"ಪ್ರತಿ ಬಾರಿ ಭಟ್ಟಿ [ಕುಲುಮೆ] ಉರಿಸುವಾಗಲೂ, ನಾನು ಗಾಯ ಮಾಡಿಕೊಳ್ಳುತ್ತೇನೆ."
ಸಲ್ಮಾ ಲೋಹರ್ ಅವರ ಬೆರಳಿನ ಗೆಣ್ಣುಗಳಿಗೆ ಗಾಯವಾಗಿತ್ತು. ಅವರ ಎಡಗೈಯಲ್ಲಿ ಎರಡು ಸೀಳುಗಳಿದ್ದವು. ಕುಲುಮೆಯಿಂದ ಒಂದು ಹಿಡಿ ಬೂದಿಯನ್ನು ತೆಗೆದುಕೊಂಡು, ಆ ಗಾಯ ಬೇಗ ಗುಣವಾಗಲು ಅದರ ಮೇಲೆ ಉಜ್ಜುತ್ತಾರೆ.
ಅಲ್ಲಿರುವ ಆರು ಲೋಹರ್ ಕುಟುಂಬಗಳಲ್ಲಿ 41 ವರ್ಷ ಪ್ರಾಯದ ಸಲ್ಮಾರವರ ಕುಟುಂಬವೂ ಒಂದಾಗಿದೆ. ಅವರು ಸೋನಿಪತ್‌ನ ಬಹಲ್‌ಗಢ್ ಮಾರುಕಟ್ಟೆಯಲ್ಲಿರುವ ಸಾಲು ಜುಗ್ಗಿಗಳನ್ನು (ಕೊಳೆಗೇರಿಯ ಗುಡಿಸಲು) ತಮ್ಮ ಮನೆ ಎಂದು ಕರೆಯುತ್ತಾರೆ. ಒಂದು ಕಡೆ ಜನನಿಬಿಡ ಮಾರುಕಟ್ಟೆಯ ರಸ್ತೆ, ಮತ್ತೊಂದು ಕಡೆ ನಗರಸಭೆಯವರು ತಂದು ಸುರಿದ ಕಸದ ರಾಶಿ. ಸಮೀಪದಲ್ಲೇ ಒಂದು ಸರ್ಕಾರಿ ಶೌಚಾಲಯ ಮತ್ತು ನೀರಿನ ಟ್ಯಾಂಕಿ. ಸಲ್ಮಾರವರ ಕುಟುಂಬ ಇವುಗಳನ್ನೇ ಸಂಪೂರ್ಣವಾಗಿ ಅವಲಂಬಿಸಿದೆ.
ಜುಗ್ಗಿಗಳಿಗೆ ವಿದ್ಯುತ್ ಸೌಲಭ್ಯಇಲ್ಲ. ನಾಲ್ಕಾರು ಗಂಟೆಗಳಿಗಿಂತ ಹೆಚ್ಚು ಕಾಲ ಮಳೆಯಾದರೆ ಇಡೀ ಪರಿಸರದಲ್ಲಿ ಪ್ರವಾಹ ಉಂಟಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ (2023) ಹೀಗೇ ಆಗಿತ್ತು. ಆ ಸಂದರ್ಭದಲ್ಲಿ ಅವರು ತಮ್ಮ ಕಾಲುಗಳನ್ನು ಮೇಲೆ ಹಾಕಿ ಹಾಸಿಗೆಗಳ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ, ನೀರಿನ ಮಟ್ಟ ಇಳಿಯುವ ವರೆಗೆ ಕಾಯಬೇಕು. ಇದಕ್ಕೆ ಎರಡು ಮೂರು ದಿನಗಳು ಬೇಕು. "ಆ ದಿನಗಳಲ್ಲಿ ಇಲ್ಲೆಲ್ಲಾ ತುಂಬಾ ಕೆಟ್ಟ ದುರ್ವಾಸನೆ ಬರಲು ಶುರುವಾಗುತ್ತದೆ," ಎಂದು ಸಲ್ಮಾ ಅವರ ಮಗ ದಿಲ್ಶಾದ್ ನೆನಪಿಸಿಕೊಳ್ಳುತ್ತಾರೆ.
"ಆದರೆ ನಾವು ಬೇರೆಲ್ಲಿಗೆ ಹೋಗಲು ಸಾಧ್ಯ?" ಎಂದು ಸಲ್ಮಾ ಕೇಳುತ್ತಾರೆ. “ಈ ಕಸದ ರಾಶಿಯ ಪಕ್ಕ ವಾಸಿಸುವುದರಿಂದ ನಮಗೆ ಅನಾರೋಗ್ಯ ಬರುತ್ತದೆ ಎಂಬುದು ನನಗೆ ಗೊತ್ತಿದೆ. ಕಸದ ಮೇಲೆ ಕುಳಿತುಕೊಳ್ಳುವ ನೊಣಗಳು ನಮ್ಮ ಊಟದ ಮೇಲೂ ಬಂದು ಕುಳಿತುಕೊಳ್ಳುತ್ತವೆ. ಆದರೆ ನಾವು ಬೇರೆಲ್ಲಿಗೆ ಹೋಗಲು ಸಾಧ್ಯ ಹೇಳಿ?” ಎನ್ನುತ್ತಾರೆ.
ಗಾಡಿಯಾ, ಗಾಡಿಯಾ ಅಥವಾ ಗಡುಲಿಯಾ ಲೋಹರ್‌ಗಳನ್ನು ರಾಜಸ್ಥಾನದಲ್ಲಿ ಅಲೆಮಾರಿ ಬುಡಕಟ್ಟು (ಎನ್‌ಟಿ) ಮತ್ತು ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ. ಈ ಸಮುದಾಯದವರು ದೆಹಲಿ ಮತ್ತು ಹರ್ಯಾಣದಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರನ್ನು ಈ ಹಿಂದೆ ಅಲೆಮಾರಿ ಬುಡಕಟ್ಟು ಎಂದು ಗುರುತಿಸಿದರೂ, ಹರ್ಯಾಣ ದಲ್ಲಿ ಅವರನ್ನು ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ.
ಅವರು ವಾಸಿಸುವ ಮಾರ್ಕೆಟ್ ರಾಜ್ಯ ಹೆದ್ದಾರಿ 11 ರ ಪಕ್ಕದಲ್ಲಿದೆ. ಹಾಗಾಗಿ ತಾಜಾ ಉತ್ಪನ್ನಗಳು, ಸಿಹಿತಿಂಡಿಗಳು, ಅಡಿಗೆ ಮಸಾಲೆಗಳು, ವಿದ್ಯುತ್ ಉಪಕರಣಗಳು ಮತ್ತು ಬೇರೆ ಏನೇನೋ ಮಾರುವವರು ಇಲ್ಲಿಗೆ ಬಂದು ಮಾರಾಟ ಮಾಡುತ್ತಾರೆ. ಹಲವರು ಸ್ಟಾಲ್‌ಗಳನ್ನು ಹಾಕಿ ಮಾರ್ಕೆಟ್ ಮುಚ್ಚಿದ ನಂತರ ಸ್ಟಾಲ್‌ಗಳನ್ನೂ ಮುಚ್ಚುತ್ತಾರೆ.
ಆದರೆ ಸಲ್ಮಾ ಅವರಂತಹವರಿಗೆ ಈ ಮಾರ್ಕೆಟ್ ಮನೆ ಮತ್ತು ಕೆಲಸದ ಸ್ಥಳ ಎರಡೂ ಆಗಿದೆ.
"ನನ್ನ ದಿನ ಬೇಗ ಆರಂಭವಾಗುತ್ತದೆ, ಸುಮಾರು 6 ಗಂಟೆಗೆ ಸೂರ್ಯೋದಯವಾದಾಗ, ನಾನು ಕುಲುಮೆಯಲ್ಲಿ ಬೆಂಕಿ ಉರಿಸುತ್ತೇನೆ. ನನ್ನ ಮನೆಯವರಿಗೆ ಅಡುಗೆ ಮಾಡಿ ಹಾಕಬೇಕು, ಆಮೇಲೆ ಕೆಲಸಕ್ಕೆ ಹೋಗಬೇಕು,” ಎಂದು 41 ವರ್ಷ ಪ್ರಾಯದ ಇವರು ಹೇಳುತ್ತಾರೆ. ತಮ್ಮ ಪತಿ ವಿಜಯ್ ಜೊತೆಯಲ್ಲಿ ಅವರು ದಿನಕ್ಕೆ ಎರಡು ಬಾರಿ ಎಡೆಬಿಡದೆ ಕುಲುಮೆಯಲ್ಲಿ ಕೆಲಸ ಮಾಡುತ್ತಾರೆ. ಪಾತ್ರೆಗಳನ್ನು ಮಾಡಲು ಕಬ್ಬಿಣದ ತುಂಡುಗಳನ್ನು ಕರಗಿಸಿ ಸುತ್ತಿಗೆಯಿಂದ ಬಡಿಯುತ್ತಾರೆ. ಒಂದು ದಿನದಲ್ಲಿ ಅವರು ನಾಲ್ಕು ಅಥವಾ ಐದು ಪಾತ್ರೆಗಳ ಕೆಲಸ ಮಾಡುತ್ತಾರೆ.
ಮಧ್ಯಾಹ್ನದ ಹೊತ್ತು ಸಲ್ಮಾರ ಕೆಲಸಕ್ಕೆ ಕೊಂಚ ವಿರಾಮ ಸಿಗುತ್ತದೆ. ಆಗ ಅವರು ಹಾಸಿಗೆಯ ಮೇಲೆ ಕುಳಿತುಕೊಂಡು ಬಿಸಿ ಬಿಸಿ ಚಹಾ ಕುಡಿಯುತ್ತಾರೆ. ಇವರ ಸುತ್ತಲೂ ಇವರ ಇಬ್ಬರು ಮಕ್ಕಳಾದ 16 ವರ್ಷದ ಮಗಳು ತನು ಮತ್ತು 14 ವರ್ಷದ ಕಿರಿಯ ಮಗ ದಿಲ್ಶಾದ್ ಹಾಗೂ ಅವರ ಸೋದರ ಅತ್ತಿಗೆಯ ಹೆಣ್ಣುಮಕ್ಕಳಾದ ಶಿವಾನಿ, ಕಾಜಲ್ ಮತ್ತು ಚಿಡಿಯಾ ಕೂಡ ಇರುತ್ತಾರೆ. ಒಂಬತ್ತು ವರ್ಷದ ಚಿಡಿಯಾ ಮಾತ್ರ ಶಾಲೆಗೆ ಹೋಗುತ್ತಾಳೆ.
"ನೀವು ಇದನ್ನು ವಾಟ್ಸಾಪ್‌ನಲ್ಲಿ ಹಾಕುತ್ತೀರಾ?" ಎಂದು ಸಲ್ಮಾ ಕೇಳುತ್ತಾರೆ. "ಮೊದಲು ನನ್ನ ಕೆಲಸದ ಬಗ್ಗೆ ಹೇಳಿ!"
ಸಲ್ಮಾರವರು ತಮ್ಮ ಕೆಲಸಕ್ಕೆ ಬಳಸುವ ಸಲಕರಣೆಗಳು ಮತ್ತು ಜರಡಿಗಳು, ಸುತ್ತಿಗೆಗಳು, ಗುದ್ದಲಿಗಳು, ಕೊಡಲಿ ತಲೆಗಳು, ಉಳಿಗಳು, ಕಡಾಯಿಗಳು, ಸೀಳುಗಳು ಮೊದಲಾದ ಸಿದ್ಧಪಡಿಸಿದ ಉತ್ಪನ್ನಗಳು ಮಧ್ಯಾಹ್ನದ ಬಿಸಿಲಿಗೆ ಪಳಪಳ ಹೊಳೆಯುತ್ತವೆ.
"ನಮ್ಮ ಟೂಲ್‌ಗಳೇ ಈ ಜುಗ್ಗಿಯಲ್ಲಿ ಅತ್ಯಂತ ಅಮೂಲ್ಯವಾದ ವಸ್ತುಗಳು," ಎಂದು ಲೋಹದ ದೊಡ್ಡ ಬಾಣಲೆ ಮುಂದೆ ಕುಳಿತುಕೊಳ್ಳುತ್ತಾ ಅವರು ಹೇಳುತ್ತಾರೆ. ಅವರ ವಿರಾಮದ ಸಮಯ ಮುಗಿಯಿತು, ಕೈಯಲ್ಲಿದ್ದ ಚಹಾದ ಕಪ್ ಹೋಗಿ ಸುತ್ತಿಗೆ ಮತ್ತು ಉಳಿ ಬಂದವು. ಅಭ್ಯಾಸ ಬಲದಿಂದ ಸರಾಗವಾಗಿ ಬಾಣಲೆಯ ಕೆಳಭಾಗದಲ್ಲಿ ರಂಧ್ರಗಳನ್ನು ಮಾಡುತ್ತಾರೆ. ಪ್ರತೀ ಎರಡು ಹೊಡೆತಗಳ ನಂತರ ಉಳಿಯ ಕೋನವನ್ನು ಬದಲಾಯಿಸುತ್ತಾರೆ. “ಇದು ಅಡುಗೆಗೆ ಬಳಸುವ ಜರಡಿ ಅಲ್ಲ. ರೈತರು ಧಾನ್ಯವನ್ನು ಸೋಸಲು ಬಳಸುತ್ತಾರೆ,” ಎಂದು ಹೇಳುತ್ತಾರೆ.
ವಿಜಯ್ ಒಳಗೆ ಇರುವ ಕುಲುಮೆಯ ಮುಂದೆ ಇದ್ದಾರೆ. ಈ ಕುಲುಮೆಯನ್ನು ಬೆಳಿಗ್ಗೆ ಮತ್ತು ಸಂಜೆ - ದಿನಕ್ಕೆ ಎರಡು ಬಾರಿ ಉರಿಸಲಾಗುತ್ತದೆ. ಅವರು ಕೆಲಸ ಮಾಡುತ್ತಿರುವ ಕಬ್ಬಿಣದ ರಾಡ್ ನಿಗಿನಿಗಿ ಕೆಂಬಣ್ಣದಿಂದ ಹೊಳೆಯುತ್ತಿದೆ. ಆದರೆ ಆ ಬಿಸಿಗೆ ಅವರಿಗೇನು ತೊಂದರೆಯಾದಂತೆ ಕಾಣುತ್ತಿಲ್ಲ. ಕುಲುಮೆಯನ್ನು ಉರಿಸಿ ಸಿದ್ಧ ಪಡಿಸಲು ಎಷ್ಟು ಸಮಯ ಬೇಕು ಎಂದು ಕೇಳಿದಾಗ, ಅವರು ನಗುತ್ತಾ, “ಒಳಭಾಗ ಉರಿದಾಗ ಮಾತ್ರ ನಮಗೆ ಗೊತ್ತಾಗುತ್ತದೆ. ಗಾಳಿ ತೇವವಾಗಿದ್ದರೆ, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಾವು ಬಳಸುವ ಕಲ್ಲಿದ್ದಲಿನ ಮೇಲೆ ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳು ಬೇಕು,” ಎಂದು ಹೇಳುತ್ತಾರೆ.
ಎಲ್ಲೇ ಆದರೂ ಗುಣಮಟ್ಟದ ಆಧಾರದ ಮೇಲೆ ಕಲ್ಲಿದ್ದಲಿನ ಬೆಲೆ ಕಿಲೋಗೆ 15 ರಿಂದ 70 ರುಪಾಯಿ ಇರುತ್ತದೆ. ಸಲ್ಮಾ ಮತ್ತು ವಿಜಯ್ ಉತ್ತರ ಪ್ರದೇಶದ ಇಟ್ಟಿಗೆ ಗೂಡುಗಳಿಗೆ ಹೋಗಿ ಅಲ್ಲಿಂದ ದೊಡ್ಡ ಪ್ರಮಾಣದಲ್ಲಿ ಖರೀದಿಸಿ ತರುತ್ತಾರೆ.
ವಿಜಯ್ ಲೋಹದ ಬಡಿಗಲ್ಲಿನ ಮೇಲೆ ಮೇಲೆ ಸಮತಟ್ಟಾದ ಕಬ್ಬಿಣದ ರಾಡ್‌ನ ಹೊಳೆಯುವ ತುದಿಯನ್ನು ಇಟ್ಟು ಹೊಡೆಯಲು ಶುರು ಮಾಡುತ್ತಾರೆ. ಕುಲುಮೆ ಸಣ್ಣದಾಗಿರುವುದರಿಂದ ಕಬ್ಬಿಣ ಸಾಕಷ್ಟು ಕರಗದೆ, ಅವರು ಹೆಚ್ಚಿನ ಶಕ್ತಿಯನ್ನು ಹಾಕಿ ಬಡಿಯುತ್ತಾರೆ.
16ನೇ ಶತಮಾನದಲ್ಲಿ ರಾಜಸ್ಥಾನದ ಚಿತ್ತೋರ್‌ಗಢವನ್ನು ಮೊಘಲರು ವಶಪಡಿಸಿಕೊಂಡ ನಂತರ ಉತ್ತರ ಭಾರತದ ವಿವಿಧ ಭಾಗಗಳಿಗೆ ಪಸರಿಸಿದ ಆಯುಧಗಳನ್ನು ತಯಾರಿಸುವ ಸಮುದಾಯದವರು ತಮ್ಮ ಪೂರ್ವಜರು ಎಂದು ಲೋಹರ್‌ಗಳು ಹೇಳಿಕೊಳ್ಳುತ್ತಾರೆ. “ಅವರು ನಮ್ಮ ಪೂರ್ವಜರು. ನಾವು ಈಗ ಬೇರೆ ಬೇರೆ ರೀತಿಯಲ್ಲಿ ಜೀವನವನ್ನು ನಡೆಸುತ್ತಿದ್ದೇವೆ,” ಎಂದು ವಿಜಯ್ ನಗುತ್ತಾ ಹೇಳುತ್ತಾರೆ. “ಆದರೆ ಅವರು ನಮಗೆ ಕಲಿಸಿದ ಕರಕುಶಲತೆಯನ್ನು ನಾವು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೇವೆ. ನಾವೂ ಅವರಂತೆಯೇ ಈ ಕಡೈಗಳನ್ನು [ದಪ್ಪ ಬಳೆಗಳನ್ನು] ಧರಿಸುತ್ತೇವೆ,” ಎಂದು ಹೇಳುತ್ತಾರೆ.
ಈಗ ಇವರು ತಮ್ಮ ಮಕ್ಕಳಿಗೆ ವ್ಯಾಪಾರವನ್ನು ಕಲಿಸುತ್ತಿದ್ದಾರೆ. "ದಿಲ್ಶಾದ್ ಚೆನ್ನಾಗಿ ಮಾಡುತ್ತಾನೆ," ಎಂದು ಅವರು ಹೇಳುತ್ತಾರೆ. ಸಲ್ಮಾ ಮತ್ತು ವಿಜಯ್ ಅವರ ಕಿರಿಯ ಮಗ ದಿಲ್ಶಾದ್ ಸಲಕರಣೆಗಳನ್ನು ತೋರಿಸುತ್ತಾ, "ಅವು ಹತೋಡಗಳು [ಸುತ್ತಿಗೆಗಳು]. ದೊಡ್ಡದನ್ನು ಘಾನ್ ಎಂದು ಕರೆಯುತ್ತಾರೆ. ಬಾಪು [ತಂದೆ] ಬಿಸಿ ಲೋಹವನ್ನು ಚಿಮುಟಾದಲ್ಲಿ ಹಿಡಿದು, ಅದನ್ನು ಬೇಕಾದಂತೆ ಬಾಗಿಸಲು ಕೆಂಚಿ [ಕತ್ತರಿ] ಬಳಸುತ್ತಾರೆ,” ಎಂದು ಹೇಳುತ್ತಾನೆ.
ಚಿಡಿಯಾ ಕುಲುಮೆಯ ಬಿಸಿಯನ್ನು ನಿಯಂತ್ರಿಸುವ ಹಸ್ತಚಾಲಿತ ಫ್ಯಾನ್‌ನ ಹ್ಯಾಂಡಲ್ ಅನ್ನು ತಿರುಗಿಸಲು ಆರಂಭಿಸುತ್ತಾಳೆ. ಸುತ್ತಲೂ ಬೂದಿ ಹಾರುವಾಗ ನಗುತ್ತಾಳೆ.
ಮಹಿಳೆಯೊಬ್ಬರು ಚಾಕೊಂದನ್ನು ಖರೀದಿಸಲು ಬರುತ್ತಾರೆ. ಸಲ್ಮಾ ಆ ಚಾಕುವಿಕೆ 100 ರುಪಾಯಿ ಬೆಲೆ ಎಂದಾಗ ಆ ಮಹಿಳೆ, “ಇದಕ್ಕೆ ನಾನು 100 ರೂಪಾಯಿ ಕೊಡುವುದಿಲ್ಲ. ಇದಕ್ಕಿಂತ ಕಡಿಮೆ ಬೆಲೆಗೆ ಪ್ಲಾಸ್ಟಿಕ್ ಚಾಕು ನನಗೆ ಸಿಗುತ್ತದೆ,” ಎಂದು ಪ್ರತಿಕ್ರಿಯಿಸುತ್ತಾರೆ. ಕೊನೆಗೆ ಚೌಕಾಸಿ ಮಾಡಿ 50 ರುಪಾಯಿಗೆ ಮಾರಾಟವಾಗುತ್ತದೆ.
ಆ ಮಹಿಳೆಯ ಕಡೆಗೆ ಸಲ್ಮಾ ನಿಟ್ಟುಸಿರು ಬಿಡುತ್ತಾರೆ. ಅವರಿಗೆ ಕುಟುಂಬ ನಡೆಸಲು ಸಾಕಾಗುವಷ್ಟು ಕಬ್ಬಿಣವನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ಇವರಿಗೆ ತೀವ್ರ ಸ್ಪರ್ಧೆಯನ್ನೊಡ್ಡುತ್ತಿದೆ. ಅವರು ತಯಾರಿಕೆಗೆ ಅನುಗುಣವಾಗಿ ಬೆಲೆ ನಿಗದಿಪಡಿಸಲೂ ಸಾಧ್ಯವಿಲ್ಲ ಅಥವಾ ತಮಗೆ ಬೇಕಾದ ಬೆಲೆಗೂ ಮಾರಾಟ ಮಾಡಲು ಸಾಧ್ಯವಿಲ್ಲ.
"ನಾವು ಈಗ ಪ್ಲಾಸ್ಟಿಕ್‌ನಿಂದ ಮಾಡಿದ್ದನ್ನೂ ಮಾರಲು ಆರಂಭಿಸಿದ್ದೇವೆ. ನನ್ನ ಸೋದರ ಮಾವನಿಗೆ ಅವರ ಜುಗ್ಗಿಯ ಮುಂದೆ ಪ್ಲಾಸ್ಟಿಕ್ ಅಂಗಡಿಯೊಂದಿದೆ. ಮತ್ತು ನನ್ನ ಸಹೋದರ ದೆಹಲಿಯ ಟಿಕ್ರಿ ಗಡಿಯಲ್ಲಿ ಪ್ಲಾಸ್ಟಿಕ್ ಸಾಮಾನುಗಳನ್ನು ಮಾರಾಟ ಮಾಡುತ್ತಾನೆ," ಎಂದು ಅವರು ಹೇಳುತ್ತಾರೆ. ಅವರು ಪ್ಲಾಸ್ಟಿಕನ್ನು ಬೇರೆಡೆ ಮಾರಾಟ ಮಾಡಲು ಮಾರ್ಕೆಟ್‌ನಲ್ಲಿರುವ ಇತರ ಮಾರಾಟಗಾರರಿಂದ ಖರೀದಿಸುತ್ತಾರೆ, ಆದರೆ ಇದರಿಂದೇನೂ ಲಾಭ ಸಿಗುವುದಿಲ್ಲ.
ತನ್ನ ಚಿಕ್ಕಪ್ಪಂದಿರು ದೆಹಲಿಯಲ್ಲಿ ಹೆಚ್ಚು ಸಂಪಾದನೆ ಮಾಡುತ್ತಾರೆ ಎಂದು ತನು ಹೇಳುತ್ತಾಳೆ. “ನಗರದ ಜನರು ಈ ರೀತಿಯ ಸಣ್ಣಪುಟ್ಟ ವಸ್ತುಗಳಿಗೆ ಖರ್ಚು ಮಾಡಲು ಹಿಂದೆಮುಂದೆ ನೋಡುವುದಿಲ್ಲ. ಇವರಿಗೆ 10 ರುಪಾಯಿ ಅಷ್ಟೇನೂ ದೊಡ್ಡದಲ್ಲ. ಒಬ್ಬ ಹಳ್ಳಿಗನಿಗೆ ಇದು ತುಂಬಾ ದೊಡ್ಡ ಮೊತ್ತ ಮತ್ತು ಅವನು ಅದನ್ನು ನಮ್ಮ ಮೇಲೆ ಖರ್ಚು ಮಾಡುವುದಿಲ್ಲ. ಆದುದರಿಂದಲೇ ನನ್ನ ಚಿಕ್ಕಪ್ಪಂದಿರು ಹೆಚ್ಚು ಶ್ರೀಮಂತರಾಗಿದ್ದಾರೆ,” ಎಂದು ಹೇಳುತ್ತಾಳೆ.
*****
"ನನ್ನ ಮಕ್ಕಳೂ ಓದಬೇಕು ಎಂಬುದು ನನ್ನ ಬಯಕೆ," ಎಂದು ಸಲ್ಮಾ ಹೇಳುತ್ತಾರೆ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು 2023 ರಲ್ಲಿ. ಆಗ ನಾನು ಸಮೀಪದ ವಿಶ್ವವಿದ್ಯಾಲಯದಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿದ್ದೆ. "ಅವರು ತಮ್ಮ ಜೀವನದಲ್ಲಿ ಏನನ್ನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ," ಎಂದು ಸಲ್ಮಾ ಹೇಳುತ್ತಾರೆ. ಅಗತ್ಯ ದಾಖಲೆಗಳ ಕೊರತೆಯಿಂದಾಗಿ ತನ್ನ ಹಿರಿಯ ಮಗ ಮಾಧ್ಯಮಿಕ ಶಾಲೆಯಿಂದ ಹೊರಗುಳಿದಿದ್ದರಿಂದ ಅವರ ಈ ಬಯಕೆ ಇನ್ನೂ ತೀವ್ರವಾಗಿದೆ. ಅವರ ಹಿರಿಯ ಮಗನಿಗೆ ಈಗ 20 ವರ್ಷ ಪ್ರಾಯ.
“ನಾನು ಸರಪಂಚರಿಂದ ಹಿಡಿದು ಜಿಲ್ಲಾ ಕೇಂದ್ರದವರೆಗೆ ಆಧಾರ್, ಪಡಿತರ ಚೀಟಿ, ಜಾತಿ ಪ್ರಮಾಣಪತ್ರಗಳೊಂದಿಗೆ ಎಲ್ಲಾ ಕಡೆ ಓಡಾಡಿದೆ. ನಾನು ನನ್ನ ಹೆಬ್ಬೆರಳಿನಿಂದ ಲೆಕ್ಕವಿಲ್ಲದಷ್ಟು ಪೇಪರ್‌ಗಳ ಮೇಲೆ ಸ್ಟ್ಯಾಂಪ್ ಮಾಡಿದ್ದೇನೆ. ಅದರಿಂದ ಏನೂ ಪ್ರಯೋಜನವಾಗಲಿಲ್ಲ.”
ದಿಲ್ಶಾದ್ ಕೂಡ ಕಳೆದ ವರ್ಷ 6ನೇ ತರಗತಿಯಲ್ಲೇ ಶಾಲೆ ಬಿಟ್ಟಿದ್ದ. “ಸರ್ಕಾರಿ ಶಾಲೆಗಳು ಕಲಿಯಲು ಅಗತ್ಯವಾದ ಯಾವುದನ್ನೂ ಕಲಿಸುವುದಿಲ್ಲ. ಆದರೆ ನನ್ನ ತಂಗಿ ತನು ತುಂಬಾ ತಿಳಿದುಕೊಂಡಿದ್ದಾಳೆ. ಅವಳು ಪಡಿ-ಲಿಖಿ (ಓದು ಬರಹ ಬಲ್ಲವಳು),” ಎಂದು ಅವನು ಹೇಳುತ್ತಾನೆ. ತನು 8ನೇ ತರಗತಿವರೆಗೆ ಓದಿದ್ದರೂ ಮುಂದಕ್ಕೆ ಓದಲು ಅವಳಿಗೆ ಇಷ್ಟವಿರಲಿಲ್ಲ. ಹತ್ತಿರದ ಶಾಲೆಯಲ್ಲಿ 10 ನೇ ತರಗತಿ ಕೂಡ ಇರಲಿಲ್ಲ. ಮೂರು ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿರುವ ಖೇವಾರಾದಲ್ಲಿ ಇರುವ ಶಾಲೆಗೆ ಅವಳು ಸುಮಾರು ಒಂದು ಗಂಟೆ ನಡೆದುಕೊಂಡು ಹೋಗಬೇಕಿತ್ತು.
"ಜನರು ನನ್ನ ಕಡೆ ಗುರಾಯಿಸಿ ನೋಡುತ್ತಾರೆ. ಅವರು ತುಂಬಾ ಕೊಳಕು ಮಾತುಗಳನ್ನಾಡುತ್ತಾರೆ. ನಾನು ಅವುಗಳನ್ನು ನನ್ನ ಬಾಯಿಂದ ಹೇಳುವುದಿಲ್ಲ,” ಎಂದು ತನು ಹೇಳುತ್ತಾಳೆ. ಹಾಗಾಗಿ ತನು ಈಗ ಮನೆಯಲ್ಲೇ ಇದ್ದುಕೊಂಡು ತಂದೆ ತಾಯಿಗೆ ಕೆಲಸದಲ್ಲಿ ನೆರವಾಗುತ್ತಾಳೆ.
ಈ ಕುಟುಂಬ ಸಾರ್ವಜನಿಕ ಟ್ಯಾಂಕ್ ಬಳಿ ತೆರೆದ ಪ್ರದೇಶದಲ್ಲೇ ಸ್ನಾನ ಮಾಡಬೇಕು. "ನಾವು ಬಯಲಿನಲ್ಲಿ ಸ್ನಾನ ಮಾಡುವಾಗ ಎಲ್ಲರೂ ನಮ್ಮ ಕಡೆ ನೋಡುತ್ತಾರೆ," ಎಂದು ತನು ಮೆಲ್ಲನೆ ಹೇಳುತ್ತಾಳೆ. ಆದರೆ ಸಾರ್ವಜನಿಕ ಶೌಚಾಲಯಕ್ಕೆ ಹೋಗಲು ಒಮ್ಮೆ ಹೋದರೆ 10 ರುಪಾಯಿ ಕೊಡಬೇಕು. ಇದು ಈ ಇಡೀ ಕುಟುಂಬಕ್ಕೆ ಮತ್ತಷ್ಟು ಹೊರೆಯಾಗುತ್ತದೆ. ಅವರ ಸದ್ಯದ ಸಂಪಾದನೆಯಲ್ಲಿ ಶೌಚಾಲಯ ಹೊಂದಿರುವ ಸರಿಯಾದ ಮನೆಯೊಂದನ್ನು ಬಾಡಿಗೆಗೆ ಪಡೆಯಲು ಸಾಧ್ಯವಿಲ್ಲ, ಆದ್ದರಿಂದ ಪಾದಚಾರಿ ರಸ್ತೆಯಲ್ಲೇ ವಾಸಿಸಬೇಕಾಗಿದೆ.
ಈ ಕುಟುಂಬದಲ್ಲಿ ಯಾರೊಬ್ಬರೂ ಕೋವಿಡ್-19 ಲಸಿಕೆ ಹಾಕಿಸಿ ಕೊಂಡಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾದರೆ ಬಾದ್ ಖಾಲ್ಸಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಅಥವಾ ಸಿಯೋಲಿಯಲ್ಲಿರುವ ಇನ್ನೊಂದು ಪಿಎಚ್‌ಸಿಗೆ ಹೋಗುತ್ತಾರೆ. ಖಾಸಗಿ ಕ್ಲಿನಿಕ್‌ಗಳು ದುಬಾರಿಯಾಗಿರುವುದರಿಂದ ಅದು ಇವರ ಕೊನೆಯ ಆಯ್ಕೆ.
ಸಲ್ಮಾ ಹಣ ಖರ್ಚು ಮಾಡುವುದರಲ್ಲಿ ತುಂಬಾ ಜಾಗರೂಕತೆ ವಹಿಸುತ್ತಾರೆ. "ಹಣ ಇಲ್ಲದೇ ಇದ್ದಾಗ, ನಾವು ಚಿಂದಿ ಆಯುವವರ ಬಳಿ ಹೋಗುತ್ತೇವೆ. ಅಲ್ಲಿ ಸುಮಾರು 200 ರೂಪಾಯಿಗಳಿಗೆ ಬಟ್ಟೆಗಳು ಸಿಗುತ್ತವೆ," ಎಂದು ಅವರು ಹೇಳುತ್ತಾರೆ.
ಕೆಲವೊಮ್ಮೆ ಕುಟುಂಬವು ಸೋನಿಪತ್‌ನ ಇತರ ಮಾರ್ಕೆಟ್‌ಗಳಿಗೆ ಹೋಗುತ್ತದೆ. “ನಾವು ನವರಾತ್ರಿಯಂದು ಹತ್ತಿರದಲ್ಲಿ ನಡೆಯುವ ರಾಮ್ ಲೀಲಾ ನೋಡಲು ಹೋಗುತ್ತೇವೆ. ಹಣವಿದ್ದರೆ ಬೀದಿಬದಿ ತಿಂಡಿ ತಿನ್ನುತ್ತೇವೆ.” ಎಂದು ತನು ಹೇಳುತ್ತಾಳೆ.
"ನನ್ನದು ಮುಸ್ಲಿಂ ಹೆಸರಾದರೂ, ನಾನು ಹಿಂದೂ. ನಾವು ಹನುಮಾನ್, ಶಿವ, ಗಣೇಶ, ಎಲ್ಲರನ್ನೂ ಪೂಜಿಸುತ್ತೇವೆ, " ಎಂದು ಸಲ್ಮಾ ಹೇಳುತ್ತಾರೆ.
"ಮತ್ತು ನಾವು ನಮ್ಮ ಕೆಲಸದ ಮೂಲಕವೇ ನಮ್ಮ ಪೂರ್ವಜರನ್ನು ಪೂಜಿಸುತ್ತೇವೆ!" ಎಂದು ತಾಯಿಯ ಮಾತಿನ ಜೊತೆಗೆ ತನ್ನದನ್ನೂ ಸೇರಿಸುತ್ತಾ, ದಿಲ್ಶಾದ್ ತಾಯಿಯನ್ನು ನಗಿಸುತ್ತಾನೆ .
*****
ಮಾರ್ಕೆಟ್‌ನಲ್ಲಿ ವ್ಯಾಪಾರ ಕಡಿಮೆಯಾದಾಗ, ಸಲ್ಮಾ ಮತ್ತು ವಿಜಯ್ ಹತ್ತಿರದ ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡುತ್ತಾರೆ. ಹೀಗೆ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ನಡೆಯುತ್ತದೆ. ಹಳ್ಳಿಗಳಿಗೆ ಹೋಗಿ ಇವರು ಮಾರಾಟ ಮಾಡುವುದು ಅಪರೂಪ. ಆದರೆ ಒಮ್ಮೆ ಹೋದರೆ 400 ರಿಂದ 500 ರುಪಾಯಿ ಸಿಗುತ್ತದೆ. "ಕೆಲವೊಮ್ಮೆ ನಾವು ತುಂಬಾ ಸುತ್ತಾಡುತ್ತೇವೆ, ನಮ್ಮ ಕಾಲುಗಳು ಮುರಿದುಹೋದಂತೆ ಆಗುತ್ತದೆ," ಎಂದು ಸಲ್ಮಾ ಹೇಳುತ್ತಾರೆ.
ಹಳ್ಳಿಯವರು ಕೆಲವೊಮ್ಮೆ ಅವರಿಗೆ ಪಶುಗಳನ್ನು ಕೊಡುತ್ತಾರೆ. ಈ ಎಳೆಯ ಕರುಗಳನ್ನು ಹಾಲು ನೀಡುವ ತಾಯಿ ಹಸುವಿನಿಂದ ಬೇರ್ಪಡಿಸಲು ಈ ಕರುಗಳನ್ನು ಇವರಿಗೆ ಕೊಡುತ್ತಾರೆ. ಈ ಕುಟುಂಬಕ್ಕೆ ಸರಿಯಾದ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸುವಷ್ಟು ಆದಾಯವೂ ಇಲ್ಲದೆ ಇರುವುದರಿಂದ ಪಾದಚಾರಿ ಮಾರ್ಗದಲ್ಲೇ ವಾಸಿಸಬೇಕಾಗಿದೆ.
ತನು ರಾತ್ರಿಯಲ್ಲಿ ತಾನು ಓಡಿಸಬೇಕಾದ ಕುಡುಕರನ್ನು ನೆನೆಸಿಕೊಂಡು ನಗುತ್ತಾಳೆ. “ನಾವು ಅವರನ್ನು ಕೂಗಾಡುತ್ತಾ ಹೊಡೆದು ಓಡಿಸಬೇಕು. ನಮ್ಮ ತಾಯಂದಿರು ಮತ್ತು ಸಹೋದರಿಯರು ಇಲ್ಲೇ ಮಲಗುತ್ತಾರೆ,” ಎಂದು ದಿಲ್ಶಾದ್ ಹೇಳುತ್ತಾನೆ.
ಇತ್ತೀಚೆಗೆ, ನಗರ ನಿಗಮದವರು (ಸೋನಿಪತ್ ಮುನ್ಸಿಪಲ್ ಕಾರ್ಪೊರೇಷನ್) ಎಂದು ಹೇಳಿಕೊಳ್ಳುವ ಕೆಲವರು ಈ ಕುಟುಂಬವನ್ನು ದೂರ ಎಲ್ಲಾದರೂ ಹೋಗುವಂತೆ ಹೇಳಿದರು. ಆ ಜನರು ಜುಗ್ಗಿಗಳ ಹಿಂದೆ ಕಸ ಸುರಿಯುವ ಜಾಗಕ್ಕೆ ಗೇಟ್ ಹಾಕಿ ಇವರು ವಾಸಿಸುತ್ತಿರುವ ಸರಕಾರಿ ಜಾಗವನ್ನು ಒತ್ತುವರಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಕುಟುಂಬದ ಆಧಾರ್, ಪಡಿತರ ಮತ್ತು ಕುಟುಂಬ ಕಾರ್ಡ್‌ಗಳ ಡೇಟಾವನ್ನು ದಾಖಲೀಕರಣ ಮಾಡಲು ಬರುವ ಅಧಿಕಾರಿಗಳು ತಾವು ಬಂದದ್ದಕ್ಕೆ ಯಾವುದೇ ದಾಖಲೆಗಳನ್ನೂ ಉಳಿಸಿಹೋಗುವುದಿಲ್ಲ. ಹಾಗಾಗಿ ಬಂದವರು ಯಾರೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ರೀತಿಯ ಬೇಟಿಗಳು ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುತ್ತವೆ.
"ನಮಗೂ ಒಂದು ತುಂಡು ಭೂಮಿ ಸಿಗುತ್ತದೆ ಎಂದು ಅವರು ನಮಗೆ ಹೇಳುತ್ತಾರೆ," ಎಂದು ತನು ಹೇಳುತ್ತಾಳೆ. “ಯಾವ ಭೂಮಿ? ಎಲ್ಲಿದೆ ಅದು? ಮಾರ್ಕೆಟ್ ಬಳಿ ಇದ್ಯಾ? ಅವರು ನಮಗೆ ಏನನ್ನೂ ಹೇಳುತ್ತಿಲ್ಲ.”
ಕುಟುಂಬದ ಆದಾಯ ಪ್ರಮಾಣಪತ್ರ ಒಂದು ಬಾರಿ ಇವರು ತಿಂಗಳಿಗೆ 50,000 ರುಪಾಯಿ ಸಂಪಾದಿಸಿರುವುದನ್ನು ತೋರಿಸಿದೆ. ಈಗ ಅವರು ತಿಂಗಳಿಗೆ ಕೇವಲ 10,000 ರುಪಾಯಿ ಸಂಪಾದಿಸುತ್ತಾರೆ. ಹಣ ಬೇಕಾದಾಗ ಸಂಬಂಧಿಕರಿಂದ ಸಾಲ ಪಡೆಯುತ್ತಾರೆ. ಸಂಬಂಧ ಹತ್ತಿರವಾದಷ್ಟೂ ಸಾಲದ ಮೇಲಿನ ಬಡ್ಡಿ ಕೂಡ ಕಡಿಮೆಯಾಗುತ್ತದೆ. ವ್ಯಾಪಾರ ಚೆನ್ನಾಗಿ ಆದಾಗ ಸಾಲದ ಹಣವನ್ನು ಹಿಂದಿರುಗಿಸುತ್ತಾರೆ, ಆದರೆ ಕೊರೋನ ನಂತರ ವ್ಯಾಪಾರ ಕಡಿಮೆಯಾಗಿದೆ.
"ಕೋವಿಡ್ ಸಮಯ ಚೆನ್ನಾಗಿತ್ತು," ಎಂದು ತನು ಹೇಳುತ್ತಾಳೆ. "ಮಾರ್ಕೆಟ್ ಶಾಂತವಾಗಿತ್ತು. ನಾವು ಸರ್ಕಾರಿ ಟ್ರಕ್‌ಗಳಿಂದ ಪಡಿತರ ಆಹಾರವನ್ನು ತೆಗೆದುಕೊಳ್ಳುತ್ತಿದ್ದೆವು. ಜನರು ಬಂದು ಮಾಸ್ಕ್‌ಗಳನ್ನು ಕೊಡುತ್ತಿದ್ದರು,” ಎಂದು ನೆನಪಿಸಿಕೊಳ್ಳುತ್ತಾಳೆ.
ಸಲ್ಮಾ ಹೆಚ್ಚು ಚಿಂತಿಸುತ್ತಾ, “ಕೊರೋನದ ನಂತರ ಜನ ನಮ್ಮನ್ನು ಹೆಚ್ಚು ಅನುಮಾನದಿಂದ ನೋಡುತ್ತಿದ್ದಾರೆ. ಅವರ ನೋಟದಲ್ಲಿ ದ್ವೇಷ ತುಂಬಿದೆ. ಪ್ರತಿ ಬಾರಿ ಹೊರಗೆ ಹೋದಾಗಲೂ ಕೆಲ ಸ್ಥಳೀಯರು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸುತ್ತಾರೆ,” ಎಂದು ಹೇಳುತ್ತಾರೆ.
“ಅವರು ನಮ್ಮನ್ನು ಅವರ ಹಳ್ಳಿಗಳಲ್ಲಿರಲು ಬಿಡುವುದಿಲ್ಲ. ಅವರು ನಮ್ಮ ಜಾತಿಯನ್ನು ಏಕೆ ನಿಂದಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ,” ಎಂದು ಹೇಳುವ ಸಲ್ಮಾ, ಜಗತ್ತು ಅವರನ್ನು ಕೂಡ ಸಮಾನವಾಗಿ ನೋಡಬೇಕೆಂದು ಬಯಸುತ್ತಾರೆ. “ನಾವು ತಿನ್ನುವ ರೊಟ್ಟಿಯನ್ನೇ ಅವರೂ ತಿನ್ನುತ್ತಾರೆ. ನಾವೆಲ್ಲರೂ ಒಂದೇ ಆಹಾರವನ್ನು ಸೇವಿಸುತ್ತೇವೆ. ನಮಗೂ ಶ್ರೀಮಂತರಿಗೂ ಏನು ವ್ಯತ್ಯಾಸ ಇದೆ?”
ಅನುವಾದ: ಚರಣ್ ಐವರ್ನಾಡು