಬಗ್ಗೆ ಮೊಹಮದ್ ಭಾಯ್ ಮಾತನಾಡುತ್ತಾರೆ. ಕೆಲಸ ಮಾಡುವಾಗ ಬೆರಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ, ಆದರೆ ಸುದೀರ್ಘ ಅನುಭವದ ಕಾರಣದಿಂದಾಗಿ ಅವರಿಗೆ ಈ ಕೆಲಸ ಸುಲಭವಾಗಿ ಹೋಗಿದೆ. ಅವರು ಗುಜರಾತ್ನ ಮುಸಲ್ಮಾನರು ಮಾತನಾಡುವ ಒಂದು ರೀತಿಯ ವಿಶಿಷ್ಟವಾದ ಹಿಂದಿಯಲ್ಲಿ ಮಾತನಾಡುತ್ತಾರೆ. ಇದರಲ್ಲಿ ಗುಜರಾತಿ ಪದಗಳು ಹೇರಳವಾಗಿ ಬರುತ್ತವೆ. “ಏಕ್ ಮಹಿನಾ ತಕ್ಲಿಫ್ ಪಡಿ ಮೇರೆ ಕೋ. ಅಬ್ ಏಕ್ ನಂಗ್ ಪಾಂಚ್ ನಿಮಿಷ ಮೇ ಬನ್ ಜಾತಾ ಹೈ [ಒಂದು ತಿಂಗಳು ನನಗೆ ಕಷ್ಟವಾಯಿತು, ಈಗ ನಾನು ವೇಗವಾಗಿ ಮಾಡುತ್ತೇನೆ. ಸುಮಾರು ಒಂದು ತಿಂಗಳು ಕಷ್ಟವಾಗಿತ್ತು, ಆದರೆ ಈಗ ನಾನು ಐದೇ ನಿಮಿಷದಲ್ಲಿ ಒಂದು ಪೀಸ್ ಮಾಡುತ್ತೇನೆ]," ಎನ್ನುತ್ತಾ ಅವರು ನಗುತ್ತಾರೆ.
ನಾವು ಅಹಮದಾಬಾದ್ನಲ್ಲಿರುವ 43 ವರ್ಷ ಪ್ರಾಯದ ಮೊಹಮದ್ ಚರ್ನಾವಾಲಾ ಮತ್ತು 76 ವರ್ಷದ ಅವರ ಅಮ್ಮಿ (ತಾಯಿ) ರುಕೈಯಾ ಮೌಜುಸೈನಿ ಅವರ ಕುತ್ಬಿ ಬಿಲ್ಡಿಂಗ್ನಲ್ಲಿರುವ ಮನೆಯ 10 X 10 ಕೋಣೆಯಲ್ಲಿ ಕುಳಿತಿದ್ದೇವೆ. ಅಹಮದಾಬಾದ್ನ ಕಲುಪುರ್ ನಿಲ್ದಾಣದ ಬಳಿ ಇರುವ ಮುಸ್ಲಿಮ್ ಸಮುದಾಯದ ಕಾರ್ಮಿಕರು ವಾಸಿಸುವ ದೌದಿ ವೋರಾದ ರೋಜಾ ಎಂಬ ಚಾಲ್ನಲ್ಲಿರುವ ಈ ಎರಡು ಅಂತಸ್ತಿನ ಕಟ್ಟಡದಲ್ಲಿರುವ 24 ಮನೆಗಳಲ್ಲಿ ಇವರದೂ ಒಂದು. ಹೊಸದಾಗಿ ಕಾಣುತ್ತಿರುವ ರೈಲು ನಿಲ್ದಾಣದ ಇನ್ನೊಂದು ಕಡೆಗೆ ಹೆಜ್ಜೆ ಹಾಕಿದರೆ, ನಿಮಗೆ ಈ ಹಳೆಯ ನಗರ ಸಿಗುತ್ತದೆ.
