ಅದು 2023ರ ಸೆಪ್ಟೆಂಬರ್ ತಿಂಗಳು. ನಾವು ಪಶ್ಚಿಮ ಘಟ್ಟದ 'ಹೂವುಗಳ ಕಣಿವೆ'ಯಲ್ಲಿ ಅಲ್ಲಿನ ಹೂವುಗಳನ್ನು ನೋಡಲೆಂದು ಹೋಗಿದ್ದೆವು. ನಾವು ಹೋದ ಸಮಯಕ್ಕೆ ಇಲ್ಲಿನ ಹೂವರಳುವ ಕಾಲದ ಅರ್ಧದಷ್ಟು ದಿನಗಳು ಸಂದು ಹೋಗಿದ್ದವು. ಈ ದಿನಗಳಲ್ಲಿ ಇಲ್ಲಿ ನೂರಾರು ಬಗೆಯ ಗುಲಾಬಿ ಮತ್ತು ನೇರಳೆ ಬಣ್ಣದ ಹೂವುಗಳು ಅರಳುತ್ತವೆ. ಈ ಹೂಗಳು ಈ ಪರಿಸರಕ್ಕೆ ಸ್ಥಳೀಯವಾದವು.
ಆದರೆ ಈ ವರ್ಷ ಅಲ್ಲಿ ಕೇವಲ ಒಂದಷ್ಟು ಒಣಗಿದ ಹೂಗಳು ನೆಲದ ಮೇಲೆ ಬಿದ್ದಿದ್ದವು.
ಸಮುದ್ರ ಮಟ್ಟದಿಂದ 1,200 ಮೀಟರ್ ಎತ್ತರದಲ್ಲಿರುವ ಕಾಸ್ ತಪ್ಪಲು ಪ್ರದೇಶವನ್ನು 2012ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು. ಅಂದಿನಿಂದ, ಇದು ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಮಾರ್ಪಟ್ಟಿದೆ, ವಿಶೇಷವಾಗಿ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತನಕ - ಹೂಬಿಡುವ ಋತುವಿನಲ್ಲಿ. ಮತ್ತು ಅದೇ ಈ ಸ್ಥಳಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.
"ಈ ಮೊದಲು ಯಾರೂ ಇಲ್ಲಿಗೆ ಬರುತ್ತಿರಲಿಲ್ಲ. ಕಾಸ್ ಎನ್ನುವುದು ನಮ್ಮ ಪಾಲಿಗೆ ಕೇವಲ ಒಂದು ಬೆಟ್ಟವಾಗಿತ್ತು. ನಾವು ಅಲ್ಲಿ ದನಕರುಗಳು ಮತ್ತು ಆಡುಗಳನ್ನು ಮೇಯಿಸುತ್ತಿದ್ದೆವು" ಎಂದು ಸುಲಾಬಾಯಿ ಬಡಪುರಿ ಹೇಳುತ್ತಾರೆ. "ಈಗ ಜನರು ಹೂವುಗಳ ಮೇಲೆ ನಡೆಯುತ್ತಾರೆ, ಫೋಟೋಗಳನ್ನು ಕ್ಲಿಕ್ ಮಾಡುತ್ತಾರೆ, ಅವುಗಳನ್ನು ಬೇರು ಸಮೇತ ಕಿತ್ತು ಬರುವಂತೆ ಎಳೆಯುತ್ತಾರೆ!" ಎಂದು ಪ್ರವಾಸಿಗರ ಉದಾಸೀನತೆಯಿಂದ ನಿರಾಶೆಗೊಂಡ 57 ವರ್ಷದ ಸುಲಾಬಾಯಿ ಹೇಳುತ್ತಾರೆ, "ಇದು ಬಾಗ್ (ತೋಟ) ಅಲ್ಲ; ಈ ಹೂವುಗಳು ಅರಳುವುದು ಬಂಡೆಯ ಮೇಲೆ."
ಕಾಸ್ ತಪ್ಪಲು ಪ್ರದೇಶಯು ಸತಾರಾ ಜಿಲ್ಲೆಯ ಸತಾರಾ ತಾಲ್ಲೂಕಿನಲ್ಲಿರುವ 1,600 ಹೆಕ್ಟೇರ್ ವಿಸ್ತೀರ್ಣದ ಬಂಡೆಗಲ್ಲಾಗಿದ್ದು, ಇದನ್ನು ಕಾಸ್ ಪತ್ತರ್ ಎಂದೂ ಕರೆಯಲಾಗುತ್ತದೆ.
“ಜನಸಂದಣಿಯನ್ನು ನಿಭಾಯಿಸುವುದೇ ಕಷ್ಟವಾಗುತ್ತದೆ” ಎಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ತಪ್ಪಲು ಪ್ರದೇಶಯನ್ನು ಕಾಯುವ ಸುಲಾಬಾಯಿ ಹೇಳುತ್ತಾರೆ. ಕಾಸ್ ಅರಣ್ಯ ಸಂರಕ್ಷಣಾ ಉದ್ದೇಶಗಳಿಗಾಗಿ ಸ್ಥಾಪಿಸಲಾದ ಕಾಸ್ ಅರಣ್ಯ ನಿರ್ವಹಣಾ ಸಮಿತಿಯಡಿ, ತ್ಯಾಜ್ಯ ಸಂಗ್ರಾಹಕರಾಗಿ, ದ್ವಾರಪಾಲಕರಾಗಿ, ಕಾವಲುಗಾರರಾಗಿ ಮಾರ್ಗದರ್ಶಕರಾಗಿ ಕೆಲಸ ಮಾಡುವ ಇಲ್ಲಿನ 30 ಜನರಲ್ಲಿ ಅವರೂ ಒಬ್ಬರು.
ಸತಾರಾದ ಜಂಟಿ ನಿರ್ವಹಣಾ ಅರಣ್ಯ ಸಮಿತಿಯ ಪ್ರಕಾರ, ಹೂಬಿಡುವ ಋತುವಿನಲ್ಲಿ ಪ್ರವಾಸಿಗರ ಸರಾಸರಿ ಸಂಖ್ಯೆ ಪ್ರತಿದಿನ 2,000 ದಾಟುತ್ತದೆ. ಇಲ್ಲಿ ಕಿಕ್ಕಿರಿಯುವ ಜನಸಂದಣಿಯು ಸುಲಾಬಾಯಿಯವರು “ಆಹೋ ಮೇಡಂ! ದಯವಿಟ್ಟು ಹೂಗಳನ್ನು ತುಳಿಯಬೇಡಿ. ಅವು ಬಹಳ ಸೂಕ್ಷ್ಮ. ಕಾಲ್ತುಳಿತಕ್ಕೆ ಸಿಲುಕಿದರೆ ಸಾಯುತ್ತವೆ” ಎಂದು ಮನವಿ ಮಾಡಿಕೊಂಡರೆ, ಸ್ವಲ್ಪ ಹೊತ್ತು ಅವರ ಮಾತನ್ನು ಕೇಳುತ್ತದೆ. ಮತ್ತೆ ಅದೇ ಕೆಲಸವನ್ನು ಮುಂದುವರೆಸುತ್ತದೆ. ಈ ಪ್ರವಾಸಿಗರು ಆಗಾಗ ಕ್ಷಮೆ ಕೇಳುತ್ತಾ ತಮ್ಮ ಫೋಟೊ ಶೂಟ್ ಮುಂದುವರೆಸುತ್ತಾರೆ.
ಹೂವಿನ ಋತುವಿನಲ್ಲಿ ಈ ತಪ್ಪಲು 850 ಸಸ್ಯ ಪ್ರಭೇದಗಳಿಗೆ ನೆಲೆ ನೀಡುತ್ತದೆ. ಅವುಗಳಲ್ಲಿ 624 ಪ್ರಭೇದಗಳನ್ನು ರೆಡ್ ಡೇಟಾ ಬುಕ್ ಎನ್ನುವ ಎಲ್ಲಾ ರೀತಿಯ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ದಾಖಲಿಸುವ ಪುಸ್ತಕದಲ್ಲಿ ದಾಖಲಿಸಲಾಗಿದೆ . ಮತ್ತು ಇವುಗಳಲ್ಲಿ 39 ಸಸ್ಯಗಳು ಕಾಸ್ ತಪ್ಪಲಿನಲಷ್ಟೇ ಕಾಣ ಸಿಗುತ್ತವೆ. ಇವುಗಳ ಜೊತೆಗೆ ಇಲ್ಲಿ 400ಕ್ಕೂ ಹೆಚ್ಚು ಔಷಧೀಯ ಸಸ್ಯಗಳು ಬೆಳೆಯುತ್ತವೆ. "ಮೊಣಕಾಲು ನೋವು, ಶೀತ, ಜ್ವರಕ್ಕೆ ಮದ್ದಾಗಬಲ್ಲ ಔಷಧೀಯ ಸಸ್ಯಗಳು ಮತ್ತು ಅವುಗಳ ಬಳಕೆಯನ್ನು ತಿಳಿದಿದ್ದ ಕೆಲವು ಹಿರಿಯರಿದ್ದರು. ಎಲ್ಲರಿಗೂ ಇದರ ಬಗ್ಗೆ ತಿಳಿದಿರಲಿಲ್ಲ" ಎಂದು ಹತ್ತಿರದ ವಂಜೋಲ್ವಾಡಿ ಗ್ರಾಮದ 62 ವರ್ಷದ ರೈತ ಲಕ್ಷ್ಮಣ್ ಶಿಂಧೆ ಹೇಳುತ್ತಾರೆ.
ಸಸ್ಯಗಳ ಹೊರತಾಗಿ, ಕಾಸ್ ವಿವಿಧ ಕಪ್ಪೆಗಳು ಸೇರಿದಂತೆ ಸುಮಾರು 139 ಜಾತಿಯ ಉಭಯಚರಗಳಿಗೆ ನೆಲೆಯಾಗಿದೆ ಎಂದು ಈ ವರದಿ ಹೇಳುತ್ತದೆ. ಇಲ್ಲಿ ವಾಸಿಸುವ ಸಸ್ತನಿಗಳು, ಸರೀಸೃಪಗಳು ಮತ್ತು ಕೀಟಗಳು ಪರಿಸರ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ.
ಪುಣೆ ಮೂಲದ ಸ್ವತಂತ್ರ ಸಂಶೋಧಕರಾದ ಪ್ರೇರಣಾ ಅಗರ್ವಾಲ್ ಅವರು ಐದು ವರ್ಷಗಳಿಂದ ಕಾಸ್ ತಪ್ಪಲು ಭೂಮಿಯ ಮೇಲೆ ಆಗಿರುವ ಸಾಮೂಹಿಕ ಪ್ರವಾಸೋದ್ಯಮದ ಪರಿಸರ ಪರಿಣಾಮವನ್ನು ಅಧ್ಯಯನ ಮಾಡಿದ್ದಾರೆ. "ಈ ಸ್ಥಳೀಯ ಪ್ರಭೇದಗಳು ಜನಸಂದಣಿ ಮತ್ತು ತುಳಿಯುವಿಕೆಯಂತಹ ಬಾಹ್ಯ ಬೆದರಿಕೆಗಳನ್ನು ತಾಳುವ ಗುಣವನ್ನು ಹೊಂದಿರುವುದಿಲ್ಲ. ಗುಳ್ಳೇ ಗಿಡದ (ವೈಜ್ಞಾನಿಕ ಹೆಸರು: ಯುಟ್ರಿಕ್ಯುಲೇರಿಯಾ ಪರ್ಪುರಸ್ಸೆನ್ಸ್) ಹೂವುಗಳು ಬೇಗನೆ ಹಾನಿಗೊಳಗಾಗುತ್ತವೆ. ಮಲಬಾರ್ ಹಿಲ್ ಬೋರೇಜ್ [ವೈಜ್ಞಾನಿಕ ಹೆಸರು: ಅಡಿಲೋಕರಿಯಮ್ ಮಲಬಾರಿಕಮ್] ಜಾತಿಯ ಗಿಡವು ಈ ಭಾಗದಲ್ಲಿ ಕ್ಷೀಣಿಸುತ್ತಿರುವುದ ಸಹ ಕಂಡುಬಂದಿದೆ" ಎಂದು ಅವರು ಹೇಳುತ್ತಾರೆ.
ವಿಪರ್ಯಾಸವೆಂದರೆ, ಈ ಪ್ರವಾಸೋದ್ಯಮವು ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ಸುತ್ತಮುತ್ತಲಿನ ಹಳ್ಳಿಗಳ ಜನರ ಪಾಲಿಗೆ ಹಂಗಾಮಿ ಉದ್ಯೋಗಾವಕಾಶಗಳನ್ನು ತೆರೆದಿದೆ. "ನಾನು ದಿನಕ್ಕೆ 300 ರೂಪಾಯಿಗಳನ್ನು ಪಡೆಯುತ್ತೇನೆ. [ಇದು] ಕೃಷಿ ಕೂಲಿಗಿಂತ ಉತ್ತಮ" ಎಂದು ಕಸಾನಿ, ಎಕಿವ್ ಮತ್ತು ಅಟಾಲಿ ಎನ್ನುವ ಹಳ್ಳಿಗಳ ಹೊಲಗಳಲ್ಲಿ ದಿನಗೂಲಿಯಾಗಿ ದುಡಿದು ತಾನು ಗಳಿಸುವ 150 ರೂ.ಗೆ ಹೋಲಿಸುತ್ತಾ ಸುಲಾಬಾಯಿ ಹೇಳುತ್ತಾರೆ.
ವರ್ಷದ ಉಳಿದ ದಿನಗಳಲ್ಲಿ, ಅವರು ತಮ್ಮ ಕುಟುಂಬದ ಒಂದು ಎಕರೆ ಮಳೆಯಾಶ್ರಿತ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುತ್ತಾರೆ. "ಕೃಷಿಯನ್ನು ಹೊರತುಪಡಿಸಿ ಬೇರೆ ಕೆಲಸಗಳು ಸಾಕಷ್ಟು ಸಿಗುವುದಿಲ್ಲ. ಈ ಮೂರು ತಿಂಗಳು ಒಂದಷ್ಟು ಒಳ್ಳೆಯ ಆದಾಯವನ್ನು ನೀಡುತ್ತವೆ" ಎಂದು ಕಾಸ್ ತಪ್ಪಲಿನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಸಾನಿ ಗ್ರಾಮದವರಾದ ಸುಲಾಬಾಯಿ ಹೇಳುತ್ತಾರೆ. ಅವರು ಪ್ರತಿದಿನ ಕೆಲಸಕ್ಕೆ ತಮ್ಮ ಮನೆಯಿಂದ ನಡೆದುಕೊಂಡು ಹೋಗುತ್ತಾರೆ, ಇದು "ನನಗೆ ಒಂದು ಗಂಟೆಯ ನಡಿಗೆ ದಾರಿ."
ಪ್ರತಿ ವರ್ಷ ಈ ತಪ್ಪಲಿನಲ್ಲಿ 2,000-2,500 ಮಿ.ಮೀ ಮಟ್ಟದ ಜೋರು ಮಳೆಯಾಗುತ್ತದೆ. ಮಳೆಗಾಲದಲ್ಲಿ ಈ ಕಲ್ಲುಗಳ ಮೇಲಿನ ವಿರಳ ಮಣ್ಣು ಅನನ್ಯ ಸಸ್ಯವರ್ಗ ಮತ್ತು ಸ್ಥಳೀಯ ಜಾತಿಯ ಸಸ್ಯಗಳಿಗೆ ನೆಲೆ ಒದಗಿಸುತ್ತದೆ. "ಕಾಸ್ ಮೇಲಿನ ಲ್ಯಾಟರೈಟ್ ಬಂಡೆಯು ಅದರ ರಂಧ್ರಗಳ ರಚನೆಯಲ್ಲಿ ನೀರನ್ನು ಉಳಿಸಿಕೊಳ್ಳುವ ಮೂಲಕ ಸ್ಪಂಜ್ ರೀತಿ ಕಾರ್ಯನಿರ್ವಹಿಸುತ್ತದೆ ಮತ್ತು ನಂತರ ನಿಧಾನವಾಗಿ ಅದನ್ನು ಹತ್ತಿರದ ತೊರೆಗಳಿಗೆ ಹಂಚುತ್ತದೆ" ಎಂದು ಡಾ. ಅಪರ್ಣಾ ವಾಟ್ವೆ ವಿವರಿಸುತ್ತಾರೆ. ಪುಣೆ ಮೂಲದ ಸಂರಕ್ಷಣಾವಾದಿ ಮತ್ತು ಸಸ್ಯಶಾಸ್ತ್ರಜ್ಞರಾದ ಅವರು, "ಈ ತಪ್ಪಲು ಭೂಮಿಗೆ ಮಾಡುವ ಯಾವುದೇ ಹಾನಿ ಈ ಪ್ರದೇಶದ ನೀರಿನ ಮಟ್ಟವನ್ನು ಹದಗೆಡಿಸಬಲ್ಲದು" ಎಂದು ಎಚ್ಚರಿಸುತ್ತಾರೆ.
ವಾಟ್ವೆ ಅವರು ಮಹಾರಾಷ್ಟ್ರದ ಉತ್ತರ ಪಶ್ಚಿಮ ಘಟ್ಟಗಳು ಮತ್ತು ಕೊಂಕಣದ 67 ಪ್ರಸ್ಥಭೂಮಿಗಳಲ್ಲಿ ಕ್ಷೇತ್ರ ಅಧ್ಯಯನ ನಡೆಸಿದ್ದಾರೆ. "ಇದು [ಕಾಸ್] ಸೂಕ್ಷ್ಮ ಸ್ಥಳ. ವಿಪರೀತ ಮೂಲಸೌಕರ್ಯ ಚಟುವಟಿಕೆಗಳು ಪರಿಸರದ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತವೆ" ಎಂದು ಪ್ರಸ್ಥಭೂಮಿಯ 15 ಚದರ ಕಿ.ಮೀ ವ್ಯಾಪ್ತಿಯಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮ ಮತ್ತು ಪರಿಚಾರಕರು, ಹೋಟೆಲ್ಲುಗಳು ಮತ್ತು ರೆಸಾರ್ಟ್‌ಗಳನ್ನು ಉಲ್ಲೇಖಿಸಿ ಅವರು ಹೇಳುತ್ತಾರೆ.
ಮಾನವಜನ್ಯ ಕಾರಣಗಳಿಂದಾಗಿ ಕೀಟಗಳು ಮತ್ತು ಹೂವುಗಳು ಕಣ್ಮರೆಯಾಗುತ್ತಿರುವುದರಿಂದ ಇಲ್ಲಿ ವಾಸಿಸುವ ಅನೇಕ ಸಸ್ತನಿಗಳು, ಸರೀಸೃಪಗಳು ಮತ್ತು ಕೀಟಗಳು ತಮ್ಮ ಆಹಾರವನ್ನು ಕಳೆದುಕೊಳ್ಳುವ ಅಪಾಯದಲ್ಲಿವೆ. "[ಪ್ರಾಣಿಗಳ] ದಾಖಲೀಕರಣದ ಅಗತ್ಯವಿದೆ ಏಕೆಂದರೆ ಅವುಗಳಿಗೆ ಚಲಿಸಲು ಬಹಳ ಕಡಿಮೆ ಸ್ಥಳಾವಕಾಶವಿದೆ, ಮತ್ತು ಅವು ಬೇರೆಲ್ಲಿಯೂ ಬದುಕಲು ಸಾಧ್ಯವಿಲ್ಲ. ನೀವು ಇಂತಹ ಸೂಕ್ಷ್ಮ ಆವಾಸಸ್ಥಾನಗಳನ್ನು ಕಲುಷಿತಗೊಳಿಸಿದರೆ ಅಥವಾ ಅವನತಿಗೊಳಿಸಿದರೆ, ಅವುಗಳಿಗೆ ಬೇರೆಲ್ಲಿಗೋ ಹೋಗಲು ಸಾಧ್ಯವಿಲ್ಲ. ಅವು ಅಳಿವಿನಂಚಿನಲ್ಲಿವೆ" ಎಂದು ವಿಜ್ಞಾನಿ ಸಮೀರ್ ಪಧೇ ಹೇಳುತ್ತಾರೆ. ಕೀಟಗಳು ಮತ್ತು ಹೂವುಗಳ ಕಣ್ಮರೆಯಾದಂತೆ ಹೂಬಿಡುವ ಮಾದರಿಗಳಲ್ಲಿ ತೀವ್ರ ಕುಸಿತ ಕಂಡು ಬರತೊಡಗುತ್ತದೆ, ಇದು ಇಡೀ ಪರಿಸರ ವ್ಯವಸ್ಥೆಯನ್ನು ಸಮಸ್ಯೆಗೆ ಈಡು ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಇದಲ್ಲದೆ, ಸ್ಥಳೀಯ ಪ್ರಭೇದಗಳ ನಾಶದಿಂದ ತಪ್ಪಲಿನ ಅಂಚಿನಲ್ಲಿರುವ ಹಳ್ಳಿಗಳ ಪರಾಗಸ್ಪರ್ಶ ಕ್ರಿಯೆ ಮತ್ತು ನೀರಿನ ಸಂಪನ್ಮೂಲಗಳ ಮೇಲೆ ಪರಿಣಾಮವಾಗುತ್ತದೆ ಎಂದು ಪಧೇ ಹೇಳುತ್ತಾರೆ.
ಮೊಣಕಾಲು ಮತ್ತು ಕೀಲು ನೋವುಗಳಿಗೆ ಪರಿಣಾಮಕಾರಿಯಾದ ಜಂಗ್ಲಿ ಹಲದ್ (ಹಿಚೆನಿಯಾ ಕ್ಯಾಲಿನಾ/ಕಸ್ತೂರಿ ಅರಿಶಿನ) ಸಸ್ಯವನ್ನು ಲಕ್ಷ್ಮಣ್ ನಮಗೆ ತೋರಿಸಿದರು. ನಾಲ್ಕು ದಶಕಗಳ ಹಿಂದಿನ ಒಂದು ಕಾಲವನ್ನು ನೆನಪಿಸಿಕೊಳ್ಳುವ ಅವರು, "ಆ ದಿನಗಳಲ್ಲಿ [ಕಾಸ್ ತಪ್ಪಲಿನಲ್ಲಿ] ಹೂವುಗಳು ಬಹಳ ದಟ್ಟವಾಗಿರುತ್ತಿದ್ದವು." ಹೂವರಳುವ ಸಮಯದಲ್ಲಿ, ಅವರು ಕಾಸ್ ತಪ್ಪಲಿನಲ್ಲಿ ಎಸೆಯಲ್ಪಟ್ಟ ಪ್ಲಾಸ್ಟಿಕ್ ಮತ್ತು ಕಸಗಳನ್ನು ಸಂಗ್ರಹಿಸುತ್ತಾರೆ. ಮತ್ತು ಆ ಮೂಲಕ ದಿನಕ್ಕೆ 300 ರೂ.ಗಳನ್ನು ಗಳಿಸುತ್ತಾರೆ. ವರ್ಷದ ಉಳಿದ ದಿನಗಳಲ್ಲಿ ಅವರು ತಮ್ಮ ಎರಡು ಎಕರೆ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುತ್ತಾರೆ.
“ನಾವು ಇಲ್ಲೇ ಹುಟ್ಟಿ ಬೆಳೆದವರು. ನಮಗೆ ಇಲ್ಲಿನ ಮೂಲೆ ಮೂಲೆಯೂ ಗೊತ್ತು. ಆದರೂ ನಮಗೆ ಓದು ಬರಹ ಬಾರದ ಕಾರಣ ನಮ್ಮನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಈ ಓದು ಬರಹ ಕಲಿತ ಮಂದಿ ಪ್ರಕೃತಿಗೆ ನೀಡುತ್ತಿರುವ ಕೊಡುಗೆಯಾದರೂ ಏನು?” ಎಂದು ಸುಲಾಬಾಯಿ ಕೇಳುತ್ತಾರೆ.
ಕಾಸ್ ಈಗ ಮೊದಲಿನಂತಿಲ್ಲ. “ಬೇಕಾರ್ [ಕೆಟ್ಟ ಕೊಂಪೆಯಂತೆ] ಆಗಿ ಕಾಣುತ್ತದೆ. ಇದು ನಾನು ಬಾಲ್ಯದಲ್ಲಿ ನೋಡುತ್ತಿದ್ದ ಕಾಸ್ ಅಲ್ಲ” ಎಂದು ಅವರು ನೋವಿನಿಂದ ನುಡಿಯುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು