ಲೋಖಿಕಾಂತೋ ಮಹತೋ ಅವರಿಗೆ ಈಗ 97 ವರ್ಷ. ಅವರ ಧ್ವನಿ ಇಂದಿಗೂ ಒಬ್ಬ ಉತ್ತಮ ಗಾಯಕನ ದನಿಯಂತೆ ಸ್ಪಷ್ಟವಿದೆ. ಪ್ರಭಾವಶಾಲಿ ಸುಂದರ ವ್ಯಕ್ತಿಯಾದ ಅವರನ್ನು ಕಂಡರೆ ನಿಮಗೆ ಒಮ್ಮೆ ರವೀಂದ್ರನಾಥ ಟ್ಯಾಗೋರ್ ಅವರ ನೆನಪಾಗದೇ ಇರುವುದಿಲ್ಲ.
ನಾವು ಲೋಖಿಯವರನ್ನು ಭೇಟಿಯಾಗಿದ್ದು 2022ರಲ್ಲಿ. ಅಂದು ಅವರು ಪಶ್ಚಿಮ ಬಂಗಾಳದ ಪಿರ್ರಾ ಎನ್ನುವ ಊರಿನ ಒಂದು ಕೋಣೆಯ ಮುರುಕು ಮನೆಯೊಂದರ ಮುಂದೆ ತಮ್ಮ ಆತ್ಮೀಯ ಸ್ನೇಹಿತ ಠೇಲು ಮಹತೋ ಅವರೊಡನೆ ಚಾರ್ಪಾಯ್ ಮೇಲೆ ಕುಳಿತಿದ್ದರು.
ಆಗ ಠೇಲು ಮಹತೋ ಅವರಿಗೆ 103 ವರ್ಷವಾಗಿತ್ತು. ಅವರು 2023ರಲ್ಲಿ ನಿಧನರಾದರು. ಓದಿ: ಠೇಲು ಮಹತೋ ತೋಡಿದ ಬಾವಿ
ಠೇಲು ದಾದು (ಅಜ್ಜ) ಈ ಪ್ರದೇಶದಲ್ಲಿ ಉಳಿದಿರುವ ಕೊನೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಎಂಬತ್ತು ವರ್ಷಗಳ ಹಿಂದೆ ಅವರು ಪುರುಲಿಯಾ ಪೊಲೀಸ್ ಠಾಣೆಗೆ ಮೆರವಣಿಗೆಯನ್ನು ಒಯ್ದಿದ್ದರು. ಇದು ನಡೆದಿದ್ದು 1942ರಲ್ಲಿ ಮತ್ತು ಈ ಮೆರವಣಿಗೆ ಕ್ವಿಟ್ ಇಂಡಿಯಾ ಚಳವಳಿಯ ಸ್ಥಳೀಯ ಅಧ್ಯಾಯದ ಭಾಗವಾಗಿತ್ತು.
ಅಂದು ನಡೆದ ಈ ಠಾಣೆ ಮುತ್ತಿಗೆ ಕಾರ್ಯಕ್ರಮದಲ್ಲಿ 17 ವರ್ಷಕ್ಕಿಂತ ಚಿಕ್ಕವರು ಭಾಗವಹಿಸದಂತೆ ಹೋರಾಟಗಾರರು ಹೇಳಿದ್ದ ಕಾರಣ ಆಗ ಚಿಕ್ಕವರಾಗಿದ್ದ ಲೋಖಿ ಈ ಪೊಲೀಸ್ ಮುತ್ತಿಗೆ ಕಾರ್ಯಕ್ರಮದ ಭಾಗವಾಗಿರಲಿಲ್ಲ.
ಠೇಲು ಮತ್ತು ಲೋಖಿ ಮಹತೋ ಅವರ ಸ್ವಾತಂತ್ರ್ಯ ಹೋರಾಟವು ಸ್ಟೀರಿಯೋ ಟೈಪ್ ಮಾದರಿಯದ್ದಲ್ಲ. ಹಾಗೂ ಸರ್ಕಾರ ಮತ್ತು ಗಣ್ಯ ವಕ್ತಿಗಳು ಗುರುತಿಸಿದ್ದ ಮಾದರಿಯದ್ದೂ ಅಲ್ಲ. ಹಾಗೆಯೇ ಅವರು ಕೇವಲ ಲೆಕ್ಕ ಭರ್ತಿಗೆ ಹೋರಾಟಗಳಲ್ಲಿ ಭಾಗವಹಿಸಿದವರೂ ಅಲ್ಲ. ಇಬ್ಬರಿಗೂ ತಾವು ಮಾತನಾಡುವ ವಿಷಯಗಳ ಕುರಿತು ಜ್ಞಾನವಿದೆ. ಕೃಷಿ ಹಾಗೂ ಈ ಪ್ರದೇಶದ ಇತಿಹಾಸದ ಕುರಿತು ಠೇಲು ಮಹತೋ ನಿಖರವಾಗಿ ಮಾತನಾಡಿದರೆ, ಲೋಖಿಯವರು ಸಂಗೀತ ಮತ್ತು ಸಂಸ್ಕೃತಿಯ ಕುರಿತಾಗಿ ಮಾತನಾಡಬಲ್ಲರು.
ಲೋಖಿಯವರು ಸಾಂಸ್ಕೃತಿಕ ಪ್ರತಿರೋಧದ ಭಾಗವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಅವರು ಧಮ್ಸಾ (ನಗಾರಿ) ಎನ್ನುವ ಸಂಗೀತ ಉಪಕರಣವನ್ನು ಬಾರಿಸುತ್ತಿದ್ದರು. ಜೊತೆಗೆ ಮದೋಲ್ ಎನ್ನುವ ಮದ್ದಳೆ ರೀತಿಯ ವಾದ್ಯವನ್ನೂ ನುಡಿಸುತ್ತಿದ್ದರು. ಈ ಉಪಕರಣಗಳು ಸಂತಾಲರು, ಕುರ್ಮಿ, ಬಿರ್ಹೋರ್ಸ್ ಸೇರಿದಂತೆ ಹಲವು ಆದಿವಾಸಿ ಸಮುದಾಯಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಇವರ ತಂಡಗಳು ಒಂದು ಕಾಲದಲ್ಲಿ ಸಾಮಾನ್ಯ ಜಾನಪದ ಗೀತೆಗಳನ್ನೇ ಹಾಡುತ್ತಿದ್ದವು. ಆದರೆ ಆಗಿನ ಸಮಯದ ಕಾರಣ ಅವರ ಗೀತೆಗಳಿಗೆ ಹೊಸ ಅರ್ಥವೇ ಮೂಡಿತ್ತು.
ತಾವು ಹಾಡು ಹಾಡುತ್ತಲೇ ಹೇಗೆ ಬ್ರಿಟಿಷರ ವಿರುದ್ಧ ದಂಗೆಯ ಸಂದೇಶವನ್ನು ಹರಡಿದೆವು ಎನ್ನುವುದನ್ನು ವಿವರಿಸುತ್ತಾ, “ನಾವು ಆಗಾಗ ʼವಂದೇ ಮಾತರಂʼ ಎಂದು ಘೋಷಣೆ ಕೂಗುತ್ತಿದ್ದೆವು” ಎನ್ನುತ್ತಾರೆ ಲೋಖಿ. “ಆದರೆ ಅದು ಬ್ರಿಟಿಷರಿಗೆ ಸಿಟ್ಟು ತರಿಸಿತ್ತು” ಎಂದು ಅವರು ನಗುತ್ತಾ ನೆನಪಿಸಿಕೊಳ್ಳುತ್ತಾರೆ.
ಈ ಗೆಳೆಯರಿಬ್ಬರಿಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಪಿಂಚಣಿಯನ್ನು ನಿರಾಕರಿಸಲಾಗಿದೆ ಮತ್ತು ಅವರೂ ಈ ಕುರಿತು ಪ್ರಯತ್ನಿಸುವುದನ್ನು ಬಿಟ್ಟ ಬಹಳ ಕಾಲವಾಗಿದೆ. ಠೇಲು ಮಹತೋ ಅವರಿಗೆ ವೃದ್ದಾಪ್ಯ ವೇತನವಾಗಿ , 1,000 ರೂ ಬರುತ್ತಿದ್ದು ಅದರಲ್ಲಿ ಬದುಕುತ್ತಿದ್ದಾರೆ. ಲೋಖಿಯವರಿಗೆ ಈ ಪಿಂಚಣಿ ಒಂದು ತಿಂಗಳು ಸಿಕ್ಕಿತ್ತು ನಂತರ ಅದು ಇದ್ದಕ್ಕಿದ್ದ ಹಾಗೆ ನಿಂತುಹೋಯಿತು.
ಆಗ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸುವ ಸಲುವಾಗಿ ಹಲವು ಹಿನ್ನೆಲೆಯ ಜನರು ಮುಂದೆ ಬಂದಿದ್ದರು. ಇವರಲ್ಲಿ ಠೇಲು ಮಹತೋ ಮತ್ತು ಲೋಖಿ ಮಹತೋ ಕೂಡಾ ಇದ್ದಾರೆ. ಸೈದ್ಧಾಂತಿಕವಾಗಿ ಎಡಪಂಥೀಯರಾಗಿರುವ ಇವರು ವ್ಯಕ್ತಿತ್ವದಲ್ಲಿ ಗಾಂಧಿವಾದಿಗಳು. ಇಬ್ಬರೂ ಕುರ್ಮಿ ಸಮುದಾಯಕ್ಕೆ ಸೇರಿದವರಾಗಿದ್ದು, ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ತಿರುಗಿಬಿದ್ದ ಮೊದಲಿಗರಲ್ಲಿ ಈ ಸಮುದಾಯವೂ ಒಂದು.
ಅಂದು ಲೋಖಿಯವರು ನಮಗಾಗಿ ಕುರ್ಮಿ ಸಮುದಾಯ ಸುಗ್ಗಿ ಹಬ್ಬದ ಸಮಯದಲ್ಲಿ ಹಾಡುವ ಟುಸೂಗಾನ್ ಎನ್ನುವ ಸಾಂಪ್ರದಾಯಿಕ ಗೀತೆಯೊಂದನ್ನು ಹಾಡಿದರು. ಟುಸೂ ಎನ್ನುವುದು ಧಾರ್ಮಿಕ ಹಬ್ಬವಲ್ಲ, ಇದೊಂದು ಜಾತ್ಯಾತೀತ ಹಬ್ಬ. ಈ ಟುಸೂಗಾನ್ ಒಂದು ಕಾಲದಲ್ಲಿ ಅವಿವಾಹಿತ ಹೆಣ್ಣು ಮಕ್ಕಳಷ್ಟೇ ಹಾಡುತ್ತಿದ್ದ ಹಾಡು. ಆದರೆ ಈ ಹಾಡಿನ ಪ್ರಕಾರವು ಅವರನ್ನು ಮೀರಿ ಎಲ್ಲರ ನಡುವೆ ಬೆಳೆಯಿತು. ಲೋಖಿಯವರು ನಮಗಾಗಿ ಹಾಡಿದ ಒಂದು ಹಾಡಿನಲ್ಲಿ ಟುಸೂ ಯುವತಿಯಾಗಿ ಕಾಣಿಸಿಕೊಂಡಿದ್ದಾಳೆ. ಅವರು ಹಾಡಿದ ಇನ್ನೊಂದು ಹಾಡು ಹಬ್ಬದ ಕೊನೆಯನ್ನು ಸೂಚಿಸುತ್ತದೆ.
টুসু নাকি দক্ষিণ যাবে
খিদা লাগলে খাবে কি?
আনো টুসুর গায়ের গামছা
ঘিয়ের মিঠাই বেঁধে দি।
তোদের ঘরে টুসু ছিল
তেই করি আনাগোনা,
এইবার টুসু চলে গেল
করবি গো দুয়ার মানা।
ಟುಸೂ ದಕ್ಷಿಣಕ್ಕೆ
ಹೊರಟಿದ್ದಾಳಂತೆ
ದಾರಿಯಲ್ಲಿ ಹಸಿವಾದರೆ
ಅವಳು ಏನು ತಿನ್ನುತ್ತಾಳೆ?
ಟುಸೂವಿನ ಗಮ್ಚಾ ತಂದು
ಕೊಡಿ ನನಗೆ
ಒಂದಷ್ಟು ತುಪ್ಪ
ಹಾಕಿ ಮಾಡಿದ ತಿಂಡಿ ಕಟ್ಟಿ ಕೊಡುವೆ.
ಟುಸೂ ಅಲ್ಲಿರುತ್ತಾಳೆನ್ನುವ ಕಾರಣಕ್ಕೆ
ನಾನು ನಿನ್ನ ಮನೆಗೆ ಬರುತ್ತಿದ್ದೆ
ಈಗ ಟುಸೂ ಹೊರಟು ಹೋಗಿದ್ದಾಳೆ
ಇನ್ನೇನು ಕೆಲಸ ನನಗೆ ನಿನ್ನ ಮನೆಯಲ್ಲಿ?
*ತೆಳುವಾದ, ಒರಟು ಹತ್ತಿ ಬಟ್ಟೆ, ಸಾಂಪ್ರದಾಯಿಕವಾಗಿ ಟವೆಲ್, ಸ್ಕಾರ್ಫ್ ಅಥವಾ ಪೇಟವಾಗಿ ಬಳಸಲಾಗುತ್ತದೆ. ಗಮ್ಚಾ ಹೊಂದಾಣಿಕೆಯ ಗುಣಗಳನ್ನು ಹೊಂದಿರುವ ಉಡುಪು ಕೂಡ ಆಗಿದೆ.
ಕವರ್ ಫೋಟೊ: ಸ್ಮಿತಾ ಖಾಟೋರ್
ಅನುವಾದ: ಶಂಕರ. ಎನ್. ಕೆಂಚನೂರು