ಬೀದಿಗಳಲ್ಲಿ ನಡೆಯುತ್ತಾ, ತಿಂಡಿ ತಿನಿಸುಗಳ ಅಂಗಡಿಗಳು, ಬೀದಿ ಜಗಳ, ಗದ್ದಲ, ಗಾಳಿಯಲ್ಲಿ ಆಗಾಗ ತೇಲಿ ಬರುವ ಬೈಗುಳಗಳು, ನಿಧಾನವಾಗಿ ಸಾಗುತ್ತಿರುವ ಟ್ರಾಫಿಕ್ ನಡುವೆ ಬೀದಿಗಳಲ್ಲಿ ದಾರಿ ಮಾಡಿಕೊಂಡು ಸಾಗುವಾಗ ನಿಮಗೆ, ಅಡ್ಡ ರಸ್ತೆಗೆ ಹೋಗುವ, ಬಲಕ್ಕೆ ಸುತ್ತುವ, ಡೆಡ್ ಎಂಡ್ಗೆ ಹೋಗಲು ಎಡಕ್ಕೆ ತಿರುಗುವ, ಒಂದು ಅಂಕುಡೊಂಕಾದ, ಇನ್ನೊಂದು ನೇರವಾಗಿರುವ, ಮತ್ತೊಂದು ಬೇರೆ ರಸ್ತೆಯೊಂದಿಗೆ ಸೇರುವ ರಸ್ತೆಗಳ ಜಾಲವೊಂದು ಸಿಗುತ್ತದೆ. ಹೀಗೇ ಹೋದರೆ 110 ಕುಟುಂಬಗಳು ವಾಸಿಸುವ ದೌಡಿ ವೋರಾದ ರೋಜಾದಲ್ಲಿರುವ ವೋರಾ ಟ್ರಸ್ಟ್ಗೆ ಸೇರಿದ ಕುತ್ಬಿ ಬಿಲ್ಡಿಂಗ್ಗೆ ಬರುತ್ತೀರಿ.
ಮೊಹಮದ್ ಭಾಯ್ ವಾರಕ್ಕೆ ಮೂರು ದಿನಗಳಿಗೊಮ್ಮೆ ತಮ್ಮ ಮರದ ತಳ್ಳುಗಾಡಿಯೊಂದನ್ನು ತಳ್ಳುತ್ತಾ ಸುಮಾರು 30 ಕಿಲೋಮೀಟರ್ಗಳಷ್ಟು ಇಲ್ಲಿಂದ ನಡೆದುಕೊಂಡು ಹೋಗಿ ನಗರದ ತುಂಬೆಲ್ಲಾ ವ್ಯಾಪಾರ ಮಾಡುತ್ತಾರೆ. ಬೆಳಿಗ್ಗೆ ಆರು ಗಂಟೆಗೆ ಅವರು ಹೊರಡುತ್ತಾರೆ. "ಇಲ್ಲೆಲ್ಲಾ ಅವನ ತಂದೆ ಹೋಗುತ್ತಿದ್ದರು!" ಎಂದು ತನ್ನ ಗಂಡನನ್ನು ನೆನೆಸಿಕೊಂಡು ದುಪ್ಪಟ್ಟದಿಂದ ಮುಖ ಒರೆಸಿಕೊಳ್ಳುತ್ತಾ ರುಕೈಯಾ ಹೇಳುತ್ತಾರೆ. "ಅವರು ನದಿಯ ಆಚೆಗಿರುವ, ಸಾಬರಮತಿಯ ಇನ್ನೊಂದು ಬದಿಗೆ ಹೋಗಿ ರಾತ್ರಿ 9 ಇಲ್ಲವೇ 10 ಗಂಟೆಗೆ ತಡವಾಗಿ ಮನೆಗೆ ಬರುತ್ತಿದ್ದರು,” ಎನ್ನುತ್ತಾರೆ ಅವರು. ಅಬ್ಬಾ ಮೊಯಿಜುಸೈನಿ ಫೆಬ್ರವರಿ 2023 ರಲ್ಲಿ ತಮ್ಮ 79 ವರ್ಷ ಪ್ರಾಯದಲ್ಲಿ ಮರಣ ಹೊಂದಿದರು.
ಇಲ್ಲ, ಮೊಹಮದ್ ಭಾಯ್ ಈ ಕೆಲಸವನ್ನು ಕಲಿತದ್ದು ತಮ್ಮ ತಂದೆಯಿಂದಲ್ಲ. "ಹೋ ಗಯಿ ಹಿಮತ್ ತೊ ಕರ್ ಲಿಯಾ [ಕಲಿಯುವ ಧೈರ್ಯವಿತ್ತು, ಧೈರ್ಯ ಮಾಡಿಯೇಬಿಟ್ಟೆ]," ಎಂದು ಅವರು ಹೇಳುತ್ತಾರೆ. “ಅವರು ಮನೆಯಲ್ಲಿ [ಜರಡಿ] ಮಾಡುವುದನ್ನು ನಾನು ನೋಡುತ್ತಿದ್ದೆ. ಆದರೆ ಅವರು ಬದುಕಿದ್ದಾಗ ಅದರ ಒಂದೇ ಒಂದು ಪೀಸನ್ನು ನಾನು ಮುಟ್ಟಿರಲಿಲ್ಲ. ನಾನು ನೋಡಿಯೇ ಕಲಿತದ್ದು ಅಂದುಕೊಂಡಿದ್ದೇನೆ,” ಎಂದು ಮೊಹಮದ್ ನೆನಪಿಸಿಕೊಳ್ಳುತ್ತಾರೆ. ಅವರ ತಂದೆ ಅವರ ತಾಯಿ ಕಡೆಯ ಮಾವನ ಚಹಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಲ್ಲಿ ಜಗಳವಾಗಿ ಕೆಲಸ ಬಿಟ್ಟು ಜರಡಿ ತಯಾರಿಸುವ ದುಡಿಮೆ ಪ್ರಾರಂಭಿಸಿದರು. "ನಾವು ಸರಸ್ಪುರಕ್ಕೆ ಬಂದ ಮೇಲೆ, 1974ರಿಂದ ನನ್ನ ತಂದೆ ತಮ್ಮ ಗಾಡಿಯಲ್ಲಿ ಹೊರಗೆ ಹೋಗುತ್ತಿದ್ದರು," ಎನ್ನುವ ಮೊಹಮದ್ ಭಾಯ್, ಸಾಯುವವರೆಗೂ ತಮ್ಮ ತಂದೆ ಅದೇ ಕೆಲಸ ಮಾಡುತ್ತಿದ್ದಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ಈ ವೃತ್ತಿಗೆ ಮೊಹಮದ್ ಭಾಯ್ ಹೊಸಬರು. ತಮ್ಮ ತಂದೆ ತೀರಿಕೊಂಡ ಐದು ತಿಂಗಳ ನಂತರ ಕೆಲಸ ಪ್ರಾರಂಭಿಸಿದರು. ಅಲ್ಲದೇ, ವಾರದಲ್ಲಿ ಮೂರು ದಿನ ಮಾತ್ರ ಇದನ್ನು ಮಾಡುತ್ತಾರೆ. “ಉಳಿದ ದಿನಗಳಲ್ಲಿ ನಾನು ದೊಡ್ಡ ಯೂನಿಟ್ಗಳಲ್ಲಿ ಬಳಸುವ ಡೀಸೆಲ್, ಪೆಟ್ರೋಲ್, ಗ್ಯಾಸ್ಗಳ 200-250 ಕೆಜಿ ವಾಲ್ವ್ಗಳಿಗೆ ಪೇಂಟ್ ಮಾಡುತ್ತೇನೆ. ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ಈ ಕೆಲಸಕ್ಕೆ ಹೋಗುತ್ತೇನೆ. ಅರ್ಧ ಗಂಟೆ ಮಾತ್ರ ಊಟಕ್ಕೆ ಹೋಗುತ್ತೇನೆ. ಇದರಲ್ಲಿ ದಿನಕ್ಕೆ 400 ರೂಪಾಯಿ ಸಿಗುತ್ತದೆ. ಜರಡಿ ರಿಪೇರಿ ಕೆಲಸದಲ್ಲಿ ಅವರಿಗೆ ಹೆಚ್ಚು ಹಣ ಬರುವುದಿಲ್ಲ. “ಕೋಯಿ ದಿನ್ ಸೌ ಆಯೇ. ಕೋಯಿ ದಿನ್ ಪಂಚ್ಸೋ ಭಿ ಲೇ ಕೀ ಆಯೇ. ಕೋಯಿ ದಿನ್ ನಹೀ ಭಿ ಲಾಯೇ. ಕೋಯಿ ನಕ್ಕಿ ನಹಿ [ಕೆಲವು ದಿನ 100 ರೂಪಾಯಿ ಬರುತ್ತದೆ, ಒಂದೊಂದು ದಿನ 500 ರೂಪಾಯಿ ಕೂಡ ಸಿಗಬಹುದು, ಕೆಲವೊಂದು ದಿನ ಏನೂ ಇರುವುದಿಲ್ಲ. ಯಾವುದೂ ಸ್ಥಿರವಾಗಿಲ್ಲ]," ಎಂದು ಅವರು ಹೇಳುತ್ತಾರೆ.
ಹೀಗಿದ್ದರೂ ಇಡೀ ವಾರ ವಾಲ್ವ್ಗೆ ಬಣ್ಣ ಹಚ್ಚುವ ಕೆಲಸ ಏಕೆ ಮಾಡುವುದಿಲ್ಲ?
“ನೀವು ವ್ಯಾಪಾರ ಮಾಡಿದರೆ, ನಿಮಗೆ ಬೆಳೆಯಲು, ಪ್ರಗತಿ ಸಾಧಿಸಲು ಸಾಧ್ಯ. ಬೇರೆ ಕೆಲಸಗಳಲ್ಲಿ ನೀವು ಬೆಳಿಗ್ಗೆ ಹೋಗಿ ರಾತ್ರಿ ಬರಬೇಕು,” ಎಂದು ದಣಿದರೂ ಬರವಸೆಯಿಂದ ಹೇಳುತ್ತಾರೆ ಅವರು.
"ನಾನು 7ನೇ ತರಗತಿಯವರೆಗೆ ಓದಿದ್ದೇನೆ. ನನ್ನನ್ನು 8ನೇ ತರಗತಿಗೆ ಕೂಡ ಹಾಕಿದ್ದರು, ಆದರೆ ಆ ನಂತರ ಗಲಭೆ ಪ್ರಾರಂಭವಾಯಿತು. ನಾನು ಮತ್ತೆ ಶಾಲೆ ಕಡೆ ಮುಖ ಮಾಡಲಿಲ್ಲ. ಅಂದಿನಿಂದ ಕೆಲಸ ಮಾಡಲು ಆರಂಭಿಸಿದೆ. ಪ್ರೈಮಸ್ ಸ್ಟೌವ್ ರಿಪೇರಿ ಮಾಡುವ ಅಂಗಡಿಯಲ್ಲಿ ದಿನಕ್ಕೆ 5 ರೂಪಾಯಿಗೆ ಕೆಲಸ ಮಾಡಿದೆ. ಸೀಮೆಎಣ್ಣೆ ಪಂಪ್ಗಳು, ವೆಲ್ಡಿಂಗ್ ರಾಡ್ಗಳನ್ನು ಸಹ ಮಾಡಿದ್ದೇನೆ. ಹೀಗೆ ಅನೇಕ ಕೆಲಸಗಳನ್ನು ಮಾಡಿದ್ದೇನೆ,” ಎಂದು ಅವರು ಹೇಳುತ್ತಾರೆ. ಜರಡಿ ರಿಪೇರಿ ಮಾಡುವುದು ಮತ್ತು ತಯಾರಿಸುವುದು ಅವರು ಕೈಗೆತ್ತಿಕೊಂಡಿರುವ ಇತ್ತೀಚಿನ ಸಾಹಸ.
ಅಹಮದಾಬಾದ್ ಮತ್ತು ಬೇರೆ ನಗರಗಳಲ್ಲಿ ಜರಡಿ ರಿಪೇರಿ ಮಾಡುವ ಅನೇಕರಿದ್ದಾರೆ, ಆದರೆ ಮೊಹಮದ್ ಭಾಯಿಯಂತೆ ಮನೆ ಬಾಗಿಲಿಗೆ ಹೋಗಿ ರಿಪೇರಿ ಮಾಡುವವರು ಹೆಚ್ಚು ಜನ ಇಲ್ಲ. “ಹಿಂದೆ ನನ್ನ ತಂದೆ ಮಾತ್ರ ಮಾಡುತ್ತಿದ್ದರು, ಈಗ ನಾನು. ರಿಪೇರಿ ಸರ್ವಿಸ್ ಮಾಡುವ ತಳ್ಳುಗಾಡಿ ನಡೆಸುವ ಬೇರೆ ಯಾರೂ ನನಗೆ ಪರಿಚಯವಿಲ್ಲ. ಅಂತ ಯಾರ ಬಗ್ಗೆಯೂ ನಾನು ಕೇಳಿಲ್ಲ. ನೋಡಿಯೂ ಇಲ್ಲ. ನಾನೊಬ್ಬನೇ ಈ ಗಾಡಿಯಲ್ಲಿ ತಿರುಗಾಡುತ್ತಿದ್ದೇನೆ,” ಎಂದು ಅವರು ಹೇಳುತ್ತಾರೆ.
ಅವರ ತಳ್ಳುಗಾಡಿಯಲ್ಲಿ ಬೇರೆ ಬೇರೆ ಸಾಮರ್ಥ್ಯದ ದಪ್ಪದ ಕಬ್ಬಿಣದ ಬಲೆಗಳು, ಕೆಲವು ಹಳೆಯ ಜರಡಿಗಳು, ಒಂದು ಉಳಿ, ಕೆಲವು ಮೊಳೆಗಳು, ಇಕ್ಕಳ, ದೊಡ್ಡ ಜೋಡಿ ಕತ್ತರಿ, ಒಂದೆರಡು ಸುತ್ತಿಗೆಗಳು ಮತ್ತು ಸುಮಾರು ಮೂರು ಅಡಿ ಉದ್ದದ ರೈಲ್ವೆ ಹಳಿಯ ತುಂಡು ಇರುತ್ತದೆ. ಕೆಲವೊಮ್ಮೆ ಕುರ್ತಾ ಪೈಜಾಮಾ ತೊಟ್ಟು, ಒಮ್ಮೊಮ್ಮೆ ಪ್ಯಾಂಟ್ ಮತ್ತು ಶರ್ಟ್ನಲ್ಲಿ, ಹಳೆಯ ಚಪ್ಪಲಿ ಧರಿಸಿ, ಮುಖ ಒರೆಸಲು ಭುಜದ ಮೇಲೆ ಬಟ್ಟೆ ತುಂಡನ್ನು ಇಟ್ಟುಕೊಂಡು 100 ಕಿಲೋಗ್ರಾಂ ತೂಕದ ತಮ್ಮ ಗಾಡಿಯನ್ನು ನಗರದ ಬೀದಿಗಳಲ್ಲಿ ತಳ್ಳಿಕೊಂಡು ಹೋಗುತ್ತಾರೆ.
ಒಂದು ಜರಡಿ ಮಾಡಬೇಕಾದರೆ ಅನೇಕ ಬಾರಿ ಮಾರ್ಕೆಟ್ಗೆ ಹೋಗಬೇಕು. ಮೊಹಮದ್ ಭಾಯ್ ಮೊದಲು ಮಾರ್ಕೆಟ್ನಿಂದ ಟಿನ್ ಶೀಟ್ ಖರೀದಿಸುತ್ತಾರೆ, ನಂತರ ತಮಗೆ ಬೇಕಾದ ಉದ್ದ ಮತ್ತು ಅಗಲಕ್ಕೆ ಶೀಟನ್ನು ಕತ್ತರಿಸುತ್ತಾರೆ. ನಂತರ ಕತ್ತರಿಸಿದ ಶೀಟ್ಗಳನ್ನು ಮಡಚಲು ಮತ್ತು ಒತ್ತಲು ಬೇಕಾದಂತೆ ಫ್ಲಾಟ್ ಬಾರ್ಗಳನ್ನಾಗಿ ಮಾಡಲು ಮಾರ್ಕೆಟ್ನಲ್ಲಿರುವ ʼಪ್ರೆಸ್ʼಗೆ ತೆಗೆದುಕೊಂಡು ಹೋಗುತ್ತಾರೆ. ಇವರಿಗೆ 'ಪ್ರೆಸ್' ಅಂದರೆ ಕಬ್ಬಿಣದ ಶೀಟ್ಗಳನ್ನು ಕತ್ತರಿಸುವ, ಒತ್ತುವ ಅಂಗಡಿ.
ಮನೆಯಲ್ಲಿ ಅವರು ಆ ಬಾರ್ಗಳಿಗೆ ಎರಡು ಮೊಳೆಗಳನ್ನು ಹಾಕುತ್ತಾರೆ. ಆಮೇಲೆ ಮತ್ತೊಮ್ಮೆ ಮಾರ್ಕೆಟ್ಗೆ ಹೋಗುತ್ತಾರೆ. ಈ ಬಾರಿ ಮಾರ್ಕೆಟ್ನಿಂದ "ಕೋರ್-ಕಂಡೋರೊ" ತರುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರು ಜರಡಿಗೆ ಬೇಕಾದ ಫ್ರೇಮ್ ಮತ್ತು ಸ್ಕರ್ಟ್ ಅನ್ನು ಸಿದ್ಧಪಡಿಸುತ್ತಾರೆ. ಮನೆಗೆ ಬಂದು ತಾವು ನೇಯ್ದ ತಂತಿಯ ಜಾಲರಿ ಮತ್ತು ಮೊಳೆಗಳನ್ನು ಜರಡಿಯ ಫ್ರೇಮ್ಗೆ ಜೋಡಿಸುತ್ತಾರೆ.
“ನೀವು ಪಾಪ್ಕಾರ್ನ್, ಮಂಡಕ್ಕಿ, ಹುರಿದ ಬೇಳೆ ಮತ್ತು ಅಡಕೆ ಪುಡಿಯನ್ನು ಸೋಸಲು ಈ ದೊಡ್ಡ ಕಣ್ಣಿನ ಜಾಲರಿಯನ್ನು ಬಳಸಬೇಕು. ಈ ದೊಡ್ಡ ತೂತು ಇರುವ ಜರಡಿಯನ್ನು 'ನಂ.5’ ಎಂದು ಕರೆಯುತ್ತೇವೆ. ಉಳಿದೆಲ್ಲವೂ ಗೋಧಿ, ಅಕ್ಕಿ, ರಾಗಿ ಮತ್ತು ಬೇರೆ ಎಲ್ಲದಕ್ಕೂ ಬಳಸುವ ತುಂಬಾ ಮಾರಾಟವಾಗುವ ಐಟಂಗಳು,” ಎಂದು ಮೊಹಮದ್ ಭಾಯ್ ನನ್ನ ಮುಂದೆ ಇಟ್ಟಿದ್ದ ದೊಡ್ಡ ಜರಡಿಯನ್ನು ಹಿಡಿದುಕೊಂಡು ಹೇಳಿದರು. “ನಾನು ಹೊಸ ಜರಡಿಯನ್ನು 70 ರೂಪಾಯಿಗೆ ಮಾರುತ್ತೇನೆ, ಹಳೆಯದನ್ನು ನಲವತ್ತು ಇಲ್ಲವೇ ನಲವತ್ತೈದಕ್ಕೆ ರುಪಾಯಿಗೆ ರಿಪೇರಿ ಮಾಡಿಕೊಡುತ್ತೇನೆ. ಇವೆಲ್ಲಾ ಜಾಲರಿಯ ಗುಣಮಟ್ಟವನ್ನು ಅವಲಂಬಿಸಿವೆ,” ಎನ್ನುತ್ತಾರೆ ಅವರು.
ಜಾಲರಿಯ ಗಾತ್ರದ ಜೊತೆಗೆ ಅದರ ಗುಣಮಟ್ಟವೂ ತುಂಬಾ ಮುಖ್ಯ ಎನ್ನುವ ಮೊಹಮದ್ ಭಾಯ್, "ಜರಡಿಗಳು 10', 12', 13', 15' ಅಥವಾ 16' ವ್ಯಾಸ- ಹೀಗೆ ಬೇರೆ ಬೇರೆ ಗಾತ್ರದಲ್ಲಿ ಇರಬಹುದು. ಆದರೆ ಪ್ರತಿಯೊಂದರಲ್ಲೂ ಭಿನ್ನ ಗುಣಮಟ್ಟದ ಜಾಲರಿಗಳಿರುತ್ತವೆ,” ಎಂದು ವಿವರಿಸುತ್ತಾರೆ.
“ಒಂದು 30 ಮೀಟರ್ ರೋಲ್ನ ತಂತಿಯ ಜಾಲರಿಗೆ ಸುಮಾರು 4000 ರೂಪಾಯಿ. ಹೆಚ್ಚು ಮಾರಾಟವಾಗುವ, ಮಾಮೂಲಿ ಜರಡಿಗಳನ್ನು 10ರಿಂದ 40 ರುಪಾಯಿಗೆ ಮಾರುತ್ತೇನೆ. ನಂಬರ್ 12ಕ್ಕೆ ನಾನು 70 ಅಥವಾ 80 ರೂಪಾಯಿ ತೆಗೆದುಕೊಳ್ಳುತ್ತೇನೆ, ಅದೂ ಗ್ರಾಹಕರ ಮೇಲೆ ಅವಲಂಬಿತವಾಗಿದೆ. ನನಗೆ 90 – 100 ರುಪಾಯಿ ಕೊಡುವವರೂ ಇದ್ದಾರೆ,”
ಇವರು ಕೆಲವಾರು ತಿಂಗಳಿಗೊಮ್ಮೆ ಕಚ್ಚಾ ವಸ್ತುಗಳಿಗಾಗಿ 35,000 ರುಪಾಯಿ ಖರ್ಚುಮಾಡುತ್ತಾರೆ. ಅವರ ತಿಂಗಳ ಸಂಪಾದನೆ ಆರರಿಂದ ಏಳು ಸಾವಿರ ರುಪಾಯಿ. ಖರ್ಚು ಜಾಸ್ತಿಯಾಗುವುದರಿಂದಾಗಿ "ನಾವು ಕೇವಲ ಇಬ್ಬರೇ ಕೆಲಸಕ್ಕಿದ್ದೇವೆ ಮತ್ತು ಮನೆಗೆ ತಂದದ್ದನ್ನೆಲ್ಲಾ ನಾವು ಖರ್ಚು ಮಾಡುತ್ತೇವೆ," ಎಂದು ನಿಟ್ಟುಸಿರು ಬಿಡುತ್ತಾ ಹೇಳುತ್ತಾರೆ. ನಂತರ ಇದ್ದಕ್ಕಿದ್ದಂತೆ ಮುಗುಳ್ನಗುತ್ತಾ, “ನಾನು ಭಾನುವಾರದಂದು ಬೇರೆ ಎಲ್ಲಿಗೂ ಕೆಲಸಕ್ಕೆ ಹೋಗುವುದಿಲ್ಲ. ಆ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ,” ಎಂದು ಹೇಳುತ್ತಾರೆ.
ಅನುವಾದಕರು: ಚರಣ್ ಐವರ್ನಾಡು