ಕಾರದಗಾ ಗ್ರಾಮದಲ್ಲಿ ಯಾರಿಗಾದರೂ ಮಗುವಾದರೆ ಮೊದಲು ಆ ಸುದ್ದಿಯನ್ನು ಸೋಮಕ್ಕ ಪೂಜಾರಿಯವರಿಗೆ ತಿಳಿಸಲಾಗುತ್ತದೆ. ಸೋಮಕ್ಕ ಕುರಿ ಉಣ್ಣೆ ಬಳಸಿ ಕಡಗ ನೇಯುವುದರಲ್ಲಿ ಪರಿಣಿತರು. ಊರಿನ 9,000 ಜನರಲ್ಲಿ ಕೆಲವೇ ಕೆಲವರಷ್ಟೇ ಈ ಉಣ್ಣೆಯ ಕಡಗವನ್ನು ನೇಯಬಲ್ಲರು. ಸ್ಥಳೀಯವಾಗಿ ಕಂಡಾ ಎಂದು ಕರೆಯಲ್ಪಡುವ ಈ ಕಡಗಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತು ಇದನ್ನು ನವಜಾತ ಶಿಶುಗಳ ಮಣಿಕಟ್ಟಿಗೆ ಕಟ್ಟಲಾಗುತ್ತದೆ.

“ಕುರಿಗಳು ಆಗಾಗ ಪ್ರತಿಕೂಲ ಹವಾಮಾನವನ್ನು ಸಹ ಲೆಕ್ಕಿಸದೆ ಹುಲ್ಲುಗಾವಲುಗಳನ್ನು ಹುಡುಕಿಕೊಂಡು ಹಳ್ಳಿ ಹಳ್ಳಿಗೂ ಹೋಗುತ್ತವೆ. ಅಲ್ಲಿ ಅವು ಹಲವು ಬಗೆಯ ಜನರನ್ನು ಭೇಟಿಯಾಗುತ್ತವೆ” ಎಂದು 50ರ ದಶಕದ ಕೊನೆಯಲ್ಲಿರುವ ಸೋಮಕ್ಕ ಹೇಳುತ್ತಾರೆ. ಕುರಿಗಳನ್ನು ಸಹಿಷ್ಣುತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಮತ್ತು ಅವುಗಳ ಕೂದಲಿನಿಂದ ತಯಾರಿಸಿದ ಕಂಡಾ ದುಷ್ಟತನವನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.

ಧಂಗರ್ ಸಮುದಾಯಕ್ಕೆ ಸೇರಿದ ಮಹಿಳೆಯರು ಸಾಂಪ್ರದಾಯಿಕವಾಗಿ ಈ ಬಳೆಗಳನ್ನು ತಯಾರಿಸುತ್ತಾರೆ. ಇಂದು, ಕಾರದಗಾದಲ್ಲಿ ಕೇವಲ ಎಂಟು ಧಂಗರ್ ಕುಟುಂಬಗಳು ಮಾತ್ರವೇ ಈ ಕಲೆಯನ್ನು ಅಭ್ಯಾಸ ಮಾಡುತ್ತಿವೆ ಎಂದು ಹೇಳಲಾಗುತ್ತದೆ. "ನಿಮ್ಮಾ ಗವಾಲ ಘಟ್ಲಾ ಆಹೆ [ನಾನು ಈ ಹಳ್ಳಿಯ ಅರ್ಧದಷ್ಟು ಮಕ್ಕಳ ಮಣಿಕಟ್ಟುಗಳನ್ನು ಈ ಈ ಕಡಗಗಳಿಂದ ಅಲಂಕರಿಸಿದ್ದೇನೆ]" ಎಂದು ಸೋಮಕ್ಕ ಮರಾಠಿಯಲ್ಲಿ ಹೇಳುತ್ತಾರೆ. ಕಾರದಗಾ ಗ್ರಾಮವು ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿದೆ, ಹೀಗಾಗಿ ಇಲ್ಲಿನ ಸೋಮಕ್ಕ ಅವರಂತಹ ಅನೇಕ ನಿವಾಸಿಗಳು ಕನ್ನಡ ಮತ್ತು ಮರಾಠಿ ಎರಡನ್ನೂ ಮಾತನಾಡಬಲ್ಲರು.

"ಎಲ್ಲಾ ಜಾತಿ ಮತ್ತು ಧರ್ಮದ ಜನರು ಕಂಡಾ ಕೇಳಿಕೊಂಡು ನಮ್ಮ ಬಳಿಗೆ ಬರುತ್ತಾರೆ" ಎಂದು ಸೋಮಕ್ಕ ಹೇಳುತ್ತಾರೆ.

ಬಾಲ್ಯದಲ್ಲಿ, ಸೋಮಕ್ಕ ತನ್ನ ತಾಯಿ ದಿವಂಗತ ಕಿಸ್ನಾಬಾಯಿ ಬಣಕಾರ್ ಅವರು ಕಾರದಗಾದಲ್ಲೇ ಅತ್ಯುತ್ತಮ ಕಂಡಾ ತಯಾರಿಸುವುದನ್ನು ನೋಡಿದ್ದರು. "ಕಂಡಾ ತಯಾರಿಸುವ ಮೊದಲು ಅವಳು ಕುರಿಯ ಉಣ್ಣೆಯ ಪ್ರತಿಯೊಂದು ಎಳೆಯನ್ನು (ಲೋಕರ್ ಎಂದೂ ಕರೆಯಲಾಗುತ್ತದೆ) ಏಕೆ ಪರೀಕ್ಷಿಸುತ್ತಾಳೆ ಎನ್ನುವ ಕುರಿತು ಕುತೂಹಲವಿತ್ತು" ಎಂದು ಅವರು ಹೇಳುತ್ತಾರೆ, ಅವರ ತಾಯಿ ಸುಲಭವಾಗಿ ಆಕಾರಕ್ಕೆ ತರಬಹುದು ಎನ್ನುವ ಕಾರಣಕ್ಕಾಗಿ ಉತ್ತಮ ಎಳೆಗಳನ್ನು ಬಳಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಕುರಿಯ ಮೊದಲ ಬಾರಿಯ ಉಣ್ಣೆಯನ್ನು ಕಡಗದ ಕಚ್ಚಾ ಆಕಾರವನ್ನು ಪಡೆಯಲು ಬಳಸಲಾಗುತ್ತದೆ. “ನೂರು ಕುರಿಗಳಲ್ಲಿ ಒಂದು ಕುರಿಯಲ್ಲಿ ಮಾತ್ರ ಸರಿಯಾದ ಉಣ್ಣೆಯ ಎಳೆ ಸಿಗುತ್ತದೆ.”

ಸೋಮಕ್ಕ ತನ್ನ ತಂದೆ ದಿವಂಗತ ಅಪ್ಪಾಜಿ ಬಣಕಾರ್ ಅವರಿಂದ ಕಂಡಾ ತಯಾರಿಸುವುದನ್ನು ಕಲಿತರು. ಆಗ ಅವರಿಗೆ 10 ವರ್ಷ ವಯಸ್ಸು. ಅವರಿಗೆ ಈ ಕಲೆಯನ್ನು ಕಲಿಯಲು ಎರಡು ತಿಂಗಳು ಬೇಕಾಯಿತು. ನಾಲ್ಕು ದಶಕಗಳ ನಂತರವೂ, ಸೋಮಕ್ಕ ಈ ಕಲೆಯನ್ನು ಅಭ್ಯಾಸ ಮಾಡುವುದನ್ನು ಮುಂದುವರಿಸಿದ್ದಾರೆ ಮತ್ತು ಪ್ರಸ್ತುತ ಅದರ ಜನಪ್ರಿಯತೆ ಕುಸಿಯುತ್ತಿರುವ ಬಗ್ಗೆ ಚಿಂತಿತರಾಗಿದ್ದಾರೆ: "ಈ ದಿನಗಳಲ್ಲಿ ಕುರುಬ ಯುವಕರು ಕುರಿಗಳನ್ನು ಮೇಯಿಸುತ್ತಿಲ್ಲ. ಇನ್ನು ಕುರಿಯ ಉಣ್ಣೆಯ ಕಲೆಗಳ ಬಗ್ಗೆ ಏನು ತಿಳಿದಿರಲು ಸಾಧ್ಯ?"

PHOTO • Sanket Jain
PHOTO • Sanket Jain

ಎಡಕ್ಕೆ : ಕಾರದಗಾ ಗ್ರಾಮದ ಸೋಮಕ್ಕ ಮಗುವಿನ ಮಣಿಕಟ್ಟಿಗೆ ಕಂ ಡಾ ತೊಡಿಸುತ್ತಿರುವುದು . ಬಲ : ಕುರಿಯ ಉಣ್ಣೆಯ ನ್ನು ಕತ್ತರಿಸಲು ಬಳಸುವ ಲೋಹದ ಕತ್ತರಿ - ಕಥರ್ಭುನಿ

PHOTO • Sanket Jain

ಸೋಮಕ್ಕ ಒಂದು ಜೋಡಿ ಕಂ ಡಾ ತೋರಿಸು ತ್ತಿದ್ದಾರೆ. ಇದು ದೃಷ್ಟಿ ನಿವಾರಿಸುತ್ತದೆ ಎನ್ನುವ ನಂಬಿಕೆಯಿದೆ

