ಬಂಜರು ಪ್ರಸ್ಥಭೂಮಿಯಲ್ಲಿರುವ ದರ್ಗಾವು ಮಳಗಾಂವ್ ನಿವಾಸಿಗಳಿಗೆ ಉತ್ತಮ ಸೇವೆ ಸಲ್ಲಿಸಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಈ ದರ್ಗಾ ಶತಮಾನಗಳಿಂದ ಅಸ್ತಿತ್ವದಲ್ಲಿದೆ ಮತ್ತು ಎಂದಿನಿಂದಲೂ ಆಶ್ರಯ ತಾಣವಾಗಿ ಉಳಿದಿದೆ.

ಈ ದರ್ಗಾಕ್ಕೆ ಒರಗಿದಂತೆ ನಿಂತಿರುವ ಮರದ ಕೆಳಗೆ ಶಾಲಾ ಮಕ್ಕಳು ತಮ್ಮ ಮನೆಕೆಲಸವನ್ನು ಮಾಡುತ್ತಾರೆ. ಸುಡುವ ಬೇಸಿಗೆಯಲ್ಲಿ ತಂಪಾದ ಗಾಳಿ ಬೀಸುವ ಏಕೈಕ ಸ್ಥಳವಾದ ದರ್ಗಾದ ಪ್ರವೇಶದ್ವಾರದಲ್ಲಿ ಯುವಕರು ಮತ್ತು ಮಹಿಳೆಯರು ಸ್ಪರ್ಧಾತ್ಮಕ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ; ಮಹತ್ವಾಕಾಂಕ್ಷಿ ಪೊಲೀಸರು ಸುತ್ತಮುತ್ತಲಿನ ತೆರೆದ ಜಾಗದಲ್ಲಿ ಕಠಿಣ ಫಿಟ್ನೆಸ್ ತರಬೇತಿ ತರಬೇತಿಗಳನ್ನು ನಡೆಸುತ್ತಾರೆ.

"ನನ್ನ ಅಜ್ಜನ ಬಳಿಯೂ ಅದಕ್ಕೆ ಸಂಬಂಧಿಸಿದ [ದರ್ಗಾ] ಕಥೆಗಳಿವೆ" ಎಂದು ಗ್ರಾಮದಲ್ಲಿ 15 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿರುವ 76 ವರ್ಷದ ರೈತ ವಿನಾಯಕ್ ಜಾಧವ್ ಹೇಳುತ್ತಾರೆ. "ಅದು ಎಷ್ಟು ಹಳೆಯದಿರಬಹುದು ಎಂದು ಊಹಿಸಿಕೊಳ್ಳಿ. ಹಿಂದೂಗಳು ಮತ್ತು ಮುಸ್ಲಿಮರು ಅದನ್ನು ಒಟ್ಟಿಗೆ ಉಳಿಸಿಕೊಂಡಿದ್ದಾರೆ. ಇದು ಶಾಂತಿಯುತ ಸಹಬಾಳ್ವೆಯ ಸಂಕೇತ.”

ಆದರೆ 2023ರ ಸೆಪ್ಟೆಂಬರ್ ತಿಂಗಳಿನಲ್ಲಇಲ್ಲಿ ವಿಷಯಗಳು ಬದಲಾದವು. ಮಳಗಾಂವ್ ಜನರ ಪಾಲಿಗೆ ಹೆಚ್ಚು ಪ್ರೀತಿಪಾತ್ರವಾದ ದರ್ಗಾ ಅಂದು ಹೊಸ ಅರ್ಥವನ್ನು ಪಡೆದುಕೊಂಡಿತು - ಸಣ್ಣ ಆದರೆ ಆಗ್ರಹಕಾರಿ ಯುವಕರ ಗುಂಪು ಇದನ್ನು ಅತಿಕ್ರಮಣ ಎಂದು ಹೇಳಿಕೊಂಡಿತು. ಹಿಂದುತ್ವವಾದಿ ಗುಂಪುಗಳ ಒಕ್ಕೂಟವು ಅವರನ್ನು ಇದಕ್ಕೆ ಪ್ರಚೋದಿಸಿತ್ತು.

ಮಳಗಾಂವ್ ಗ್ರಾಮದ 20-25 ವರ್ಷದೊಳಗಿನ ಈ ಹಿಂದೂ ನಿವಾಸಿಗಳು ಜಿಲ್ಲಾಡಳಿತಕ್ಕೆ ಪತ್ರ ಬರೆದು ಆ ಅಕ್ರಮ ಅತಿಕ್ರಮಣವನ್ನು ತೆಗೆದುಹಾಕುವಂತೆ ಒತ್ತಾಯಿಸಿದರು. ಅವರಲ್ಲಿ ಕೆಲವರು ಈಗಾಗಲೇ ಅದರ ಪಕ್ಕದ ನೀರಿನ ಟ್ಯಾಂಕ್ ಒಂದನ್ನು ನಾಶಪಡಿಸಿದ್ದರು. "ಮುಸ್ಲಿಂ ಸಮುದಾಯವು ತನ್ನ ಸುತ್ತಲಿನ ಸಾರ್ವಜನಿಕ ಭೂಮಿಯನ್ನು ಕಸಿದುಕೊಳ್ಳಲು ಬಯಸುತ್ತದೆ" ಎಂದು ಅವರ ಪತ್ರದಲ್ಲಿ ಬರೆಯಲಾಗಿತ್ತು. ಜೊತೆಗೆ "ಗ್ರಾಮ ಪಂಚಾಯಿತಿಯ ಇಚ್ಛೆಗೆ ವಿರುದ್ಧವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ" ಎಂದೂ ನಮೂದಿಸಲಾಗಿತ್ತು

PHOTO • Parth M.N.

ಮಳಗಾಂವ್ ಗ್ರಾಮದ ದರ್ಗಾದಲ್ಲಿ ತನ್ನ ಸ್ನೇಹಿತರೊಂದಿಗೆ ವಿನಾಯಕ್ ಜಾಧವ್ (ಗಾಂಧಿ ಟೋಪಿ ಧರಿಸಿರುವವರು). ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಈ ದರ್ಗಾ ಶತಮಾನಗಳಷ್ಟು ಹಳೆಯದು

ಆದರೆ, ದೇವಾಲಯವನ್ನು ನೆಲಸಮಗೊಳಿಸುವಂತೆ ಆಗ್ರಹ ಬರತೊಡಗಿದಂತೆ ಊರು ಒಟ್ಟಾಗಿ ನ್ಯಾಯದ ದಾರಿಯಲ್ಲಿ ಹೆಜ್ಜೆಯಿಟ್ಟಿತು. "1918ರ ನಕ್ಷೆಗಳಲ್ಲಿಯೂ ಈ ದರ್ಗಾದ ಉಲ್ಲೇಖವಿದೆ" ಎಂದು ಮಸುಕಾದ ಕಾಗದವನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತಾ ಜಾಧವ್ ಹೇಳುತ್ತಾರೆ. "ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಧಾರ್ಮಿಕ ಸ್ಥಳಗಳು ಇದ್ದವು. ನಾವು ಅವೆಲ್ಲವನ್ನೂ ಸಂರಕ್ಷಿಸಲು ಬಯಸುತ್ತೇವೆ. ನಮ್ಮ ಮಕ್ಕಳು ಶಾಂತಿಯುತ ವಾತಾವರಣದಲ್ಲಿ ಬೆಳೆಯಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳುತ್ತಾರೆ.

ಅವರು ಹೇಳುತ್ತಾರೆ: "ಧರ್ಮ-ಧರ್ಮ ಮಾಧೆ ಭಂದನ್ ಲಾನ್ ಪನ್ ಪುಧೆ ನಹೀ, ಮಾಗೆ ಜಾನರ್ [ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವುದರಿಂದ ನಾವು ಇನ್ನಷ್ಟು ಹಿಂದಕ್ಕೆ ಹೋಗುತ್ತೇವೆ]."

ದರ್ಗಾವನ್ನು ಕೆಡವುವಂತೆ ಹಿಂದುತ್ವ ಸಂಘಟನೆಗಳ ಸದಸ್ಯರು ಕರೆ ನೀಡಿದ ನಂತರ, ಎರಡೂ ಸಮುದಾಯಗಳ ಹಿರಿಯ ಸದಸ್ಯರು ಮಾಲ್ಗಾಂವ್‌ ಗ್ರಾಮದಲ್ಲಿ ಒಟ್ಟುಗೂಡಿ ಅದರ ವಿರುದ್ಧ ಪತ್ರವನ್ನು ಹೊರಡಿಸಿದರು. ಈ ಬೇಡಿಕೆಯು ಬಹುಸಂಖ್ಯಾತರ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಂದು ಆ ಪತ್ರಕ್ಕೆ ಜಾತಿ ಭೇದವಿಲ್ಲದೆ ಇನ್ನೂರು ಮುಸ್ಲಿಮರು ಮತ್ತು ಹಿಂದೂಗಳು ಸಹಿ ಹಾಕಿದರು. ಮತ್ತು ಆ ಮೂಲಕ ಅವರು ದರ್ಗಾವನ್ನು ಉಳಿಸುವಲ್ಲಿ ಯಶಸ್ವಿಯಾದರು – ಸದ್ಯದ ಮಟ್ಟಿಗೆ.

ಕಷ್ಟಪಟ್ಟು ಸಂಪಾದಿಸಿದ ಈ ಶಾಂತಿಯನ್ನು ಕಾಪಾಡಿಕೊಳ್ಳುವುದೇ ಪ್ರಸ್ತುತ ಊರಿನ ಜನರ ಪಾಲಿಗೆ ದೊಡ್ಡ ಸವಾಲಾಗಿದೆ.

*****

ವಿಭಜಕ ಶಕ್ತಿಗಳ ವಿರುದ್ಧ ಎದ್ದು ನಿಂತು ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಮಾರಕವನ್ನು ರಕ್ಷಿಸಿದ ಅಪರೂಪದ ಉದಾಹರಣೆಯಾಗಿ ಇಂದು ಮಾಲ್ಗಾಂವ್‌ ನಿಂತಿದೆ.

ಕಳೆದ ಒಂದೂವರೆ ವರ್ಷದಿಂದ ಮಹಾರಾಷ್ಟ್ರದಲ್ಲಿ ಮುಸ್ಲಿಂ ಪ್ರಾರ್ಥನಾ ಸ್ಥಳಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ, ಮತ್ತು ಅದಕ್ಕಿಂತ ಹೆಚ್ಚಾಗಿ ಈ ಪ್ರಕರಣಗಳ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ - ಬಹುತೇಕ ಪೊಲೀಸರ ನಿಷ್ಕ್ರಿಯತೆ ಮತ್ತು ಬಹುಸಂಖ್ಯಾತರ ಮೌನ ಇದಕ್ಕೆ ಕಾರಣ.

2019ರ ರಾಜ್ಯ ಚುನಾವಣೆಯ ನಂತರ ಎರಡೂವರೆ ವರ್ಷಗಳ ಕಾಲ, ಭಾರತದ ಶ್ರೀಮಂತ ರಾಜ್ಯವನ್ನು ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳ ಮೈತ್ರಿಕೂಟವು ಆಳಿತು, ಉದ್ಧವ್ ಠಾಕ್ರೆ ಆ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು.

ಆದರೆ, 2022ರ ಜೂನ್ ತಿಂಗಳಿನಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಶಿವಸೇನೆಯ 40 ಶಾಸಕರನ್ನು ಬೇಟೆಯಾಡಿ ಮೈತ್ರಿಯನ್ನು ಉರುಳಿಸುವ ಮೂಲಕ ಸರ್ಕಾರವನ್ನು ರಚಿಸಿತು. ಇದರ ನಂತರ ಮಹಾರಾಷ್ಟ್ರವು ಅಧಿಕಾರ ಬದಲಾವಣೆಯನ್ನು ಕಂಡಿತು. ಅಂದಿನಿಂದ, ತೀವ್ರಗಾಮಿ ಹಿಂದೂ ಗುಂಪುಗಳು ಒಗ್ಗೂಡಿ ರಾಜ್ಯದಾದ್ಯಂತ ಹತ್ತಾರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿವೆ, ಈ ಮೂಲಕ ಮುಸ್ಲಿಮರನ್ನು ನಿರ್ಮೂಲನೆ ಮಾಡಲು ಮತ್ತು ಅವರ ಮೇಲೆ ಆರ್ಥಿಕ ಬಹಿಷ್ಕಾರ ಹೇರಲು ಕರೆ ನೀಡಿವೆ. ಇದು ರಾಜ್ಯದ ವಾತಾವರಣವನ್ನು ಕೆಡಿಸುವ ಸಂಘಟಿತ ಪ್ರಯತ್ನವಾಗಿದೆ ಮತ್ತು ಮುಸ್ಲಿಮರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ಅದರ ಒಂದು ಭಾಗವಾಗಿದೆ.

PHOTO • Parth M.N.
PHOTO • Parth M.N.

ಎಡಕ್ಕೆ: ಶಾಲಾ ಮಕ್ಕಳು ದರ್ಗಾಕ್ಕೆ ಒರಗಿದಂತಿರುವ ಮರದ ಕೆಳಗೆ ತಮ್ಮ ಮನೆಕೆಲಸವನ್ನು ಮಾಡುತ್ತಾರೆ. ಯುವಕರು ಮತ್ತು ಯುವತಿಯರು ಪ್ರವೇಶದ್ವಾರದಲ್ಲಿ ಸ್ಪರ್ಧಾತ್ಮಕ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಬಲ: ಜಾಧವ್ ತನ್ನ ಸ್ಕೂಟಿಯಲ್ಲಿ ದರ್ಗಾದ ದಾರಿಯಲ್ಲಿ ಹೋಗುತ್ತಿರುವುದು. 'ಸ್ವಾತಂತ್ರ್ಯ ಪೂರ್ವದಿಂದಲೂ ಹಳ್ಳಿಯಲ್ಲಿ ಅನೇಕ ಧಾರ್ಮಿಕ ಸ್ಥಳಗಳು ಅಸ್ತಿತ್ವದಲ್ಲಿದ್ದವು. ನಾವು ಅವೆಲ್ಲವನ್ನೂ ಸಂರಕ್ಷಿಸಲು ಬಯಸುತ್ತೇವೆ' ಎಂದು ಅವರು ಹೇಳುತ್ತಾರೆ

ಸತಾರಾ ಮೂಲದ ಸಾಮಾಜಿಕ ಕಾರ್ಯಕರ್ತರಾದ ಮಿನಾಜ್ ಸಯ್ಯದ್, ಧ್ರುವೀಕರಣದ ಈ ಯೋಜನೆಯು ವರ್ಷಗಳಿಂದ ಕೆಲಸದಲ್ಲಿದೆ, ಆದರೆ ಅದರ ತೀವ್ರತೆ 2022ರಿಂದ ಹೆಚ್ಚಾಗಿದೆ ಎಂದು ಹೇಳುತ್ತಾರೆ. "ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ರಕ್ಷಿಸುವ ಮತ್ತು ನಿರ್ವಹಿಸುವ ದರ್ಗಾಗಳು ಅಥವಾ ಸಮಾಧಿಗಳಂತಹ ಸ್ಮಾರಕಗಳು ದಾಳಿಗೆ ಒಳಗಾಗುತ್ತಿವೆ" ಎಂದು ಅವರು ಹೇಳುತ್ತಾರೆ. "ಸೌಹಾರ್ದ ಸಂಸ್ಕೃತಿಯನ್ನು ನಾಶಪಡಿಸುವುದು ಕಾರ್ಯಸೂಚಿಯಾಗಿದೆ."

