ಇಂತಹದ್ದೊಂದು ಸೂರ್ಯಾಸ್ತವನ್ನು ನೋಡುವ ಬಯಕೆ ರಂದಾವನಿ ಸುರ್ವಾಸೆಯವರಿಗೆ ಎಂದೂ ಇದ್ದಿರಲಿಲ್ಲ. ತನ್ನ ಒಂದು ಕೋಣೆಯ ಅಡುಗೆ ಮನೆಯ ಹೊರಗೆ ಕುಳಿತ ಅವರು ಮುಖದ ಮೇಲೆ ನೋವಿನ ನಗೆಯನ್ನು ಹೊತ್ತು ಬೀದಿ ದೀಪಗಳ ಬೆಳಕಿಗೆ ದಾರಿ ಮಾಡಿಕೊಡುತ್ತಿದ್ದ ರವಿಕಿರಣಗಳ ಕಡೆಗೆ ಗಮನವನ್ನು ನೆಟ್ಟಿದ್ದರು. “ನನ್ನ ಪತಿ ಇಲ್ಲಿ ಕುಳಿತು ತನ್ನ ನೆಚ್ಚಿನ ಅಭಂಗಗಳನ್ನು ಹಾಡುತ್ತಿದ್ದ ಸ್ಥಳವಿದು” ಎಂದು ಅವರು ಹೇಳಿದರು.

ಪ್ರಭಾಕರ ಸುರವಾಸೆ ವಿಠ್ಠಲ, ಅಭಂಗ ಭಕ್ತಿಗೀತೆಗಳನ್ನು ಹಾಡುತ್ತಾ ಕಾಲ ಕಳೆಯುತ್ತಿದ್ದರು. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಅಂದಿನಿಂದ, ಪ್ರಭಾಕರ್ ಬೀಡ್ ಜಿಲ್ಲೆಯ ಪಾರ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಪ್ರತಿದಿನ ಸಂಜೆ ಭಜನೆಗಳನ್ನು ಹಾಡಿ ಸುತ್ತಮುತ್ತಲಿನ ಜನರನ್ನು ಸಂತೋಷಪಡಿಸುತ್ತಿದ್ದರು.

ಇದು 9ನೇ ಏಪ್ರಿಲ್ 2021ರವರೆಗೆ ಹೀಗೆ ಮುಂದುವರೆದಿತ್ತು. ಇದರ ನಂತರ ಕೋವಿಡ್-19 ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು.

ಎರಡು ದಿನಗಳ ನಂತರ ಅವರನ್ನು ಇಲ್ಲಿಂದ 25 ಕಿ.ಮೀ ಅಂಬಾಜೋಗಿಯ ಸ್ವಾಮಿ ರಮಾನಂದತೀರ್ಥ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು 10 ದಿನಗಳ ನಂತರ ಉಸಿರಾಟದ ತೊಂದರೆಯಿಂದ ನಿಧನರಾದರು.

ಅವರ ಸಾವು ಇದ್ದಕ್ಕಿದ್ದಂತೆ ಸಂಭವಿಸಿತು. "ನಾನು ಅವರಿಗೆ ಬೆಳಿಗ್ಗೆ 11.30ಕ್ಕೆ ಬಿಸ್ಕತ್ತುಗಳನ್ನು ತಿನ್ನಿಸಿದ್ದೆ" ಎಂದು ಅವರ ಸೋದರಳಿಯ ವೈದ್ಯನಾಥ್ ಸುರ್ವಾಸೆ ಹೇಳುತ್ತಾರೆ. 36 ವರ್ಷದ ವೈದ್ಯನಾಥ್ ಅವರು ಪಾರ್ಳಿಯಲ್ಲಿ ಚೈನೀಸ್ ತಿನಿಸುಗಳ ಗಾಡಿ ನಡೆಸುತ್ತಿದ್ದಾರೆ. “ಅವರು ಜ್ಯೂಸ್ ಕೂಡ ಕೇಳಿದರು. ನಾವು ಹರಟೆ ಹೊಡೆದೆವು. ಎಲ್ಲವೂ ಚೆನ್ನಾಗಿದೆ ಅನ್ನಿಸಿತ್ತು. ಆದರೆ ಮಧ್ಯಾಹ್ನ 1.30ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.”

ವೈದ್ಯನಾಥ್‌ ಆ ದಿನವೆಲ್ಲ ವಾರ್ಡಿನಲ್ಲೇ ಇದ್ದರು. ಮಧ್ಯಾಹ್ನದ ಹೊತ್ತಿಗೆ ಆಮ್ಲಜನಕ ಪೂರೈಕೆಯಲ್ಲಿನ ಒತ್ತಡ ಇದ್ದಕ್ಕಿದ್ದ ಹಾಗೆ ಇಳಿಮುಖವಾಗತೊಡಗಿತು ಎಂದು ಅವರು ಹೇಳುತ್ತಾರೆ. ಅಲ್ಲಿಯವರೆ ಹರಟೆ ಹೊಡೆಯುತ್ತಾ ಗೆಲುವಿನಿಂದಿದ್ದ ಪ್ರಭಾಕರ್‌ ಉಸಿರಾಟಕ್ಕೆ ಹೆಣಗತೊಡಗಿದರು. “ನಾನು ಗಡಿಬಡಿಯಿಂದ ವೈದ್ಯರನ್ನು ಕರೆದೆ, ಆದರೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ “          ಎಂದು ವೈದ್ಯನಾಥ್ ಹೇಳುತ್ತಾರೆ. ಸ್ವಲ್ಪ ಹೊತ್ತು ಉಸಿರಾಡಲು ಕಷ್ಟಪಟ್ಟ ಅವರು ನಂತರ ನಿಧನರಾದರು. ನಾನು ಅವರ ಎದೆಯನ್ನು ಒತ್ತುವುದು, ಪಾದಗಳನ್ನು ಉಜ್ಜುವುದನ್ನು ಸಹ ಮಾಡಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ.”

PHOTO • Parth M.N.
PHOTO • Parth M.N.

ರಂದವಾನೀ ಸುರ್ವಾಸೆಯವರು ಪ್ರಭಾಕರ್‌ ಅವರ ಸಾವನ್ನು ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ (ಎಡ) ಆಮ್ಲಜನಕದ ಕೊರತೆಯಿಂದಾಗಿ ಪ್ರಭಾಕರ್‌ ಸಾವು ಸಂಭವಿಸಿದೆ ಎನ್ನುವುದು ಅವರ ಸೋದರಳಿಯ ವೈದ್ಯನಾಥ್ (ಬಲ) ನಂಬಿಕೆ

ಆಸ್ಪತ್ರೆಯಲ್ಲಿ ಆಮ್ಲಜನಕ ಖಾಲಿಯಾಗಿದ್ದರಿಂದ ಪ್ರಭಾಕರ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಾರೆ. “ಆಸ್ಪತ್ರೆಗೆ ಹೋದಾಗ ಅವರ ಆರೋಗ್ಯ ಸ್ವಲ್ಪವೂ ಹದಗೆಟ್ಟಿರಲಿಲ್ಲ. ಅವರ ಆರೋಗ್ಯ ಸುಧಾರಿಸುತ್ತಿತ್ತು. ನಾನು ಒಂದು ದಿನವೂ ಆಸ್ಪತ್ರೆಯಿಂದ ಕದಲಿರಲಿಲ್ಲ” ಎಂದು 55 ವರ್ಷದ ರಂದಾವನಿ ಹೇಳುತ್ತಾರೆ. "ಅವರು ಹೋಗುವ ಒಂದು ಅಥವಾ ಎರಡು ದಿನಗಳ ಮೊದಲು ಸಹ ಆಸ್ಪತ್ರೆಯ ವಾರ್ಡಿನಲ್ಲಿ ಹಾಡುವ ಕುರಿತು ತಮಾಷೆ ಮಾಡಿದ್ದರು."

ಇದೇ ಆಸ್ಪತ್ರೆಯಲ್ಲಿ ಏಪ್ರಿಲ್ 21ರಂದು ಇನ್ನೂ ಕೆಲವರು ಸಾವನ್ನಪ್ಪಿದ್ದಾರೆ. ಈ ಆಸ್ಪತ್ರೆಯಲ್ಲಿ, 12.45 ಮತ್ತು 2.15ರ ನಡುವೆ ಒಂದೂವರೆ ಗಂಟೆಯಲ್ಲಿ ಇತರ ಆರು ರೋಗಿಗಳು ಸಾವನ್ನಪ್ಪಿದ್ದಾರೆ.

ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎನ್ನುವುದನ್ನು ಆಸ್ಪತ್ರೆ ನಿರಾಕರಿಸಿದೆ. "ಆ ರೋಗಿಗಳ ಆರೋಗ್ಯವು ಈಗಾಗಲೇ ಹದಗೆಟ್ಟಿತ್ತು. ಮತ್ತು ಅವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು” ಎಂದು ವೈದ್ಯಕೀಯ ಕಾಲೇಜಿನ ಸಂಸ್ಥಾಪಕ ಡಾ. ಶಿವಾಜಿ ಸುಕ್ರೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

“ಆಸ್ಪತ್ರೆಯು ನಿರಾಕರಿಸುವುದು ಸಹಜ. ಆದರೆ ಆಮ್ಲಜನಕದ ಕೊರತೆಯಿಂದಲೇ ಈ ಸಾವುಗಳು ಸಂಭವಿಸಿವೆ” ಎಂದು ಹಿರಿಯ ಪತ್ರಕರ್ತ ಅಭಿಜಿತ್ ಗಥಾಲ್ ಹೇಳುತ್ತಾರೆ. ಅವರು ಈ ಸಾವುಗಳನ್ನು ಮೊದಲು ಅಂಬಾಜೋಗಯಿಯಿಂದ ಪ್ರಕಟವಾಗುವ ಮರಾಠಿ ದೈನಿಕ ವಿವೇಕ್ ಸಿಂಧುದವಿನಲ್ಲಿ ವರದಿ ಮಾಡಿದರು. “ಆ ದಿನ ಆಸ್ಪತ್ರೆ ಆಡಳಿತದ ವಿರುದ್ಧ ರೋಗಿಗಳ ಸಂಬಂಧಿಕರು ಆಕ್ರೋಶಗೊಂಡಿದ್ದರು. ಮತ್ತು ನಮ್ಮ ಮೂಲಗಳು ಸಂಬಂಧಿಕರ ಆರೋಪವನ್ನು ಖಚಿತಪಡಿಸಿವೆ.”

ಕಳೆದ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಸಿಜನ್ ಸಿಲಿಂಡರ್ ಮತ್ತು ಆಸ್ಪತ್ರೆಯ ಹಾಸಿಗೆಗಳಿಗಾಗಿ ಮನವಿ ಮಾಡುತ್ತಿರುವುದು ಹೆಚ್ಚುತ್ತಿದೆ. ಭಾರತದ ಮೂಲೆ ಮೂಲೆಗಳಿಂದ ಹತಾಶ ಜನರು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಮೂಲಕ ಮನವಿ ಮಾಡುತ್ತಿದ್ದಾರೆ. ಆದರೆ ಅಂತಹ ಸಾಮಾಜಿಕ ಮಾಧ್ಯಮಗಳು ಹೆಚ್ಚು ಕೆಲಸ ಮಾಡದ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆ ಹೆಚ್ಚು ಎನ್ನುವುದು ಸ್ಪಷ್ಟ.

ಅಂಬಾಜೋಗಯಿಯ ಆಸ್ಪತ್ರೆಯ ಅಧಿಕಾರಿಯೊಬ್ಬರು ತಮ್ಮ ಗುರುತು ಬಹಿರಂಗಪಡಿಸದಂತೆ ಮನವಿ ಮಾಡಿ ಕೆಲವು ಮಾಹಿತಿ ನೀಡಿದರು. ಅವರ ಪ್ರಕಾರ, ಆಮ್ಲಜನಕದ ಬೇಡಿಕೆಯನ್ನು ದೈನಂದಿನ ಲೆಕ್ಕದ ಆಧಾರದಲ್ಲಿ ಪೂರೈಸಲಾಗುತ್ತದೆ. “ನಮಗೆ ಪ್ರತಿದಿನ 12 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿದೆ. ಮತ್ತು [ಆಡಳಿತದಿಂದ] 7 ಟನ್‌ಗಳಷ್ಟು ದೊರೆಯುತ್ತದೆ” ಎಂದು ಅವರು ಹೇಳುತ್ತಾರೆ. “ಈ ಕೊರತೆಯನ್ನು ಹೇಗೆ ಸರಿದೂಗಿಸಬೇಕು ಎಂಬುದಕ್ಕೆ ಪ್ರತಿನಿತ್ಯ ಹೋರಾಟ ನಡೆಯುತ್ತಿದೆ. ನಾವು ಜಂಬೋ ಸಿಲಿಂಡರ್‌ಗಳನ್ನು ತರಿಸುವಲ್ಲಿಗೆ ಬೇಡಿಕೆ ಸಲ್ಲಿಸುತ್ತೇವೆ.” ಬೀಡ್‌ ವಿಭಾಗದ ಪೂರೈಕೆದಾರರ ಜೊತೆಗೆ, ಹತ್ತಿರದ ನಗರಗಳಾದ ಲಾತೂರ್ ಮತ್ತು ಔರಂಗಾಬಾದ್‌ನಿಂದಲೂ ಬೇಡಿಕೆ ಸಲ್ಲಿಸಿ ಸಿಲಿಂಡರ್‌ಗಳನ್ನು ತರಿಸಲಾಗುತ್ತದೆ.

ಸ್ವಾಮಿ ರಮಾನಂದ ತೀರ್ಥ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಇಲ್ಲಿ ಒಟ್ಟು 402 ಹಾಸಿಗೆಗಳಿದ್ದು , ಈ ಪೈಕಿ 265 ಹಾಸಿಗೆಗಳಲ್ಲಿ ಆಮ್ಲಜನಕ ಸೌಲಭ್ಯವಿದೆ. ಏಪ್ರಿಲ್ ಕೊನೆಯಲ್ಲಿ, ಪೂರೈಕೆಯನ್ನು ಹೆಚ್ಚಿಸಲು ಪಾರ್ಳಿಯ ಉಷ್ಣ ವಿದ್ಯುತ್ ಸ್ಥಾವರದಲ್ಲಿನ ಆಮ್ಲಜನಕ ಸ್ಥಾವರವನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ, ಆಸ್ಪತ್ರೆಯಲ್ಲಿ 96 ವೆಂಟಿಲೇಟರ್‌ ಸಾಧನಗಳಿವೆ, ಅದರಲ್ಲಿ 25 ಸಾಧನಗಳನ್ನು ಏಪ್ರಿಲ್ ಕೊನೆಯ ವಾರದಲ್ಲಿ ಪಿಎಂ ಕೇರ್ಸ್ ನಿಧಿಯಡಿ ಒದಗಿಸಲಾಗಿದೆ.

Left: A working ventilator at the Ambejogai hospital. Right: One of the 25 faulty machines received from the PM CARES Fund
PHOTO • Parth M.N.
Left: A working ventilator at the Ambejogai hospital. Right: One of the 25 faulty machines received from the PM CARES Fund
PHOTO • Parth M.N.

ಅಂಬಾಜೋ ಗಾಯಿ ಆಸ್ಪತ್ರೆಯಲ್ಲಿ ನ ಸುಸಜ್ಜಿತ ವೆಂಟಿಲೇಟರ್. ಬಲ: ಪಿಎಂ ಕೇರ್ಸ್ ನಿಧಿಯಿಂದ ಸ್ವೀಕರಿಸಿದ 25 ನಿಷ್ಕ್ರಿಯ ಯಂತ್ರಗಳಲ್ಲಿ ಒಂದು

ಈ 25 ವೆಂಟಿಲೇಟರ್‌ಗಳು ದೋಷಪೂರಿತವಾಗಿರುವುದು ಕಂಡುಬಂದಿದೆ. ಈ ಯಂತ್ರಗಳ ದುರಸ್ತಿಗಾಗಿ ಮೇ ಮೊದಲ ವಾರದಲ್ಲಿ ಮುಂಬೈನ ಇಬ್ಬರು ತಂತ್ರಜ್ಞರು ಖುದ್ದಾಗಿ 460 ಕಿ.ಮೀ ದೂರದ ಅಂಬಾಜೋಗಾಯಿಗೆ ಪ್ರಯಾಣ ಬೆಳೆಸಿದ್ದಾರೆ. 11 ಯಂತ್ರಗಳನ್ನು ಸಣ್ಣಪುಟ್ಟ ರಿಪೇರಿಗೆ ಒಳಪಡಿಸಿ ಆರಂಭಿಸಿದರು.

ಅಂಬಾಜೋಗಾಯಿಯ ಆಸ್ಪತ್ರೆಯಲ್ಲಿನ ರೋಗಿಗಳ ಸಂಬಂಧಿಕರು ಅಲ್ಲಿನ ಪರಿಸ್ಥಿತಿ ನೋಡಿ ಪೂರ್ತಿ ಭರವಸೆ ಕಳೆದುಕೊಂಡಿದ್ದರು. ಇಲ್ಲಿ ಪ್ರತಿದಿನ ನಮ್ಮ ಕಣ್ಣೆದುರೇ ಆಮ್ಲಜನಕದ ಹೋರಾಟ ನಡೆಯುತ್ತಿರುವುದರಿಂದ ಆತಂಕವಾಗುವುದು ಸಹಜ ಎನ್ನುತ್ತಾರೆ ವೈದ್ಯನಾಥ್. "ಆಮ್ಲಜನಕದ ಕೊರತೆಯು ದೇಶದಾದ್ಯಂತ ಇರುವ ಸಮಸ್ಯೆ. ನಾನು ಸಾಮಾಜಿಕ ಮಾಧ್ಯಮವನ್ನು ನೋಡುತ್ತೇನೆ, ಜನರು ಪರಸ್ಪರ ಹೇಗೆ ಸಹಾಯ ಮಾಡುತ್ತಾರೆ ಎಂಬುದನ್ನು ಸಹ ನೋಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ನಮಗೆ ಆ ಆಯ್ಕೆಯೂ ಇಲ್ಲ. ನಾನು ಪೋಸ್ಟ್ ಮಾಡಿದರೂ, ಅದನ್ನು ಯಾರು ನೋಡುತ್ತಾರೆ? ನಾವು ಆಸ್ಪತ್ರೆಯನ್ನು ಮಾತ್ರ ನಂಬುತ್ತೇವೆ. ಮತ್ತು ಕೊನೆಗೆ ನಾವು ಏನು ಆಗಬಾರದು ಎಂದುಕೊಂಡಿದ್ದೆವೋ ಅದೇ ನಡೆಯಿತು.

ರಂದಾವನಿ, ಅವರ ಸೊಸೆ ಮತ್ತು 10, 6 ಮತ್ತು 4 ವರ್ಷದ ಮೂವರು ಮೊಮ್ಮಕ್ಕಳಿಗೆ ಪ್ರಭಾಕರ್ ಅವರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. “ಮಕ್ಕಳು ಅವರನ್ನು ತುಂಬಾ ನೆನಪು ಮಾಡಿಕೊಳ್ಳುತ್ತಾರೆ. ಅವರಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ" ಎನ್ನುತ್ತಾರೆ ರಂದಾವನಿ. “ಅವರು ಆಸ್ಪತ್ರೆಯಲ್ಲಿದ್ದಾ ಅವರ ಕುರಿತು ಕೇಳುತ್ತಿದ್ದೆ. ಅವರು ಮನೆಗೆ ಮರುಳುತ್ತಾರೆನ್ನುವ ಭರವಸೆಯಿತ್ತು. ಇಷ್ಟು ಬೇಗೆ ಹೋಗಬಹುದು ಎಂದುಕೊಂಡಿರಲಿಲ್ಲ."

ರಂದಾವನಿ ಮನೆಗೆಲಸ ಮಾಡಿ ತಿಂಗಳಿಗೆ 2500 ರೂ. ಸಂಪಾದಿಸುತ್ತಾರೆ. ಅವರು ಆದಷ್ಟು ಬೇಗ ಮತ್ತೆ ಕೆಲಸಕ್ಕೆ ಹೋಗಲು ಬಯಸುತ್ತಿದ್ದಾರೆ. "ನನ್ನ ಕೆಲಸದಾತರು ಒಳ್ಳೆಯವರು, ಅವರು ನನಗೆ ಕೆಲಸಕ್ಕೆ ಬರಲು ಹೇಳಿ ತೊಂದರೆ ನೀಡಲಿಲ್ಲ" ಎಂದು ಅವರು ಹೇಳುತ್ತಾರೆ. “ಆದರೆ ಈಗ ನಾನು ಕೆಲಸವನ್ನು ಪ್ರಾರಂಭಿಸಲೇಬೇಕು. ಇದರಿಂದ ಸ್ವಲ್ಪ ಗಮನ ಬೇರೆಡೆಗೆ ಹೋಗುತ್ತದೆ.”

ಮೇ 16ರ ಹೊತ್ತಿಗೆ, ಬೀಡ್ ಜಿಲ್ಲೆಯಲ್ಲಿ 75,000 ಕೋವಿಡ್ ಪ್ರಕರಣಗಳು ವರದಿಯಾಗಿವೆ ಮತ್ತು 1,400 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ನೆರೆಯ ಒಸ್ಮಾನಾಬಾದ್ ಜಿಲ್ಲೆಯಲ್ಲಿ 49,700 ಪ್ರಕರಣಗಳು ಮತ್ತು 1,200 ಸಾವುಗಳು ದಾಖಲಾಗಿವೆ.

ಬೀಡ್ ಮತ್ತು ಉಸ್ಮಾನಾಬಾದ್ ಎರಡೂ ಜಿಲ್ಲೆಗಳು ಕೃಷಿ ಮರಾಠವಾಡದ ಭಾಗ. ಮಹಾರಾಷ್ಟ್ರದಲ್ಲಿ ಹೆಚ್ಚಿನ ರೈತರ ಆತ್ಮಹತ್ಯೆಗಳು ಈ ಪ್ರದೇಶದಿಂದ ವರದಿಯಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೆಲಸ ಅರಸಿ ಇಲ್ಲಿಂದ ವಲಸ ಹೋಗುತ್ತಾರೆ. ನೀರಿನ ಕೊರತೆ ಮತ್ತು ಸಾಲದ ಹೊರೆಯೊಂದಿಗೆ ಹೋರಾಡುತ್ತಿರುವ ಇಲ್ಲಿನ ಜನರು ಅಲ್ಪ ಸಂಪನ್ಮೂಲಗಳು ಮತ್ತು ಅಸಮರ್ಪಕ ಆರೋಗ್ಯ ಸೇವೆಗಳ ಆಧಾರದಲ್ಲಿ ಈ ಸಾಂಕ್ರಾಮಿಕ ರೋಗವನ್ನು ನಿಭಾಯಿಸುತ್ತಿದ್ದಾರೆ.

ಅಂಬಾಜೋಗಾಯಿಯಿಂದ 90 ಕಿ.ಮೀ ದೂರದಲ್ಲಿರುವ ಉಸ್ಮಾನಾಬಾದ್ ಸರ್ಕಾರಿ ಆಸ್ಪತ್ರೆಯಲ್ಲೂ ಪರಿಸ್ಥಿತಿ ಹೆಚ್ಚು ಭಿನ್ನವಾಗಿಲ್ಲ. ರೋಗಿಗಳ ಸಂಬಂಧಿಕರು ತಮ್ಮ ಚಿಂತೆ ಮತ್ತು ದುಃಖವನ್ನು ಬಿಸಿಲಿನಲ್ಲಿ ಪರಸ್ಪರ ವ್ಯಕ್ತಪಡಿಸುತ್ತಾರೆ. ಆಡಳಿತವು 14 ಮೆಟ್ರಿಕ್ ಟನ್ ಆಮ್ಲಜನಕದ ದೈನಂದಿನ ಅಗತ್ಯವನ್ನು ಪೂರೈಸಲು ಹೆಣಗಾಡುತ್ತಿದೆ ಮತ್ತು ಅಜ್ಞಾತ ಹೃದಯಗಳು ಪರಸ್ಪರ ಬೆಂಬಲಕ್ಕೆ ನಿಂತಿವೆ.

Left: Swami Ramanand Teerth Rural Government Medical College and Hospital in Ambejogai. Right: An oxygen tank on the hospital premises
PHOTO • Parth M.N.
Left: Swami Ramanand Teerth Rural Government Medical College and Hospital in Ambejogai. Right: An oxygen tank on the hospital premises
PHOTO • Parth M.N.

ಎಡ: ಸ್ವಾಮಿ ರಮಾನಂದ ತೀರ್ಥ ಸರ್ಕಾರಿ ಗ್ರಾಮೀಣ ವೈದ್ಯಕೀಯ ಕಾಲೇಜು, ಅಂಬಾಜೋ ಗಾಯಿ . ಬಲ: ಆಸ್ಪತ್ರೆ ಆವರಣದಲ್ಲಿ ರುವ ಆಕ್ಸಿಜನ್ ಟ್ಯಾಂಕ್

2020ರಲ್ಲಿ ಕೋವಿಡ್ -19ರ ಮೊದಲ ಅಲೆಯು ಪೂರ್ಣ ಪ್ರಮಾಣದಲ್ಲಿದ್ದಾಗ, ಉಸ್ಮಾನಾಬಾದ್ ಜಿಲ್ಲೆಗೆ 550 ಆಮ್ಲಜನಕ ಸಿಲಿಂಡರ್‌ಗಳು ಬೇಕಾಗಿದ್ದವು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕೌಸ್ತುಭ್ ದಿವೇಗಾಂವ್ಕರ್ ಹೇಳುತ್ತಾರೆ. ಎರಡನೇ ಅಲೆಯ ಲಕ್ಷಣಗಳು ಕಂಡು ಬಂದ ಕೂಡಲೇ ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಫೆಬ್ರವರಿ 2021ರಲ್ಲಿ ಪ್ರಾರಂಭವಾದ ಎರಡನೇ ಅಲೆಯು ಹೆಚ್ಚು ತೀವ್ರವಾದ ಹೊಡೆತವನ್ನು ನೀಡಿದೆ. ಮೊದಲ ಅಲೆಗೆ ಹೋಲಿಸಿದರೆ, ಜಿಲ್ಲೆಗೆ ಮೂರು ಪಟ್ಟು ಹೆಚ್ಚು ಆಮ್ಲಜನಕ ಹಾಸಿಗೆಗಳ ಅಗತ್ಯವಿದೆ. ಪ್ರಸ್ತುತ ಉಸ್ಮಾನಾಬಾದ್‌ನಲ್ಲಿ 944 ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳು, 254 ತೀವ್ರ ನಿಗಾ ಹಾಸಿಗೆಗಳು ಮತ್ತು 142 ವೆಂಟಿಲೇಟರ್‌ಗಳಿವೆ.

ಲಾತೂರ್, ಬೀಡ್ ಮತ್ತು ಜಲನ್ಯಾದಿಂದ ಮೆಡಿಕಲ್ ಆಮ್ಲಜನಕವನ್ನು ತರಲಾಗುತ್ತಿದೆ. ಕರ್ನಾಟಕದ ಬಳ್ಳಾರಿ, ತೆಲಂಗಾಣದ ಹೈದರಾಬಾದ್‌ನಿಂದಲೂ ಆಮ್ಲಜನಕ ತರಲಾಗುತ್ತಿದೆ. ಮೇ ಎರಡನೇ ವಾರದಲ್ಲಿ ಗುಜರಾತ್‌ನ ಜಾಮ್‌ನಗರದಿಂದ ಉಸ್ಮಾನಾಬಾದ್‌ಗೆ ಆಮ್ಲಜನಕವನ್ನು ವಿಮಾನದಲ್ಲಿ ಸಾಗಿಸಲಾಯಿತು. ಮೇ 14ರಂದು, ಎಥೆನಾಲ್‌ನಿಂದ ಮೆಡಿಕಲ್ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸುವ ದೇಶದ ಮೊದಲ ಯೋಜನೆಯು ಉಸ್ಮಾನಾಬಾದ್‌ನ ಕಲಂಬಾ ತಾಲೂಕಿನ ಚೋರಖಲಿಯ ಧಾರಶಿವ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಾರಂಭವಾಯಿತು. ಇಲ್ಲಿ ಪ್ರತಿದಿನ 20 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 403 ಹಾಸಿಗೆಗಳಿದ್ದು, 48 ವೈದ್ಯರು, ನರ್ಸ್‌ಗಳು ಮತ್ತು ವಾರ್ಡ್ ಸಹಾಯಕರು ಸೇರಿದಂತೆ 120 ಸಿಬ್ಬಂದಿ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರು ರೋಗಿಗಳ ಸಂಬಂಧಿಕರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ರೋಗಿಯ ಪಕ್ಕದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸುತ್ತಾರೆ, ಅವರಿಂದ ಸೋಂಕಿನ ಅಪಾಯವು ಹೆಚ್ಚು. ಈ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರು ಹಾಸಿಗೆಗಾಗಿ ಹುಡುಕಾಡುತ್ತಿರುವುದು ಕಂಡು ಬರುತ್ತಿದೆ.

ಹೃಷಿಕೇಶ್ ಕಾಟೆಯವರ ತಾಯಿ 68 ವರ್ಷದ ಜನಾಬಾಯಿ ಕೊನೆಯುಸಿರೆಳೆಯುವ ಹಂತದಲ್ಲಿದ್ದರು. ಅಷ್ಟರಲ್ಲಾಗಲೇ ವರಾಂಡದಲ್ಲಿ ಯಾರೋ ಅವರ ಸಾವಿನ ಸುದ್ದಿ ಬರುವುದನ್ನೇ ಕಾಯುತ್ತಿದ್ದರು ಏಕೆಂದರೆ ಅವರ ಅನಾರೋಗ್ಯ ಹೊಂದಿರು ಸಂಬಂಧಿಯೊಬ್ಬರಿಗೆ ಅದೇ ಹಾಸಿಗೆ ಬೇಕಾಗಿತ್ತು. "ಅವರು ಉಸಿರಾಡಲು ಕಷ್ಟಪಡುತ್ತಿದ್ದರು. ಇನ್ನೇನು ಸಾವಿನ ಅಂಚಿನಲ್ಲಿದ್ದರು. ಫೋನಿನಲ್ಲಿ ಯಾರೋ ಇನ್ನೇನು ಒಂದು ಹಾಸಿಗೆ ಖಾಲಿಯಾಗುವುದರಲ್ಲಿದೆ ಎನ್ನುವುದು ಕೇಳಿಸುತ್ತಿತ್ತು” ಎಂದು 40 ವರ್ಷದ ಹೃಷಿಕೇಶ್ ಹೇಳುತ್ತಾರೆ. ಇದನ್ನು ಕೇಳುವಾಗ ಭಯನಾಕವೆನ್ನಿಸುತ್ತದೆ, ಆದರೆ ಬಹುಶಃ ಅವರ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೂ ಅದನ್ನೇ ಮಾಡುತ್ತಿದ್ದೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿದ್ದ ಕಾರಣ ಹೃಷಿಕೇಶ್ ಅವರ ತಂದೆಯನ್ನು ಖಾಸಗಿ ಆಸ್ಪತ್ರೆಯಿಂದ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅದಾದ ನಂತರ ಒಂದು ದಿನ ಜನಾಬಾಯಿ ಕೂಡ ಇಲ್ಲಿ ಪ್ರವೇಶ ಪಡೆದರು. "ಅದೊಂದೇ ನಮ್ಮ ಮುಂದಿದ್ದ ಆಯ್ಕೆಯಾಗಿತ್ತು" ಎನ್ನುತ್ತಾರೆ ಹೃಷಿಕೇಶ್.

Left: Rushikesh Kate and his brother Mahesh (right) with their family portrait. Right: Rushikesh says their parents' death was unexpected
PHOTO • Parth M.N.
PHOTO • Parth M.N.

ಎಡ: ಹೃಷಿಕೇಶ್ ಕಾಟೆ ಮತ್ತು ಅವರ ಸಹೋದರ ಮಹೇಶ್ (ಬಲ) ಅವರ ಸಂಪೂರ್ಣ ಕುಟುಂಬದ ಫೋಟೋದ ಮುಂದೆ. ಬಲ: ಹೃಷಿಕೇಶ್ ಹೇಳುತ್ತಾರೆ , ನಮ್ಮ ಪೋಷಕರ ಸಾವು ಬಹಳ ಅನಿರೀಕ್ಷಿತವಾಗಿತ್ತು

70 ವರ್ಷದ ಶಿವಾಜಿ ಕಾಟೆ ಏಪ್ರಿಲ್ 6ರಂದು ಕೋವಿಡ್‌ ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಾದರು ಮತ್ತು ಒಂದು ದಿನದೊಳಗೆ ಜನಾಬಾಯಿಯವರಲ್ಲಿ ಕೂಡ ರೋಗಲಕ್ಷಣಗಳು ಕಂಡುಬಂದವು. "ನನ್ನ ತಂದೆಯ ಆರೋಗ್ಯ ಹದಗೆಟ್ಟಿದ್ದರಿಂದ ನಾವು ಅವರನ್ನು ಸಹ್ಯಾದ್ರಿ ಆಸ್ಪತ್ರೆಗೆ ಸ್ಥಳಾಂತರಿಸಿದೆವು" ಎಂದು ಹೃಷಿಕೇಶ್ ಹೇಳುತ್ತಾರೆ. “ನಮ್ಮ ಕುಟುಂಬ ವೈದ್ಯರು ತಾಯಿಯನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಬಹುದು ಎಂದು ಹೇಳಿದರು. ಅವರ ದೇಹದ ಆಮ್ಲಜನಕದ ಮಟ್ಟ ಉತ್ತಮವಾಗಿತ್ತು."

ಏಪ್ರಿಲ್ 11ರ ಬೆಳಗ್ಗೆ, ಸಹ್ಯಾದ್ರಿ ಖಾಸಗಿ ಆಸ್ಪತ್ರೆಯ ವೈದ್ಯರು ಹೃಷಿಕೇಶ್‌ ಅವರಿಗೆ ಕರೆ ಮಾಡಿ ಶಿವಾಜಿಯವರನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. "ಅವರು ವೆಂಟಿಲೇಟರ್‌ ಸಹಾಯದಲ್ಲಿದ್ದರು" ಎಂದು ಹೃಷಿಕೇಶ್ ಹೇಳುತ್ತಾರೆ. "ಅವರನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಿದ ಕ್ಷಣದಿಂದ ಉಸಿರಾಟದ ತೊಂದರೆ ಹೆಚ್ಚಾಯಿತು. ವರ್ಗಾವಣೆಯ ಸಮಯದಲ್ಲಿ ಅವರಿಗೆ ಬಹಳ ದಣಿವಾಗಿತ್ತು" ಎಂದು ಅವರು ಹೇಳುತ್ತಾರೆ. "ಖಾಸಗಿ ಆಸ್ಪತ್ರೆಯಲ್ಲಿ ವಾತಾವರಣ ಚೆನ್ನಾಗಿತ್ತು, ಅವರು ನನ್ನನ್ನು ಅದೇ ಆಸ್ಪತ್ರೆಯಲ್ಲಿ ಇರಿಸಿ” ಎಂದು ಹೇಳುತ್ತಿದ್ದರು."

ಸಿವಿಲ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಗತ್ಯ ಒತ್ತಡದಲ್ಲಿ ಕೆಲಸ ಮಾಡುತ್ತಿರಲಿಲ್ಲ. “ಅವರ ಮುಖದ ಮೇಲಿದ್ದ ಮಾಸ್ಕ್ ಕಳಚಿ ಬೀಳುತ್ತಿದ್ದರಿಂದ ನಾನು ರಾತ್ರಿಯಿಡೀ ಅದನ್ನು ಹಿಡಿದು ಕುಳಿತಿದ್ದೆ. ಆದರೆ ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿತು. ಮರುದಿನ ಅವರು ನಿಧನರಾದರು” ಎಂದು ಹೃಷಿಕೇಶ್ ಹೇಳುತ್ತಾರೆ. ಶಿವಾಜಿ ಜೊತೆಗೆ ಇನ್ನೂ ನಾಲ್ವರು ರೋಗಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಅವರೂ ತೀರಿಕೊಂಡರು.

ಏಪ್ರಿಲ್ 12ರಂದು, ಜನಾಬಾಯಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರಿಂದ ಸಿವಿಲ್ ಆಸ್ಪತ್ರೆಗೆ ಕರೆತರಲಾಯಿತು. ಅವರು ಏಪ್ರಿಲ್ 15ರಂದು ನಿಧನರಾದರು. "ಇಬ್ಬರೂ ಆರೋಗ್ಯವಾಗಿದ್ದರು" ಎಂದು ಹೃಷಿಕೇಶ್ ನಡುಗುವ ಧ್ವನಿಯಲ್ಲಿ ಹೇಳುತ್ತಾರೆ. "ಅವರು ಕಷ್ಟಪಟ್ಟು ದುಡಿದು ಕಷ್ಟದಲ್ಲಿಯೇ ನಮ್ಮನ್ನು ಸಾಕಿ ಬೆಳೆಸಿದ್ದರು."

ಒಸ್ಮಾನಾಬಾದ್ ನಗರದ ಅವರ ಮನೆಯ ಗೋಡೆಯ ಮೇಲೆ ಕಾಟೆ ಕುಟುಂಬದ ದೊಡ್ಡ ಫೋಟೋವನ್ನು ಅಂಟಿಸಲಾಗಿದೆ. ಹೃಷಿಕೇಶ್, ಅವರ ಅಣ್ಣ ಮಂಗೇಶ್, ಅವರ ಹೆಂಡತಿ ಮತ್ತು ಮಕ್ಕಳು ಎಲ್ಲರೂ ಶಿವಾಜಿ ಮತ್ತು ಜನಾಬಾಯಿಯೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದರು. ಕುಟುಂಬವು ನಗರದ ಹೊರಗೆ ಐದು ಎಕರೆ ಜಮೀನನ್ನು ಹೊಂದಿದೆ. "ಅವರು ತೀರಿಕೊಳ್ಳಬಹುದೆಂದು ನಾನು ಭಾವಿಸಿರಲಿಲ್ಲ" ಎಂದು ಅವರು ಹೇಳುತ್ತಾರೆ. "ಸಂಪೂರ್ಣ ಆರೋಗ್ಯವಂತ, ಕಣ್ಣ ಮುಂದೆ ಪ್ರತಿದಿನ ವ್ಯಾಯಾಮ ಮಾಡುವ ವ್ಯಕ್ತಿ ಇದ್ದಕ್ಕಿದ್ದಂತೆ ಈ ಜಗತ್ತಿನಲ್ಲಿ ಇಲ್ಲ ಎಂದರೆ ಅದನ್ನು ಒಪ್ಪಿಕೊಳ್ಳುವುದು ಅಸಾಧ್ಯ."

ಪಾರ್ಳಿಯಲ್ಲಿರುವ ತನ್ನ ಮನೆಯ ಹೊರಗೆ ಕುಳಿತ ರಂದಾವನಿ ಕೂಡ ತನ್ನ ಗಂಡನ ನಿರ್ಗಮನವನ್ನು ಒಪ್ಪಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪ್ರತಿದಿನ ಸಂಜೆ ಅವರು ತನ್ನ ಪತಿ ಅಭಂಗಗಳನ್ನು ಹಾಡುತ್ತಿದ್ದ ಅದೇ ಸ್ಥಳದಲ್ಲಿ ಕುಳಿತು ಅವರು ಇನ್ನಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಪ್ರಯತ್ನಿಸುತ್ತಾರೆ. "ನನಗೆ ಅವರಂತೆ ಹಾಡಲು ಬರುವುದಿಲ್ಲ” ಎಂದು ಹೇಳಿದ ಅವರು “ಬಂದಿದ್ದರೆ ಚೆನ್ನಾಗಿರುತ್ತಿತ್ತು” ಎಂದು ನೋವಿನ ನಗೆಯನ್ನು ನಕ್ಕರು.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

پارتھ ایم این ۲۰۱۷ کے پاری فیلو اور ایک آزاد صحافی ہیں جو مختلف نیوز ویب سائٹس کے لیے رپورٹنگ کرتے ہیں۔ انہیں کرکٹ اور سفر کرنا پسند ہے۔

کے ذریعہ دیگر اسٹوریز Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru