ಪ್ರಸ್ತುತ ಕುನೋ ಚೀತಾಗಳಿಗೆ ಸಂಬಂಧಿಸಿದ ವಿಷಯಗಳು ರಾಷ್ಟ್ರೀಯ ಭದ್ರತೆಯೊಂದಿಗೆ ಸಂಬಂಧ ಹೊಂದಿವೆ. ಈ ಮಾಹಿತಿಯ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅದು ಭಾರತದ ಜೊತೆಗಿನ ವಿದೇಶಗಳ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು.
ಇದು ಚಿರತೆಗಳ ನಿರ್ವಹಣೆಯ ಬಗ್ಗೆ ವಿವರಗಳನ್ನು ಕೋರಿ ಜುಲೈ 2024 ರಲ್ಲಿ ಮಾಹಿತಿ ಹಕ್ಕು (ಆರ್ಟಿಐ) ಕೋರಿಕೆಯನ್ನು ತಿರಸ್ಕರಿಸುವಾಗ ಮಧ್ಯಪ್ರದೇಶ ಸರ್ಕಾರ ನೀಡಿದ ಕಾರಣ. ಆರ್ಟಿಐ ಅರ್ಜಿ ಸಲ್ಲಿಸಿದ ಭೋಪಾಲ್ ಮೂಲದ ಕಾರ್ಯಕರ್ತ ಅಜಯ್ ದುಬೆ, "ಹುಲಿಗಳ ಬಗ್ಗೆ ಎಲ್ಲಾ ಮಾಹಿತಿ ಪಾರದರ್ಶಕವಾಗಿದೆ, ಹಾಗಿದ್ದರೆ ಚೀತಾಗಳ ವಿಷಯದಲ್ಲಿ ಮಾತ್ರ ಹೀಗೇಕೆ? ವನ್ಯಜೀವಿಗಳ ನಿರ್ವಹಣೆಯ ವಿಷಯದಲ್ಲಿ ಪಾರದರ್ಶಕತೆಯೇ ಅದರ ಮುಖ್ಯ ಮಾನದಂಡ” ಎಂದು ಹೇಳುತ್ತಾರೆ.
ಕುನೋ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಅಗರ ಎನ್ನುವ ಊರಿನವರಾದ ರಾಮಗೋಪಾಲ್ ಎನ್ನುವವರಿಗೆ ತಮ್ಮ ಜೀವನೋಪಾಯ ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ರಾಜತಾಂತ್ರಿಕ ಸಂಬಂಧಗಳಿಗೆ ಅಪಾಯವೊಡ್ಡುತ್ತದೆ ಎನ್ನುವ ವಿಷಯವೇ ತಿಳಿದಿಲ್ಲ. ಅವರು ಮತ್ತು ಅವರಂತಹ ಇಲ್ಲಿನ ಸಾವಿರಾರು ಆದಿವಾಸಿ ಜನರಿಗೆ ಇದಕ್ಕಿಂತಲೂ ಹೆಚ್ಚಿನ ಚಿಂತೆಗೀಡುಮಾಡುವ ಸಂಗತಿಗಳಿವೆ.
ಅವರು ಇತ್ತೀಚೆಗೆ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರು ಎತ್ತುಗಳ ಬದಲು ಈ ಯಂತ್ರವನ್ನು ಖರೀದಿಸಬಲ್ಲಷ್ಟು ಶ್ರೀಮಂತರಾದರು ಎಂದಲ್ಲ. ಅವರು ಅಂತಹ ಶ್ರೀಮಂತಿಕೆಯಿಂದ ಮೈಲುಗಟ್ಟಲೆ ದೂರದಲ್ಲಿದ್ದಾರೆ.
“ಮೋದಿಯವರು ನಮ್ಮ ಎತ್ತುಗಳನ್ನು ಹೊರಗೆ ಬಿಡದಂತೆ ಆದೇಶಿಸಿದ್ದಾರೆ. ನಮಗೆ ಎತ್ತು ಮೇಯಿಸಲು ಇರುವ ಸ್ಥಳವೆಂದರೆ ಕಾಡು [ಕುನೋ] ಆದರೆ ಆದರೆ ಅಲ್ಲಿ ಎತ್ತುಗಳನ್ನು ಮೇಯಿಸಲು ಅಲ್ಲಿಗೆ ಹೋದರೆ ಫಾರೆಸ್ಟ್ ರೇಂಜರುಗಳು ನಮ್ಮನ್ನು ಹಿಡಿದು ಜೈಲಿಗೆ ಹಾಕುತ್ತಾರೆ. ನಮಗೆ ಅದರ ಬದಲು ಟ್ರ್ಯಾಕ್ಟರ್ ಬಾಡಿಗೆಗೆ ಪಡೆಯುವುದೇ ಲೇಸು ಎನ್ನಿಸಿತು.”
ಆದರೆ ರಾಮಗೋಪಾಲ್ ಅವರ ಕುಟುಂಬ ಟ್ರ್ಯಾಕ್ಟರ್ ಬಾಡಿಗೆ ಭರಿಸುವ ಸ್ಥಿತಿಯಲ್ಲಿಲ್ಲ. ಅವರದು ಬಡತನದ ರೇಖೆಗಿಂತಲೂ ಕೆಳಗಿರುವ ಕುಟುಂಬ. ಕುನೋ ರಾಷ್ಟ್ರೀಯ ಉದ್ಯಾನವು ಚಿರತೆಗೆಳ ನೆಲೆಯಾದ ನಂತರ ಅವರು ತಮ್ಮ ಜೀವನೋಪಾಯವನ್ನು ಕಳೆದುಕೊಂಡು ತೀವ್ರ ನಷ್ಟದಲ್ಲಿದ್ದಾರೆ.
2022ರಲ್ಲಿ ನರೇಂದ್ರ ಮೋದಿಯವರ ಹುಟ್ಟಿದ ದಿನದಂದು ಈ ಸಂರಕ್ಷಿತ ಪ್ರದೇಶವು ದೇಶದ ಗಮನವನ್ನು ಸೆಳೆಯಿತು. ಅಂದು ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ ಆಫ್ರಿಕನ್ ಚೀತಾಗಳನ್ನು (ಅಸಿನೊನಿಕ್ಸ್ ಜುಬಾಟಸ್) ಈ ಅಭಯಾರಣ್ಯದಲ್ಲಿ ಬಿಡಲಾಯಿತು. ಇದರ ಹಿಂದೆ ಎಲ್ಲಾ ಬಗೆಯ ದೊಡ್ಡ ಬೆಕ್ಕುಗಳಿಗೂ ನೆಲೆಯಾಗಿರುವ ದೇಶದ ಪ್ರಧಾನಿ ಎನ್ನಿಸಿಕೊಳ್ಳುವ ಪ್ರಧಾನಿಯವರ ಮಹತ್ವಾಕಾಂಕ್ಷೆ ಕೆಲಸ ಮಾಡಿತ್ತು.
ಕುತೂಹಲಕಾರಿ ಸಂಗತಿಯೆಂದರೆ , ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆ 2017-2031 ಗ್ರೇಟ್ ಇಂಡಿಯನ್ ಬಸ್ಟರ್ಡ್, ಗಂಗಾ ಡಾಲ್ಫಿನ್, ಟಿಬೆಟಿಯನ್ ಜಿಂಕೆ ಮತ್ತು ಇತರ ಸ್ಥಳೀಯ ಮತ್ತು ಹೆಚ್ಚು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸುವ ಕ್ರಮಗಳನ್ನು ವಿವರಿಸುತ್ತದೆ. ಆದರೆ ಇದರಲ್ಲಿ ಚೀತಾಗಳನ್ನು ಸಂರಕ್ಷಿಸುವ ಗುರಿಯ ಕುರಿತು ಪ್ರಸ್ತಾಪವೇ ಇಲ್ಲ. ಅಲ್ಲದೆ 2013ರಲ್ಲಿ ಸುಪ್ರೀಮ್ ಕೋರ್ಟ್ ಕೂಡಾ ಚಿರತೆಗಳನ್ನು ತರುವ ಪ್ರಸ್ತಾಪವನ್ನು ತಳ್ಳಿಹಾಕಿತ್ತು. ಜೊತೆಗೆ ಈ ಕುರಿತು 'ವಿವರವಾದ ವೈಜ್ಞಾನಿಕ ಅಧ್ಯಯನ' ನಡೆಸುವಂತೆ ಸೂಚಿಸಿತ್ತು.
ಇದೆಲ್ಲದರ ಹೊರತಾಗಿಯೂ, ಚೀತಾಗಳ ಪ್ರಯಾಣ, ಪುನರ್ವಸತಿ ಮತ್ತು ಪ್ರಚಾರಕ್ಕಾಗಿ ನೂರಾರು ಕೋಟಿಗಳನ್ನು ಖರ್ಚು ಮಾಡಲಾಗಿದೆ.
ಕುನೋ ಅರಣ್ಯ ಚೀತಾ ಸಫಾರಿಯಾಗಿ ಪರಿವರ್ತನೆ ಹೊಂದುವ ಮೂಲಕ ಹಲವು ಆದಿವಾಸಿ ಸಮುದಾಯದ ಜನರ ಹೊಟ್ಟೆಪಾಡಿಗೆ ಕುತ್ತು ತಂದಿದೆ. ಗೋಪಾ ಸಹರಿಯಾ ಅವರಂತಹ ಆದಿವಾಸಿ ಸಮುದಾಯದ ಜನರು ಹಣ್ಣು, ಬೇರುಗಳು, ಗಿಡಮೂಲಿಕೆಗಳು, ರಾಳ ಮತ್ತು ಉರುವಲು ಸೌದೆಯಂತಹ ಮರಮುಟ್ಟುಗಳಲ್ಲದ ಎನ್‌ಟಿಎಫ್‌ಟಿ ಕಾಡುತ್ಪತ್ತಿಗಳಿಗೆ ಇದೇ ಕಾಡನ್ನು ಅವಲಂಬಿಸಿದ್ದರು. ಕುನೋ ಅರಣ್ಯ ಪ್ರದೇಶವು ಗಣನೀಯ ವಿಸ್ತೀರ್ಣದ ಪ್ರದೇಶವನ್ನು ಒಳಗೊಂಡಿದ್ದು, ಇದು ಬೃಹತ್ ಕುನೋ ವನ್ಯಜೀವಿ ವಿಭಾಗಕ್ಕೆ ಸೇರುತ್ತದೆ. ಇದರ ಒಟ್ಟು ವಿಸ್ತೀರ್ಣ 1,235 ಚದರ ಕಿಲೋಮೀಟರ್.
“ಪ್ರತಿದಿನ ಬೆಳಗ್ಗೆಯಿಂದ ಸಂಜೆಯ ತನಕ 12 ಗಂಟೆಗಳ ಕಾಲ ನಾನು ಕನಿಷ್ಟ ನನ್ನ ಪಾಲಿನ 50 ಮರಗಳಡಿ ಕೆಲಸ ಮಾಡುತ್ತಿದ್ದೆ. ಮತ್ತೆ ನಾಲ್ಕು ದಿನಗಳ ನಂತರ ಹಿಂದಿರುಗಿ ರಾಳ ಸಂಗ್ರಹಿಸುತ್ತಿದ್ದೆ. ಕೇವಲ ನನ್ನ ಚೀರ್ ಮರಗಳಿಂದಲೇ ನನಗೆ ತಿಂಗಳಿಗೆ 10,000 ರೂಪಾಯಿಗಳ ಆದಾಯ ಸಿಗುತ್ತಿತ್ತು” ಎಂದು ರಾಮ್ ಗೋಪಾಲ್ ಹೇಳುತ್ತಾರೆ. ಈಗ ಆ 1,200 ಚೀರ್ ಗೊಂದ್ ಮರಗಳು ಸ್ಥಳೀಯರಿಗೆ ನಿಲುಕುತ್ತಿಲ್ಲ. ಅಭಯಾರಣ್ಯವನ್ನು ಚೀತಾ ಪಾರ್ಕ್ ಆಗಿ ಪರಿವರ್ತಿಸಿದ ನಂತರ ಈ ಮರಗಳೆಲ್ಲವೂ ಬಫರ್ ವಲಯದೊಳಗೆ ಕಣ್ಮರೆಯಾದವು.
ಬದುಕಿನ ಮೂವತ್ತರ ದಶಕದಲ್ಲಿರುವ ರಾಮ ಗೋಪಾಲ್ ಹಾಗೂ ಸಂತು ದಂಪತಿ ಕುನೋ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲೇ ಕೆಲವು ಬಿಘಾಗಳಷ್ಟು ಮಳೆಯಾಶ್ರಿತ ಭೂಮಿ ಹೊಂದಿದ್ದಾರೆ. “ಅಲ್ಲಿ ನಮ್ಮ ಮನೆ ಬಳಕೆಗಾಗಿ ಬಾಜ್ರಾ (ಏಕದಳ ಧಾನ್ಯ) ಹಾಗೂ ಮಾರಾಟಕ್ಕೆ ಒಂದಷ್ಟು ತಿಲ್ (ಎಳ್ಳು) ಬೆಳೆಯುತ್ತೇವೆ” ಎಂದು ರಾಮ ಗೋಪಾಲ್ ಹೇಳುತ್ತಾರೆ. ಬಿತ್ತನೆ ಸಮಯದಲ್ಲಿ ಅವರು ಟ್ರ್ಯಾಕ್ಟರ್ ಬಾಡಿಗೆ ಪಡೆಯಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.
“ಈ ಕಾಡನ್ನು ಹೊರತುಪಡಿಸಿದರೆ ನಮ್ಮ ಬಳಿ ಸ್ವಂತದ್ದೆನ್ನುವುದು ಏನೂ ಇಲ್ಲ. ಬೇಸಾಯ ಮಾಡಲು ಸಾಕಷ್ಟು ನೀರಿಲ್ಲ. ಈಗ ಕಾಡಿಗೆ ಪ್ರವೇಶ ನಿಷೇಧಿಸಿರುವುದರಿಂದಾಗಿ ನಮಗೆ [ಕೆಲಸ ಹುಡುಕಿಕೊಂಡು] ವಲಸೆ ಹೋಗುವುದೊಂದೇ ಇರುವ ದಾರಿ” ಎಂದು ಅವರು ಹೇಳುತ್ತಾರೆ. ಇದರ ಜೊತೆಗೆ ಅರಣ್ಯ ಇಲಾಖೆಯು ತನ್ನ ವಾಡಿಕೆಯ ತೆಂದು ಎಲೆ ಖರೀದಿಯನ್ನೂ ತೀರಾ ಕಡಿಮೆ ಮಾಡಿದ್ದು, ಇದು ಈ ಜನರಿಗೆ ಬಿದ್ದ ಇನ್ನೊಂದು ದೊಡ್ಡ ಹೊಡೆತವಾಗಿದೆ. ಇಡೀ ರಾಜ್ಯದ ಆದಿವಾಸಿ ಸಮುದಾಯಗಳಿಗೆ ಈ ಎಲೆ ಖರೀದಿಯು ಇಂದು ಖಚಿತ ಆದಾಯ ಮೂಲವಾಗಿತ್ತು. ಈಗ ಖರೀದಿಯ ಕುಸಿತದೊಂದಿಗೆ ರಾಮ ಗೋಪಾಲ್ ಅವರಿಗೂ ಆದಾಯ ಕಡಿಮೆಯಾಗಿದೆ.
ಮಧ್ಯಪ್ರದೇಶ ರಾಜ್ಯದ ಎನ್‌ಟಿಎಫ್‌ಪಿ ಅರಣ್ಯಗಳು ಆ ಅರಣ್ಯಗಳ ಒಳಗೆ ಮತ್ತು ಅದರ ಸುತ್ತ ವಾಸಿಸುವ ಜನರ ಜೀವನಾಡಿಗಳು. ಇವುಗಳಲ್ಲಿ ಮುಖ್ಯವಾದದ್ದು ಚಿರ್ ಗೊಂಡ್ ಮರ. ಬೇಸಗೆಯ ತಿಂಗಳುಗಳಾದ ಚೈತ್, ಬೈಸಾಖ್, ಜೈತ್ ಮತ್ತು ಆಸಾಡ್ ಮಾಸಗಳನ್ನು ಹೊತುಪಡಿಸಿ ವರ್ಷವಿಡೀ ಈ ಮರದಿಂದ ರಾಳ ತೆಗೆಯಲಾಗುತ್ತದೆ. ಕೆಎನ್‌ಪಿ ಮತ್ತು ಅದರ ಸುತ್ತಮುತ್ತ ವಾಸಿಸುವ ಬಹುತೇಕ ಜನರು ಸಹರಿಯಾ ಆದಿವಾಸಿ ಸಮುದಾಯಕ್ಕೆ ಸೇರಿದವರು. ಇವರನ್ನು ವಿಶೇಷ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಎಂದು ರಾಜ್ಯದಲ್ಲಿ ಗುರುತಿಸಲಾಗಿದೆ. ಈ ಸಮುದಾಯದ ಶೇಕಡಾ 98ರಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಅರಣ್ಯವನ್ನು ಅವಲಂಬಿಸಿದ್ದಾರೆ ಎಂದು ಈ 2022ರ ವರದಿ ಹೇಳುತ್ತದೆ.
ಅಗರ ಗ್ರಾಮವು ಕಾಡುತ್ಪತ್ತಿ ವ್ಯವಹಾರದ ಪ್ರಮುಖ ಕೇಂದ್ರ. ಇಲ್ಲಿ ರಾಜು ತಿವಾರಿಯವರಂತಹ ವ್ಯಾಪಾರಿಗಳು ಸ್ಥಳೀಯರು ತರುವ ಕಾಡುತ್ಪತ್ತಿಗಳು ಖರೀದಿಸುತ್ತಾರೆ. ಅರಣ್ಯಕ್ಕೆ ಪ್ರವೇಶವನ್ನು ನಿಷೇಧಿಸುವ ಮೊದಲು ನೂರಾರು ಕಿಲೋಗ್ರಾಂಗಳಷ್ಟು ರಾಳ, ಬೇರುಗಳು ಮತ್ತು ಗಿಡಮೂಲಿಕೆಗಳು ಮಾರುಕಟ್ಟೆಗೆ ಬರುತ್ತಿದ್ದವು ಎಂದು ತಿವಾರಿ ಹೇಳುತ್ತಾರೆ.
"ಆದಿವಾಸಿಗಳು ಕಾಡಿಗೆ ಅಂಟಿಕೊಂಡಿದ್ದರು, ಮತ್ತು ನಾವು ಆದಿವಾಸಿಗಳಿಗೆ ಅಂಟಿಕೊಂಡಿದ್ದೆವು" ಎಂದು ಅವರು ಹೇಳುತ್ತಾರೆ. "ಕಾಡಿನೊಂದಿಗಿನ ಅವರ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಮತ್ತು ಅದರ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ."
ಮಧ್ಯಪ್ರದೇಶ ರಾಜ್ಯದ ಎನ್‌ಟಿಎಫ್‌ಪಿ ಅರಣ್ಯಗಳು ಆ ಅರಣ್ಯಗಳ ಒಳಗೆ ಮತ್ತು ಅದರ ಸುತ್ತ ವಾಸಿಸುವ ಜನರ ಜೀವನಾಡಿಗಳು
*****
ಜನವರಿ ತಿಂಗಳ ಒಂದು ಚಳಿಯಿಂದ ಕೂಡಿದ ಬೆಳಗಿನಂದು ರಾಮ ಗೋಪಾಲ್ ಕೈಯಲ್ಲಿ ಒಂದು ಹಗ್ಗ ಮತ್ತು ಕುಡುಗೋಲು ಮನೆಯಿಂದ ಹೊರಟಿದ್ದರು. ಕುನೊ ರಾಷ್ಟ್ರೀಯ ಉದ್ಯಾನವನದ ಕಲ್ಲಿನ ಗೋಡೆಯ ಗಡಿಗಳು ಅಗರದಲ್ಲಿರುವ ಅವರ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿವೆ. ಅವರು ಇಲ್ಲಿಗೆ ಆಗಾಗ ಬರುತ್ತಿರುತ್ತಾರೆ. ಇಂದು ಗಂಡ ಹೆಂಡತಿ ಇಬ್ಬರೂ ಸೇರಿ ಸೌದೆ ತರಲೆಂದು ಹೊರಟಿದ್ದರು. ಹಗ್ಗವನ್ನು ಸೌದೆ ಹೊರೆ ಕಟ್ಟಲೆಂದು ತೆಗೆದುಕೊಂಡಿದ್ದರು.
ಅವರ ಪತ್ನಿ ಸಂತು ಚಿಂತೆಯಲ್ಲಿದ್ದರು. ಅವರನ್ನು ಸೌದೆ ಒಟ್ಟು ಮಾಡಲು ಸಾಧ್ಯವಾಗುತ್ತದೋ, ಇಲ್ಲವೋ ಎನ್ನುವ ಆತಂಕ ಕಾಡುತ್ತಿತ್ತು. “ಅವರು [ಅರಣ್ಯಾಧಿಕಾರಿಗಳು] ಕೆಲವೊಮ್ಮೆ ಒಳಗೆ ಹೋಗಲು ಬಿಡುವುದಿಲ್ಲ. ನಾವು ಬರಿಗೈಯಲ್ಲಿ ಮರಳಬೇಕಾಗಬಹುದು” ಎಂದು ಅವರು ಹೇಳಿದರು. ತಮಗೆ ಇದುವರೆಗೂ ಗ್ಯಾಸ್ ಕೊಳ್ಳಲು ಸಾಧ್ಯವಾಗಿಲ್ಲ ಎಂದು ಈ ದಂಪತಿ ಹೇಳುತ್ತಾರೆ.
"ಹಿಂದಿನ ಊರಿನಲ್ಲಿ [ಉದ್ಯಾನವನದ ಒಳಗೆ] ಕುನೊ ನದಿ ಇತ್ತು, ಆ ನದಿಯಿಂದಾಗಿ ನಮಗೆ ವರ್ಷದ 12 ತಿಂಗಳೂ ನೀರು ಸಿಗುತ್ತಿತ್ತು. ನಮಗೆ ಅಲ್ಲಿ ತೆಂದು, ಬೇರ್, ಮಹುವಾ, ಜಡಿ ಬೂಟಿ [ಬೇರುಗಳು ಮತ್ತು ಗಿಡಮೂಲಿಕೆಗಳು], ಉರುವಲು ಸಿಗುತ್ತಿತ್ತು..." ಸಂತು ನಡೆಯುತ್ತಲೇ ನಮ್ಮೊಂದಿಗೆ ಮಾತನಾಡುತ್ತಿದ್ದರು.
ಕುನೋ ಅಭಯಾರಣ್ಯದಲ್ಲಿ ಹುಟ್ಟಿ ಬೆಳೆದ ಸಂತು 1999ರಲ್ಲಿ ತನ್ನ ಹೆತ್ತವರೊಂದಿಗೆ ಆ ಕಾಡಿನಿಂದ ಹೊರಗೆ ಬಂದರು. ಆ ಸಂದರ್ಭದಲ್ಲಿ ಇಲ್ಲಿ ಸಿಂಹಗಳ ಇನ್ನೊಂದು ನೆಲೆಯನ್ನು ನಿರ್ಮಿಸುವ ಸಲುವಾಗಿ ಈ ಕಾಡಿನಿಂದ 16,500 ಜನರನ್ನು ಎತ್ತಂಗಡಿ ಮಾಡಲಾಗಿತ್ತು. ಆದರೆ ಪ್ರಸ್ತುತ ಸಿಂಹಗಳು ಗುಜರಾತಿನ ಗಿರ್ ಅರಣ್ಯದಲ್ಲೇ ಉಳಿದಿವೆ. ಓದಿ: ಕುನೋ ಪಾರ್ಕ್: ಯಾರಿಗೂ ದೊರೆಯದ ಸಿಂಹಪಾಲು
“ಮುಂದೆ ಹೋದಂತೆ ಪರಿವರ್ತನೆ ಬರಲಿದೆ. ಜಂಗಲ್ ಮೇ ಜಾನಾ ಹೀ ನಹಿ [ಮುಂದೆ ಇನ್ನೆಂದೂ ಕಾಡು ಪ್ರವೇಶಿಸಲಾಗದ ದಿನವೊಂದು ಬರಲಿದೆ” ಎಂದು ರಾಮ ಗೋಪಾಲ್ ಹೇಳುತ್ತಾರೆ.
ಅರಣ್ಯ ಹಕ್ಕುಗಳ ಕಾಯ್ದೆ 2006 ಸ್ಥಳೀಯ ಜನರ ಒಪ್ಪಿಗೆಯಿಲ್ಲದೆ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರಕ್ಕೆ ಅವಕಾಶ ನೀಡದಿದ್ದರೂ, ಚಿರತೆಗಳ ಆಗಮನದೊಂದಿಗೆ, ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ಜಾರಿಗೆ ಬಂದಿದೆ. “...ರಸ್ತೆಗಳು, ಸೇತುವೆಗಳು, ಕಟ್ಟಡಗಳು, ಬೇಲಿಗಳು ಅಥವಾ ತಡೆಗೋಡೆಗಳನ್ನು ನಿರ್ಮಿಸಬಹುದು... (ಬಿ) ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಭಯಾರಣ್ಯ ಮತ್ತು ಕಾಡು ಪ್ರಾಣಿಗಳ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು.” ಎಂದು ಈ ಕಾಯ್ದೆ ಹೇಳುತ್ತದೆ.
ರಾಮ ಗೋಪಾಲ್ ಅವರಿಗೆ ಮೊದಲ ಸಲ [ಗಡಿ] ಗೋಡೆಯ ಕುರಿತು ತಿಳಿದಾಗ “ಅದು ಅರಣ್ಯದ ಸಲುವಾಗಿ ಎಂದು ನಮಗೆ ಹೇಳಲಾಯಿತು, ನಾವೂ ಇರಲಿ ಬಿಡು ಎಂದುಕೊಂಡೆವು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಆದರೆ ಮೂರು ವರ್ಷಗಳ ನಂತರ ʼಇನ್ನು ನೀವು ಒಳಗೆ ಬರುವಂತಿಲ್ಲ. ಈ ಗಡಿಯಿಂದ ಈಚೆಗೆ ಬರಬೇಡಿ ಎಂದರು. ಒಂದು ವೇಳೆ ನಿಮ್ಮ ಜಾನುವಾರಗಳು ಅರಣ್ಯದ ಒಳಗೆ ಬಂದರೆ ನಿಮಗೆ ದಂಡ ವಿಧಿಸಲಾಗುತ್ತದೆ ಅಥವಾ ನೀವು ಜೈಲಿಗೂ ಹೋಗಬೇಕಾಗಬಹುದುʼ ಎಂದು ಅವರು ಹೇಳಿದರು. ಒಳಗೆ ಹೋರೆ 20 ವರ್ಷದ ಜೈಲು ಶಿಕ್ಷೆ ಎಂದು ನಮಗೆ ತಿಳಿಸಲಾಯಿತು. ಜಾಮೀನು ಪಡೆಯುವುದಕ್ಕೆ ನಮ್ಮ ಬಳಿ ಹಣವೂ ಇಲ್ಲ” ಎಂದು ಎಂದು ಅವರು ನಗುತ್ತಾರೆ.
ಜಾನುವಾರುಗಳನ್ನು ಮೇಯಿಸುವ ಹಕ್ಕನ್ನು ಕಳೆದುಕೊಂಡ ನಂತರ ಈ ಭಾಗದಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ ಮತ್ತು ದನದ ಜಾತ್ರೆಗಳಂತೂ ಈಗ ಇತಿಹಾಸ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. 1999ರ ಎತ್ತಂಗಡಿಯ ಸಮಯದಲ್ಲೇ ಬಹಳಷ್ಟು ಜನರು ತಮ್ಮ ಜಾನುವಾರುಗಳನ್ನು ಹೊಸ ಜಾಗದಲ್ಲಿ ಹೇಗೆ ನೋಡಿಕೊಳ್ಳುವುದು, ಅವುಗಳನ್ನು ಎಲ್ಲಿ ಮೇಯಿಸುವುದು ಎನ್ನುವುದು ತಿಳಿಯದೆ ಅವುಗಳನ್ನು ಕಾಡಿನಲ್ಲೇ ಬಿಟ್ಟುಬಂದರು. ಈಗಲೂ ದನ ಮತ್ತು ಎತ್ತುಗಳು ಅಭಯಾರಣ್ಯದ ಸುತ್ತ ಅಲೆಯುತ್ತಿರುತ್ತವೆ. ಮೇಯಿಸಲು ಸ್ಥಳವಿಲ್ಲದ ಕಾರಣ ಅವುಗಳ ಮಾಲಿಕರು ಅವುಗಳನ್ನು ಮುಕ್ತವಾಗಿ ಬಿಟ್ಟು ಬಿಟ್ಟಿದ್ದಾರೆ. ಜಾನುವಾರುಗಳ ಮೇಲೆ ಕಾಡು ನಾಯಿಗಳು ದಾಳಿ ಮಾಡುವ ಸಾಧ್ಯತೆಯೂ ಇರುತ್ತದೆ. “ಅವು ನಿಮ್ಮನ್ನು ಹುಡುಕಿ ಕೊಲ್ಲುತ್ತವೆ [ನೀವು ಅಥವಾ ಜಾನುವಾರು ಕಾಡಿನ ಒಳಗೆ ಹೋದರೆ].”
ಆದರೆ ಉರುವಲಿನ ಅಗತ್ಯ ಎಷ್ಟಿದೆಯೆಂದರೆ, “ಚೋರಿ ಚುಪ್ಕೆ[ಕದ್ದುಮುಚ್ಚಿ]” ಈಗಲೂ ಕೆಲವರು ಕಾಡಿನ ಒಳಗೆ ಹೋಗುತ್ತಾರೆ. ಸಾಗೂ ಎನ್ನುವ ಅಗರದ 60 ವರ್ಷದ ಮಹಿಳೆ ತನ್ನ ಮೇಲೆ ಸೌದೆ ಹೊರೆಯನ್ನು ಹೊತ್ತು ತರುತ್ತಿದ್ದರು. ಅವರು ತನಗೆ ಈ ವಯಸ್ಸಿನಲ್ಲಿ ಹೊರಲು ಸಾಧ್ಯವಿರುವುದು ಇದೊಂದೇ ಹೊರೆ ಎನ್ನುತ್ತಾರೆ.
“ಜಂಗಲ್ ಮೇ ನಾ ಜಾನೇ ದೇ ರಹಾ ಹೈ [ನಮ್ಮನ್ನು ಕಾಡಿನೊಳಗೆ ಹೋಗಲು ಬಿಡುತ್ತಿಲ್ಲ]” ಎಂದು ಅವರು ಹೇಳುತ್ತಾರೆ. ನಮ್ಮ ಪ್ರಶ್ನೆಗಳು ಅವರಿಗೆ ಕುಳಿತುಕೊಳ್ಳಲು ಒಂದಷ್ಟು ಸಮಯ ನೀಡಿತು ಎನ್ನುತ್ತಾ ನಮ್ಮೊಂದಿಗೆ ಸಂತೋಷದಿಂದ ಮಾತಿಗೆ ತೊಡಗಿದರು. “ಈಗ ನನ್ನ ಬಳಿ ಉಳಿದಿರುವ ಎಮ್ಮೆಗಳನ್ನು ಮಾರಬೇಕಿದೆ.”
ಮೊದಲೆಲ್ಲ ಗಾಡಿಗಳಷ್ಟು ಸೌದೆ ತಂದು ಮಳೆಗಾಲಕ್ಕೆಂದು ಕೂಡಿಟ್ಟುಕೊಳ್ಳುತ್ತಿದ್ದೆವು ಎಂದು ಸಾಗೂ ಹೇಳುತ್ತಾರೆ. ಒಂದು ಕಾಲದಲ್ಲಿ ತಮ್ಮ ಮನೆಗಳನ್ನು ಇದೇ ಕಾಡಿನ ಮರಗಳು ಮತ್ತು ಎಲೆಗಳನ್ನು ಬಳಸಿ ನಿರ್ಮಿಸುತ್ತಿದ್ದೆವರು ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ನಮ್ಮ ಜಾನುವಾರುಗಳನ್ನು ಮೇಯಲು ಬಿಟ್ಟು ನಾವು ಸೌದೆ ಸಂಗ್ರಹಿಸುವುದು, ಮನೆಯಲ್ಲಿನ ಜಾನುವಾರುಗಳಿಗೆ ಹುಲ್ಲು ಕೊಯ್ಯುವುದು ಮತ್ತು ಮಾರಾಟಕ್ಕಾಗಿ ಟೆಂಡು ಎಲೆ ಕೊಯ್ಯುತ್ತಿದ್ದೆವು.”
ಈಗ ಆ ನೂರಾರು ಚದರ ಕಿಲೋಮೀಟರ್ ಜಾಗವನ್ನು ಚಿರತೆಗಳು ಮತ್ತು ಅವುಗಳನ್ನು ನೋಡಲು ಬರುವವರಿಗಾಗಿ ಮೀಸಲಿಡಲಾಗಿದೆ.
ಅಗರ ಗ್ರಾಮದಲ್ಲಿ ತನ್ನಂತೆಯೇ ನಷ್ಟಕ್ಕೊಳಗಾದ ಜನರ ಕುರಿತು ಮಾತನಾಡುತ್ತಾ ಕಾಶಿರಾಮ್, “ಚಿರತೆ ಬಂದಿದ್ದರಿಂದ [ನಮಗೆ] ಏನೂ ಒಳ್ಳೆಯದಾಗಿಲ್ಲ. ಆಗಿದ್ದೆಲ್ಲ ಬರೀ ನಷ್ಟ.”
*****
ಚೆಂತಿಖೇಡಾ, ಪಾದ್ರಿ, ಪೈರಾ-ಬಿ, ಖಜುರಿ ಖುರ್ದ್ ಮತ್ತು ಚಕ್ಪಾರೋನ್ ಗ್ರಾಮಗಳು ದೊಡ್ಡ ಸಮಸ್ಯೆಗಳನ್ನು ಹೊಂದಿವೆ. ಇಲ್ಲಿ ಸಮೀಕ್ಷೆ ನಡೆಸಲಾಗಿದ್ದು ಕುವಾರಿ ನದಿಗೆ ಅಣೆಕಟ್ಟು ನಿರ್ಮಿಸುವ ಕೆಲಸ ಪ್ರಾರಂಭವಾಗಿದೆ ಎಂದು ಅವರು ಹೇಳುತ್ತಾರೆ. ಈ ಅಣೆಕಟ್ಟು ಈ ಊರುಗಳ ಜನರ ಮನೆಗಳು ಮತ್ತು ಹೊಲಗಳನ್ನು ಪ್ರವಾಹಕ್ಕೆ ಸಿಲುಕಿಸಲಿದೆ.
"ನಾವು ಕಳೆದ 20 ವರ್ಷಗಳಿಂದ ಅಣೆಕಟ್ಟಿನ ಬಗ್ಗೆ ಕೇಳುತ್ತಿದ್ದೇವೆ. ಅಣೆಕಟ್ಟಿನಿಂದ ನಿಮ್ಮ ಗ್ರಾಮಗಳು ಸ್ಥಳಾಂತರಗೊಳ್ಳುವುದರಿಂದಾಗಿ ನಿಮಗೆ ನರೇಗಾ ಉದ್ಯೋಗ ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ" ಎಂದು ಜಸ್ರಾಮ್ ಆದಿವಾಸಿ ಹೇಳುತ್ತಾರೆ. ಇಲ್ಲಿನ ಅನೇಕರಿಗೆ ನರೇಗಾ ಪ್ರಯೋಜನಗಳು ಸಿಕ್ಕಿಲ್ಲ ಎಂದು ಚೆಂತಿಖೇಡಾದ ಮಾಜಿ ಸರಪಂಚ್ ನಮ್ಮ ಗಮನಸೆಳೆದರು.
ತನ್ನ ಮನೆಯ ತಾರಸಿಯ ಮೇಲೆ ನಿಂತು ಸ್ವಲ್ಪ ದೂರದಲ್ಲಿರುವ ಕುವಾರಿ ನದಿಯತ್ತ ಬೆರಳು ತೋರಿಸಿ, "ಅಣೆಕಟ್ಟು ಈ ಪ್ರದೇಶವನ್ನು ಆವರಿಸಲಿದೆ. ನಮ್ಮ ಹಳ್ಳಿ ಮತ್ತು 7-8 ಗ್ರಾಮಗಳು ಮುಳುಗಲಿವೆ ಆದರೆ ಈ ಕುರಿತು ನಮಗೆ ಇನ್ನೂ ಯಾವುದೇ ನೋಟಿಸ್ ಬಂದಿಲ್ಲ.”
ಇದು ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ ಕಾಯ್ದೆ , 2013 (ಎಲ್ಎಆರ್‌ಆರ್‌ಎ) ನಿಯಮಗಳಿಗೆ ವಿರುದ್ಧವಾಗಿದೆ, ಇದು ಹಳ್ಳಿಯ ಜನರನ್ನು ಸ್ಥಾಳಾಂತರಿಸುವ ಮೊದಲು ಸಾಮಾಜಿಕ ಪರಿಣಾಮದ ಕುರಿತು ಅಧ್ಯಯನ ನಡೆಸಲು ಸ್ಪಷ್ಟವಾಗಿ ಸೂಚಿಸುತ್ತದೆ. ಅಧ್ಯಯನದ ದಿನಾಂಕಗಳನ್ನು ಸ್ಥಳೀಯ ಭಾಷೆಯಲ್ಲಿ ಘೋಷಿಸಬೇಕು (ಅಧ್ಯಾಯ 2 ಎ 4 (1)), ಎಲ್ಲರಿಗೂ ಹಾಜರಾಗಲು ಸೂಚನೆ ನೀಡಬೇಕು ಮತ್ತು ಇತ್ಯಾದಿಯಾಗಿ ಈ ಕಾನೂನು ಹೇಳುತ್ತದೆ.
“ನಮ್ಮನ್ನು 23 ವರ್ಷಗಳ ಕೆಳಗೆ ಒಕ್ಕಲೆಬ್ಬಿಸಲಾಗಿತ್ತು. ಬಹಳ ಕಷ್ಟಪಟ್ಟು ನಮ್ಮ ಬದುಕನ್ನು ಮತ್ತೆ ಕಟ್ಟಿಕೊಂಡಿದ್ದೇವೆ” ಎಂದು ಚಕ್ಪಾರಾ ಗ್ರಾಮದ ಸತ್ನಾಮ್ ಆದಿವಾಸಿ ಹೇಳುತ್ತಾರೆ. ಅವರು ಆಗಾಗ್ಗೆ ಜೈಪುರ, ಗುಜರಾತ್ ಮತ್ತು ಇತರ ಸ್ಥಳಗಳಿಗೆ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸ ಹುಡುಕಿಕೊಂಡು ಹೋಗುತ್ತಾರೆ.
ಹಳ್ಳಿಯ ವಾಟ್ಸಾಪ್ ಗುಂಪಿನಲ್ಲಿ ಪ್ರಸಾರವಾದ ಸುದ್ದಿಯಿಂದ ಸತ್ನಾಮ್ ಅವರಿಗೆ ಅಣೆಕಟ್ಟಿನ ಬಗ್ಗೆ ತಿಳಿಯಿತು. "ಯಾರೂ ನಮ್ಮೊಂದಿಗೆ ಮಾತನಾಡಿಲ್ಲ, ಯಾರು ಮತ್ತು ಎಷ್ಟು ಜನರು ಹೋಗುತ್ತಾರೆಂದು ನಮಗೆ ತಿಳಿದಿಲ್ಲ" ಎಂದು ಅವರು ಹೇಳುತ್ತಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಯಾವ ಮನೆಗಳು ಪಕ್ಕಾ, ಕಚ್ಚಾ, ಎಷ್ಟು ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಇತ್ಯಾದಿಗಳನ್ನು ಗಮನಿಸಿದ್ದಾರೆ.
ಅವರ ತಂದೆ ಸುಜನ್ ಸಿಂಗ್ ಅವರು ಹಿಂದಿನ ಸ್ಥಳಾಂತರದ ನೆನಪಿನಿಂದ ಇನ್ನೂ ಹೊರಗೆ ಬಂದಿಲ್ಲ, ಅವರೀಗೆ ಮತ್ತೆ ಇನ್ನೊಂದು ಸ್ಥಳಾಂತರಕ್ಕೆ ಸಿದ್ಧರಾಗಬೇಕಿದೆ. “ಹಮಾರೇ ಊಪರ್ ಡಬಲ್ ಕಷ್ಟ್ ಹೋ ರಹಾ ಹೈ [ನಮ್ಮ ಮೇಲೆ ಎರಡೆರಡು ಕಷ್ಟಗಳನ್ನು ಹೇರಲಾಗುತ್ತಿದೆ.”
ಅನುವಾದ: ಶಂಕರ. ಎನ್. ಕೆಂಚನೂರು