ಫೆಬ್ರವರಿ 2023ರಲ್ಲಿ, ತೀವ್ರಗಾಮಿ ಹಿಂದೂಗಳ ಗುಂಪು ಕೊಲ್ಹಾಪುರದ ವಿಶಾಲಗಡ್ ಪಟ್ಟಣದ ಹಜರತ್ ಪೀರ್ ಮಲಿಕ್ ರೆಹಾನ್ ಶಾ ಅವರ ದರ್ಗಾದ ಮೇಲೆ ರಾಕೆಟ್ ಉಡಾವಣೆ ಮಾಡಿತು. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿತ್ತು.

2023ರ ಸೆಪ್ಟೆಂಬರ್ ತಿಂಗಳಿನಲ್ಲಿ, ಬಿಜೆಪಿಯ ವಿಕ್ರಮ್ ಪಾವಸ್ಕರ್ ನೇತೃತ್ವದ ತೀವ್ರಗಾಮಿ ಗುಂಪಾದ ಹಿಂದೂ ಏಕ್ತಾದ ಸದಸ್ಯರು ಸತಾರಾದ ಪುಸೆಸಾವಲಿ ಗ್ರಾಮದ ಮಸೀದಿಯ ಮೇಲೆ ಕೊಲೆಗಡುಕ ದಾಳಿಯನ್ನು ಪ್ರಾರಂಭಿಸಿದರು. ಅದರೊಳಗೆ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಸುಮಾರು 10-12 ಮುಸ್ಲಿಮರ ಮೇಲೆ ಟೈಲ್ಸ್, ಕೋಲುಗಳು ಮತ್ತು ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಲಾಯಿತು, ಅವರಲ್ಲಿ ಒಬ್ಬರು ತೀವ್ರ ಗಾಯಗಳಿಂದಾಗಿ ಮೃತಪಟ್ಟರು. ಓದಿ: ಪುಸೇಸಾವಲಿ: ಬದುಕನ್ನು ನಾಶಗೊಳಿಸುತ್ತಿರುವ ನಕಲಿ ಚಿತ್ರಗಳು

2023ರ ಡಿಸೆಂಬರ್ ತಿಂಗಳಿನಲ್ಲಿ, ಕೋಮು ಸೌಹಾರ್ದತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಲೋಖಾ ಸಂಪರ್ಕ್ ಗಟ್ ಎಂಬ ಗುಂಪು ಒಂದು ಕಿರುಪುಸ್ತಕವನ್ನು ಪ್ರಕಟಿಸಿತು, ಅದು ಕೇವಲ ಸತಾರಾ ಜಿಲ್ಲೆಯೊಂದರಲ್ಲೇ ನಡೆದ ಮುಸ್ಲಿಮರ ಪೂಜಾ ಸ್ಥಳಗಳ ಮೇಲೆ ಇಂತಹ 13 ದಾಳಿಗಳನ್ನು ದಾಖಲಿಸಿದೆ. ದಾಳಿಯ ಸ್ವರೂಪವು ಸಮಾಧಿಯನ್ನು ನಾಶಪಡಿಸುವುದರಿಂದ ಹಿಡಿದು ಮಸೀದಿಯ ಮೇಲೆ ಕೇಸರಿ ಧ್ವಜವನ್ನು ಹಾರಿಸುವುದು, ಕೋಮು ಸಾಮರಸ್ಯವನ್ನು ಮತ್ತಷ್ಟು ಹದಗೆಡಿಸುವುದನ್ನು ಒಳಗೊಂಡಿತ್ತು.

ಕೇವಲ 2022ರಲ್ಲೇ ಮಹಾರಾಷ್ಟ್ರವು 8,218ಕ್ಕೂ ಹೆಚ್ಚು ಗಲಭೆ ಘಟನೆಗಳನ್ನು ದಾಖಲಿಸಿದೆ, ಇದರಲ್ಲಿ 9,500ಕ್ಕೂ ಹೆಚ್ಚು ನಾಗರಿಕರು ಬಾಧಿತರಾಗಿದ್ದಾರೆ ಎಂದು ಕಿರುಪುಸ್ತಕದಲ್ಲಿ ತಿಳಿಸಲಾಗಿದೆ. ಎಂದರೆ ಒಂದು ವರ್ಷಕ್ಕೆ ಪ್ರತಿದಿನ ಸರಾಸರಿ 23 ಗಲಭೆ ಘಟನೆಗಳು.

PHOTO • Parth M.N.
PHOTO • Parth M.N.

ಎಡ: ಸಲೋಖಾ ಸಂಪರ್ಕ್ ಗಟ್ ಪ್ರಕಟಿಸಿದ ಕಿರುಪುಸ್ತಕವು ಸತಾರಾ ಜಿಲ್ಲೆಯೊಂದರಲ್ಲೇ ಮುಸ್ಲಿಮರ ಪ್ರಾರ್ಥನಾ ಸ್ಥಳಗಳ ಮೇಲೆ 13 ದಾಳಿಗಳು ನಡೆದಿರುವುದಾಗಿ ದಾಖಲಿಸಿದೆ. ಕೇವಲ 2022ರಲ್ಲೇ ಮಹಾರಾಷ್ಟ್ರವು 8,218ಕ್ಕೂ ಹೆಚ್ಚು ಗಲಭೆ ಘಟನೆಗಳನ್ನು ದಾಖಲಿಸಿದೆ, ಇದರಲ್ಲಿ 9,500ಕ್ಕೂ ಹೆಚ್ಚು ನಾಗರಿಕರು ಬಾಧಿತರಾಗಿದ್ದಾರೆ ಎಂದು ಕಿರುಪುಸ್ತಕದಲ್ಲಿ ತಿಳಿಸಲಾಗಿದೆ.. ಬಲ: ಹಿಂದೂ ಮತ್ತು ಮುಸ್ಲಿಮರಿಂದ ನಿರ್ವಹಿಸಲ್ಪಡುತ್ತಿರುವ ಮಾಲ್ಗಾಂವ್‌ ಗ್ರಾಮದ ದರ್ಗಾ ಈಗ ಕೋಮು ಸೌಹಾರ್ದತೆಯ ಸಂಕೇತವಾಗಿ ನಿಂತಿದೆ

53 ವರ್ಷದ ಶಂಸುದ್ದೀನ್ ಸಯ್ಯದ್ 2023ರ ಜೂನ್ ತಿಂಗಳಿನ ಒಂದು ಬೆಳಿಗ್ಗೆ ಸತಾರಾ ಜಿಲ್ಲೆಯ ಕೊಂಡ್ವೆ ಗ್ರಾಮದಲ್ಲಿರುವ ತನ್ನ ಹಳ್ಳಿಯ ಮಸೀದಿಗೆ ಹೋದಾಗ, ಅಲ್ಲಿನ ದೃಶ್ಯ ಕಂಡು ಅವರಿಗೆ ಆಘಾತವಾಯಿತು. ಕಪ್ಪು ಬಣ್ಣದಲ್ಲಿ 'ಜೈ ಶ್ರೀ ರಾಮ್' ಎಂದು ಬರೆಯಲಾದ ಕೇಸರಿ ಧ್ವಜವು ಬಾಗಿದ ಮಿನಾರ್ ಮೇಲೆ ಪಟಪಟಿಸುತ್ತಿತ್ತು, ಇದು ಸಯ್ಯದ್ ಅವರನ್ನು ಭಯಭೀತರನ್ನಾಗಿ ಮಾಡಿತು. ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಂಡರು. ನಂತರ ಪೊಲೀಸರು ಬಂದು ಕಿರಿದಾದ ಓಣಿಯಲ್ಲಿ ನಿಂತು ಧ್ವಜವನ್ನು ಕೆಳಗಿಳಿಸುತ್ತಿರುವುದನ್ನು ಗಮನಿಸುತ್ತಿದ್ದರೂ, ಕಾನೂನು ಮತ್ತು ಸುವ್ಯವಸ್ಥೆ ಬಿಕ್ಕಟ್ಟಿನ ಕುರಿತು ಅವರೊಳಗೆ ಭಯ ತುಂಬಿಕೊಂಡಿತ್ತು.

"ಮುಸ್ಲಿಂ ಹುಡುಗನೊಬ್ಬ ಕೆಲವು ದಿನಗಳ ಹಿಂದೆ ಟಿಪ್ಪು ಸುಲ್ತಾನ್‌ ಕುರಿತಾದ ಸ್ಟೇಟಸ್ ಅಪ್ಲೋಡ್ ಮಾಡಿದ್ದ" ಎಂದು ಮಸೀದಿಯ ಟ್ರಸ್ಟಿಯಾಗಿರುವ ಸಯ್ಯದ್ ವಿವರಿಸಿದರು. "18ನೇ ಶತಮಾನದ ಮುಸ್ಲಿಂ ಆಡಳಿತಗಾರನನ್ನು ವೈಭವೀಕರಿಸುವುದು ಹಿಂದುತ್ವ ಗುಂಪುಗಳಿಗೆ ಇಷ್ಟವಾಗಲಿಲ್ಲ, ಹೀಗಾಗಿ ಅವರು ಹಳ್ಳಿಯ ಮಸೀದಿಯನ್ನು ಅಪವಿತ್ರಗೊಳಿಸಿ ಸೇಡು ತೀರಿಸಿಕೊಳ್ಳಲು ಬಯಸಿದ್ದರು" ಎಂದು ಅವರು ಹೇಳಿದರು.

ಅಂದು ಟಿಪ್ಪು ಸುಲ್ತಾನ್‌ ಚಿತ್ರವನ್ನು ಸ್ಟೇಟಸ್‌ ಹಾಕಿದ್ದ 20 ವರ್ಷದ ಯುವಕ ಸೊಹೈಲ್ ಪಠಾಣ್, ಅದನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಕ್ಷಣ ವಿಷಾದಿಸುತ್ತಾರೆ, “ನಾನು ಅದನ್ನು ಹಾಕಬಾರದಿತ್ತು” ಎನ್ನುವ ಯುವಕ ಒಂದು ಇನ್ಸ್ಟಾಗ್ರಾಮ್‌ ಸ್ಟೋರಿ ಹಾಕುವ ಮೂಲಕ ನಾನು ನನ್ನ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸಿದೆ ಎನ್ನುತ್ತಾರೆ.

ಅವರ ಪೋಸ್ಟ್ ವೈರಲ್ ಆದ ಕೆಲವೇ ಗಂಟೆಗಳ ನಂತರ, ತೀವ್ರಗಾಮಿ ಹಿಂದೂ ಗುಂಪು ಮಂದ ಬೆಳಕಿನ, ಒಂದು ಕೋಣೆಯ ಗುಡಿಸಲಿಗೆ ಬಂದು ಅವರ ಮುಖದ ಮೇಲೆಲ್ಲ ಹೊಡೆಯಿತು. "ನಾವು ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಏಕೆಂದರೆ ಅದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿತ್ತು" ಎಂದು ಸೊಹೈಲ್ ಹೇಳುತ್ತಾರೆ. "ಆದರೆ ಅದೊಂದು ಕೇವಲ ಇನ್ಸ್ಟಾಗ್ರಾಮ್ ಸ್ಟೋರಿ ಅಷ್ಟೇ ಆಗಿತ್ತು. ಒಟ್ಟಿನಲ್ಲಿ ಅವರಿಗೆ ಮುಸ್ಲಿಮರ ಮೇಲೆ ದಾಳಿ ಮಾಡಲು ಒಂದು ಕಾರಣ ಬೇಕು ಅಷ್ಟೇ.”

ಅದೇ ರಾತ್ರಿ ಅವರ ಕಪಾಳಕ್ಕೆ ಹೊಡೆಯಲಾಯಿತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಸೊಹೈಲ್ ವಿರುದ್ಧ ಪ್ರಕರಣ ದಾಖಲಿಸಿದರು. ಅವರು ಆ ರಾತ್ರಿಯನ್ನು ಪೊಲೀಸ್ ಠಾಣೆಯಲ್ಲಿ ಕಳೆಯಬೇಕಾಯಿತು, ಮತ್ತು ಪ್ರಸ್ತುತ ಪ್ರಕರಣದ ವಿಚಾರಣೆಯು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ, ಕೇಸಿನಲ್ಲಿ ಅವರು ಧಾರ್ಮಿಕ ದ್ವೇಷವನ್ನು ಹರಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅವರಿಗೆ ಕಪಾಳಕ್ಕೆ ಹೊಡೆದವರು ಮುಕ್ತವಾಗಿ ತಿರುಗಾಡುತ್ತಿದ್ದಾರೆ.

ಸೋಹೈಲ್ ಅವರ ತಾಯಿ ಶಹನಾಜ್, 46, ಅವರ ಕುಟುಂಬವು ತಲೆಮಾರುಗಳಿಂದ ಸತಾರಾದಲ್ಲಿ ವಾಸಿಸುತ್ತಿದೆ ಆದರೆ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಿಂದಾಗಿ ಈ ರೀತಿಯ ಹಗೆತನ ಅಥವಾ ಕಣ್ಗಾವಲು ಎಂದಿಗೂ ಎದುರಿಸಿರಲಿಲ್ಲ. ಅವರು ಹೇಳುತ್ತಾರೆ, “ನಾವು ಜಾತ್ಯತೀತ ಸಂವಿಧಾನವನ್ನು ನಂಬಿದ್ದರಿಂದ ನನ್ನ ಪೋಷಕರು ಮತ್ತು ಅವರ ಹಿಂದಿನವರು ವಿಭಜನೆಯ ಸಮಯದಲ್ಲಿ ಭಾರತದಲ್ಲಿ ಉಳಿಯಲು ನಿರ್ಧರಿಸಿದರು. “ಇದು ನನ್ನ ನೆಲ, ಇದು ನನ್ನ ಊರು, ಇದು ನನ್ನ ಮನೆ. ಆದರೂ ನನ್ನ ಮಕ್ಕಳು ಕೆಲಸಕ್ಕಾಗಿ ಹೊರಗೆ ಹೋದಾಗ ನನಗೆ ಭಯವಾಗುತ್ತದೆ.”

PHOTO • Parth M.N.

ಸತಾರಾದ ಕೊಂಡ್ವೆ ಗ್ರಾಮದ ನಿವಾಸಿ ಸೊಹೈಲ್ ಪಠಾಣ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಟಿಪ್ಪು ಸುಲ್ತಾನ್ ಕುರಿತು ಸ್ಟೇಟಸ್ ಅಪ್ಲೋಡ್ ಮಾಡಿದ್ದಾರೆ, ನಂತರ ಅವರ ಗ್ರಾಮದ ಮಸೀದಿಯನ್ನು ಧ್ವಂಸಗೊಳಿಸಲಾಯಿತು ಮತ್ತು ಅವರ ಮನೆ ಮೇಲೆ ದಾಳಿ ಮಾಡಲಾಗಿದೆ

ಸೊಹೈಲ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರ 24 ವರ್ಷದ ಸಹೋದರ ಅಫ್ತಾಬ್ ವೆಲ್ಡರ್. ತಿಂಗಳಿಗೆ ಸುಮಾರು 15,000 ರೂ. ಗಳಿಸುತ್ತಿರುವ ಇವರಿಬ್ಬರಿಂದಲೇ ಕುಟುಂಬ ನಡೆಯುತ್ತಿದೆ. ಸೊಹೈಲ್ ವಿರುದ್ಧದ ಕ್ಷುಲ್ಲಕ ಪ್ರಕರಣದಿಂದಾಗಿ ಅವರು ಜಾಮೀನು ಮತ್ತು ವಕೀಲರ ಶುಲ್ಕವೆಂದು ಎರಡು ತಿಂಗಳ ಆದಾಯವನ್ನು ಕಳೆದುಕೊಳ್ಳಬೇಕಾಯಿತು. "ನಾವು ಹೇಗೆ ಬದುಕುತ್ತಿದ್ದೇವೆ ಎಂಬುದನ್ನು ನೀವು ನೋಡಬಹುದು" ಎಂದು ಶಹನಾಜ್ ತಮ್ಮ ಸಣ್ಣ ಮನೆಯತ್ತ ತೋರಿಸುತ್ತಾ ಹೇಳುತ್ತಾರೆ, ಅಲ್ಲಿ ಅಫ್ತಾಬ್‌ನ ವೆಲ್ಡಿಂಗ್ ಯಂತ್ರವನ್ನು ಗೋಡೆಯ ಮೇಲೆ ಜೋಡಿಸಲಾಗಿದೆ ಮತ್ತು ಆ ಗೋಡೆಯ ಬಣ್ಣವು ಉದುರಿಹೋಗುತ್ತಿದೆ. ನ್ಯಾಯಾಲಯದ ಪ್ರಕರಣಗಳಿಗೆ ಹಣ ಖರ್ಚು ಮಾಡಲು ನಮಗೆ ಸಾಧ್ಯವಿಲ್ಲ. ಒಂದು ಒಳ್ಳೆಯ ವಿಷಯವೆಂದರೆ, ಗ್ರಾಮ ಶಾಂತಿ ಸಮಿತಿ ಮುಂದೆ ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿತು.”

71 ವರ್ಷದ ರೈತ ಮತ್ತು ಕೊಂಡ್ವೆಯ ಶಾಂತಿ ಸಮಿತಿಯ ಹಿರಿಯ ಸದಸ್ಯ ಮಧುಕರ್ ನಿಂಬಾಳ್ಕರ್ ಹೇಳುತ್ತಾರೆ, 2014ರಲ್ಲಿ ಸ್ಥಾಪನೆಯಾದ ನಂತರ ಸಮಿತಿಯು ಇದೇ ಮೊದಲ ಬಾರಿಗೆ ಮಧ್ಯಪ್ರವೇಶಿಸಬೇಕಾಯಿತು. ಕೇಸರಿ ಧ್ವಜವನ್ನು ಹಾರಿಸಿದ ಮಸೀದಿಯಲ್ಲಿ ನಾವು ಸಭೆ ನಡೆಸಿದೆವು ಎಂದು ಅವರು ಹೇಳುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ಎರಡೂ ಸಮುದಾಯಗಳು ನಿರ್ಧರಿಸಿದವು.

ನಿಂಬಾಳ್ಕರ್ ಅವರು ಮಸೀದಿಯಲ್ಲಿ ಸಭೆ ನಡೆಸುವುದರ ಹಿಂದೆ ಒಂದು ಕಾರಣವಿದೆ ಎಂದು ಹೇಳುತ್ತಾರೆ. ಅವರು ವಿವರಿಸುತ್ತಾರೆ, “ಇದರ ಮುಂಭಾಗದಲ್ಲಿರುವ ತೆರೆದ ಜಾಗವನ್ನು ಬಹಳ ಹಿಂದಿನಿಂದಲೂ ಹಿಂದೂ ವಿವಾಹಗಳಿಗೆ ಬಳಸಲಾಗುತ್ತಿದೆ. ಇಷ್ಟು ವರ್ಷಗಳಲ್ಲಿ ನಾವು ಹೇಗೆ ಬದುಕಿದ್ದೇವೆ ಎಂಬುದನ್ನು ಜನರಿಗೆ ನೆನಪಿಸುವುದು ಇದರ ಉದ್ದೇಶವಾಗಿತ್ತು.

*****

ಜನವರಿ 22, 2024ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ದೇವಾಲಯವನ್ನು ಉದ್ಘಾಟಿಸಲಾಯಿತು. ನವೆಂಬರ್ 2019ರಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ವಿವಾದಿತ ಭೂಮಿಯನ್ನು ಮಂದಿರ ನಿರ್ಮಾಣಕ್ಕಾಗಿ ಹಸ್ತಾಂತರಿಸುವಂತೆ ಸರ್ವಾನುಮತದ ಆದೇಶವನ್ನು ನೀಡಿತು. ನಾಲ್ಕು ದಶಕಗಳ ಹಿಂದೆ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿಯೇ ಇದನ್ನು ನಿರ್ಮಿಸಲಾಗಿದೆ, ಇದನ್ನು ವಿಶ್ವ ಹಿಂದೂ ಪರಿಷತ್ ನೇತೃತ್ವದ ಮೂಲಭೂತ ಹಿಂದೂ ಗುಂಪುಗಳು ಕೆಡವಿದ್ದವು.

ಬಾಬರಿ ಮಸೀದಿಯನ್ನು ಕೆಡವಿದ ದಿನದಿಂದ ಭಾರತದಲ್ಲಿ ಧ್ರುವೀಕರಣ ಹೆಚ್ಚಾಗತೊಡಗಿತು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬಾಬರಿ ಮಸೀದಿ ಧ್ವಂಸವನ್ನು ಅಸಾಂವಿಧಾನಿಕ ಎಂದು ಘೋಷಿಸಿದರೆ, ಮಂದಿರ ನಿರ್ಮಾಣಕ್ಕೆ ಭೂಮಿ ಒದಗಿಸುವ ಆದೇಶವು ಅಪರಾಧಿಗಳಿಗೆ ಬಹುಮಾನ ಮತ್ತು ಪ್ರೋತ್ಸಾಹ ನೀಡಿದೆ. ವೀಕ್ಷಕರು ಈ ನಿರ್ಧಾರವು ಉಗ್ರಗಾಮಿ ಗುಂಪುಗಳಿಗೆ ಮಾಧ್ಯಮದ ಕಣ್ಣುಗಳಿಂದ ದೂರವಿರುವ ದೂರದ ಹಳ್ಳಿಗಳಲ್ಲಿನ ಮುಸ್ಲಿಂ ಪೂಜಾ ಸ್ಥಳಗಳನ್ನು ಗುರಿಯಾಗಿಸಲು ಶಕ್ತಿಯನ್ನು ನೀಡಿದೆ ಎಂದು ನಂಬುತ್ತಾರೆ.

PHOTO • Parth M.N.
PHOTO • Parth M.N.

2023ರಲ್ಲಿ ಗುಂಪೊಂದು ದಾಳಿ ಮಾಡಿ ಗಾಯಗೊಂಡಿದ್ದ ತನ್ನ ಮಗನ ಚಿತ್ರವನ್ನು ಹಿಡಿದಿರುವ ನಸೀಮ್. ನಸೀಮ್ ತನ್ನ ಕುಟುಂಬದೊಂದಿಗೆ ವರ್ಧನ್‌ಗಢದಲ್ಲಿ ವಾಸಿಸುತ್ತಿದ್ದಾರೆ, ಇದು ಧಾರ್ಮಿಕ ಬಹುತ್ವದ ಶ್ರೀಮಂತ ಇತಿಹಾಸವನ್ನು ಹೊಂದಿದೆ

ಮಿನಾಜ್ ಸೈಯದ್ ಅವರು 1947ರ ಸ್ವಾತಂತ್ರ್ಯದ ಸಮಯದಲ್ಲಿ, ಧಾರ್ಮಿಕ ಸ್ಥಳಗಳ ಯಥಾಸ್ಥಿತಿಯನ್ನು ಎಲ್ಲಾ ಸಮುದಾಯಗಳಲ್ಲಿ ಸ್ವೀಕರಿಸಲಾಗಿತ್ತು ಎಂದು ಹೇಳುತ್ತಾರೆ. ಅವರು ಹೇಳುತ್ತಾರೆ, “ಸುಪ್ರೀಂ ಕೋರ್ಟ್‌ ತೀರ್ಪು ಆ ಪರಿಸ್ಥಿತಿಯನ್ನು ಬದಲಾಯಿಸಿತು. ಬಾಬರಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಕೊಟ್ಟ ತೀರ್ಪಿನಿಂದಾಗಿ ಹಿಂದೂ ಗುಂಪುಗಳು ಈಗ ಇತರ ಮಸೀದಿಗಳ ಹಿಂದೆ ಬೀಳುತ್ತಿವೆ” ಎಂದು ಅವರು ಹೇಳುತ್ತಾರೆ.

ಅವರ ಗ್ರಾಮ, ಜಿಲ್ಲೆ ಮತ್ತು ರಾಜ್ಯವು ಪ್ರತಿಕೂಲ ಸಮಯವನ್ನು ಎದುರಿಸುತ್ತಿರುವಾಗ ಸತಾರಾದ ವರ್ಧನ್‌ಗಢ ಗ್ರಾಮದ ಟೈಲರ್ ಹುಸೇನ್ ಶಿಕಲ್ಗರ್, 69, ಪೀಳಿಗೆಯ ವಿಭಜನೆಯತ್ತ ಗಮನಸೆಳೆಯುತ್ತಾರೆ. ಅವರು ಹೇಳುತ್ತಾರೆ, “ಯುವ ಪೀಳಿಗೆಯನ್ನು ಸಂಪೂರ್ಣವಾಗಿ ಬ್ರೈನ್ ವಾಶ್ ಮಾಡಲಾಗಿದೆ. ನನ್ನ ವಯಸ್ಸಿನವರು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಬಾಬರಿ ಮಸೀದಿ ಧ್ವಂಸದ ನಂತರದ ಧ್ರುವೀಕರಣವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂದು ನಾವು ಅನುಭವಿಸುವ ಒತ್ತಡಕ್ಕೆ ಹೋಲಿಸಿದರೆ ಅಂದಿನದು ಏನೂ ಅಲ್ಲ. ನಾನು 1992ರಲ್ಲಿ ಈ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದೆ. ಇಂದು ನಾನು ಎರಡನೇ ದರ್ಜೆಯ ಪ್ರಜೆಯಂತೆ ಅನಿಸುತ್ತಿದೆ.”

ಶಿಕಲ್ಗರ್ ಅವರ ಮಾತು ವಿಶೇಷವಾಗಿ ಕಟುವಾಗಿದೆ, ಏಕೆಂದರೆ ಅವರ ಗ್ರಾಮವು ವರ್ಷಗಳಿಂದ ಧಾರ್ಮಿಕ ಬಹುತ್ವಕ್ಕೆ ಹೆಸರುವಾಸಿಯಾಗಿದೆ. ವರ್ಧನ್‌ಗಡ್ ಕೋಟೆಯ ತಪ್ಪಲಿನಲ್ಲಿರುವ ಈ ಗ್ರಾಮವು ಮಹಾರಾಷ್ಟ್ರದಾದ್ಯಂತದ ಭಕ್ತರ ಯಾತ್ರಾ ಸ್ಥಳ. ಈ ಗ್ರಾಮವು ಐದು ಸಮಾಧಿಗಳು ಮತ್ತು ದೇವಾಲಯಗಳಿಂದ ಸುತ್ತುವರೆದಿದೆ, ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಪ್ರಾರ್ಥನೆ ಮಾಡುತ್ತಾರೆ. ಎರಡು ಸಮುದಾಯಗಳು ಈ ಸ್ಥಳವನ್ನು ಒಟ್ಟಿಗೆ ನಿರ್ವಹಿಸಿದ್ದರೆ ಅಥವಾ ಜುಲೈ 2023ರವರೆಗೆ ಇಲ್ಲಿ ಎಲ್ಲವೂ ಚೆನ್ನಾಗಿತ್ತು.

ಜೂನ್ 2023ರಲ್ಲಿ, "ಅಪರಿಚಿತ ನಿವಾಸಿಗಳು" ಪಿರ್ ದಾ-ಉಲ್ ಮಲಿಕ್ ಅವರ ಸಮಾಧಿಯನ್ನು ಕೆಡವಿದರು, ಅದನ್ನು ಮುಸ್ಲಿಮರು ನಿಯಮಿತವಾಗಿ ಪೂಜಿಸುತ್ತಿದ್ದರು, ವರ್ಧನ್‌ಗಡ್‌ನಲ್ಲಿ ಕೇವಲ ನಾಲ್ಕು ಸ್ಮಾರಕಗಳನ್ನು ಮಾತ್ರ ಉಳಿಸಿದರು. ಮುಂದಿನ ತಿಂಗಳು, ಅರಣ್ಯ ಇಲಾಖೆಯು ಸಮಾಧಿಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಿತು, ಇದು ಅಕ್ರಮ ನಿರ್ಮಾಣ ಎಂದು ಕರೆಯಿತು. ಐದರಲ್ಲಿ ಇದೊಂದೇ ನಿರ್ಮಾಣವನ್ನು ಏಕೆ ಕೆಡವಲಾಯಿತು ಎಂದು ಮುಸ್ಲಿಮರು ಆಶ್ಚರ್ಯ ಪಡುತ್ತಾರೆ.

PHOTO • Courtesy: Residents of Vardhangad

ವರ್ಧನ್‌ಗಡ್ ಸಮಾಧಿಯನ್ನು ಕೆಡವುವ ಮೊದಲು. ತಮ್ಮ ಸ್ಮಾರಕಗಳನ್ನು ಅತಿಕ್ರಮಣದ ಕಾರಣ ನೀಡಿ ಏಕೆ ಒಡೆಯಲಾಗುತ್ತಿದೆ ಎಂದು ಗ್ರಾಮದ ಮುಸ್ಲಿಂ ನಿವಾಸಿಗಳು ಕೇಳುತ್ತಾರೆ

"ಇದು ಹಳ್ಳಿಯ ಮುಸ್ಲಿಮರನ್ನು ಪ್ರಚೋದಿಸುವ ಪ್ರಯತ್ನವಾಗಿದೆ" ಎಂದು 21 ವರ್ಷದ ವಿದ್ಯಾರ್ಥಿ ಮತ್ತು ವರ್ಧನ್‌ಗಢ ನಿವಾಸಿ ಮೊಹಮ್ಮದ್ ಸಾದ್ ಹೇಳುತ್ತಾರೆ. “ಇದೇ ಸಮಯದಲ್ಲಿ ನನ್ನನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ ಕಾರಣಕ್ಕಾಗಿ ಗುರಿ ಮಾಡಲಾಗಿತ್ತು.”

ಸಾದ್ ಅವರ ಸಹೋದರರೊಬ್ಬರು ಇಲ್ಲಿಂದ ಕೇವಲ ಎರಡು ಗಂಟೆಗಳ ದೂರದ ಪುಣೆಯಲ್ಲಿ ವಾಸಿಸುತ್ತಿದ್ದಾರೆ. ಅವರು 17ನೇ ಶತಮಾನದ ಮೊಘಲ್ ಚಕ್ರವರ್ತಿ ಔರಂಗಜೇಬ್ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್‌ನಿಂದ ಮನನೊಂದ ಹಿಂದುತ್ವದ ಗುಂಪಿನ ಜನರು ಸಾದ್ ಅವರ ಮನೆ ಬಾಗಿಲಿಗೆ ಬಂದರು. ಅವರು ಅವರನ್ನು ಮನೆಯಿಂದ ಹೊರಗೆ ಎಳೆದೊಯ್ದರು, ಕೋಲುಗಳು ಮತ್ತು ಹಾಕಿ ಸ್ಟಿಕ್‌ಗಳಿಂದ ತೀವ್ರವಾಗಿ ಥಳಿಸಿದರು ಮತ್ತು ಹಾಗೆ ಮಾಡುವಾಗ ಅವರನ್ನು "ಔರಂಗಜೇಬ್ ಕಿ ಔಲಾದ್" ಎಂದು ಪದೇ ಪದೇ ಕರೆದರು.

“ಇದೆಲ್ಲ ತಡರಾತ್ರಿ ನಡೆದಿದೆ. ಆ ದಿನ ನಾನು ಪ್ರಾಣ ಕಳೆದುಕೊಳ್ಳುತ್ತಿದ್ದೆ” ಎಂದು ಸಾದ್ ಹೇಳುತ್ತಾರೆ. “ಅದೃಷ್ಟವಶಾತ್, ಪೊಲೀಸ್ ಕಾರು ಹಾದುಹೋಗುತ್ತಿತ್ತು. ಅವರು ಅದನ್ನು ನೋಡಿದಾಗ ಗುಂಪು ಓಡಿಹೋಯಿತು.”

ಮುಂದಿನ 15 ದಿನಗಳ ಕಾಲ ಸಾದ್ ಆಸ್ಪತ್ರೆಯಲ್ಲಿದ್ದರು. ತಲೆಗೆ ಗಾಯ, ಕಾಲು ಮುರಿದು, ಕೆನ್ನೆಯ ಮೂಳೆ ಮುರಿದಿತ್ತು. ನಂತರದ ದಿನಗಳಲ್ಲಿ ಅವರು ರಕ್ತ ವಾಂತಿ ಮಾಡುತ್ತಿದ್ದರು. ಮತ್ತು ಇಂದಿಗೂ ಅವರು ಏಕಾಂಗಿಯಾಗಿ ಪ್ರಯಾಣಿಸಲು ಕಷ್ಟಪಡುತ್ತಾರೆ. "ಅವರು ಮತ್ತೆ ನನ್ನ ಹಿಂದೆ ಬೀಳಬಹುದೆನ್ನು ಭಯ ಕಾಡುತ್ತಿದೆ" ಎಂದು ಅವರು ಹೇಳುತ್ತಾರೆ. "ಓದಿನ ಬಗ್ಗೆಯೂ ನಾನು ಗಮನ ಕೊಡುತ್ತಿಲ್ಲ."

ಸಾದ್ ಪ್ರಸ್ತುತ ಬಿಸಿಎಸ್ ಮಾಡುತ್ತಿದ್ದಾರೆ. ಅವರೊಬ್ಬ ಮೇಧಾವಿ ವಿದ್ಯಾರ್ಥಿ. 12ನೇ ತರಗತಿಯಲ್ಲಿ ಶೇ.93 ಅಂಕ ಪಡೆದಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಅವರ ಅಂಕಗಳು ಕಡಿಮೆಯಾಗಿವೆ. "ನಾನು ಆಸ್ಪತ್ರೆಗೆ ದಾಖಲಾದ ಮೂರು ದಿನಗಳ ನಂತರ, ನನ್ನ ಚಿಕ್ಕಪ್ಪ ಹೃದಯಾಘಾತದಿಂದ ಬಳಲಿ ನಿಧನರಾದರು" ಎಂದು ಅವರು ಹೇಳುತ್ತಾರೆ. "ಅವರು 75 ವರ್ಷ ವಯಸ್ಸಿನವರಾಗಿದ್ದರು ಆದರೆ ತುಂಬಾ ಶಕ್ತಿಯುತರಾಗಿದ್ದರು. ಅವರಿಗೆ ಯಾವುದೇ ಹೃದಯ ಸಮಸ್ಯೆ ಇರಲಿಲ್ಲ. ಒತ್ತಡದಿಂದಾಗಿ ಎಲ್ಲವೂ ಸಂಭವಿಸಿದೆ. ನಾನು ಅವರನ್ನು ಮರೆಯಲಾರೆ."

ಈ ಘಟನೆಯ ನಂತರ, ಮುಸ್ಲಿಮರು ಹಿಂದೂಗಳೊಂದಿಗೆ ಬೆರೆಯದೆ ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದು ಹಳ್ಳಿಯ ಪರಿಸ್ಥಿತಿಯನ್ನು ಬದಲಾಯಿಸಿದೆ. ಹಳೆಯ ಗೆಳೆತನಗಳು ಬಿಗಡಾಯಿಸಿವೆ; ಸಂಬಂಧಗಳು ಹಾಳಾಗಿವೆ.

PHOTO • Parth M.N.
PHOTO • Parth M.N.

ಎಡ: 'ಗ್ರಾಮದಲ್ಲಿರುವ ಮುಸ್ಲಿಮರನ್ನು ಕೆರಳಿಸುವ ಪ್ರಯತ್ನ ಇದಾಗಿತ್ತು' ಎಂದು ಮೊಹಮ್ಮದ್ ಸಾದ್ ಹೇಳುತ್ತಾರೆ. ಇವರು ವರ್ಧನಗಢ ನಿವಾಸಿಯಾಗಿದ್ದು, ಪ್ರಸ್ತುತ ಓದುತ್ತಿದ್ದಾರೆ. ಬಲ: ವರ್ಧನಗಢದ ಟೈಲರ್ ಹುಸೇನ್ ಶಿಕಲಗಾರ ಹೇಳುತ್ತಾರೆ, ʼಜೀವನವಿಡೀ ಜನರ ಬಟ್ಟೆ ಹೊಲಿದಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ನನ್ನ ಬಳಿಗೆ ಬರುವ ಹಿಂದೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಅವರಿಗೆ ಇತರರಿಂದ ಒತ್ತಡವಿದೆ ಎನ್ನುವುದು ನನಗೆ ತಿಳಿದಿದೆʼ

ಇದು ಕೇವಲ ಈ ಎರಡು ಘಟನೆಯ ವಿಷಯವಲ್ಲ ಎಂದು ಶಿಕಲ್ಗಾರ್ ಹೇಳುತ್ತಾರೆ. ಪರಕೀಯತೆಯು ದಿನನಿತ್ಯದ ವಿಷಯಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ವೃತ್ತಿಯಿಂದ ಟೈಲರ್‌ ಆಗಿರುವ ನಾನು ಜೀವನವಿಡೀ ಜನರ ಬಟ್ಟೆ ಹೊಲಿದಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ನನ್ನ ಬಳಿಗೆ ಬರುವ ಹಿಂದೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಅವರಿಗೆ ಇತರರಿಂದ ಒತ್ತಡವಿದೆ ಎನ್ನುವುದು ನನಗೆ ತಿಳಿದಿದೆ.”

ಜನರ ಭಾಷೆಯೂ ಬದಲಾಗಿದೆ ಎನ್ನುತ್ತಾರೆ. "ಕಳೆದ ಹಲವಾರು ವರ್ಷಗಳಲ್ಲಿ ಲ್ಯಾಂಡ್ಯಾ ಪದವನ್ನು ನಾನು ಕೇಳಿದ ನೆನಪಿಲ್ಲ" ಎಂದು ಅವರು ಹೇಳುತ್ತಾರೆ. ಈ ಪದವನ್ನು ಮುಸ್ಲಿಮರನ್ನು ಗೇಲಿ ಮಾಡಲು ಬಳಸಲಾಗುತ್ತದೆ. “ಆದರೆ ಇತ್ತೀಚಿನ ದಿನಗಳಲ್ಲಿ ಈ ಪದ ಪದ ಸಾಮಾನ್ಯವಾಗುತ್ತಿದೆ. ಹಿಂದೂ ಮತ್ತು ಮುಸ್ಲಿಮರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ.”

ವರ್ಧನಗಢವೂ ಇದಕ್ಕೆ ಹೊರತಾಗಿಲ್ಲ. ಸತಾರಾ ಜಿಲ್ಲೆಯ ಪಶ್ಚಿಮ ಮಹಾರಾಷ್ಟ್ರದಲ್ಲಿ ಇದು ಈಗ ಸಾಮಾನ್ಯವಾಗಿದೆ. ಧರ್ಮದ ಆಧಾರದ ಮೇಲೆ ಗ್ರಾಮಗಳನ್ನು ವಿಂಗಡಿಸಲಾಗಿದೆ. ಹಬ್ಬದ ರೂಪವೇ ಬದಲಾಗಿದೆ, ಮದುವೆಯ ಶಾಸ್ತ್ರಗಳು ಮೊದಲಿನಂತಿಲ್ಲ.

ವರ್ಧನಗಢದಲ್ಲಿ ಗಣೇಶೋತ್ಸವದ ಯೋಜನೆಯಲ್ಲಿ ಶಿಕಲಗಾರ ಮುಂಚೂಣಿಯಲ್ಲಿದ್ದರೆ, ಗ್ರಾಮದ ಹಿಂದೂ ನಿವಾಸಿಗಳು ಗ್ರಾಮದಲ್ಲಿ ಉರುಸ್‌ನಲ್ಲಿ ಮುಂಚೂಣಿಯಲ್ಲಿರುತ್ತಿದ್ದರು ಎಂದು ಶಿಕಲಗಾರ ಹೇಳುತ್ತಾರೆ. ಸೂಫಿ ಸಂತ ಮೊಹಿಯುದ್ದೀನ್ ಚಿಶ್ತಿ ಅವರ ನೆನಪಿಗಾಗಿ ಉರುಸ್ ಅನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ. ಹಳ್ಳಿಯ ಮದುವೆಗಳಲ್ಲೂ ಎಲ್ಲರೂ ಒಟ್ಟಿಗೆ ಇರುತ್ತಿದ್ದರು. "ಇದೀಗ ಎಲ್ಲಾ ಮುಗಿದು ಹೋಗಿದೆ" ಅವರು ಬೇಸರದೊಂದಿಗೆ ಹೇಳುತ್ತಾರೆ. “ಹಿಂದೆ ರಾಮನವಮಿ ಯಾತ್ರೆಗಳು ಮಸೀದಿಯ ಮುಂದೆ ಸಾಗುವಾಗ ಶಬ್ದವನ್ನು ಕಡಿಮೆ ಮಾಡುತ್ತಿತ್ತು. ಆದರೆ ಈಗ ಸ್ಪೀಕರ್‌ ಸೌಂಡ್‌ ಹೆಚ್ಚಿಸಲಾಗುತ್ತದೆ.”

ಇಷ್ಟೆಲ್ಲ ಆದರೂ ಉಭಯ ಸಮುದಾಯದ ಕೆಲವರು ಆಶಾಭಾವನೆ ಬಿಟ್ಟಿಲ್ಲ. ಎರಡು ಧರ್ಮಗಳ ನಡುವೆ ದಾಂಧಲೆ ನಡೆಸುವ ಈ ಗುಂಪುಗಳು ಗ್ರಾಮದ ಎಲ್ಲರ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ ಎನ್ನುತ್ತಾರೆ. “ಅವರು ದೊಡ್ಡ ದನಿಯಲ್ಲಿ ಮಾತನಾಡಲು ಪ್ರಾರಂಭಿಸಿದ್ದಾರೆ, ಅವರಿಗೆ ಸರ್ಕಾರದ ಬೆಂಬಲವಿದೆ. ಹಾಗಾಗಿ ಅವರು ದೊಡ್ಡ ಸಂಖ್ಯೆಯಲ್ಲಿ ಇರುವಂತೆ ಕಾಣುತ್ತದೆ ಎಂದು ಮಾಲ್ಗಾಂವ್‌ನ ಜಾಧವ್ ಹೇಳುತ್ತಾರೆ. “ಹೆಚ್ಚಿನ ಹಿಂದೂಗಳು ಇಂತಹ ಪರಿಸ್ಥಿತಿಯನ್ನು ಬಯಸುವುದಿಲ್ಲ. ಏಕೆಂದರೆ ಅವರಿಗೆ ಸೌಹಾರ್ದತೆ ಬೇಕು ಮತ್ತು ಈ ಪರಿಸ್ಥಿತಿ ಬದಲಾಗಬೇಕು.”

ಮಳ್ಗಾಂವ್ ಇಡೀ ಸತಾರಾಕ್ಕೆ ಮಾರ್ಗದರ್ಶಿಯಾಗಬಲ್ಲದು ಎಂದು ಜಾಧವ್ ಪ್ರಾಮಾಣಿಕವಾಗಿ ಭಾವಿಸುತ್ತಾರೆ. ಅಥವಾ ಇಡೀ ಮಹಾರಾಷ್ಟ್ರಕ್ಕೆ. "ಗ್ರಾಮದ ಹಿಂದೂಗಳು ದರ್ಗಾವನ್ನು ಉಳಿಸಲು ಮುಂದಾದಾಗ, ಮತಾಂಧ ಗುಂಪುಗಳು ಸ್ವಲ್ಪಮಟ್ಟಿಗೆ ಹಿಮ್ಮೆಟ್ಟಿದವು" ಎಂದು ಅವರು ಹೇಳುತ್ತಾರೆ. ‘‘ಧರ್ಮಗಳ ಬಹುತ್ವವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆಯೇ ಹೊರತು ಮುಸ್ಲಿಮರಲ್ಲ. ನಾವು ಮೌನವಾಗಿದ್ದಾಗ, ಸಾಮಾಜಿಕ ಆತಂಕವು ಬೆಳೆಯುತ್ತದೆ.” ಎಂದು ಅವರು ಒತ್ತಿ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

پارتھ ایم این ۲۰۱۷ کے پاری فیلو اور ایک آزاد صحافی ہیں جو مختلف نیوز ویب سائٹس کے لیے رپورٹنگ کرتے ہیں۔ انہیں کرکٹ اور سفر کرنا پسند ہے۔

کے ذریعہ دیگر اسٹوریز Parth M.N.
Editor : Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru