ಸಹರಿಯಾ ಆದಿವಾಸಿ ಸಮುದಾಯದವರಾದ ಗುಟ್ಟಿ ಸಮಾನ್ಯ ಅವರನ್ನು ಮಧ್ಯಪ್ರದೇಶದ ಅರಣ್ಯ ಇಲಾಖೆ 'ಚೀತಾ ಮಿತ್ರ' (ಚಿರತೆ ಮಿತ್ರ)ನನ್ನಾಗಿ ನೇಮಿಸಿದ ದಿನ ಅವರಿಗೆ, “ಚಿರತೆಗಳು ಕಂಡುಬಂದಲ್ಲಿ ನೀವು ಆ ಮಾಹಿತಿಯನ್ನು ಫಾರೆಸ್ಟ್ ರೇಂಜರ್ ಅವರಿಗೆ ತಲುಪಿಸಿ” ಎಂದು ಹೇಳಲಾಗಿತ್ತು.
ಈ ಕೆಲಸಕ್ಕೆ ಸಂಬಳವಿಲ್ಲವಾದರೂ ಅಂದು ಅವರಿಗೆ ಸಾಕಷ್ಟು ದೊಡ್ಡ ಕೆಲಸವಾಗಿ ಕಂಡಿತ್ತು. ಅಷ್ಟಕ್ಕೂ ಅದೂ ಅಲ್ಲದೆ ಆ ಆಫ್ರಿಕನ್ ಚಿರತೆಗಳು 8,000 ಕಿಲೋಮೀಟರ್ ದೂರದಿಂದ, ಸಮುದ್ರ ಮತ್ತು ಭೂಮಿಯ ಮೂಲಕ, ಸರಕು ಮತ್ತು ಮಿಲಿಟರಿ ವಿಮಾನಗಳು ಮತ್ತು ಹೆಲಿಕ್ಯಾಪ್ಟರುಗಳನ್ನೇರಿ ಭಾರತಕ್ಕೆ ಬರಲಿದ್ದವು. ಭಾರತ ಸರ್ಕಾರವು ಈ ಚಿರತೆಗಳನ್ನು ತರಿಸಿಕೊಂಡು ಅವುಗಳನ್ನು ಇಲ್ಲಿ ನೆಲೆಗೊಳಿಸುವ ಸಲುವಾಗಿ ಜನರಿಗೆ ಯಾವ ಮಾಹಿತಿಯನ್ನೂ ನೀಡದೆ ಹಣ ಖರ್ಚು ಮಾಡುತ್ತಿತ್ತು.
ಕಳ್ಳ ಬೇಟೆಗಾರರಿಂದ ಈ ಚಿರತೆಗಳನ್ನು ರಕ್ಷಿಸುವ ಕೆಲಸವನ್ನು ಚೀತಾ ಮಿತ್ರರಿಗೆ ವಹಿಸಲಾಗಿತ್ತು. ಜೊತೆಗೆ ಈ ಯೋಜನೆಯಿಂದ ಕೋಪಗೊಂಡಿರು ಗ್ರಾಮಸ್ಥರ ಕೈಯಿಂದಲೂ ಅವರು ಈ ದೊಡ್ಡ ಬೆಕ್ಕುಗಳನ್ನು ಕಾಪಾಡಬೇಕಿತ್ತು. ಅದೇ ಉಮೇದಿನೊಂದಿಗೆ ಕುನೊ-ಪಾಲ್ಪುರ್ ರಾಷ್ಟ್ರೀಯ ಉದ್ಯಾನದ (ಕೆಎನ್‌ಪಿ) ಗಡಿಯಲ್ಲಿರುವ ಸಣ್ಣ ಕುಗ್ರಾಮಗಳು ಮತ್ತು ಹಳ್ಳಿಗಳಲ್ಲಿ ಹರಡಿರುವ ಸುಮಾರು 400-500 ಮಿತ್ರರು, ಎಲ್ಲರೂ ಅರಣ್ಯವಾಸಿಗಳು, ರೈತರು ಮತ್ತು ದಿನಗೂಲಿ ಕಾರ್ಮಿಕರು ರಾಷ್ಟ್ರೀಯ ಸೇವೆಗೆ ಸಿದ್ಧರಾದರು.
ಆದರೆ ಈ ಚಿರತೆಗಳು ಭಾರತಕ್ಕೆ ಬಂದ ದಿನದಿಂದ ಸಾಕಷ್ಟು ದಿನಗಳನ್ನು ಬೇಲಿ ಹಾಕಿದ ಪ್ರದೇಶದೊಳಗೆ ಕಳೆದವು. ಅಲ್ಲದೆ ಕುನೋದಲ್ಲಿನ ಕಾಡಿಗೂ ಬೇಲಿ ಸುತ್ತಲಾಗಿದೆ. ಅವುಗಳನ್ನು ಕಾಡಿನೊಳಗೆ ಉಳಿಸಿಕೊಳ್ಳಲು ಮತ್ತು ಹೊರಗಿನವರು ಹೊರಗೇ ಇರುವಂತೆ ನೋಡಿಕೊಳ್ಳುವ ಸಲುವಾಗಿ ಈ ಬೇಲಿಯನ್ನು ನಿರ್ಮಿಸಲಾಗಿದೆ. “ನಮ್ಮನ್ನು ಒಳಗೆ ಬಿಡುವುದಿಲ್ಲ. ಸಿಯಾಸಿಯಾಪುರ ಮತ್ತು ಬಾಗ್ಚಾದಲ್ಲಿ ಈಗ ಹೊಸ ಗೇಟುಗಳನ್ನು ನಿರ್ಮಿಸಲಾಗಿದೆ” ಎನ್ನುತ್ತಾರೆ ಶ್ರೀನಿವಾಸ ಆದಿವಾಸಿ. ಅವರು ಸಹ ಚೀತಾ ಮಿತ್ರ.
ಗುಟ್ಟಿ ಮತ್ತು ಅವರಂತಹ ಸಾವಿರಾರು ಸಹರಿಯಾ ಸಮುದಾಯದ ಆದಿವಾಸಿಗಳು ಈ ಮೊದಲು ಕಾಡಿನಲ್ಲೇ ಚಿರತೆ ಮತ್ತಿತರ ಕಾಡು ಪ್ರಾಣಿಗಳೊಂದಿಗೆ ಕಾಡಿನಲ್ಲೇ ವಾಸಿಸುತ್ತಿದ್ದವರು. 2023ರ ಜೂನ್ ತಿಂಗಳಿನಲ್ಲಿ ಮಹತ್ವಾಕಾಂಕ್ಷೆಯ ಚಿರತೆ ಯೋಜನೆಗೆಂದು ಇವರನ್ನು ಕುನೋದಿಂದ ಖಾಲಿ ಮಾಡಿಸುವವರೆಗೂ ಅವರು ಅಲ್ಲೇ ವಾಸಿಸುತ್ತಿದ್ದರು. ಉದ್ಯಾನದ ಅಂಚಿನಲ್ಲಿದ್ದ ಬಾಗ್ಚಾ ಎನ್ನುವ ಗ್ರಾಮದಲ್ಲಿ ವಾಸಿಸುತ್ತಿದ್ದ ಅವರು ಈ ಭಾಗದಲ್ಲಿ ಕೊನೆಯ ತನಕವೂ ಉಳಿದುಕೊಂಡಿದ್ದ ಕೆಲವರಲ್ಲಿ ಒಬ್ಬರು. ನಂತರ ಇವರನ್ನು ಅಲ್ಲಿ 40 ಕಿಲೋಮೀಟರ್ ದೂರದ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಈಗ ಅವರು ಚಿರತೆಗಳಿಗಾಗಿ ತಮ್ಮ ನೆಲೆಯನ್ನು ಬಿಟ್ಟುಕೊಟ್ಟು ಎಂಟು ತಿಂಗಳು ಕಳೆದಿವೆ. ಆದರೆ ಅವರನ್ನು ತನ್ನನ್ನು ಏಕೆ ಕಾಡಿನಿಂದ ಹೊರಗಿರಿಸಲಾಗಿದೆ ಎನ್ನುವ ಗೊಂದಲವೂ ಕಾಡುತ್ತಿದೆ. “ಕಾಡಿನಿಂದ ಇಷ್ಟು ದೂರ ವಾಸಿಸುವ ನಾನು ಚೀತಾ ಮಿತ್ರನಾಗಲು ಹೇಗೆ ಸಾಧ್ಯ?” ಎನ್ನುವುದು ಅವರ ಪ್ರಶ್ನೆ.
ಈ ಚಿರತೆಗಳ ಮೇಲೆ ನಿಗಾ ಇಡಲು ಆದಿವಾಸಿಗಳಿಗೆ ಸಾಧ್ಯವೇ ಇಲ್ಲ. ಏಕೆಂದರೆ ಅವುಗಳ ಸುತ್ತ ಅವುಗಳ ಸುತ್ತಲಿನ ಬಿಗಿ ಭದ್ರತೆ ಮತ್ತು ಗೌಪ್ಯತೆಯನ್ನು ಏರ್ಪಡಿಸಲಾಗಿದೆ. ಗುಟ್ಟಿ ಮತ್ತು ಶ್ರೀನಿವಾಸ್ ಇದುವರೆಗೂ ತಾವು “ಚೀತಾವನ್ನು ವೀಡಿಯೋದಲ್ಲಷ್ಟೇ ನೋಡಿದ್ದೇವೆ” ಎನ್ನುತ್ತಾರೆ. ಈ ವಿಡಿಯೋಗಳನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.
ಎಂಟು ಚಿರತೆಗಳ ಮೊದಲ ಬ್ಯಾಚ್ 2022ರ ಸೆಪ್ಟಂಬರ್ ತಿಂಗಳಿನಲ್ಲಿ ಬಂದಿಳಿದಿದ್ದು, 2024ರ ಫೆಬ್ರವರಿಗೆ ಅವುಗಳು ಬಂದು 16 ತಿಂಗಳುಗಳು ಕಳೆದಿವೆ. ಇದಾದ ನಂತರ 2023ರಲ್ಲಿ ಮತ್ತೆ ಇನ್ನೂ 12 ಚಿರತೆಗಳನ್ನು ಮತ್ತೆ ತರಿಸಲಾಯಿತು. ಆಮದು ಮಾಡಿಕೊಂಡ ಚಿರತೆಗಳಲ್ಲಿ ಏಳು ಮೃತಪಟ್ಟಿದ್ದು, ಜೊತೆಗೆ ಭಾರತದಲ್ಲಿ ಜನಿಸಿದ 10 ಚಿರತೆಗಳಲ್ಲಿ ಜನವರಿಯಲ್ಲಿ ಮೂರು ಚಿರತೆಗಳು ಸತ್ತಿದ್ದು ಇದುವರೆಗೆ ಒಟ್ಟು 10 ಚಿರತೆಗಳು ಸಾವನ್ನಪ್ಪಿವೆ.
ಈ ಕುರಿತು ಚಿಂತಿಸುವಂತಿಲ್ಲ ಎನ್ನುತ್ತದೆ ಚೀತಾ ಯೋಜನೆಗೆ ಸಂಬಂಧಿಸಿದ ಆಕ್ಷನ್ ಪ್ಲಾನ್. ಈ ಆಕ್ಷನ್ ಪ್ಲಾನ್ ಹೇಳುವಂತೆ ತಂದ ಚೀತಾಗಳಲ್ಲಿ ಶೇಕಡಾ 50ರಷ್ಟು ಬದುಕಿದರೂ ಯೋಜನೆ ಯಶಸ್ವಿಯಾದಂತೆ. ಆದರೆ ಈ ಹೇಳಿಕೆ ಮುಕ್ತವಾಗಿ ತಿರುಗಾಡಲು ಬಿಟ್ಟಂತಹ ಚೀತಾಗಳ ವಿಷಯದಲ್ಲಿ ಸರಿ. ಪ್ರಸ್ತುತ ಇಲ್ಲಿನ ಚೀತಾಗಳನ್ನು 50 x 50 ಮೀಟರ್‌ಗಳಿಂದ ಹಿಡಿದು 0.5 x 1.5 ಚದರ ಕಿಲೋಮೀಟರ್‌ಗಳವರೆಗಿನ ಬೋಮಾಗಳಲ್ಲಿ (ಬೇಲಿಯೊಳಗಿನ ಪ್ರದೇಶ) ಇರಿಸಲಾಗಿದೆ. ಇಲ್ಲಿ ಅವುಗಳಿಗೆ ಯಾವುದೇ ಅನಾರೋಗ್ಯದಿಂದ ಚೇತರಿಸಿಕೊಳ್ಳಲು, ಒಗ್ಗಿಕೊಳ್ಳಲು, ಚೇತರಿಸಿಕೊಳ್ಳಲು ಮತ್ತು ಬೇಟೆಯಾಡಲು ಅನುವು ಮಾಡಿಕೊಡಲಾಗಿದೆ. ಇದೆಲ್ಲವನ್ನು 15 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅವುಗಳನ್ನು ಮುಕ್ತವಾಗಿ ಕಾಡಿನಲ್ಲಿ ವಾಸಿಸಲು ಬಿಡುವುದು, ಸಂತಾನೋತ್ಪತ್ತಿ ಮಾಡಿಸುವುದು ಮತ್ತು ಬೇಟೆಯಾಡಲು ಅನುವು ಮಾಡಿಕೊಡುವುದು ಯೋಜನೆಯ ಪ್ರಮುಖ ಗುರಿಯಾಗಿದ್ದರೂ, ಈ ಪ್ರಾಣಿಗಳು ಇನ್ನೂ ಹೆಚ್ಚು ಸಮಯವನ್ನು ಮುಕ್ತ ವಾತಾವರಣದಲ್ಲಿ ಕಳೆದಿಲ್ಲ.
ಮುಕ್ತ ವಾತಾವರಣದ ಬದಲು, ಪ್ರಸ್ತುತ ಚಿರತೆಗಳು ಶಿಬಿರಗಳಲ್ಲಿ ಬೇಟೆಯಾಡುತ್ತಿವೆ. ಆದಾಗ್ಯೂ, "ಅವುಗಳಿಗೆ ತಮ್ಮ ಸೀಮೆಯನ್ನು ಸ್ಥಾಪಿಸಿಕೊಳ್ಳಲು ಮತ್ತು ಸಂತಾನೋತ್ಪತ್ತಿಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ದಕ್ಷಿಣ ಆಫ್ರಿಕಾದ ಯಾವುದೇ ಹೆಣ್ಣು ಚಿರತೆಗಳಿಗೆ ಗಂಡು ಚಿರತೆಯೊಂದಿಗೆ ಸಂವಹನ ನಡೆಸಲು ಸಾಕಷ್ಟು ಸಮಯ ಇದುವರೆಗೆ ದೊರೆತಿಲ್ಲ. ಕುನೋದಲ್ಲಿ ಜನಿಸಿದ ಏಳು ಮರಿಗಳ ಪೈಕಿ ಆರು ಮರಿಗಳಿಗೆ ಪವನ್ ಹೆಸರಿನ ಒಂದೇ ಗಂಡು ಚಿರತೆ ತಂದೆಯಾಗಿದೆ” ಎಂದು ಡಾ. ಆಡ್ರಿಯನ್ ಟಾರ್ಡಿಫ್ ಹೇಳುತ್ತಾರೆ. ದಕ್ಷಿಣ ಆಫ್ರಿಕಾ ಮೂಲದ ಪಶುವೈದ್ಯರಾದ ಅವರು ಪ್ರಾಜೆಕ್ಟ್ ಚೀತಾದ ಪ್ರಮುಖ ಸದಸ್ಯರಾಗಿದ್ದರು. ನಂತರದ ದಿನಗಳಲ್ಲಿ ಅವರನ್ನು ಬದಿಗೆ ಸರಿಸಲಾಯಿತು. ಅಂತಿಮವಾಗಿ ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿದ್ದಕ್ಕಾಗಿ ಅವರನ್ನು ಯೋಜನೆಯಿಂದ ಕೈಬಿಡಲಾಯಿತು.
ಒಂದು ಕಾಲದಲ್ಲಿ 350 ಚದರ ಕಿಮೀ ಅಳತೆಯ ಸಣ್ಣ ಅಭಯಾರಣ್ಯವಾಗಿದ್ದ ಕುನೊ ನಂತರ ಅದರ ಗಾತ್ರದಲ್ಲಿ ಎರಡು ಪಟ್ಟು ಹಿಗ್ಗಿತು. ಕಾಡು ಪ್ರಾಣಿಗಳಿಗೆ ಮುಕ್ತವಾಗಿ ಬೇಟೆಯಾಡಲು ಅನುಕೂಲವಾಗುವಂತೆ ಅದನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. 1999ರಿಂದ ಇಲ್ಲಿಯವರೆಗೆ 16,000 ಕ್ಕೂ ಹೆಚ್ಚು ಆದಿವಾಸಿ ಮತ್ತು ದಲಿತ ಸಮದಾಯದ ಜನರನ್ನು ಚಿರತೆಗಳಿಗೆ ಮುಕ್ತವಾಗಿ ಓಡಲು ಜಾಗ ಒದಗಿಸುವ ಸಲುವಾಗಿ ಇಲ್ಲಿಂದ ಹೊರಹಾಕಲಾಗಿದೆ.
“ಹಮ್ ಬಾಹರ್ ಹೈ. ಚೀತಾ ಅಂದರ್ [ನಾವು ಹೊರಗಿದ್ದೇವೆ. ಚಿರತೆಗಳು ಒಳಗಿವೆ]!” ಎಂದು ಬಾಗ್ಚಾದ ಸಹರಿಯಾ ಬುಡಕಟ್ಟು ಸಮುದಾಯದವರಾದ ಮಂಗೀಲಾಲ್ ಆದಿವಾಸಿ ಉದ್ಗರಿಸುತ್ತಾರೆ. ಹೊಸದಾಗಿ ಸ್ಥಳಾಂತರಗೊಂಡ ಈ 31 ವರ್ಷದ ಯುವಕ ಶಿಯೋಪುರ ತೆಹಸಿಲ್‌ನಲ್ಲಿರುವ ಚಕ್ಬಾಮೂಲ್ಯದಲ್ಲಿ ಹೊಸ ಜಾಗ ಮತ್ತು ಮನೆಯನ್ನು ಪಡೆಯಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ.
ಗುಟ್ಟಿ, ಸಿರಿನಿವಾಸ್ ಮತ್ತು ಮಂಗಿಲಾಲ್ ಸಹರಿಯಾ ಆದಿವಾಸಿ ಸಮದಾಯದವರಾಗಿದ್ದು, ಮಧ್ಯಪ್ರದೇಶದಲ್ಲಿ ನಿರ್ದಿಷ್ಟವಾಗಿ ಈ ಸಮುದಾಯವನ್ನು ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಎಂದು ಪಟ್ಟಿ ಮಾಡಲಾಗಿದೆ. ಮತ್ತು ಇವರು ರಾಳ, ಉರುವಲು, ಹಣ್ಣುಗಳು, ಬೇರುಗಳು ಮತ್ತು ಗಿಡಮೂಲಿಕೆಗಳಿಂದ ಲಭಿಸುವ ಆದಾಯಕ್ಕಾಗಿ ಅರಣ್ಯವನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.
“ಬಾಗ್ಚಾದಲ್ಲಿ [ಅವರು ಮೊದಲು ವಾಸವಿದ್ದ ಸ್ಥಳ] ನಮಗೆ ಕಾಡುಗಳಿಗೆ ಪ್ರವೇಶವಿತ್ತು. "ನನ್ನ ಕುಟುಂಬವು ತಲೆಮಾರುಗಳಿಂದ ಹೊಂದಿದ್ದ 1,500ಕ್ಕೂ ಹೆಚ್ಚು ಚಿರ್ ಗೋಂದ್ [ರಾಳ] ಮರಗಳು ಈಗ ನನ್ನ ಕೈಯಿಂದ ತಪ್ಪಿ ಹೋಗಿವೆ" ಎಂದು ಮಂಗಿಲಾಲ್ ಹೇಳುತ್ತಾರೆ ಓದಿ: ಕುನೊ: ಚೀತಾಗಳು ಒಳಗೆ, ಆದಿವಾಸಿಗಳು ಹೊರಗೆ . ಈಗ ಅವರು ಮತ್ತು ಅವರ ಹಳ್ಳಿ ತಮಗೆ ಸೇರಿದ ಮರಗಳಿಂದ 30-35 ಕಿ.ಮೀ. ದೂರದಲ್ಲಿವೆ; ಈಗ ಅವರಿಗೆ ತಮ್ಮ ಕಾಡನ್ನು ಪ್ರವೇಶಿಸಲು ಸಹ ಸಾಧ್ಯವಿಲ್ಲ. ಈಗ ಅದರ ಸುತ್ತ ಬೇಲಿ ಹಾಕಲಾಗಿದೆ.
"ನಮಗೆ [ಸ್ಥಳಾಂತರಕ್ಕೆ] ಪರಿಹಾರವಾಗಿ ರೂ 15 ಲಕ್ಷ ಸಿಗುತ್ತದೆ ಎಂದು ಹೇಳಲಾಯಿತು, ಆದರೆ ಮನೆಗಳನ್ನು ಕಟ್ಟಿಕೊಳ್ಳಲು ಕೇವಲ 3 ಲಕ್ಷ ರೂ, ಆಹಾರ ಖರೀದಿಸಲು ರೂ 75,000 ಮತ್ತು ಬೀಜಗಳು ಮತ್ತು ಗೊಬ್ಬರಕ್ಕಾಗಿ ರೂ 20,000 ಸಿಕ್ಕಿತು" ಎಂದು ಮಂಗಿಲಾಲ್ ಹೇಳುತ್ತಾರೆ. ಉಳಿದ ಪರಿಹಾರದ ದೊಡ್ಡ ಪಾಲಾದ 12 ಲಕ್ಷ ರೂಪಾಯಿಯನ್ನು ಒಂಬತ್ತು ಬಿಘಾ (ಸುಮಾರು ಮೂರು ಎಕರೆ) ಭೂಮಿ, ವಿದ್ಯುತ್, ರಸ್ತೆ, ನೀರು ಮತ್ತು ನೈರ್ಮಲ್ಯಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಅರಣ್ಯ ಇಲಾಖೆ ರಚಿಸಿರುವ ಸ್ಥಳಾಂತರ ಸಮಿತಿಯು ಅವರಿಗೆ ಮಾಹಿತಿ ನೀಡಿದೆ.
ಪ್ರಸ್ತುತ ಸ್ಥಳಾಂತರಗೊಂಡಿರುವ ಊರಿಗೂ ತಮ್ಮ ಹಳೆಯ ಊರಿನ ಹೆಸರಾದ ಬಾಗ್ಚಾ ಎನ್ನುವ ಹೆಸರನ್ನೇ ಇರಿಸಲು ಗ್ರಾಮಸ್ಥರು ಇರಿಸಿಕೊಂಡಿದ್ದು, ಆ ಊರಿಗೆ ಗ್ರಾಮದ ಪಟೇಲ್ (ಮುಖ್ಯಸ್ಥ) ಆಗಿ ಬಲ್ಲು ಆದಿವಾಸಿಯವರನ್ನು ನೇಮಿಸಲಾಗಿದೆ. ಅವರು ಅಲ್ಲೇ ಕರಗುತ್ತಿದ್ದ ಬೆಳಕಿನಲ್ಲಿ ಕುಳಿತು ಸುತ್ತಲಿನ ಕಟ್ಟಡಗಳ ಅವಶೇಷಗಳು, ಕಪ್ಪು ಟಾರ್ಪಲಿನ್ ಹೊದೆಸಿದ ಟೆಂಟುಗಳತ್ತ ಕಣ್ಣು ಹಾಯಿಸುತ್ತಿದ್ದರು. ಪಕ್ಕದಲ್ಲೇ ಶಿಯೋಪುರ್ ಪಟ್ಟಣದತ್ತ ಸಾಗುವ ಹೈವೇಯಲ್ಲಿ ವಾಹನಗಳು ಸುಳಿದಾಡುತ್ತಿದ್ದವು. “ಈಗ ನಮ್ಮ ಬಳಿ ಮನೆಗಳನ್ನು ಪೂರ್ತಿಗೊಳಿಸಲು ಅಥವಾ ಹೊಲಕ್ಕೆ ಕಾಲುವೆ ಇತ್ಯಾದಿ ಮಾಡಿ ಬೇಸಾಯ ಮಾಡಲು ಹಣವೇ ಇಲ್ಲ” ಎಂದು ಅವರು ಹೇಳುತ್ತಾರೆ.
“ನೀವಿಲ್ಲಿ ನೋಡುತ್ತಿರುವುದು ನಾವು ಬಿತ್ತಿದ ಬೆಳೆಯಲ್ಲ. ನಾವು ಇಲ್ಲಿನ ಸುತ್ತಮುತ್ತಲಿನ ಜನರಿಗೆ ಬಟಾಯ್ [ಗುತ್ತಿಗೆ] ಆಧಾರದ ಮೇಲೆ ಜಮೀನು ನೀಡಿದ್ದೇವೆ. ಅವರು [ಸರ್ಕಾರ] ನಮಗೆ ನೀಡಿದ ಹಣದಿಂದ ಬೇಸಾಯ ಮಾಡಲು ಸಾಧ್ಯವಾಗಲಿಲ್ಲ” ಎಂದು ಬಲ್ಲು ಹೇಳುತ್ತಾರೆ. ಇದರ ಜೊತೆಗೆ ತಮ್ಮ ಹೊಲ ಈ ಊರಿನ ಮೇಲ್ಜಾತಿಯ ಜನರ ಹೊಲದಂತೆ ಚೆನ್ನಾಗಿ ಉಳುಮೆ ಮಾಡಿ ಹದ ಮಾಡಿದ ಮತ್ತು ಸಮತಟ್ಟಾದ ನೆಲವಲ್ಲ ಎನ್ನುವುದನ್ನು ಸಹ ಗಮನಕ್ಕೆ ತಂದರು.
2022ರಲ್ಲಿ ಪರಿ ಬಲ್ಲು ಅವರನ್ನು ಸಂದರ್ಶಿಸಿತ್ತು. ಆಗ ಅವರು ಈ ಹಿಂದೆ ಇಲ್ಲಿಂದ ಒಕ್ಕಲೆಬ್ಬಿಸಲ್ಪಟ್ಟ ಜನರಿಗೆ ಇದುವರೆಗೂ ಸೂಕ್ತ ಪರಿಹಾರ ದೊರಕಿಲ್ಲ. ಅವರು ಕಳೆದ 20 ವರ್ಷಗಳಿಂದ ತಮ್ಮ ಪರಿಹಾರ ಪಡೆಯಲು ಹೆಣಗಾಡುತ್ತಿದ್ದಾರೆ. ಹೀಗಿರುವಾಗ ನಮಗೂ ಹೋಗಿ ಅದೇ ಬಲೆಯಲ್ಲಿ ಬೀಳಲು ಇಷ್ಟವಿಲ್ಲ ಎಂದಿದ್ದರು. ಆ ಸಮಯದಲ್ಲಿ ಅವರು ಒಕ್ಕಲೆಬ್ಬಿಸುವಿಕೆಯ ವಿರುದ್ಧ ಇದ್ದರು. ಓದಿ: ಕುನೋ ಪಾರ್ಕ್: ಯಾರಿಗೂ ದೊರೆಯದ ಸಿಂಹಪಾಲು
ಆದರೆ ಈಗ ಅವರೂ ಈ ಹಿಂದೆ ಸ್ಥಳಾಂತರಗೊಂಡ ಜನರು ಇದ್ದ ಪರಿಸ್ಥಿತಿಯಲ್ಲೇ ಇದ್ದಾರೆ.
“ಅವರು ನಮ್ಮನ್ನು ಕುನೋದಿಂದ ಓಡಿಸಲು ಬಯಸಿದ್ದ ಸಮಯದಲ್ಲಿ ನಾವು ಏನೂ ಕೇಳಿದರೂ ಫಟಾಫಟ್ ಸಿಗುತ್ತಿತ್ತು. ಈಗ ನಾವೇನಾದರೂ ಕೇಳಿದರೆ ಅವರು ಬೆನ್ನು ಹಾಕಿ ನಿಲ್ಲುತ್ತಾರೆ.” ಎನ್ನುತ್ತಾರೆ ಚೀತಾಮಿತ್ರ ಸ್ಥಾನದಲ್ಲಿದ್ದೂ ಇಲ್ಲದಿರುವ ಗುಟ್ಟಿ ಗುಟ್ಟಿ ಸಾಮಾನ್ಯ.
*****
ಇಲ್ಲಿ ಉಳಿದಿದ್ದ ಕೆಲವು ಆದಿವಾಸಿಗಳು ಸಹ ಈಗ ಹೊರಗುಳಿದಿರುವುದರಿಂದ, ರಾಷ್ಟ್ರೀಯ ಉದ್ಯಾನವನದ 748 ಚದರ ಕಿಮೀ ಪ್ರಸ್ತುತ ಚಿರತೆಗಳಿಗೆ ಮಾತ್ರ ಮೀಸಲಾಗಿದೆ - ಇದು ಅಪರೂಪದ ಸವಲತ್ತು ಮತ್ತು ಭಾರತೀಯ ಸಂರಕ್ಷಣಾವಾದಿಗಳನ್ನು ಕಂಗೆಡಿಸಿದೆ. ಭಾರತದ ವನ್ಯಜೀವಿ ಕ್ರಿಯಾ ಯೋಜನೆ 2017-2031 ರಲ್ಲಿ ಪಟ್ಟಿ ಮಾಡಲಾಗಿರುವ "ಅತ್ಯಂತ ಅಪಾಯದಲ್ಲಿರುವ... ಮತ್ತು ಆದ್ಯತೆಯ ಜಾತಿಗಳು" ಎಂದರೆ ಗಂಗಾ ಡಾಲ್ಫಿನ್, ಗ್ರೇಟ್ ಇಂಡಿಯನ್ ಬಸ್ಟರ್ಡ್, ಸಮುದ್ರ ಆಮೆಗಳು, ಏಷ್ಯಾಟಿಕ್ ಸಿಂಹ, ಟಿಬೆಟಿಯನ್ ಹುಲ್ಲೆ ಮತ್ತು ಇತರ ಸ್ಥಳೀಯ ಜಾತಿಗಳೇ ಹೊರತು ಚಿರತೆಗಳಲ್ಲ ಎಂದು ಅವರು ಹೇಳುತ್ತಾರೆ.
ಕುನೋಗೆ ಚಿರತೆಗಳನ್ನು ತರುವ ಮೊದಲು ಭಾರತ ಸರ್ಕಾರವು ಹಲವು ಕಾನೂನು ಮತ್ತು ರಾಜತಾಂತ್ರಿಕ ಅಡೆತಡೆಗಳನ್ನು ಎದುರಿಸಬೇಕಾಯಿತು. ಭಾರತದಲ್ಲಿ ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಚೀತಾ (ಅಸಿನೋನಿಕ್ಸ್ ಜುಬಾಟಸ್ ವೆನಾಟಿಕಸ್) ಬದಲಿಗೆ ಆಫ್ರಿಕನ್ ಚೀತಾಗಳನ್ನು (ಅಸಿನೊನಿಕ್ಸ್ ಜುಬಾಟಸ್) ತರುವ ಯೋಜನೆಯನ್ನು 2013 ರ ಸುಪ್ರೀಂ ಕೋರ್ಟ್ (ಎಸ್ಸಿ) ಆದೇಶವು ರದ್ದುಗೊಳಿಸಿತ್ತು.
ಆದರೆ 2020ರ ಜನವರಿಯಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಸಲ್ಲಿಸಿದ ಮನವಿಯ ಮೇರೆಗೆ, ಚಿರತೆಗಳನ್ನು ಪ್ರಾಯೋಗಿಕವಾಗಿ ತರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎನ್‌ಟಿಸಿಎ ಮಾತ್ರವೇ ತನ್ನ ಕಾರ್ಯಸಾಧ್ಯತೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದಿರುವ ಅದು ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ಈ ಯೋಜನೆಯ ಕಾರ್ಯಗಳು ನಡೆಯಬೇಕು ಎಂದು ಹೇಳಿದೆ.
ಈ ನಿಟ್ಟಿನಲ್ಲಿ ಸರಿಸುಮಾರು 10 ಸದಸ್ಯರ ಉನ್ನತ ಮಟ್ಟದ ಪ್ರಾಜೆಕ್ಟ್ ಚೀತಾ ಸ್ಟೀರಿಂಗ್ ಕಮಿಟಿಯನ್ನು ರಚಿಸಲಾಯಿತು. ಆದರೆ ಅದರಲ್ಲಿದ್ದ ವಿಜ್ಞಾನಿ ಟಾರ್ಡಿಫೆ ಹೇಳುತ್ತಾರೆ, "ನನ್ನನ್ನು ಎಂದೂ [ಸಭೆಗೆ] ಆಹ್ವಾನಿಸಿರಲಿಲ್ಲ." ಚೀತಾ ಯೋಜನೆಯಲ್ಲಿ ಭಾಗಿಯಾಗಿರುವ ಅನೇಕ ತಜ್ಞರೊಂದಿಗೂ ಪರಿ ಮಾತನಾಡಿತು, ಅವರು ಹೇಳುವಂತೆ “ಮೇಲಿನ ಜನರಿಗೆ ಈ ವಿಷಯದಲ್ಲಿ ಅನುಭವವಿಲ್ಲ, ಆದರೆ ಅವರು ನಮಗೆ ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೂ ಬಿಡುವುದಿಲ್ಲ” ಎಂದು ಹೇಳಿದರು. ಇದೆಲ್ಲದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ ಈ ಯೋಜನೆ ಯಶಸ್ವಿಯಾಗಲೇಬೇಕೆಂದು ಯಾರೋ ಒಬ್ಬರು ಬಯಸಿದ್ದರು ಮತ್ತು ಈ ಕಾರಣಕ್ಕಾಗಿಯೇ ʼನಕಾರಾತ್ಮಕ ಸುದ್ದಿಗಳನ್ನು” ಅಲ್ಲಲ್ಲೇ ಮುಚ್ಚಿಡಲಾಯಿತು.
ಸುಪ್ರೀಂ ಕೋರ್ಟ್ ಯೋಜನೆಗೆ ಸಂಬಂಧಿಸಿದ ಅಡೆತಡೆಗಳನ್ನು ತೆರವುಗೊಳಿಸುತ್ತಿದ್ದಂತೆ ಚೀತಾ ಯೋಜನೆಗೆ ಮತ್ತೆ ವೇಗ ದೊರಕಿತು. ಸೆಪ್ಟೆಂಬರ್ 2022ರಲ್ಲಿ, ಪ್ರಧಾನಿಯವರು ಇದನ್ನು ಸಂರಕ್ಷಣೆಯ ವಿಜಯವೆಂದು ಹೇಳಿಕೊಂಡರು ಮತ್ತು ತಮ್ಮ 72ನೇ ಹುಟ್ಟುಹಬ್ಬವನ್ನು ಕುನೋದಲ್ಲಿ ಆಮದು ಮಾಡಿಕೊಂಡ ಮೊದಲ ಹಂತದ ಚಿರತೆಗಳ ಬಿಡುಗಡೆಯೊಂದಿಗೆ ಆಚರಿಸಿದರು.
2000ದ ದಶಕದಲ್ಲಿ ಪ್ರಧಾನಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ʼಗುಜರಾತಿನ ಹೆಮ್ಮೆ ʼ ಎಂದು ಕರೆಯಲಾಗುವ ಸಿಂಹಗಳನ್ನು ಹೊರ ರಾಜ್ಯಕ್ಕೆ ಕಳುಹಿಸಲು ಅನುಮತಿ ನಿರಾಕರಿಸಿದ್ದರು. ಈಗ ಅವರು ಇದ್ದಕ್ಕೆ ವ್ಯತಿರಿಕ್ತವಾಗಿ ಪ್ರಾಣಿ ಸಂರಕ್ಷಣೆಗೆ ಆಸಕ್ತಿ ತೋರುತ್ತಿರುವುದು ವೈರುಧ್ಯದಂತೆ ಕಾಣುತ್ತಿದೆ. ಏಷ್ಯಾಟಿಕ್ ಸಿಂಹಗಳು ಐಯುಸಿಎನ್ ಅಳಿವಿನಂಚಿನಲ್ಲಿರುವ ಪ್ರಭೇದಗಳ ಕೆಂಪು ಪಟ್ಟಿಯಲ್ಲಿವೆ (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದರೂ ಅಂದು ಅವರು ಸಿಂಹಗಳನ್ನು ಕಳುಹಿಸಲು ಒಪ್ಪಿರಲಿಲ್ಲ.
ಈಗ ಇಪ್ಪತ್ತೂ ವರ್ಷಗಳ ನಂತರವೂ ಸಿಂಹಗಳು ಅಳಿವಿನಂಚಿನಲ್ಲಿವೆ ಮತ್ತು ಅವುಗಳಿಗೆ ಇನ್ನೊಂದು ನೆಲೆಯ ಅಗತ್ಯ ಮುಂದುವರೆದಿದೆ. ಇಂದಿಗೂ ನಮ್ಮ ದೇಶ ಏಷ್ಯಾಟಿಕ್ ಸಿಂಹಗಳ (ಪ್ಯಾಂಥೆರಾ ಲಿಯೋ ಎಸ್ಎಸ್ಪಿ ಪರ್ಸಿಕಾ) ಏಕೈಕ ನೆಲೆಯಾಗಿದೆ - ಗುಜರಾತಿನ ಸೌರಾಷ್ಟ್ರ ಪರ್ಯಾಯ ದ್ವೀಪ. ಕುನೋ ಅರಣ್ಯಕ್ಕೆ ಈ ಸಿಂಹಗಳನ್ನು ತರಬೇಕಿತ್ತು. ಅದರ ಹಿಂದಿನ ಉದ್ದೇಶ ಸಂರಕ್ಷಣೆಯಾಗಿತ್ತೇ ರಾಜಕೀಯವಾದುದಲ್ಲ.
ಚಿರತೆ ತರುವ ಉತ್ಸಾಹ ಹೇಗಿತ್ತೆಂದರೆ ಅವುಗಳಿಗಾಗಿ ಭಾರತ ದಂತ ವ್ಯಾಪಾರದ ವಿರುದ್ಧದ ತನ್ನ ಗಟ್ಟಿ ನಿಲುವನ್ನೇ ಮರೆಯುವಷ್ಟು. ಎರಡನೇ ಬ್ಯಾಚಿನ ಚೀತಾಗಳನ್ನು ನಮೀಬಿಯಾದಿಂದ ತರಿಸಲಾಗಿತ್ತು. ನಮ್ಮ ವನ್ಯಜೀವಿ (ರಕ್ಷಣೆ) ಕಾಯಿದೆ 1972, ಸೆಕ್ಷನ್ 49B, ಯಾವುದೇ ರೀತಿಯಲ್ಲಿ ದಂತದ ವ್ಯಾಪಾರದ ಜೊತೆಗೆ ಆಮದನ್ನು ಸಹ ನಿಷೇಧಿಸುತ್ತದೆ. ನಮೀಬಿಯಾ ದಂತ ರಫ್ತುದಾರ, ಹೀಗಾಗಿ ಭಾರತವು 2022ರಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರದ (ಸಿಐಟಿಇಎಸ್) ಸಮ್ಮೇಳನದ ಪನಾಮ ಸಮ್ಮೇಳನದಲ್ಲಿ ದಂತದ ವಾಣಿಜ್ಯ ಮಾರಾಟದ ಕುರಿತಾದ ಮತದಾನದಿಂದ ದೂರವಿತ್ತು.
ಅಲ್ಲಿ ವಾಸವಿದ್ದ ಕೆಲವು ಆದಿವಾಸಿಗಳು ಸಹ ಹೊರಗುಳಿದಿರುವುದರಿಂದ, ರಾಷ್ಟ್ರೀಯ ಉದ್ಯಾನವನದ 748 ಚದರ ಕಿ.ಮೀ ಈಗ ಚಿರತೆಗಳಿಗೆ ಮಾತ್ರ ಮೀಸಲಾಗಿದೆ. ಆದರೆ ನಮ್ಮ ರಾಷ್ಟ್ರೀಯ ಜೀವಿ ಸಂರಕ್ಷಣಾ ಗುರಿ ಗಂಗಾನದಿಯ ಡಾಲ್ಫಿನ್, ಗ್ರೇಟ್ ಇಂಡಿಯನ್ ಬಸ್ಟರ್ಡ್, ಸಮುದ್ರ ಆಮೆಗಳು, ಏಷ್ಯಾಟಿಕ್ ಸಿಂಹ, ಟಿಬೆಟಿಯನ್ ಹುಲ್ಲೆ ಮತ್ತಿತರ ಅಪಾಯದಲ್ಲಿರುವ ಇತರ ಸ್ಥಳೀಯ ಜಾತಿಗಳ ಕುರಿತಾಗಿರಬೇಕಿತ್ತೇ ಹೊರತು ಚಿರತೆಗಳನ್ನು ಆಮದು ಮಾಡಿಕೊಳ್ಳುವುದಲ್ಲ
ಇತ್ತ ಬಾಗ್ಚಾದಲ್ಲಿ, ಮಂಗಿಲಾಲ್ ತನ್ನ ಮನಸ್ಸಿನಲ್ಲಿ ಚಿರತೆಗಳಿಲ್ಲ ಎಂದು ಹೇಳುತ್ತಾರೆ. ಪ್ರಸ್ತುತ ಅವರ ಮನಸ್ಸಿನಲ್ಲಿರುವುದು ತಮ್ಮ ಆರು ಜನರ ಕುಟುಂಬಕ್ಕೆ ಆಹಾರ ಮತ್ತು ಉರುವಲು ಹೊಂದಿಸುವುದು ಹೇಗೆನ್ನುವ ಕಾಳಜಿ. “ಕೇವಲ ಕೃಷಿಯಿಂದ ನಮಗೆ ಬದುಕಲು ಸಾಧ್ಯವಾಗುವುದಿಲ್ಲ” ಎಂದು ಅವರು ದೃಢವಾಗಿ ಹೇಳುತ್ತಾರೆ. ಹಿಂದೆ ಕುನೋದಲ್ಲಿ ಅವರು ರಾಗಿ, ನವಣೆ, ಜೋಳ, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದರು. "ಈ ಭೂಮಿ ಭತ್ತಕ್ಕೆ ಒಳ್ಳೆಯದು, ಆದರೆ ಭೂಮಿಯನ್ನು ಸಿದ್ಧಪಡಿಸುವುದು ಬಹಳ ಖರ್ಚಿನ ವಿಷಯ ಮತ್ತು ನಮ್ಮಲ್ಲಿ ಅದಕ್ಕೆ ಬೇಕಾದ ಹಣವಿಲ್ಲ."
ಇನ್ನು ಕೆಲಸ ಹುಡುಕಿಕೊಂಡು ಜೈಪುರಕ್ಕೆ ಹೋಗಬೇಕು ಎನ್ನುತ್ತಾರೆ ಸಿರಿನಿವಾಸ್. "ನಮಗೆ ಇಲ್ಲಿ ಯಾವುದೇ ಉದ್ಯೋಗಗಳಿಲ್ಲ, ಜೊತೆಗೆ ಈಗ ಕಾಡು ಮುಚ್ಚಿರುವುದರಿಂದ ಅದರಿಂದ ಬರುವ ಆದಾಯವೂ ಇಲ್ಲ" ಎಂದು ಈ ಮೂರು ಮಕ್ಕಳ ತಂದೆ ಹೇಳುತ್ತಾರೆ, ಆ ಮಕ್ಕಳಲ್ಲಿ ಕೊನೆಯ ಮಗುವಿಗೆ ಈಗಷ್ಟೇ ಎಂಟು ತಿಂಗಳು.
ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು (ಎಮ್‌ಒಇಎಫ್‌ಸಿಸಿ) ನವೆಂಬರ್ 2021ರಲ್ಲಿ ಬಿಡುಗಡೆ ಮಾಡಿದ ಭಾರತ ಚೀತಾ ಪರಿಚಯ ಕ್ರಿಯಾ ಯೋಜನೆಯಲ್ಲಿ ಸ್ಥಳೀಯ ಜನರಿಗೆ ಉದ್ಯೋಗಗಳನ್ನು ನೀಡುವುದಾಗಿ ಉಲ್ಲೇಖಿಸಲಾಗಿದೆ. ಆದರೆ ಚೀತಾ ಆರೈಕೆ ಮತ್ತು ಪ್ರವಾಸೋದ್ಯಮದ ನೂರಾರು ಉದ್ಯೋಗಗಳನ್ನು ಹೊರತುಪಡಿಸಿ, ಯಾವುದೇ ಸ್ಥಳೀಯ ಜನರಿಗೆ ಪ್ರಯೋಜನ ದೊರೆತಿಲ್ಲ.
*****
ಮೊದಲು ಸಿಂಹಗಳು ಮತ್ತು ಈಗ ಚಿರತೆಗಳು ರಾಜ್ಯ ಮತ್ತು ರಾಷ್ಟ್ರ ರಾಜಕಾರಣ ಮತ್ತು ರಾಜಕಾರಣಿಗಳ ಇಮೇಜ್ ಬಿಲ್ಡಿಂಗ್ ಎರಡರಲ್ಲೂ ಸ್ಟಾರ್ ಪಾತ್ರವನ್ನು ವಹಿಸುತ್ತಿವೆ. ಇದರಲ್ಲಿ ಸಂರಕ್ಷಣೆಯ ಉದ್ದೇಶ ಕೇವಲ ಪ್ರದರ್ಶನ ಮಾತ್ರ.
ಚೀತಾ ಕ್ರಿಯಾ ಯೋಜನೆಯು 44 ಪುಟಗಳ ದಾಖಲೆಯಾಗಿದ್ದು, ಇದು ದೇಶದ ಸಂಪೂರ್ಣ ಸಂರಕ್ಷಣಾ ಕಾರ್ಯಸೂಚಿಯನ್ನು ಚಿರತೆಗಳ ಪಾದದಡಿಯಲ್ಲಿ ಇಡುತ್ತದೆ, ಅದರ ಪ್ರಕಾರ ಚಿರತೆ 'ಹುಲ್ಲುಗಾವಲುಗಳನ್ನು ಪುನರುತ್ಪಾದಿಸುತ್ತದೆ... ಕೃಷ್ಣಮೃಗವನ್ನು ಉಳಿಸುತ್ತದೆ... ಮಾನವರಿಂದ ಕಾಡುಗಳನ್ನು ಮುಕ್ತಗೊಳಿಸುತ್ತದೆ...' ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ನಮ್ಮ ಜಾಗತಿಕವಾಗಿ ನಮ್ಮ ಕುರಿತಾದ ಅಭಿಪ್ರಾಯವನ್ನು ಉತ್ತಮಗೊಳಿಸುತ್ತದೆ - 'ಚಿರತೆಗಳನ್ನು ಸಂರಕ್ಷಿಸುವ ಜಾಗತಿಕ ಪ್ರಯತ್ನಗಳಿಗೆ ಭಾರತವು ತನ್ನದೇ ಆದ ಕೊಡುಗೆ ನೀಡುವುದನ್ನು ಕಾಣಬಹುದು.'
ಈ ಯೋಜನೆಗೆ ರೂ. 195 ಕೋಟಿ ಬಜೆಟ್ ಅಂದಾಜಿಸಲಾಗಿದ್ದು, ಇದನ್ನು ಎನ್‌ಟಿಸಿಎ, ಎಮ್‌ಒಇಎಫ್‌ಸಿಸಿ ಮತ್ತು ಸಾರ್ವಜನಿಕ ವಲಯದ ಇಂಡಿಯನ್ ಆಯಿಲ್ಸ್ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟ್ ಮೂಲಕ ಬರಲಿದೆ (ಸಿಎಸ್‌ಆರ್). ದೆಹಲಿಯಿಂದ ಬರುತ್ತಿರುವ ಹಣದಿಂದ ಇತರ ಪ್ರಾಣಿ, ಪಕ್ಷಿಗಳಿಗಾಗಲಿ ಅಥವಾ ಮಾನವಸಂಪನ್ಮೂಲಗಳಿಗಾಲಿ ಯಾವುದೇ ಉತ್ತಮ ಅನುಕೂಲ ಒದಗಿಲ್ಲ.
ವಿಪರ್ಯಾಸವೆಂದರೆ, ಕೇಂದ್ರದ ಈ ಅತಿಯಾದ ಕಾಳಜಿಯ ಪ್ರಾಜೆಕ್ಟ್ ಚೀತಾವನ್ನು ಅಪಾಯಕ್ಕೆ ಸಿಲುಕಿಸಿದೆ. “ಯೋಜನೆಯ ವಿಷಯದಲ್ಲಿ ಭಾರತ ಸರ್ಕಾರದ ಅಧಿಕಾರಿಗಳು ರಾಜ್ಯ ಸರ್ಕಾರವನ್ನು ನಂಬುವ ಬದಲು, ದೆಹಲಿಯಿಂದಲೇ ಯೋಜನೆಯನ್ನು ನಿಯಂತ್ರಿಸುತ್ತಿದ್ದಾರೆ. ಇದರಿಂದಾಗಿಯೇ ಹಲವು ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎನ್ನುತ್ತಾರೆ ಜೆ ಎಸ್ ಚೌಹಾಣ್.
ಚಿರತೆಗಳು ಇಲ್ಲಿಗೆ ಬಂದ ಸಮಯದಲ್ಲಿ ಅವರು ಮಧ್ಯಪ್ರದೇಶದ ಮುಖ್ಯ ವನ್ಯಜೀವಿ ವಾರ್ಡನ್ ಆಗಿದ್ದರು. "ಕೆಎನ್‌ಪಿಯಲ್ಲಿ 20ಕ್ಕೂ ಹೆಚ್ಚು ಚಿರತೆಗಳಿಗೆ ಸಾಕಾಗುವಷ್ಟು ಸ್ಥಳಾವಕಾಶವಿಲ್ಲ ಮತ್ತು ಚೀತಾ ಕ್ರಿಯಾ ಯೋಜನೆಯಲ್ಲಿ ಗುರುತಿಸಲಾದ ಪರ್ಯಾಯ ಸ್ಥಳಕ್ಕೆ ಕೆಲವು ಪ್ರಾಣಿಗಳನ್ನು ಕಳುಹಿಸಲು ನಮಗೆ ಅವಕಾಶ ನೀಡುವಂತೆ ನಾನು ಅವರಿಗೆ ವಿನಂತಿಸಿದೆ" ಎನ್ನುವ ಚೌಹಾಣ್ ಅವರು 759 ಚದರ ಕಿಮೀ ಬೇಲಿ ಹಾಕಲಾಗಿರುವ ಅರಣ್ಯವನ್ನು ಹೊಂದಿರುವ ಮುಕಂದ್ರ ಹಿಲ್ಸ್ ಟೈಗರ್ ರಿಸರ್ವ್ [ಪಕ್ಕದ ರಾಜಸ್ಥಾನದಲ್ಲಿ] ಉಲ್ಲೇಖಿಸುತ್ತಿದ್ದಾರೆ.
ಅನುಭವಿ ಭಾರತೀಯ ಅರಣ್ಯ ಸೇವಾ ಅಧಿಕಾರಿಯಾದ ಚೌಹಾಣ್ ಅವರು ಎನ್‌ಟಿಸಿಎ ಸದಸ್ಯ ಕಾರ್ಯದರ್ಶಿ ಎಸ್‌ಪಿ ಯಾದವ್ ಅವರಿಗೆ "ಪ್ರಭೇದಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಿ” ಹಲವಾರು ಪತ್ರಗಳನ್ನು ಬರೆದಿರುವುದಾಗಿ ಹೇಳುತ್ತಾರೆ. ಆದರೆ ಈ ಕುರಿತು ಅವರಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಮತ್ತು ಜುಲೈ 2023ರಲ್ಲಿ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಯಿತು. ಅದಾದ ಕೆಲವು ತಿಂಗಳ ನಂತರ ಚೌಹಾಣ್ ವೃತ್ತಿಯಿಂದ ನಿವೃತ್ತರಾದರು.
ಉದ್ಯಾನದಲ್ಲಿ ಚಿರತೆಗಳನ್ನು ನಿರ್ವಹಿಸುತ್ತಿರುವವರಿಗೆ ಬಹುಮಾನವಾಗಿ ದೊರೆತ ಈ ಪ್ರಾಣಿಗಳನ್ನು ಆಗ ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಕ್ಕೆ (ರಾಜಸ್ಥಾನ) “ಕನಿಷ್ಟ ಚುನಾವಣೆ ಮುಗಿಯುವ ತನಕ [2023ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಈ ಚುನಾವಣೆ ನಡೆಯಿತು] ಕಳುಹಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಲಾಯಿತು.
ಚಿರತೆಗಳ ಕಲ್ಯಾಣ ಎಂದಿಗೂ ಈ ಯೋಜನೆಯ ಮುಖ್ಯ ಗುರಿಯಾಗಿರಲಿಲ್ಲ.
“ಇದೊಂದು ಕೇವಲ ಸಂರಕ್ಷಣ ಯೋಜನೆಯನ್ನುವುದನ್ನು ನಂಬಲು ಈಗ ನಮ್ಮಿಂದ ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಈ ಯೋಜನೆಯಿಂದ ಸಾಕಷ್ಟು ಜರ್ಜರಿತರಾಗಿರುವ ಟಾರ್ಡಿಫ್. ಇದೆಲ್ಲದರಿಂದ ಬೇಸತ್ತಿರುವ ಅವರು ಈಗ ಈ ಯೋಜನೆಯಿಂದ ದೂರ ಸರಿಯುವ ಕುರಿತು ಯೋಚಿಸುತ್ತಿದ್ದಾರೆ. “ನಾವು ಈ ಯೋಜನೆಯ ರಾಜಕೀಯ ಪರಿಣಾಮಗಳ ಕುರಿತು ಈ ಹಿಂದೆ ಯೋಚಿಸಿರಲಿಲ್ಲ” ಎನ್ನುತಾರೆ. ಈ ಹಿಂದೆಯೂ ಅವರು ಇಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಅವುಗಳ ಹಿಂದೆ ಇಂತಹ ರಾಜಕೀಯ ಜಗ್ಗಾಟಗಳು ಇದ್ದಿರಲಿಲ್ಲ ಎನ್ನುತ್ತಾರವರು.
ಡಿಸೆಂಬರ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಮಧ್ಯಪ್ರದೇಶದ ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯವನ್ನು (ಇದು ಹುಲಿ ಸಂರಕ್ಷಿತ ಪ್ರದೇಶವಲ್ಲ) ಚಿರತೆಗಳ ಮುಂದಿನ ಸ್ಥಳಾಂತರಕ್ಕೆ ಸಿದ್ಧಪಡಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಿತು.
ಆದರೆ ಚಿರತೆಗಳ ಮೂರನೇ ಗುಂಪನ್ನು ಎಲ್ಲಿಂದ ತರಲಾಗುತ್ತದೆ ಎನ್ನುವುದರ ಕುರಿತು ಇದುವರೆಗೆ ಯಾವುದೇ ಸ್ಪಷ್ಟತೆಯಿಲ್ಲ. ಏಕೆಂದರೆ ದಕ್ಷಿಣ ಆಫ್ರಿಕಾ ಪ್ರಸ್ತುತ ಇನ್ನಷ್ಟು ಚಿರತೆಗಳನ್ನು ಕಳುಹಿಸುವ ನಿಟ್ಟಿನಲ್ಲಿ ಉತ್ಸುಕವಾಗಿಲ್ಲ. ಇದಕ್ಕೆ ಕಾರಣವೂ ಇದೆ. ಈಗಾಗಲೇ ಭಾರತದಲ್ಲಿ ಸಾಕಷ್ಟು ಚಿರತೆಗಳು ಸತ್ತಿರುವುದರಿಂದ ಇನ್ನಷ್ಟು ಚಿರತೆಗಳನ್ನು ಅಲ್ಲಿಗೆ ಸಾಯಲು ಕಳುಹಿಸಬೇಕೆ ಎಂದು ಅಲ್ಲಿನ ಪ್ರಾಣಿ ಸಂರಕ್ಷಣಾ ತಜ್ಞರು ಆಫ್ರಿಕಾ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. “ಕೆಲವು ಮೂಲಗಳು ಕೀನ್ಯಾದಿಂದ ಅವುಗಳನ್ನು ತರಿಸುವ ಕುರಿತು ಯೋಚಿಸಲಾಗುತ್ತಿದೆ ಎನ್ನುತ್ತಿವೆ. ಆದರೆ ಕೀನ್ಯಾದಲ್ಲೂ ಚಿರತೆಗಳ ಸಂಖ್ಯೆ ಬಹಳ ಕಡಿಮೆಯಿದೆ” ಎಂದು ಹೆಸರು ಹೇಳಲಿಚ್ಛಿಸದ ತಜ್ಞರೊಬ್ಬರು ಹೇಳಿದರು.
*****
“ಜಂಗಲ್ ಮೇ ಮಂಗಲ್ ಹೋಗಯಾ [ಕಾಡಿನಲ್ಲಿ ಹಬ್ಬ ನಡೆದು ಹೋಯಿತು]” ಎಂದು ಮಂಗಿಲಾಲ್ ತಮಾಷೆ ಮತ್ತು ವ್ಯಂಗ್ಯ ಭರಿತ ದನಿಯಲ್ಲಿ ಹೇಳುತ್ತಾರೆ.
ಸಫಾರಿ ಪಾರ್ಕುಗಳಿಗೆ ಕಾಡು ಪ್ರಾಣಿಗಳು ಬೇಕಿಲ್ಲ. ಅವುಗಳಿಗೆ ಪಂಜರದಲ್ಲಿರುವ ಪ್ರಾಣಿಗಳೇ ಸಾಕಾಗುತ್ತವೆ.
ಚಿರತೆಗಳ ಹಿಂದೆ ಪಶುವೈದ್ಯರ ಗುಂಪು, ಹೊಸ ಆಸ್ಪತ್ರೆ, 50ಕ್ಕೂ ಹೆಚ್ಚು ಟ್ರ್ಯಾಕರ್‌ಗಳು, ಕ್ಯಾಂಪರ್ ವ್ಯಾನ್‌ಗಳ 15 ಚಾಲಕರು, 100 ಫಾರೆಸ್ಟ್ ಗಾರ್ಡ್‌ಗಳು, ವೈರ್‌ಲೆಸ್ ಆಪರೇಟರ್‌ಗಳು, ಇನ್‌ಫ್ರಾ-ರೆಡ್ ಕ್ಯಾಮೆರಾ ಆಪರೇಟರ್‌ಗಳು ಮತ್ತು ಒಂದಕ್ಕಿಂತ ಹೆಚ್ಚು ಹೆಲಿಪ್ಯಾಡ್‌ಗಳು ಪ್ರಮುಖ ಸಂದರ್ಶಕರು ಸೇರಿದಂತೆ ಭಾರತ ಸರ್ಕಾರದ ಅತಿ ದೊಡ್ಡ ವ್ಯವಸ್ಥೆಯೇ ಇದೆ. ಇವಿಷ್ಟು ಇರುವುದು ಮೂಲ ಪ್ರದೇಶದಲ್ಲಿ. ಇದಲ್ಲದೆ ಬಫರ್ ವಲಯದಲ್ಲೂ ಸರ್ಕಾರದ ಹಲವು ಕಾವಲು ಸಿಬ್ಬಂದಿ ಮತ್ತು ರೇಂಜರುಗಳಿದ್ದಾರೆ.
ರೇಡಿಯೋ ಕಾಲರ್ ಹಾಕಲ್ಪಟ್ಟಿರುವ ಮತ್ತು ಟ್ರ್ಯಾಕ್ ಮಾಡಲ್ಪಡುತ್ತಿರುವ ಚಿರತೆಗಳು ಪ್ರಸ್ತುತ ʼಕಾಡಿನ ಒಳಗಿಲ್ಲʼ. ಹೀಗಾಗಿ ಅವು ಇನ್ನಷ್ಟೇ ಮಾನವ ಸಂಪರ್ಕಕ್ಕೆ ಬರಬೇಕಿದೆ. ಚಿರತೆಗಳು ಬಂದಿರುವ ಕುರಿತು ಸ್ಥಳೀಯರು ಉತ್ಸಾಹದಿಂದೇನೂ ಇಲ್ಲ. ಏಕೆಂದರೆ ಚಿರತೆಗಳು ಬರುವ ಕೆಲವು ವಾರಗಳ ಮೊದಲು, ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತ ಕಾವಲುಗಾರರು ಮತ್ತು ಸ್ನಿಫರ್ ಅಲ್ಸೇಷಿಯನ್ ನಾಯಿಗಳು ಕೆಎನ್‌ಪಿ ಗಡಿಯಲ್ಲಿರುವ ಅಲ್ಲಿನ ಹಳ್ಳಿಗಳಿಗೆ ತೆರಳಿದವು. ಅಲ್ಲಿ ಕಾವಲುಗಾರರು ಹಳ್ಳಿಗರಿಗೆ ಸಮವಸ್ತ್ರವನ್ನು ತೋರಿದರೆ ಕಾವಲು ನಾಯಿಗಳು ತಮ್ಮ ಚೂಪಾದ ಹಲ್ಲುಗಳನ್ನು ತೋರಿಸಿ ಹೆದರಿಸಿದವು. ಜೊತೆಗೆ ಹಳ್ಳಿಗರೇನಾದರೂ ಈ ಚಿರತೆಗಳ ತಂಟೆಗೆ ಹೋದಲ್ಲಿ ಈ ನಾಯಿಗಳು ಅವರ ವಾಸನೆಯನ್ನು ಹಿಡಿದು ಬಂದು ಕೊಲ್ಲಲಿವೆ ಎಂದು ಹೆದರಿಸಲಾಯಿತು.
ಇಲ್ಲಿ “ಸಾಕಷ್ಟು ಬೇಟೆಯ ನೆಲೆ” ಇರುವ ಕಾರಣಕ್ಕಾಗಿಯೇ ಕುನೋ ಅರಣ್ಯವನ್ನು ಆಯ್ಕೆ ಮಾಡಲಾಗಿದೆ ಎಂದು ಭಾರತದ ಚೀತಾ ಪರಿಚಯ ಯೋಜನೆಯ ವಾರ್ಷಿಕ ವರದಿ 2023 ಹೇಳುತ್ತದೆ. ಆದರೆ ಸರ್ಕಾರದ ಈ ಗ್ರಹಿಕೆ ತಪ್ಪಾಗಿದೆ ಅಥವಾ ಅದು ಯಾವುದೇ ಅವಕಾಶಗಳನ್ನು ಪರಿಗಣಿಸುತ್ತಿಲ್ಲ. "ನಾವು ಕೆಎನ್‌ಪಿಯಲ್ಲಿ ಬೇಟೆಯ ನೆಲೆಯನ್ನು ನಿರ್ಮಿಸಬೇಕಾಗಿದೆ" ಎಂದು ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅಸೀಮ್ ಶ್ರೀವಾಸ್ತವ ಈ ವರದಿಗಾರರಿಗೆ ತಿಳಿಸಿದರು. ಅವರು ಜುಲೈ 2023ರಲ್ಲಿ ಇಲ್ಲಿನ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಸ್ತುತ ಇಲ್ಲಿನ ಚಿರತೆಗಳ ಸಂಖ್ಯೆ 100 ದಾಟಿದ್ದು, ಅವುಗಳ ಆಹಾರದ ವಿಷಯದಲ್ಲಿ ಕೊರತೆ ಎದುರಾಗುತ್ತಿದೆ ಎಂದು ಅವರು ಹೇಳುತ್ತಾರೆ.
ಪೀಂಚ್, ಕನ್ಹಾ ಮತ್ತು ಬಾಂಧವಗಡ್ ಹುಲಿ ಮೀಸಲು ಪ್ರದೇಶಗಳನ್ನು ಎರಡು ದಶಕಗಳಿಗೂ ಹೆಚ್ಚು ಕಾಲ ನಿರ್ವಹಿಸುತ್ತಿರುವ ವೃತ್ತಿನಿರತ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಶ್ರೀವಾಸ್ತವ ಹೇಳುತ್ತಾರೆ, "ಚಿತಾಲ್ [ಚುಕ್ಕೆ ಜಿಂಕೆ] ಸಂತಾನೋತ್ಪತ್ತಿ ಮಾಡಲು ನಾವು 100 ಹೆಕ್ಟೇರ್ ಆವರಣವನ್ನು ನಿರ್ಮಿಸುತ್ತಿದ್ದೇವೆ” ಎನ್ನುತ್ತಾರೆ.
ಚಿರತೆ ಯೋಜನೆಗೆ ಹಣದ ಸಮಸ್ಯೆಯಿಲ್ಲ ಎನ್ನುತ್ತದೆ ಇತ್ತೀಚೆಗೆ ಬಿಡುಗಡೆಯಾದ ವರದಿ , "ಚೀತಾ ಪರಿಚಯ ಹಂತ 1 ಮುಂದಿನ ಐದು ವರ್ಷಗಳವರೆಗೆ 39 ಕೋಟಿ ರೂಪಾಯಿ (5 ಮಿಲಿಯನ್ ಯುಎಸ್ ಡಾಲರ್) ಬಜೆಟ್ ಹೊಂದಿದೆ."
ಸಂರಕ್ಷಣಾ ವಿಜ್ಞಾನಿ ಡಾ. ರವಿ ಚೆಲ್ಲಂ "ಇದುವರೆಗೆ ಅತ್ಯಂತ ಪ್ರಚಾರಗೊಂಡ ಮತ್ತು ಅತ್ಯಂತ ದುಬಾರಿ ಸಂರಕ್ಷಣಾ ಯೋಜನೆಗಳಲ್ಲಿ ಒಂದಾಗಿದೆ" ಎಂದು ಚೀತಾ ಯೋಜನೆಯ ಕುರಿತು ವಿವರಿಸುತ್ತಾರೆ. ಈ ಚಿರತೆಗಳಿಗೆ ಪೂರಕವಾಗಿ ಆಹಾರ ನೀಡುವುದು ಅಪಾಯಕಾರಿ ಎನ್ನುವುದು ಅವರ ಅಭಿಪ್ರಾಯ. “ಈ ಯೋಜನೆಯ ಉದ್ದೇಶ ಸಂರಕ್ಷಣೆಯೇ ಆಗಿದ್ದಲ್ಲಿ, ನಾವು ಬೇಟೆಯನ್ನು ಅವುಗಳು ಇರುವಲ್ಲಿಯೇ ಪೂರೈಸುವ ಮೂಲಕ ಅವುಗಳ ಸಹಜ ಬೇಟೆಯಾಡುವ ನೈಸರ್ಗಿಕ ಗುಣಕ್ಕೆ ಧಕ್ಕೆ ತರುತ್ತಿದ್ದೇವೆ. ನಾವು ಈ ಚಿರತೆಗಳನ್ನು ಕಾಡು ಪ್ರಾಣಿಗಳನ್ನಾಗಿ ಪರಿಗಣಿಸಬೇಕಿದೆ” ಎಂದು ಈ ಹಿಂದೆ ಸಿಂಹಗಳ ಕುರಿತು ಅಧ್ಯಯನ ಮಾಡಿರುವ ಅನುಭವ ಹೊಂದಿರುವ ಮತ್ತು ಪ್ರಸ್ತುತ ಚಿರತೆ ಯೋಜನೆಯನ್ನು ಎಚ್ಚರಿಕೆಯಿಂದ ವೀಕ್ಷಿಸುತ್ತಿರುವ ಈ ವನ್ಯಜೀವಿ ಜೀವಶಾಸ್ತ್ರಜ್ಞ ಹೇಳುತ್ತಾರೆ.
ಬೇಟೆಯಾಡುವ ಪ್ರಾಣಿಗಳನ್ನು ದೀರ್ಘಕಾಲದವರೆಗೆ ಸೆರೆಯಲ್ಲಿಟ್ಟುಕೊಂಡು ಮತ್ತು ಅವುಗಳನ್ನು ತುಲನಾತ್ಮಕವಾಗಿ ಸಣ್ಣ ಆವರಣಗಳಿಗೆ ಬಿಡುಗಡೆ ಮಾಡುವ ಮೂಲಕ, ನಾವು ದೀರ್ಘಾವಧಿಯಲ್ಲಿ ಅವುಗಳ ದಾರ್ಢ್ಯತೆಯನ್ನು ಕಡಿಮೆಗೊಳಿಸುತ್ತಿದ್ದೇವೆ ಎಂದು ಈ ಕುರಿತು 2022ರಲ್ಲಿ ಎಚ್ಚರಿಸಿದ್ದ ಚೆಲ್ಲಮ್ ಹೇಳುತ್ತಾರೆ. "ಇದು ವೈಭವೀಕೃತ ಮತ್ತು ದುಬಾರಿ ಸಫಾರಿಗಿಂತ ಯಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ, ಅದರಾಚೆಗೆ ಬೇರೇನೂ ಸಂಭವಿಸುವುದಿಲ್ಲ" ಎಂದು ಅವರು ಅಂದು ಭವಿಷ್ಯ ನುಡಿದಿದ್ದರು. ಮತ್ತು ಅವರ ಮಾತುಗಳು ನಿಜವಾಗುತ್ತಿದೆ: ಚೀತಾ ಸಫಾರಿಯು ಡಿಸೆಂಬರ್ 17, 2023ರಂದು ಐದು ದಿನಗಳ ಉತ್ಸವದೊಂದಿಗೆ ಪ್ರಾರಂಭವಾಯಿತು ಮತ್ತು ಈಗಾಗಲೇ ದಿನಕ್ಕೆ ಸುಮಾರು 100-150 ಜನರು ಸಫಾರಿ ಸೌಲಭ್ಯ ಬಳಸುತ್ತಿದ್ದಾರೆ. ಕುನೋ ವ್ಯಾಪ್ತಿಯಲ್ಲಿ ಜೀಪ್ ಸಫಾರಿಗಾಗಿ ಈಗ ಜನರು 3,000 ರೂಪಾಯಿಗಳಿಂದ 9,000 ರೂ.ಗಳವರೆಗೆ ಖರ್ಚು ಮಾಡುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಹೋಟೆಲ್ಲುಗಳು ಮತ್ತು ಸಫಾರಿ ಆಪರೇಟರುಗಳು ಈ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ. ಆಗ ಚಿರತೆ ಸಫಾರಿಯೊಂದಿಗೆ 'ಇಕೋ ರೆಸಾರ್ಟ್' ಒಂದರಲ್ಲಿ ರಾತ್ರಿ ತಂಗಲು ಇಬ್ಬರು ವ್ಯಕ್ತಿಗಳಿಗೆ 10,000 ರಿಂದ 18,000 ರೂ. ವಿಧಿಸಲಾಗುತ್ತದೆ.
ಬಾಗ್ಚಾದಲ್ಲಿ ಹಣದ ಕೊರತೆಯಿದೆ ಮತ್ತು ಇಲ್ಲಿನ ಜನರ ಭವಿಷ್ಯವು ಅನಿಶ್ಚಿತವಾಗಿದೆ. "ಚಿರತೆಯ ಆಗಮನದಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ" ಎಂದು ಬಲ್ಲು ಹೇಳುತ್ತಾರೆ, "ಅವರು ನಮಗೆ ಪೂರ್ತಿ ರೂ 15 ಲಕ್ಷವನ್ನು ನೀಡಿದ್ದರೆ, ನಾವು ನಮ್ಮ ಹೊಲಗಳಲ್ಲಿ ಸರಿಯಾಗಿ ಕಾಲುವೆಗಳು ಮತ್ತು ಮಟ್ಟಗಳನ್ನು ನಿರ್ಮಿಸಬಹುದಿತ್ತು. ಮತ್ತು ಜೊತೆಗೆ ಮನೆಗಳನ್ನು ಸಹ ನಿರ್ಮಿಸಬಹುದು. ನಮಗೆ ಕೆಲಸವೂ ಸಿಗುತ್ತಿಲ್ಲ ಹೀಗಿರುವಾಗ ನಾವು ಹೇಗೆ ಬದುಕುವುದು?” ಎಂದು ಮಂಗಿಲಾಲ್ ಆತಂಕದಿಂದ ಕೇಳುತ್ತಾರೆ.
ಸಹಾರಿಯಾ ಸಮುದಾಯದ ಜನರ ದೈನಂದಿನ ಜೀವನದ ಇತರ ಅಂಶಗಳ ಮೇಲೂ ಈ ಯೋಜನೆ ಪರಿಣಾಮ ಬೀರಿದೆ. ದೀಪಿ ತನ್ನ ಹಳೆಯ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದ, ಆದರೆ ಈಗ ಹೊಸ ಜಾಗಕ್ಕೆ ಬಂದ ನಂತರ ಅವನು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ. "ಹತ್ತಿರದಲ್ಲಿ ಯಾವುದೇ ಶಾಲೆ ಇಲ್ಲ" ಎಂದು ಅವನು ಹೇಳುತ್ತಾನೆ, ಇಲ್ಲಿಗೆ ಹತ್ತಿರದ ಶಾಲೆಯು ತುಂಬಾ ದೂರದಲ್ಲಿದೆ. ಚಿಕ್ಕ ಮಕ್ಕಳು ಅದೃಷ್ಟವಂತರು - ತೆರೆದ ಪ್ರದೇಶದಲ್ಲಿ ಈ ಮಕ್ಕಳಿಗೆ ಕಲಿಸಲೆಂದು ಶಿಕ್ಷಕರು ಪ್ರತಿದಿನ ಬೆಳಿಗ್ಗೆ ಬರುತ್ತಾರೆ. ಆದರೆ ಅದಕ್ಕಾಗಿ ಯಾವುದೇ ಕಟ್ಟಡಗಳಿಲ್ಲ. "ಆದರೂ ಮಕ್ಕಳು ಹೋಗುತ್ತಿದ್ದಾರೆ" ಮಂಗಿಲಾಲ್ ನನ್ನ ಆಶ್ಚರ್ಯವನ್ನು ನೋಡಿ ನಗುತ್ತಾ ಹೇಳುತ್ತಾರೆ. ಜನವರಿಯ ಆರಂಭದಲ್ಲಿ ರಜೆ ಇತ್ತು ಮತ್ತು ಇಂದು ಶಿಕ್ಷಕರು ಬಂದಿಲ್ಲ ಎಂದು ಅವರು ನನಗೆ ನೆನಪಿಸಿದರು.
ಸ್ಥಳೀಯ ನಿವಾಸಿಗಳಿಗಾಗಿ ಈಗ ಬೋರ್ ವೆಲ್ ತೋಡಿಸಲಾಗಿದೆ. ಸುತ್ತಮುತ್ತ ದೊಡ್ಡ ಟ್ಯಾಂಕುಗಳು ಸಹ ಇವೆ. ಇಲ್ಲಿ ನೈರ್ಮಲ್ಯ ವ್ಯವಸ್ಥೆಯ ದೊಡ್ಡ ಕೊರತೆಯಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ. “ನಾವು [ಮಹಿಳೆಯರು] ಏನು ಮಾಡಬೇಕು ಹೇಳಿ” ಎಂದು ಓಮ್ವತಿ ಕೇಳುತ್ತಾರೆ. “ಇಲ್ಲಿ ಶೌಚಾಲಯಗಳಿಲ್ಲ. ಅಲ್ಲದೆ ಇಲ್ಲಿನ ನೆಲವನ್ನೂ ಸಹ ಸಮತಟ್ಟು ಮಾಡಲಾಗಿರುವ ಕಾರಣ ಮಹಿಳೆಯರಿಗೆ ಶೌಚಕ್ಕೆ ಹೋಗಲು ಮರೆಯಾದ ಜಾಗ ಅಥವಾ ಮರಗಳಾಗಲಿ ಲಭ್ಯವಿಲ್ಲ. ಹಾಗೆಂದು ನಾವು ಬಯಲಿನಲ್ಲಿ ಅಥವಾ ಬೆಳೆದು ನಿಂತಿರುವ ಬೆಳೆಯ ನಡುವೆ ಹೋಗಲು ಕೂಡಾ ಸಾಧ್ಯವಿಲ್ಲ.”
ಐದು ಮಕ್ಕಳ ತಾಯಿಯಾದ 35 ವರ್ಷದ ಈ ಮಹಿಳೆ, ತಮ್ಮ ಹುಲ್ಲು ಮತ್ತು ಟಾರ್ಪಲಿನ್ ಬಳಸಿ ಕಟ್ಟಿದ ಮನೆಯ ದುರ್ಬಲ ಸಮಸ್ಯೆಯ ಹೊರತಾಗಿ ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. "ಉರುವಲು ತರಲು ನಾವು ಬಹಳ ದೂರ ಹೋಗಬೇಕಾಗಿದೆ. ಕಾಡು ಈಗ ಬಹಳ ದೂರದಲ್ಲಿದೆ. [ಮುಂದೆ] ನಾವು ಬದುಕನ್ನು ಹೇಗೆ ನಿರ್ವಹಿಸುವುದು?” ಎಂದು ಅವರು ಕೇಳುತ್ತಾರೆ. ನಾವು ಇಲ್ಲಿಗೆ ಬರುವಾಗ ತಂದಿದ್ದ ಸೌದೆ ಮತ್ತು ಇಲ್ಲಿ ನೆಲ ಅಗೆಯುವಾಗ ಎಳೆದು ಹಾಕಿದ ಬೇರುಗಳನ್ನು ಬಳಸಿ ನಾವು ದಿನ ಕಳೆಯುತ್ತಿದ್ದೇವೆ ಎಂದು ಇಲ್ಲಿನ ಇತರರು ಹೇಳುತ್ತಾರೆ.
ಚೀತಾ ಯೋಜನೆಗಾಗಿ ಹೊಸ ಬೇಲಿಗಳನ್ನು ಹಾಕಿರುವುದರಿಂದ ಕುನೊ ಸುತ್ತಲೂ ಎನ್‌ಟಿಎಫ್‌ಪಿ ಭಾರಿ ನಷ್ಟವನ್ನು ಅನುಭವಿಸುತ್ತಿದೆ. ಮುಂದಿನ ವರದಿಯಲ್ಲಿ ಈ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಲಿದ್ದೇವೆ.
ಚೀತಾ ಕ್ರಿಯಾ ಯೋಜನೆಯು ಪ್ರವಾಸೋದ್ಯಮದ ಆದಾಯದ 40 ಪ್ರತಿಶತವನ್ನು ಸುತ್ತಮುತ್ತಲಿನ ಸಮುದಾಯಗಳಿಗೆ ಹಿಂದಿರುಗಿಸಬೇಕೆಂದು ಹೇಳಿದೆ, "ಸ್ಥಳಾಂತರಗೊಂಡ ಜನರಿಗಾಗಿ ಚಿರತೆ ಸಂರಕ್ಷಣಾ ಪ್ರತಿಷ್ಠಾನ"ವನ್ನು ಈ ಉದ್ದೇಶಕ್ಕಾಗಿಯೇ ಸ್ಥಾಪಿಸಲಾಗಿದೆ. ಪ್ರತಿ ಗ್ರಾಮದಲ್ಲಿ ಚೀತಾ ಕಾವಲುಗಾರರಿಗೆ ಪ್ರೋತ್ಸಾಹಧನ, ಪರಿಸರ ಅಭಿವೃದ್ಧಿ ಯೋಜನೆಗಳಾದ ರಸ್ತೆಗಳು, ನೈರ್ಮಲ್ಯ, ಶಾಲೆಗಳು ಮತ್ತು ಹತ್ತಿರದ ಹಳ್ಳಿಗಳಿಗೆ ಇತರವುಗಳನ್ನು ಇದರಡಿ ನಿರ್ಮಿಸಲು ಯೋಜಿಸಲಾಗಿದೆ. ಯೋಜನೆ ಆರಂಭಗೊಂಡು ಹದಿನೆಂಟು ತಿಂಗಳು ಕಳೆದರೂ ಇವೆಲ್ಲವೂ ಕಾಗದದ ಮೇಲೆಯೇ ಉಳಿದುಕೊಂಡಿದೆ.
“ಎಷ್ಟು ದಿನ ನಾವು ಹೀಗೇ ಬದುಕುವುದು?” ಎಂದು ಕೇಳುತ್ತಾರೆ ಓಮ್ವತಿ ಆದಿವಾಸಿ.
ಮುಖ್ಯ ಚಿತ್ರ: ಆಡ್ರಿಯನ್ ಟಾರ್ಡಿಫ್
ಅನುವಾದ: ಶಂಕರ. ಎನ್. ಕೆಂಚನೂರು