ಸೋಮಕ್ಕ ವಿವರಿಸುತ್ತಾರೆ, "ಒಂದು ಕುರಿ ಸಾಮಾನ್ಯವಾಗಿ ಒಂದು ಕಟಾವಿನಲ್ಲಿ 1-2 ಕಿಲೋಗಳಷ್ಟು ಲೋಕಾರವನ್ನು ನೀಡುತ್ತದೆ." ಅವರ ಕುಟುಂಬವು ಕುರಿಗಳನ್ನು ಹೊಂದಿದ್ದು,ಗಂಡಸರು ವರ್ಷಕ್ಕೆ ಎರಡು ಬಾರಿ ಉಣ್ಣೆಯನ್ನು ಕತ್ತರಿಸುತ್ತಾರೆ, ಸಾಮಾನ್ಯವಾಗಿ ದೀಪಾವಳಿ ಮತ್ತು ಬೆಂದೂರ್ (ಜೂನ್ ಮತ್ತು ಆಗಸ್ಟ್ ನಡುವೆ ನಡೆಯುವ ಎತ್ತುಗಳ ಆಚರಣೆಯ ಹಬ್ಬ). ಕಥರ್ಭುನಿ, ಅಥವಾ ಸಾಂಪ್ರದಾಯಿಕ ಕತ್ತರಿಯನ್ನು ಬಳಸಿ ಉಣ್ಣೆಯನ್ನು ಕತ್ತರಿಸಲಾಗುತ್ತದೆ. ಒಂದು ಕುರಿಯ ಉಣ್ಣೆಯನ್ನು ಕತ್ತರಿಸಲು ಸುಮಾರು 10 ನಿಮಿಷ ಬೇಕಾಗುತ್ತದೆ ಮತ್ತು ಸಾಮಾನ್ಯವಾಗಿ ಈ ಕೆಲಸವನ್ನು ಬೆಳಗ್ಗೆ ಮಾಡಲಾಗುತ್ತದೆ. ಉಣ್ಣೆಯನ್ನು ಕತ್ತರಿಸಿದ ಸ್ಥಳದಲ್ಲಿಯೇ ಪ್ರತಿ ಎಳೆಯ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಒಂದು ಕಂಡಾ ತಯಾರಿಸಲು ಸೋಮಕ್ಕನಿಗೆ 10 ನಿಮಿಷ ಬೇಕಾಗುತ್ತದೆ. ಸೋಮಕ್ಕ ಈಗ ಬಳಸುತ್ತಿರುವ ಲೋಕರ್ ಅನ್ನು 2023ರ ದೀಪಾವಳಿಯ ಸಮಯದಲ್ಲಿ ಕತ್ತರಿಸಲಾಯಿತು - "ನಾನು ಅದನ್ನು ನವಜಾತ ಶಿಶುಗಳಿಗೆಂದು ಸುರಕ್ಷಿತವಾಗಿ ಇರಿಸಿದ್ದೇನೆ" ಎಂದು ಅವರು ಹೇಳುತ್ತಾರೆ.

ಕೂದಲನ್ನು ಆಕಾರಗೊಳಿಸಲು ಪ್ರಾರಂಭಿಸುವ ಮೊದಲು, ಸೋಮಕ್ಕ ಅದರಲ್ಲಿರುವ ಧೂಳು ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕುತ್ತಾರೆ. ನಂತರ ಅದನ್ನು ನೇರವಾಗಿ ಎಳೆದು, ಎಳೆಗಳಿಗೆ ವೃತ್ತಾಕಾರದ ಆಕಾರವನ್ನು ನೀಡುತ್ತಾರೆ. ನವಜಾತ ಶಿಶುವಿನ ಮಣಿಕಟ್ಟಿಗೆ ಅನುಗುಣವಾಗಿ ಕಂಡಾ ಗಾತ್ರವನ್ನು ಅವರು ನಿರ್ಧರಿಸುತ್ತಾರೆ. ವೃತ್ತಾಕಾರದ ರಚನೆ ಸಿದ್ಧವಾದ ನಂತರ, ಅವರು ಅದನ್ನು ತನ್ನ ಅಂಗೈಗಳ ನಡುವೆ ಉಜ್ಜುತ್ತಾರೆ. ಘರ್ಷಣೆಯು ಅದನ್ನು ಗಟ್ಟಿಯಾಗಿ ಜೋಡಿಸುತ್ತದೆ.

ಸೋಮಕ್ಕ ಈ ವೃತ್ತಾಕಾರದ ಆಕಾರವನ್ನು ಪ್ರತಿ ಕೆಲವು ಸೆಕೆಂಡುಗಳಿಗೊಮ್ಮೆ ನೀರಿನಲ್ಲಿ ಮುಳುಗಿಸುತ್ತಾರೆ. "ನೀವು ಹೆಚ್ಚು ನೀರನ್ನು ಸೇರಿಸಿದಷ್ಟೂ ಅದರ ಆಕಾರ ಬಲಗೊಳ್ಳುತ್ತದೆ" ಎಂದು ಅವರು ಎಳೆಗಳನ್ನು ಕೌಶಲದಿಂದ ಎಳೆಯುತ್ತಾ ಮತ್ತು ಆಕಾರವನ್ನು ತಮ್ಮ ಅಂಗೈಗಳ ನಡುವೆ ಉಜ್ಜುತ್ತಾ ಹೇಳುತ್ತಾರೆ.

"1-3 ವರ್ಷದೊಳಗಿನ ಮಕ್ಕಳು ಈ ಕಡಗವನ್ನು ಧರಿಸುತ್ತಾರೆ" ಎಂದು ಅವರು ಹೇಳುತ್ತಾರೆ, ಒಂದು ಜೋಡಿ ಕಂಡಾ ಕನಿಷ್ಠ ಮೂರು ವರ್ಷಗಳವರೆಗೆ ಬಾಳಿಕೆ ಬರುರುತ್ತದೆ. ಧಂಗರ್‌ ಸಮುದಾಯವು ಈ ಕಡಗಗಳನ್ನು ತಯಾರಿಸುವುದರ ಜೊತೆಗೆ ಕುರಿ ಸಾಕಣೆ ಅಥವಾ ಕೃಷಿಯನ್ನೂ ಮಾಡುತ್ತಾರೆ. ಧಂಗರ್ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದಡಿಯಲ್ಲಿ ಮತ್ತು ಕರ್ನಾಟಕದಲ್ಲಿ ಇತರ ಹಿಂದುಳಿದ ವರ್ಗಗಳಡಿಯಲ್ಲಿ ಪಟ್ಟಿ ಮಾಡಲಾಗಿದೆ.

PHOTO • Sanket Jain
PHOTO • Sanket Jain

ಸೋಮಕ್ಕ ಸ್ವಚ್ಛಗೊಳಿಸಿದ ಉಣ್ಣೆಗೆ ಆಕಾರ ನೀಡಲು ಅದನ್ನು ತಮ್ಮ ಅಂಗೈಗಳ ನಡುವೆ ಉಜ್ಜುತ್ತಾರೆ

PHOTO • Sanket Jain
PHOTO • Sanket Jain

ವೃತ್ತಾಕಾರದ ಕಂಡಾವನ್ನು ಬಲಪಡಿಸಲು ಅದನ್ನು ನೀರಿನಲ್ಲಿ ಮುಳುಗಿಸಿ ನಂತರ ಹೆಚ್ಚುವರಿ ನೀರನ್ನು ಹಿಂಡಿ ತೆಗೆಯುತ್ತಾರೆ

ಸೋಮಕ್ಕನವರ ಪತಿ ಬಾಲು ಪೂಜಾರಿ 15ನೇ ವಯಸ್ಸಿನಲ್ಲಿ ಕುರಿ ಕಾಯುವ ಕೆಲಸ ಮಾಡಲು ಆರಂಭಿಸಿದರು. ಈಗ 62 ವರ್ಷದ ಅವರು ವಯಸ್ಸಿನ ಕಾರಣದಿಂದಾಗಿ ಜಾನುವಾರುಗಳನ್ನು ಮೇಯಿಸುವುದನ್ನು ನಿಲ್ಲಿಸಿದ್ದಾರೆ. ಈ ದಿನಗಳಲ್ಲಿ ಅವರು ರೈತನಾಗಿ ದುಡಿಯುತ್ತಿದ್ದಾರೆ. ಅವರು ಹಳ್ಳಿಯಲ್ಲಿನ ತಮ್ಮ ಎರಡು ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯುತ್ತಾರೆ.

ಸೋಮಕ್ಕ ಅವರ ಹಿರಿಯ ಮಗ 34 ವರ್ಷದ ಮಾಲು ಪೂಜಾರಿ ಜಾನುವಾರು ಮೇಯಿಸುವ ಕೆಲಸವನ್ನು ವಹಿಸಿಕೊಂಡಿದ್ದಾರೆ. ತನ್ನ ಮಗ 50ಕ್ಕಿಂತಲೂ ಕಡಿಮೆ ಸಂಖ್ಯೆಯ ಕುರಿ ಮತ್ತು ಮೇಕೆಗಳನ್ನು ಮೇಯಿಸುತ್ತಾನೆ ಎಂದು ಬಾಲು ಹೇಳುತ್ತಾರೆ. "ಒಂದು ದಶಕದ ಹಿಂದೆ, ನಮ್ಮ ಕುಟುಂಬ 200ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ, ಈ ಕುಸಿತಕ್ಕೆ ಮುಖ್ಯ ಕಾರಣ ಕಾರದಗಾ ಸುತ್ತಮುತ್ತಲಿನಲ್ಲಿ ಮೇವುಮಾಳಗಳು ಕಡಿಮೆಯಾಗುತ್ತಿರುವುದು.

ಹಿಂಡಿನ ಗಾತ್ರ ಕುಗ್ಗತೊಡಗಿದಂತೆ ಕಂಡಾ ಮಾಡಲು ಬೇಕಾದ ಯೋಗ್ಯ ಉಣ್ಣೆ ದೊರಕುವುದೂ ಕಷ್ಟವಾಗತೊಡಗಿತು.

ಕುರಿ ಮತ್ತು ಮೇಕೆಗಳನ್ನು ಮೇಯಿಸಲು ಬಾಲು ಅವರೊಂದಿಗೆ ಹೋಗಿದ್ದನ್ನು ಸೋಮಕ್ಕ ನೆನಪಿಸಿಕೊಳ್ಳುತ್ತಾರೆ. ದಂಪತಿಗಳು ಕರ್ನಾಟಕದ ಬಿಜಾಪುರದಿಂದ 151 ಕಿಲೋಮೀಟರ್ ಮತ್ತು ಮಹಾರಾಷ್ಟ್ರದ ಸೋಲಾಪುರದಿಂದ 227 ಕಿಲೋಮೀಟರ್ ದೂರದವರೆಗೆ ಹೋಗುತ್ತಿದ್ದರು. "ನಾವು ಎಷ್ಟು ಪ್ರಯಾಣಿಸಿದ್ದೇವೆ ಎಂದರೆ ಹೊಲಗಳೇ ನಮ್ಮ ಮನೆಯಾಗಿದ್ದವು" ಎಂದು ಸೋಮಕ್ಕ ಒಂದು ದಶಕದ ಹಿಂದಿನವರೆಗಿನ ತಮ್ಮ ಜೀವನದ ಬಗ್ಗೆ ಹೇಳುತ್ತಾರೆ. "ನಾನು ಪ್ರತಿದಿನ ತೆರೆದ ಹೊಲಗಳಲ್ಲಿ ಮಲಗುತ್ತಿದ್ದೆ. ಮೇಲೆ ನೋಡಿದರೆ ನಕ್ಷತ್ರ, ಚಂದ್ರ ಕಾಣುತ್ತಿತ್ತು. ಆಗೆಲ್ಲ ಈ ರೀತಿಯ ನಾಲ್ಕು ಗೋಡೆಗಳಿಂದ ಭದ್ರಪಡಿಸಿದ ಮನೆಗಳಿದ್ದಿರಲಿಲ್ಲ.”

ಸೋಮಕ್ಕ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕಾರದಗಾ ಮತ್ತು ಅದರ ನೆರೆಹೊರೆಯ ಹಳ್ಳಿಗಳ ಹೊಲಗಳ ಕೆಲಸಕ್ಕೂ ಹೋಗುತ್ತಿದ್ದರು. ಪ್ರತಿದಿನ ಕೆಲಸಕ್ಕೆ ನಡೆದುಕೊಂಡೇ ಹೋಗುತ್ತಿದ್ದರು ಮತ್ತು ತಾನು "ಬಾವಿಗಳನ್ನು ತೋಡಿದ್ದೇನೆ ಮತ್ತು ಕಲ್ಲುಗಳನ್ನು ಎತ್ತಿದ್ದೇನೆ" ಎಂದು ಹೇಳುತ್ತಾರೆ. 1980ರ ದಶಕದಲ್ಲಿ, ಬಾವಿ ತೋಡುವ ಕೆಲಸಕ್ಕೆ ಅವರಿಗೆ 25 ಪೈಸೆ ನೀಡಲಾಗುತ್ತಿತ್ತು. "ಆ ಸಮಯದಲ್ಲಿ, ಒಂದು ಕೇಜಿ ಅಕ್ಕಿಗೆ 2 ರೂಪಾಯಿ ಬೆಲೆಯಿತ್ತು.

PHOTO • Sanket Jain

ಸೋಮಕ್ಕ ಮತ್ತು ಅವರ ಗಂಡ ಬಾಲು ತಮ್ಮ ಕುರಿ ಮತ್ತು ಮೇಕೆಗಳನ್ನು ಮೇಯಿಸಲು ಮನೆಯಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಕಠಿಣ ಭೂಪ್ರದೇಶಗಳ ಮೂಲಕ ಪ್ರಯಾಣಿಸಿದ್ದಾರೆ

PHOTO • Sanket Jain
PHOTO • Sanket Jain

ಎಡ: ಧಂಗರ್ ಸಮುದಾಯದ ಮಹಿಳೆಯರು ನೇಯ್ಗೆ ಮಾಡಲು ಬಳಸುವ ಸಾಂಪ್ರದಾಯಿಕ ಉಪಕರಣ. ಬಲ: ಸುತ್ತಿ ಮತ್ತು ಮೊಳೆ ಬಳಸಿ ಹಿತ್ತಾಳೆ ಪಾತ್ರೆಯ ಮೇಲೆ ಹಕ್ಕಿಯ ಆಕೃತಿಯನ್ನು ಕೆತ್ತಲಾಗಿದೆ. ʼಅದನ್ನು ನಾನು ಬಹಳ ಇಷ್ಟಪಟ್ಟು ಕೆತ್ತಿದ್ದು. ಇದು ನನ್ನ ಪಾತ್ರೆ ಎನ್ನುವ ಗುರುತಿಗಾಗಿ ಕೆತ್ತಿದ್ದುʼ ಎಂದು ಬಾಲು ಪೂಜಾರಿ ಹೇಳುತ್ತಾರೆ

ಕೈಯಿಂದ ಕಂಡಾ ತಯಾರಿಸುವುದನ್ನು ನೋಡಿದಾಗ ಅದು ಬಹಳ ಸರಳವಾಗಿ ಕಾಣುತ್ತದೆ ಆದರೆ ಇದರಲ್ಲಿ ಹಲವಾರು ಸವಾಲುಗಳಿವೆ. ಈ ಕೆಲಸ ಮಾಡುವಾಗ ಉಣ್ಣೆ ಕೆಲವೊಮ್ಮೆ ತಯಾರಕರ ಮೂಗು ಮತ್ತು ಬಾಯಿಯನ್ನು ಪ್ರವೇಶಿಸುತ್ತದೆ, ಇದು ಕೆಮ್ಮು ಮತ್ತು ಸೀನುವಿಕೆಗೆ ಕಾರಣವಾಗುತ್ತದೆ. ನಂತರ ಕೆಲಸದ ಮುಕ್ತ ಸ್ವರೂಪ – ಇದರಲ್ಲಿ ಹಣ ವಿನಿಮಯವಾಗುವುದಿಲ್ಲ - ಜೊತೆಗೆ ಮೇವುಮಾಳಗಳ ಕುಸಿತವು ಈ ಕರಕುಶಲ ಕಲೆಗೆ ತೀವ್ರ ಹೊಡೆತವನ್ನು ನೀಡಿದೆ.

ನವಜಾತ ಶಿಶುವಿನ ಮಣಿಕಟ್ಟಿಗೆ ಕಂಡಾ ಹಾಕುವ ಸಮಾರಂಭದ ನಂತರ, ಸಾಮಾನ್ಯವಾಗಿ ಹಳದ್-ಕುಂಕು (ಅರಿಶಿನ-ಕುಂಕುಮ), ಟೋಪಿ (ಸಾಂಪ್ರದಾಯಿಕ ಟೋಪಿ), ಪಾನ್ (ವೀಳ್ಯದೆಲೆ), ಸುಪಾರಿ (ಅಡಿಕೆ), ಜಂಪರ್ (ರವಿಕೆ ತುಂಡು), ಸೀರೆ, ನಾರಲ್ (ತೆಂಗಿನಕಾಯಿ) ಮತ್ತು ಟವಾಲ್ (ಟವೆಲ್) ರೀತಿಯ ವಸ್ತುಗಳನ್ನು ಸೋಮಕ್ಕನಿಗೆ ನೀಡಲಾಗುತ್ತದೆ. "ಕೆಲವು ಕುಟುಂಬಗಳು ಒಂದಷ್ಟು ಹಣವನ್ನು ಸಹ ನೀಡುತ್ತವೆ" ಎಂದು ಸೋಮಕ್ಕ ಹೇಳುತ್ತಾರೆ, ಆದರೆ ಅವರಾಗಿಯೇ ಏನನ್ನೂ ಕೇಳುವುದಿಲ್ಲ. "ಇದನ್ನು ಮಾಡುವುದು ಹಣ ಸಂಪಾದನೆಯ ಸಲುವಾಗಿಯಲ್ಲ" ಎಂದು ಅವರು ಒತ್ತಿ ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ, ಕೆಲವರು ಕಪ್ಪು ದಾರವನ್ನು ಕುರಿಯ ಉಣ್ಣೆಯೊಂದಿಗೆ ಬೆರೆಸಿ ಕಂಡಾ ಎಂದು ಜಾತ್ರೆಗಳಲ್ಲಿ 10 ರೂ.ಗೆ ಒಂದರಂತೆ ಮಾರಾಟ ಮಾಡುತ್ತಾರೆ. "ಈಗೀಗ ಒರಿಜಿನಲ್‌ ಕಂಡಾ ಸಿಗುವುದು ಕಷ್ಟವಾಗಿದೆ" ಎಂದು ಸೋಮಕ್ಕನವರ ಕಿರಿಯ ಮಗ, 30 ವರ್ಷದ ರಾಮಚಂದ್ರ ಹೇಳುತ್ತಾರೆ, ಅವರು ಹಳ್ಳಿಯ ದೇವಾಲಯದಲ್ಲಿ ಅರ್ಚಕನಾಗಿದ್ದು, ತಂದೆಯೊಂದಿಗೆ ಕೃಷಿಯನ್ನೂ ಮಾಡುತ್ತಾರೆ.

PHOTO • Sanket Jain
PHOTO • Sanket Jain

ಎಡ : ಬಾಲು ಮತ್ತು ಸೋಮಕ್ಕ ಪೂಜಾರಿ ಅವರ ಕುಟುಂಬವು ಕಳೆದ ಆರು ತಲೆಮಾರುಗಳಿಂದ ಕಾರದ ಗಾ ದಲ್ಲಿದೆ . ಬಲ : ಪೂಜಾರಿ ಕುಟುಂಬಕ್ಕೆ ಸೇರಿದ ಕುರಿ ಉಣ್ಣೆಯಿಂದ ತಯಾರಿಸಿದ ಸಾಂಪ್ರದಾಯಿಕ ಘೋಂಗಾಡಿ ಕಂಬಳಿ

ಸೋಮಕ್ಕ ಅವರ 28 ವರ್ಷದ ಮಗಳು ಮಹಾದೇವಿ ಈ ಕೌಶಲವನ್ನು ಅವರಿಂದ ಕಲಿತಿದ್ದಾರೆ. "ಈಗ ಕೆಲವೇ ಜನರು ಅದರ ಬಗ್ಗೆ ಆಸಕ್ತಿ ಹೊಂದಿದ್ದಾರೆ" ಎಂದು ಸೋಮಕ್ಕ ಹೇಳುತ್ತಾರೆ, ಧಂಗರ್ ಸಮುದಾಯದ ಪ್ರತಿಯೊಬ್ಬ ಮಹಿಳೆಗೂ ಕಂಡಾ ತಯಾರಿಸುವುದು ಹೇಗೆಂದು ತಿಳಿದಿದ್ದ ಸಮಯವೊಂದಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಸೋಮಕ್ಕ ತನ್ನ ತೊಡೆಗಳ ಮೇಲೆ ಎಳೆಗಳನ್ನು ಒಟ್ಟಿಗೆ ಹೊಸೆಯುವ ಮೂಲಕ ಲೋಕರ್ (ಕುರಿ ಕೂದಲು) ಬಳಸಿ ದಾರ ನೇಯುವದನ್ನೂ ಕಲಿತಿದ್ದಾರೆ. ಆದರೆ ಈ ರೀತಿ ಹೊಸೆಯುವಾಗ ಉಂಟಾಗುವ ಘರ್ಷಣೆಯಿಂದ ಅವರ ಚರ್ಮದ ಮೇಲೆ ಸುಟ್ಟ ಗಾಯಗಳಾಗುತ್ತವೆ, ಹೀಗಾಗಿ ಕೆಲವರು ಅಂತಹ ನೇಯ್ಗೆಗೆ ಮರದ ಚರಕವನ್ನು ಬಳಸುತ್ತಾರೆ. ಅವರ ಕುಟುಂಬವು ನೇಯ್ದ ಲೋಕರ್ ಅನ್ನು ಸಂಗರ್ ಸಮುದಾಯಕ್ಕೆ ಮಾರಾಟ ಮಾಡುತ್ತದೆ, ಈ ಸಮುದಾಯವು ಘೋಂಗಾಡಿ ತಯಾರಿಕೆಗೆ ಹೆಸರುವಾಸಿ - ಕುರಿ ಉಣ್ಣೆಯಿಂದ ಮಾಡಿದ ಕಂಬಳಿ. ಈ ಕಂಬಳಿಯೊಂದನ್ನು ಗ್ರಾಹಕರಿಗೆ 1,000 ರೂ.ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ, ಸೋಮಕ್ಕ ತಾನು ನೇಯ್ದ ದಾರವನ್ನು ಪ್ರತಿ ಕೆ.ಜಿ.ಗೆ 7 ರೂಪಾಯಿಯಂತೆ ಮಾರಾಟ ಮಾಡುತ್ತಾರೆ.

ಕೊಲ್ಹಾಪುರದ ಪಟ್ಟನ್ ಕೊಡೋಲಿ ಗ್ರಾಮದಲ್ಲಿ ಪ್ರತಿವರ್ಷ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ನಡೆಯುವ ವಿಠ್ಠಲ್ ಬೀರದೇವ್ ಯಾತ್ರೆಯಲ್ಲಿ ಈ ದಾರಗಳನ್ನು ಮಾರಾಟ ಮಾಡಲಾಗುತ್ತದೆ. ಸೋಮಕ್ಕ ಈ ಯಾತ್ರೆಗೆ ಮುಂಚಿತವಾಗಿ ದೀರ್ಘಕಾಲ ಕೆಲಸ ಮಾಡುತ್ತಾರೆ, ಯಾತ್ರೆ ಪ್ರಾರಂಭವಾಗುವ ಹಿಂದಿನ ದಿನ ಕನಿಷ್ಠ 2,500 ಎಳೆಗಳನ್ನು ನೇಯುತ್ತಾರೆ. "ಇದು ಕೆಲವೊಮ್ಮೆ ನನ್ನ ಕಾಲುಗಳನ್ನು ಊದಿಕೊಳ್ಳುವಂತೆ ಮಾಡುತ್ತದೆ" ಎಂದು ಅವರು ಹೇಳುತ್ತಾರೆ. ಸೋಮಕ್ಕ ತನ್ನ ತಲೆಯ ಮೇಲೆ ಬುಟ್ಟಿಯಲ್ಲಿ 10 ಕಿಲೋಗೂ ಹೆಚ್ಚು ದಾರವನ್ನು ಹೊತ್ತುಕೊಂಡು 16 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಾರೆ – ಇದರ ಮೂಲಕ ಅವರು ಗಳಿಸುವುದು ಕೇವಲ 90 ರೂ.

ಕಷ್ಟಗಳ ನಡುವೆಯೂ ಕಂಡಾ ತಯಾರಿಸುವಲ್ಲಿ ಸೋಮಕ್ಕನ ಉತ್ಸಾಹ ಕಡಿಮೆಯಾಗಿಲ್ಲ. "ನಾನು ಈ ಸಂಪ್ರದಾಯವನ್ನು ಜೀವಂತವಾಗಿರಿಸಿದ್ದೇನೆನ್ನುವ ಹೆಮ್ಮೆಯಿದೆ" ಎಂದು ಹಣೆಗೆ ಭಂಡಾರ (ಅರಿಶಿನ) ಲೇಪಿಸುತ್ತಾ ಅವರು ಹೇಳುತ್ತಾರೆ. "ನಾನು ಕುರಿ ಮತ್ತು ಮೇಕೆಗಳ ನಡುವೆ ಹುಟ್ಟಿದವಳು ಮತ್ತು ಸಾಯುವವರೆಗೂ ಈ ಕಲಾ ಪ್ರಕಾರವನ್ನು ಜೀವಂತವಾಗಿರಿಸುತ್ತೇನೆ" ಎಂದು ಸೋಮಕ್ಕ ಹೇಳುತ್ತಾರೆ.

ಈ ವರದಿಯು ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಕುರಿತಾದ ಸರಣಿಯ ಭಾಗ. ಇದಕ್ಕೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ ಬೆಂಬಲ ಪಡೆಯಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Sanket Jain

سنکیت جین، مہاراشٹر کے کولہاپور میں مقیم صحافی ہیں۔ وہ پاری کے سال ۲۰۲۲ کے سینئر فیلو ہیں، اور اس سے پہلے ۲۰۱۹ میں پاری کے فیلو رہ چکے ہیں۔

کے ذریعہ دیگر اسٹوریز Sanket Jain
Editor : Dipanjali Singh

دیپانجلی سنگھ، پیپلز آرکائیو آف رورل انڈیا کی اسسٹنٹ ایڈیٹر ہیں۔ وہ پاری لائبریری کے لیے دستاویزوں کی تحقیق و ترتیب کا کام بھی انجام دیتی ہیں۔

کے ذریعہ دیگر اسٹوریز Dipanjali Singh
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru